Monday, December 30, 2019

ನಿರ್ಭಾವುಕತೆಗಳು

ಬರೆಯುವುದರಲ್ಲಿ ಏನುಳಿದಿತ್ತು?
ಆಡಲು ಮಾತೊಂದೆ ಇತ್ತು.
ವಿವರಿಸಲು ಸಮಯವಾದರು ಎಷ್ಟಿತ್ತು?
ಅಲ್ಲಿ... ನನ್ನ ತಪ್ಪು ಎಲ್ಲಿತ್ತು.
ಕಣ್ಣು.. ಕಣ್ಣುಗಳು ಮಾತಿಗೆ ಕೂರುವ
ಮೊದಲೆ ಸೂರ್ಯಾಸ್ತವಾಗಿತ್ತು
ತುಟಿಯಂಚಿನ ತುಂಬು ಬಸಿರಿನ ಮಾತೊಂದು
ಕೊನರುವ ಮೊದಲೆ, ನಿನ್ನ ಕೈಯಲ್ಲಿ
ಮದುವೆ ಆಮಂತ್ರಣದ ಪತ್ರವಿತ್ತು.

Saturday, December 28, 2019

ಚುಟುಕು

ಹುಟ್ಟು-ಸಾವುಗಳ
ಧನ್ಯ ಮಿಲನವಿಂದು!
ಸಂಭ್ರಮವೊ?...
ಸಂತಾಪವೊ?....
ಆಚರಿಸುವುದಾದರು
ಯಾವುದನ್ನು?
ಒಂದು ಸಾಹಿತ್ಯದ
ಉದಯ!
ಮತ್ತೊಂದು ಧಾರ್ಮಿಕದ
ಅಂತ್ಯ!

ಚುಟುಕು

ಕಳಚಿಕೊಂಡಿದೆ,
ಈ ಲೋಕದಿಂದ
ಮತ್ತೊಂದು ಧಾರ್ಮಿಕ
ಕೊಂಡಿ!
ಸನ್ಮಾರ್ಗವ
ತೋರಲು, ಯಾರಿಲ್ಲದೆ
ಇನ್ನೆತ್ತ ಸಾಗುವುದೊ?
ನಮ್ಮ ಬದುಕಿನ
ಬಂಡಿ!

ಚುಟುಕು

ಕನ್ನಡದ ಕಂಪನ್ನು
ಪಸರಿಸಿದಿರಿ...
ಜಗದೆಲ್ಲ ರಸಿಕರ
ಎದೆಯ ಭಾವವ
ಮೀಟಿ!
ನಾವೆಂದು.....
ತಾಯ್ನೆಲದ ಋಣವ 
ತೀರಿಸಬಲ್ಲೆವು? ಕವಿಋಷಿ.
ನಿಮಗಿದೊ... ನಮ್ಮೆಲ್ಲರ 
ಹೃದಯಾಳದಿ ನಮಿಪೆವು
ನಿಮಗೆ, ಅನಂತ
ಕೋಟಿ!

ಚುಟುಕು

ಕೈಗೆ ಮಸಿ
ಮೆತ್ತಿಕೊಂಡರು
ಪರ್ವಾಗಿಲ್ಲ,
ಇನ್ನೊಬ್ಬರ ವ್ಯಕ್ತಿತ್ವಕ್ಕೆ
ಮಸಿಯನ್ನು 
ಬಳಿಯಬೇಡಿ!
ಮೇಲೆತ್ತುವ ಶಕ್ತಿ
ನಿಮ್ಮೊಳಗಿರದಿದ್ದರು
ಚಿಂತೆಯೇನಿಲ್ಲ,
ಚಿಗುರುವವರನ್ನು ಕಾಲಡಿಯಲ್ಲಿ
ಹಾಕಿ ತುಳಿಯಬೇಡಿ!

Friday, December 27, 2019

ಮಂಗಳಮುಖಿ

'ಯವ್ವಾ ಹ್ಯಾಂಗ ಕೆ.ಜಿ ಬೆ ಟಮಾಟಿ ಹಣ್ಣು'
'ಯಪ್ಪಾ ಹದ್ನೆಂಟ ರುಪೈ ಕಿಲೊ ನೋಡ ನನ್ಮಗ್ನ, ಹೇಳ್ ಎಷ್ಟ ಕೊಡ್ಲೆಪ್ಪ, ಎನ್ನುತ್ತಾ  ಎಡಗೈಯಿಂದ ತಕ್ಕಡಿಯನ್ನು ಎತ್ತಿಕೊಳ್ಳುತ್ತಾ, ಬಲಗೈಯಿಂದ ಟೊಮ್ಯಾಟೊ ಹಣ್ಣಿನ ಬುಟ್ಟಿಗೆ ತಾನೆ ಕೈ ಹಾಕಿ ಒಳ್ಳೊಳ್ಳೆ ಹಣ್ಣುಗಳನ್ನು ಆರಿಸಿ ತೂಗಲು ಮುಂದಾದಳು ಕಲ್ಲವ್ವ,
'ಭಾಳ ತುಟ್ಟಿ ಆತಲ್ಲಬೆ, ಮೊನ್ನೆರ ಹನ್ನೆರ್ಡ ರುಪಾಯ್ಗೆ ಕೆಜಿ ಹಂಗ ಒದಿದ್ನಿ' 
'ಯಪ್ಪಾ ದಿನ್ದಿಂದ ದಿನಕ್ಕ ರೇಟ್ ಹೆಚ್ಚು ಕಡ್ಮಿ ಆಕ್ಕಿರ್ತಾವೊ ತಂದೆ, ಹೊಲ್ದಾಗ ನೀರ ಕಮ್ಮಿ ಆಗಿ ಪಿಕ ಬರ್ವಲ್ದಂಗ ಆಗೈವು ನೋಡ್ಪಾ' ಮುಖವನ್ನು ಗಿಂಜುತ್ತಾ, ಬೇಗಬೇಗನೆ ಹಣ್ಣುಗಳನ್ನು ಆರಿಸಿಕೊಂಡು ಕೆ.ಜಿ ಲೆಕ್ಕದಲ್ಲಿ ತೂಗಿ ಗಿರಾಕಿಯ ಚೀಲಕ್ಕೆ ಹಾಕಲು ತಕ್ಕಡಿಯನ್ನು ಮುಂದಕ್ಕೆ ಚಾಚಿದಳು.
'ಅಯ್ಯ, ಬ್ಯಾಡ ಬಿಡ್ಬೆ ಇವತ್ತ, ಊರ ಸೇರಾಕ ರೊಕ್ಕ ಕಮ್ಮಿ ಬಿಳ್ತಾವ, ಅದಲ್ದನಾ ಮನ್ಯಾಗ ಸಣ್ಣ ಸಣ್ಣ ಯಾಡ ಹುಡ್ರ ಅದಾವು ಅವುಕ್ಕ ತಿನ್ನಾಕ ಇನ್ನಾ ಬಿಸ್ಕಿಟ್ ಪಡ್ಕ ತಗೊಂಡ ಹೋಗ್ಬೇಕು, ಮಾಲಾಕ್ನು ಇವತ್ತ್ ಚೂರು ರೊಕ್ಕಾನು ಕಮ್ಮಿ ಕೊಟ್ಟಾನ' ಎನ್ನುತ್ತಲೆ ಮುಂದಕ್ಕೆ ಹೆಜ್ಜೆ ಹಾಕುವವನಿದ್ದವನ ಕೈ ಚೀಲವನ್ನು ಕಸಿದುಕೊಂಡು ಹಣ್ಣನ್ನು ಸುರಿದುಕೊಡುತ್ತಾ,
'ರೊಕ್ಕೆಲ್ಲರ ಓಡಿ ಹೊಕ್ಕತೇನ ಮಗ್ನ, ಇವತ್ತಿಲ್ಲ, ನಾಳ್ಗಿ ತಂದ ಕೊಡ, ಏನ ದುಡ್ದ ಕಟ್ಗೊಂಡ್ ಸಾಯೋದೈತ ಹೇಳು, ಸತ್ತಾಗೇನ ಹೊತ್ಗೊಂಡ ಹೊಕ್ಕಿವೇನು ಎಲ್ಲಾನು?, ತಗೊಂಡ ಹೋಗ್ಪಾ,' ಅಂತಃಕರಣದಿಂದ ನುಡಿದಳು
ಅವಳು ಮಾತುಗಳನ್ನು ಕೇಳಿ ಆ ಗಿರಾಕಿ ಮರುಮಾತನಾಡದೆ,
ತಲೆಯಾಡಿಸಿ, ಚೀಲವನ್ನು ಎತ್ತಿ ಹೆಗಲ ಮೇಲಿಟ್ಟುಕೊಂಡು ನಡೆದನು.

ಐದು ನಿಮಿಷದಲ್ಲಿ  ಕುಳಿತ ಸ್ವಲ್ಪ ದೂರದಿಂದ ಏನೊ ಕೂಗಾಡ, ಗದ್ದಲದ ಸದ್ದು ಕೇಳಿಸಿದಂತಾಯಿತು ಕಲ್ಲವ್ವನಿಗೆ, ಆಗಲೆ ಹಳ್ಳಿಗೆ ಹೋಗುವ ಹೊತ್ತಾದ್ದರಿಂದ ತಡಬಡಿಸಿ ಎದ್ದು,  ತರಕಾರಿಗಳನ್ನು ಪುಟ್ಟಿಯಲ್ಲಿ ತುಂಬಿಕೊಂಡು, ಅಲ್ಲಿಯೆ ಹಿಂದ ಇದ್ದ ಶೆಟ್ಟರ ಕಿರಾಣಿ ಅಂಗಡಿಯಲ್ಲಿಟ್ಟು, ಮೇಲೆ ಹಸಿಮಾಡಿದ ಗೋಣಿಚೀಲವೊಂದನ್ನು ಹೊದಿಸಿ, ಅಂದು ಸಂಪಾದನೆ ಮಾಡಿದ ಹಣವನ್ನು ಲೆಕ್ಕ ಹಾಕಿ, ಹಳ್ಳಿಗೆ ಹೋಗಲು ಬೇಕಾಗುವಷ್ಟು ಹಣವನ್ನಷ್ಟೆ ಕೈಯಲ್ಲಿ ಹಿಡಿದುಕೊಂಡು, ಉಳಿದ ಹಣವನ್ನು  ಗದ್ದಲ ನಡೆದ ದಿಕ್ಕಿನತ್ತ ನಡೆದಳು. ಅದಾಗಲೆ ಗುಂಪು ಚದುರಿ ಹೋಗಿ ಒಬ್ಬಿಬ್ಬರು ಅಷ್ಟೇ ನಿಂತುಕೊಂಡಿದ್ದರು, ಕೆಳಗೆ ಒಬ್ಬ ವ್ಯಕ್ತಿಯು ಅಳುತ್ತಾ ಕುಳಿತುಕೊಂಡಿದ್ದನು ಅವನ ಅನತಿ ದೂರದಲ್ಲಿ ಮಂಗಳಮುಖಿಯರ ಗುಂಪೊಂದು ನಗುತ್ತಾ, ಕೆಕೆ ಹಾಕುತ್ತಾ ನಿಂತಿತ್ತು. 
ಕಲ್ಲವ್ವ ಸಮೀಪಕ್ಕೆ ಹೋಗಿ ನೋಡಿದಾಗ, ಆ ಮಂಗಳಮುಖಿಯರ ಗುಂಪಿನಲ್ಲಿ ತನ್ನ ಮಗನಿದ್ದದ್ದನ್ನು ಕಂಡು ಕಣ್ಣ ಹುಬ್ಬುಗಳನ್ನು ಗಂಟಿಕ್ಕಿಕೊಂಡು, ನೆಲದ ಮೇಲೆ ಕುಳಿತುಕೊಂಡ ವ್ಯಕ್ತಿಯ ಕಡೆಗೆ ನೋಡಿದಳು, ಅರೆ! ಅವನೆ, ಈಗ ತಾನೆ ನನ್ನ ಬಳಿ ತರಕಾರಿಯನ್ನು ತೆಗೆದುಕೊಂಡು ಬಂದವನಲ್ಲವೆ ಎಂದುಕೊಳ್ಳುತ್ತಾ, ಅವನ ಹತ್ತಿರ ಹೋಗಿ 'ಯಾಕ್ಮಗ್ನ ಏನಾತ' ಅನ್ನುತ್ತಾ ಕುಕ್ಕರ್ಗುಂಡಿಲೆ ಅವನೆದುರು ಕುಳಿತು ಕೇಳಿದಳು. ತಲೆಯೆತ್ತಿ ನೋಡಿದ ವ್ಯಕ್ತಿ, 'ನೋಡ್ಬೆ, ಊರ್ಮುಟ್ಟಾಕ ಅಂತಿಟ್ಗೊಂಡಿದ್ದ ರೊಕ್ಕಾನೆಲ್ಲ ಕಸ್ಕೊಂಡ್ಬಿಟ್ರು' ಎಂದನು ಹತಾಶೆಯ ಧನಿಯಲ್ಲಿ, ' ಅಯ್ಯ ತಮ್ಮ ಹೋದ್ರ ಹೋಗ್ಲ ತಗೋ ಅತ್ಲಾಗ ಹಾಳಾಗಿ, ಈಕ ನಾ ಕೊಡ್ತಿನಿ ತಗೊ ಏಳು, ನಾಳೆರ ಇಲ್ಲ ನಾಡಿದ್ದರ ತಂದು ಕೊಡ್ವಂತಿಯಂತ, ಏಳ, ಏಳ ಹೊತ್ತ್ ಮುಳ್ಗಾಕ ಬಂತ ಆಗ್ಲೆ' ಎನ್ನುತ್ತಾ, ಅವನ ಮರುಮಾತಿಗೂ ಕಾಯದೆ, ತನ್ನೂರಿಗೆಂದು ತೆಗೆದಿಟ್ಟುಕೊಂಡಿದ್ದ ಹಣವನ್ನು ಅವನ ಜೇಬಿಗೆ ತುರುಕಿ, ಭುಜಕ್ಕೆ ಕೈ ಹಾಕಿ ಎಬ್ಬಿಸಿ, ಜೊತೆಯಲ್ಲಿಯೆ ಕರೆದುಕೊಂಡು ನಡೆಯುತ್ತಾ, ಮಂಗಳಮುಖಿಯರ ಕಡೆಗೊಮ್ಮೆ ನೋಡಿದಳು, ಅವರಾಗಲೆ ಹಣದ ವಸೂಲಿಗಾಗಿ ಮತ್ತೊಬ್ಬನ ಮೈ ಮೇಲೆ ಬಿದ್ದಿದ್ದರು. 
ದಾರಿಯಲ್ಲಿ ಹೋಗುತ್ತಾ, ಕಲ್ಲವ್ವ ಆ ವ್ಯಕ್ತಿಯನ್ನು ಕೇಳಿದಳು
'ತಮ್ಮಾ, ತಪ್ಪ ತಿಳ್ಕೊಬ್ಯಾಡ, ನಿನ್ ಹೆಸರೇನ್ಪಾ?'
'ಹ್ಞಾಂ..., ಶಂಕ್ರಯ್ಯ ಬೆ'
'ಊರು?'
'ಇಲ್ಲೆ ಬೆ, ನಿಡಗುಂದಿ '
' ಹೌದಾ!!, ಮದ್ವಿ ಮಕ್ಳು?'
'ಹ್ಞೂಂ ಲಗ್ನ ಆಗಿ ಎರ್ಡ ಹೆಣ್ಮಕ್ಳ ಅದಾವ್'
'ಗಂಡು?'
' ಇಲ್ವಾ, ನಾನ ಯಾವುದ್ಕೂ ಆಸೆನ ಪಟ್ಟಾಂವಲ್ಲ, ಹೆಣ್ಣಾದ್ರನ, ಗಂಡಾದ್ರೆನ ಮಕ್ಳ, ಮಕ್ಳ.. ಗಂಡ... ಗಂಡಂತದ ಹಡ್ಕೊಂತ ಕುಂತ್ರ, ಆಕಿ ಆರೋಗ್ಯಾ ಹಾಳಾಗಿ ಹೊಕ್ಕೈತಲ್ರಿ, ಅದಕ್ ಮ್ಯಾಲ...ಮ್ಯಾಲ ಯಾಡು ಹೆಣ್ಣ್ ಆದ್ವು, ಅದ್ಜ ಎಲ್ಲಿದ ತಗಿ ಅತ್ಲಾಗ ಅನ್ಕೊಂಡ, ಆಪ್ರಷೇನ್ ಮಾಡ್ಸಬಿಟ್ಟಿನ ನೋಡ್ವಾ, '
'ಛಲೊ ಆತ ನೋಡ ನನ್ನಪ್ಪ, ನಿಮ್ಮಂತೊರು ಊರಿಗೆ ನಾಕ್ಮಂದಿ ಇದ್ರಂದ ಸಾಕ, ಹೆಣ್ಣ ಹಡಿಯೊ ಹೆಣ್ಮಕ್ಳ ಭಾಳೆ ಬಂಗಾರಾಗಿರ್ತೈತಿ' ಎಂದು ಹುಸಿ ನಗವನ್ನು ಮುಖದಲ್ಲಿ ತುಂಬಿಕೊಳ್ಳುತ್ರಾ,  ಉಗುಳನ್ನು ನುಂಗಿಕೊಂಡು
'ಯಪ್ಪಾ, ಅವ್ರೆಲ್ಲ ಈಗ ನಿನ್ಹತ್ರ ರೊಕ್ಕಾ ಕಿತ್ಕೊಂಡ ಹೋದ್ರಲ್ಲಾ, ಅವ್ರಗೇನ ನಿ ಕೈಗಡ ಏನರ ಕೊಡೊದಿತ್ತೇನ' ಸ್ವಲ್ಪ ಅಳುಕಿನ ಧ್ವನಿಯಲ್ಲಿಯೆ ಕೇಳಿದಳು.
ಪ್ರಶ್ನಾರ್ಥಕವಾಗಿ, ಹುಬ್ಬುಗಳನ್ನು ಗಂಟಿಕ್ಕಿಕೊಂಡು ಕಲ್ಲವ್ವನನ್ನೆ ದಿಟ್ಟಿಸಿನೋಡಿದನು.
ಅವನ ಈ ನೋಟವನ್ನು ಕಂಡಂತ ಕಲ್ಲವ್ವಳು ಮನದಲ್ಲಿಯೆ ಹೆದರಿಕೊಂಡಳು.
'ಇಲ್ಲವ್ವ, ಇವ್ರ ಹತ್ರ ಯಾರ ಕೈಗಡ ತಗೊತಾರ್ಬೆ'
'ಮತ್ತ್ ಹಾಂಗ ಎದಿಮ್ಯಾಲ ಬಿದ್ದ ಹಂತೇಕಿನ ರೊಕ್ಕಾನೆಲ್ಲಾ ಕಿತ್ಗೊಂಡ ಹೋದ್ರು'
'ಅದಾ...‌ಅವ್ರದೊಂದು ಛಾಳಿ ಅದು'
'ಛಾಳಿ..!!! ಹಂಗಂದ್ರ'
'ಅಯ್ಯ, ಇತ್ತಿತ್ಲಾಗ ಇವ್ರ ಆಟ ಭಾಳ ಜೋರಾಗೈತ್ಬೆ ಯವ್ವ, ದುಡಿಯಂಗಿಲ್ಲ ದುಖ್ ಪಡೊಂಗಿಲ್ಲ, ಮುಂಜಾನಿದ್ದ ಸಂಜಿತನ್ಕ ಊರ...ಊರ ಸಂತಿ ಅಡ್ಡಾಡಿ, ರೊಕ್ಕಾ ಇಸ್ಗೊತಾರ, ಕೊಟ್ರ ಛಲೊ, ಕೊಡದಿದ್ರ? ಈಗ ನೋಡಿದೆಲ್ಲವ್ವ, ಹಿಂಗಾ, ತ್ರಾಸ್ ಅಂದ್ರು ಇಲ್ಲ, ಬ್ಯಾನಿ ಅಂದ್ರು ಇಲ್ಲ, ಇರ್ಲಿ, ಇರ್ದ ಹೋಗ್ಲಿ ಎದಿಮ್ಯಾಲ ಬಿದ್ದು ಇದ್ಬದ್ದ ರೊಕ್ಕಾನೆಲ್ಲ ಕಸ್ಗೊಂಡ ಹೋಕ್ಕಾರ, ಇತ್ತಿತ್ಲಾಗ ಇವ್ರನ್ನ ಹೇಳೊರ ಕೇಳೊರ ಯಾರಿಲ್ದಂಗಾಗೈತಿ'
ಅವನ ಮಾತುಗಳನ್ನು ಕೇಳುತ್ತಿದ್ದಂತೆಯೆ, ಕಲ್ಲವ್ವನ ನಡಿಗೆ ಸಣ್ಣದಾಯಿತು, ಬಾಯರಿದಂತಾಗಿ, ಮೈಯಲ್ಲ ಬೆವರಿಕೊಂಡು,  ಕ್ಷಣಕಾಲ‌ ಕಣ್ಣಿಗೆ ಕತ್ತಲು ಕಟ್ಟಿದಂತಾಗಿ, ಆ ಹುಡುಗನ ತೋಳನ್ನು ಹಿಡಿದುಕೊಂಡು ನಿಂತುಬಿಟ್ಟಳು.
'ಯಾಕಬೆ,‌ ಏನಾತ?' ಎಂದನಾತ ತುಸು ಗಾಬರಿಯಿಂದ
'ಏನಿಲ್ಲಪಾ ತಂದೆ, ನಿ ಹೇಳಿದ್ದ ಮಾತ ಕೇಳಿ, ನನ್ನೆದಿ ಝಲ್ ಅಂದಂಗಾತು ಅದ್ಕ,' ಎಂದಳು ಮೆಲ್ಲನೆ ಸಾವರಿಸಿಕೊಳ್ಳುತ್ತಾ
ಕಣ್ಣನ್ನು ತೆರೆದಳು.
'ಈಗ ಹ್ಯಾಂಗೈತಿ ಆರಾಮ, ಐತಿಲ್ಲೊ, ಏನ್ ನೀರು ಪಾರು ಕುಡಿತಿರೊ' ಕೇಳಿದನು ಕಾಳಜಿಯಿಂದ
'ಬ್ಯಾಡ್ತಮ್ಮ, ಬ್ಯಾಡ, ಅಲ್ಲಾ, ಮತ್ತ್ ಅವಕ್ಕ...ದಗದಾ ಬಗ್ಸಿ ಅಂತ ಏನಿಲ್ಲನ'
'ಯಾ ದಗದಾ ತರ್ತಿಬೆ, ಹಿಂಗ ಗಂಡರಗೂಳಿ ಅಡ್ಡಾಡ್ದಂಗ ಅಡ್ಡಾಡ್ತಾವು, ಕೆಲವೊಬ್ರ ಅದಾರ, ತಂ ಪಾಡಿಗೆ ತಾವು ದುಡ್ಕೊಂಡ, ಛಲೊತ್ನಾಗಿ ಬಾಳೆ ಮಾಡಾಕ ಹತ್ತ್ಯಾವು, ಇವ್ ಒಂದಿಷ್ಟು ಪ್ಯಾಸನ್ ಅಂತಂದ ಗಂಡ ಹೋಗಿ ಹೆಣ್ಣಿನ ವೇಷಾ ಹಾಕ್ಕೊಂಡ, ಹಿಂಗ ಬೀದಿ ಬೀದಿ ಅಲಿತಾವ,'
'ಅಂದ್ರ ಇವ್ರ ಹೊಟ್ಟಿ ಉಪಜೀವ್ನ ಇದ ಅಂದಂಗಾತು'
'ಹೌದವ್ವಾ, ಇದ ಕಾಡೋದು, ಬೇಡೊದು, ಇಸ್ಕೊಳ್ಳುದು ಮಜಾ ಮಾಡೋದ, ಹೊಟ್ಟಿಗೊಂದಿಷ್ಟ ಹಿಟ್ಟ, ಜುಟ್ಗೊಂದಿಷ್ಟ ಹೂವ, ಆತಲ್ಲ ಮತ್ತಿನ್ನೇನ ಯಾರ್ದ ದುಡ್ಡ್ ಹಾಂ ಎಲ್ಲವ್ವನ ಜಾತ್ರಿ' ಹೇಳುತ್ತಾ... ಹೇಳುತ್ತಾ ನಿಲ್ದಾಣ ಬಂದೆ ಬಿಟ್ಟಿತು.
ಕೊಡುಬ ಹಣವನ್ನು ಇನ್ನೆರಡು ದಿನದಲ್ಲಿ ಕೊಡುವುದಾಗಿ ಹೇಳಿ ಕಲ್ಲವ್ವನನ್ನು ಹಳ್ಳಿಯ ಬಸ್ಸಿಗೆ ಹತ್ತಿಸಿ, ತಾನು ತನ್ನೂರಿನ ಹಾದಿಯನ್ನು ಹಿಡಿದನು.

Wednesday, December 25, 2019

ಚುಟುಕು

ಸುಡುವ ಸೂರ್ಯನಿಗೂ
ಕೂಡಿ ಬಂದಿತಿಂದು
ಕಂಕಣದ ಭಾಗ್ಯ!
ನೀಡುವೆ ನೀನೆಂದು
ಒಪ್ಪಿಗೆ, ಕೂಡಿಬರಲು
ನಮ್ಮಿಬ್ಬರಿಗೂ
ಕಂಕಣದ ಸೌಭಾಗ್ಯ!!

Monday, December 23, 2019

ಚುಟುಕು

ನಾನೀಗ
ಬೀಜವಿಲ್ಲದ ಹಣ್ಣಾಗಬೇಕಿದೆ.
ಹಳತುಗಳ ನಡುವೆ
ಸಿಕ್ಕು...‌ಕೊಳೆತು
ಹೋಗುವ ಮುನ್ನ,
ಹೊಸತನಗಳೊಳಗೆ
ಬೆರೆತು ಮತ್ತೆ
ಚಿಗುರಬೇಕೆಂದೆನಿಸಿದೆ.

ಚುಟುಕು

ನಿಮ್ಮೊಳಗಿನಷ್ಟು
ಶಾಂತಿಯು ತುಂಬಿಕೊಂಡಿಲ್ಲ
ನನ್ನೆದೆಯಲ್ಲಿ
ಗಾಂಧಿ...
ಆದರೂ....
ವಿನಾಕಾರಣ, ಹಿಂಸಿಸುವ
ನೆನಪುಗಳಿಗೆ ಹಾಡಬೇಕಿದೆ
ನಾಂದಿ...

ಚುಟುಕು

ವರೋಪಚಾರ ಅಪರಾಧ!!!
ಅದಕ್ಕಾಗಿ,  ನಿನ್ನನ್ನು ಬಿಟ್ಟು
ಬೇರೇನು... ಬೇಡೆನು
ಚೆಂದುಳ್ಳಿ!!
ಸಂಸಾರ ಸಾಗಿಸಲು
ರಸಿಕತೆಯಾದರು ಬೇಕಲ್ಲವೆ?
ತಡಮಾಡಬೇಡ, ಹೊತ್ಗೊಂಡು 
ಬಾ ಪುಟ್ಟಿ,  ಈರುಳ್ಳಿ!!

ಚುಟುಕು

ಯಾರಿಗೂ...
ಅರಿವಾಗುತ್ತಿಲ್ಲ
ನಮ್ಮಯ ಗೋಳು!!
ಇನ್ನೂರು ಕೊಟ್ಟರು
ಸಿಗುತ್ತಿಲ್ಲ ಆಳು!!
ಸಿಕ್ಕರೂ...ಪದೆ..ಪದೆ
ಮಳೆಯು ಸುರಿದು
ಮಾಡುತ್ತಿದೆ, ಮೂರಾಬಟ್ಟೆ
ನಮ್ಮೆಲ್ಲ‌ ಒಕ್ಕಲಿಗರ ಬಾಳು!!

ಚುಟುಕು

ಹೇಳಿಕೊಳ್ಳಬೇಕೆಂದಿರುವೆ
ನಿಮ್ಮೆದುರಿಗೊಂದು
ಗುಟ್ಟಿನ ವಿಷಯ!
ಕಾಡುತ್ತಿದೆ...
ಈ ಗುಟ್ಟು, ನಿಮ್ಮೊಳಗೆ
ಗುಟ್ಟಾಗಿ ಉಳಿಯುವುದೆ?
ಎಂಬ ಸಂಶಯ!!!

ಚುಟುಕು

ಚಂದಿರನಿಗೂ ದಕ್ಕಿತಿಂದು
ಸ್ವಾತಂತ್ರ್ಯ.....
ಮೋಡಗಳ
ಸೆರೆಯಿಂದ!
ಇನ್ನಾದರೂ...
ಸಿಗಬಹುದೇನೊ?
ನಮಗೆಲ್ಲ ಮುಕ್ತಿ
ನೆರೆಯಿಂದ!!!

ಚುಟುಕು

ಎಡೆಬಿಡದೆ ಸುರಿದು
ಹೋಗಿದೆ ಮಳೆ
ಫಸಲಿಗಿಂತಲೂ ಫಲವತ್ತಾಗಿ
ಬೆಳೆದಿದೆ ಕಳೆ
ಎರಡರ ನಡುವೆ ಸಿಕ್ಕು
ಕೊಳೆತು ಹೋಗುತ್ತಿದೆ
ಬೆಳೆದ ಬೆಳೆ

ಚುಟುಕು

ಬಿಟ್ಟು ಹೋಗುವುದಾದರೆ....
ಹೇಳದೆ ಹೊರಟುಬಿಡು!!
ಕಾಯುವುದರಲ್ಲೂ ಒಂಥರಾ
ಸುಖವಿದೆ!
ನಿನಗೇನು ಗೊತ್ತು!!,
ನೀನಿಲ್ಲವೆಂಬ ಸತ್ಯದ
ಜೊತೆ ಬದುಕುವುದರಲ್ಲಿ
ಅನುಭವಿಸಿಕೊಳ್ಳಲಾರದಷ್ಟು
ಯಾತನೆಯಿದೆ!

Sunday, December 22, 2019

ಚುಟುಕು

ಕಣ್ಣ ಹನಿಗಳಿಗೆ
ಬೆಲೆ ಕಟ್ಟುವರಾರು?
ಅದು ಬರೀ ಉಪ್ಪು!
ಅತಿಯಾಗಿ ನಂಬಿ
ಮೋಸ ಹೋಗುವುದಿದೆಯಲ್ಲ
ಅದು ನಮ್ಮ ತಪ್ಪು!!

ಚುಟುಕು

ಪ್ರೀತಿಯೂರಿನಲ್ಲಿ
ನೋವಿಗೆ ಮದ್ದಿಲ್ಲವೆಂದರಿತಿದ್ದರೂ
ಹೆಜ್ಜೆ ಇಟ್ಟೆ!
ಮರಳಲಿ ಹೇಗೆ?
ಅವಳಿಲ್ಲದೆ ಬರಿಗೈಯಲ್ಲಿ!
ಸಾವಾದರು ಬರಬಹುದಲ್ಲ!!!
ಕರೆಯಲೆಂದು, ಅದಕೆ
ಇಲ್ಲಿಯೇ... ಸುಮ್ಮನೆ
ಕುಳಿತುಬಿಟ್ಟೆ!!

ಚುಟುಕು

ಭಾರವಾಗುವುದಿಲ್ಲೇನು?
ಚೆಲುವೆ, ಮೂಗಿಗೆ
ಈ ನತ್ತು!!
ತರದಿದ್ದರೆ ಸಾಕು...
ನಿನ್ನ ಸೌಂದರ್ಯಕ್ಕೆ
ಕುತ್ತು!!

ಭಾರವಾಗುವುದಿಲ್ಲೇನು?
ಚೆಲುವೆ, ಮೂಗಿಗೆ
ಈ ನತ್ತು!!
ಇರಲಿಬಿಡು,
ತರದಿದ್ದರಷ್ಟೆ ಸಾಕು
ನನ್ನ ಜೇಬಿಗೆ
ಆಪತ್ತು!!

ಚುಟುಕು

ಕಲ್ಲು ಗೋಡೆಗಳಿಗಾಗಿ
ನಿಮ್ಮ ಮನಸ್ಸುಗಳನ್ನು
ಕಲ್ಲಾಗಿಸಿಕೊಳ್ಳಬೇಡಿ!
ಇಲ್ಲಿ ಯಾವುದು
ಶಾಶ್ವತವಲ್ಲ!! ಇದ್ದ
ನೆಲವನ್ನೆ, 
ಸ್ವರ್ಗವಾಗಿಸಿಕೊಂಡುಬಿಡಿ

ಚುಟುಕು

ಇದಲ್ಲವೇನು ಮೋಸ?
ತುಟಿಯಂಚಿನಲ್ಲಿಯೆ.. ತುಂಬಿಟ್ಟು
ಕೊಂಡಿರುವೆಯಲ್ಲ,
ಮಧುರಸ...
ಅರಿವಾಗುತ್ತಿಲ್ಲವೇನು?
ಬಾಯಾರಿ.. ಕುಳಿತಿಹನಿಲ್ಲಿ
ಪ್ರೇಮದಾಸ!

ಚುಟುಕು

ನನ್ನೆದೆಯೆ..
ಕತ್ತಲೆಯ ಕೂಪ!
ನಾನೇಕೆ ಹಚ್ಚಲು
ಹೋಗಲಿ...
ಬೇರೆಯವರಂಗಳದಲ್ಲಿ
ದೀಪ!!

ಚುಟುಕು

ಸಾಲು ಕದ್ದವನ
ಮಾತು ಬಿಡು! ಅವನೇನು
ಭಾವವ ಕದಿಯಬಲ್ಲನೇನು?
ಮನಸ್ಸು ಕದ್ದವಳು
ನೀನು... ಬಾ ಇಲ್ಲಿ
ಉತ್ತರಿಸು, ಈ ವಿರಹದ
ಸೆರಮನೆವಾಸಿಯನ್ನು
ಬಿಡಿಸಿಕೊಂಡು ಹೋಗುವುದು
ಯಾವಾಗ?

ಚುಟುಕು

ಎಷ್ಟು ದರವಾದರೇನು?
ಖರಿದೀಸಿಕೊಳ್ಳಬೇಕೆಂದಿದ್ದೆ
ಈ ಸೀರೆಯನ್ನು 
ನನ್ನವಳಿಗಾಗಿ...
ಖರಿದಿಸಲಿಲ್ಲ!!!
ಕಾರಣವಿಷ್ಟೆ, ಇದರಷ್ಟು
ನುಣುಪು ನಡವು
ನನ್ನವಳದ್ದು ಇಲ್ಲದ್ದಕ್ಕಾಗಿ

Wednesday, December 18, 2019

ಶಾಯರಿ

ಅವಳ ಕುರಿತು
ಮಾತನಾಡಬೇಕೆಂದಾಗಲೆಲ್ಲ
ಮಧು ಬಟ್ಟಲಿಗೆ
ಚುಂಬಿಸುತ್ತೇನೆ ಸಾಕಿ.....
ಕುಡಿದು....
ಮೌನವಾಗಿರಬೇಕೆಂದುಕೊಂಡಾಗಲೆಲ್ಲ
ಮತ್ತೆ, ಮಾತನಾಡುವಂತೆ
ಪ್ರೇರೆಪಿಸುತ್ತವಲ್ಲ!! ರಂಗೀಯ
ನೆನಪುಗಳು....
ಇದಾವ ರೀತಿ.