Saturday, June 3, 2017

ಪ್ರೀತಿಯ ಬೆಳೆಗೆ

ನೀನಿಲ್ಲದೆ ಒಂಟಿಯಾಗಿದೆ ಮನ
ನಗುವಿಲ್ಲದೆ ಚಡಪಡಿಸಿದೆ ಈ ದಿನ
ಗಂಧವಿಲ್ಲದೆ ಅರಳಿ ನಿಂತಂತಾಗಿದೆ ಪ್ರೀತಿ ಸುಮ
ಒಲವಿಲ್ಲದೆ ಸೊರಗಿ ಒಣಗಿದಂತಾಗಿದೆ ನನ್ನ ಪ್ರೇಮ

ಮಾತುಗಳು ನರಳುತಿವೆ ನಾಲಿಗೆಯಲ್ಲಿ
ಪದಗಳು ಸಾಯುತಿವೆ ಬರಹದಲ್ಲಿ
ನೀನಿಲ್ಲದಿರೆ ನನ್ನ ಸನಿಹದಲಿ
ಕಾದು ಕೂತಿದೆ ಹನಿಯೊಂದು ಕಣ್ಣಂಚಿನಲಿ

ಇದೇನಾ... ಅಮೃತವು ವಿಷವಾಗುವ ಘಳಿಗೆ
ಕುಳಿತಿರುವೆ ಅದೇಷ್ಟು ದೂರ ಬರಲಾರದೆ ಬಳಿಗೆ
ಭೂ ಒಡಲು ಕಾದಿಲ್ಲವೇನೆ ಮೋಡದ ಮಳೆಗೆ
ಎದೆಯಿದು ಪರಿತಪಿಸುತ್ತಿಲ್ಲವೇನೆ ನೀ ಬಿತ್ತುವ
ಪ್ರೀತಿಯ ಬೆಳೆಗೆ...

ಮಗುವಾಗುವಾಸೆ ಹುಡುಗಿ

ನನ್ನ ದುಗುಡ ದುಮ್ಮಾನಗಳೆಲ್ಲವ
ಕರಗಿಸುವ ಆ ನಿನ್ನ ಮಡಿಲಿಗೆ
ಮತ್ತೆ.....ಮತ್ತೆ ... ಮಗುವಾಗುವಾಸೆ
ಹುಡುಗಿ..

ಸಾವಿರಾರು ಹರೆಯದ ಹೃದಯಗಳ
ನಡುವೆ... ನನ್ನೊಲವನೆ ಬಯಸಿ ಪ್ರೀತಿಗೆ
ಒಪ್ಪಿಗೆಯ ನೀಡಿದ ಮಡಿಲಿಗೆ ಮಗುವಾಗುವಾಸೆ
ಹುಡುಗಿ..

ಅಂತರಂಗದ ಅಳುವನು ಅಳಿಸಿ
ಅಮೃತದ ಸವಿಯನುಣಿಸಿದ ಆ
ಮಡಿಲಿಗೆ ನಾನು ಮತ್ತೆ ಮಗುವಾಗುವಾಸೆ
ಹುಡುಗಿ...

ಪ್ರೀತಿಯ ಹಾದಿಯಲಿ ಎದುರಾದ
ಅಡೆತಡೆಗಳನೆಲ್ಲವ ಎದುರಿಸಲು ಎಂದೂ...
ನನ್ನ ಕೈ ಬಿಡದ ಆ ಮಡಿಲಿಗೆ ಮತ್ತೆ
ಮಗುವಾಗುವಾಸೆ ಹುಡುಗಿ..

ಹೊಸಬದುಕಿನ ಹಾದಿಯಲಿ ಕಲ್ಲು ಮುಳ್ಳುಗಳೆಂಬ
ಕಷ್ಟಗಳ ನೋವನೆ ನುಂಗಿಕೊಂಡು... ಸದಾ
ನಸುನಗುವ ತೋರುವ ಅ ಮೊಗದ ಮಡಿಲಲಿ
ಮತ್ತೆ ಮಗುವಾಗುವಾಸೆ ಹುಡುಗಿ...

ನಿನ್ನ ಜಿಂಕೆ ಕಣ್ಣುಗಳ ನೋಟಕ್ಕೆ ನೋಟವ
ಬೆರಸಿ ಕಣ್ಣಲಿ ಕನಸುಗಳ ತುಂಬುವ ಆ
ನಿನ್ನ ಹೂವಂತ ಮಡಿಲಿಗೆ ಮತ್ತೆ ಮಗುವಾಗುವಾಸೆ
ಹುಡುಗಿ...

ಕಂಡ ಕನಸುಗಳಿಗೆ ಸದಾ ಹುರುಪಿನ
ಚಿಲುಮೆಯನೆ ಚಿಮ್ಮಿಸುವ ಮಡಲಿಗೆ
ಮತ್ತೆ ಮಗುವಾಗುವಾಸೆ ಹುಡುಗಿ..

ನಮ್ಮಿಬ್ಬರ ಮಿಲನದ ಕುರುಹುವಾಗಿ.. ನಿನ್ನ
ರೂಪದ ಗೊಂಬೆಯನೆ ಕೊಟ್ಟ ಆ ಮಡಿಲಿಗೆ
ಮತ್ತೆ... ಮತ್ತೆ.... ಮತ್ತೆ ಮಗುವಾಗುವಾಸೆ
ಹುಡುಗಿ

Friday, June 2, 2017

ತೆರೆ ೪೪೨

ಅಂದು ಅವಳು ಹೇಳಿದಳು
ನೀನು ನನ್ನ ಕಡಲ ಪ್ರೀತಿಯ
ತೆರೆ...
ಎಷ್ಟು ಆನಂದವಾಯಿತು..

ಇಂದು ಹೇಳಿದಳು
ನಮ್ಮಿಬ್ಬರ ಪ್ರೀತಿಗೆ ಎಳೆಯುವೆನು
ತೆರೆ...
ಅದೇಷ್ಟು ದುಃಖವಾಯಿತು...

ನಗುತಿರುವೆಯಲ್ಲ

ರಾಮ... ರಾಮ... ರಾಮನೆಂದು
ಕರೆದವಳು ನೀನೇಕೆ ಸೀತೆಯಾಗಲಿಲ್ಲ
ಕೃಷ್ಣ..... ಮುರಾರಿ.... ಮುಕುಂದ ಎಂದು
ಕೂಗುತ್ತಿದ್ದವಳು.. ರಾಧೆಯ ಪ್ರೀತಿಯ
ರಸದಗಂಗೆಯನೇಕೆ ಹರಿಸಲಿಲ್ಲ..

ಪ್ರೇಮ ಬನದಲಿ ನಿನ್ನೊಲವ ಜೇನ
ಹನಿಯ ಸಿಂಚನವಗೈದವಳು..
ಬಾಳ ಪಯಣದಲಿ ರಾಣಿ ಇಲ್ಲದ
ಜೇನು ಗೂಡನು ಬಿಟ್ಟು ನಡೆದೆಯೇಕೆ

ನೀನಾಡುವ ಮಾತುಗಳೆಲ್ಲವು ಸುಳ್ಳಾದರೂ..
ಆ ಮಾತೊಳಡಗಿದ ಒಲವು
ಸುಳ್ಳೆಂದುಕೊಂಡಿರಲಿಲ್ಲ...
ಪ್ರೀತಿಯ ಮಡಿಲಿಗೆ ನಗುವ ಮಲ್ಲಿಗೆ
ಸುರಿಯುವೆನೆಂದವಳು..
ನೋವುಗಳ ಹೂಗಳ ಸರಮಾಲೆಯ
ಪೋಣಿಸಿ... ಒಪ್ಪವಾಗಿ ಎನ್ನೆದೆಯ
ಬುಟ್ಟಿಯಲ್ಲಿ ಇಟ್ಟು ಹೋದೆಯಲ್ಲ...

ಸಾಕುಬಿಡು ಇನ್ನೂ... ತೋರದಿರು
ಆ ಹುಸಿ ನಗುವನು...
ಕೆನ್ನೆಯ ಚೂಟಿ ತೊಟ್ಟಿಲು ತೂಗುವರಲ್ಲ...
ಹೃದಯವ ತೋಡಿ ನೀ... ನಗುತಿರುವೆಯಲ್ಲ..

ನಗುವಿನಾ ಸಂಪತ್ತು

ಸಂತೆಯ ಹೂವಾಡಗಿತ್ತಿಯ
ಪುಟ್ಟಿಯಲ್ಲಿ ಘಮ್ಮೆಂದು
ಮಲಗಿದೆ ಮಲ್ಲಿಗೆಯು..

ಸದ್ದು ಗದ್ದಲದೊಳು.. ಧೂಳು
ಉರಿ ಬಿಸಿಲೊಳು ಅದರ ಮತ್ತು..
ನಿನ್ನ ನಗುವ ಮಲ್ಲಿಗೆಯ ನೆನಪಿಸಿ
ಮನಸಿನ ತುಂಬಾ.. ತುಂಬಿತಲ್ಲೆ..
ನಗುವಿನಾ.... ಸಂಪತ್ತು..

Thursday, June 1, 2017

ಗುದ್ದಾಟ

ಮತ್ತದೆ ನೆನಪುಗಳು...

ಬಾಗಿಲ ಸಂದಿಯಿಂದ
ಬಗ್ಗಿ.. ಬಗ್ಗಿ.. ನೋಡುವ ಕಳ್ಳಿಯಂತೆ
ಏನೇ... ಕೊಟ್ಟರು ಹಿತವೆನಿಸದೆ ಮರಳಿ
ಕಾಡಿ... ಬೇಡಿ...ಬರುವ ಮಳ್ಳಿಯಂತೆ

ನನ್ನ ಸುತ್ತಲೆ ಸುಳಿದಾಡಿತಿವೆ..

ಸಹವಾಸವೇ.. ಸಾಕೆಂದು ಎದೆಯ
ಬಾಗಿಲ ಮುಚ್ಚಿ ಬೀಗ ಜಡಿದರೂ
ಇರುಳ ನಿದಿರೆಯ ಕಿಟಕಿಯ ಮೂಲಕ
ಮತ್ತೆ... ಮತ್ತೆ.... ಹರಿದು ಬರುವೆ

ಏಕೆ ನಿಮ್ಮಲಿ ಇಷ್ಟೊಂದು ಛಲ
ಅವಳ ನೆನಪುಗಳ ನೆನಪಿಸುವ ಹಂಬಲ
ತುಂಬಬಾರದೆ ಮನಕ್ಕೊಂದಿಷ್ಟು
ಅವಳ ವಿರಹ ಮರೆಸುವ ಬಲ

ನೀಲ ಬಾನ ತುಂಬ ಬರೀ..
ಕರಿಮೋಡಗಳ ಆರ್ಭಟವೇ....
ನನ್ನೆದೆಯ ಬಯಲು ತುಂಬ ಬರೀ..
ನಿನ್ನ ನೆನಪಗಳ ಗುದ್ದಾಟವೇ....

ಹಗಲಿರುಳು

ನನ್ನೆದೆಯ ತೀರದಲಿ
ನಿನ್ನೊಲವ ಬಯಸಿ
ಮಲಗಿರುವಾ....ಮನದ ಮರಳು
ಅಷ್ಟಿಷ್ಟೆ..ಅಪ್ಪಿ.. ಅಪ್ಪಿ ಪ್ರೀತಿಯ
ಅಲೆಗಳಂತೆ ಮರಳುವೆ ಏಕೆ...
ಮುಳುಗಿಸಿಬಿಡು ನನ್ನನೊಮ್ಮೆ
ನಿನ್ನೊಲವ ಸುಧೆಯಲಿ...
ನೆನೆ ನೆನೆದು ಮೆತ್ತಗಾಗಲಿ
ಮನಸಿನಾ.... ತೀರವು
ಹಗಲಿರುಳು..