Tuesday, June 6, 2017

ಹೃದಯವ ಹೂವಂತೆ

ನಿನ್ನ ಕಣ್ಣ ಕಾಂತಿಗೆ
ತೋಟದೆದೆಯಲ್ಲಿ ಮೊಗ್ಗುಗಳು
ಅರಳದೆ ಕುಳಿತಿವೆ
ಅವುಗಳಿಗೆ..
ಒಲವ ಸುಧೆಯ ತುಂಬಿ
ಪ್ರೇಮ ಸುಮವ ಅರಳಿಸಿ
ಪ್ರೀತಿಯ ಸುಗಂಧವ ಸೂಸಿ
ಅರಳಿಸಲಾರೆಯಾ ಈ
ಹೃದಯವ ಹೂವಂತೆ...

ಕವನ ವೇದನೆ

ಸೋತು ಸೊರಗಿವೆ ಬರೆದಿಟ್ಟ ಕವನಗಳು
ಓದುಗರ ಮೆಚ್ಚುಗೆಗಳಿಲ್ಲದೆ ನರಳುತಿವೆ ಸಾಲುಗಳು
ಪ್ರಕಟಗೊಳ್ಳದೆ ಧೂಳು ತಿನ್ನುತ್ತ.. ಗೆದ್ದಿಲುಗಳಿಗೆ
ಆಹಾರವಾಗುತ್ತ.. ಮನೆಯ ಅಟ್ಟವನೇರಿ...
ಭಾವಗಳು ತುಂಬಿಯೂ.. ಸತ್ತಂತೆ ಮಲಗಿರುವ
ಹಾಳೆಗಳು
ಇವೆಲ್ಲವುಗಳ ವೇದನೆ.. ರೋಧನೆಯ ಕಂಡು
ಲೇಖನಿಯು ಮೌನವಾಗಿಬಿಟ್ಟಿದೆ.. ಅದರ
ಒಡಲು ಆಗಿದೆ ಅತ್ತು ಅತ್ತು ಬರಿದಾದ ಕಂಗಳು..

ಕಟ್ಟಿದ ಕಟ್ಟಡಗಳಲ್ಲಿ ಸಾಹಿತ್ಯವಿಲ್ಲ
ರಾಜಕೀಯದ ವಾಸನೆಯೆ ಹರಡಿದೆ ಎಲ್ಲ
ಸಂಜೆಯಾದರೆ.. ಕುಡುಕರಿಂದ ತುಂಬುವುದು
ಸಾಹಿತ್ಯ ಕಟ್ಟಡದ ಅಂಗಳವೆಲ್ಲ..
ಕಾರಣ ಪ್ರಜ್ಞಾವಂತರಾರೂ ಮನೆಯ
ಬಾಗಿಲು ದಾಟಿ ಬರುವುದಿಲ್ಲ...
ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ... ಒಬ್ಬರ
ಕಂಡರೆ ಒಬ್ಬರು ಹಾವು ಮುಂಗುಸಿಯಂತೆ
ಕಚ್ಚಾಡುವರಲ್ಲ
ಇವರಿಗೂ ರಾಜಕೀಯದ ಆಡಳಿತಾಶ್ರಯ ಬೇಕಲ್ಲ
ಬೇಕಾದವರು ಬೇಕಾದಂತೆ.. ಬೇಡವಾದವರು
ಬೇಡವಾದಂತೆ ಬರೆಯುವರಲ್ಲ
ಸತ್ಯವ ಹೆಕ್ಕಿ ತೆಗೆಯುವವನ ಬೆನ್ನು ತಟ್ಟದೆ
ಚೂರಿಯನಿರಿಯುವರಲ್ಲ

ಅಯ್ಯೋ... ಸಾಹಿತ್ಯಕ್ಕೂ ಅಂಟುಕೊಂಡಿದೆಯಲ್ಲ
ಜಾತಿಯ ನಂಟು
ಸವಿಯುವವರೆ ಇಲ್ಲವಾಗಿದ್ದಾರೆ ಎಲ್ಲ ಪ್ರಕಾರದ
ಸಾಹಿತ್ಯದ ಕರದಂಟು
ಇವರಿಗೆ ಕುವೆಂಪು... ಅವರಿಗೆ ಬೇಂದ್ರೆ.. ಒಬ್ಬರಿಗೆ
ಬೀchi ಮತ್ತೊಬ್ಬರಿಗೆ ಮಾಸ್ತಿ... ನಮ್ಮದು ದಲಿತ ಸಾಹಿತ್ಯ
ಕೇಳುವರು ನನ್ನನು ನೀವು...? ನಂದೆ..? ಉತ್ತರ...
ಕಸ್ತೂರಿ ಕನ್ನಡ ಸಾಹಿತ್ಯ
ಜಾತಿಯ ತೊಡೆಯುವ ಅಕ್ಷರಗಳಿಗೆ... ಜಾತಿಯ ಲೇಖಕರು
ತೊಡೆಸುವರು ಮತಾಂಧತೆಯ ಸಂಕೋಲೆಯ

ಜಾತಿ... ರಾಜಕೀಯ.. ಅಹಂ
ಇವು ಮೂರು ಬಿಡದೊಡೆ ಕನ್ನಡ ಸಾಹಿತ್ಯ
ಪರಂಪರೆಗೆ ಉಳಿಗಾಲವಿಲ್ಲ... ಒಂದು ಪ್ರಾತ್ಯಕ್ಷಿತೆಗೆ
೧೨ ನೇ ಶತಮಾನದಲ್ಲಿ ಬಸವಣ್ಣ ಜಾತಿಯನಳಿಸಿ
ಅಕ್ಷರ ಕ್ರಾಂತಿಗಾಗಿ ಹೋರಾಡಿದವನು.. ಬದುಕ
ಕನ್ನಡಿಗೆ ವಚನಗಳ ಬೆಟ್ಟವನೆ ಕಟ್ಟಿ ಕೊಟ್ಟವನು
ಇಂದು.. ಅಣ್ಣನನೇ ಬಿಟ್ಟು ತಮ್ಮ ಜಾತಿಯ ವಚನಕಾರರ
ಹಿಡಿದು.. ಅವರ ವಚನಗಳ ತೊರೆದು.. ಕೇವಲ
ಒಣಪ್ರತಿಷ್ಠೆಗಾಗಿ ಜಯಂತಿಗಳ ಆಚರಿಸುತ್ತಿರುವರಲ್ಲ
ಅದು ಸರಕಾರಿ ಖರ್ಚಿನಲ್ಲಿ ಲಕ್ಷ ಲಕ್ಷಗಟ್ಟಲೆ...
ಬೇರೊಬ್ಬ ಜಾತಿಯರು ದುಡಿದು ತುಂಬಿದ ತೆರಿಗೆಯಿಂದ...

ತೊರೆದು ಹೋದೆಯಲ್ಲ

ಪ್ರೀತಿಯಲಿ
ನೀನೇನೊ
ನನ್ನೆದೆಯ ಮಧುವ
ಹೀರಿ ಹೋದೆ...
ಮರಳಿ ಬಾರದೆ
ಹೋದ ನಿನ್ನನು
ನೆನೆ ನೆನೆದು ನಾ
ಈ ಪ್ರೀತಿಯಲಿ
ಬಾಡಿ ಹೋದೆ...

ಪ್ರೇಮದ ಗುಲಾಬಿ

ನಾ ಕೊಟ್ಟ ಪ್ರೇಮದ ಗುಲಾಬಿ ತೊರೆದು
ಒಲವ ಎಸಳುಗಳನೆಲ್ಲವ ಹರಿದು
ಉಳಿದ ಮುಳ್ಳಿನ ಕಡ್ಡಿಯ ನನ್ನೇದೆಗೆ ಇರಿದು
ಹೊರಟು ಹೋದೆಯಲ್ಲ.. ಮರು ಮಾತನಾಡದೆ
ನನ್ನನು ತೊರೆದು

Sunday, June 4, 2017

ನಾನು ಮರ

ನಾನು ಮರ...
ಇಂದು ನನ್ನ ಜನ್ಮ ದಿನದ ದಿನಾಚರಣೆಯಂತೆ
ಹುಲು ಮಾನವರು ನಿಗದಿ ಪಡಿಸಿದ್ದಾರಂತೆ
ನಿನ್ನೆಯಷ್ಟೆ ಕಡೆದು ಹಾಕಿದ ನನ್ನ ಕೊರಡಿನ
ಮೇಲೆ ಕುಳಿತ ಈ ವಿಸ್ಮಯ ಲೋಕದ ಜನರು
ವಿಮರ್ಶಾತ್ಮಕವಾಗಿ ಮಾತನಾಡುತ್ತಿದ್ದರು....

ಮರಗಳನ್ನು ಕಡೆದರೆ ಭೂಮಿಯ ಉಷ್ಣತೆ
ಏರುತ್ತದಂತೆ... ಉಸಿರಾಡುವ ಉಸಿರಾಟಕ್ಕೆ
ತೊಂದರೆಯಾಗುತ್ತದಂತೆ.. ಪಕ್ಷಿ ಸಂಕುಲವು
ವಿನಾಶದ ಅಳಿವಿಗೆ ಬಂದಿದೆಯಂತೆ... ಹಸಿರು
ಮನೆ ಪರಿಣಾಮವಾಗುತ್ತಿದೆಯಂತೆ.. ಸೂರ್ಯನ
ಅತೀ ನೇರಳಾತೀತ ಕಿರಣಗಳು ನಮ್ಮ ಸುಕೋಮಲ
ಚರ್ಮವನ್ನು ಕಪ್ಪಾಗಿಸುವದಂತೆ.. ಓಜೋನ್ ಪದರವು
ತೆಳುವಾಗಿ ಹರಿದು ಸೂರ್ಯನ ನೇರವಾದ ರಶ್ಮಿಗಳಿಗೆ
ಚರ್ಮದ ಕ್ಯಾನ್ಸರ್ ಬರುವುದಂತೆ... ಮಣ್ಣಿನ ಫಲವತ್ತತೆ
ಕಡಿಮೆಯಾಗುತ್ತದಂತೆ.. ಮಣ್ಣಿನ ಸವಕಳಿ.. ಬೆಟ್ಟ ಗುಡ್ಡಗಳ
ಕುಸಿತವುಂಟಾಗುತ್ತದಂತೆ.. ಪರ ಊರಿನಿಂದ ಬಂದವರಿಗೆ
ದಣಿವಾರಿಸಿಕೊಳ್ಳಲು ನೆರಳಾಗುತ್ತದಂತೆ.. ಹೀಗೆ ಕಂತೆ
ಕಂತೆಗಳ ಲೆಕ್ಕಗಳನ್ನಿಟ್ಟರು.. ಆಗ ನನಗನ್ನಿಸಿತು..
ಇವರೊಂದಿಗಷ್ಟೆ ಮಾತನಾಡಲಾದರೂ... ಆ ದೇವರು
ಅರೆ ಘಳಿಗೆಯ ಹೊತ್ತಿಗಾದರೂ ಬಾಯಿಯನ್ನು ಕೊಟ್ಟಿದ್ದರೆ
ಕೇಳಬೇಕೆನಿಸಿತ್ತು ಈ ಮಾತುಗಳ..

ಕಡೆದು ಹಾಕುವ ಮುನ್ನ ಯೋಚಿಸಲಿಲ್ಲವೇಕೆ...
ಹಬ್ಬ ಹರಿದಿನಗಳಲ್ಲಿ ನನ್ನ ರೆಂಬೆಗೆ ಹಗ್ಗವ ಕಟ್ಟಿ
ಜೀಗಿದ ಜೋಕಾಲಿಯು ನೆನಪಾಗಲಿಲ್ಲವೆ..
ಬಾಲ್ಯದಲಿ ನಿಮ್ಮೆಲ್ಲ ಸ್ನೇಹಿತರೊಡಗೂಡಿ ನನ್ನ
ಮೈ ತುಂಬ ಮಂಗಗಳಿಗಿಂತಲೂ ಹೆಚ್ಚಾಗಿ ಹತ್ತಿ ಹಾರಾಡಿ
ನನ್ನ ರೆಂಬೆಗಳ‌ ಮುರಿದದ್ದು.. ಎಲೆಗಳ ಹರಿದು ಕೇಕೆ
ಹಾಕಿ ನಕ್ಕದ್ದು ನೆನಪಿಲ್ಲವೆ...
ಸೊಂಪು ಸೊಂಪಾಗಿ.. ಗುಂಪು ಗುಂಪಾಗಿ ಇಳೆಬಿದ್ದ
ನನ್ನ ಹಣ್ಣುಗಳಿಗೆ..ಕಲ್ಲೆಟಿನ ರುಚಿಯ ನನಗೆ ತೋರಿಸಿ
ನೀವು ಮಾತ್ರ ಹಣ್ಣಿನ ಸವಿಯ ಸವೆದದ್ದು ಮರೆತಿರೆ...
ಬಾಲ್ಯದಲಿ ನಿಮ್ಮಜ್ಜ/ಜ್ಜಿಯ ಜೊತೆ ಬಂದು ಇಲ್ಲಿ
ನೆರಳಲಿ ಕುಳಿತಾಗ ನಿಮಗೆ ಸೊಂಪಾದ ಗಾಳಿಯ
ಬೀಸಿ ಮಲಗಿಸಿದ್ದು...
ಹರೆಯದಲಿ ನಿಮ್ಮ ತುಂಟಾಟಗಳಿಗೆ.. ಆ ನಿಮ್ಮ
ಪ್ರಿಯತಮ/ಳನು ಕರೆದು ತಂದು ನನ್ನ ಮಡಿಲಲಿ
ಮಾಡಿದ ಪವಿತ್ರ ಅಪವಿತ್ರ ಕೆಲಸಗಳಿಗೆ ಜೊತೆಯಾದದ್ದು...
ನಿಮ್ಮ ಮುಸ್ಸಂಜೆ ವಯಸ್ಸಿನಲ್ಲಿ... ನನ್ನ ನೆರಳಿನ ಕಟ್ಟಿಯ
ಮೇಲೆ ಕುಳಿತು ಹಡೆದ ಮಕ್ಕಳು ಕೊಟ್ಟ ನೋವನು
ನೆನೆದು ಕಣ್ಣೀರಿಟ್ಟ ಕಟ್ಟೆಯಿದು... ಇದಾವುದು ಮನಸಲಿ
ಮೂಡಲಿಲ್ಲವೆ...ಆ ಸುಡುವ ರವಿಯ ಝಳಕ್ಕೆ ನನ್ನ
ನೆರಳು ನೆನಪಾಗಲಿಲ್ಲವೆ..?
ಹೋಗಲಿ ಬಿಡಿ... ಸರಿ ನನ್ನ ಕಡೆದದ್ದಾರೂ ಏಕೆ?

ಅವರೆ ಹೇಳುತ್ತಾರೆ...
ರಸ್ತೆಗೆ ಅಡ್ಡವಾಗಿರುವೆನಂತೆ... ನಾ ಬೀಸುವ ಗಾಳಿಗೆ
ವಿದ್ಯುತ್ ತಂತಿಗಳು ಹರಿದು ಬೀಳುತ್ತವಂತೆ.. ಇಲ್ಲೊಂದು
ವಿಶಾಲವಾದ ಉದ್ದವಾದ ಕರಿ ಹೆಬ್ಬಾವೊಂದು ಹಾದು ಹೋಗಲಿದೆಯಂತೆ... ಒಂದು ಸುಂದರ ಸುಸಜ್ಜಿತ ಮಹಲನ್ನು
ಕಟ್ಟುವರಂತೆ.. ನೀರು ಸಂಗ್ರಹಕ್ಕೆ.. ಉರುವಲಿಕ್ಕೆ... ಅದಕ್ಕೆ
ಇದಕ್ಕೆ ಅಬ್ಬಬ್ಬಾ ನನ್ನ ವಧೆಗೆ ಅದೇಷ್ಟೊಂದು ಕಾರಣಗಳು..

ನರರೇ...
ನಾನು ನಿಮ್ಮ ಮುತ್ತಾತನ ಆಸ್ತಿ ಕಣ್ರೋ... ಮುಂದೆ
ನಮ್ಮ ಮಕ್ಕಳು ಮೊಮ್ಮಕ್ಕಳು ಆಡಿ ನಲಿದಾಡಲಿ
ಸ್ವಚ್ಛವಾದ ಗಾಳಿಯನ್ನು ಉಸಿರಾಡಲೆಂದು... ಸಧೃಢವಾದ
ಆರೋಗ್ಯವಾದ ಸಮಾಜ ತಲೆ ಎತ್ತಲೆಂದು... ಊರ
ಮಧ್ಯದಲಿ ನನ್ನ ನೆಟ್ಟು ಕಟ್ಟೆಯ ಕಟ್ಟಿದರು.. ಇದನರೀಯದ
ದನದಾಹಿಗಳಾದ ನೀವು ನನ್ನ ಕಡೆದು ಕಟ್ಟೆಯ ಒಡೆದು
ಸಮಾಧಿಯ ಕಟ್ಟಿದೀರಿ.. ನಿಮ್ಮ ಕರುಳ ಕುಡಿಗಳಿಗೆ
ವಿಷಾನಿಲದ ಗುಂಡಿಯ ತೋಡುತ್ತಿರುವಿರಿ...
ಎಚ್ಚೆತ್ತುಕೊಳ್ಳಿ...ಕಾದು ಕಾದು ಬೆಂಕಿಯುಂಡೆಯಾದ  ಭೂ ಒಡಲಿನ ಬೆಂಕಿ ಉಕ್ಕಿ ನಿಮ್ಮೆಲ್ಲರ ಆಹುತಿಯ ಪಡೆಯುವ
ಮುನ್ನ...

Saturday, June 3, 2017

ಮಂಗಳಮುಖಿ

ನಾನಾಗೀಯೆ.. ಆದೇನೆ ಮಂಗಳಮುಖಿ
ಬಯಸಿ ಬಯಸಿ ಪಡೆದನೆ ಬದುಕಿನ ಕಹಿ

ಎಷ್ಟು ದುಃಖವಾಗಿರಬಹುದು... ಎಷ್ಟು ಸಂಕಟಗಳ
ಉಂಡಿರಬಹುದು.. ಅದೇಷ್ಟು ನೋವುಗಳ ಸಹಿಸಿಕೊಂಡಿರಬಹುದು.....ಎಷ್ಟೇಷ್ಟೊ ಹೆತ್ತೊಡಲಿನ ಸಾವಿರ
ಕನಸುಗಳು ಕಮರಿರಬಹುದು....ಅವ್ವನ ನೂರಾರು
ಕನಸುಗಳು ಕನವರಿಸಿ...ಕಮರಿ....ಕರಗಿರಬಹುದು
ಹೇಗೆ ಸಹಿಸಬಲ್ಲಳೊ ಹಡೆದವ್ವ.. ಹುಟ್ಟಿದಾಗಿನಿಂದ
ಗಂಡು ಗಂಡೆಂದು.. ಮೀಸೆ ಬಾರದ ಮುಖಕ್ಕೆ ಕಾಡಿಗೆ
ಯಲೆ.. ತಿಡಿ.. ತಿಡಿ.. ನನ್ನಂಗಳದ ಸರದಾರ ಎಂದು
ಎದೆಯುಬ್ಬಿಸಿ ನಡೆಯುತ್ತಿದ್ದ ತಾಯಿಗೆ ಎಂತಹ ಶಿಕ್ಷೆಯ
ಕೊಟ್ಟುಬಿಟ್ಟೆ ಶಿವನೆ...

ಹರೆಯಕ್ಕೆ ಬಂದವನು ಅವನಲ್ಲ... ಅವಳು.. ಅಂತಾದರೆ?
ಅವಳಾದರೂ ಪರವಾಗಿಲ್ಲ.. ಅವನು ಇಲ್ಲ....ಇವಳು ಇಲ್ಲ...
ಎಂದಾದರೆ ಹೆತ್ತೊಡಲು ಯಾರ ಮುಂದೆ ತನ್ನ ನೋವ
ಹೇಳಿಕೊಂಡಾಳು.. ನನ್ನೀ.. ರೂಪದ ಬೆಟ್ಟದ ಕಷ್ಟವ
ಇನ್ನಾವ ದೇವ ಮಂದಿರಲಿ ತೋಡಿ... ತೋಡಿ...ಅತ್ತಾಳು
ಆ ಕಲ್ಲು ಗುಡಿಯೊಳಗಿನ ಕಲ್ಲು ದೇವರು.. ನನ್ನನು ಜೀವ
ತುಂಬಿದ ಕಲ್ಲನ್ನಾಗಿ ಮಾಡಿಬಿಟ್ಟನಲ್ಲ...

ಗಂಡಸಿನ ರೂಪವ ಹೊಂದಿದ್ದರು ನನ್ನಲೇಕೆ ಅವಳ
ಭಾವವ ತುಂಬಿದೆ... ಅವಳ ಬಣ್ಣ ಶೃಂಗಾರದ ಸಾಧನಗಳು ಉಡುಗೆ-ತೊಡುಗೆಯ ತೊಟ್ಟ ಮಾತ್ರಕೆ ನಾನಾಗಿಬಿಡುವೇನೆ ಕನ್ಯೆ ?  ಹೆಣ್ಣನುಭವಿಸುವ ಎಲ್ಲ ಸೌಭಾಗ್ಯಗಳ ಅನುಭವಿಸಲಾದಿತೆ? ನಲ್ಲನ ತೋಳಲಿ ಬಂಧಿಯಾಗಬಲ್ಲೇನೆ ? ಗಂಡನ ಮನೆಯ ಹೊಸ್ತಿಲ ತುಳಿಯಬಲ್ಲೇನೆ.. ?
ಅವನ ಕಾಮದ ತಾಪಕ್ಕೆರಡು ಮಕ್ಕಳ ಹೊರಲಾದಿತೆ... ಹೇರಲಾದಿತೆ ?

ಗಂಡನ ಮನೆಯು ಹೋಗಲಿ.. ಈ ಸಮಾಜ ನನ್ನನೊಪ್ಪಿಕೊಳ್ಳುವುದೆ..? ನಾಲ್ಕು ಜನರ ಹಾಗೆ ಬದುಕಲು ಬಿಡುವುದೆ? ಒಂದಿಷ್ಟು ಸವಿ ಮಾತುಗಳನಾಡಿ ಹತ್ತಿರ ಬರಮಾಡಿಕೊಳ್ಳುವರೆ ? ಮನೆಗೆ ಕರೆಯುವರೆ.. ಕಾರಣಕ್ಕೆ ಕರೆಯುವರೆ.. ಊರ ಜಾತ್ರೆಗೆ ಕರೆಯುವರೆ... ಮದುವೆ
ಮುಂಜಿಗೆ ಕರೆಯುವರೆ.. ಹುಟ್ಟಿದ ಸತ್ತ ಕಾರ್ಯಗಳಿಗೆ ಕರೆಯುವರೆ.. ಎಲ್ಲರಂತೆ ನೀನೊಬ್ಬ/ಳು ಅಂತ ಭಾವಿಸುವರೆ..
ಮನದ ಮಾತುಗಳ ಕೇಳುವರೆ.. ನನ್ನಲೊಂದು ಮನಸಿದೆ ಎಂಬುದ ಅರಿಯುವರೆ.. ಚುಚ್ಚು ಮಾತುಗಳಿಗೆ ಮನವು
ನೊಂದಿಕೊಳ್ಳುವುದೆಂಬುದನು ಅರಿಯುವರೆ...? ???????

ನೋಡಿದೆಯಾ ದೇವರೆ.. ಬದುಕಲ್ಲಿ ಬರೀ ಉತ್ತರ ಸಿಗದ
ಪ್ರಶ್ನೆಗಳ ಮೂಟೆಯನ್ನೆ ಕೊಟ್ಟು ಕಳಿಸಿಬಿಟ್ಟಿರುವೆಯಲ್ಲಾ...
ಈ ಬದುಕಿನ ಜಂಜಾಟವ ಹೇಗೆ ದಾಟಿ ಬರಲಿ..
ಹಡೆದ ಒಡಲಿಗೆ ಯಾವ ಧೈರ್ಯವ ತುಂಬಲಿ..
ಕಣ್ಣೀದ್ದು ಕುರುಡವಾಗಿರುವ ಈ ಸಮಾಜದಲಿ..
ಹುಟ್ಟಿಸಿದ ದೇವರೆ ಬದುಕಿಗೆ ಮೋಸವ ಮಾಡಿರುವಾಗ
ನಾ...ಯಾರನ್ನು ನಂಬಲಿ..
ಏನಂಥ... ಬಾಳಲಿ...

ಗೆಳತಿ

ಗೆಳತಿ
ನಿನ್ನ ಕುಡಿ ನೋಟದ ನೋಟಕೆ ಸೋತ
ಎದೆಯಿದು ಕೂಗುತಿದೆ ನಿನ್ನ ಹೆಸರನೆ
ಬಾರಿ.... ಬಾರಿ...

ಎಡಗಾಲೊ... ಬಲಗಾಲೊ....
ಯಾವುದಾದರೊಂದು ಹೆಜ್ಜೆಯನಿಟ್ಟು
ಬರಬಾರದೆ ಬರದೆದೆಗೆ ದಯತೋರಿ...