Friday, June 14, 2019

ಗಾಲಿಬ್

ಬೆತ್ತಲೆಯ ಬೆನ್ನಿನ‌ ಮೇಲೆ, ನೂರೊಂದು
ಶಾಯರಿಗಳನ್ನು ಬರೆಯುತ್ತೇನೆಂದು
ಮಾತನ್ನು ಕೊಟ್ಟಿದ್ದೆಯಲ್ಲ ಗಾಲಿಬ್...
ಕತ್ತಲಲಿ ರಸಿಕರು ಗೀರಿಟ್ಟು ಹೋದ ಮೆರೆಗಳ
ನೋವಿದೆ, ತಣ್ಣಗಾಗಬೇಕವು.... ಚೂರಾದರು,
ನೀ ಬರೆವ ಸಾಲುಗಳಿಗೆ...

ಬೇಕಿದ್ದರೆ...ನಿನ್ನ ಲೇಖನಿಯನ್ನೂ... ಮದ್ಯದ
ಬಟ್ಟಲಿನಲ್ಲಿ ಅದ್ದಿ ತೆಗೆ ಗಾಲಿಬ್....
ಗೀಚುವ ಪ್ರತಿ ಪದದ ಬೇರು.... ಇಳಿಯಬೇಕು
ನನ್ನೆದೆಯೊಳಗೆ, ನನಗೆ ಗೊತ್ತಿಲ್ಲ... ಯಾವ
ಘಳಿಗೆಯಲ್ಲಿ ಮಗ್ಗಲು ಬದಲಿಸುವೇನೊ, ಏನೊ?
ಮರೆತು ಹೋಗಬಾರದೀ...ರಾತ್ರಿ ಅಲ್ಲವೆ!!?

ಇಂದಿರುಳಿಗಾದರೂ...ಮದ್ಯವನ್ನು ಕುಡಿಯದಿರು
ಗಾಲಿಬ್...
ಟಿಪಾಯಿ ಮೇಲೆ‌ ಎಂದಿಗಿಂತಲೂ...ಇಂದು ತುಸು
ಹೆಚ್ಚಿಗೆ ಜೇನನ್ನೆ ಸುರಿದಟ್ಟಿರುವೆ ಬಿಸಿ ಹಾಲಿಗೆ...
ನೊಣವು ಬಿದ್ದು, ತಣ್ಣಗಾಗಿ, ಕೆನೆಗಟ್ಟಿ ಒಡೆದು
ಹೋಗುವ ಮುನ್ನ, ಕುಡಿದು... ಜಯಸಿಬಿಡು ನನ್ನನೊಮ್ಮೆ

ಇದೊಂದು ದಿನವಾದರು ಹಾರಾಡಲಿ ಬಿಡು
ಹೆರಳುಗಳು...ಗಾಲಿಬ್
ದಿನವು ಒಲವಿಲ್ಲದ ಹೂಗಳ ಮುಡಿದು..ಮುಡಿದು
ಉಸಿರುಗಟ್ಟಿ ಹೋಗಿವೆ, ಮನಸ್ಸನ್ನೆ ಹರಿ ಬಿಟ್ಟಿದ್ದೇನೆ...
ಇವು ಯಾವ ಲೆಕ್ಕ!!!,  ಉಸಿರಿಬಿಡು ಈ ಬಂಜೆ ರಾತ್ರಿಗೆ,
ನಿನ್ನ ನನಪಿನ ಗರ್ಭವ ಕಟ್ಟಿಕೊಳ್ಳಲಿ...

ಒಗೆದು ಒಣ ಹಾಕಿದರೆ...ಮತ್ತೆ ಬಿಳಿಯಾಗುವುದೇನು?
ನನ್ನೀ.... ದುಪ್ಪಟವು ಗಾಲಿಬ್....
ಕೈ ತಾಕಿ ಚೆಲ್ಲಿದ ಮದ್ಯದಿಂದ ಕಲೆಯಾಗಿ ಹೋಗಿದೆ...
ಹೆಣ್ಣು ತೊಡುವ ಬಟ್ಟೆಯು ಕಲೆಯಾಗಬಾರದಂತೆ ನಿಜವಾ?
ಹೊತ್ತು...ಹೊತ್ತಿಗೂ...ಹೊಲಸಾಗುವ ನಾನು ನಿರ್ಲಜ್ಜಳಾ?
ಹಗಲಿರುಳುಗಳ ಅರಿವಿಲ್ಲದೆ, ನನ್ನನೆ ಹುಡುಕಿಕೊಂಡು
ಬರುವ, ನೋವಿನೆದೆಗಳ ತಣಿಸುವ ದೇವತೆಯಾ?
ಯಾರು ನಾನು... ಗಾಲಿಬ್...

ಚುಟುಕು

ನಿ ಹೀಗೆ
ನಕ್ಕಾಗಲೆಲ್ಲ
ಮುತ್ತುಗಳು
ಉದರುತ್ತವೆ
ಎತ್ತಿಟ್ಟುಕೊಳ್ಳುವೆ!
ಕೋಪಿಸಿಕೊಂಡಾಗ,
ಮಾಲೆಯ ಪೋಣಿಸಿ
ನಿನ್ನ ಕೊರಳಿಗೆ
ಕಟ್ಟಿಬಿಡುವೆ!

Thursday, June 13, 2019

ಚುಟುಕು

ಅವನ
ನೆನಪಿನಲ್ಲಿ ಅಂಗೈಯಲ್ಲಿ
ಗೋರಂಟಿಯನ್ನು
ಹಚ್ಚಿಕೊಂಡಿರುವೆ,
ರಂಗೇರುವುದು?
ಇಲ್ಲವೋ? ಗೊತ್ತಿಲ್ಲ!!
ಇನಿಯ....
ನಿನ್ನ ನೆನೆದಾಗಲೆಲ್ಲ
ಕೆನ್ನೆಯು ಮಾತ್ರ
ರಂಗೆರುತ್ತದೆ..

Tuesday, June 11, 2019

ಚುಟುಕು

ಬೆಳಗುವ
ಬೆಳಕನ್ನು
ಬೆರಗುಗೊಳಿಸಬೇಕಿದೆ!
ಅವಳ ಕಣ್ಣ
ಕೊಳದಲ್ಲಿ ನನ್ನ
ರೂಪವನ್ನು
ತೇಲಿ ಬಿಡಬೇಕಿದೆ!

Monday, June 10, 2019

ಚುಟುಕು

ನೆನಪುಗಳಿಗಿಂತ ನಂಬಿಕೆಯ
ಬುನಾದಿ ಅಲ್ಲಾಡಿದಾಗ,
ಸಜೀವವಾಗಿಯೇ.....
ಹುಗಿದು ಹಾಕಿದಂತಹ ಭಾವ!

ವಿಷವ ನುಂಗಿಕೊಂಡು
ನೀಲಕಂಠನಾಗಬಹುದಿತ್ತು,
ಗೊತ್ತಿರಲಿಲ್ಲ ನನಗೂ... ಹೊರುವ
ಬೆನ್ನನೆ ಬಗಿಯುವ ಅವರ ಸ್ವಭಾವ!

Friday, June 7, 2019

ಚುಟುಕು

ಮಡಿಯುವ
ಮೊದಲೆ
ಹೇಳಿಬಿಡು ನೀನು...
ಹ್ಞೂಂ... ಎಂದರೆ,
ಬಿರಿದ ತುಟಿಗಳಲ್ಲಿ...
ಸವಿಜೇನ, ತುಂಬಿ ಬಿಡುವೇನು
ನಾನು...

Thursday, June 6, 2019

ಚುಟುಕು

ಕೊಂದದ್ದು
ತಾನಲ್ಲವೆಂಬುದು
ಝಹಃರ್ ಗೂ
ಗೊತ್ತಿತ್ತು...
ಕಾರಣವಾದ ರಂಗೀಯ
ಕನಸು... ಮೂಲೆಯಲ್ಲಿ
ನಿಂತು ನಗುತ್ತಿತ್ತು...