Friday, November 4, 2016

ವಡೆ ಕೊಡೆ ಬಿಡೆ

ನೀನೊಂದು ಉಬ್ಬಿದ ವಡೆ
ಕೇಳಿದಾಗಲೆಲ್ಲ ನಾ
ಹೇಳುವೆ
ಮನಸ ಕೊಡೆ
ಮನಸ ಕೊಡೆ

ಹೋಗಲಿ ಬಿಡೆ
ನನಗಿಗ
ವಯಸ್ಸಾಯ್ತು
ಬಿಡೆ

ಶ್ರೀಗಂಧ

ದನ ಕಾಯೋಳ ನಡು ಅಂದ
ಹಾಲ ಮಾರೋಳ ದನಿ ಚಂದ
ಹೂ ಮಾರೊಳ ನಗು ಅಂದ
ತರಕಾರಿ ಮಾರೊಳ ಕಣ್ಣೋಟ ಚಂದ

ಮಾತನ್ಯಾಗ ಮುಸರಿ ತಿಕ್ಕೊಕಿ ಚಂದ
ಹಾಡನ್ಯಾಗ ಬಟ್ಟಿ ಒಗಿಯ್ಯಾಕಿ ಚಂದ
ಸಿಡಕನ್ಯಾಗ ಎದುರು ಮನಿಯ್ಯಾಕಿ ಚಂದ
ಇವೇನೂ ಇಲ್ದ ಇರೋ ನಿನ್ಹತ್ರ ನಾ
ಬಾಳೆ ಮಾಡಾಕ ಹತ್ತೀನಂದ್ರ ನಾನ
ಶ್ರೀಗಂಧ

ಮಲಗಿರುವ ಮೋಡ

ಮಲಗಿರುವೇ ಏಕೇ ಮೋಡವಾಗಿ
ಕರಗಿ ಇಳಿದುಬಿಡು ನೀರಾಗಿ
ಕಾಯುತ್ತಿದೆ ಧರೆಯು ಕಾದ ಹಂಚಾಗಿ
ಬೇಡುತಿವೆ ತರುಲತೆಗಳು ಹನಿ ತೊಟ್ಟಿಗಾಗಿ

ಫಸಲೊಳಗಿನ ಹಸಿರಳುತಿರಲು ನೀನಗಾಗಿ
ಕೆರೆಕಟ್ಟೆಗಳು ಕಾಯುತಿರಲು ನಿನ್ನ ಬರುವಿಗಾಗಿ
ಜೀವಿಗಳು ನಲಗುತಿರಲು ನೀರಿಗಾಗಿ
ಹರಿದುಬಿಡು ಶಿವನ ಜಡೆಯಿಂದ ಚಿಲುಮೆಯಾಗಿ

ಹರನೇ ಹರಿಸಿಬಿಡು ಗಂಗೆಯನು ಧರೆಗಾಗಿ
ಮರೆಸು ಮನದ ನೋವನು ಮಳೆಯಾಗಿ
ಸುರಿಸು ಜೀವರಾಶಿಗಳ ಬದುಕಿಗಾಗಿ
ಸತ್ತು ಬಾರದಿರಲಿ ನಿನ್ನ ರುದ್ರಭೂಮಿಗೆ

ಮಾತು ಮೌನ

ಮಾತು ಮರೆವನ್ನು ಹೆಚ್ಚ ಮಾಡ್ತದ
ಮೌನ ಜ್ಞಾನವನ್ನ ಹೆಚ್ಚ ಮಾಡ್ತದ

ಅಮ್ಮನ ಒಡಲು

ಅಮ್ಮಾ ನಿನ್ನ ಒಡಲು
ಇಳೆ ಕಡಲ ತಟಕಿಂತ ತಂಪು

Saturday, October 29, 2016

ಮನವಿ

ಹೇಗೆ ದೂಡಲಿ ಇನ್ನುಳಿದ
ದಿನಗಳನು
ಹೇಗೆ ಕಳೆಯಲಿ ನೀ ಬಾರದ
ದಿನಗಳನು

ಯಾಕಿಷ್ಟು ಹಠವು ಈ
ಬಡವನ ಮೇಲೆ
ಯಾಕಿಷ್ಟು ಕೋಪ ಭೂದೇವಿಯ
ಮೇಲೆ

ಕಾಡ ಕಡೆದು ನಾಡ ಕಟ್ಟಿದುದಕೆ
ಕೆರೆಯ ಮರೆಸಿ ಮನೆಯ ಕಟ್ಟಿದುದಕೆ
ಭೂಗಂಗೆಯನು ನೀರರ್ಥಕವಾಗಿ ಹರಿಬಿಡುವದಕೆ
ನಿನ್ನಯ ನೀರನು ಉಳಿಸದೆ ಹಳ್ಳಕೆ ಹರಿಸಿದುದಕೆ

ಮಳೆರಾಯ, ಭೂದೇವಿಯ
ಒಡಲೊಡೆಯ, ಸಕಲ ಜೀವರಾಶಿಗಳ
ಆತ್ಮಜನೆ ಸುರಿದುಬಿಡು ಧೊ ಎಂದು
ಎಲ್ಲರೆದೆಯ ಉರಿಯಾರುವಂತೆ

ಬಿತ್ತಿದ ಬೆಳೆಯ ಉಸಿರಾಗಿಸೋಕೆ
ಮೂಕ ಜೀವಿಗಳ ದಾಹ ತಣಿಸುವದಕೆ
ಧರಣಿಯು ಹಸಿರುಡುಗೆಯ ಹೊಂದುವದಕೆ
ಕೊರಡೊಂದು ಚಿಗುರೊಡೆಯುವದಕೆ

ಹಸಿದೊಡಲ ಮಕ್ಕಳು ಅಮ್ಮಾ....ಎಂದು
ಕೂಗಿದರೆ ಮನೆಯಲಿ ಹಿಡಿ ಹಿಟ್ಟಿಲ್ಲ
ಸೇರು ಅಕ್ಕಿಯಿಲ್ಲ, ಕೊಟ್ಟಿಗೆಯ ದನಗಳು
ಅಂಬಾ... ಎಂದು ಕೂಗಿದರೆ ಹಾಕಲು ಮೇವಿಲ್ಲ
ಕುಡಿಸಲು ನೀರಿಲ್ಲ

ದನಗಳನ್ನಾದರು ಮನಸ್ಸು ಕಲ್ಲು ಮಾಡಿಕೊಂಡು
ಕಟುಕನಿಗೆ ಮಾರಿಬಿಡಬಹುದು, ಮೇವಿಲ್ಲದೆ ಬಾಯಾರಿ
ಸಾಯಲೆಂದು ಗುಡ್ಡದ ತೆಪ್ಪಲಿನಲ್ಲಿ ಬಿಟ್ಟು ಬರಬಹುದು
ಶಿವ್ನೆ  ನನ್ನನ್ನೇ ನಂಬಿ ಬಂದ ನನ್ನ ಮಡದಿ, ಎಷ್ಟೇ
ಕಷ್ಟವಾದರೂ ಸರಿ ಸಾಕುತ್ತೇನೆಂಬ ಭರವಸೆಯಲಿ
ಹಡೆದ ಮಕ್ಕಳನೇನು ಮಾಡಲಿ, ಅವರನ್ನೂ.....?

ನಿನ್ನ ನಾಕು ಹನಿ ಸಾಕೇನಗೆ ಇನ್ನೊಬ್ಬರ
ಹಂಗಲಿ ಬೀಳದಂತೆ, ಯಾರೊಬ್ಬರ ಮುಂದೆ
ಕೈ ಚಾಚದಂತೆ, ಕುಹಕ ಮಂದಿಯ ನಡುವೆ
ಕುಗ್ಗಿ ನಡೆಯದಂತೆ, ನನ್ನೆದೆಯ ಉಸಿರು
ನಿಟ್ಟುಸಿರಾಗುದಂತೆ ತಡೆಯಲು

ನಿನ್ನ ಕೊರಗಲಿ ಮಡದಿ ಮಕ್ಕಳು
ನಾನು ಮಣ್ಣ ಸೇರುವ ಮುನ್ನ
ಇಳಿದು ಬಿಡು ಧರೆಗೆ ಇಲ್ಲವೆ ನಾವೆ
ಸೇರುತ್ತೇವೆ ಮಣ್ಣಿಗೆ

ಇಂತಿ ನಿನ್ನ ದಾರಿ ಕಾಯುತ್ತಿರುವ
ಮಳೆಯಾಕಾಂಕ್ಷಿ

ತುಳಿದರು ನನ್ನ

ತುಳಿದರು ನನ್ನ ತುಳಿಯುತಿಹರೂ
ಇನ್ನೂ ನನ್ನ ಮಡಿಕೆಯ ಮಣ್ಣಿನಂತೆ
ನನ್ನೆದೆಯ ನೋವು ಕೇಳಿಸದೆ
ಬಾಳುತಿರುವಿರಿ ನಾಡಿನಲ್ಲೆ

ನನ್ನುಗಮದ ನೀರು ನನಗಿಲ್ಲ
ಬಾಯಾರಿದ ನನಗೆ ನೀರಿಲ್ಲ
ಹರಿಸುತಿಹರಿ ಯಾಕೋ
ನೋಡುತ ನಿಂತಿಹರೆಲ್ಲ

ಭಾಷೆಯ ಕತ್ತಿಗೆ ದೇಹದ
ಭಾಗವನೇ ಕತ್ತರಿಸುತಿಹರು
ಕಾಣದೆ ಇರುವುದಲ್ಲವಲ್ಲ
ಅರಿತು ಮೌನಿಯಾಗಿರುವಿರೆಲ್ಲ

ನೀಡದೆ ನನಗೊಂದು ಗುರುತು
ಮೂಡವುದೆ ಅಭಿಮಾನದ ಹೆಗ್ಗುರುತು
ಓದದೆ ಬರೆಯದೆ ನನ್ನ ನುಡಿ
ಹಚ್ಚುವಿರೆಂದು ಕನ್ನಡದ ಕಿಡಿ