Tuesday, October 17, 2017

ವಿರಹದ ನೋವು

ವಿರಹದ ಬಿಸಿ ಶಾಯಿಗೆ
ಎದೆಯ ಬಿಳಿ ಹಾಳೆಯು
ಉರಿಯುತಿವುದು...!!!

ಬರೆಯಲಿ ಹೇಗೆ ?
ಪದಗಳ...
ಎದೆಹಾಳೆಗೆ
ಸಹಿಸಿಕೊಳ್ಳಲಾರದಷ್ಟು
ನೋವಿರುವಾಗ...!!!

ಗಜಲ್

ನಾ ಹೋಗೊ ಬರೋ ದಾರ್ಯಾಗ ನಿಂತ ನೀ ಕಣ್ಣ ನೀ ಹೊಡಿಬ್ಯಾಡ
ಮೂಲಿಮನಿ ಗಂಗಿ ಕೈಯ್ಯಾಗ ಮೊಳ ಮಲ್ಗಿ ಕೊಟ್ಟ ನೀ ಕಳ್ಸಬ್ಯಾಡ
ಊರಿನ ಜಾತ್ರ್ಯಾಗ ನಿನ್ನ ವಾರ್ಗೆಯೊರ ಕೂಡ ಕೂಡ್ಕೊಂಡ ಹಿಂದಿದ ನೀ ಬರಬ್ಯಾಡ
ಮೂವತ್ತು ರೂಪಾಯಿ ಮುತ್ತಿನ ಸರಾ ತಂದು ನನ್ನ ಕೊರಳಿಗೆ ನೀ ತೋಡ್ಸಬ್ಯಾಡ
ಮೊಸರ ಕೊಡೊ ನೆಪದಾಗ ನಮ್ಮನಿಗೆ ಬಂದು ನನ್ನ ಕೆನ್ನಿ ನೀ ಕೆಂಪಗಾಗಿಸಬ್ಯಾಡ
ಈ ಥಂಡಿ ದಿನದಾಗೂ ನಿನ್ನ ನಗುವಿಲೆ ನನ್ನ ಮೈಯಿಗೆ ಬೆಂಕಿ ನೀ ಹಚ್ಚಬ್ಯಾಡ
ಹೇಳೊರು..‌ ಕೇಳೊರು ಯಾರಿಲ್ಲಂತಂದು ಮನಸ್ಸನ್ಯಾಗನ ನೀ ನುಗ್ಗಬ್ಯಾಡ
ಕತ್ಲನ ಕನಸಿಗೆ ಬಾಗ್ಲಿಲ್ಲಂತಂದು ಹೊಳ್ಳೆ.. ಮುಳ್ಳೆ ಬಂದು ನನ್ನ ನೀ ಕಾಡಬ್ಯಾಡ
ಮನಿಮುಂದ ರಂಗೋಲಿ ಹಾಕೊಮುಂದ ಮಾಳಗಿ ಮ್ಯಾಲ ನಿಂತ ನೀ ನಗಬ್ಯಾಡ
ಮನಸಿನ ಅಂಗಳ್ದಾಗ ಮಾತಿಲೆ ಮನಿ ಕಟ್ಟಿ ಪ್ರೀತಿ ಅನ್ನೊ
ಜೋಗುಳಾ ನೀ ಹಾಡಬ್ಯಾಡ
ಮತ್ತೆ ಮತ್ತೆ ನನ್ನ ಕಾಡಿ ಕಾಡಿ ನಿನ್ನ ಪ್ರೇಮದ ಬಲ್ಯಾಗ ಬೀಳುವಂಗ ನೀ ಮಾಡಬ್ಯಾಡ
ಇನ್ನೊಬ್ಬರ ಮನಿ ಹೊನ್ನಾಗಿ ಹೊಂಟೇನ ನಾನು ಇದನ್ನ ಕೇಳಿ ನೀ ಕಲ್ಲಾಗಬೇಡ

ಕರುನಾಡ ಮಣ್ಣಲ್ಲಿ ಜನಿಸಿದವರು

ಎಂಥೆಂಥವರಿಗೆ ಜನ್ಮವನಿತ್ತೆ
ತಾಯಿ ಕನ್ನಡತಿ

ಕಾಯಕವೇ ಕೈಲಾಸವೆಂದ
ಬಸವಣ್ಣನ ನಾಡಿನಲ್ಲಿ
ಕಾಯಕವಗೈಯದೇ ತಳಪಾಯ
ತುಂಬುವಷ್ಟು ಧನವ
ತುಂಬಿಹರು

ಕುಲಕುಲವೆಂದು ಹೊಡೆದಾಡದಿರಿ
ಎಂದ ಕನಕದಾಸರ ನಾಡಲ್ಲಿ
ಕುಲಕುಲಗಳನೇಣಿಸುವ
ನಾಡನಾಳುವ ನಾಯಕರಿಹರಲ್ಲ
ಮನಗಳ ತುಂಬ ಮತ್ಸರವ
ಬಿತ್ತಿಸುತಿಹರೆಲ್ಲ

ಮೈಸೂರು ಮಹಾರಾಜರು ಜನರ
ಒಳಿತಿಗಾಗಿ ಅರಮನೆಯ ಕನಕವನೆಲ್ಲವ
ಕರಗಿಸಿ ಆಣೆಕಟ್ಟನ್ನು ಕಟ್ಟಿದರು...
ಹೊಲ..ಹೊಲಗಳಲಿ ಕೆರೆಗಳ ಕಟ್ಟಲು
ಹಣವನು ಕೊಟ್ಟರೆ ಅಧಿಕಾರಿಗಳೆಲ್ಲ
ಗಂಟನು ಕಟ್ಟುತಿಹರಲ್ಲ...

ಎಂತೆಂಥವರಿಗೆ ಜನ್ಮವನಿತ್ತೆ.. ತಾಯಿ ಕನ್ನಡತಿ
ನೆರೆ ರಾಜ್ಯದ ಜನರು ನಮ್ಮ ಕೆಲಸವ ಕಿತ್ತುಕೊಂಡಿಹರು...
ಮಣ್ಣನು ಕಬಳಿಸುತಿಹರು...ನೀರನು ಬಸಿಯುತಿಹರು
ನೆತ್ತರನು ಹರಿಸುತಿಹರು...ಕಾಲುವೆಯ ನೆಪದಲ್ಲಿ
ಅಮಾಯಕರ ಸೂರುಗಳ ನೆಲಸಮವಾಗಿಸಿಹರು...
ಕಾಯ್ದೆಗಳ ತಿದ್ದಿ... ಕೆರೆಗಳ ಬಾಯಿಗೆ ಮಣ್ಣನು ತುಂಬಿ
ಸರಕಾರದ ಬೊಕ್ಕಸಕ್ಕೆ ಹೊರೆಯಾಗಿಸಲು.... ಹೊಸ
ಹೊಸ ಕೆರೆಗಳಿಗೆ ಜೀವ ತುಂಬಲು ಹವಣಿಸುತಿಹರು..

ಎದೆಯುಬ್ಬಿಸಿ ಕೇಳುಗರನ್ನೆಲ್ಲ..‌ ಹೆಣವಾಗಿಸುತಿಹರು
ಸಿಡಿದೇಳುವ ಜನರಿಗೆ ಹಣ- ಹೆಂಡಗಳ ಮತ್ತಲಿ
ತೇಲಿಸುತಿಹರು...
ಎಂತೆಂಥವರಿಗೆ ಜನ್ಮವಿತ್ತೆ ತಾಯಿ ಕನ್ನಡತಿ...
ನಿನ್ನನುಳಿಸಿಕೊಳ್ಳಲು ಹೋರಾಡಬೇಕೆನ್ನುವರ
ಮನಗಳಲ್ಲಿ ಕಿಚ್ಚಿನ ಬದಲು ಬೂದಿಯೆ..‌‌‌...
ತುಂಬಿಕೊಂಡಿಹುದಲ್ಲ.... ಮತ್ತೆ ಹುಟ್ಟಿಸಿ ಕಳಿಸು
ತಾಯೆ... ನಿನ್ನ ತಲೆಯತ್ತಿ ನಿಲ್ಲುವಂತೆ ಮಾಡುವ
ಉರಿವ ಕಿಡಿಗಳ ಕುಡಿಗಳ

Sunday, October 15, 2017

ಬೆಲ್ಲ ೪೩೨

ಗೆಳತಿ...
ನಿನ್ನ ಮನೆ ಬಾಗಿಲಿಗೆ
ಬಂದು ಬೇಡಿದ್ದೆ...
ನನ್ನ ಗಲ್ಲಕೆ ಒಂದು
ಬೆಲ್ಲ...

ನೀನು...
ನಿಮ್ಮಪ್ಪನಿಗೆ
ಹೇಳಿ...‌
ಉಬ್ಬಿಸಿದೆ ನನ್ನ
ಗಲ್ಲ...

Wednesday, October 11, 2017

ಹಸಿವಿನ ಗೆಲುವು

ಹೊತ್ತು ತುತ್ತಿಗಾಗಿ ಬದುಕುತ್ತಿರುವೆವು ನಾವು
ತಟ್ಟುತ್ತಿಲ್ಲವಿಲ್ಲಾರಿಗೂ ನಮ್ಮೊಡಲಿನ ಸುಡುವ ಕಾವು
ಆರಿಸುವವರಾರು ಅನ್ನವ ನೀಡಿ ಹೊತ್ತಿನ ಹಸಿವು
ಇಳಿಸುವವರೆ ಇಲ್ಲವಿಲ್ಲಿ..‌.ಬೆನ್ನೇರಿ ಕುಳಿತಿಹ ಹಸಿವಿನ ನೋವು
ಬದುಕಲಿಬ್ಬರಲ್ಲಿಯೂ... ಬೇರೆತಿಹುದು ಬರೀ...ಬೇವು

ಸುಡುತಿಹುದು ನೆತ್ತಿಯ ಸೂರ್ಯನ ಕೋಪ
ನಮಗೊ... ಸಹಿಸಿಲಾಗುತ್ತಿಲ್ಲ ತುತ್ತು ಚೀಲದ ತಾಪ
ಹೋಗಿ ಬರುವವರೆಲ್ಲ ನೋಡಿ ಹೇಳುವರು ಅಯ್ಯೋ ಪಾಪ
ಪಾಪವೆಂದವರೆಲ್ಲ ತೋರುತ್ತಿರುವವರು ಕೇವಲ ಸಂತಾಪ
ಹಿಡಿಸದಿವರ ಮನಕೆಂದೂ..ಉದರ ಪಾಡುವ ಹಸಿವಿನಾಲಾಪ

ನಡೆಯುವುದೇಷ್ಟು ದಿನಗಳ ನಮ್ಮಿಬ್ಬರ ಅಲೆದಾಟ
ಹೋಗುವ ದಾರಿಗಳಿಗೋ...ಸುಂಕವ ಕಟ್ಟಿಲ್ಲ....ಹಳ್ಳ..
ಕೊಳ್ಳಗಳಲಿ ಮಿಂದಿಲ್ಲ....ಚುಚ್ಚಿದ ಮುಳ್ಳುಗಳ ಮರೆತಿಲ್ಲ...
ಹೂವಿನ ಹಾದಿಯ ಅರಿವಿಲ್ಲ...ಹಾದಿಯುದ್ದಕೂ
ಹಸಿವಿನ ಹೊರೆಯ ಹೊತ್ತು ಸಾಗುವುದು ತಪ್ಪಲಿಲ್ಲ...

ಇರುವುದೊಂದೆ ತುತ್ತು...ತಿನ್ನೋಣ ಇಬ್ಬರು
ಹಂಚಿಕೊಂಡು..ಬದುಕಬೇಕಲ್ಲ ಇನ್ನೊಂದು
ಹೊತ್ತು....ಯಾವ ಗಲ್ಲಿಯ ಮೂಲೆಯಲಿ
ಕಾದಿದೆಯೊ... ವಿಪತ್ತು..ಬರುವುದು ಇಬ್ಬರಲ್ಲೊಬ್ಬರಿಗೆ
ಆಪತ್ತು...ಹೀಗೆ ಇರಲಿ ಕಣೋ ಗೆಳೆಯ ಉಸಿರಿರುವವರೆಗೂ
ಸ್ನೇಹ ಸಂಪತ್ತು..

ಹಸಿವಿಗಿಲ್ಲ ಸಾವು... ನೋವಿಗಿಲ್ಲ ವಿರಾಮ
ನಿಲ್ಲುತಿಲ್ಲ ಕಾಲಚಕ್ರ... ನಡೆಯಲೊ..ಕಾಲುಗಳು
ನಿಶ್ಯಕ್ತವಾಗಿರುವಾಗ... ಕಾಲನೊಡಗೂಡಿ ಸಾಗುವುದಾವಾಗ
ಬಾಳಯುದ್ಧವ ಗೆಲ್ಲಲು ವಿದ್ಯೆಯಿಲ್ಲ... ಅಸ್ತ್ರಗಳಿಲ್ಲ..
ಶಸ್ತ್ರಗಳಿದ್ದರೂ... ಎತ್ತಲು ತೋಳ್ಬಲವೆ ಕುಂದಿರುವಾಗ
ಹೋರಾಡುವುದಾದರೂ....ಹೇಗೆ.... ಎಷ್ಟಿದ್ದರೂ...‌..
ಗೆಲುವೆನ್ನುವುದು ಹಸಿವೆಯ ಜೋಳಿಗೆಯಲಿ
ನಿದ್ರಿಸುತ್ತಿರುವಾಗ....

Monday, October 9, 2017

ಬೆಲೆ ಕಟ್ಟಲಾಗದ ಮುತ್ತು

ನನ್ನೀ... ರೂಪವ ಕಂಡು ನನಗೆ ಎದೆಯುಮ್ಮಳಿಸಿ
ಬರುತ್ತಿದ್ದ.. ದುಃಖದ ಬಾಗಿಲಿಗೆ ಮೊಳೆ
ಜಡೆದು ಕಾದಿದ್ದು ವ್ಯರ್ಥವಾಗಲಿಲ್ಲ...
ಮಣ್ಣೊಳು ಹುಗಿದು ಗೆದ್ದಲುಗಳಿಗೂಟವಾಗುವ
ವೀ..ಮಾಸಂದ ಮುದ್ದೆಯ ಮೇಲಿನ
ಮೋಹವ ತೊರೆದದ್ದು ಸಾರ್ಥಕವಾಯಿತಲ್ಲ...

ಬದುಕಿನ ಸಸಿಯು ಮೊಳಕೆಯೊಡೆಯದಂತೆ
ಆಸೆಯ ಬೀಜವು ಮಣ್ಣಿಲ್ಲದೆ ಬಿದ್ದಿತ್ತಲ್ಲ
ನಿನ್ನೀ.. ಚುಂಬನದ ಸಿಂಚನವೊಂದೆ
ಬಾಳಿನಂಗಳಕೆ.... ನೆಮ್ಮದಿಯ ನೆರಳನೀಯ್ವ
ಹೊಂಗೆಯ ಮರದ ವರವಾಯಿತಲ್ಲ
ಪ್ರೇಮ ಭಿಕ್ಷುಕಿಗೆ ಕರಗದ ನಿಧಿಯಾದೆಯಲ್ಲ

ವಿಧಿಯು ಬೀಸಿದ ಬಲೆಗೆ ಸಿಕ್ಕು ನಾನದೇಷ್ಟು
ನರಳಾಡಿದೆನಲ್ಲ... ಸುಂದರ ಜಗದಲಿ ಮುಕ್ಕಾದ
ಮೊಗವ ಹೊತ್ತು ನಗುವನ್ನೆ ಮರೆತಿದ್ದೆನಲ್ಲ... ಕಾಲವೆ
ನಿನ್ನ ಶಪಿಸದ ಕ್ಷಣಗಳಿಲ್ಲ... ಬೈದು ಮಲಗಿದ ರಾತ್ರಿಗಳಿಲ್ಲ
ಸುಟ್ಟ ರೂಪವ ನೆನೆ ನೆನೆದು ಅಳದ ದಿನಗಳೆ ಇರಲಿಲ್ಲ
ಆದರೂ.. ಕಾದು ಕಾದು ಪಡೆಯುವ ಫಲ ಯಾವ
ಸುರಲೋಕದ ಸುರಪಾನಕ್ಕಿಂತಲೂ... ಕಡಿಮೆಯಿಲ್ಲವೆಂದು
ಮಗನ ಮುತ್ತಿನ ವಾತ್ಸಲ್ಯದಲಿ ತೋರಿದೆಯಲ್ಲ

ಯಾವ ರೂಪವಾದರೇನು ಕರುಳ ಬಳ್ಳಿಗೆ
ಬಟ್ಟೆ ಕಟ್ಟಲಾದಿತೇನು ಕಾಣದ ಒಳಗಣ್ಣಿಗೆ
ನೋವಿನ ಜ್ವಾಲೆಯನೆ ಸವಿಯುತ್ತಿದ್ದ ಹೊಟ್ಟೆಗೆ
ಪ್ರೀತಿಯ ಸುಧೆಯ ಸುರಿದು ತಣಿಸಿದೆಯಲ್ಲ ಕೊನೆಗೆ
ಯಾವ ಬೆಲೆಯ ಕಟ್ಟಲೊ ಕಂದಾ ಈ ಮುತ್ತಿಗೆ
ಹೊನ್ನಿನ ಚೌಕಟ್ಟನ್ನೆ ಹಾಕಿಸಿಬಿಡಲಾ ಈ ಹೊತ್ತಿಗೆ

Friday, October 6, 2017

ವಿಧವೆಯ ಬಾಳು

ಮತ್ತೊಮ್ಮೆ ನಳನಳಿಸುವುದೆ ಈ
ಬಯಲು ಹಣೆಯ ಮೇಲೆ ಆ ಕೆಂಪು ಸಿಂಧೂರ
ತಿರುಗಿ ತಳಿರು ತೋರಣಗಳಿಂದ ಸಿಂಗರಿಸಲ್ಪಡುವುದೆ
ಮನೆಯಂಗಳದ ಮುಂದಿನ ಚಪ್ಪರ
ಬರಡು ಕೊರಡಾದ ಬದುಕಿನ ದಿನಗಳಲಿ
ಉಸುರುವುದೆ..? ಚಿಗುರೆಲೆಯ ಸಂಸಾರ

ದೊಡ್ಡವರ ಎಡವಿಗೆ ಆದ ಬಾಲ್ಯ ವಿವಾಹ
ಸಂಸಾರದ ತಕ್ಕಡಿಯನೇರುವ ಮೊದಲೆ...
ವಿಧಿಯಟ್ಟಹಾಸದ ಭಾರಕೆ ಹರಿದುಬಿದ್ದಿತ್ತು
ನನ್ನ ಕರಿಮಣಿಯ ಸರವು..‌.ತುಂಬಿದ
ಯೌವ್ವನಕ್ಕೆ ಉತ್ತರವನು ಕೊಡದೆ...
ಹಿರಿಯರನು ಪ್ರಶ್ನಿಸುವ ಹಕ್ಕನು ನೀಡದೆ

ಮತ್ತಾಗಲೆ ನಾನೀಗ ಮರುಮದುವೆ.. ಹೇಗೆ ?
ಅಡಿಪಾಯಗಳಿಲ್ಲದೆ ಬಿದ್ದಿರುವ... ಮನವು
ಕಂಡ ಕನಸುಗಳಿಗೆ ಅವನಾಗಬಲ್ಲನೆ ಆಧಾರ
ನಂಬಿಕೆಯಲಿ ನಡೆಸಿಕೊಂಡು ಹೋಗುವನೆ..?
ಪ್ರೀತಿಯ ಕಡಲೊಡಲಲಿ ತೇಲಿಸುವನೆ..?
ಹಣೆಗೆ ಹತ್ತಿದ ಕಳಂಕದ ಗ್ರಹಣವ ಕಳೆದು
ಬಾಳಂಗಳದ ತುಂಬ ಒಲುಮೆಯ ಚೆಂಬೆಳಕ
ಚೆಲ್ಲುವನೆ...? ಇಲ್ಲವೆ...‌‌‌... ಮಂಚದ ಮೇಲಿನ
ಮಲ್ಲಿಗೆಗಳ ಹೊಸಕಲಷ್ಟೇ ಬಳಸುವನೆ...?

ಗಂಡಿಗಿಲ್ಲದ ಪ್ರಶ್ನೆಗಳ ಸರಪಳಿಗಳು ನನ್ನ ಕಾಲಿಗೇಕೆ?
ಉತ್ತರವಿಲ್ಲದೆ ವಿಲವಿಲಿಸುವ ಮನವು ನನಗೇ..ಏಕೆ?
ಗಂಡನೆಲ್ಲದುರ ತಪ್ಪಿಗೆ ನನ್ನ ಕಾಲ್ಗುಣವೇಕೆ..?
ಅವನ ಸಾವಿಗೆ ನನ್ನ ಹಣೆಯೆ...ಹೊಣೆಯೆಕೆ..? ಅವನ
ಹೆಸರಲಿ ಅದು ಬಂಡೆಯಾಗುವುದೇಕೆ...?
ಮತ್ತೆ... ಮತ್ತೆ... ನನ್ನ ಬದುಕಿನ ನಿರ್ಧಾರಗಳನ್ನೆಲ್ಲವ
ಅವರು ನಿರ್ಧರಿಸುವ ನೀತಿಗೆ ನಾ ತಲೆ ಬಾಗಿ
ಒಪ್ಪಿಕೊಳ್ಳಲೆಬೇಕೆ...?

ಒಪ್ಪಲೆಬೇಕು.. ನಾನು ಹೆಣ್ಣು...ಹೆಚ್ಚು ದಿನವಿದ್ದರೆ
ಆ ಮನೆಗೆ ನಾನಾಗುವೆನಲ್ಲವೆ ಹುಣ್ಣು...
ಜಗವಿದು ತೆರೆಯುವುದೆಂದೊ ಅಂತರಂಗದ ಕಣ್ಣು
ಒಪ್ಪುವುದು...ಅತ್ತು.. ನಾ ಸತ್ತು ಸೇರಿದ ಮೇಲೆ
ಮಣ್ಣು..