Tuesday, January 31, 2023

ವ್ಯಾಖ್ಯಾನ...


ದಾರವಾಡದಲ್ಲಿ ಜರುಗಿದಂತಹ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ನಂತರ ಇಂದು ಮತ್ತೆ ಸುಶೀಲಣ್ಣ ಕುಂದರಗಿ ಇವರ  ಆಜ್ಞೆಯ ಮೇರೆಗೆ ಇಂದಿಲ್ಲಿ ಒಂದೆರಡು ಮಾತುಗಳನ್ನಾಡುವ ಸದಾವಕಾಶ ಒದಗಿ ಬಂದಿದೆ. ಅವರಿಗೂ ಕಾರ್ಯಕ್ರಮದ ಆಯೋಜಕರಿಗೂ ಮತ್ತು ಇಲ್ಲಿಯ ತನಕ ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನಸೂರೆಗೊಳಿಸಿದಂತಹ ಎಲ್ಲ ಗಾನ ಕೋಗಿಲೆಗಳಿಗೆ ಮತ್ತು ಇಲ್ಲಿ ನೆರೆದಿರುವಂತಹ ಎಲ್ಲ ಸಾಹಿತ್ಯಾಸಕ್ತರಿಗೂ ನನ್ನ ನಮನಗಳನ್ನು ಸಲ್ಲಿಸುತ್ತ ಸಮಯದ ಅಭಾವವಿರುವುದರಿಂದ ನೇರವಾಗಿ ವಿಷಯಕ್ಕೆ ಬರುತ್ತಿದ್ದೇನೆ. ಜನಪದ ವ್ಯಾಖ್ಯಾನ ಇದು ನನ್ನ ಪಾಲಿಗೆ ಬಂದಂತಹ ಸೌಭಾಗ್ಯವೆ ಎಂದು ಹೇಳಬೇಕು ಕಾರಣವಿಷ್ಟೆ. ಈ ಜನಪದಕ್ಕೆ ಯಾವುದೇ ಜಾತಿ -ಧರ್ಮ ಮೇಲು-ಕೀಳು ಅಸ್ಪೃಶ್ಯತೆ-ಕೀಳರಿಮೆ, ದೌರ್ಜನ್ಯ-ದರ್ಪ, ಅಹಂಕಾರ-ಹಗೆತನ ಯಾವುದೆಂದರೆ ಯಾವುದರ ಸೊಂಕು ಇದರಲ್ಲಿ ಸುಳಿದಿಲ್ಲ. ಇಲ್ಲಿ ನಮಗೆ ದಕ್ಕುವುದು ಬರೀ ಪ್ರೀತಿ-ಪ್ರೇಮ, ನಿವೇದನೆ, ಅಂತಃಕರಣದ ನೋವು, ಹೇಳಲಾಗದಷ್ಟು ಸಂತೋಷ, ಕರುಣೆ-ದಯೆ, ಸಹಾನುಭೂತಿ ಒಟ್ಟಾರೆಯಾಗಿ ಸಿಗುವುದು ಒಡಲಾಳದ ಮಡಿಕೆಯಲ್ಲಿ ಕಟೆದ  ಅನುಭವದ ಬೆಣ್ಣೆ ಇದನ್ನು ನಾವು ಯಾವಾಗ? ಎಷ್ಟು? ಹ್ಯಾಗಬೇಕೊ ಹಾಗೆ ಕರಗಿಸಿಯೊ ಅಥವಾ ಸವರಿಕೊಂಡು ಬಾಯ್ಚಪ್ಪರಿಸಿ ಉಣ್ಣುವಂತಹದ್ದಾಗಿದೆ  ಹಾಗೆ ಇನ್ನೂ ಗರ್ವಪಟ್ಟು ಹೇಳುವುದಾದರೆ ಇವುಗಳಿಗೆಲ್ಲ ಯಾರೊಬ್ಬರ ಹೆಸರಿನ ಹಂಗಿಲ್ಲ. ಯಾರು? ಎಲ್ಲಿ? ಹೇಗೆ? ಬರೆದರು ಎಂಬ ಹೆಸರು- ಗುರುತಿನ ಹಂಗಿಲ್ಲ.

ನನ್ನ ಪಾಲಿಗೆ ಇಂದು ವ್ಯಾಖ್ಯಾನಿಸಲು ಸಿಕ್ಕ ಜನಪದ ಗೀತೆ ಸಂಸಾರ. ಸಂ ..... ಸಾರ
ಸಂ...ಸಾರ ಅಂತಂದ ಯಾಕ ಅಂತಂದನೆಪಾ ಅಂತಂದ್ರ ಈಗ ನೀವ್ ನೋಡ್ರಿ ಇವತ್ತಿನ ಹತ್ತ ನಿಮಿಷ ಮಾತಾಡೊ ಕಾರ್ಯಕ್ರಮಕ್ಕ ನಿಮ್ಮ ನಿಮ್ಮ ಮನಿಯಾಗ ನಿಮ್ಮ ಹೆಣ್ಮಕ್ಳು ಜಲ್ದಿ ಎದ್ದು ನೀರ ಕಾಸಿ ಬಟ್ಟಿ ಇಸ್ತ್ರೀ ಮಾಡಿಕೊಟ್ಟು ಬರುವಾಗ ಹುಷಾರು ಹೊತ್ತಿಗೆ  ಊಟ ನಾಷ್ಟ ಮಾಡ್ರಿ, ಸಂಜಿಕ ಜಲ್ದಿ ಬಂದ್ಬಿಡ್ರಿ ಗಿರಮಿಟ್ ಮಿರ್ಚಿನೊ, ಮಂಡಕ್ಕಿನೊ ಮಾಡಿಟ್ಟಿರತಿನಿ ಬಂದು ತಿನ್ನೊರುವಿರಂತ ಅಂತಂದ ಅಷ್ಟ ಜ್ವಾಕಿ ಮಾಡಿ ಕಳಿಸಿಕೊಡ್ತಾರ ನಮ್ಮ ಮನಿಯಾಗ ಹಂಗಿಲ್ಲ ಮುಂಜಾನೆ ಎದ್ದ ದಾಡಿ ಮಾಡ್ಕೊಂಡ ಜಳಕ ಮಾಡಿ ಹೊಸ ಬಟ್ಟಿ ಹಾಕ್ಕೊಂಡು ನಮ್ಮಾಕಿ ಮುಂದ ನಿಂತಗೊಂಡು

ಆಕಿಗೆ ಅಂದೆ
ಈಗ ಹ್ಯಾಂಗ ಕಾಣಕ
ಹತ್ತೀನಿ!!😘
ಯಾಕ ಇಷ್ಟ ಜಲ್ದಿ ಎದ್ದು
ಎಲ್ಲಿಗೆ ಹೊಂಟಿರಿ ಅಂದ್ಲು!!🤔
ಕುಂದಗೋಳ ದೇಸಾಯರ
ವಾಡೇಕಾ...😍
ಯಾಕ ದನಾ ಕಾಯೋರ
ಕಮ್ಮಿ ಬಿದ್ದಾರನು ಅಂದ್ಲು...,🤐

ಮಾತ... ಇಲ್ಲ. ಸುಮ್ನ ಬ್ಯಾಗ ಎತ್ಕೊಂಡ ಬಸಸ್ಟ್ಯಾಂಡಗೆ ಬಂದಬಿಟ್ಟ್ಯಾ...
-------
ಅಡಗೀಯ ಮನಿಯಾಗ ಮಡದೀಯ ಸುಳಿವಿಲ್ಲ |
ಅಡಿಗೆ ಬಾಯಿಗೆ ರುಚಿಯಿಲ್ಲ | ಹಡೆದವ್ವ |
ಮಡದಿ ತವರಿಗೆ ಹೋಗ್ಯಾಳ

ಮೂರು ದೃಷ್ಟಾಂತಗಳು
೧. ರಸಿಕತೆ - ಯಾಕ ಬಾಯಿಗೆ ರುಚಿ ಬರೋದಿಲ್ಲಪಾ ಅಂತಂದ್ರ ನಮ್ಮ ದೋಸ್ತಂದ ಮದುವಿಯಾದ ಸಂತೋಷಕ್ಕ ಅವ್ರ ಮನಿಗೆ ಉಟಕ್ಕ ಕರದಿದ್ನಾ ಮೂರ ಮಂದಿ ಹೋಗಿದ್ವಿ, ಕೈ ತೊಳಕೊಂಡು ಸಾಲ ಹಿಡಿದು ನಾಲ್ಕು ಮಂದಿ ಕುಂತಗೊಂಡ್ವಿ ಅವ್ನ ಹೆಂಡ್ತಿ ಬಂದ ಊಟದ ತಾಟ ಇಟ್ಟ ಹೋದಳು ನೋಡ್ತೀವಿ ಕಾಮತ ಹೋಟಲ್ ನ್ಯಾಗ ಉಪ್ಪಿಟ್ಟು ಇಟ್ಟ ಕೊಟ್ಟಂಗ ಅನ್ನ ಇಟ್ಟ ಕೊಟ್ಟಿದ್ರು ನಾನವಂಗ ಕೇಳಿದ್ಯಾ
"ಯಾಕೊ ನಿಮ್ಮ ಹೆಣ್ಮಕ್ಳು ಬ್ರಾಹ್ಮಣ್ಸನು'
'ಯೇ.. ಅಲ್ಲೊ ಮಾರಾಯ ನಮ್ಮ ಮಂದಿಯಾಕಿಯ'
'ಮತ್ ಬರೀ ಅನ್ನಾ ನಿಡ್ಯಾರಲ್ಲೊ'
'ಏ ಮತ್ ನಿಮ್ ಮನಿಯಾಗ ನಿಮ್ಮ ತಂಗಿಗೆ ಅಡಗಿ ಮಾಡದ ಕಲಿಸಿ ಕೊಟ್ಟಿಲ್ಲಲ್ಲ ಆಕಿಗೆ' ಅಂತಂದ ನನ್ನ ಮ್ಯಾಲ ಮುರಕೊಂಡ ಬಿದ್ದ
'ಹೋಗ್ಲಿಬಿಡು, ಒಂದಿಷ್ಟು ಸ್ವೀಟಾದ್ರು ಮಾಡ್ಸಬೇಕಿತ್ತಿಲ್ಲೊ'
'ಯೇ...ಹೇ... ಹಾಗಿಲ್ಲಪ್ಪ ಇಬ್ರೂ ಡಯಟ್ ನ್ಯಾಗ ಅದೀವಿ ಅದ್ಕ ಸ್ವೀಟ್ ಗೀಟ ಏನು ಮಾಡಿಲ್ಲ '
ಅಲ್ಲ ಇಬ್ರನ್ನೂ ಸೇರಿಸಿ ತೂಗಿದ್ರೂನು ೫೦ ಕೆ.ಜಿ. ತೂಗೊದಿಲ್ಲ ಅಂತದ್ರಾಗ ಮತ್ ಡಯಟ್!! ಹಾಳಾಗಿ ಹೋಗ್ಲಿ ಅತ್ಲಾಗ ಅನ್ಕೊಂಡ, ಉಣ್ಣೊಕ ನನ್ನ ಕೈ ಚೂರು ಮುಂದ ದಬದಬ ಸಾರ ಹಾಕ್ಕೊಂಡ ಗಬಗಬ ಕಲಿಸಿಕೊಂಡ ಒಂದ ತುತ್ತ ಬಾಯಿಗೆ ಇಟ್ಗೊಂಡನ್ರೀ.... ಹೇಳ್ತಿನ್ ನಿಮ್ಗ ಕರೆಂಟ್ ಹೊಡ್ದ ಕಾಗಿ ಹಂಗ ಆಗಿಬಿಡ್ತ ಆಗ ನನ್ನ ಪಾಡು. ಜಗಿಲಿಲ್ಲ, ನುಂಗಲಿಲ್ಲ ಮಗ್ಗಲದಾಗ ಕುಂತಗೊಂಡ ಇಬ್ರು ಗೆಳೆಯರಿಗೆ ತಲಿಲೆ ಸೊನ್ನಿ ಮಾಡಿದ್ಯಾ ತಿನಬ್ಯಾಡ್ರಲೆ ಅಂತ, ಅವ್ರು ಮಕ್ಳು ಬ್ಯಾರೆನ ತಿಳ್ಕೊಂಡ ಬಿಟ್ರೊ ಎನೊ ಹ್ಞಾಂ ಮಗ ಅಡಗಿ ಮಸ್ತ್ ಇದ್ದಾಗ ಐತಿ, ಅದ್ಕ ಎಲ್ಲಾ ತಾನ ತಿನ್ನಾಕ ನಮ್ಗ ಬ್ಯಾಡ ಅನ್ನಾಕ ಹತ್ತಾನ ಅಂದ್ಕೊಂಡ್ರೊ ಏನೋ ಅವ್ರು ತಡನ ಮಾಡ್ಲಿಲ್ಲ ಗಬಗಬ ಅಂತ ಹೇಳಿ ಒಂದೊಂದು ತುತ್ತು ಬಾಯಿಗೆ ಹಾಕ್ಕೊಂಡ ಬಿಟ್ರು...!! ಏನ್ ಹೇಳ್ಲಿ ನಿಮ್ಗ ಅವ್ರ ಕತಿನಾ... ಎಮ್ಮೆ ಗಂಜಲಾ ಕುಡದ ಮ್ಯಾಲ ಮೊಸಡಿ ಹ್ಯಾಂಗ ಮಾಡಿರತಾವಲ್ಲ ಹಾಂಗ ಮಾರಿ ಮಾಡಕೊಂಡ ನನ್ನ ನೋಡಾಕ ಹತ್ತಿಬಿಟ್ರು. ಯಾಕಂತಂದ್ರ ಆ ತಂಗೆವ್ವ ಅನ್ನಕ್ಕ ಉಪ್ಪು ಹಾಕಿದ್ಲೊ ಏನ... ಉಪ್ಪನ್ಯಾಗ ಅಕ್ಕಿ ಹಾಕಿ ಅನ್ನ ಮಾಡಿದ್ಲೊ ಗೊತ್ತಿಲ್ಲ ಒಂದ ತುತ್ತಿಗೆ ಬಾಯಿ ಕೊರದಂಗ ಆಗಿ ಮುಖ-ಮುಖ ನೋಡ್ಕೊಂತ ಕುಂತಗೊಂಡ್ವಿ. ನಮ್ದ ಹಿಂಗಾತು ಇನ್ನ... ಗಂಡನ ಪಾಡ ಹ್ಯಾಂಗ ಆಗೀರಬ್ಯಾಡ ಅನ್ಕೊತ ಮೂವಾರು ಅವನ್ನ ನೋಡ್ತೀವಿ ಅಂವಾ... ಹೆಂಡ್ತಿ ಮುಖಾ ನೊಡ್ಕೊಂತನಾ ಉಣ್ಣಾಕ ಹತ್ತ್ಯಾನ ಆಕಿ ಕಣ್ಣ ಸನ್ಯಾಗ ಕೇಳಾಕ ಹತ್ತ್ಯಾಳ ಅಡಗಿ ಹ್ಯಾಂಗ ಆಗೈತಿ ಅಂತ
ಇವನು ಕಣ್ಣ ಸನ್ನಿಲೆ ಮಸ್ತ್ ಆಗೈತಂತಂದು ಸೊನ್ನಿ ಮಾಡಾಕ ಹತ್ಯಾನ. ಇದನ್ನ ನೋಡಿ ಒಂದ ತುತ್ತಿಗೆ ದಿಕ್ಕನೆ ಎದ್ದ ನಿಂತ ಹೊಂಟನಿಂತ ತಕ್ಷಣ ಅಂವಾ ಅಂದ
ಯಾಕೊ ದೋಸ್ತ' ನಾ ಅಂದೆ 'ಹೊಟ್ಟಿ ತುಂಬಿ ಹೋತೊ ಮಾರಾಯ'
ಅವನ ಹೆಂಡ್ತಿ ಅಂದ್ಲು 'ಅಣ್ಣಾರ ಇನ್ನೊಂದ ತುತ್ತ ರೀ'
ನಾನು ಕೈ ಮುಗಿದು 'ಸಾಕ ತಾಯಿ ಮಹಾಭಾರತದೊಳಗ ಶ್ರೀ ಕೃಷ್ಣ ಪರಮಾತ್ಮ ಹ್ಯಾಂಗ ದ್ರೌಪದಿ ಕೈಯ್ಯಾನ ಒಂದ ಅಗಳ ಉಂಡು ಸಂತೃಪ್ತನಾಗ್ತನಲ್ಲ ಹಾಂಗ ಇದೊಂದು ತುತ್ತು ಸಾಯೊ ತನಕ ಮರೆಯೊದಿಲ್ಲವ್ವ' ಅಂತ ಹೇಳಿದ್ದಷ್ಟ ತಡ ಮುಸುರಿ ಕೈನ ಮುಕುಳಿ ಹಿಂದ ಪ್ಯಾಂಟಿಗೆ ಒರಿಸಗೊಂತ ಮನಿಕಡೆಗೆ ಓಟನ..
ಹಿಂಗ ಮಣ್ಣೇತ್ತಿನ ಅಮವಾಸೆ ಸುನೆ ಹೆಂಡ್ತಿ ತವ್ರಿಗೆ ಹೋಗಿದ್ಲು ಇಂವಾ ಮತ್ ಪೋನ ಮಾಡಿದ ದೋಸ್ತ ನಿಮ್ ತಂಗಿ ಊರಿಗೆ ಹೋಗಿ ವಾರಾತೊ ಯಾಕೊ ಮನಿಯಾನ ಅಡುಗಿನ ರುಚಿ ಬರುವಲ್ದೊ ಅಂದ
ನಾನಂದೆ ಬರೋದಿಲ್ಲ ದೋಸ್ತ..ಬರೋದಿಲ್ಲ ಇನ್ನೊಂದ ವಾರ ತಡಿ ನಾನಾ ಹೋಗಿ ತಂಗ್ಯಮ್ಮನ್ನ ಕರಕೊಂಡ ಬಂದ ನಿನ್ ಕಡೆ ಬಿಟ್ಟ ಬರ್ತಿನಿ ಅಂತ ಹೇಳಿ ಕಾಲ್ ಕಟ್ ಮಾಡಿಬಿಟ್ಯಾ
ಇದು ಬಾಂಧವ್ಯದ ರಸಿಕತೆ

೨. ಬೇಸರ - ಮೊದ್ಲ ನಂ ಗಂಡ ಮಕ್ಳ ಗಿಡದಾನ ಮಂಗ್ಯಾ ಇದ್ಹಂಗ ಹೆಂಡ್ತಿ ತವ್ರಿಗೆ ಹೋಗ್ಯಾಳಂತಂದ ತಕ್ಷಣ ಅವತ್ತ ರಾತ್ರಿ ಏನೊ ಬೆಳಕ ಹರೆತನಾನು ಡಾಬಾದಾಗ ಟೆಂಟ್ ಎರಡನೆ ದಿನ ಸಾವಜಿ ಖಾನಾವಳಿ ಮೂರನೆ ದಿನಕ್ಕ ಭೀಮಾಂಬಿಕಾ ಖಾನಾವಳಿ ನಾಲ್ಕನೆ ದಿನಕ್ಕ ಬಾಯಿ ರುಚಿ ಇಲ್ಲ ರುಚಿ ಇಲ್ಲ

೩. ಸರ್ವಾಧಿಕಾರಿ- ಹೆಂಡ್ತಿ ಮ್ಯಾಲ ದೌಲತ್ತ ತೋರಸಿಲಿಕ್ಕಂತಂದ್ರ ನಮ್ಗ ಊಟ ಸೇರೊದರಿಲ್ಲ ನಾಕ ಬೈಗಳ ಬೈದ ಮ್ಯಾಲ ಗಂಟಲದಾಗ ಅನ್ನ ಇಳಿತಿರ್ತದ. ಏನ್ ಪಲ್ಯ ಮಾಡಿಲೆ ಇವನೌನ ಒಂದಕ್ಕರ ಉಪ್ಪಿಲ್ಲ ಖಾರಿಲ್ಲ ಒಂದಿಷ್ಟು ಕೊಬ್ರಿ, ಗುರಳ್ಳ ಪುಡಿ ಹಾಕಿ ಮಾಡಿದ್ರ ಏನ ನಿಮ್ಮಪ್ಪನ ಮನಿ ಗಂಟ ಹೊಕ್ಕಿತ್ತನ ದನಾನರ ತಿಂತಾವನಲೆ ಇಂತ ಖೂಳನ ಅಂದಾಗ
ಒಳಗಿಂದ ಒಂದ ಮಾತ ಬರ್ತದ್ರಿ ಅದ್ಕ ನಿಂಗ ಹಾಕಿನ
ನಮ್ಮಪ್ಪಗ ಹೇಳಿದ್ಯಾ ಇನ್ನೊಂದ ಎರಡ ವರ್ಷ ಬ್ಯಾಡ ತಡಿಯೊ ಮಾರಾಯ ಅಂತಂದ್ರು ಕೇಳಲಿಲ್ಲ ಇಂತಾಕಿನ ತಂದು ಜೋಡ ಮಾಡಿದ ನಂಗ
ಹ್ಞೂಂ.. ಮತ್ತೆ ನಾವೆನರ ಕರಿಯಾಕ ಬಂದಿದ್ವೇನು ಮನಿತನಕ ಇಪ್ಪತ್ತ ಊರ ಅಡ್ಯಾಡಿ ಕೊನಿಗೆ ಬಂದಿದ್ರೆಲ್ಲ ಮಾಡ್ಕೊಂಡ್ರ ಈಕಿನಾ ಮಾಡ್ಕೊತಿನಿ ಅಂತಂದ
ಆವಾಗ ಮಂಕ ಬಡದಿತ್ತಲೆ, ಇವಾಗ ಆಗಿದ್ರ ಲಕ್ಷ ಲಕ್ಷ ರೂಪಾಯಿ ವರದಕ್ಷಿಣೆ ಎಂಟೆಂಟ ತೊಲಿ ಬಂಗಾರ..
ಹೌದಪ್ಪ ಜೊಕಮಾರ ಕೊಡ್ತಿದ್ರ ನಿನ್ಗ, ಹದಿನೈದ ದಿನದ್ದ ಹೋತ್ತಾತ ಕಾಂತಾರ ಸಿನಿಮಾಕ ಕರ್ಕೊಂಡ ಹೋಗಂತಂದ
ಅಂದ ತಕ್ಷಣ ಗಂಟಲನ್ನ ಕ್ಯಾಕರಿಸಿ ಸರಿಮಾಡಿಕೊಂಡು
ಒಂದು ಕವನ ಹೇಳಿ ಬಿಡೊದು
ಎಷ್ಟರ ಸೆಡವು ನನ್ ಮ್ಯಾಲೆ
ಮುಡಿಗೆ ತೊಡಿಸ್ಲೇನ ಮಲ್ಲಿಗೆ ಮಾಲೆ
ಕೇಳ್ಲಿಲ್ಲಂತ ಸಿಟ್ಟಾಗಬೇಡ ನೀನು ಆ ಮೇಲೆ
ಆ ಮೊಗದಾಗ ಮಲ್ಗಿ ನಗುನ ಇಲ್ಲಂತಂದ್ರ
ನಾ ಹ್ಯಾಂಗರ ಬದುಕಿರ್ಲ್ಯಾ ಈ ಭೂಮಿ ಮ್ಯಾಲೆ!!

ಹಚ್ಚಡದ ಪದರಾಗ ಅಚ್ಚ ಮಲ್ಲಿಗೆ ಹೂವ|
ಬೆಚ್ಚಿ ನನ್ನ ಮ್ಯಾಲೆ ಒಗೆವಂಥ |ರಾಯರನ
ಬಿಟ್ಟಾಂಗ ಬರಲಿ ಹಡೆದವ್ವ ||

ಬಿಚ್ಚಿ ನನ್ನ ಮ್ಯಾಲೆ ಒಗೆವಂತ ಆಹಾ.... ಜೇನಿನ ಹುಟ್ಟಿಗೆ ಕೈ ಹಾಕಿ ಸೀದಾ ಬಾಯೊಳಗೆ ಹಿಂಡಿಕೊಂಡಂತಹ ಭಾವ. ಇದನ್ನ ನೆನಸಿಕೊಂಡರೆ ಹರೆದ ಹುಡುಗರು ಎರಡ ಹೆಜ್ಜೆ ಮುಂದಕ್ಕ ಹೋಗ್ತಾರ ನಮ್ಮಂತೊರು ಒಂದ ಹೆಜ್ಜಿ ಹಿಂದಕ್ಕ ಹೋಕ್ಕಿವಿ.
ಇಲ್ಲಿ ಒಂದು ಸಂದರ್ಭವನ್ನು ನಾನು ನೆನಪಿಸಿಕೊಳ್ಳ ಇಷ್ಟಪಡ್ತೀನಿ ಬಹುಶಃ ಆ ತಾಯಿ ಶಾರದೆ ಇಂತಹ ಗಳಿಗೆಯಲ್ಲಿ ಅಂತಹ ವಿಷಯವನ್ನು ನನಗೆ ನೆನಪು ಮಾಡಿಕೊಟ್ಟಿದ್ದಕ್ಕೆ ನಾನು ಧನ್ಯ ಎಂದುಕೊಳ್ಳುತ್ತೇನೆ. ೧೯೯೭-೯೮ ರಲ್ಲಿ ಗಂಗಾವತಿಯಿಂದ ೧೩ ಕಿ.ಮೀ ದೂರ ಇರುವ ಹೊಸಳ್ಳಿ ಕ್ಯಾಂಪನಲ್ಲಿ ನಾನು ಯಾವುದು ಒಂದು ಕಾರಣಕ್ಕೆ ೨೦ ದಿನ ಇದ್ದೆ ಈಗೀನ ಹಾಗೆ ಅಲ್ಲಿನ್ನೂ ಕಾಂಕ್ರೀಟ ಕಟ್ಟಡಗಳು ತಲೆಯೆತ್ತಿದ್ದಲ್ಲ. ಗುಡಿಸಲುಗಳೆ ಜಾಸ್ತಿ, ನಾನಿದ್ದ ಎದುರು ಗುಡಿಸಲಿನಲ್ಲಿ ಒಂದು ಕುಟುಂಬವಿತ್ತು ಇಬ್ಬರೆ ಗಂಡ-ಹೆಂಡತಿ ಅವರದ್ದು ಚಹಾದಂಗಡಿಯ ವ್ಯಾಪಾರ ಬೆಳಿಗ್ಗೆ ೫-೩೦ ಕ್ಕೆ ಆ ತಾಯಿ ಇಡ್ಲಿ ವಡೆ ಮತ್ತು ರಸಂ ನ್ನು ಮಾಡಿಟ್ಟಿರುತ್ತಿದ್ದಳು ಆ ಸುತ್ತಮುತ್ತಲಿನ ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರು ಬೆಳಿಗ್ಗೆ ಆರು ಗಂಟೆಗೆ ಎದ್ದು ಇವರ ಅಂಗಡಿಯಲ್ಲಿ ಇಡ್ಲಿ ವಡೆಯನ್ನು ತಿಂದು ಗದ್ದೆಗಳಿಗೆ ಹೊರಟುಬಿಡುತ್ತಿದ್ದರು ಎಂಟು ಗಂಟೆಯೊಳಗೆ ಮಾಡಿದ ಎಲ್ಲ ತಿಂಡಿ ಖಾಲಿಯಾಗಿಬಿಡುತ್ತಿತ್ತು. ಮತ್ತೆ ತಿಂಡಿಯೇನಾದರು ಬೇಕಾದರೆ ಗಂಗಾವತಿಗೆ ಹೋಗಬೇಕಾಗಿತ್ತಿತ್ತು. ಆದರೆ ಇದಲ್ಲ ವಿಶೇಷತೆ ವಿಷಯ ಏನಪ್ಪಾ ಅಂದರೆ ಆಕೆಯ ಗಂಡ ಸಾಯಂಕಾಲ ಐದು ಗಂಟೆಗೆ ಸೈಕಲ್ ತಗೊಂಡು ಗಂಗಾವತಿಗೆ ಹೋಗಿ ಅಲ್ಲಿಂದ ಕಿರಾಣಿ ಸಾಮಾನನ್ನು ತರುವುದರ ಜೊತೆಗೆ ಮಲ್ಲಿಗೆ ಹೂವನ್ನು ಹಿಡಿದುಕೊಂಡು ಬರುತ್ತಿದ್ದ, ರಾತ್ರಿ ಎಂಟು ಗಂಟೆಯನ್ನುವಷ್ಟರಲ್ಲಿ ಮಲಗಿಬಿಡುತ್ತಿದ್ದರು  ನಾನು ಹೋದ ದಿನದಿಂದ ಹಿಡಿದು ಬರುವ ಹಿಂದಿನ ದಿವಸದವರೆಗೂ ಇದನ್ನೆ ಗಮನಿಸುತ್ತಿದ್ದೆ ನನಗೆ ಕುತೂಹಲವನ್ನು ತಡೆದುಕೊಳ್ಳಲಾರದೆ ನಾನುಳಿದುಕೊಂಡಿದ್ದ ಗುಡಿಸಲಿನ ಮಾಲೀಕನ ಮಗನನ್ನು ಕೇಳಿಯೆಬಿಟ್ಟೆ. ಅವನೆಂದ ಇವತ್ತು ರಾತ್ರಿ ಆ ರಹಸ್ಯನ ನಿನಗೆ ತೋರಿಸ್ತೀನಿ ಅಂದ ನನಗೆ ಒಳಗೊಳಗೆ ಏನೇನೊ ಒಂಥರಾ
ಖುಷಿ ಮತ್ತು ಕಳವಳ ಈ ವಿಷಯವಂತೂ ಇಡಿ ಹಳ್ಳಿಗೆ ಗೊತ್ತಾದ್ದರಿಂದ ಯಾರು ಇವರ ಬಗ್ಗೆ ಅಷ್ಟೊಂದು ತಲೆಯನ್ನು ಕೆಡಸಿಕೊಳ್ಳುತ್ತಿರಲಿಲ್ಲ ನಾನು ಹೊಸಬ ನನಗೇನೊ ಕುತೂಹಲ. ಸರಿ ರಾತ್ರಿ ಎಂಟರ ಸಮಯ ನಮ್ಮ ಮಾಲೀಕನ ಮಗ ಗುಡಿಸಲಿನ ಬಾಗಿಲಿನ ಕಿಂಡಿಯಿಂದ ನನ್ನನ್ನು ನೋಡಲು ತಿಳಿಸಿದ ನಾನು ತುಂಬಾ ಮುಜುಗರದಿಂದಲೆ ನೋಡತೊಡಗಿದೆ.
    ಒಳಗಡೆ ಗುಡಿಸಲಿನಲ್ಲಿ ಇಬ್ಬರು ಊಟಕ್ಕೆ ಕುಳಿತುಕೊಂಡಿದ್ದರು. ಊಟವಾದ ನಂತರ ಅ ಅಜ್ಜ ಅಜ್ಜಿಯ ಭುಜವನ್ನು ಹಿಡಿದು ಮಂಚದ ಮೇಲೆ ಕುಳ್ಳರಿಸಿ ತಾನು ತಂದಂತಹ ಮಲ್ಲಿಗೆಯನ್ನು ಬಾಯಿಯಿಂದ ಹರಿದು ಎರಡು ಭಾಗ ಮಾಡಿ ಒಂದನ್ನು ಅಜ್ಜಿಯ ತುರುಬಿಗೆ ಮುಡಿಸಿ ಹಿಂದೆ ಸರಿದು ಅವಳ ಕಾಲಡಿಯಲ್ಲಿ ಕುಳಿತುಕೊಂಡು ಅಜ್ಜಿಯ ಪಾದಗಳೆರಡನ್ನು ತನ್ನ ತೊಡೆಯ ಮೇಲೆ ತೆಗೆದುಕೊಂಡು ಪೂಜೆ ಮಾಡಿ ಹೂವನ್ನು ಹಾಕಿ ಮತ್ತೆ ಆ ಪಾದಗಳನ್ನು ನೆಲಕ್ಕೆ ಸೋಕಿಸದೆ ಹಾಗೆ ಎತ್ತಿ ಹಾಸಿಗೆಯ ಮೇಲೆ ಇಟ್ಟು ಅಜ್ಜಿಯನ್ನು ಮಲಗಿಸಿ, ಸೊಳ್ಳೆಗಳನ್ನು ಓಡಿಸಲು ಹೊಗೆಯನ್ನು ಹಾಕಿ ನಂತರದಲ್ಲಿ ಮಂಚದ ಸುತ್ತ ಸೊಳ್ಳೆ ಪರದೆಯನ್ನು ಬಿಟ್ಟು ತಾನು ಕೆಳಗಡೆ ಮಲಗಿಕೊಂಡ ಇಂತಹ ದೃಶ್ಯ ಇಂದಿಗೂ ನನ್ನೆದೆಯಲ್ಲಿ ಅಚ್ಛಳಿಯದೆ ಉಳಿದುಬಿಟ್ಟಿದೆ. ಆಶಯ ನುಡಿಗಳನ್ನಾಡುವ ಸಂದರ್ಭದಲ್ಲಿ ಶ್ರೀಯುತರು ಹೇಳಿದ ಹಾಗೆ ನಾವೆಲ್ಲ ಪೂರ್ವ ಜನ್ಮದಲ್ಲಿ ನಿಜವಾಗಲೂ ತಪಸ್ಸನ್ನು ಮಾಡಿರಬೇಕು. ಎಲ್ಲಿಯ ಗಂಗಾವತಿ!! ಎಲ್ಲಿಯ ಕುಂದಗೋಳ!! ಎಷ್ಟೋ ವರ್ಷದ ಹಳೆಯ ನೆನಪು ಇಂದು ಇಲ್ಲಿ ನಾನು ಈ ಸಾಲುಗಳಿಗೆ ಸಂದರ್ಭಕ್ಕನುಗುಣವಾಗಿ ಹೇಳುವುದೆಂದರೆ ನನ್ನದು ದೊಡ್ಡ ಪುಣ್ಯವೆ.
   ಹಾಗೆ ನಾನು ನಮ್ಮಾಕಿಗೆ ಅಗಾಗ ಕಾಲೆಳೆಯಲು ಈ ಕೆಳಗಿನ ಸಾಲುಗಳನ್ನು ಹೇಳುತ್ತಿರುತ್ತೇನೆ.

ತಳಕ್ಯಾಡಿ ನುಳಿಕ್ಯಾಡಿ
ನುಲಿಯತ್ತ ಬರಬೇಡ!!
ನಿಮ್ಮಪ್ಪ ಕೊಟ್ಟ
ಮಂಚದ ಕಾಲು ಗಟ್ಟಿಲ್ಲ!!
ಮುರಿದು ಬಿದ್ದರೆ...
ಎರಡನೆ ಮದುವೆಗಾಗಿ ನನ್ನಲ್ಲಿ
ಸಮಯವಿಲ್ಲ!!

    ಈ ಸಾಲುಗಳನ್ನು ಹೇಳಿದ ಮೇಲೆ ಗಂಡಸರ ಪಾಡು ಏನಾಗಿರಬೇಡ!!?

ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ
ಲಿಂಗಕ ನೀರು ಎರೆದಾಂಗ| ಹಿಡಿ ಹೊಳೆಯ
ಗಂಗಪ್ಪ ಸಾಗಿ ಹರಿಧಾಗ ||

ಸಂಸಾರ ಅಂದಮೇಲೆ ಜಗಳ ಇದ್ದಿದ್ದ. ಜಗಳ ಮಾಡಲಾರ್ದ ಇರೋ ಸಂಸಾರದೊಳಗ ಸಾರನ ಇರೋದಿಲ್ಲ. ಅಂತ ಶಿವ ಪಾರ್ವತಿಯರ ಸಂಸಾರದೊಳಗ ಜಗಳಾಟ ಆಗ್ಯಾವು ಇನ್ನ ನಮ್ಮಂಥ ಸಾಮಾನ್ಯ ಜನರ ಬದುಕನ್ಯಾಗ ಜಗಳ ಇಲ್ಲಂತಂದ್ರ ಹ್ಯಾಂಗ ಅಂದ್ರ ನಾಹೇಳೊ ಅರ್ಥ ಬದುಕನ್ನ ಜಗಳ ಮಾಡ್ಕೊಂತ ಹೋಗಿಬಿಡ್ರಿ ಅನ್ನೊದಲ್ಲ ಮುನಿಸು ಒಂದಿಟು ಬಾಯಿ ಮಾಡ್ರಿ ಬಿ.ಪಿ. ಮತ್ತು ಮಾನಸಿಕ ಒತ್ತಡ ಕಮ್ಮಿ ಅಕ್ಕೈತಿ ಸಂತೋಷ ಸಮಯ ಇದ್ದಾಗ ಜೊತೆಗೆ ಹಂಚಿಕೊಂಡು ನಕ್ಕೊತ ಇರ್ರಿ ಆಯುಷ್ಯ ಹೆಚ್ಚಾಗ್ತದ ಅದ್ಕ ಶಿವ ತನ್ನ ನೆತ್ತಿ ತಣ್ಣಗಿರ್ಲೆಂತಂದ ಗಂಗಿನ ಕುಂದ್ರ್ಸಕೊಂಡು ಪಾರ್ವತಿನ ಪಕ್ಕಕ್ಕ ಕರ್ಕೊಂಡ ಕುಂತಾನ. ನಮ್ದು ನೆತ್ತಿ ತಣ್ಣಗಿರ್ಲೆಂತಂದ ಮತ್ತ ಇನ್ನೊಬ್ರನ್ನ ಕಟ್ಗೊಬ್ಯಾಡ್ರ ಮತ್ತ
ಒಬ್ರ ಹೆಂಡ್ರಿಗೆ ಎರಡು ಕ್ರೆಡಿಟ್‌ ಕಾರ್ಡ್ ಸಾಲೊದಿಲ್ಲ ಅಂತಾದ್ರೊಳಗ ಮತ್ತೊಬ್ಬಾಕಿನ ಕಟ್ಗೊಂಡ ಬಂದ್ವೆಂದ್ರ ತಲಿಮ್ಯಾಲ ಎ.ಟಿ.ಎಮ್ ಮೇಷಿನ್ ಇಟ್ಗೊಂಡ ತಿರಗ್ಯಾಡ
ಬೇಕಾಗ್ತದ.

ನಮ್ಮ ಮನಿಯಾಗನೂ ನಮ್ಮಾಕಿ ಯಾವುದಕ್ಕರ ಸಿಟ್ಟಾದ್ರ
ನಾನು ಹಿಂಗ ಹೇಳ್ತಿನ್ರಿ...

ಸಿಡಿದಾರ ಸಿಡಿಸಿಬಿಡು ನಿನ್ನ
ಮಾತಿನ ಸಿಡಿಮದ್ದು
!!ಕಣ್ಣೀರ ತುಂಬಿದ ಕಣ್ಣಿಲೆ
ನನ್ನ ನೋಡಬ್ಯಾಡ!!
ನೊಂದು - ಬೆಂದು ಬರೆಯಾಕ
ನಾ ಬೇಂದ್ರೆ ಅಜ್ಜ ಅಲ್ಲ

ಹಾಸಿಗೆ ಹಾಸಿಂದ ಮಲ್ಲಿಗೆ ಮುಡಿಯೆಂದ|
ಬೇಸತ್ತರೆ ಮಡದಿ ಮಲಗಿಂದ| ನನ ರಾಯ|
ತನ್ನ ನೋಡಿ ತವರ ಮನೆಯೆಂದ||

ಮಡದೀಯ ಬಡಿದಾನ ಮನದಾಗ ಮರುಗ್ಯಾನ |
ಒಳಗೋಗಿ ಸೆರಗ ಹಿಡಿಯೂತ | ಕೇಳ್ಯಾನ |
ನಾ ಹೆಚ್ಚೋ ನಿನ್ನ ತವರ ಹೆಚ್ಚೋ ||

ಬಹುಶಃ ಜಗತ್ತೀನಲ್ಲಿ ಅತೀ ಭಾವುಕ, ಅಂಜುಬುರುಕ, ಭಾವೋದ್ವೇಗ ಜೀವಿ ಯಾವುದಾದರು ಇದೆ ಅಂತಂದ್ರೆ ಅದು ಗಂಡು ಪ್ರಾಣಿ. ಹುಟ್ಟಿನಿಂದ ಹೆಣ್ಣು  ಸಾಯುವವರೆಗೂ ಗಂಡಿನ ನೆರಳಿನಲ್ಲಿಯೆ ಬದುಕಬೇಕೆಂಬುದನ್ನ ಸಮಾಜ ಶಾಸ್ತ್ರ, ಧರ್ಮ ಕಟ್ಟು ಪಾಡುಗಳೆಲ್ಲ ಹೇಳಿವೆ, ಹೇಳಿಕೊಂಡು ಬಂದಿವೆ ಹೇಳಿಕೊಂಡೆ ಸಾಗುತ್ತಿವೆ ಇದು ತಪ್ಪು. ಗಂಡೆ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಹೆಣ್ಣಿನ ಆಶ್ರಯ, ಮಡಿಲು ಆಕೆಯ ಸಹಾಯ ಸಹಕಾರ ಧೈರ್ಯದಿಂದಲೆ ಬದುಕನ್ನ ಸಾಗಿಸುತ್ತಾನೆ ಮಗುವಾಗಿದ್ದಾಗ ತಾಯಿ ಮಡಿಲು ಯೌವ್ವನಾವಸ್ಥೆಗೆ ಮಡದಿ ಮುಪ್ಪಿನಲ್ಲಿ ಮಗಳು ಮತ್ತು ಮೊಮ್ಮಗಳ ಮೇಲೆ ಹೆಚ್ಚು ವ್ಯಾಮೋಹವನ್ನು ಹೊಂದುಕೊಂಡಿರುವಂತವನಾಗಿರುತ್ತಾನೆ. ಮಕ್ಕಳು ಬೆಳೆದು ಕಾಲೇಜೊ ಹಾಸ್ಟೆಲೊ ಎಂದು ದೂರದೂರಿಗೆ ಹೋದಾಗ ಆಗ ಹೆಂಡತಿ ತವರೂರಿಗೆ ಹೋಗಿ ಬರುತ್ತೇನೆ ಎಂದಾಗ ಮೇಲ್ನೊಟಕ್ಕೆ ಹ್ಞೂಂ ಎಂದರು ಒಳಗೊಳಗೆ ಒಂಟಿತನದ ಭಾವ ಕಾಡಲು ಶುರುವಾಗಿರುತ್ತದೆ.

ನಮ್ಮಾಕಿ ತವರಿಗೆ
ಹೊಂಟು ನಿಂತಾಗಲೆಲ್ಲ ಅವಳ
ಸೇರಗನ್ನು ಹಿಡಿದು ನಾನು
ಬೇಡಿಕೊಳ್ಳುತ್ತೇನೆ ಹೋಗಬೇಡ
ಹೋಗಬೇಡ!! ಎಂದು...
ಆಗ ನನ್ನಾಕೆ ಕಣ್ಣಲ್ಲೆ ಕಣ್ಣೀಟ್ಟು
ಕೈಯಲ್ಲಿದ್ದ ಲಗೇಜನ್ನು ಕೇಳಗಿಟ್ಟು
ಕೇಳುತ್ತಾಳೆ...ಹಂಗಿದ್ರ ಜಾತ್ರಿಗೆ ಸೀರಿ
ತರಾಕ ಸೇಡಜಿ ಅಂಗಡಿಗೆ ಯಾವಾಗ
ಹೋಗುನು...?
ನಾನೆನ್ನುತ್ತೇನೆ ೭ - ೧೫ ರ ಲಾಸ್ಟ್ ಬಸ್
ಮಿಸ್ ಆಕ್ಕೈತಿ ಜಲ್ದಿ ನಡಿ
ಬಸ್ ಸ್ಟ್ಯಾಂಜಡಿಗೆ ಹೋಗುಣು.

ಇಂತಹ ಒಂದು ಸುಂದರ ಅನುಭವದ ಮೂಟೆಯನ್ನು ಕಟ್ಟಿಕೊಡಲು ಅವಕಾಶ ಮಾಡಿಕೊಟ್ಟಂತಹ ಸುಶೀಲಣ್ಣ ಕುಂದರಗಿ ಹಾಗೂ ರವಿ ಕಮದೊಳ್ಳಿ ಮತ್ತು ಕುಂದಗೋಳ ಧಣಿ ಮತ್ತವರ ತಂಡಕ್ಕ ನನ್ನ ಅನಂತ ಶರಣು 🙏

Tuesday, January 24, 2023

ಭೈರಾಗಿ.!!



ಹಂಗೀನ ಬದುಕನ್ಯಾಗ
ಹುಚ್ಚು ಮಲ್ಲರ ಸಂಗ ಯಾಕೋ?
ಜೋಳಗಿ ಹಿಡದ ಹೊಂಟಿ ಹಿಡಿ 
ಪ್ರೀತಿ ಇಲ್ಲದ ಬದುಕಬಲ್ಲವೇನೊ? ಭೈರಾಗಿ!!

ಮಳ್ಳ ಮಾತ ಮಾತಾಡಿ
ಮಂದಿ ಮೋಸ ಮಾಡೊರ ಹೆಗಲ್ಯಾಕೋ?
ಎರಡ ಪದ ಬರಿತೀವಂದ್ರ, ಅದು ಓದೋನ
ಎದಿ ದುಃಖ್ಖಾನ ಕಮ್ಮಿ ಮಾಡಿದ್ರ ಸಾರ್ಥಕ
ಅಲ್ಲವೇನೊ? ಭೈರಾಗಿ!!

ಮುಕ್ಕಣ್ಣನಿಗೂ ಬಿಡದ ತಾಪ-ತ್ರಯ
ನಮ್ಮನ್ನು ಬಿಟ್ಟಿತು ಹೇಗೊ?
ಸಂಸಾರದ ಮಡಿಕ್ಯಾಗ ಕಷ್ಟ-ಸುಖಾನ
ಸಮನಾಗಿ ಕಡದು-ಕುಡದ  ವಿಷಕಂಠ
ನಾಗಬೇಕಲ್ಲವೇನೊ? ಭೈರಾಗಿ!!

ಸಾಸಿವೆ ಜ್ಞಾನವನ್ನು ಹೊಂದದೆ
ಇಲ್ಲಿಯವರೆಗೂ ನಡೆದು ಬಂದು
ಬಿಟ್ಟೆವಲ್ಲೊ?
ತಪಗೈಯ್ಯಬೇಕು, ಒಳಗಿನೆಲ್ಲದವ
ಕಳೆದುಕೊಂಡು; ಬದುಕಬೇಕು ಭೈರಾಗಿ!!
ಬದುಕಬೇಕು...

ಶರಣಪ್ಪ ಬೇವಿನಕಟ್ಟಿ 🙏🙏🙏🙏

ಕಡು ಕತ್ತಲೆ ಹಾದಿಯ ಕ್ರಮಿಸಲು ಕಾವ್ಯದ 
ನಂದದ ಕಂದೀಲ ಕೈಗಿತ್ತ ಆತ್ಮ ಬಂಧುವೆ 
ಬರಿದಾದ ಜೋಗಿ ಜಂಗಮನ ಜೋಳಿಗೆಗೆ
ಅಕ್ಷರಗಳ ಅರಿವ ಸುರಿದು ಹರಸಿದ್ದು ನಿಜವೆ 
ಇಗೋ ನಿನಗೊಂದು ನಮನ !

*****

ಅಪವಾದದ ಅವಮಾನದ ಗೀರು ಗಾಯಗಳಿಗೆ
ಮದ್ದರೆವ ಸಾಹಿತ್ಯ ಸಿದ್ಧ ಸೂತ್ರವ ತಿಳಿಸಿದೆ 
ನೋವಿಗೊಂದು ನಲಿವಿಗೊಂದು ಕವಿತೆ ಬರೆವಂತೆ
ಗೆಳೆತನದ ಮರದ ಮರೆಯಲೇ ನಿಂತು ಹರಸಿದೆ
ಇಗೋ ನಿನಗೊಂದು ನಮನ !

*****

ತಿಳಿದಿರುವುದು ಅಲ್ಪ ತಿಳಿಯಬೇಕಿರುವುದು ಕಲ್ಪ
ಹಿಂದೆ ತೆಗಳಿ ಮುಂದೆ ಹೊಗಳುವವರ ಬಿಡೋ ಹುಚ್ಚ
ನಿನ್ನ ದಾರಿ ನೀ ಹಿಡಿದು ಸಾಗುತಿರು ಎನುತಲಿ ಎಚ್ಚರಿಸಿ
ಹೇಳಿದೆ ಹೀಗಳೆಯುವವರ ಸಾಹಿತ್ಯ ಶಿವನೂ ಮೆಚ್ಚ
ಇಗೋ ನಿನಗೊಂದು ನಮನ !

✍🏻ರಾಜ್ ಆಚಾರ್ಯ
       ೨೪-೦೧-೨೦೨೩