Wednesday, August 9, 2017

ಸ್ನೇಹಿತರು

ಸ್ನೇಹಿತರು.. ನಾವು ಸ್ನೇಹಿತರು
ಹೆಗಲಮೇಲೊಂದು.. ಹೆಗಲಿಗೆ ಕೈ ಹಾಕಿ
ಊರ ಬೀದಿ ಹೊಲಗದ್ದೆಗಳ ಉಳಿಸದೆ ಬಾಕಿ
ಹಾದಿಗೆದುರು ಬಿದ್ದವರ ಸೋಲಿನ ಪ್ರಪಾತಕೆ ನೂಕಿ
ಜಾತ್ರೆ ಜಪ್ಪಡಿಗಳಲ್ಲಿ ಕುಣಿದು ಕುಪ್ಪಳಿಸಿ ಕೇಕೆ ಹಾಕಿ
ರಜೆಯ ದಿನಗಳಲ್ಲಿ ಮಜೆಯ ಜೋಕಾಲಿಯ ಜೀಕಿ
ಬದುಕಿನೊಳಗೆ ವಿಸ್ಮಯದ ಕ್ಷಣಗಳ ಕೆತ್ತಿಡುವ ಶಿಲ್ಪಿಗಳು

ಸ್ನೇಹಿತರು... ನಾವು ಸ್ನೇಹಿತರು
ಪರೀಕ್ಷೆಯಲ್ಲಿ ಹಿಂದೆ ಬಿದ್ದವನಿಗೆ ಕಾಫಿ ತೋರಿಸಿ
ಬದುಕಲು ಬೇಕಾಗುವ ಪತ್ರಗಳ ಜಯಿಸಿ
ಜಿಂಕೆ ಕಂಗಳಿಗೆ ಸೋತವನನ್ನು ಬಲೆಯಲ್ಲಿ ಬಿಳಿಸಿ
ಅವನ ಪಾಲಿನ ಒದೆಗಳನ್ನು ನಾವಿಷ್ಟು ಅನುಭವಿಸಿ
ಭಾವನೆಗಳನರಿಯದ ವಾಸ್ತವಲೋಕವ ಎದುರಿಸಿ
ಕೋಮಲಾಂಗನೆಯ ಕೊರಳಿಗೆ ತಾಳಿಯ ಕಟ್ಟಿಸಿ
ಹೀಗೂ ಬದುಕಿ ಬಾಳಬಹುದೆಂಬುದನು ಹೇಳುವೆವು ಸೊಸಿ
ಬರಡಾದ ನೆಲದಲ್ಲೂ ಸಂಜೀವಿನಿಯನ್ನು ಬೆಳೆಯುವ
ಬೆಳೆಗಾರರು

ಸ್ನೇಹಿತರು... ನಾವು ಸ್ನೇಹಿತರು
ಗಾಡಿ ಗುದ್ದಿ ಬಿದ್ದವನಿಗೆ ಆಸ್ಪತ್ರೆಯಲ್ಲಿ ರಕ್ತವ ನೀಡಿ
ಅವನು ಬದುಕಿ ಬರಲೆಂದು ಸಾಮೂಹಿಕ ಪ್ರಾರ್ಥನೆ ಮಾಡಿ
ಕಿವಿಯ ಕೇಳದ ದೇವರು ಅವನ ಉಸಿರನ್ನು ಕಸಿದು
ಗಂಡನಿಲ್ಲದ ಕಷ್ಟಗಳ ಮೂಟೆಯ ಅವಳಿಗೆ ಹೊರೆಸಿ ನಿಲ್ಲಿಸಿಬಿಟ್ಟನು ಅವನ ಮನೆಯ ಗಾಡಿ..
ನಮ್ಮ ಸಂತೋಷದ ಗುಡಿಸಲಿಗೆ ಬೆಂಕಿಯನಿಟ್ಟು
ನಗುತಿರಬಹುದವನು ಹಾಡಿ ಹಾಡಿ
ಅವನೆ ಕೊಟ್ಟ ಬದುಕಿದು ಸೋಲೊಪ್ಪಿಕೊಳ್ಳುವೆವೆ..
ಗೊತ್ತಿರಲಿರ್ಕಿಕ್ಕಿಲ್ಲ ನಾವೆಂತ ಖಿಲಾಡಿ
ಅಪ್ಪಿದೆವು ನೀನೆ ಕೊಟ್ಟ ತಂಗಿಯೆಂದು ಹಾರಾಡಿ
ಹೊಸಬದುಕ ಕಟ್ಟಿಕೊಟ್ಟೆವು ಸಮಾಜದಲ್ಲಿ ಹೋರಾಡಿ
ಎಂತಹ ಕಷ್ಟಗಳ ಭಾರಕ್ಕೂ ಹೆದರದೆ ಸೋಲದಂತ
ಹೆಗಲುಗಳಿವು

ಸ್ನೇಹಿತರು... ನಾವು ಸ್ನೇಹಿತರು
ನಗುವೆವು... ಅಳುವೆವು... ಕಿತ್ತಾಡುವೆವು...
ಒಂದುಗೂಡುವೆವು... ಊರೂರು ಸುತ್ತುವೇವು
ಆಗದೆಂಬುದನೆಲ್ಲವ ಸಾಧಿಸಿ ತೋರಿಸುವೆವು
ಒಬ್ಬನೊಬ್ಬನ ಸಾಧನೆಗಳಿಗೆ ಮೆಟ್ಟಿಲಾಗುವ
ಸ್ನೇಹಿತರು.. ನಾವು ಸ್ನೇಹಿತರು

Tuesday, August 8, 2017

ಕೇಳೆ ನನ್ನೊಳೆ

ಕೇಳೆ ನನ್ನೊಳೆ..

ನೀನಿಲ್ಲದ ಈ ಏಕಾಂತದಲ್ಲಿ
ನಿನ್ನಯ ನೆನಪುಗಳ ನೆನೆದು
ಮೈ ಮರೆಯಬೇಕೆಂದಿದ್ದೆ..

ಏನು ಮಾಡಲಿ...
ನಿನ್ನಂತೆ ನಿನ್ನ ನೆನಪುಗಳು
ಮುನಿದು ಕೂತಿವೆ

ನಿನ್ನ ಮುನಿಸ ಮರೆತು
ಬಾಡಿದ ನೆನಪುಗಳಿಗೆ ನೀರೆರೆದು
ನಾಳೆಯ ಕನಸುಗಳಿಗೆ ಜೀವವ
ತುಂಬಲಾದರೂ ಬರಬಾರದೆ..

ಕೊಲ್ಲುವುದಾದರೆ

ಕೊಲ್ಲುವುದಾದರೆ ಕೊಂದುಬಿಡು
ಮಾತಿನ ತಿವಿತಗಳಿಂದ
ತಳ್ಳುವುದಾದರೆ ತಳ್ಳಿಬಿಡು ನಿನ್ನ ಹೆಸರ
ಹಿಡಿದು ಮತ್ತೆದ್ದು ಬಾರದ ಪ್ರಪಾತದಲಿ

ಕುಡಿಸುವುದಾದರೆ ಕುಡಿಸಿಬಿಡು
ಕಾರ್ಕೋಟವನು ಮಡಿಲಲಿ ಮಲಗಿಸಿಕೊಂಡು
ನಿಲ್ಲಿಸುವದಾದರೆ ನಿಲ್ಲಿಸಿಬಿಡು
ಈ ಉಸಿರನು ಮತ್ತುಸುರದಂತೆ

ನೀಡು ಜಗದ ನೋವುಗಳನೆಲ್ಲವ
ನನಗೆ ಭರಿಸುವೆ ಸಹಿಸುವೆ.... ನಲ್ಲೆ
ಒಂದೆ ಒಂದು ಹನಿ ನಿನ್ನ ಕಣ್ಣಿಂದ
ಜಾರಿದರೂ.. ಎದೆಯ ಬಡಿತವಿದು
ಮತ್ತೆ ಮಿಡಿಯದು

ನಿನ್ನ ಕಣ್ಣ ಬಿಂಬದಲ್ಲಿ ನನ್ನ ಬಿಂಬವೊಂದೆ
ತುಂಬಿರಬೇಕೆ ಹೊರತು ಕಣ್ಣೀರ ಕೊಳವದು
ಕಟ್ಟುವದು ತರವಲ್ಲ ನಾ ಸಹಿಸೊಲ್ಲ

ಮರೆತುಬಿಡು ನಾ ನಾಡಿದ ಮಾತುಗಳ
ಕೊಟ್ಟುಬಿಡು ಉಸಿರು ಬಿಡದೆ ಸವಿ ಮುತ್ತುಗಳ

Monday, August 7, 2017

ಶ್ರಾವಣದ ನೆನಪುಗಳು

ಬೇಡ ಬೇಡವೆಂದರೂ.. ಮತ್ತೆ ಮತ್ತೆ
ನೆನಪಾದವು ಶ್ರಾವಣದ ನೆನಪುಗಳು
ಮರಳಿ ಮರಳಿ ಕರೆದೊಯ್ದವು ಮನಸ್ಸನ್ನು
ಗತಕಾಲದಿ ಕಳೆದ ದಿನಗಳಿಗೆ...

ಜೋಡೆತ್ತಿನ ಬಂಡಿ.. ಎತ್ತುಗಳ ಕೊರಳಿಗೆ
ಕಟ್ಟಿದ ಗಂಟೆಗಳ ಘಳ ಘಳ ನಾದದಿ
ಸಾಗುತಿರಲು.. ಮುದ್ದು ಅಮ್ಮನ ಮಡಿಲಲಿ
ಕುಳಿತು.. ಸಾಲು ಸಾಲು ಬಸಿರು ಗಿಡದಲಿ
ಚಿಲಿಪಿಲಿಗುಟ್ಟುವ ಗಿಳಿ ಹಿಂಡುಗಳ ಕಾಣುತ
ಹಾದಿಯ ಪಕ್ಕದಿ ಬೆಳದ ಶೇಂಗಾ ಹೊಲದಲ್ಲಿ
ಸ್ವಚ್ಛಂದವಾಗಿ ವಿಹರಿಸುತ್ತಿರುವ ಕೊಕ್ಕರೆಗಳು
ಝುಳು ಝುಳೆಂದು ಹರೆಯುವ ಗಂಗಾಧರ
ಹಳ್ಳವ ಮೆಲ್ಲಗೆ ದಾಟಿಕೊಂಡು.... ಕಾಲಕಾಲೇಶ್ವರವ
ಪ್ರವೇಶಿಸಿದರೆ.. ಗುಡ್ಡಗಳ ಇಳಿಜಾರಿನಿಂದ ಸರಸರನೆ
ಹರಿದು ಹೋಗುವ ಹಾವಿನಂತೆ ಚಿಕ್ಕ ಹಳ್ಳವ ದಾಟಿ
ಬಲಕ್ಕೆ ಅಶ್ವತ್ಥ ಗಿಡದ ಕೆಳಗೆ ಬಂಡಿಯ ನಿಲ್ಲಿಸಿ
ಪೂಜೆಗೆಂದು ಎಲ್ಲರೂ ಹೊರಡುವರು..

ಅದೇಷ್ಟು ಗಾಢವಾಗಿ ಬೆಳೆದಿದ್ದವು ಮರಗಿಡಗಳು ಆ
ಮರಗಿಡಗಳ ತುಂಬಾ ಕೆಂಪು ಮಂಗಗಳು..‌.
ಬೆಟ್ಟವ ಹತ್ತಲು ಹೆದರಿಕೆಯಾಗುತ್ತಿತ್ತು ಕೈಯಲ್ಲಿರುವ ಪ್ರಸಾದಗಳನ್ನು ಅವುಗಳು ಕಿತ್ತುಕೊಂಡು ಹೋಗುವುದಕ್ಕೆ
ಹೇಗೊ ಅವರಿವರ ಬೆನ್ನ ಹಿಂದೊ ನಮ್ಮ ಚಹಾದಂಗಡಿಯ
ಕೆಲಸದವರ ಭುಜದ ಮೇಲೊ ಕುಳಿತು ಬೆಟ್ಟವ ಹತ್ತುತ್ತಿದ್ದೇವು
ಜೋಡು ಕಾರ್ತಿಕದ ಕಂಬಗಳು ಕೈ ಬೀಸಿ ಕರೆಯುತ್ತಿದ್ದವು
ಕಳಕಮಲ್ಲಯ್ಯನ ಪೂಜೆಯ ನಂತರ.. ಧುಮ್ಮಿಕ್ಕಿ ಸುರಿಯುತ್ತಿದ್ದ ಅಂತರಗಂಗೆಯ ಕೆಳಗೆ ನಿಂತು.. ತೋಯಿಸಿಕೊಂಡು.. ಅವ್ವನೊಡನೆ ಬಡಿಸಿಕೊಂಡು..
ಅಪ್ಪನೊಡನೆ ಬೈಸಿಕೊಂಡು ನಮ್ಮನ್ನು ಕೆಳಗೆ ಕರೆತರುವುದೆ
ಅವರಿಗೊಂದು ಸಾಹಸವಾಗುತ್ತಿತ್ತು... ಅಂತರಗಂಗೆಯ
ದಾಟಿ ಮುಂದೆ ಬಂದು ವೀರಭದ್ರೇಶ್ವರನ ಮುಂದೆ ನಿಂತು
ಆ ಒಂದು ವಿಹಂಗಮ ನೋಟವ ನೋಡಿದರೆ.. ಆಹಾ..
ನೆನೆದಷ್ಟು ಮನ ಹಸಿಯಾಗುವುದು.. ಹಚ್ಚ ಹಸಿರನೆ ಹೊದ್ದು ಮಲಗಿದ ಹೊಲಗಳು ಗಿಡಮರಗಳಿಂದ ತುಂಬಿ ತುಳುಕುತ್ತಿದ್ದ
ಬೆಟ್ಟ ಗುಡ್ಡಗಳು... ಆ ಗುಡ್ಡಗಳಲ್ಲಿ ಮೇವಿಗಾಗಿ ಅಲೆಯುತ್ತಿದ್ದ ದನಕರುಗಳ ಹಿಂಡು..  ಅಲ್ಲಲ್ಲಿ ಕುರಿಗಳ ಗುಂಪು... ಆಗೊಮ್ಮೆ ಈಗೊಮ್ಮೆ ಜಿಟಿ ಜಿಟಿ ಸುರಿಯುತ್ತಿದ್ದ ಮಳೆ.. ಮಳೆ ಸುರಿದು
ಸರಿದು ಬಿಸಿಲಿನ ಕಿರಣಕೆ ಗಿಡಗಳಲೆಯ ಮೇಲೆ ಕುಳಿತ
ಮಳೆ ಹನಿಗಳ ಮಿಂಚಿನ ನರ್ತನ... ಆಹಾ...ಹಾ..

ಅಬ್ಬಬ್ಬಾ.. ಆ ದಿನಗಳು.. ಕೆಳಗೆ ಬಂದ ತಕ್ಷಣವೆ ಜಡೆಯಂತೆ ಜೋತುಬಿದ್ದ ಬೇರುಗಳ ಹಿಡಿದು ಆಡುತ್ತಿದ್ದ ಜೋಕಾಲಿ
ಅದರ ಹಿಂದೆಯೆ ಇದ್ದ ಭತ್ತದ ಗದ್ದೆಯಲಿ ಯಾರಿಗೂ
ಗೊತ್ತಾಗದ ಹಾಗೆ ಓಡಾಡಿ ಸಸಿಗಳನೆಲ್ಲ ಕಿತ್ತು ತಂದದ್ದು
ನಮ್ಮಜ್ಜ.. ಅವರೆಲ್ಲ ಸ್ನೇಹಿತರು ಆಡುತ್ತಿದ್ದ ಅರ್ಥವಾಗದ
೫೨ ಎಲೆಗಳ ಆಟ.. ಗೆದ್ದವರು ನಮಗೆ ನೀಡುತ್ತಿದ್ದ ಭಕ್ಷಿಸು
ಅದರಲ್ಲಿ ತಂದು ತಿನ್ನುತ್ತಿದ್ದ ಪುಡಿ ಬಜಿ... ಕಾಡಿಸಿ ಪೀಡಿಸಿ
ಮನೆಯವರೊಂದಿಗೆ ಕೊಡಿಸಿಕೊಳ್ಳುತ್ತಿದ್ದ ಆಟದ ಸಾಮಾನುಗಳು... ಪಣತಿ ಸಾಲಿನಲ್ಲಿ ಊಟಕ್ಕೆ ಕುಳಿತವರಿಗೆ
ಉಂಡೆ ಸಂಡಿಗೆ ಮೊಸರು ಚಟ್ನಿ ರೊಟ್ಟಿ ನೀಡುವ ಸಂತೋಷ
ಉಂಡು ಹೊರಡುವಾಗ ಅವರು ನಮಗೆ ನಲ್ಮೆಯಿಂದ
ನೀಡುತ್ತಿದ್ದ ಏಂಟಾಣೆ.. ನಾಲ್ಕಾಣೆಯಿಂದ ಮರುದಿನ
ಶಾಲೆಯಲ್ಲಿ ನಮ್ಮದೆ ದರ್ಬಾರು ಕಾಸಿರುವ ತನಕ..

ಅಬ್ಭಾ...!!! ಅದೇಷ್ಟು ನೆನಪುಗಳು ಬಿಚ್ಚಿದಷ್ಟು ಹೆಚ್ಚಾಗ್ತಾನೆ
ಇದೆ.. ಒಂದು ಕಡೆ ಸಂತೋಷ ಇನ್ನೊಂದೆಡೆ ದುಃಖ..
ನಮಗಿದ್ದ ಆ ಸಂತೋಷ ಸಡಗರ ನಮ್ಮ ಮಕ್ಕಳಿಗಿಲ್ಲವಾಗಿದೆಯಲ್ಲ.... ಕಡೆದು ಹಾಕಿದ ಮರಗಳು
ವಲಸೆ ಹೋದ ಮಂಗಗಳು ಆಧುನಿಕ ಭರಾಟೆಯಲ್ಲಿ ತಲೆ
ಎತ್ತಿರುವ ಅಂಗಡಿಗಳು... ಮಳೆ ಬೆಳೆಯಿಲ್ಲದೆ ಪಾಳು
ಪಾಳಾಗಿ ಮಲಗಿರುವ ಹೊಲಗದ್ದೆಗಳು.. ಒಣಗಿ ನಿಂತ
ಬೆಟ್ಟಗುಡ್ಡಗಳ ಸಸ್ಯರಾಶಿ ಎಲ್ಲವು ತದ್ವಿರುದ್ದ ಆಗಿನದಕ್ಕೂ ಈಗೀನದಕ್ಕೂ... ಗಾಡಿಯಲ್ಲಿ ಹೋದೆವು ಬಂದೆವು
ಯಾಂತ್ರಿಕವಾಗಿ...ಇಂದು ಹಣವಿದೆ ಸುಖವಿಲ್ಲ.. ಅಂದು
ಸುಖವಿತ್ತು.. ಹಣದ ಬಗ್ಗೆ ಚಿಂತೆಯಿರಲಿಲ್ಲ

ಹೊರಟುಬಿಡಿ ನೆನಪುಗಳೆ... ಕಣ್ಣಿಂದ
ನೋವಿನ ಹನಿಗಳು ಜಾರುವ ಮುನ್ನ

ಸವಿ ಕಹಿ ೪೪೧

ಸವಿಯಬೇಕೆಂದಿದ್ದೆ
ಅವಳ
ಅಧರಸುಮಗಳ
ಜೇನ ಸವಿ
ಮುತ್ತಿಟ್ಟಾಗ ಸವಿದದ್ದು
ಕೆಂದುಟಿಗಳಿಗೆ ಹಚ್ಚಿದ್ದ
ಕೆಂಪು ಬಣ್ಣದಾ
ಕಹಿ

ಒಲವೆ ಬಲವೆ

ಗೆಳತಿ..
ಎರಡು ತೋಳೊಳಗೆ ಬಂಧಿಯಾಗಿಬಿಡು
ಬಂದು ಲತೆಯು ಮರವ ತಬ್ಬುವ ಹಾಗೆ

ಮಲಗಿ ಎದೆಯ ಮೇಲೆ ಸುರಿಸೆ ನಿನ್ನೆಲ್ಲ
ದುಃಖದಶ್ರುಗಳನು ಚೂರು ಬಿಡದೆ

ಕಳೆದುಕೊಂಡು ಬಿಡು ನಿನ್ನೆಲ್ಲ ನೋವುಗಳ
ಗಂಗೆಯಲಿ ಭಸ್ಮವನೆಲ್ಲವ ಕರಗಿಸಿದ ಹಾಗೆ

ಇಳಿಸಿಬಿಡು ನಿನ್ನೆದೆಯ ಭಾರವನೆಲ್ಲವ
ನನ್ನೆದೆಯ ಗೂಡಿಗೆ.. ಹೊತ್ತು ಹಗುರಾಗಿಸುವೆ
ನಿನ್ನ ಮನವನು

ಮಾತಿನ ಹಕ್ಕಿಗಳ ರೆಕ್ಕೆಗಳ ಬಿಚ್ಚಿಬಿಡು
ಸ್ವಚ್ಛಂದವಾಗಿ ಹಾರಾಡಿ ಬರಲಿ ನಮ್ಮೊಲವಲಿ

ಮರೆಯದಿರು ಒಲವೆ ನೀ ನನ್ನ ಬಲವೆ
ನೀ ಹೀಗೆ ಅಳುವುದು ನಮ್ಮೊಲವಿಗೆ ತರವೆ

ಸಹೋದರಿಯವರು

ಹೇಗೆ ಮರೆಯಲಿ ಅವರೆಲ್ಲರ  ಪ್ರೀತಿಯ..
ಈ ದಿನವಾದರೂ ನೆನೆಯದೆ ಹೋದರೆ..
ಬಾಳೊಂದು ಅರ್ಧಚಂದ್ರನಂತಾಗದೆ
ಈ ಮುಖಪುಟದಲ್ಲಿ ಬರೆಯುವುದಕ್ಕೂ
ಅರ್ಥವಿಲ್ಲದಂತಾಗದೆ

ಮುಖಪುಟಕ್ಕೆ ಬಂದಾಗ ನನ್ನ ಸಾಲುಗಳಿಗೆ
ಪ್ರೋತ್ಸಾಹಿಸುತ್ತಾ ಬೆಳಸಿದ ಗೀತಾಧರ ಅವರು
ಮರಳಿ ಈ ಪುಟದಿಂದ ನಿರ್ಗಮಿಸುವ ನಿರ್ಧಾರಕ್ಕೆ
ಬಂದಾಗ ತಡೆದು.. ತಾವು ಬರೆದ ಕವನದ
ಸಾಲುಗಳಿಗೆ ಜಗಳವಾಡಿಯಾದರೂ ಸರಿ ಪ್ರತಿ
ಸಾಲುಗಳ ಬರೆಯಿಸಿಕೊಳ್ಳುತ್ತಿದ್ದ ಜಯಾ. ಬಿ. ಶೆಟ್ಟಿ
ಇವರ ನಾ ಹೇಗೆ ಮರೆಯಲಿ

ಸ್ತ್ರೀಯರ ನೋವಿನ ಸಾಲುಗಳಿಗೆ ಸದಾ ಸ್ಪಂದನೆ
ನೀಡಿ ಬೆಳಸಿದ ಸಿ. ಶಶಿಕಲಾ ಅವರು
ಕವನಕ್ಕೆ ಕವನವ ಕಟ್ಟಿ ಎರಡೆ ಎರಡು ತಾಸಿನಲ್ಲಿ
ಮೂವತ್ತೆರಡು ಪ್ರೇಮ ಕವನಗಳನ್ನು ಬರೆಯುವ
ಜುಗಲ್ ಬಂದಿಯನ್ನು ಬರೆಯಿಸಿದ.. ಬರೆಸುತ್ತಿರುವ
ಜಯಲಕ್ಷ್ಮೀ ಸಹೋದರಿಯವರು
ಕವನದ ಸಾಲುಗಳ ಒಳಾರ್ಥವನ್ನು ಅರಿತು
ಹುರಿದುಂಬಿಸುವ ಶರ್ಮೀಳಾ ಶೆಟ್ಟಿಯವರು
ವಾಸ್ತವಿಕ.. ಹೋರಾಟದ ಸಾಲುಗಳಿಗೆ ಮೆಚ್ಚಿ
ತಿದ್ದಿ.. ಅಭಿಪ್ರಾಯವ ನೀಡುವ ಪ್ರವೇಣಿ ಸ್ಪೂರ್ತಿ ಅಕ್ಕನವರು

ಪ್ರತಿ ಕವನದ ಸಾಲುಗಳಲ್ಲೂ ಹೊಸತನವ ಹೆಕ್ಕಿ
ನನ್ನಿಂದಲೂ ಹೊಸತನಕ್ಕಾಗಿ ಮೀಡಿಯುವಂತಹ
ಸಾಲುಗಳ ಬರೆಯುವ ಸುಧಾಕೃಷ್ಣ ಪಾಂಡವಪುರ ಅವರು
ಚುಟುಕಾದರೂ ಸರಿ ಗದ್ಯವಾದರೂ ಸರಿ ಎಂದು ಬರೆದು
ಹಾಕುವ ತ್ರೀವೇಣಿ ಪಾಂಡವಪುರ ಅವರು
ಒಡಹುಟ್ಟಿದನಕ್ಕನಂತೆ ಸಂತೆಯಲ್ಲಿ ಕಾವ್ಯದೂಟದೊಂದಿಗೆ
ಮನೆಯೂಟವನ್ನು ಬಡಿಸಿದ ನಾಗವೇಣಿ ಅವರು
ಚಿತ್ರದೊಂದಿಗೆ ಅದ್ಭುತ ಸಾಲುಗಳ ಕಟ್ಟಿಕೊಡುವ
ಚೈತನ್ಯ ಸಹೋದರಿಯವರು
ದಿನಕ್ಕೆ ಎರಡು ಮೂರು ಕವನಗಳನ್ನು
ಬರೆದು ಹಾಕುವ ಸುರಭಿ ಲತಾ ಅವರು

ಸದಾ ಸೊಗಸಾದ ಸಾಲುಗಳ ಹೊತ್ತು ಬರುವ
ಸುಮಾ ಸಂತೋಷ್ ಸಹೋದರಿಯವರು
ಸುಧಾ..ಸುಮಾ ಸತೀಷ..ಸಾನ್ವಿ ದೇಶಪಾಂಡೆ..
ಶಾರದಾ ಪಾಪು ಬೆಳಿಗ್ಗೆಯಿಂದ ಸಂಜೆವರೆಗೂ ಸದಾ ಕಾಲೆಳೆದು ಗೋಳು ಹೊಯ್ದುಕೊಳ್ಳುವ ಸುರಭಿ ಅವರು
ನಿತ್ಯ ಹಸನ್ಮುಖಿ ಮಂಜುಳಾ ಮೃತ್ಯುಂಜಯ ಸಹೋದರಿಯವರು
ಇಲ್ಲಿ ಹೆಸರು ಹಾಕದೆ ಮರೆತಿದ್ದರೆ ಕ್ಷಮಿಸಿ
ಎಂದು ಕೇಳಿಕೊಳ್ಳುತ್ತಾ
ಎಲ್ಲ ಸಹೋದರಿ ಅಕ್ಕಂದಿರಿಗೆ ರಕ್ಷಾ ಬಂಧನದ
ಶುಭಾಶಯಗಳು
ನಿಮ್ಮ ಬೆಂಬಲ ಆಶೀರ್ವಾದ ಸದಾ ಹೀಗೆ ಇರಲೆಂದು
ಆಶೀಸುತ್ತಾ.. ಆ ದೇವರು ತಮ್ಮೆಲ್ಲರಿಗೂ ಸಿರಿ ಸಂಪತ್ತು
ನೀಡದಿದ್ದರೂ.. ತಾಳಿಯ ಭಾಗ್ಯವನ್ನು ಗಟ್ಟಿಯಾಗಿ
ಬರುವ ದಿನಗಳಲಿ  ಸಂತಸವ ಹೊತ್ತು ಕಳಿಸಲಿ
ಎಂದು ಈ ಮುಖಪುಟದ ಸಹೋದರರ ಪರವಾಗಿ ಬೇಡಿಕೊಳ್ಳುತ್ತೇವೆ