Wednesday, August 2, 2017

ಮೊದಲೆ

ನಿನ್ನ ಮನದ ಮೂಲೆಯಲಿ
ನಮ್ಮೊಲವಿನ ಕುರುಹುವಾಗಿ
ಒಂದೆ ಒಂದು ಹಣ್ಣೇಲೆಯಷ್ಟು
ನೆನಪಿದ್ದರೂ....
ಬಂದು ಬಿಡು ಗೆಳತಿ
ನಿನ್ನ ಪ್ರೀತಿಯ ಚಿಗುರು
ವಿರಹಿಗಳ ಹಾದಿಯ ಗೊಬ್ಬರ
ವಾಗುವ ಮೊದಲೆ..

ಮಣ್ಣಾಗುವಾಸೆ

ಸತ್ತರೂ ಮಣ್ಣಾಗುವಾಸೆ
ಮಣ್ಣಲ್ಲಲ್ಲ ನಿನ್ನ ಮನದಲ್ಲಿ....
ಎಂದೆಂದೂ ಜೊತೆಯಾಗಿರುವ
ಆಸೆ ಬಾಳಿನಲ್ಲದಿದ್ದರೂ...ನೀ
ಬರೆಯುವ ಪದಗಳಾಗಿ ಮೂಡುವಾಸೆ

ನಲ್ಲ... ಗಲ್ಲ ೪೩೪

ಮುದುಡಿದ ಮೊಗವನೊಮ್ಮೆ
ಅರಳಿಸಿಬಿಡು... ನಿನಗಿದು ತರವಲ್ಲ
ಪೂರ್ಣ ಚಂದ್ರನು ಕರಗುವನಲ್ಲ
ಕರಗಿ ಮತ್ತೆ ಮರುಳದೆ ಇರುವವನಲ್ಲ
ಹಾಗೆಯೆ ಬರುವನು ನಿನ್ನ ನಲ್ಲ
ಸೆಡವು ಮರೆಸಿ ಮುತ್ತನಿಟ್ಟು ಕೆಂಪಗಾಗಿಸುವ
ನಿನ್ನ ಗಲ್ಲ..

ಒಳಗಣ್ಣು

ನನ್ನ ಬಾಳಿಗೆ ಕೊಳ್ಳಿಯಿಟ್ಟು
ಹೋದವಳು ಅದೆ ಹೆಣ್ಣು..
ಇನ್ನೊಬ್ಬನ ಮನೆಯ ದೀಪವ
ಹೊತ್ತಿಸಿದವಳು ಅದೆ ಹೆಣ್ಣು..
ನನ್ನ ಬಾಳಿಗೆಂದು ಅವಳು
ಮರೆಯದ ಹುಣ್ಣು..
ಅವನ ಬಾಳಿನ ಹಾದಿಯುದ್ಧಕ್ಕೂ
ದಾರಿ ತೋರುವ ಕಣ್ಣು..

ಹೇಳಿದ್ದೆ ಅಲ್ಲಿಗೆ ಹೋದ
ಮೇಲಾದರೂ ಕರೆ ಮಾಡೆಂದು
ಅರಿವಾಯಿತು ಅವಳು ಈಗ
ಇನ್ನೊಬ್ಬರ ಸ್ವತ್ತೆಂದು
ಬೇಡಿದೆ ದೇವರಲಿ ಮರೆಯಿಸು
ಅವಳ ಪ್ರೀತಿಯ ಕಲೆಯನು
ಹೆತ್ತವರ ನೆನೆದು ಹೊಸ ಬಾಳಿನತ್ತ
ಹೆಜ್ಜೆಯನಿಟ್ಟೆ ತೆರೆದು ಒಳಗಣ್ಣನು

ಬಂಗಾರದ ಪುಟಗಳು

ನೆನಪಿಟ್ಟುಕೊಳ್ಳಲೇನು ನೀನು ನೆನಪೆ
ಬರೆದಿಟ್ಟುಕೊಳ್ಳಲು ಬಿಳಿ ಹಾಳೆಯೆ
ಅವಿತಿಟ್ಟುಕೊಳ್ಳಲು ಕೈಗೆ ಸಿಗದಂತಹ ಕಳ್ಳನೆ
ಸ್ವೀಕರಿಸುವುದೇನಿದೆ ಒಲವೆ.. ನೀನೆ ನನ್ನ
ಎದೆಯರಮನೆಯ ಒಡತಿಯಾಗಿರುವಾಗ

ಪ್ರೇಮಸಾಗರದಲೆಗಳಾಗಿ ಒಲವ
ತೀರದಲಿ ಅಷ್ಟಿಷ್ಟು ಅಪ್ಪಿ... ತಬ್ಬಿ... ಇಂಗೋಣ
ಬದುಕಿನ ಬರಡು ಬಯಲಿನಲಿ
ಜೊತೆಯಾಗಿ ಜೇನ ಮಳೆಯ ಸುರಿಸೋಣ

ಕರೆದೊಯ್ಯುವೆ ಬಾಳಿನುದ್ಧಕೂ
ನೋವಿನ ಕಿರಣಗಳು ನಿನಗೆ ಸೋಕದಂತೆ
ಕಾಪಾಡುವೆನೆಂದೆಂದು ಮೊಗದ ಮೇಲಿನ
ನಗು ಮಲ್ಲಿಗೆ ಬಾಡದಂತೆ...

ಜೊತೆಯಿದ್ದರೆ ನೀನು ಬದುಕಿನ
ಬೆಟ್ಟವದು ಕಾಲಡಿ ಹುಲ್ಲಾಗುವುದು
ಬಾಳ ಸಾಗರವದು ಈಜಿ ದಾಟಲು
ಹಳ್ಳವಾಗುವುದು..
ನಿನ್ನೊಡಗಿನ ಕಳೆದ ದಿನಗಳು
ಬಂಗಾರದ ಪುಟಗಳಾಗುವವು
ಬಂಗಾರದ ಪುಟಗಳಾಗುವವು

Tuesday, August 1, 2017

ಕಳ್ಳಿ ಮಳ್ಳಿ

ನಿನ್ನ ಮನದ ಮಾತುಗಳನೆಲ್ಲವ
ಬಲ್ಲವನು ನಾನು..
ಆದರೂ ನನ್ನೆದುರು ನಿನ್ನೆದೆಯ
ಮಾತುಗಳ ಹೇಳಲೊಲ್ಲೆ
ಮಳ್ಳಿ ಕಣೆ ನೀನು.. ನನ್ನ ಹೃದಯ
ಕದ್ದ ಕಳ್ಳಿ ನೀನು..

ಮುಖವಾಡಗಳು ಮತ್ತು ನಾನು

ಎಷ್ಟೇಂದು ಧರಿಸಲಿ  ಮುಖವಾಡಗಳನು
ಕಳೆದುಕೊಂಡಿರುವೆನಲ್ಲ ಇವುಗಳೊಡಗೂಡಿ
ನನ್ನತನವನು....
ಮರೆಮಾಚಿರುವೆನಲ್ಲ ಅದುಮಿ ಅದೇಷ್ಟೊ
ನೋವುಗಳನು....

ಪ್ರೀತಿಸಿದವನು ಕೈ ಕೊಟ್ಟಾಗ..ಮನಸ್ಸಿಲ್ಲದೆ
ಮನಸ್ಸಿನಿಂದ ಇನ್ನೊಬ್ಬನ ಕೈ ಹಿಡಿಯುವಾಗ
ನಗು ಮೊಗದ ಮುಖವಾಡವ ತೊಟ್ಟಿದ್ದೆ....
ಆ ಮುಖವಾಡದ ಹಿಂದೆ ನಾ ಸುರಿಸಿದ
ಸೋತ ಪ್ರೀತಿಯ ನೋವಿನ ಕಣ್ಣೀರಿನ
ರುಚಿ... ನನ್ನ ಸೀರೆ ಸೇರಗಂಚಿಗಷ್ಟೇ ಗೊತ್ತಿತ್ತು...

ಮನವಿಲ್ಲದೆ ಮಂಚವನೇರಿ ಮೈಯ
ಹಂಚಿಕೊಂಡರು.. ನಿನ್ನಿಂದಲೆ ಈ ಬಾಳಿಗೆ
ಬೆಳಕು.. ಇನ್ನೂ ಈ ಮುಖವಾಡವಾದರೂ ಏಕೆ
ಬೇಕೆನ್ನುವಷ್ಟರಲ್ಲಿ... ದಿನಗಳಳಿದಂತೆ..
ಮೊದಲುಗೊಂಡವಲ್ಲ ನಿನ್ನ ದುಶ್ಚಟದೆಟುಗಳು
ನನ್ನ ಮುದ್ದಿಸಿದ ಮೈ ಮೇಲೆಲ್ಲ ನರ್ತಿಸತೊಡಗಿದವಲ್ಲ
ಕಾಮದ ಹಸಿವನಿಂಗಿಸಿಕೊಂಡ ಕೈಗಳು...

ಇಲ್ಲಿಯೂ ಸೋತು... ಸಾಯಲು ತಯಾರಾಗಿ
ನಿಂತ ನನಗೆ ಮತ್ತೆ.. ಮತ್ತೆ.. ಆ ಹುಸಿ ನಗು
ಮೊಗದ ಮುಖವಾಡವನ್ನು ಧರಿಸಬೇಕಾಯಿತಲ್ಲ
ಹೆತ್ತ ಕರುಳಕುಡಿಗಳೆದುರಿಗೆ.. ನನ್ನೀ ನರಕಕ್ಕೆ
ಅರಿತರಿವಿಲ್ಲದೆಯೊ ದೂಡಿದ ಹೆತ್ತವರೆದುರಿಗೆ
ಬಾಳೊಂದು ಕಂಡವರ ಪಾಲಿಗೆ ನಗೆಪಾಟಲಾಗ
ದಿರಲೆಂಬ ಸಂಕಟಕೆ..

ಬದುಕಿದು ಬಾಳಿನಲ್ಲಿ ನಗುವನೊಂದನು
ಅರಳಿಸುತಿಲ್ಲ...
ಮುಖವಾಡವೊಂದನು ಕಳಚಿ...ನೆಮ್ಮದಿಯ
ನಿಟ್ಟುಸಿರನೊಂದ ಎಳದುಕೊಳ್ಳಲು....
ಅಳಿದುಳಿದ ದಿನಗಳು ಅನುಮತಿಯನ್ನೆ....
ನೀಡುತ್ತಿಲ್ಲ...
ದಿನ.. ದಿನಕ್ಕೂ... ಹೊತ್ತು.. ಹೊತ್ತಿಗೂ.. ಹೊಸ
ಹೊಸ ಮುಖವಾಡಗಳನೆ ಧರಿಸುವ ಸಂದರ್ಭಗಳು
ಮತ್ತೆ.... ಮತ್ತೆ... ಎದುರಾಗುತಿಹುವಲ್ಲ

ಏನು ಮಾಡಲಿ...? ಮುಖವಾಡಗಳೆ ಬದುಕಿ
ನಾಸರೆಯಾಗಿವೆಯಲ್ಲ..‌‌..
ಬದುಕಲೆ.....?