Wednesday, September 30, 2020

ಶಾಯರಿ

ಈ ಮಣ್ಣಿನಲ್ಲಿ
ಧರ್ಮದ ನಶೆಯೇ...
ಇನ್ನೂ ಇಳಿದಿಲ್ಲ
ಸಾಕಿ...
ಹೂಗಳು 
ಅರಳುವುದಾದರು
ಹೇಗೆ?
ಕಾಮಾಂಧರ ಕಾಲಲಿ
ಸಿಕ್ಕು ಹೋಗುತ್ತಿರುವಾಗ
ಹೊಸಕಿ.

Friday, September 25, 2020

ಶಾಯರಿ

ಎಡೆಬಿಡದೆ ಸುರಿಯುತ್ತಿರುವ
ಮಳೆಯಲ್ಲಿ, 
ನನ್ನ ಹೆಣವನ್ನೊಮ್ಮೆ
ಮಲಗಿಸಿಬಿಡು ಸಾಕಿ...
ತಣ್ಣಗಾಗಲಿ!
ವಿರಹದಲೆ ಕುದ್ದು..ಕುದ್ದು
ಬೆಂದು ಹೋದ ಜೀವವಿದು.
ಗೋರಿಯೊಳಗಿನ 'ಕಾವ'ನ್ನಾದರು
ತಡೆದುಕೊಳ್ಳಲಿ.

ಶಾಯರಿ

ನಮ್ಮಿಬ್ಬರ ನಡುವೆ
ಏನಿತ್ತೆಂದು
ಬಾಯ್ಬಿಟ್ಟು ನಾ
ಹೇಗೆ ಹೇಳಲಿ
ಸಾಕಿ....
ಊರಿಗೆ ಗೊತ್ತಿದ್ದದ್ದು
ನಿನಗೆ ಅರಿವಿಲ್ಲವೆಂದರೆ?
ಈ ಮಧು ಬಟ್ಟಲು
'ಮೃತ್ಯುಪಾನ'ವಾಗುವುದರಲ್ಲಿ
ಸಂದೇಹವಿಲ್ಲ.

Thursday, September 24, 2020

ಶಾಯರಿ

ಬೆಂದು ಹದವಾದ
ಕವಿತೆಗಳ ಕೆಳಗೆ
'ರುಜು'ವನ್ನು
ಮಾಡಲು ರಂಗಿಯೇ...
ಇಲ್ಲವಲ್ಲ
ಸಾಕಿ....
ಮೂಢ ಜನರಿಲ್ಲಿ
ಮೊದಲು ಪ್ರೀತಿಸಿದ್ದನ್ನೆ
'ರುಜುವಾತು'
ಮಾಡೆನ್ನುತ್ತಿದ್ದಾರಲ್ಲ!

Tuesday, September 22, 2020

ಶಾಯರಿ

ರಂಗೀಯನ್ನು
ಮರೆಯಲೆಬೇಕೆಂಬ
ಹುಚ್ಚು ಬಯಕೆಯೇನು
ಇಲ್ಲ
ಸಾಕಿ...
ಅವಳೊಂದು
ನೆಪವಷ್ಟೆ...
ಮದ್ಯದ ಬಟ್ಟಲಿಗೆ
ಮುತ್ತಿಕ್ಕಲು.

Saturday, September 12, 2020

ಚುಟುಕು

ತೊಟ್ಟ 'ಬಟ್ಟೆ'
ಎಂದಿದ್ದರೂ...
ಕೊಳೆಯಾಗಲೆಬೇಕು
ಗೆಳೆಯ!
ಕಳಚುತ್ತಾರಷ್ಟೆ, ಲೌಕಿಕ
ಸುಖಕ್ಕಾಗಿ ಕತ್ತಲ
ಕೋಣೆಗಳಲ್ಲಿ!
ಅವರ 'ತೊಟ್ಟು' ಕಳಚಿ
ಬಿಳುತ್ತದೆ ಹೊರತು,
ಹರಿಯುವುದೆ ಇಲ್ಲ ಎಂದಿಗೂ..‌
ಅಂಧಕಾರದ ಪರದೆಯು..

Friday, September 11, 2020

ಚುಟುಕು

ಹೂವೇನು?... ಮುಳ್ಳೇನು?....
ಮುತ್ತಿಕ್ಕುತ್ತವೆ ಮಂಜಿನ
ಹನಿಗಳು, ಎಂತಹ
ಸೋಜಿಗ!
ಮುತ್ತಿಕ್ಕಲು ಹೋದದ್ದು
ಹೂವಿಗೆ,
ಚುಚ್ಚಿದ್ದು? ಮುಳ್ಳುಗಳು 
ಎದೆಯ ಗೂಡಿಗೆ. ಇದ
ಕಂಡು, ಕೇಳುತ್ತದೆ 'ಏನಾಯಿತು?'
ಎಂದು ಮೂಜಗ!!

Monday, September 7, 2020

ಗಾಯನ

ನಿನ್ನ ಹೆಸ್ರ ಬರದಿಲ್ಲಂದ್ರ ಈ ಹಣಿಮ್ಯಾಗ..
ಮಾಡೊದಿನ್ನೇನೈತೆ ಹೊಕ್ಕೇನಿ ಕುಣಿಯಾಗ
ಉಸ್ರ ಹಾಕ್ಕೊತ ಕುಂದ್ರುದ್ಯಾಕ ನಿನ್ ಹೆಸರಿನ್ಯಾಗ
ನಿನ್ ಹೊರ್ತ ಬಾಳೊದ್ ಹ್ಯಾಂಗ ಕಳ್ಳ ಸಂತಿಯೊಳ್ಗ

ಗೆಜ್ಜಿಕೊಟ್ಟ ಕೈಗೆ ಕೈಯ ಕೊಟ್ಟು ಹ್ಯಾಂಗ ನಡದಿ
ಮಾತ ತಪ್ಪಿ, ಅಲ್ಲಿ ಏಳ ಹೆಜ್ಜಿ ಹ್ಯಾಂಗ ತುಳಿದಿ
ಬೆಂಕಿಯೊಳ್ಗ ನೂಕಿ ನನ್ನ, ಮಾಡಿಕೊಂಡಿಯಲ್ಲ ಶಾದಿ
ನಾ ಕೊಟ್ಟ ಹತ್ತಿಲಿಂದ ಮಾಡ್ಕೊಂಡ ಹೊಂಟಿ  ಗಾದಿ

ಹೋಗೊದ ಹೊಂಟಿ ತೂರೆರ ಹೋಗ ಗಾಳಿಗೆ ನನ್ನ ಬೂದಿ
ನಮ್ಮ ಪ್ರೀತಿಗೆ ಸಾಕ್ಷಿಯಾಗಿ ಉಳಿದುಹೋಗಲಿ ಬೀದಿ
ಮತ್ತ್ಯಾರು ತುಳಿಯದೊ ಬ್ಯಾಡ ನಮ್ಮಿಬ್ಬರ ಹಾದಿ
ಪ್ರೀತಿಗೆ ಕಣ್ಣಿಲ್ಲಂತ ತೋರಿಸಿ ನೀ ಹ್ವಾದಿ...
ಪ್ರೀತಿಗೆ ಕರುಳಿಲ್ಲಂತ ಸಾಬೀತ ಮಾಡಿ ನಡೆದಿ...

Saturday, September 5, 2020

ಮಾಂವ!

ಮೂರ್ ಹೊತ್ತು ಕೆಲ್ಸ-ಬಗ್ಸಿ ಬಿಟ್ಗೊಂಡು
ಬಿಟ್ ಕಣ್ ಬಿಟ್ಗೊತ ಕುಂದ್ರಾವ!
ತವ್ರಿಗ್ ಬಂದ್ ವಾರಾಗಿ ಹೋತು, ನಿಂಗಿನ್ನ
ನನ್ ನೆಪ್ ಬರುವಲ್ದೇನೊ? ಮಾಂವ!

ಕುಚಲಕ್ಕಿ ಅನ್ನ, ಹುರಳಿಕಟ್ಟಿನ ಸಾರ
ಕೈ ತುತ್ ಇಲ್ದನಾ... ಉಣಲಾರ್ದಾಂವ!
ಸಂಜಿಕೆಲ್ಲ ಹೂ ಮುಡ್ಸಿ ರಾತ್ರಿಗೆಲ್ಲ ನಿದ್ದಿಗೆಡ್ಸಿ, 
ಕೋಳಿ ಕೂಗೊ ಮುಂಚೇಕ ಎದ್ದ ಕುಂದ್ರಾಂವ!

ಊರ ಬಾವಿ ನೀರ ಸೇದಿ..ಸೇದಿ ಬಿಂದ್ಗಿಲ್
ತಂದ ಅಡ್ಗಿ ಮನ್ಯಾನ ಹಂಡೆ ತುಂಬ್ಸಾವ!
ಖೊಣ್ಗಿ ರೊಟ್ಟಿ ಬುತ್ತಿ ಕಟ್ಗೊಂಡ ಬಂಡಿ
ಹೂಡಿ ಹೋಗೊ ಮುಂದ ನಡ್ವ ಗಿಲ್ಲಾಂವ!

ಏನ್ ಹೇಳ್ಲಿ?, ಹ್ಯಾಂಗ ತಡಕೊಳ್ಲಿ
ರಾತ್ರಿ ಹಾಸ್ಗ್ಯಾಗೆಲ್ಲ ನೆಪ್ಪಿನ ತಿಗ್ಣಿ ಕಡಿಯಾ ಕುಂತಾವ!
ಮನಿ‌ ಮುಂದಿನ ಮಲ್ಗಿ ಬಳ್ಳ್ಯಾನ  ಹೂವೆಲ್ಲ 
ನೀ.. ಯಾವಾಗ ಬರ್ತಿಯಂತ ಕಾಯಾಕುಂತಾವ!

ಮಂಗ್ಯಾನಂತ ವಾರ್ಗಿ ಗೆಳತ್ಯಾರೆಲ್ಲ, ಮಾವಿನಕಾಯಿ ಯಾವಾಗ ತಿಂತಿಯಂತ ಕೇಳಾಕ್ಹತ್ತಾಂವ!
ಕೇಳಬಾರ್ದನ್ನೆಲ್ಲ ಕೇಳಿ..ಕೇಳಿ ನನ್ನ ಮೈಯೊಳಗಿನ
ಚಳಿನೆಲ್ಲ ಬಿಡ್ಸಾಕುಂತಾವ!

ಜೋಕ್ಮಾರ ಸತ್ರೇನ, ಸುಕ್ಮಾರ ಹುಟ್ಟಿದ್ರೇನ
ಇವತ್ತ್, ಸಂಜಿ ವಸ್ತಿಗರ ಬಂದಬಿಡೊ ಮಾಂವ!
ತಡ್ಕೊಳ್ಳಾಕ ಆಗುವಲ್ದಾಗೈತಿ ಹೊಸ್ಮಾಲಗಿತ್ತಿ
ಹಸಿಬಿಸಿ ಮನ್ಸಿನ ಕನಸ್ನಾಗಿನ ಸಾಂವ!

Thursday, September 3, 2020

ಚುಟುಕು

ಬೇಕಿದ್ದರೆ ಬೆಂಕಿಯನ್ನೆ
ಹಚ್ಚಿಬಿಡು!
ಉರಿದು ಹೋಗುತ್ತೇನೆ
ನೋವಿಲ್ಲದೆ!
ಉಸಿರಾಡುತ್ತಿರಲಿ
ಹೇಗೆ?
ಬಾಳಲ್ಲಿ ನಿನ್ನ
ಹೆಸರಿಲ್ಲದೆ!