Wednesday, January 11, 2017

ನಮ್ಮವ್ವ ೧೩

ಹರಿಯೊ ಹೊಳಿಯಾಗ ಮುಳಗತಾರ
ನಿಂತ ಕಲ್ಯಾಣಿಯೊಳಗ ಸ್ನಾನ ಮಾಡ್ತಾರ
ಸುರಿಯೊ ಮಳಿಗೆ ಮೈ ಮರತ ನಿಂದರತಾರ
ನೋಡವ್ವ
ಯಾವ ನೀರನ್ಯಾಗ ತೊಯ್ದರನು ಮೈಯನ
ಕೊಳಿ ಹೊಕ್ಕೈತಿ ಮನಸನೆಂದ ಕಲಿ
ಕರಗತೈತೇನ
ನಮ್ಮವ್ವ

ಕುಂತ ದೇವ್ರಿಗೆ ಕೈ ಮುಗಿತಾರ
ನಿಂತ ದೇವ್ರಿಗೆ ಅಡ್ಡ ಬೀಳ್ತಾರ
ಮಲಗಿದ ದೇವ್ರಿಗೆ ಊರಳ ಸೇವೆ
ಮಾಡ್ತಾರ
ನೋಡವ್ವ
ಮನದ ದೇವರ ಮರತ ಬಾಳೆ
ಮಾಡ್ತಾರ
ನಮ್ಮವ್ವ

ಬಂಗಾರ ಬೆಳ್ಳಿನ ಹುಂಡಿಗೆ ಹಾಕ್ತಾರ
ಗಂಟ ಕಟ್ಟಿ ಕಟ್ಟಿ ಜೋಳಿಗ್ಗೆ ಸುರಿತಾರ
ಚಿಲ್ಲರ ಹಣವನ್ನ ತುಲಾಭಾರಕ್ಕೆ ತುಂಬಸ್ತಾರ
ನೋಡವ್ವ
ಗುಡಿಮುಂದ ಕುಂತ ಬಿಕ್ಷುಕನಿಗೆ ಹಾಕಾಕ
ಇವರ ಹತ್ರ ಚಿಲ್ಲರೆ ಇರಲ್ಲಲ್ಲೊ
ನಮ್ಮವ್ವ

ನಮ್ಮವ್ವ ೧೨

ಹರಿದ ಬಟ್ಟೆಗೆ ತ್ಯಾಪಿ ಮಾಡತಾರ
ತುಂಡಾದ ನೋಟಿಗೆ ಅಂಟ ಹಚ್ಚತಾರ
ಮುರದ ಬಿದ್ದ ಜಂತಿಗೆ ಮಳಿ ಬಡಿತಾರ
ನೋಡವ್ವ
ನನ್ನ ಬಾಳೆ ಅನ್ನೊ ಭಾಗ್ಯದ ಬಾಗಿಲಿಗೆ
ಕದಗಳೆ ಇಲ್ಲದಾಗ ಏನ ಕುಂದರ್ಸತಾರ
ನಮ್ಮವ್ವ

ಹಸಿದ ಬಂದವಂಗ ಅನ್ನ ನೀಡ್ತಾರ
ಬಾಯಾರಿ ನಿಂತವಗ ನೀರss ಹಾಕ್ತಾರ
ಸೂರಿಲ್ಲದವಗ ಮಲಗಾಕ ಜಾಗ ಕೊಡ್ತಾರ
ನೋಡವ್ವ
ಹಸಿರ ಬಳೆ ಬೇಡಿ ಹೋದಾಕಿಗೆ
ಕಬ್ಬಿಣದ ಬೇಡಿ ಹಾಕ್ಯಾರೊ
ನಮ್ಮವ್ವ

ಹಾರೊ ಹಕ್ಕಿನ ತಂದು ಕೂಡಿ ಹಾಕ್ಯಾರು
ಜಿಗಿಯೊ ಕರುನ ಬಿಗದ ಗೂಟಕ್ಕ ಕಟ್ಯಾರು
ಹಾಲ ನೀಡೊ ಹಸುನ ಕಟಕನಿಗ ದಬ್ಯಾರ
ನೋಡವ್ವ
ಉಂಡ ತಿಂದ ಆಡೊ ವಯಸ್ಸನ್ಯಾಗ ಮದುವಿ
ಅನ್ನೊ ಸಂಸಾರದ ಹಗೆಕ ದೂಡ್ಯಾರೊ
ನಮ್ಮವ್ವ

ಸವಿಬೆಲ್ಲ

ನಿನ್ನ ತುಟಿಯನ್ನೋದು ತಾಮ್ರದ
ಕೊಡದ ಕಂಟ ಆಗ್ಯತಿ
ಬಾಯಾರಿದ ನನ್ನ ಪ್ರೀತಿ ಎದಿ ಅದಕ
ಬಾಯಿ ಹಚ್ಚಿ ರಸಾನೆಲ್ಲಾ ಕುಡಿಬೇಕ
ಅನ್ಸೈತಿ ನೋಡ

ಅದು ಸಿಹಿಯಿದ್ರೇನು ಕಹಿಯಿದ್ರೇನು
ವಿಷವಾದ್ರೇನು ಅಮೃತ ಆದರೇನು
ಅದನ್ನ ಕುಡದ ಎದಿ ಎಷ್ಟ ದಿನ ನಿನ್ನ
ನೆನಪನ್ಯಾಗ ಬದಕತೈತಿ ಅನ್ನೋದ
ಗುಟ್ಟ ನೋಡು

ದುಂಬಿ ಎಷ್ಟ ಹೂವಿನ ತುಟಿ ಕಚ್ಚಿ
ಹಾರಡತೈತಿ ಅನ್ನೋದ ಯಾರಿಗೆ
ಗೊತ್ತು
ಹಾಗಂತ ಕಂಡ ಕಂಡ ಹೂವಿನ ತುಟಿ
ಕಚ್ಚಾವಲ್ಲ ಇಂವ
ಮೆಚ್ಚಿದ ಹೂವನ್ನ ಮುತ್ತಿನ ಕಳಸದ
ಮ್ಯಾಲಿಟ್ಟ ಪೂಜಿಸಾಂವ ಇಂವ
ಹ್ಞೂಂ ಅಂತಿಯಿಲ್ಲೊ
ಮತ್ತ

ಕಚ್ಚಿದ ತುಟಿ ನೋವಿನ ಸವಿ ನೆನಕೊಂತ
ಹಂಗ ಕುಂದರತೀಯೊ

ನಮ್ಮವ್ವ ೧೧

ತಂತಿ ಇಲ್ದ ತಂಬೂರಿನ ಮೀಟಾಕಾಗಂಗಿಲ್ಲ
ತೊಗಲ ಇಲ್ದ ತಬಲಾ ಬಾರ್ಸಕಾಗಂಗಿಲ್ಲ
ತೂತ ಇಲ್ಲದ ಕೊಳಲನ್ನ ನುಡಸಾಕಾಗಂಗಿಲ್ಲ
ಕೇಳವ್ವ
ಮನಸ ಇಲ್ಲದ ಮದುವಿನ ನಾ ಹ್ಯಾಂಗ
ಆಗಲೇ
ನಮ್ಮವ್ವ

ಮಳೆ ಇಲ್ದ ಭೂಮಿ ಹದ ಆಗಂಗಿಲ್ಲ
ಬೀಜ ಇಲ್ದ ನೆಲನ ಬಿತ್ತಾಕ ಆಗಂಗಿಲ್ಲ
ಮೇವ ಇಲ್ದ ದನಾನ ಸಾಕೋಕ ಆಗೋದಿಲ್ಲ
ಕೇಳವ್ವ
ಪ್ರೀತಿಯಿಲ್ಲದ ಅವನ ಮನಿ ಹೊಸ್ತಲ ನಾ
ಹ್ಯಾಂಗ ತುಳಿಲೆ
ನಮ್ಮವ್ವ

ತೋರಣಿಲ್ಲದ ಬಾಗಿಲು ಏನ ಚೆಂದ
ರಂಗೋಲಿಲ್ಲದ ಅಂಗಳ ಏನ ಚಂದ
ಪೂಜೆಯಿಲ್ಲದ ಹೊಸ್ತಿಲು ಏನ ಚೆಂದ
ಕೇಳವ್ವ
ಮೂವತ್ತರ ಹೈದಗ ಹದಿನಾರರ ಬಾಲೆ
ಕಟ್ಟಿದರ ಏನ ಚೆಂದ
ನಮ್ಮವ್ವ

Tuesday, January 10, 2017

ನಮ್ಮವ್ವ ೯

ಹೂವಿನೊಳಗ ಗಂಧ ಐತಿಲ್ಲಂತ
ಮೂಸಿ ಮೂಸಿ ನೋಡ್ತಾರ
ಕಟ್ಟಿಗೆಯೊಳಗ ಸುಗಂಧ ಐತಿಲ್ಲಂತ
ತೇದ ತೇದ ನೋಡ್ತಾರ
ಕೇಳವ್ವ
ಅವನ ಮನದಾಗ ನಾನ ಅದೀನೊ
ಇಲ್ಲೊ ಹ್ಯಾಗ ತಿಳಿಲೆ
ನಮ್ಮವ್ವ

ಅಡಗಿ ಸಾರು ಅಂಗೈಯಾಗ ಹಾಕ್ಕೊಂಡ
ನೆಕ್ತಾರ ರುಚಿ ಐತಿಲ್ಲೊ ಅಂತ
ದ್ರಾಕ್ಷಿ ಗೊಂಚಲದನ ಒಂದ ಹಣ್ಣ ತಿಂದ
ತಿಳಿತಾರ ಸವಿಯೊ ಕಹಿಯೊ ಅಂಥ
ಕೇಳವ್ವ
ಅಂವಾ ತೋರ್ಸೊ ಪ್ರೀತಿ ಬೆಲ್ಲಾನೊ
ಬೇವೊ ನಾ ಹ್ಯಾಂಗ ಅರಿಲೆ
ನಮ್ಮವ್ವ

ಅವನ ಮನಿಗೆ ಹೋದ ಮ್ಯಾಲ ಮಂದಿ ಮಾತ
ಕಟಗೊಂಡು ಕಟಗೊಂಡಾಕಿನ ಕಾಡಿಗೆ ಕಳಸೊ
ರಾಮನ ಗುಣದವನೊ
ಸತ್ಯ ಸತ್ಯ ಅಂತಂದ ಸತ್ಯದ ಸಲುವಾಗಿ ಹೆಣ್ತಿನ
ಮಾರಿದ ಹರಿಶ್ಚಂದ್ರನಂತವನೊ
ಕೇಳವ್ವ
ಯಾಕಂದ್ರ ಕಾಡು ಪ್ರಾಣಿಗಿಂತ ನಾಡ ಪ್ರಾಣಿಗಳ
ಹೆಚ್ಚ ತ್ರಾಸ ಕೊಡ್ತಾವು
ಸತ್ಯಕ್ ಮಾರೋದಕೀನ ಚಟಕ್ಕ ಮಾರೋರು
ಹೆಚ್ಚದಾರೊ
ನಮ್ಮವ್ವ

Monday, January 9, 2017

ನಮ್ಮವ್ವ ೧೦

ಮಡಿವಾಳನ ಮಾತ ನಂಬಿ ರಾಮ
ಸೀತೆಯ ಕಾಡಿಗೆ ಅಟ್ಟಿದನೆ
ಕೇಳವ್ವ
ರಾಮ ಮಡಿವಾಳನಿಗ ಅವನ
ಸಂಸಾರದ ವಿಷಯಾನ ಯಾಕ
ಕೇಳಲಿಲ್ಲ
ನಮ್ಮವ್ವ

ಶಕುನಿಯ ಮಾತ ಕೇಳಿ ಜೂಜಿಗಿಟ್ಟನೆ
ದ್ರೌಪದಿಯ
ಕೇಳವ್ವ
ಯುಧಿಷ್ಠರ ದ್ರೌಪದಿಯ ಒಂದ
ಮಾತನ್ನ ಯಾಕರ ಕೇಳಲಿಲ್ಲ
ನಮ್ಮವ್ವ

ಕುಡಕ ಮಾವಗ ನನ್ನ ಮದುವಿ
ಮಾಡಿ ಕೊಟ್ಟಿರಿ
ಕೇಳವ್ವ
ಮದುವಿ ಮುಂಚಿ ನನ್ನದೊಂದು
ಮಾತ ಯಾಕ ಕೇಳಲಿಲ್ಲ
ನಮ್ಮವ್ವ

ತಾಯಿ ಭೂತಾಯಿ

ನೇಗಿಲಿನಿಂದ ದೇಹವನೆಲ್ಲವ ಸಿಳಿಸಿಕೊಂಡು
ಕುಂಟಿಯಿಂದ ತನ್ನ ತಾ ಹದವಾಗಿಸಿಕೊಂಡು
ನಾವು ಬಿತ್ತುವ ವಿಷದ ಬೀಜವ ಗೊಬ್ಬರವ
ತನ್ನೊಡಲೊಳಗೆ ತುಂಬಿಕೊಂಡು
ಆಗೊಮ್ಮೆ ಈಗೊಮ್ಮೆ ನೀನು ಕೊಚ್ಚಿ ಹರಿದು
ಹೋಗುವಂತೆ
ಮೇಲ್ಪದರ ಮಣ್ಣೂ ತೋಯದಂತೆ ಮೋಡ
ಮುನಿಸಿನಿಂದ ಸುರಿಯುವ ಹನಿಗಳ
ನುಂಗಿಕೊಂಡು
ನಮ್ಮ ಕಾರ್ಯದ ಫಲವಾಗಿ ನಿನ್ನ
ಉಡಿಯಿಂದ ಒಂದಷ್ಟು ಅನ್ನವ ನೀಡುವ
ಭೂ ತಾಯೆ

ಉರುವಲು ವಲೆಯ ಹೊಗೆಯನುಂಡು
ಉರಿವ ಕೆಂಡದ ಕಾವನುಂಗಿಕೊಂಡು
ಕಾದ ಹಂಚಿನ ಅಂಚಿನ ಬರೆಯ
ತಾಗಿಸಿಕೊಂಡು
ಹೊಟ್ಟೆಯ ಹಸಿವು ಹೆಚ್ಚಿಸುವಂಥ ಸದ್ದಲಿ
ಖೊಣಗಿಯ ಮೇಲೆ ಹದವಾಗಿ ಹಿಟ್ಟನು
ತಟ್ಟಿ ಮೃದುವಾಗಿ ರೊಟ್ಟಿಯ ಸುಟ್ಟು
ರೆಟ್ಟೆಗೆ ಶಕ್ತಿಯ ಬರುವಂತೆ ಅನ್ನವನಿಕ್ಕುವ ತಾಯೇ

ಎಷ್ಟು ಜನ್ಮಗಳ ನಾನೇತ್ತಿದರೂ
ಹೊರುವ ಹೇರುವ ಸಲಹುವ
ಗಂಡು ಗಂಡೆಂದು ಮೆರೆವ ಈ ದೇಹವು
ಮುಕ್ಕಾದರೂ ನೋವಾದರೂ
ನನ್ನ ದುಃಖಗಳಿಗೆ ಗುರುವಾಗಿ
ನನ್ನ ನಲಿವುಗಳಿಗೆ ನೆರಳಾಗಿ 
ಇರುತ ಬರುವ ತಾಯೆ ನಿನ್ನ
ಋಣದ ಭಾರವ ನಾನೇಂಥ ಇಳಿಸಲಿ

ನಿನ್ನೆದೆಯ ಮೇಲೆ ಒಡಾಡಿ ನಿನ್ನ
ಧೂಳನುಂಡು ಬಿದ್ದು ಹೊರಳಾಡಿ
ಎಡವಿ ಬಿದ್ದಲ್ಲಲ್ಲಿ ಸಂತೈಸಿ
ನಿನ್ನನ್ನು ನಾನು ಗಳಿಸಿದೆ ಸಂಪಾದಿಸಿದೆ
ಗೆದ್ದೆನೆನುವ ಭಾವದಲಿ ಮೆರೆಯುವ
ಈ ಕಾಯವು ಉಸಿರು ನಿಂತು ಮನೆಗೆ
ಮನೆಯವರಿಗೆ ಗೆಳೆಯ ಬಂದುಗಳಿಗೆ
ಒಂದರಘಳಿಗೆಯು ಹೆಚ್ಚು
ಇಟ್ಟುಕೊಳ್ಳಲಾರದಂತಾಗಿ ಗೆದ್ದೆ ಗೆದ್ದೆ
ಎನ್ನುವ ಭೂಮಿಯ ಒಡಲೊಳಗೆ
ಸತ್ತು ಸುಣ್ಣವಾಗಿ ಸೇರುವ ನಾನೆಂಬ
ಗಂಡು ಪಿಂಡಕೆ ಮುಕ್ತಿ ನೀಡುವ ಭೂ ತಾಯೆ

ನಾನೆಂಥ ತೀರಿಸಲಿ ಆ ಋಣ