Monday, January 9, 2017

ನೀನಿಲ್ಲದ ಮನಸ್ಸು

ಭಾವನೆಗಳಿಲ್ಲದ ಮನಸು
ಬಿಂಬಗಳಿಲ್ಲದ ಕನ್ನಡಿ
ಹುಟ್ಟುಗಳಿಲ್ಲದ ದೋಣಿ
ನೀನಿಲ್ಲದ ನನ್ನ ಹಾದಿ
ಕಡಲ ತೀರದಲಿ ಹೆಜ್ಜೆಯ
ಗುರುತನು ಬಿಟ್ಟ ಹಾಗೆ

ಕನಸುಗಳೆ ಇಲ್ಲದ ನಿದ್ದೆ
ಮುಳ್ಳುಗಳೆ ಇಲ್ಲದ ಗಡಿಯಾರ
ಚುಕ್ಕಿಗಳೆ ಇಲ್ಲದ ಭಾನು
ನೀನಿಲ್ಲದ ಮನೆ
ಕದವಿರದ ಅಡುಗೆ ಕೋಣೆಗೆ
ನಾಯಿಯನು ಕಾವಲಿರಿಸಿದ
ಹಾಗೆ

ಹೂವಿಲ್ಲದ ಕೆರೆ
ದೀಪವಿರದ ಕೋಣೆ
ಗುರಿಯಿಲ್ಲದ ಬದುಕು
ನೀನಿಲ್ಲದ ಮನವು
ಬೀಸುವ ಬಿರುಗಾಳಿಗೆ
ದಾವಣಿಯನು ಕೈ ಬಿಟ್ಟ
ಹಾಗಿದೆ

ನಮ್ಮವ್ವ ೫

ಕೆಚ್ಚಲದಾಗ ಹಾಲ ಇಲ್ಲಂದ್ರ ಹಸು
ಕರುವನ್ನು ಒದ್ಗೊತೈತಿ
ಕೇಳವ್ವ
ಗಂಡನ ಮನಿಗೆ ಕಳಸಿನಂತ ನನ್ನ
ಒದ್ಕೊ ಬ್ಯಾಡವ
ನಮ್ಮವ್ವ

ಮಾವಿನಕಾಯಿ ಹರಕೊಂಡ ಮ್ಯಾಲ
ಗಿಡಾನ ಕಣ್ಣೇತ್ತಿ ಯಾಕಾರ ನೋಡ್ಯಾರು
ಕೇಳವ್ವ
ಕರುಳಿನ ಬಳ್ಳಿನ ಕತ್ತರಿಸಿ ಕೊಟ್ಟಿನಿ ಅಂತ
ಕಣ್ಮುಚ್ಚಿ ಕುಂದರಬ್ಯಾಡ
ನಮ್ಮವ್ವ

ಬಿಂದಿಗೆ ನೀರು ಸೇದಿಂದ ಬಾವಿಯ
ಹಗ್ಗದ ಆಚು ಯಾರಿಗೆ ಇರತೈತಿ
ಕೇಳವ್ವ
ಗಂಡನೂರಿಗೆ ಹೋದಾಕಿ ತವರೂರ
ಆಸೆ ಇಲ್ಲಂತ ಮರಿಬ್ಯಾಡವ
ನಮ್ಮವ್ವ

Wednesday, January 4, 2017

ನಮ್ಮವ್ವ ೩

ಎಷ್ಟೊಂದು ತೂಕದ ಬಂಗಾರ
ಎಷ್ಟೊಂದು ಸರಗಳ ಹಾಕ್ಯಾರ
ಬಂಗಾರದ ಆಭರಣಗಳಲ್ಲೆ ನನ್ನ
ಎದ್ದಿ ತಗದಾರ
ಕೇಳವ್ವ
ಮುಖಕ್ಕೆ ನಗು ಅನ್ನೊ ವಡವೆನ
ಮರತಾರ
ನಮ್ಮವ್ವ

ಎಂಟ ಅಂಕಣದ ಅರಮನೆ
ಎರಡಂಕಣದಷ್ಟು ದವಸ ತುಂಬೈತಿ
ಮೂರಂಕಣದಾಗ ದನಕರ ನಿಂತಾವು
ಕೇಳವ್ವ
ಮನೆಯವರು ತಮ್ಮ ಮನದ ಅಂಕಣಕ
ಹಲಗಿ ಬಡಕೊಂಡಾರ
ನಮ್ಮವ್ವ

ಊರಿಗೆ ದೊಡ್ಡ ಮನಿ ಐತಿ
ಕಟ್ಟಿ ಮ್ಯಾಲ ಕುಂತ ನ್ಯಾಯ
ಹೇಳ್ತಾರ
ಕೇಳವ್ವ
ಮನಿಯಾಗ ಸೊಸಿಯನ್ನಾಕಿದ
ನ್ಯಾಯ ಕೇಳೊರ ಯಾರಿಲ್ಲ
ನಮ್ಮವ್ವ

ಭಾವ ಅಭಾವ

ಭಾವ ಭಾವ ಭಾವ
ಎಲ್ಲ ಎಲ್ಲದರಲ್ಲಿಯೂ
ನೀರ್ಭಾವ
ಮನದ ಮನಗಳಲಿ
ಮನೆಯ ಮಾಡಿ
ಮನವ ಮೇಯುತ
ಮಲಗಿ ತೋರುತಿದೆ
ಹಣ ತನ್ನ ಪ್ರಭಾವ

ಪ್ರೀತಿ ಪ್ರೇಮಗಳ
ವಿಶ್ವಾಸ ನಂಬಿಕೆಗಳ
ಬುಡದಲಿ ಹೊಕ್ಕು
ಬೇರುಗಳ ಸಡಿಲಗೊಳಿಸಿ
ಮೌಲ್ಯಗಳ ಬದುಕ
ಮಣ್ಣಾಗಿಸಿ ನಗುತ
ನಿಲ್ಲುವದೆ ಹಣದ
ಸ್ವಭಾವ

ಮರೆತು ಮಮತೆಯ
ಮದದಿ ಮೆರೆಯುವವರ
ಹಣದ ಭಾವಕೆ ಮೋದಿ
ತಂದನೂ ಅದಕೂ
ಅಭಾವ

ನಮ್ಮವ್ವ ೪

ಕುಡದ ಕುಡದ ಬರ್ತಾನ
ಬಡದ ಬಡದ ಮಲಗ್ತಾನ
ಅವನ ಕೈ ಕತ್ತರಿಸಿ ದ್ಯಾಮವ್ವ
ಕೊರಳಿಗೆ ಹಾರ ಹಾಕ್ಕೊಳ್ಲಿ
ಹಾಲ ಗಲ್ಲದ ಮಕ್ಳಿಗೂ ಬರೆ
ಎಳಿತಾನ
ನಮ್ಮವ್ವ

ತಿವಿದ ತಿವಿದ ಬೈತಾಳ
ಮಾತ ಮಾತಿಗೂ ಅಂಗಸ್ತಾಳ
ಯಾವದರ ಬರಬಾರ್ದ ಬಂದ
ಚಾಪಿ ಸುತಗೊಂಡ ಹೋಗ್ಲಿ
ಅತ್ತಿಯನ್ನಾಕಿ ಹೊಲದಾಗ ನಾಕಾಳಿನ
ದಗದ ಮಾಡಿ ಬಂದ್ರೂ ಒಂದಹೊತ್ತ
ಖೂಳ ಹಾಖಾಕ ಅಳತಾಳ
ನಮ್ಮವ್ವ

ಹೊತ್ತ ಹೊತ್ತ ತಪ್ಪಿ ಬರ್ತಾನ
ಇದ್ದದ್ದ ಇರಲಾರ್ದ ಕೇಳ್ತಾನ
ಮಾವನ ಕಾಲ ಮುರ್ದ
ಮೂಲ್ಯಾಗ ಕುಂದರಸ್ಲಿ
ಊರೊರ ಮುಂದ ಸೊಸಿ
ಮಾನಾ ಬಿಟ್ಟಾಕಿ ನಡತಿ ಬಿಟ್ಟಾಕಿ ಅಂತಾ
ಊರ ತುಂಬಾ ವಾಯ್ನಾ ಮಾಡ್ತಾನ
ನಮ್ಮವ್ವ

ಮಲಗದಿರಿ ಕವನಗಳೆ

ಮಲಗದಿರಿ ಕವನಗಳೆ
ಯಾವ ಯಾರದೂ ಚಿಂತೆಯಿಲ್ಲದಂತೆ
ಬರೆಯುವ ಕೈ ಬರಿದಾಗುವಂತೆ
ಮಥಿಸುವ ಮಸ್ತಿಷ್ಕ ಮಂಕಾಗುವಂತೆ
ಮಲಗದಿರಿ ಕವನಗಳೆ

ಚಿಮ್ಮಿ ನೆಲಕೆ ಹರಿದು ಹಳ್ಳಕೆ
ಚಿಗುರ ಹೊಮ್ಮಿಸಿ ಮರವ ತುಂಬಿಸಿ
ನೆಲಕೆ ಹಸಿರು ಬಣ್ಣದ ಚಿತ್ತಾರವ
ಬಿತ್ತುವ ಹನಿಗಳೆ ಇಳೆಗೆ ಜಾರದೆ
ಮೋಡದ ತೆಕ್ಕೆಗಳಲಿ ನಿದಿರೆಗೆ
ಜಾರಿದಂತೆ

ಚಿಟ್ಟನೆ ಚೀರಿ ತಾಯನು ನಿದ್ದೆಯಿಂದೆಬ್ಬಿಸಿ
ಎದೆಹಾಲ ಕುಡಿದು ಆನಂದದಿ ಆಟವಾಡಿ
ತಾಯಿಗೆ ನಿದ್ದೆಹತ್ತಗೊಡದಂತೆ ಗೋಳಾಡಿಸಿ
ಕೈಯ ನೋವು ಬರುವವರೆಗೂ ಅವಳಿಂದ
ತೊಟ್ಟಿಲ ತೂಗಿಸಿ ಆಸೆಗಳಿರದ ಕನಸುಗಳ
ನಿದ್ರೆಗೆ ಹೊಕ್ಕಿಬಿಡುವ ಮಗವು ಇವೆಲ್ಲದರ
ಮಜಲುಗಳ ಮರೆತು ಮಲಗಿದಂತೆ

ಮಲಗದಿರಿ ಕವನಗಳೆ
ತಾಯಿ ಮಡಿಲೊಳ ಮಗುವಂತೆ
ವರನ ತೊಳೊಳ ವಧುವಿನಂತೆ
ಹರನ ಶಿರದೊಳ ಗಂಗೆಯಂತೆ
ಹೂವಿನೆದೆಯೊಳ ಗಂಧದಂತೆ

Monday, January 2, 2017

ನಮ್ಮವ್ವ ೨

ಮಳಿಗೆ ಹಾಳಾದ ಬೆಳೆಗೆ
ಪರಿಹಾರ ಕೊಡ್ತಾರ
ಕೇಳವ್ವ
ಮದುವೆಗೆ ಹಾಳಾದ ಬಾಳಿಗೆ
ಏನಂತ ಕೊಡ್ತಾರ
ನಮ್ಮವ್ವ

ಹಸಿವಿನಾಸೆಗೆ ದನ ಒಂದಿನ ಬೇಲಿ
ದಾಟಿದರ ದಂಡ ಕಟ್ಟಿಸಿಕೊಳ್ತಾರ
ಕೇಳವ್ವ
ಕಾಮದಾಸೆಗೆ ದಿನವೂ ಬೇಲಿ
ಹಾರುವ ಗಂಡನಿಗೆಂಥ ದಂಡ
ಕಟ್ಟಸ್ತಾರ
ನಮ್ಮವ್ವ

ಬಾಳೆ ಮಾಡಾಕ ಬರಲ್ಲಂತ ಸೊಸಿನ
ಮನಿ ಬಿಟ್ಟ ಹೊರಗ ಹಾಕ್ತಾರ
ಕೇಳವ್ವ
ಸೊಸಿನ ನಡೆಸಕೊಳ್ಳದಿರೊ ಅತ್ತಿ
ಮಾವನ್ನ ಏನ ಮಾಡ್ತಾರೊ
ನಮ್ಮವ್ವ

ಅಪ್ಪಯ್ಯ ಗಾಳಿಗೆ ಕಾಳ ತೂರತಾನ
ಅದರಂದ ಕಸ ಹಾರಲೆಂತ
ಕೇಳವ್ವ
ಲೋಕದ ಎದೆನ ಕಸ ತೆಗೆಯೊದ
ಮರತ ಆ ಶಿವ ಕುಂತಾನ
ನೋಡವ್ವ