Wednesday, April 26, 2023

ಗೆಳೆಯ


ಏನು ಹೇಳಲಿ ನೋಡು
ನನ್ನ ಪಾಡು..!!
ನೀನಿಲ್ಲದ ಜಗವಿದು
ಬರೀ... ಸುಡುಗಾಡು..!!
ನಡೆದುಬಿಡಲೆ ನಿನ್ನನೆ
ಹುಡುಕುತ್ತ ಕಾಡು-ನಾಡು!!
ಕಟ್ಟಿಹಾಕಿಬಿಡುವುದೇನೊ..?
ನಿರ್ಲಜ್ಜೆ ಎಂದು ಸಮಾಜದೀ...
ಕಟ್ಟುಪಾಡು!!

ರಂಗೀ


ಬಹು ಮುದ್ದಾಗಿದೆ
ಚುಚ್ಚಿಸಿಕೊಂಡ 
ನತ್ತು....!!!😍
ಮೇಲಿನವನನ್ನೆ 
ನೋಡುತ್ತಿರುವೆಯಲ್ಲ
ಎಷ್ಟು ಹೊತ್ತು..!!😛
ನೋವಾಗುವುದಿಲ್ಲವೇನು?
ಕತ್ತು...!!!😋
ಈ ಮನ್ಮಥನಿಗೆ
ಕೊಟ್ಟು ಬಿಡಬಾರದೆ
ಕೆನ್ನೆಗೊಂದು ಮುತ್ತು...!!😜

Tuesday, April 25, 2023

ರಂಗೀ


ಇತಿಹಾಸದ ಯಾವುದೇ
ಪುಟವನ್ನು ತಿರುವಿ 
ಹಾಕಿದರೂ....
ಬರೀ... ಅವಳ
ಮೋಸದ ಅಧ್ಯಾಯಗಳೆ
ಕಾಣಸಿಗುತ್ತವಲ್ಲ
ರಂಗೀ...
ವಿಷವನ್ನೇನು....
ಅಮೃತವನ್ನೇ ಕುಡಿದವಳ
ನಂಬಿ ಬದುಕುವುದು 
ದುಸ್ಸಾಹಸದ
ಮಾತು..ಬಿಡು!!

ರಂಗೀ


ಹೂವಿನ ಎಸುಳಗಳನ್ನು
ಕಿತ್ತು ಹಾಕಿದ ಪಾಪವನ್ನೇಕೆ
ಹೊತ್ತುಕೊಂಡೆ
ರಂಗೀ....
ಈ ಗುಲಾಮನಿಗೆ
ಕೇವಲ ಸನ್ನೆಯನ್ನು
ಮಾಡಿದ್ದರೆ ಸಾಕಿತ್ತಿಲ್ಲವೇನು?
ಫಲವನ್ನು ನಾನನುಭವಿಸುತ್ತಿದ್ದೆ!!
@@@@@@

ಹೀಗೆ ನಿನ್ನ ಕಾಲಡಿಯಲ್ಲಿ
ಕಿತ್ತು ಹಾಕಿಕೊಂಡಿರುವ
ಹೂವಿನ ದಳಗಳನ್ನು
ತೋಟದ ಮಾಲಿಗೆ
ತೋರಿಸಬೇಡ
ರಂಗೀ....
ನೆತ್ತರನು ಬಸೆದು
ಬೆಳೆದ ಹೂವದು...
ನೋಡಿ, ಎದೆಯೊಡೆದು
ಸತ್ತು ಹೋದಾನು..!!

ರಂಗೀ

ವಿರಹದ ಬೆಂಕಿಯಲ್ಲಿ
ನನ್ನನು ನೂಕಿ..
ಮುಂಗಾರ ಮಳೆಯಲ್ಲಿ
ಇವಳು ನೆನೆಯುತ್ತಿರುವಳಲ್ಲ
ರಂಗೀ...
ಇಡಿಯಾಗಿಯಾದರೂ....
ಸುಟ್ಟು ಹಾಕಬಾರದಿತ್ತೆ...!!
ಹೀಗೆ ಮಳೆಯಲ್ಲಿ ಅರೆಬರೆ
ಬೆಂದು ಹೋದರೆ....
ಸಂತೈಸುವರಾದರು
ಯಾರು..?

Friday, April 7, 2023

ಪಾಲು ಕಥೆ



ಬೇಸಿಗೆಯಾದ್ದರಿಂದ ಪಡಸಾಲೆಯಲ್ಲಿ ಹಾಕಿದ್ದ ಫ್ಯಾನು ಗುರ್.. ಗುರ್.. ಎಂದು ಸದ್ದು ಮಾಡುತ್ತ ತನ್ನ ಕೆಳಗಿದ್ದವರ ತಲೆ ಮತ್ತು ಮೈಯನ್ನು ತಂಪು ಮಾಡಲು ಹರಸಾಹಸಗೈಯ್ಯುತ್ತಿತ್ತು. ಅಲ್ಲಿ ಕುಳಿತವರಲ್ಲಿ ಕೆಲವರು ಮೌನಕ್ಕೆ ಶರಣಾಗಿದ್ದರೆ, ಮತ್ತಿಷ್ಟು ಜನ ದುಗುಡದಲ್ಲಿದ್ದರು; ಇನ್ನೊಂದಿಷ್ಟು ಜನ ದರ್ಪ-ದೌಲತ್ತಿನ ಭಾವದಲ್ಲಿ ತೇಲಾಡುತ್ತಿದ್ದರು. "ಮತ್ತೇನೈತಪಾ ನೀಲಪ್ಪ, ನಿಮ್ಮಕ್ಕ ಅಂತೂ ಎಲ್ಲಾದಕ್ಕೂ ತಯಾರ ಆಗಿ ಬಂದಾಳ, ನಾವು ಹೇಳೊದ ಮುಗಿತು, ಕೇಳೊದ ಮುಗಿತು, ಒಟ್ಟನ್ಯಾಗ ಆಕಿ ಪಾಲಿಂದ ಆಸ್ತಿ ಕೊಟ್ರ ಸೈ ಅಂತಾಳಲ್ಲ " ತೊಡೆ ಮೇಲೆ ಹಾಕಿಕೊಂಡಿದ್ದ ಶಲ್ಯೆದಿಂದ ಮುಖ ಮತ್ತು ಕುತ್ತಿಗೆಯ ಸುತ್ತ ಬರುತ್ತಿದ್ದ ಬೆವರನ್ನು ಒರಿಸಿಕೊಳ್ಳುತ್ತಾ, ಎಡಕ್ಕೆ ಕುಳಿತುಕೊಂಡಿದ್ದಂತಹ ನೀಲಪ್ಪ ಮತ್ತವನ ಪರಿವಾರ ಹಾಗೂ ಅವನ ಬೆಂಬಲಿಗರ ಕಡೆ ನೋಡುತ್ತ ವಿಷಾದದ ಧ್ವನಿಯಲ್ಲಿ ಕೇಳಿದನು. ಈ ಪ್ರಶ್ನೆಗೆ ನೀಲಪ್ಪ ಎದುರುಗಡೆ ಕುಳಿತಿದ್ದ ಅಕ್ಕ ಬಸವ್ವಳನ್ನು ನೋಡಿದನು. ಬಸವ್ವ ಮೂಗನ್ನು ಮುರಿಯುತ್ತ ಮುಖವನ್ನು ಅತ್ತಕಡೆ ಮಾಡಿಕೊಂಡಳು. ಬಸವ್ವ ಮತ್ತು ನೀಲಪ್ಪ ತಂದೆಗೆ ಇಬ್ಬರೆ ಮಕ್ಕಳಾದರೂ... ಅಂತ ಹೇಳಿಕೊಳ್ಳುವ ಆಸ್ತಿಯೇನಿರಲಿಲ್ಲ ನಾಲ್ಕು ಎಕರೆ ತೋಟ ಎರಡಂಕಣದ ಮನೆ ಬಿಟ್ಟರೆ ಇನ್ನೇನು ಇದ್ದಿಲ್ಲ...

"ನೋಡ್ರಿ ಸಾವಕಾರ್ರೆ ಈಗ ನಾವಿರೊ ಪರಿಸ್ಥಿತಿಯೊಳಗ ಹತ್ತ ಹೆಣ್ಣ ಮಕ್ಕಳು ಇದ್ರುನೂ ಮದುವಿ ಮಾಡಿ ಕೊಡಾಕ ಬರತೈತ್ರಿ ಆದ್ರ ನಂಗ ಇರೋದು ಎರಡು ಗಂಡ ಮಕ್ಕಳ ರೀ..
ಇವತ್ತ ಯಾ.. ಊರಿಗೆರ ಹೋಗ್ರಿ, ಕೆರಿಗರ ಹೋಗ್ರಿ ಅಷ್ಟ ಯಾಕ್ರೀ ಒಬ್ಬ ಭಿಕ್ಷೆ ಬೆಡಿಕೊಂಡ ತಿನ್ನೊನ ಮನಿಗೆ ಹೆಣ್ಣ ಕೇಳಾಕ ಹೋದ್ರ, ಹೋದರ ಇನ್ನೊಂದ ಲಕ್ಷ ಹೆಚ್ಚಗಿ ಹೋಗುವಲ್ದಾಕ ನನ್ನ ಮಗಳನ್ನ ಒಕ್ಕಲತನದ ಮನಿಗೆ ಕೊಡೊದಿಲ್ಲ ಅಂತಾರ ರಿ.. ಮೂಲಿಮನಿ ಶಂಕ್ರಪ್ಪಗ ಏನ ಕಡಿಮಿ ಆಗೈತ್ರಿ ಇಪ್ಪತ್ತ ಎಕರೆ ತೋಟ, ಮೂವತ್ತೆರಡ ಎಕರೆ ಎರೆ ಹೊಲ, ದೆವ್ವನಂತ ಮನಿ, ಎರಡು ಕಾರು ಒಂದು ಟ್ರ್ಯಾಕ್ಟರ್, ಮೂರು ಮೋಟರ್ ಬೈಕು, ಮನಿತುಂಬ ಆಳು-ಕಾಳು ಇಷ್ಟಿದ್ದು ಅವನ ಒಬ್ಬ ಒಬ್ಬ ಮಗನಿಗೆ ಕನ್ಯೆ ಸಿಗುವಲದ್ದ ಆಗೈತ್ರಿ ಇಂತಾದ್ರಾಗ ನಮ್ಮ ಮಕ್ಕಳನ್ನ ಯಾರ ಕಣ್ಣೆತ್ತಿ ನೋಡಬೇಕ್ರಿ, ಜಗ್ಗಷ್ಟು (ಸಾಕಷ್ಟು) ಓದಿಸಿ ನೌಕರಿ ಕೊಡ್ಸಬೇಕಂತಂದ್ರ ನಮ್ಮ ಜಾತಿಗೆ ಅದೇನ ಪರಸೆಂಟೆಜ ಸಾಲೊದಿಲ್ಲಂತ, ಮೊನ್ನೆ ಕೆರಿಯಾನ ಹನಮನ ಮಗ ನನ್ನ ಸಣ್ಣ ಮಗನಗಿಂತ ಮಾರಕಸ್ಸು ಕಮ್ಮಿ ತಗೊಂಡಾನ ಹಾಗಿದ್ರುನು ಅವಂಗ ರೋಣದಾಗ ಫ್ರೀ ಹಾಸ್ಟೆಲ್ ಸಿಕ್ಕೈತಿ ನಮಗ ಅದರ ಗೇಟ್ ನೋಡೊ ಭಾಗ್ಯಾನು ಇಲ್ದಂಗ ಆಗೈತಿ
ಇಷ್ಟೇಲ್ಲಾ ರಗಳಿಯೊಳಗ ನಂಗೂ ಅರ್ಧ ಪಾಲು ಕೊಡು ಅಂತಂದ ಕೇಳಿದ್ರ ನಾನೆಲ್ಲಿಗೆ ಹೋಗಲ್ರೀ " ಕೈ ಮುಗಿದು ಮುಂದುವರೆಯುತ್ತಾ " ಅಲ್ಲ ಅವರಿಗೇನು ಉಣ್ಣಾಕ ಕಮ್ಯಾ (ಕಡಿಮೆ) ಉಡ-ತೊಡಾಕ ಕಮ್ಯಾ, ಇರೊ ಮೂರ ಮಂದಿಗೆ ಮೂರು ಮನಿ ಅದಾವು ಎರಡ ಬಾಡಿಗೆ ಕೊಟ್ಟಾರ, ಮನಿ ಹೊಲದಿಂದ ಕಾಳು - ಕಡಿ ಬರತಾವು, ನಾಕೈದು ಅಂಗಡಿ ಬಾಡಿಗೆ ನಡಿತಾವು, ಊರ ತುಂಬಾ ಬಡ್ಡಿ ಸಾಲ ಕೊಟ್ಟಾರ ಇಷ್ಟು ಸಾಲದ್ದಂತ ಈ ಬಡವನ ಗಂಗಾಳದ ಮ್ಯಾಲ ಯಾಕ ಕಣ್ಣ ಬಿತ್ತೊ ನಮ್ಮವ್ವ.. '' ದೈನ್ಯತೆಯಿಂದ ಅಕ್ಕನನ್ನ ದಿಟ್ಟಿಸಿತ್ತಾ ನಿಂತನು.

"ಆವಾಗಿಂದ ಬ್ಯಾರೆ ಈಗಿಂದ ಬ್ಯಾರೆ, ಅವಾಗೇನ ಮೂರ ಕಾಸಿನ ಕಿಮ್ಮತ್ತ ಇದ್ದಿಲ್ಲ ಭೂಮಿಗೆ ಈಗ ಹಂಗಲ್ಲ ಬಂಗಾರ.. ಬಂಗಾರದ ರೇಟ್ ಅಗೈತೆ ಗೊತ್ತನು..ಇನ್ನ ರೊಕ್ಕ ಕೊಟ್ರ ಬಂಗಾರರ ಸಿಗತೈತಿ, ಭೂಮಿ ಸಿಗೋದಿಲ್ಲ ಗೊತ್ತೈತನು. ಊರಿಂದ ಎಡವಿ ಬಿದ್ರ ತೋಟ ಐತಿ ಎರಡ ಎಕರೆ ಎನ್. ಎ. 
ಮಾಡ್ಸಿದ್ರ ನಲವತ್ತ ಮನಿ ಕುಂದ್ರತಾವು, ಒಂದೊಂದಕ್ಕ ಆರು - ಎಂಟು ಲಕ್ಷ ಅಂತಂದ್ರ ಹತ್ರ ಹತ್ರ ಮೂರ ಕೋಟಿ ಸನೇಕ ರೊಕ್ಕ ಕೂಡತೈತಿ ಎಲ್ಲ ಖರ್ಚ ತಗದ ಏನಿಲ್ಲ ಅಂತಂದ್ರು ಎರಡು ಐವತ್ತರ ಉಳಿತೈತಿ ಇದೇನ ಸಣ್ಣ ರೊಕ್ಕ ಅತನ ಮತ್ತ
ನೀನು ಏಳಲ್ಲ ಹದಿನಾಕ ಜನ್ಮ ಎತ್ತಿ ಬರಬೇಕು ಇಷ್ಟ ರೊಕ್ಕ ದುಡದ ಗಳಿಸಬೇಕಂದ್ರ.." ಕಣ್ಣುಗಳನ್ನು ಕಾಸಗಲ ಮಾಡಿಕೊಂಡು ಆಸೆ ಕಂಗಳಿಂದ ತಮ್ಮನನ್ನು ನುಂಗುವ ಹಾಗೆ ನೋಡತೊಡಗಿದಳು.