Tuesday, October 30, 2018

ಇರುಳ ಹೆರಳು ವಿಮರ್ಶೆ

ಇರುಳ ಹೆರಳು....
ಕವಿ: ನೀ. ಶ್ರೀಶೈಲ

             ನಮ್ಮ ಅಡ್ನಾಡಿತನಕೆ
             ಮುನ್ನುಡಿ- ಬೆನ್ನುಡಿ
             ಬರೆಸಿ, ಜೊತೆಗೆ ನಮ್ಮ
             ನಲ್ನುಡಿಯನು ಸೇರಿಸಿ
             ಸಹೃದಯನೆದೆಯ ಶಾಂತ
             ನಿಷ್ಕಲ್ಮಶಾಂತರ್ಯವ
             ಕೆಡಿಸಿ, ರಾಡಿಯೆಬ್ಬಿಸುವ
             ಕಿಡಿಗೇಡಿತನವೇಕೆ?

    ಸ್ವಾಭಿಮಾನವಿರದ ಯಾವೊಬ್ಬ ಕವಿಯು ಈ ತರನಾದ
ಸಾಲುಗಳನ್ನು ಬರೆಯಲು ಸಾಧ್ಯವಿಲ್ಲ. ಈ ಸಾಲುಗಳು ಮುಖಪುಟದ ಅಣ್ಣನವರಾದಂತಹ ನೀ. ಶ್ರೀಶೈಲ ಅವರ ಇರುಳ ಹೆರಳು ಕವನ ಸಂಕಲನದಲ್ಲಿಯವು. ಇವರು ಚುಟುಕು ಪ್ರಿಯರು. ಇರುಳ.... ಇದು ಇವರ ಮೊದಲ ನಿಳ್ಗವಿತೆಯ ಕವನ ಸಂಕಲನ. ಮೊದಲ ಸಂಕಲನದಲ್ಲಿಯೆ ಸಾಕಷ್ಟು ಯಶಸ್ವಿಯು ಆಗಿದ್ದಾರೆ. ಸಾಹಿತ್ಯ ಲೋಕದಲ್ಲಿ ಅಂಬೆಗಾಲಿಡುತ್ತಿರುವ ನಮ್ಮಂತವರು ಮೊದಲ ಕವನ ಸಂಕಲನವನ್ನು ಹೊರ ತರಬೇಕಾದರೆ ಇದನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು ಅಂತೆಂದರೆ ತಪ್ಪಾಗಲಾರದು. ಇವರು ರಸಿಕರು, ಸಮಯಪ್ರಜ್ಞೆ, ಹಾಸ್ಯ ಪ್ರಜ್ಞೆ ಇವರಿಂದ ಕಲಿಯುವುದು ಬಹಳಷ್ಟಿದೆ, ಇವರ ಹಾಸ್ಯ ಪ್ರಜ್ಞೆಯಿಂದ ಮುಖಪುಟದ ಕೆಲವರಿಗೆ ಮುಜುಗರವುಂಟಾದದ್ದುಂಟು.

ಇಟ್ಟುಬಿಡು ಒಮ್ಮೆ
ಹೂ..ಮುತ್ತನೊಂದನು ನನ್ನ
ಶವದ ಕೆನ್ನೆ...ತುಟಿಗೆ !
ಹಣೆಗಿಟ್ಟು ಹೋಗಿಬಿಡು
ನಿನ್ನ ಪಾದದಡಿಯ
ಮಣ್ಣ ತಿಲಕ !

ಈ ಸಾಲುಗಳನ್ನೊದಿದರೆ ಮಿರ್ಜಾ ಗಾಲಿಬ್, ಉಮರ್ ಖಯ್ಯಾಮ್ ಅವರ ಘಜಲ್ ಮತ್ತು ಶಾಯರಿಗಳು ನೆನಪಾಗದೆ ಇರದಿರಲಾರವು. ಅಂತಿಮಾಲಾಪದ ಕವನದಲ್ಲಿ ಬರುವ ಸಾಲುಗಳು ಭಗ್ನ ಪ್ರೇಮಿಗಳ ಎದೆಯನ್ನು ತಣಿಸುವುದರಲ್ಲಿ ಸಂಶಯವೆ..ಇಲ್ಲ.

ಎಚ್ಚರವಿದ್ದರೂ ಒಮ್ಮೆ
ತಪ್ಪುವುದು ಜೋಲಿ
ಬಿರುಗಾಳಿ ಮಳೆಗೆಲ್ಲಿ
ಕಟ್ಟುವಿರಿ ಬೇಲಿ?
ಹೋಗುವಿರೊಂದು
ದಿನ... ನೀವೆ ತೇಲಿ !

   ಈ ಸಾಲುಗಳನ್ನು ಎಷ್ಟೆಂದು, ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ನಮ್ಮ ಒಣ ಅಹಂಮಿಕೆಗೆ, ಗಡಿ ರೇಖೆಗಳಲ್ಲಿ ನಮ್ಮನ್ನೆ ನಾವು ಕಟ್ಟಿಹಾಕಿಕೊಳ್ಳುವಿಕೆ, ಕುವೆಂಪು ಅವರ ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ಕವನದ ಸಾಲುಗಳನ್ನು ನೆನಪಿಸಿ, ಮನದ ಕೋಣೆಯಲಿ ಹೊದ್ದು ಮಲಗಿದ ಅಂಧಕಾರವನ್ನು ಹೊಡೆದೊಡಿಸದೆ ಇರಲಾರದು. ಅರ್ಥೈಸಿಕೊಳ್ಳದೆ ಇದ್ದಾಗ, ಎಡವುವ ನೋವನ್ನು ಸಹಿಸಿಕೊಳ್ಳಲು ಗಟ್ಟಿಯಾಗಿಯಾದರು ಇರಬೇಕು. ಆ ನೋವನ್ನು ಇನ್ನೊಬ್ಬರ ಹೆಗಲಿಗೆ ಹೊರಸದ ಹಾಗೆ

ಒಟ್ಟಾರೆಯಾಗಿ ನೋಡುವುದಾದರೆ ಈ ಒಂದು ಕವನ ಸಂಕಲನ ನವರಸವನ್ನೆ ಹೊತ್ತು ನಿಂತಿದೆ, ಕಾಲು ಜಾರಿದವಳ ಪಾಡು, ದಂತ ಭಗ್ನ, ಸಾಮಾಜಿಕ ಕಳಕಳಿಯುಳ್ಳ ಕವನಗಳು, ಎಲ್ಲದಕ್ಕಿಂತಲೂ ಮಿಗಿಲಾಗಿ ನೀವುಗಳು ಒಮ್ಮೆ ಕವನವನ್ನು ಓದಿದರೆ ನೇರ ನಿಮ್ಮ ಮನಸ್ಸಿಗೆ ನಾಟಿಬಿಡುತ್ತವೆ. ಪದೆ ಪದೆ ಓದಿಸಿಕೊಳ್ಳುವುದೆ ಇಲ್ಲ. ಆದರೂ ಜಾಣ ರೈತ ಎಂಬ ಕವನದಲ್ಲಿ ಕವಿಗಳು ರೈತನ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಸಾಲುಗಳನ್ನು ಕಟ್ಟಿಕೊಟ್ಟಿದ್ದಾರೆ. ನಿಜ ಅದು ಹಾಸ್ಯ ಶೈಲಿಯಲ್ಲಿಯೆ ಮೂಡಿಬಂದಿದ್ದರೂ ಕೊನೆಯ ಸಾಲುಗಳು ಮಾತ್ರ ನಮ್ಮಂಥಹ ಮಣ್ಣಿನ ಮಕ್ಕಳ ಎದೆಗೊಂದಿಷ್ಟು ಚೂರು ನೋವನ್ನುಂಟು ಮಾಡದೆ ಇರುವುದಿಲ್ಲ.

ನನ್ನೀ ಸಾಲ ಹರಿಯಲಿಕ್ಕಿಲ್ಲ ಈಗ !
ಹೇಗೊ ಮಕ್ಕಳು ದೊಡ್ಡವರಾಗುತ್ತಾರಲ್ಲ ಬೇಗ !!
ಅವರ ತಲೆಯ ಮೇಲೆ ಭಾರ ಹಾಕಿ
ಹೊಡೆದರಾಯಿತು ಲಾಗ !

ಪ್ರಾಸಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ ಈ ಸಂಕಲನದಲ್ಲಿ, ಯೋಧನ ತಾಯ ಹರಕೆ ಕವನವಂತೂ ಓದಿದಾಗಲೆಲ್ಲ ಎದೆತುಂಬಿ ಕಣ್ಣುಗಳು ತೇವವಾಗುವವು. ಒಟ್ಟಿನಲ್ಲಿ ಕೊಟ್ಟ ಹಣಕ್ಕೆ ಮೋಸವಿಲ್ಲ, ಓದಿದ ಮನಗಳೆಂದು ಈ ಸಂಕಲನವನ್ನು ಮರೆಯುವುದಿಲ್ಲ.

No comments:

Post a Comment