Wednesday, November 15, 2017

ನನ್ನದೆ ಹಾಡಿದು

ಹಾಡಿದು... ನನ್ನದೆ ಹಾಡಿದು
ಎದೆಯೊಳಡಗಿದ ಕನಸುಗಳ ಹೊತ್ತು
ರಿದುರಿದು ಹೊಗೆಯಾಡುತಿರುವ ಹಾಡಿದು
ನನಗಲ್ಲದೆ ಇನ್ನಾರಿಗೂ ಬೇಡವಾದ ಗೀತೆಯಿದು

ಹೊತ್ತು ಹೊತ್ತಿಗೂ ಬಿಸಿ ದೇಹಗಳ ತಾಪಕೆ
ಕರಗಿ... ಮತ್ತೆ ಮತ್ತೆ ಧರಿಸುವ ಸಿಂಧೂರಕೆ
ಎಂಟಾನೆಯ ಬೆಲೆಯಿಲ್ಲ...
ಬಂದು ಹೋಗುವವರಿಗೆಲ್ಲ ಬೇಕಾದದ್ದು
ಮಾನ ಕಾಯುವ ಬಟ್ಟೆಯ ಸೊಗಸಲ್ಲ...
ಅವರ ತನುವ ಹಸಿವ ತಣಿಸುವ ಮಾಂಸವು ಬೇಕಲ್ಲ

ನನ್ನೆದೆಯ ನೋವಿಗೆ ಯಾವ ರಾಗವಿಲ್ಲ
ಶೃತಿ ಲಯದ ತಂತಿಗಳು ಎಂದೊ.. ಕಿತ್ತು ಹೋಗಿವೆ
ಬಂದವರಿಗೆಲ್ಲ ಹಾಸಿನ ಮುಲುಗಗಳು
ಬೇಕೆ ವಿನಃ....ನೋವಿನ ಮೀಟುಗಳಲ್ಲ
ನಾನವ ಮಗ್ಗುಲಲಿ ಹಾಡಲಿ...?
ಘಳಿ ಘಳಿಗೆಗಳಿಗೆ ನನ್ನ ಶೋತೃಗಳು
ಬದಲಾಗುವವರಲ್ಲ

ಬಂದವರೆಲ್ಲವರು ಮುನ್ನುಡಿಯ ಬರೆಯ
ಬಂದವರೆ... ಹ್ಹ..ಹ್ಹ..ಹ್ಹ....ಹ್ಹ.......ಹ್ಹ....
ಬೆನ್ನುಡಿಯ ಬರೆಯುವ ಧೈರ್ಯವನ್ನು
ಮಾಡುವರಾರು ? ಎಷ್ಟು ಜನರು ಸುಖದ
ಅಮಲಿನಲಿ ಪರಿಚಿ ಬಿಟ್ಟ ಹಸಿ ಗಾಯದ ಗುರುತುಗಳೆ
ಇರುವಾಗ !!!!

ಯಾವ ಕೊನೆಯ ಚರಣವ ಬರೆಯಲಿ ?
ಉಸಿರು ಬಸಿಯುವವರೆಗೂ... ನಾ ಮುದುಡಿದ
ಹಾಸಿಗೆಯಲ್ಲಿ ಮುಲಗಬೇಕಲ್ಲ..!!!
ಕಣ್ಣಂಚಲಿ ಜಾರುವ ಕಂಬನಿಯು ಬೇಡವಾಗಿ
ತುಟಿಯಂಚಲಿ ಕಚ್ಚುವ ಸಿಹಿಗೆ ಎಲ್ಲರೂ
ಹಾತೊರೆಯುತ್ತಿರುವಾಗ

ಜಾರಿಬಿಡು ಕಣ್ಣ ಹನಿ

ಜಾರಿಬಿಡೊ... ಕಣ್ಣ ಹನಿ
ಅಲ್ಪವಾದರೂ ಹಗುರವಾಗಲಿ
ನನ್ನೆದೆಯ ದುಃಖವದು..

ನಿ ಜಾರದೆ ಹೋದರೆ...
ಕರಗುವುದೆ ಮನದೊಳಗಿನ
ದುಗುಡಗಳೆಲ್ಲವು... ಚಿಗುರೊಡೆಯುವವೆ
ಕಮರಿದ ಆಸೆಗಳು...?

ಮನದಾವ ಮೂಲೆಯಲಿ ಜಾಗವುಂಟು
ಇನ್ನೊಂದು ನೋವ ಕ್ಷಣವ ಭರಿಸಲು ?
ಜಾರಿಬಿಡು ಉಪ್ಕನಿಯೆ ಒಂಟಿಯಾಗಿ
ಇರಲು ಬಿಡು ನನ್ನನು ಒಂಟಿಯಾಗಿ...

ಸೊಗಸಾಗಿದೆ ಅಣ್ಣವ್ರೆ ತಮ್ಮ ಸಾಲುಗಳು
👌👌👌👌👌👌

Monday, November 13, 2017

ಕಣ್ಣೀರಿಗೆ ಸುಂಕ ೪೨೮

ನೀ... ಬಿಟ್ಟು ಹೋದ
ಘಳಿಗೆಯ ನೆನೆದು
ಜಾರಿ ಬೀಳುವ ಕಣ್ಣ
ಹನಿಗಳನ್ನೆಲ್ಲವ...
ಮುತ್ತಾಗಿಸುವಂತಿದ್ದರೆ...

ನಿನ್ನೆದುರಿಗೆ ಸುರಿದು
ನನ್ನೆದೆಯ ದುಃಖಕೆ...
ಸುಂಕವವನ್ನಾದರೂ
ಕೇಳಬಹುದಿತ್ತು..

Friday, November 10, 2017

ಹಳೆ ನೋಟು ಹೊಸ ಸೀರೆ ೪೨೩

ಹಳೆ ನೋಟು ಬದಲಾದರೆ
ಹೊಸ ನೋಟು ಬಂದೀತು...
ನಿನ್ನ ನೋಟ ಬದಲಾದರೆ..?
ಈ ಜೀವ ಹೇಗೆ ತಡೆದೀತು..?

....ಗಂಗಾಧರ ಕಂಬಿಮಠ

ಹಳೆ ನೋಟು ಹೋಗಿ
ಹೊಸ ನೋಟು ಬಂದರೇನು..?
ಹೋದ ವರುಷದ ಹಬ್ಬಕ್ಕೆ
ಹೇಳಿದ್ದ ಸೀರೆ ನೀವು ತಂದಿರುವಿರೇನು.?
😁😁😁😁😁 👌👌👌👌👌

ವಿಧವೆ

ಈ ಬಿಳಿ ಸೆರಗಿನ ದಡಿಗೆ
ಬಣ್ಣದ ಕನಸಿನ ಚಿತ್ತಾರವ
ಬಿಡಿಸುವನಾರೊ....?

ಬರಡು ಬಯಲಾದ ಹಣೆಯ
ದಿಬ್ಬಕೆ ಕೆಂಪು ಸೂರ್ಯನ
ಬಿಂಬವ ಮೂಡಿಸುವರಾರು...?

ವಿಧಿ ತುಂಡರಿಸಿದ ಎದೆಯ
ಹಾಸಿನಲಿ ಮಲಗಿದ ಅರಿಸಿಣ
ದಾರವ ಮತ್ತೆ ಕಟ್ಟುವರಾರು...?

ಬಾಳಿನ ನಡು ಮಧ್ಯಾಹ್ನದ
ಸುಡು ಬಿಸಿಲಲಿ ನಿಂತ ನನ್ನನು
ಮುಸ್ಸಂಜೆಯವರೆಗೂ ಕೈ ಹಿಡಿದು
ನಡೆಸುಕೊಂಡು ಹೋಗುವರಾರು ?

ಇರುವಿರಾ...? ಯಾರಾದರೂ
ಕವಿದ ಮೋಡವ ಕರಗಿಸಿ
ಹೊಸಬೆಳಕ ಬಾಳಲಿ ಚೆಲ್ಲಲು

👌👌👌👌👌 🙏🙏🙏🙏

Thursday, November 9, 2017

ಚಳಿಗೆ

ಅವಳು
ಮುಸ್ಸಂಜೆಗೆ
ಬೇಡಿದ್ದಳು
ಮಲ್ಲಿಗೆ...

ತರುವ
ಅವಸರದಲ್ಲಿ
ಅವಳಿಗೆ
ನೀಡಿದ್ದು
ಸಂಪಿಗೆ...

ನೆನೆದಿದ್ದೆ
ಇಂದು ರಾತ್ರಿ
ತಂಪಾಗುವೆ
ಅವಳ
ಮಡಿಲಿಗೆ..

ತಂಪಾದೆ..
ಅವಳ
ಮಡಿಲಲ್ಲ
ಮುನಿಸಿಂದ
ಮನೆ ಹೊರಗೆ
ಹಾಕಿದಾಗ
ರಾತ್ರಿ ನಡಗುವ
ಚಳಿಗೆ

Monday, October 30, 2017

ತಾಯಿ ಭುವನೇಶ್ವರಿ

ಎಷ್ಟು ಸುಕೋಮಲೆ.... ತಾಯೆ ನೀನು ಭುವನೇಶ್ವರಿ
ಲೋಕದಲಿ ನಿನ್ನಷ್ಟು ಯಾರಿಲ್ಲವಿಲ್ಲಿ ಸುಗಂಧವತಿ
ಶಿಲ್ಪಿಯ ಶಿಲೆಯ ಕಲೆಯ ಬಲೆಯೊಳರಳಿ ನಿಂತ
ಸೌಂದರ್ಯವತಿ
ಅಷ್ಟಪೀಠಗಳಿಗೆ ಜನ್ಮವನಿತ್ತ ತಪೋ ಭೂಮಿಯು ನೀನು
ಕಾವೇರಿ ಗೋದಾವರಿಗಳ ತುಂಬಿ ಹರಿಯುವಂತ
ಜೀವ ನದಿಗಳ ಒಡಲು ನೀನು
ಕವಿ ರನ್ನ ಪಂಪ ರಾಘವಾಂಕರ ಪದಗಳಲಿ ಮಿಂದ
ನಿನ್ನನು....ನಾನಾವ ಪದಗಳಲಿ ಕಟ್ಟಿಕೊಡಲಿ ತಾಯೆ...

ಏನು ಮಾಡುತ್ತಿರುವರು ನೋಡು ? ನಿನ್ನನು..
ಗಂಧವತಿ ಎಂದೆ ಸದ್ದು ಗದ್ದಲವಿಲ್ಲದೆ ಕಡೆದು
ಕಡೆದು ಕಳ್ಳ ಸಾಗಾಣಿಕೆಯ ಮಾಡುತಿಹರು...!!
ಪ್ರೇಮ ಮೋಹದ ಮತಿಹೀನರು ನಿನ್ನ ಶಿಲೆಯ
ಕಲೆಯ ಕೊಳಕಾಗಿಸುತಿಹರು...!!
ಪುಣ್ಯದ ಮಣ್ಣೆಂದೆ ಲಾರಿ..ಲಾರಿಗಟ್ಟಲೆ ಅಗೆದು
ಬಗೆದು ಮಾರಿಬಿಟ್ಟರು...ಮಾರುತಿಹರು..ಮಾರಾಟದ
ಹೊಸ ದಾರಿಗಳನ್ನೂ... ಹುಡುಕುತಿಹರು
ಜೀವನದಿಗಳ ಹೊಂದಿದುರಿಂದಲೆ ತಾಯೆ.. ನೆರೆ
ಹೊರೆಯವರು ನಿನ್ನ ಮಕ್ಕಳು.. ಬಾಯಾರಿಕೆಯಿಂದ
ಸತ್ತರೂ ನೋಡದೆ.. ತಮ್ಮ ಹೊಲ ಗದ್ದೆಗಳಿಗೆ ಜಲವ
ಹರಿಸಿಕೊಂಡು.... ನಮ್ಮ ಬದುಕಿನಂಗಳವ ಬರಡಾಗಿಸಿ
ತಮ್ಮ ನೆಲಗಳನು ಹಸಿರಾಗಿಸಿಕೊಳ್ಳುತಿಹರು

ಸಾಕು ತಾಯೆ.. ಸಾಕಿನ್ನು ಕನ್ನಡಿಗರು ಶಾಂತಿ ಪ್ರಿಯರೆಂಬ
ಬಿರುದು... ಎಳೆದಿಕೊ ತುಕ್ಕು ಹಿಡಿಯುತ್ತಿರುವ ಖಡ್ಗವನು
ಝಳಪಳಿಸಿ ಬಿಡು.. ಎದುರಾಳಿಗಳ ಎದೆಯು ನಡಗುವಂತೆ
ಸಾರಿ ಬಿಡು ಯುದ್ಧವನು.. ಅನ್ಯರು ನಮ್ಮ ನೆಲವೆಂದು ಕಬಳಿಸಲು ಬರುವವರ ಕಾಲನು ಕತ್ತರಿಸಲು...‌
ನಮ್ಮ ನೆಲದನ್ನವನುಂಡು ಪರಕೀಯ ಭಾಷೆಯ
ಮಾತನಾಡುವ ನಾಲಿಗೆಯನ್ನು ಸೀಳಲು...
ಕಲೆಯ ಬೆಲೆಯನರಿಯದೆ ಶಿಲೆಯ ವಿರೂಪಗೊಳಿಸುವ
ಕೈಗಳನು ಕತ್ತರಿಸಲು...
ಇನ್ನೊಬ್ಬರ ಬಗೆಗೆ ಅನುಕಂಪವಿರದೆ ನೀರು..ನೀರೆನ್ನುವವರ
ನೆತ್ತರಿನ ಕಾಲುವೆಯನೆ... ಹರಿಸಲು...
ನಿನ್ನನೆ ಮಾರಿ.‌.. ಮೈ ತುಂಬಾ ರೋಗ ರುಜಿನಗಳ ಹೊಂದುವ
ಶ್ರೀಮಂತರ ದೇಹವನ್ನು ಅದೇ ಮಣ್ಣಲಿ ಮಣ್ಣಾಗಿಸಲು...

ಏನು ಮಾಡುವುದು ತಾಯೆ....‌? ಏನು ಮಾಡುವುದು ?
ನಾಡ ಕಾಯಲು ನಿಂತ ಕನ್ನಡಿಗರ ನೆತ್ತರದ ಸವಿಯನ್ನು
ಕೋವಿಯು ಸವೆಯುತಿದೆ...
ಹಿರಿಯರು ಹೊತ್ತಿಸಿದ ದೀಪವಿಂದು ಕ್ಷೀಣಿಸುತ್ತಿದೆ....
ಈಗಲೋ.. ಆಗಲೋ ಎಂಬಂತೆ ಬಿಕ್ಕುತಿದೆ...
ಬಿಸಿ ರಕ್ತದ ಯುವಶಕ್ತಿಯ ಮತಿಗಳ ಜ್ಞಾನದಾ...
ಎಣ್ಣೆಯು ಬೇಕಿದೆಯಿಂದು ತಾಯೆ....ಸೋಕಿಸೆಲ್ಲರ
ಮನದಲಿ ಜಾಗೃತಿಯ ಕಿಡಿಗಳನು.....ತಾಯಿ ಭುವನೇಶ್ವರಿ
ಮತ್ತೆ ಭೂ ಪಟದಲಿ ಹಿಂದೆಂದಿಗಿಂತಲೂ...ಪ್ರಜ್ವಲಿಸಲು