Sunday, April 12, 2020

ಶಾಯರಿಗಳು ಕನ್ನಡ

ಬಾವಿಕಟ್ಟಿ ಮ್ಯಾಲ ಎಷ್ಟೊ ಮಂದಿ
ಕೊಡಾ ನೀರನ್ನ ಜಗ್ಗಿ ಕೊಟ್ನಿ ಹುರುಪಿಲೆ
ಎದ್ರು ಮನಿ ಹನ್ಮಿ ಮೊಖ ನೋಡ್ಕಂತ!
ಮನಿಗ ಬಂದ ಅತ್ಗೊಂತ ಕುಂತಿನಿಲ್ಲೆ
ಅಂಗ್ಯಯ್ಯಾಗ ಎದ್ದ ಬೊಬ್ಬಿ ಉದ್ಕೊಂತ!

ನಮ್ಮವ್ವ ಗಿಣಿಗೆ ಹೇಳ್ದಂಗ ಹೇಳ್ತಿದ್ಲು
ಸುಮ್ಕ ಕುಂದ್ರ ಮನಿಯಾಗ, ಸುಮ್ಕ ಕುಂದ್ರಂತಂದ
ತಮ್ಮಾ ಅವ್ವನ ಮಾತ ಕೇಳಲಿಲ್ಲಲೆ!
ಹನ್ಮಿ ಕೇಳಿದ್ಲಂತಂದ ಮೊಳ ಹೂವ 
ತರಾಕ ಹೋದೆ ಬಜಾರಕ್ಕ, ಮೀಸಿ ಮಾಂವ
ಕರೋನಾ ಬಂದೈತಂತ, ಮೈಯ್ಯಾಗ ಕರಿಯವ್ವ
ಹೊಕ್ಕಂಗಾಡಿ, ಬೆಸ್ನ್ಯಾಗ ನಾಕ ಬಿಟ್ಟ
ಕಳ್ಸಿದ್ನಲೆ ಕುಂಡಿ ಮ್ಯಾಲೆ!


ಚುಟುಕು

ಕಾಮದ ಹಸಿವು
ತಣಿಸುವ
ಕರ್ಪೂರದ ಬೊಂಬೆಗಳಿಗೆ
ಹೊಟ್ಟೆಯ ಹಸಿವು
ಕೊಲ್ಲುತಿದೆ ಈಗ.
ದೇಹದಿಂದಲ್ಲದಿದ್ದರೂ,
ಮನಸ್ಸಿನಲ್ಲಿ ಎಷ್ಟೊಂದು
ಮೈಲಿಗೆಯಾಗಿಲ್ಲ ನಾವು?
ಸಹಾಯ ಹಸ್ತವನ್ನು ನೀಡಿ
ಹಸಿವೆಂಬ ರಾಕ್ಷಸನನ್ನು ನಿಯಂತ್ರಿಸೋಣ.
ಇಲ್ಲವಾದರೆ, ಸತ್ತು ಹೋದ
ಅವರ ಹೆಣಗಳನ್ನು ಕಂಡು
'ಅಯ್ಯೋ' ಎಂದು ಕರೆಯಲು
ನಾಲಾಯಕರಾಗಿಬಿಡುತ್ತೇವಲ್ಲವೆ?

ಕೆಂಪು ದೀಪಗಳು ಉರಿಯುತಿರಲಿ 🙏🙏🙏

Saturday, April 4, 2020

ಚುಟುಕು

ಶರ್ಮಿಳೆಯೆ.....
ಆದರೇನು?
ದಾಟಬಾರದಿತ್ತು
ಲಕ್ಷ್ಮಣನ ರೇಖೆ!
ನಿಯಮ ಪಾಲಿಸದ
ನಿಮ್ಮ 'ಜಾಲಿ ರೈಡ್'
ತಂದೊಡ್ಡಿತಲ್ಲ ಅಪಘಾತ!
ತಪ್ಪಿಗೆ ಸುಂಕವ ಕಟ್ಟಿ. 
ಈ ನಡೆಯಿಂದ ಸಿನಿ 
ರಸಿಕರಿಗಂತೂ ಆಗಿದೆ
ತುಂಬಾ ಆಘಾತ!

Friday, April 3, 2020

ಚುಟುಕು


ನಿಮ್ಮ ಬಳಿ
ದೀಪವನ್ನು ಬೆಳಗಿಸಲು
ಎಣ್ಣೆಯಿಲ್ಲವೆ?
ಚಿಂತೆಯೇನಿಲ್ಲ!!
ಅತ್ಮದೊಳಗಿನ
ಜ್ಯೋತಿಯನ್ನಾದರು
ಬೆಳಗಿಸಿಕೊಳ್ಳಿ
ನಾಲ್ಕು ಜನರಿಗೆ
ಬೆಳಕಾದರು ಆಗಲಿ.
ಕಾರಣವಿಷ್ಟೆ,
ನಾಳೆ ನೀವು ಸತ್ತರೆ
ಹೊರಲು ಆ ನಾಲ್ಕು
ಹೆಗಲುಗಳಾದರು
ಬೇಕಲ್ಲ!!

Tuesday, March 31, 2020

ಚುಟುಕು


ಸಾವು...
ನಮ್ಮಪ್ಪ, ತಾತ
ಮುತ್ತಾತನ್ನು
ಬಿಟ್ಟಿಲ್ಲ! ಎಲ್ಲಾರಿಗೂ
ಒಂದಿಲ್ಲ ಒಂದಿನ
ಪಿಂಡಾ ಇಟ್ಕೊಳ್ಳದು
ತಪ್ಪಿದ್ದಲ್ಲ!
ಮನಸಿನ ಬ್ಯಾನಿ
ಏನಪಾ ಅಂದ್ರ,
ನಾ ಹೋದ ಮ್ಯಾಲ
ನಾಕ್ ಮಂದಿ, ನಾಕ ದಿನ
ಹೆಚ್ಗಿ ಬಾಳುವಂತದ್ದು
ಏನರ ಮಾಡಿಟ್ಟಿನೇನು?
ಅನ್ನೊದ, ಗುಂಗಿ ಹುಳ 
ಕೊರ್ದಂಗ
ಕೊರಿಯಾಕ್ಹತ್ತೈತಿ.

ಚುಟುಕು


'ಕಲ್ಲು'
ದೇವರಾಗಿದ್ದ
ಸಮಯವೀಗ,
ಹಿನ್ನಡೆಯಲ್ಲಿದೆ.
ಕಲ್ಲು ಮನಸ್ಸಿನವರೀಗ
ದೇವರಾದರಷ್ಟೇ
ಮನುಜ ಪಥವು
ಮುನ್ನಡೆಯುತ್ತದೆ.

ಚುಟುಕು

ಕಾಮ-ಕ್ರೋಧ
ಲೋಭ- ಮೋಹ
ಮದ- ಮತ್ಸರ
ಜಾತಿ-ಮತ
ಪಂಥಗಳನ್ನೂ
ಮೀರಿ... ಬದುಕಿನಲ್ಲಿ
ಹಸಿವೊಂದಿದೆ.
ಇದಕ್ಕಾಗಿಯೇ....
ಗಂಟು ಮೂಟೆಯ
ಹೊತ್ತುಕೊಂಡು,
ಸಾಯವವರೆಗೂ
ದಾರಿಯನ್ನು
ಸವೆಸಬೇಕಿದೆ.