Wednesday, July 6, 2016

ನೀನು ಮೊದಲು ಹೇಗಿದ್ದೆ ಗೊತ್ತಾ

ನೀನು ಮೊದಲು
ಹೇಗಿದ್ದೆ ಗೊತ್ತಾ...

ಬಣ್ಣ ಮಾಸಿದ, ಇಲ್ಲೊ
ಅಲ್ಲೊ ಪಂಕ್ಚರ ಆಗುವಂತಿದ್ದ
ಟೈರ್,  ಬಹಳ ದೂರವು
ಹೋಗಲಾರದಷ್ಟು ಪೇಟ್ರೊಲ್
ಆ ಗಾಡಿಯ ಶಬ್ದ ದೂರದೂರಿಗೂ
ಕೇಳುವಷ್ಟು ಕರ್ಕಷವಾಗಿದ್ದರು
ಹಿಂಬದಿಯ ಸೀಟಿನಲ್ಲಿ ನನ್ನನ್ನು
ಕುಳ್ಳರಿಸಿಕೊಂಡು ಆ ಬೆಟ್ಟದ
ತಪ್ಪಲಿನಲ್ಲಿ ಲೋಕಾನೆ ಮರೆತು
ಗಂಟೆಗಟ್ಟಲೆ ಮಾತನಾಡುತ್ತಿದ್ದೆ
ನನ್ನಂದವನೆಲ್ಲಾ ಆ ಕಣ್ಣುಗಳಿಂದಲೆ
ಕುಡಿಯುವಂತೆ ನೋಡುತ್ತಿದ್ದೆ
ನನ್ನೆ ನಾ ನಾಚಿ ನೀರಾಗುವಂತೆ

ಇಂದು ಹೇಗಿರುವೆ ಅದಾದರೂ
ನಿನಗೆ ಗೊತ್ತಾ

ಸಪ್ತಪದಿ ತುಳಿದು ನಿನ್ನ
ಕೈಗೆಟುಕುವಷ್ಟು ಸನಿಹದಲ್ಲಿದ್ದರೂ
ಯಾಕೀಷ್ಟು  ತಾತ್ಸರ
ಕೈಯೊಳಗೆ ಕೈಹಾಕದಿದ್ದರು ಸರಿ
ನನ್ನ ಭುಜದ ಮೇಲೆ ನೀನು ಕೈ
ಹಾಕದಿದ್ದರು ಸರಿ
ಆ ಕೈ ಸೊಂಟವ ಸುತ್ತಲಿದ್ದರು ಸರಿ
ನೀ ಹಾಗೆ ಮುನ್ನಡೆದು ದಾರಿ
ತೋರಿದರು ಸರಿ ನಿನ್ನ ಹಿಂಬಾಲಿಸುವೆ
ದೂರದ ಬೆಟ್ಟವಾದರೂ ಬೇಡ
ಹತ್ತಿರದ ತೋಟಕ್ಕಾದರೂ
ಕರೆದೊಯ್ಯಿ ನನ್ನರಿವಿರುವಂತೆ

ಸಾವೆ ನಿನಗೆ ನ್ಯಾಯವೆ

ಸಾವೆ

ಓ ಸಾವೆ ಏನೆಂದು ಕರೆಯಲಿ
ನಿನ್ನ ನಾ...

ಆ ಸೀತೆಯದು ಹದಿನಾಲ್ಕು
ವರ್ಷದ ವನವಾಸ
ಈ ವನಿತೆಯದು ಎರಡು
ವರ್ಷದ ತವರುವಾಸ
ಗಂಡನಿಗೆ ಬೇಡವಾಗಿ
ಅತ್ತೆಮಾವರಿಗೂ ತಿರಸ್ಕಾರವಾಗಿ
ಅಲ್ಲಿಗೂ ಸಲ್ಲದ ಇಲ್ಲಿಯೂ ಇರಲೊಲ್ಲದ
ವೇಳೆಯಲಿ ಚಿಗುರಿತೊಂದಾಸೆ ಒಡಲ
ಕುಡಿಯೊಂದು ಹುಟ್ಟಿದ ವೇಳೆ
ಕತ್ತಲಲಿ ಕಿರಣವೊಂದು ಕಂಡಂತೆ
ಸೂರಿಲ್ಲದವನಿಗರಮನೆ ಸಿಕ್ಕಂತೆ
ಬರದ ಬಾಳಿಗೆ ಹಸಿರುಕ್ಕಿದಂತೆ
ಬೆಳಗಿದ ದೀಪ ಮಗ ಪವನ

ಇನ್ನಿಲ್ಲ ಚಿಂತೆ ಗಂಡನರಕಮನೆಯ
ಆಸೆ| ಬಾಳಿಗೊಂದು ಬೆಳಕಂತೆ
ಕೈಗೊಂದು ಊರುಗೊಲಂತಿರಲು
ದೈವಕ್ಕೆ ಇದನ್ನು ಸಹಿಸದಾಯಿತೇನೊ
ಚಿವುಟಿತು ಚಿಗುರನು ಹುಟ್ಟಿದ ಪಕ್ಷದೊಳಗೆ
ಸಾವಿನ ಸವಾರಿ ಹೊರಟೆ ಬಿಟ್ಟಿತ್ತು
ಅವನಂಗಳದೊಳಗೆ | ತಾಯಿ ಲಾಲಿ
ಕೇಳಲಿಲ್ಲ | ತೊಟ್ಟಿಲ ತೂಗಿನ ನಿದ್ದೆಯ
ಮಾಡಲಿಲ್ಲ | ದಿನವಾದರೂ ಹೊಟ್ಟೆ ತುಂಬ
ಹಾಲು ಕುಡಿಯದೆ ಸವಾರಿಯನೇರಿಬಿಟ್ಟ
ತಾಯಿಗೆ ಮಗುವ ಮರಣದ ಕೊಡುಗೆ
ತವರಿಗೆ ದೇವರು ನೀಡಿದ ದುಃಖದಡುಗೆ
ಉಣ್ಣುವದೊ ಚಲ್ಲುವದೊ ದೇವರಡಿಗೆ
ದುಃಖವನೆಲ್ಲ ಒಪ್ಪಿಸಿದೆವು ನಿನ್ನ ಮುಡಿಗೆ

ಓ ಸಾವೆ...
ಏನೆಂದು ಕರೆಯಲಿ ನಿನ್ನ ನಾ

Tuesday, July 5, 2016

ಹೇಳದೆ ಇರದಿರು ಸುಮ್ಮನೆ

ಮರೆಸದಿರು ಆ ಮಾತನ್ನು
ನಿನ್ನ ಕಣ್ಣಿನ ಮತ್ತಿನಲಿ
ಹೇಳಿಬಿಡು ಒಂದೇ ಸಾರಿ
ಕೆಂದುಟಿಯ ಅಂಚಿನಲಿ

ಸನ್ನೆಯನ್ನಾದರೂ ಮಾಡು
ಮುಂಗುರುಳಿನಲಿ
ಸದ್ದನ್ನಾದರು ಮಾಡು
ಕೈ ಬಳೆಯಲಿ

ತಿಳಿಸಿಬಿಡು ಕಾಲ್ಗೆಜ್ಜೆಯ
ನಾದದಲಿ
ತೋರಿಸಿಬಿಡು ಲಜ್ಜೆಯ
ರೊಪದಲಿ

ಹೇಳದೆ ಇರದಿರು ಸುಮ್ಮನೆ
ಕೇಳದೆ ಇರಲಾರೇನು ಒಬ್ಬನೆ

Monday, July 4, 2016

ನನ್ನ ನೀನು

ಓ ತಂದೆಯೆ....
ನೀನು ನನ್ನನ್ನು ಬಯಸುತ್ತಿದ್ದರೆ
ಗರ್ಭದಲ್ಲಿಯೆ ಚಿವುಟುತ್ತಿರಲಿಲ್ಲ
ಹೆಣ್ಣೆಂದು ಜರಿಯುತ್ತಿರಲಿಲ್ಲ
ಅಶಿಕ್ಷತಗೆ ದೂಡುತ್ತಿರಲಿಲ್ಲ
ಅಪ್ರಾಪ್ತ ವಯಸ್ಸಿನಲ್ಲೆ
ಗಂಡನ ಸೆರೆಮನೆಗೆ ದೂಕುತ್ತಿರಲಿಲ್ಲ

ಓ ಗಂಡನೆ ನೀನಾದರೂ
ನನ್ನನ್ನು ಪ್ರೀತಿಸುತ್ತಿದ್ದರೆ
ಹೀಗೆ ಮಾಂಸದ ಮುದ್ದೆಯಂತೆ
ಹಿಂಡುತ್ತಿರಲಿಲ್ಲ
ಕೊಟ್ಟಿಗೆಯ ದನದಂತೆ
ಬಡಿಯುತ್ತಿರಲಿಲ್ಲ
ಮಕ್ಕಳ ಹೆರುವ ಯಂತ್ರದಂತೆ
ಮಾಡುತ್ತಿರಲಿಲ್ಲ
ಇಷ್ಟ ಕಷ್ಟಗಳ ಕೇಳದಿರುವ
ಕಿವುಡನಾಗುತ್ತಿರಲಿಲ್ಲ

ಓ ಮಡಿಲ ಮರಿಗಳೆ
ನೀವಾದರು ಬಯಸಿ
ಈ ನೊಂದೊಡಲನು
ನೀವಾದರು ಅರೆಯಿರಿ
ಮಾತೆಯ ಮಮತೆಯನು
ಸೋದರಿಯ ಕರುಣೆಯನು
ಮಡದಿಯ ಪ್ರೀತಿಯನು

Sunday, July 3, 2016

ಕುಶಲೊಪಚಾರ

ಸಗಣಿ ಸಾರಿಸಿ, ಚುಕ್ಕಿಯಿಟ್ಟಂಗಳ್ಕ
ಅಲಂಕಾರ ಮಾಡಿದ್ರೆದ್ಕ ಬಂತ
ಗಾದ್ಯಾಗ ಕುಳ್ಳರಿಸಿ, ಬಿಸಣಕಿ
ಬೀಸಿದ್ರೇನ ಬಂತ
ನೀರಿಗೆ ನಿಂಬೆ ಸಕ್ರಿಯ ಹಾಕಿ
ಪಾನಕ ಮಾಡಿಕೊಟ್ರೇನ ಬಂತ
ಬಾಗಿಲಿಗೆ ಬಂದೊರಿಗೆ ಹೆಂಗದಿರಂತ
ಕೇಳದಿದ್ರ ಇವ್ನೆಲ್ಲಾ ಯಾಕ
ಮಾಡಬೇಕಂತ

ಇಸ್ಪೀಟ ಆಟ

ಇಸ್ಪೀಟ ಆಟ
ನೋಡಕ್ಹತ್ರ ಮಾಟ
ಆಡಾಕ ಹತ್ರ ಬಖ್ಣ ಖೊಟಾ
ಮನೆಗಬಂದ್ರಿವಳ ಕಾಟ
ರಾತ್ರೊತ್ತಿಗಿಲ್ಲ ಊಟ
ನಿದ್ದಿಗೆ ಹೇಳ್ಬೇಕು ಟಾಟಾ
ಏನ್ಮಾಡೋದೆಲ್ಲಾ ದೇವರಾಟ