Tuesday, November 27, 2018

ತಮ್ಮಾ

ಕಿಸೆ ತುಂಬ್ದೊರ ಮಂಚದ ಆಸೆ
ನಿನಗ್ಯಾಕ ಬಂತೊ ತಮ್ಮಾ...
ಕಂಡು..ಕಂಡು ಕಣ್ಮುಚ್ಚಿ ನಡೆಯೋರ
ಮುಂದ.. ಬಣ್ಣ ಹಚ್ಚಿ ಗೆಲ್ಲಾಕ
ಆಗ್ತದೇನೊ ತಿಮ್ಮ..

ಏನ್ ಬರೀತಿರಿ...ಅಂತ
ಅವ್ರೆದರು ನಿಂತು ನಿ, ಏನು ಕೇಳ್ಬ್ಯಾಡೊ ತಮ್ಮಾ...
ಊರೂರ ಅಡ್ಡಾಡಿ ಅವ್ರ ಹೊತ್ತ
ತರೋ ಬಿರ್ದು ಬಾವ್ಲಿಗಳನ್ನ ನೋಡ್ಕೊಂತ
ಸುಮ್ಕಿದ್ಬಿಡು ತಿಮ್ಮ...

ನಾಡ ಕಟ್ತೀವಿ...ನಾಡ ಕಟ್ತೀವಿ ಅಂದ
ನಾಡ ಕಟ್ಟೋರ
ನಡುನ ಗಟ್ಟಿಲ್ಲ ನೋಡ್ತಮ್ಮಾ....
ಸ್ವಾಭಿಮಾನಾನ ಇಲ್ಲಂದ ಮ್ಯಾಲ, ಏನ್
ಕಟ್ಟಿ, ಗುಡ್ಡ ಹಾಕಿದ್ರೇನ ಬಂತೊ ತಿಮ್ಮ.‌.

ಮುಖಕ್ಕ ಬಳ್ಕೊಂಡಿದ್ದ ಸಾಲ್ದಂತ
ನಾಲ್ಗಿಗೂ ಬಣ್ಣ ಹಚ್ಗೊಂಡಾರೊ ಕೇಳ್ತಮ್ಮಾ...
ಅವ್ರ ಆಡಿದ ಮಾತನ್ನ ನಂಬಿ ಕುಂತೆಂದ್ರ...
ಮುಲ್ಲಾನ ಓದ್ಗಿನೂ ಓದಲಾರ್ದನ, ಕತ್ತ
ಕೊಯ್ದ ಬಿಡ್ತಾರೊ ತಿಮ್ಮ...

ಹೊರಾಕ ಹೆಗಲ ಗಟ್ಟಿಯದಾವ ಅನ್ಕೊಂಡ
ಹೊತ್ತು ಊರೂರ ಮೆರವಣ್ಗಿ ಹೊಂಡಬ್ಯಾಡೊ
ತಮ್ಮಾ...
ನೂರ ಎಕರೆ ಹೊಲ ಬಿತ್ನಿ ಮಾಡಿ ಬಂದ್ರ ಏನಾತು
ಸಂಜಿಕ...ದನಾನ ಕೊಟ್ಗ್ಯಾಗ ಕಟ್ತಾರೊ ತಿಮ್ಮಾ...

ನಂಬ್ಕಿ ಅನ್ನೊ.. ಹಾಲಿನ ಮಡಕ್ಯಾಗ, ಸದ್ದಿಲ್ದಂಗ
ಹಲ್ಲಿ ಬಡ್ದ ಹಾಕೋರ ಅದಾರೊ ತಮ್ಮಾ...
ಕುಡ್ದ ಮ್ಯಾಲ ಗೊತ್ತಾಗೊದ... ಹಾಲೊಳಗಿನ
ಹಾಲಾಹಲದ ಕರಾಮತ್ತು. ಹ್ಯಾಂಗರ ನಂಬಬೇಕು
ಮಂದಿ ನಗುನ ಹಿಂದಿರೊ ಮಸಲತ್ತು
ಅರಿಯೊದಾದ್ರು ಹ್ಯಾಂಗ ನೀನದಿಯಲ್ಲ ಇನ್ನೂ ತಿಮ್ಮ..

Monday, November 19, 2018

ಶಾಯರಿ ೪೦೪

ಯಾವ ಧರ್ಮದವನೆಂದು
ಬಾಯ್ತಪ್ಪಿಯು
ಕೇಳಬೇಡ
ಸಾಕಿ....
ಮೇಲುಕೀಳುಗಳ
ಗೋಡೆಯೆ ನನ್ನ
ಪ್ರೀತಿಗಿಂದು
ಅಡ್ಡವಾದದ್ದು

Saturday, November 17, 2018

ನಮ್ಮವ್ವ

ಗಲ್ಲಿ.. ಗಲ್ಲಿಯೊಳಗು
ಜಾತಿಯ
ಝೆಂಡಾ ಕಟ್ಯಾರು
ನೋಡವ್ವ..
ಯಾವ ಝೆಂಡಾದ
ನೆರಳಾಗ ಕುಂತ್ರೇನ ಬಂತು..
ಮುಕ್ತಿಯನ್ನೊದ
ಸಿಗುವಲ್ದ ಆಗೈತೆಲ್ಲೊ
ನಮ್ಮವ್ವ

ಮೂಲಿ...ಮೂಲಿಗೊಂದು
ಗುಡಿ ಗುಂಡಾರ ಕಟ್ಟಿ
ದೀಪಾ ಹಚ್ಚ್ಯಾರ
ನೋಡವ್ವ
ಎದ್ಯಾನ ಗುಡಿನ
ಹಾಳ್ಗೇಡವಕೊಂಡ
ತಾವ ಕತ್ಲದಾಗ ಕುಂತಾರಲ್ಲೊ
ನಮ್ಮವ್ವ

ಸುರಿಯೊ ಮಳಿಗೆ
ಜಾತಿಲ್ಲಂತಾರ...
ಹರಿಯೊ ನದಿಗ್ಯಾಕ
ಹೆಸರಿಟ್ಟಾರು
ಹೇಳವ್ವ
ಬಿತ್ತೊ... ಬೆಳಿಗೆ
ಹೆಸರಿಡ್ತಾರು...
ಹಸಿಯೊ ಹೊಟ್ಟಿಗೆ
ಏನಂತ ಹೆಸರಿಡ್ತಾರೊ
ನಮ್ಮವ್ವ

Friday, November 9, 2018

ಅವಳೆಂದರೆ.....

ಅವಳೆಂದರೆ...
ಏನು ಹೇಳಲಿ ಸಾಕಿ...
ಅರ್ಥವಿಲ್ಲದಷ್ಟು ಇರುಳುಗಳಿಗೆ ಹೂವಾಗಿ,
ಎದೆಯತೊಗಲು ಹರಿದು ಹೋಗಿ.. ಕರುಳ
ಬಳ್ಳಿಗೆ ಹಾಲನಿಯ್ವವಳ್ಳೇನ್ಬಲೆ...?
ಹಗಲ ರವಿಗೆ ಬೆನ್ನ ಕೆಂಪಗಾಗಿಸಿ....‌ತೊಯ್ದ
ರವಿಕೆಯಲಿ ನಾಲ್ಕು ದುಡ್ಡನು ದುಡಿದು ತಂದವಳು,
ನಾಲ್ಕಾಣೆ..ಬಿಲ್ಲೆ ಕಟ್ಟಿದವನ ಬಡಿತಕ್ಕೆ ದಮ್ಮಡಿಯನೂ
ಸೋತು, ತಣ್ಣೀರನೆ ಕುಡಿದು ತಣ್ಣಗೆ ಮಲಗುವವಳೇನ್ನಲೆ..?

ಅವಳೆಂದರೆ...
ಹೇಗೆ ಬರೆಯಲಿ ಸಾಕಿ....
ತುಂಬು....ಸಾಗರದೊಡಲೆಲ್ಲಾ...ಉಪ್ಪೆ ತುಂಬಿಕೊಂ
ಡಿದ್ದರು... ಮುತ್ತು.. ರತ್ನಗಳ ಕೊಡುವುದಿಲ್ಲವೇನು..?
ಮಾನಸಿಕ, ದೈಹಿಕ, ನೋವೊ, ನಲಿವೊ, ಸಹ್ಯವೊ ಅಸಹ್ಯವೊ,
ಬೇಕು..ಬೇಡಗಳರ್ಥವನರಿಯದೆ...ಎದೆಯೊಳಗೆ,
ಧಗಧಗಿಸುವ ಜ್ವಾಲಾಮುಖಿಯನು ಅದುಮಿಕೊಂಡು..
ಮಣ್ಣಿನ ಋಣವ ತೀರಿಸಲು....ಶತೃಗಳ ಪಾಲಿಗೆ, ಬೆಂಕಿ ಕಿಡಿಗಳನೆ...ಕಾರುವ ಗಂಡೆದೆಯ ಭಂಟರನ್ನು ಹೆತ್ತು
ಕೊಡುವವಳ ಬಗ್ಗೆ.... ಬರೆದು ಬಿಡಲಿ ಹೇಗೆ
ಅಲ್ಪ ಮತಿಯಲಿ...

ಅವಳೆಂದರೆ....
ಹಾಡಿ ಹೊಗಳಿಬಿಡಲೆ ಸಾಕಿ....
ಹ್ಞೂಂ.....ಹ್ಞೂಂ....ಸಾಧ್ಯವೆ...ಇಲ್ಲ,
ಮನದಲ್ಲಿ ಸಾವಿರ ಕಲ್ಮಶಗಳ ತುಂಬಿಕೊಂಡು...
ಹೇಗೆ ಹೊಗಳಲಿ ನಾನವಳ ಸಾಧನೆಗಳ..
ಗಂಡು...ಗಂಡೆಂಬ ಅಹಂನ ರೆಂಬೆಯ ಕತ್ತರಿಸಲಾಗದೆ,
ಅವಳಬಲೆಯೆಂದು ಹಿಡಿದಿಟ್ಟುಕೊಂಡಿರುವ ಮುಷ್ಠಿಯನು
ಸಡಿಲಿಸದೆ..
ಕಕ್ಷೆಯ ಮುಟ್ಟಿ ಬಂದರು... ಮನೆಯ ಹೊಸ್ತಿಲನು ದಾಟಿಸಲು
ಹಿಂಜರೆಯುತ್ತಿರುವಾಗ.., ನಡು ರಾತ್ರಿಯ ಪಾಡು ಬೇಡ..!!!
ನಡು ಹಗಲಲ್ಲೆ ಎಸುಳೆಗಳ ಹುರಿದು ಮುಕ್ಕುವ..ಕೆಸರು
ಮನಸಿನ ಹೊಲಸನು ತೊಳೆದುಕೊಳ್ಳುವ ತನಕ..
ಹೇಗೆ ಹಾಡಿಬಿಡಲಿ ಕಿವಿಗವಡಿಚ್ಚುವ ವಾದ್ಯದಲಿ...
ಅರ್ಥವಾಗದ ಹುಳುಕು ಪದಗಳಲಿ...

ಅವಳೆಂದರೆ....
ಅವಳೆ ಸಾಕಿ... ಅವಳೆ...
ಮಧುವು..ಅವಳೆ, ಮತ್ತು ಅವಳೆ, ವಿಷವು ಅವಳೆ
ಅಮೃತವು ಅವಳೆ, ಲಾಲಿ ಹಾಡಿಸುವುದು ಗೊತ್ತು...
ಜೊಲಿ ಹೊಡೆಸುವುದು ಗೊತ್ತು.. ಸದ್ದಿಲ್ಲದೆ, ಮಣ್ಣಲಿ
ಮಲಗಿಸಿ... ಗೋರಿಯ ಮೇಲೊಂದು ನಗುವ ಹೂವೊಂದ
ನಿಡುವ ಕಲೆ ಅವಳಿಗೆ ಮಾತ್ರ ಗೊತ್ತು... ನನಗೇನು
ಗೊತ್ತಿಲ್ಲ ಅವಳೆಂದರೆ...ಹುಡುಕಬೇಕಿದೆ.., ಕಂಡುಕೊಳ್ಳಬೇಕಿದೆ, ಅರ್ಥ ? ಮಾಡಿಕೊಳ್ಳಬೇಕಿದೆ..
ಹರಿವ ನೀರಿನ ವೇಗ.... ಅರಿತುಕೊಂಡಷ್ಟು..ಅರ್ಥವಾಗದೆ
ಆಳಕ್ಕೆ ಕರೆದೊಯ್ಯುವ ಅವಳ ಮನದ ಸುಳಿಯನ್ನು
ಅರಿತವರಾರು... ಅವಳ ಪಾದಕ್ಕೆ ಶರಣಾಗದ ಹೊರತು.
ಅದನ್ನಾದರು ಕಂಡುಕೊಳ್ಳಬೇಕಿದೆಯಲ್ಲ.. ಶರಣಾಗತಿಯ
ಧೈರ್ಯವನ್ನು...

ಸಾಕಿ....
ಹಚ್ಚಿಟ್ಟುಬಿಡು ಒಂದು ದೀಪವನ್ನು ಈ ಬೆಳದಿಂಗಳಿರುಳಿಗೆ
ಹುಡುಕಿಕೊಂಡು ಹೊರಟುಬಿಡುವೆನೀಗಲೆ..
ಪದಪುಂಜಗಳಲಿ ಕಟ್ಟಿಕೊಡಲು..ಅವಳನ್ನು..
ಈ ಅಕ್ಷರ ಬಡವನ ಜೋಳಿಗೆಯಲ್ಲಿ ಪದಗಳಿಲ್ಲ,
ಅವಳರ್ಥೈಸಿಕೊಳ್ಳದ ಬಾಳಿಗೆ ನೆಮ್ಮದಿಯಿಲ್ಲ...

Thursday, November 8, 2018

ಶಾಯರಿ ೩೮೧

ಮದ್ಯವು...
ಕೊನೆಯ ಬಟ್ಟಲದ್ದೆ...
ಯಾದ್ದಾರೇನು
ಸಾಕಿ...
ಮತ್ತೇರಿಸದಿರುವುದೆ..

ಎಷ್ಟು..? ಯಾವಾಗ?
ಹೇಗೆ? ಸುರಿದೆಯೆಂಬುದರ
ವಿಮರ್ಶೆ ಏಕೀಗ...?
ಸುರಿಯುವವಳ
ಎದೆಯಲ್ಲಿ... ಬತ್ತದೆ
ಒಸರುತಿರುವ...
ಒಲವ
ಸೆಲೆಯೊಂದಿರುವಾಗ

Tuesday, November 6, 2018

ಶಾಯರಿ ೩೬೦

ಸಾಕಿ...
ನಿ...
ಸುರಿದ
ಮದ್ಯದಿಂದಲೆ
ಬದುಕುಳಿದಿದೆ
ಈ ಜೀವ...
ಏನು ಮಾಡಲಿ,
ಅನುದಿನವು ಬಿಡದೆ
ಕೊಲ್ಲುತಿದೆ ಅವಳ
ಮೋಸದಾ...
ಭಾವ

Monday, November 5, 2018

ಸಾಕಿ

ಪುಡಿಗಾಸು ಚೆಲ್ಲಿದರೆ...ಅನುಭವಿಸಲಾರದಷ್ಟು
ಸುಖವು ಸಿಗುವುದು ಸಾಕಿ...ನಿನ್ನರಮನೆಯಲ್ಲಿ..
ಝಣಝಣಿಸುವ ಹಣದ ಥೈಲಿಯನ್ನೆ...ಹೊತ್ತು
ತಂದಿರುವೆ, ಹುಡುಕಿದರು... ಮಧುಶಾಲೆಯ ಮೂಲೆ ಮೂಲೆಗಳಲ್ಲಿ ಹಣವನ್ನು ಚೆಲ್ಲಿ, ಹಿಡಿ ಪ್ರೀತಿಯು ದಕ್ಕಲಿಲ್ಲವಲ್ಲ

ಹಚ್ಚಿದ ದೀಪವನಾರಿಸಿ...ಮಲ್ಲಿಗೆಯ ಹರಡಿ, ಹೊಸಕಿ
ಕತ್ತಲಲ್ಲಿಯೆ ಸುಖವನ್ನು ಕಂಡುಕೊಳ್ಳುವರಲ್ಲ..!!!
ಸಾಕಿ...‌ಮದವೇರಿದ ಮಾಂಸದ ಮುದ್ದೆಗಳು..
ಕೈಯಲ್ಲಿ ಸುಡವ ಹಣತೆಯನ್ನೆ ಹಚ್ಚಿಕೊಂಡು
ನಡೆದೆ ಬೆಳಕಿನಲ್ಲಿ.. ತುಳಿದದ್ದು ಮಾತ್ರ
ವಿರಹದ ವಿಷವೇರಿಸುವ ಮುಳ್ಳುಗಳನು