Thursday, October 26, 2017

ಶರಣ ೫

ಜ್ಯೋತಿ ಹೊತ್ತಿಸುವರಯ್ಯಾ
ಮಂದಿರಗಳಲಿ...ಪೂಜಾ ಕೋಣೆಗಳಲಿ
ಹೊರಗೆ ಹೊತ್ತಿಸಿದ ದೀಪವು
ಹೊರಜಗದ ಕತ್ತಲೆಯ ಕಳೆಯುವುದಲ್ಲದೆ
ಅಂತರಂಗದ ತಮವವನೆಂತು
ಹೋಗಲಾಡಿಸಿತು...
ಎನ್ನಂತರಂಗದ ಕೋಣೆಯ ಜ್ಞಾನದ
ಜ್ಯೋತಿಯಿಂದ ಹೊತ್ತಿಸದಾ ಹೊರತು
ಅರಿವೆಂತು ಮೂಡುವುದಯ್ಯಾ ಮಸ್ತಕಕೆ
ಕಾಣಬಲ್ಲೆನೆ ಹೊಸಬೆಳಕನು ಈ ಜಗದಿ
ಕೇವಲ ಎಣ್ಣೆ ಬತ್ತಿಯ ಸುಟ್ಟು ಲೋಕದಂತರಂಗದ
ಕತ್ತಲೆಯ ಕಳೆಯುವ ಹಾಗಿದ್ದರೆ....
ನರರು ಮಾಡಿದ ಪಾಪದ ಮೂಟೆಗಳ
ಗಂಟುಗಳ ಭಾರಕೆ ಅವರ ಬೆನ್ನು ಗೂನವಾಗುತ್ತಿರಲಿಲ್ಲವಲ್ಲಾ
ಶರಣಬಸವ

ಶರಣ ೪

ಅಂಕೆಯಿರದಾ ಮನವು
ಆಸೆಗೆ ದಾಸವಾಗಿಹುದಯ್ಯ
ನುಡಿದಂತೆ ನಡೆಯದ ಬದುಕಿದು
ನರಕದ ಕದವ ತಟ್ಟುತಿಹುದಯ್ಯ
ನಿನ್ನ ನಾಮದಲಿ‌ ನಂಬಿಕೆಯಿಲ್ಲದವರ
ಮೆಚ್ಚಿ ಮರುಳನಾಗಿಹೆನಯ್ಯ
ಕಣ್ಣಿಗೆ ಕಟ್ಟಿರುವ ಅಹಂಕಾರದ
ಪೊರೆಯ ಕಳಚಿ ಸತ್ಯದ ಬೆಳಕನು
ನೀ ಕರುಣಿಸಯ್ಯಾ .....
ಶ್ರೀ ಶರಣಬಸವ

ಸಾವಾದರೂ ಬರಬಾರದೆ ಕಂದ ನಿನಗೆ

ಸಾವಾದರೂ.... ಬರಬಾರದೆ ಕಂದ ನಿ‌ನಗೆ ?
ಶಕ್ತಳಾಗಿಲ್ಲ ನಾನು... ನೋವಿನ ದಿನಗಳಿಗೆ ಕಟ್ಟಲು ತೆರಿಗೆ !!!
ಎಷ್ಟೋ ಕನಸುಗಳ ಕಟ್ಟಿಕೊಂಡು... ತವರು ಮನೆಯಲ್ಲಿ
ಮಾಡಿಸಿಕೊಂಡಿದ್ದೆ ಹೆರಿಗೆ !!!
ಪಟ್ಟ ಆಸೆಗಳೆಲ್ಲ.... ಹರೆವ ಹೊಳೆಯಲ್ಲಿ ಹಿಂಡಿದ
ಹಣ್ಣಂತಾಯಿತು ಬಾಳ್ವೆಗೆ !!!

ನವಮಾಸಗಳ ಗರ್ಭದಲಿ ಹೊತ್ತ ನನಗೆ
ಇನ್ನೂ... ಹೊರೆಯಾಗಿಯೆ ಇರುವೆಯಲ್ಲ
ಇಪ್ಪತ್ತೇರಡು ವಸಂತಗಳ ಕಂಡರೂ ನನ್ನ ಕಂಕುಳಿಗೆ!!!
ಅದೇಷ್ಟು ಪ್ರೀತಿಯೊ ಆ ಶಿವನಿಗೆ ನಿನ್ನ ಮೇಲೆ
ಕಲ್ಮಷವಿರದ ನಗುವ ಮೊಗದಲಿಟ್ಟು...ಹಾಲಂತ
ಮನದ ಸಜೀವ ಬೊಂಬೆಯನ್ನಾಗಿಸಿ.....
ಕಾಣಿಕೆಯನ್ನಾಗಿಸಿದನಲ್ಲ ನನ್ನ ಮಡಿಲಿಗೆ !!!

ಹಠಮಾಡಿ...... ಯಾವುದಕ್ಕಾದರೂ ಒಂದಿನವು
ಅಳಲಿಲ್ಲ...
ಒಂದಕ್ಕಾದರೂ.. ನಕ್ಕು ನಮ್ಮನು ನಗಿಸಲಿಲ್ಲ
ಆಡುವ ಮಾತುಗಳಿಗೆ ನಿನ್ನಲಿ ಪ್ರತಿಸ್ಪಂದನೆಯಿಲ್ಲ
ವಂಶದ ಬಳ್ಳಿಯ ಚಿಗುರು ಸತ್ವಹೀನವಾಗಿಹುದಲ್ಲ
ಮುಪ್ಪಾವಸ್ಥೆಗೆ ನಿನ್ನಯ ನೆರಳು ನಮ್ಮ ನೆತ್ತಿಯ ಕಾಯುವುದಿಲ್ಲ
ಇಹಲೋಕವ ತ್ಯಜಿಸಿದ ನಮ್ಮ ದೇಹಗಳಿಗೆ ಅಗ್ನಿಯನ್ನಾದರೂ.... ಸ್ಪರ್ಶಿಸುವೆಯೋ..? ಇಲ್ಲವೊ..?

ನಾನಳಿದ ಮೇಲೆ ಇನ್ನಾರು ಕಂದ ದಿಕ್ಕು ನಿನಗೆ ?
ಜಗದಪವಾದವು ಬಂದರೂ.... ಬರಲೇನಗೆ
ನಾನೆ ಹಾಡಬೇಕೆಂದಿರುವೆ ಕಂದಾ..‌‌. ಚರಮಗೀತೆ
ನಿನ್ನ ಬದುಕಿಗೆ
ನನ್ನ ಮಡಿಲಲ್ಲಿಯೆ ಬಂದರೂ... ಬರಲಿ ಸಾವು ಕೊನೆಗೆ
ಓ..ದೇವರೆ ಇಂಥ ಫಲವ ಕೊಡುವ ಬದಲು
ಬಂಜೆಯ ಪಟ್ಟವನ್ನಾದರೂ... ಕೊಟ್ಟಿದ್ದರೆ ಸಾಕಿತ್ತೆನೆಗೆ

ಓ.. ಕಂದಾ... ಸಾವಾದರೂ ಬರಬಾರದೆ ನಿನಗೆ

Wednesday, October 25, 2017

ಶರಣ ೧

ಸತ್ತ ಹೆಣದ ಮುಂದೆ ಹಳೆಯ ನೆನಪುಗಳು
ಎದ್ದು ಕುಣಿಯುತ್ತಿದ್ದವಯ್ಯಾ...
ಪೂಜೆ ಮಾಡಿದ ಪೂಜಾರಿಯ ಕೈಯಲ್ಲಿ
ಲಕ್ಷ್ಮೀಯು ಕುಣಿಯುತ್ತಿದ್ದಳಯ್ಯ...
ಬಂಧು ಭಾಂಧವರ ಕಣ್ಣ ಹನಿಗಳು
ಉದುರಿ ಉಪ್ಪಾಗುತ್ತಿದ್ದವಯ್ಯ..
ಮೂರು ದಿನದ ಸಂತೆಗೆ ಗುದ್ದಾಡಿದ
ಈ ದೇಹವ ಸಿಂಗರಿಸಿ ಗೋಳಾಡುತ್ತಿದ್ದರಯ್ಯ
ಶರಣ...
ಇದ್ದಾಗ ಅವನ ದುಃಖವನಾಲಿಸದ ಜಗವು
ಸತ್ತಾಗ ನೆನೆ ನೆನೆದು ಅಳುತಿರುವರಯ್ಯ
ಶರಣಬಸವ

ಯಾವ ತೀರವ ಮುಟ್ಟಲಿ

ದಡ ಸೇರಲು ಹುಟ್ಟುಗಳಿಲ್ಲ
ಈಜಲು ತೋಳಲಿ ಬಲವಿಲ್ಲ
ತಮ್ಮನ ಹಸಿವಿಗೆ ಚೂರು ಅಗುಳಿಲ್ಲ
ಅತ್ತು ಸೊರಗುವ ಆ ಕಂಗಳ ಕಣ್ಣೀರ
ಒರೆಸಲು.... ನನ್ನೆದೆಯಲಿ ಲಾಲಿ ಹಾಡಿನ ಪದಗಳಿಲ್ಲ

ನೀರ ಮಧ್ಯದಲಿ ಅರ್ಧಕ್ಕೆ ನಿಂತಿದೆ ಬದುಕು
ಹಸಿವ ನೀಗಿಸಿಕೊಳ್ಳಲು ನಮ್ಮ ಬಳಿಗಿಲ್ಲಾವ ಸರಕು
ತೊಟ್ಟ ಬಟ್ಟೆಗಳೆಲ್ಲಾಗಿವೆ ಹರಕು ಕೊಳಕು
ಓಲಾಡುತಿರುವ ದೋಣಿಯು ಆಗಿದೆ ಮುರುಕು
ಸಮಯಕ್ಕೇಕೆ ಹುಟ್ಟುತಿಲ್ಲವೊ ನಮ್ಮ ಮೇಲೆ ಮರುಕು

ಕಾರ್ಗತ್ತಲೊಳಗೆ ಕಾಗುಣಿತಕೆ ಸಿಗದ
ತಾರೆಗಳ ಲೋಕ... ಇನ್ನೇಷ್ಟು ಕತ್ತಲುಗಳೊಂದಿಗೆ
ನಿಮ್ಮ ಹೋರಾಟವೆಂದು... ತನುವಿನಣುವಣುವಿನೊಳಗಣ
ನೆತ್ತರನು ಹೆಪ್ಪುಗಟ್ಟಿಸಿ... ನಮ್ಮಿಬ್ಬರ ನುಂಗಲು
ಹಾತೊರೆಯುತ್ತಿರುವುದು ಪ್ರತಿ ರಾತ್ರಿಯ ಕೊರೆವ ಚಳಿ

ಹನಿ..ಹನಿಯ ಬೇವರು ಉಕ್ಕದಂತೆ...
ಹದವಾಗಿ ದೇಹವ ಹೊತ್ತೊತ್ತಿಗೆ ಕಾಯಿಸಿ..ಕಾಯಿಸಿ
ನೀರಿಲ್ಲದೆ ಒಣಗುವ ಬಳ್ಳಿಯಂತೆ... ದಿನಕ್ಕಿಷ್ಟಿಷ್ಟೇ..
ಎಂಬಂತೆ  ಹಸಿದ ಹದ್ದಿನ ಹಾಗೆ ಹುರಿದು ಮುಕ್ಕುತ್ತಿರುವನು
ರವಿಯು..... ತನ್ನ ತಾಪದ ಮೊನಚಿನಿಂದ

ಬದುಕೇಕೊ.. ನಮ್ಮನು ಹತ್ತುವ ಮೊದಲ ಮೆಟ್ಟಿಲಲ್ಲೆ
ಎಡವಿಸಿಬಿಟ್ಟಿದೆ.. ಬಾಳ ಹಣತೆಯು ಪ್ರಕಾಶಿಸುವ ಮುನ್ನವೆ  ಆರಿಸಲು ಕಾತುರತೆಯಿಂದ ಕಾಯುತಿದೆ.... ಮನುಜರ ತ್ಯಾಜ್ಯಕೆ ಪ್ರಕೋಪಗೊಂಡ ಶರಧಿಯು.... ತಂದು ನಿಲ್ಲಿಸಿದೆ
ನಮ್ಮಿಬ್ಬರನು..... ಅನಾಥವಾಗಿ ತನ್ನನಂತ ಶರಧಿಯಲಿ

ಸಾವೆ ಹೊರಟು ಹೋಗು ನಮ್ಮಿಂದ ನಿ ದೂರ
ತಲುಪಬೇಕಿದೆ ಕುಣಿದು ಕುಪ್ಪಳಿಸಬೇಕೆಂದಿರುವ ತೀರ
ಯಾವ ದಾಳವ ಉರುಳಿಸುವನೊ ಜಗದಾಟಗಾರ !!!
ಎಷ್ಟು ಗಟ್ಟಿಯಾಗಿ ಹಿಡಿದಿರುವನೊ ಜೀವದ ಸೂತ್ರ...ದಾರ
ಬೇಸತ್ತು... ಈ ನೋವಿನಂಕಣಕೆ ಪರದೆಯ ಎಳೆದು
ಬಿಡುವನೇನೊ.... ? ನಾಟಕಕಾರ

ಶರಣ ೩

ಉಪ್ಪರಿಗೇಯೊ...ತಿಪ್ಪೆಯೊ...
ಕಹಿಯೊ..ಹೇಸಿಗೆಯಂಬ ದುರ್ವಿಚಾರಗಳ
ಮೇಲಣ ಕೂರುವ ನೊಣದಂತಾಗಿಸದಯ್ಯ
ಎನ್ನ ಮನವ...
ಸದಾ ನಿನ್ನ ಭಕ್ತರ ಲೋಕದಲಿ ಸದ್ವಿಚಾರದ
ಸುಮದೆದೆಯ ಸವಿರಸಧಾರೆಯ
ಸವಿಯುವ ಜೇನ್ನೊಣವಾಗಿರಿಸಯ್ಯ
ಶರಣಬಸವ

Tuesday, October 24, 2017

ಶರಣ ೨

ಕತ್ತಿಯ ಹೊಡೆತಕ್ಕೆ ಗಾಯಗೊಂಡವನನ್ನು
ಉಳಿಸಿಕೊಳ್ಳಬಹುದು
ಹಾವು ಕಚ್ಚಿ ವಿಷವೇರಿದವನನ್ನು
ಬದುಕಿಸಿಕೊಳ್ಳಬಹುದು
ನದಿಯ ಸುಳಿಗೆ ಸಿಕ್ಕು ಸಾಯುತ್ತಿರುವವನನ್ನೂ
ಕಾಪಾಡಿಕೊಳ್ಳಬಹುದು
ಆದರೆ... ಎಲುಬಿಲ್ಲದೆ ಆಡುವ ನಾಲಿಗೆಯ
ಬೆಂಕಿಯ ಮಳೆಗೆ ಸಿಕ್ಕವರನ್ನು
ಉಳಿಸಿಕೊಳ್ಳಲಾದಿತೆ..
ಶರಣಬಸವ