Tuesday, March 31, 2020

ಚುಟುಕು


ಸಾವು...
ನಮ್ಮಪ್ಪ, ತಾತ
ಮುತ್ತಾತನ್ನು
ಬಿಟ್ಟಿಲ್ಲ! ಎಲ್ಲಾರಿಗೂ
ಒಂದಿಲ್ಲ ಒಂದಿನ
ಪಿಂಡಾ ಇಟ್ಕೊಳ್ಳದು
ತಪ್ಪಿದ್ದಲ್ಲ!
ಮನಸಿನ ಬ್ಯಾನಿ
ಏನಪಾ ಅಂದ್ರ,
ನಾ ಹೋದ ಮ್ಯಾಲ
ನಾಕ್ ಮಂದಿ, ನಾಕ ದಿನ
ಹೆಚ್ಗಿ ಬಾಳುವಂತದ್ದು
ಏನರ ಮಾಡಿಟ್ಟಿನೇನು?
ಅನ್ನೊದ, ಗುಂಗಿ ಹುಳ 
ಕೊರ್ದಂಗ
ಕೊರಿಯಾಕ್ಹತ್ತೈತಿ.

ಚುಟುಕು


'ಕಲ್ಲು'
ದೇವರಾಗಿದ್ದ
ಸಮಯವೀಗ,
ಹಿನ್ನಡೆಯಲ್ಲಿದೆ.
ಕಲ್ಲು ಮನಸ್ಸಿನವರೀಗ
ದೇವರಾದರಷ್ಟೇ
ಮನುಜ ಪಥವು
ಮುನ್ನಡೆಯುತ್ತದೆ.

ಚುಟುಕು

ಕಾಮ-ಕ್ರೋಧ
ಲೋಭ- ಮೋಹ
ಮದ- ಮತ್ಸರ
ಜಾತಿ-ಮತ
ಪಂಥಗಳನ್ನೂ
ಮೀರಿ... ಬದುಕಿನಲ್ಲಿ
ಹಸಿವೊಂದಿದೆ.
ಇದಕ್ಕಾಗಿಯೇ....
ಗಂಟು ಮೂಟೆಯ
ಹೊತ್ತುಕೊಂಡು,
ಸಾಯವವರೆಗೂ
ದಾರಿಯನ್ನು
ಸವೆಸಬೇಕಿದೆ.

Monday, March 30, 2020

ಶಾಯರಿ

ಹೇಗೆ ಹೇಳಿಬಿಡಲಿ?
ಕ್ಷಣ...ಕ್ಷಣವು ನಾ...
ಸತ್ತು ಬದುಕುತ್ತಿರುವುದರ
ಲೆಕ್ಕ!
ಸಾಕಿ...
ಕೊಬ್ಬಿದ ದೇಹ
ಮನಸ್ಸೆ ಮಾಗಿಲ್ಲವಿನ್ನು
ಪಕ್ಕಾ!!

ಶಾಯರಿ

ರಂಗೀಯ
ಸೋಂಕಿನಿಂದಲೆ
ಬದುಕುಳಿದವನು
ನಾನು...ಕೋರೊನಾ
ಯಾವ ಲೆಕ್ಕ!!
ಸಾಕಿ....
ಅಷ್ಟಕ್ಕೂ...
ಎದೆಯ ಗೂಡಲ್ಲಿ
ಉಳಿದಿರುವುದಾದರು
ಏನು?
ಕೊಳೆತು ನಾರುತಿರುವ
ಹಳೆಯ ನೆನಪುಗಳ
ಕಳೆಬರಗಳ ಹೊರತು.

ಶಾಯರಿ


ಹುಳಿಯನ್ನು 
ದಕ್ಕಿಸಿಕೊಳ್ಳುವ
ತಾಕತ್ತು
ಎದೆಯಲ್ಲಿದೆಯೆಂದಾಗ,
ಗೊಂಚಲಿಗೆ ಕೈ
ಹಾಕಬೇಕಲ್ಲವೆ
ಸಾಕಿ....
ಪ್ರೀತಿಯೊಳಗಿನ
ಕಹಿಯನ್ನು
ಅರಗಿಸಿಕೊಳ್ಳಬಲ್ಲೆನೆಂಬ
ಧೈರ್ಯವಿದ್ದಾಗ ಮಾತ್ರ
ಮದ್ಯದ ಬಟ್ಟಲನ್ನು
ಚುಂಬಿಸಬೇಕಲ್ಲವೆ.

ಶಾಯರಿ

ಅವಳ
ಮಧು ಮಂಚದಲ್ಲಿ
ಹೊಸಕಿ ಹೋದ
ಹೂವುಗಳನ್ನು
ಎತ್ತಿಟ್ಟಿಕೊ
ಸಾಕಿ...
ನಾಳೆ ನನ್ನ
ಗೋರಿಯ ಮೇಲೆ
ಚಾದರವ ಮಾಡಿ
ಹಾಕುವಿಯಂತೆ.

ಚುಟುಕು


ಇಂತಿಂಥ ಪೋಟೊ
ಹಾಕಿ, ನಂ
ಹೊಟ್ಟಿನ 
ಉರ್ಸಬ್ಯಾಡ್ರಿ!!😢😢
ನಾವ್ ಕರೋನಾ
ವೈರಸ್ನ 
ಪಥ್ಯಾದಾಗದೀವಿ,
ದಯವಿಟ್ಟು
ಭಂಗಾ ತರಬ್ಯಾಡ್ರಿ!!😒😒
ಎಲ್ಲಾ ಮುಗ್ದ ಮ್ಯಾಲ
ಮನಿಗೆ ಊಟಕ್ಕ
ಕರೆಯೋದ ಮಾತ್ರ
ಮರಿಬ್ಯಾಡ್ರಿ!😁😁😁

Monday, March 23, 2020

ಚುಟುಕು

ಹರೆಯ ಸೋರಿ,
ಸುಕ್ಕೆಲ್ಲಾ ದೇಹವನ್ನು
ಆವರಿಸಿಬಿಟ್ಟಿದೆ.
ಕಾಯುವಿಕೆಗೆ ಮನೆಯ
ಹೊಸ್ತಿಲು ಶಿಥಿಲಗೊಂಡಿದೆ
ನನ್ನ ಹಾಗೆ, ರಂಗ!!!
ನಿನ್ನನೆ ನಂಬಿರುವೆ.
ನೆಚ್ಚಿದವರೆಲ್ಲ ನಡು 
ನೀರಿನಲ್ಲೆ ಕೈ ಬಿಟ್ಟು
ಹೋದರು. ಕೂಗಿಬಿಡು
ಬಂದು ಬಿಡುವೆ, ತೊರೆದೀ.....
ವಿಷವರ್ತುಲದ ಸಂಗ!!

Friday, March 13, 2020

ಎಲ್ಲರೂ ಮಲಗಿರುವಾಗ

ಎಲ್ಲರು ಮಲಗಿರುವಾಗ, ನಾನೊಬ್ಬನೇಕೆ
ಎದ್ದಿರಲಿ?
ಬುದ್ದನ ಹಾಗಿಲ್ಲೀ...ಯಾರು ಪ್ರಭುದ್ಧರೆನಲ್ಲವಲ್ಲ!!
ಬೆಳಕನು ಅರಸಲು ಇರುಳಲಿ ಮನೆ ಬಿಟ್ಟವರದೆಷ್ಟು ಮಂದಿ
ಎಲ್ಲರ ಮನೆಯ ಬಾಗಿಲುಗಳು, ಜೈಲು ಕೋಣೆಗಿಂತಲೂ
ಬಲಿಷ್ಠವಾಗಿರುವಾಗ.

ಹೇಳುವುದಕ್ಕೆ, ಕೇಳುವುದಕ್ಕೆ ಇನ್ನೇನುಳಿದಿದೆ?
ಮಾತು ಮಾತಿಗೂ ಬೆನ್ನು ತೋರಿಸುವವರೀರುವಾಗ!
ಸುಮ್ಮನೆ, ಒಡೆದು ಹೋದ ಮುತ್ತುಗಳ ಜೋಡಿಸುವ
ವ್ಯರ್ಥ ಪ್ರಯತ್ನ
ಮುಟ್ಟಿದರೆ ನುಂಗಿಬಿಡುವಂತಹ ವಿಲಕ್ಷಣ ಸೋಂಕಿತ
ಮನಸುಗಳು.

ಅಳಿಸುವುದಕ್ಕೆ ನನ್ನ ಕೈಯ್ಯಲ್ಲೊಂದು ಡಸ್ಟರ್ ಇರಬೇಕಾಗಿತ್ತು!!
ಅಳಿಸಿ ಬರೆದರೆ? ಮತ್ತೆ ಜೀವ-ಭಾವ ಮೂಡುವುದೇನು
ಸಂಬಂಧಗಳಲ್ಲಿ!
ಹುಚ್ಚುತನ!! ನಾನೇನ್ನಬಹುದು, ಅವರು ತೆವಲೆಂದು ಕರೆದು ಬಿಡುತ್ತಾರೆ.
ಬರೆದ ಪದಗಳಿಗೆ ಬೆಲೆಯಿಲ್ಲವೆಂದ ಮೇಲೆ, ಪುಸ್ತಕ
ಲೇಖಕನಿಗೂ, ಓದುಗರ ಜೇಬಿಗೂ ಹೊರೆ.

ಹೋಗಲಿಬಿಡಿ ಎಂದು ಕೈಯ್ಯನ್ನು ತೊಳೆದುಕೊಂಡು ಬಿಡುವುದಾ?
ಯಾರೊ ಹಚ್ಚಿದ ದೀಪವನು ಊದಿ, ಕತ್ತಲಲಿ ಗಹಗಹಿಸಿ 
ನಗುತ್ತಲಿರುವುದಾ?
ಹರಕು-ಮುರಕು ಗುಡಿಸಲಿಗೆ ಕಡ್ಡಿಯ ಗೀರಿ, ಬಂಗಲೆಯಲ್ಲಿ ಹೊದ್ದು ಮಲಗಿಬಿಡುವುದಾ?

ತುಂಬಿಕೊಳ್ಳಲಿಲ್ಲ ಅರಿವನ್ನು, ಹಂಚಿಕೊಳ್ಳಲಿಲ್ಲ
ಅನುಭವವನ್ನು, ತೋರಿಸುವ ದಾರಿಗಳಂತು ಪ್ರಪಾತಗಳೆ.
ಹಾದಿಗೆ ಹಚ್ಚಿದ ಮುಳ್ಳುಗಳ ನಡುವೆಯೂ ಹೂವೊಂದು
ನಸುನಗುತ್ತದೆ, ಚಿವುಟದಿದ್ದರೆ ಸಾಕು, ದುಂಬಿ ಮಧುವನ್ನು
ಹೀರಲಿ, ಗೂಡನ್ನು ತುಂಬಿಸಲಿ, ತುಂಬು ಜೇನು ಎಲ್ಲರ
ನಾಲಿಗೆಯ ಮೇಲಿನ ವಿಷವನ್ನು ಕಳೆಯಲಿ, ಬದಲಾಗಲಿ,
ಹೊಸಬೆಳಕು ಮೂಡಲಿ.

ಇದಾಗದಿದ್ದರೆ?, ಜೇನು ವಿಷವಾಗಿಬಿಡಲಿ, ಬಿದ್ದು ಹೋಗಲಿ ಸಾಲು ಸಾಲು ಹೆಣಗಳು, ಗಂಟಲಿಗೆ ಹನಿ ನೀರು ದಕ್ಕದಂತೆ.
ತಟ್ಟಿಬಿಡಲಿ ನಿಸ್ಸಹಾಯಕ ಕೈಗಳ ಶಾಪ, ದಾರಿ ಹೆದ್ದಾರಿಗಳಗುಂಟ
ತುಂಬಿ ಬಿಡಲಿ ಮಾಂಸದ ಮುದ್ದೆಗಳು. 
ಶತ ಶತಮಾನಗಳಿಂದ ಹಸಿವಿನಿಂದ ಹಾರಾಡುತಿರುವ ಹದ್ದುಗಳು ಕುಕ್ಕಿ... ಕುಕ್ಕಿ.. ಎಳೆದು ತಿಂದು ತೇಗಿಬಿಡಲಿ,