Saturday, April 25, 2020

ಕಥಾ

'ಹಲೋ... ಯಪ್ಪಾ ನಾನು '
'ಗೊತ್ತಾತ ಹೇಳಲೆ, 
'ಇಲ್ಲೆ ಸರ್ಕಲ್ ನ್ಯಾಗ ಒಬ್ಬಾಂವ ಪೋಲೀಸ್ ಗಾಡಿ ಚಾವಿ ಕಸ್ಗೊಂಡಾನ'
'ಹ್ಞಾಂ, ಚಾವಿ ಕಸ್ಗೊಂಡಾನ, ನಾನ ಯಾರಂತ ಹೇಳಿದಿಲ್ಲ ನಿ ಅವಂಗ'
'ಹೇಳಿದ್ರು ಬಿಡವಲ್ಲಂವಾ'
'ಏನಾ? ನನ್ ಹೆಸ್ರ ಹೇಳಿದ ಮ್ಯಾಲು ಬಿಡುವಲ್ನಾ ಅಂವ, ಮಬ್ಬಸೂಳೆಮಗನ್ನ ತಂದ ನಡ್ಮನಿಯಾಗ ಇಟ್ರಂತ. ಎಲ್ಲೆ ಕೊಡಿಲ್ಲಿ ಅವ್ನ ಕೈಯ್ಯಾಗ ಪೋನ ಒಂತಟ್ಗ, ಹುಚ್ಚ ಬಿಡಸ್ತಿನಿ ಇವತ್ತ ಅವಂದ.'

'ಹೇಳ್ರಿ' ಸ್ವಲ್ಪ ಖಾರವಾಗಿಯೇ ಕೇಳಿದನು ಸಹದೇವಪ್ಪ.
'ನಾನೊ ಸಿಂಡೂರ ಹಳ್ಳಿ ಮೆಂಬರ ಮಾತಾಡೊದು'
'ಏನಾತೀಗ' 
'ಏನಿಲ್ಲ, ನಂ ಹುಡ್ಗನ ಬೈಕಿನ ಚಾವಿ ಕಸ್ಗೊಂಡಿಯಂತಲ್ಲ ಯಾಕ?'
'ಅವಂದ ಡ್ರೈವಿಂಗ್ ಲೈಸೆನ್ಸ್ ಇಲ್ಲ. ಮೇಲಾಗಿ ತಲಿಗೆ ಹೆಲ್ಮಟ್ ಹಾಕ್ಕೊಲಾರ್ದನ ಗಾಡಿ ಓಡ್ಸಕೊಂಡ ಬಂದಾನ'
'ಹ್ಹ....ಹ್ಹ..ಹ್ಹ... ಇಷ್ಟ ಅನ, ನಾನೆಲ್ಲರ ಯಾವ್ದರ ಮಾಲ ಹಾರ್ಸ್ಕೊಂಡ ಹೊಂಟಾನಂತ ತಿಳ್ಕೊಂಡಿದ್ಯಾ, ಅಲ್ಲೊ ಮಾರಾಯಾ ಅಂವ ಈ ಗಾಡಿಯಲ್ಲ ಯಾ ಗಾಡಿ ಒಡ್ಸಿದ್ರುನು ಹೆಲ್ಮಟ್ ಹಾಕೊಳ್ಳೊದಿಲ್ಲ ಅದು ಕೆಳ್ಗಿಂದರ ಇರ್ಲಿ, ಮ್ಯಾಗಿಂದರ ಇರ್ಲಿ ಅಂತ ವಯಸ್ಸದು, ಸುಮ್ನ ಗಾಡಿ ಚಾವಿ ಕೊಟ್ಟ ಕಳ್ಸ'
'ಕೊಡ್ಲಿಲ್ಲಂದ್ರ?'
'ಕೊಡ್ಲಿಲ್ಲಂದ್ರ?' ಕೋಪ ನೆತ್ತಿಗೇರಿ 'ಕೊಡ್ಲಿಲ್ಲಂದ್ರ ಹಗಾ ಅಲ್ಲ, ನೀನಲ್ಲ ನಿಮ್ಮನಿ ದೇವ್ರು ಕೊಡುತ್ತ ನೋಡುವಂತಿ ಬೇಕಿದ್ರ'
'ಮೊದ್ಲ ನಿಮ್ಮನಿ ದೇವ್ರ ಉಳಸ್ಕೊ ಆಮ್ಯಾಲ ನಮ್ಮನಿ ದೇವ್ರ ಹತ್ರ ಹೋಗುವಂತಿ'
'ನೋಡ ತಮ್ಮ ಛಲೊ ಅಲ್ಲಿದು ನಾನು ಸೀದಾ ಎಮ್ ಎಲ್ ಎ ಸಾಹೇಬ್ರಗ ಖಬರ ತಿಳ್ಸಿ ನಿನ್ನ ಖಬರಗೇಡಿ ಮಾಡ್ಬಿಡ್ತೇನ ಹುಷಾರ'
'ಯಾರಿಗೇರ ಹೇಳ್ಕೊರೊ, ನಂಗಿಂತವಲ್ಲ ಆಗಿ ಬರೋದಿಲ್ಲ, ಸುಮ್ನ ಫೈನ್ ಕಟ್ತಿರ್ಬೇಕು ಹೋಗ್ತಿರಬೇಕ ಅಷ್ಟ'
ಹುಚ್ಚನಂತಾಗಿಬಿಟ್ಟ ಸೋಮಯ್ಯ. ತಕ್ಷಣವೆ ಪೋನ್ ನ್ನು ಕಟ್ ಮಾಡಿ, ಎಮ್.ಎಲ್.ಎ ಪಿ.ಎ.ಗೆ ಪೋನಾಯಿಸಿದಾ.
ಒಂದು ಎರಡು ಮೂರ ಸಲದ ಪ್ರಯತ್ನದ ನಂತರ ರಿಸೀವ್ ಮಾಡಿದ
'ಹಲೋ ಬಸವರಾಜರ ನಾನ್ರೀ ಸಿಂಡೂರ ಹಳ್ಳಿ ಮೆಂಬರ ಸೋಮಯ್ಯ ಮಾತಾಡೊದ್ರಿ'
'ಹ್ಞಾಂ ಹೇಳ್ರಿ' ಪಿ.ಎ‌. ಉದಾಸೀನ ಧನಿಯಲ್ಲಿ.
'ನಾನ್ರೆಪಾ ಸೋಮಯ್ಯಾ, ಮಾವಿನತೋಪಿನ ಸೋಮಯ್ಯ ರೀ, ಹೋದ್ವಾರ ನಂ ಹಳ್ಳಿಗೆ ಬಂದಾಗ ಬಿಸಿಬಿಸಿ ಚಪಾತಿ, ನಾಟಿ ಕೋಳಿ, ಕುಚಲಕ್ಕಿ ಅನ್ನ ಉಂಡ ಹೋಗಿದ್ರೆಲ್ರಿ'
'ಓಹೋ..‌ ನೀವಾ...' ನೆನಪಿಸಿಕೊಂಡವರಂತೆ
'ಹೊನ್ರಿ ಯಪ್ಪಾ, ಸಾಹೇಬ್ರ ಅದಾರನ್ರಿ?'
'ಇಲ್ರಿ ಅವ್ರ ಮೀಟಿಂಗನ್ಯಾಗ ಅದಾರ, ಇನ್ನೊಂದೆರಡ ತಾಸ ಟೈಂ ಹಿಡಿತದ ನೋಡ್ರಿ'
'ಚೂರ ಅರ್ಜಂಟ ಇತ್ತಲ್ರಿ'
'ಸಣ್ಣ ಸಾಹೇಬ್ರ ಅದಾರ ಇಲ್ಲೆ, ಅವ್ರ ಕೈಯ್ಯಾಗ ಬೇಕಿದ್ರ ಕೊಡಲೆನ್ರಿ'
'ಹೇ...ಹೇ.. ಕೊಡ್ರೆಪಾ ಕೊಡ್ರಿ ನಂ ಭಾವಿ ಧನಿಗಳ್ವರು' ಹಲ್ಲನ್ನು ಗಿಂಜುತ್ತಾ,
'ಹಲೋ ಹೇಳ್ರಿ ಯಾರದು?' ಎಮ್.ಎಲ್.ಎ. ಮಗನು ಮಾತಾಡುತ್ತಾ.
'ಧನೆರ ನಾನ್ರೀ ಸಿಂಡೂರ ಗ್ರಾಂ ಷಂಚಾಯ್ತಿ ಮೆಂಬರ್ ಸೋಮಯ್ಯ ಮಾತಾಡೊದ್ರಿ'
'ಹ್ಞಾಂ, ಗೊತ್ತಾಯ್ತು ಏನ್ ಹೇಳಿ ವಿಷಯ'
ನಡೆದದ್ದನ್ನೆಲ್ಲ ಹೇಳಿದನು.
'ಇಷ್ಟಕ್ಕೆಲ್ಲ ಪೋನ್ ಮಾಡಿ ನಂ ಸಮಯಾನ ಹಿಂಗೆಲ್ಲ ಹಾಳ ಮಾಡ್ಬಾರ್ದ ರಿ ಸೋಮಯ್ಯ'
'ಅಯ್ಯೋ ಬ್ಯಾಸ್ರ ಮಾಡ್ಕೊಬ್ಯಾಡ್ರಿ ದೇವ್ರು. ಆ ಯಪ್ಪಗ ಎಷ್ಟೊಂದ ಧಿಮಾಕಂತಂದ್ರ ದೊಡ್ಡ ಧನೆರ ಹೆಸ್ರ ಹೇಳಿದ್ರು, ನನ್ ಮುಖ್ಳಿ ಹಿಂದ ಹೇಳ, ಅನ್ನುವಂಗ ಮಾತಾಡ್ತನ್ರಿ ಅಂವ. ಅಲ್ಲ ಒಬ್ಬ ಸಣ್ಣ ಪಿ.ಸಿ. ಧನೆರ ಹೆಸ್ರಿಗೆ ಮರ್ಯಾದಿ ಕೊಡ್ಲಿಲ್ಲಂದ್ರ ಸಿಟ್ಟ ಬರ್ತಾದಿಲ್ರಿ ಚಿಕ್ಕಧನಿ'
'ಆತ..ಆತ ತಡಿಪಾ ಅದೇನಂತ ನಾ ವಿಚಾರ ಮಾಡಿ ಮುಗ್ಸತೀನ ವಿಷಯಾನ'
'ಅಷ್ಟ ಮಾಡಿ ಪುಣ್ಯ ಕಟ್ಕೊಳ್ರಿ ದ್ಯಾವ್ರು'

'ಏ, ಆ ಎಸ್.ಆಯ್. ಗೆ ಪೋನ್ ಮಾಡಿ ಆ ಗಾಡಿನ ಬಿಟ್ಟ ಕಳ್ಸಂತಂದ ಹೇಳ'
'
'ಹಲೋ ಎಸ್. ಆಯ್. ಸ್ಪೀಕಿಂಗ ಹಿಯರ್'
'ಸಾಹೇಬ್ರ ನಾನ್ರಿ ಎಮ್.ಎಲ್.ಎ. ಸಾಹೇಬ್ರ ಪಿ.ಎ. ಮಾತಾಡ್ತಿರೋದು'
'ಹ್ಞಾಂ ಹೇಳ್ರಿ ಸರ್'
'ಏನಿಲ್ಲ ನಿಮ್ಮೂರಿನ ಮಲ್ಲಯ್ಯನ ಕ್ರಾಸ್ ನ್ಯಾಗ ನಿಮ್ಮ ಪಿ.ಸಿ. ಸಹದೇವಪ್ಪ ಅನ್ನಾತ ನಮ್ಮ‌ ಹುಡ್ಗಂದ ಬೈಕ್ ಹಿಡ್ದಾರಂತ ಅದನ್ನ ಬಿಡ್ಸಿ ಕಳ್ಸಬೇಕಂತ ನೋಡ್ರಿ ಸಣ್ಣ ಸಾಹೇಬ್ರ ಹೇಳ್ಯಾರ'
'ಆತ ತಗೋರಿ, ಈ ಸಧ್ಯೆಕ ಪೋನ್ ಹಚ್ಚಿ ಬಿಟ್ಟ ಕಳ್ಸಂತ ಹೇಳ್ತಿನ ತಗೋರಿ'

'ರೀ ಕಲ್ಲಯ್ಯ ಆ ಸಹದೇವಪ್ಪ ಮಲ್ಲಯ್ಯನ ಸರ್ಕಲ್ ನ್ಯಾಗ ಯಾವ್ದ ಬೈಕ ಹಿಡ್ದಾನಂತ ಬಿಟ್ಟ ಕಳ್ಸಂತ ಹೇಳ್ರಿ'
'ಆಯ್ತ ಸರ್ ಈ ಸಧ್ಯಕ ಹಚ್ಚಿ ಹೇಳ್ತಿನ್ರಿ' ಎಂದನು ಹೆಡ್ ಕಾನಸ್ಟೇಬಲ್ ಕಲ್ಲಯ್ಯ

'ಹೇಳ್ರಿ ಕಲ್ಲಯ್ಯಜ್ಜರ'
'ಯಾವ್ದ ಗಾಡಿ ಹಿಡ್ದಿಯಂತಲ್ಲೊ ಮಾರಾಯಾ, ಎಸ್.ಆಯ್ ಸಾಹೇಬ್ರ ಆರ್ಡರ್ ಮಾಡ್ಯಾರ ಅದನ್ನ ಬಿಟ್ಟ ಕಳ್ಸಬೇಕಂತ, ಅವ್ರನ್ನ ಕಳಿಸಿ ಸ್ಟೇಶನ್ನಿಗೆ ಬಾ ಒಂದು ಕೇಸ್ ವಿಚಾರ್ಣಿಗೆ ಹೋಗೊದೈತಿ'


'ಯಾಕಪಾ ಹೇಳಿದ್ದು ಕೇಳಿಸ್ತೊ‌ ಇಲ್ಲೊ?'
'ಹೂನ್ರೀ...'

'ಏನಲೇ.. ಬಂದಿಲ್ಲ? ಇನ್ನ ಎಲ್ಲೆದಿ?'
'ಇಂವಾ ಬಿಡವಲ್ಲ ನನ್ ಒಟ್ಟಾ'
'ಏನತಾ? ಇನ್ನೂ ಬಿಟ್ಟಿಲ್ಲ!!, ಸಾಹೇಬ್ರ ಪೋನ್ ಹಚ್ಚಿದ್ರ ಇಲ್ಲ ಅವಂಗ'
'ಹ್ಞೂಂ..‌ ಯಾರ ಪೋನ್ ಮಾಡಿದ್ರು, ಆ ಪೋನ್ ಬಂದ ಮ್ಯಾಲ್ನ ಮತ್ತಿಷ್ಟ್ ರಾಂಗ್ ಆಗ್ಯಾನವ'
'ಕಡೆ ಮಾತ ಏನ ಅಂತಾನ್ಲೆ ಅಂವಾ, ನೌಕ್ರಿ ಮಾಡ್ಬೇಕನ್ನೊ ಆಸೆ ಐತಂತೊ ಇಲ್ಲಂತೊ ಅವಂಗ'
'ಅವ್ನ ಕೈಯ್ಯಾಗ ಕೊಡ್ತಿನ್ ನೀನ ಹೇಳ ಒಂದಿಟು'

'ಏನ್'
'ಯಾಕೊ? ಇನ್ನ ಗಾಡಿನ ಬಿಟ್ಟ ಕಳ್ಸಿಲ್ಲಂತ'
'ಏನ್ ನಿನ್ಮಗಂದ ಊರಾಗಿಲ್ದ ಗಾಡಿ, ಬಿಟ್ಟ ಕಳ್ಸಾಕ, ಲೈಸೆನ್ಸ್ ತಗೊಂಡ ಬಂದ, ತಗೊಂಡ ಹೋಗ ನಿಂ ಗಾಡಿ'

'ಹೇಳ್ರಿ'
'ನಾನ್ರಿ ಸೋಮಯ್ಯ, ರಿ ಸಾಹೇಬ್ರ'
'ಏನ್ರಿ ನಿಮ್ದು ಹೊಳ್ಳೆ-ಮುಳ್ಳೆ ಪೋನ್ ಹಚ್ಚಿ ಕಾಟ ಕೊಡ್ಹಾಕತ್ತಿರಿ' ಅಸಹನೆಯಿಂದಲೆ
'ಏನಂದ್ರೀ...? ಕಾಟ.. ಕಾಟ ಹೆಚ್ಚಾತ, ಅಲ್ರೀ ಈ

ಕಜಲ್

ಬಿಕೋ...ಎನ್ನುತಿರುವ ಬೀದಿಗಳು, ಮಾಂಸ ಖಂಡಗಳನೆ ಕಿತ್ತು ತಿನ್ನಲು ಕಾಯುತಿರುವ ನಾಯಿಗಳು, 
ಶಾಪಕ್ಕೆ ತುತ್ತಾಗಿರುವಂತಹ ನಗರಗಳು, ವಾಸಿಯೇ... ಮಾಡಲಾರದಂತಹ ರೋಗಗ್ರಸ್ತ ಮನಸ್ಸುಗಳ ಮದ್ಯದಲ್ಲಿ ನನ್ನನು ಒಬ್ಬಂಟಿಯಾಗಿ ಬಿಟ್ಟು ಹೋಗದಿರು ಸಾಕಿ....
ಮದ್ದಿಲ್ಲದ ಮತಾಂದತೆಯ ವ್ಯಾಧಿಯನ್ನು ಗುಣಪಡಿಸಲು, ಶರಣ-ಸಂತರು, ಪ್ರವಾದಿ-ಪಾದ್ರಿಗಳೆ... ಕಾಲಕಾಲಕ್ಕೆ ಜನ್ಮವನೆತ್ತಿ ಬಂದರೂ....ಉಳಿಸಿಕೊಳ್ಳಲಿಲ್ಲ ನಾಲ್ಕು ದಿನ ಹೆಚ್ಚಿಗೆ! ಇನ್ನೂ ನನ್ನನ್ನು ಬಿಡುವರೇನು?
ಈ ಜನ.‌
ಕೊಲ್ಲಲು ಆಯುಧಗಳೆ ಬೇಕಂತೇನಿಲ್ಲ,
ಎದೆಯ ತುಂಬ ವಿಷವ ತುಂಬಿಕೊಂಡ 
ನಾಲ್ಕು ನಂಜಿನ ಮಾತುಗಳೆ ಸಾಕಲ್ಲವೆ
ಮಸಣವ ಸೇರಲು.

ಉಸಿರು ನಿಂತು ಹೋಗುವ ಮುನ್ನ, 
ಹನಿ ಗಂಗಾಜಲವನ್ನು ಬಾಯಲ್ಲಿ ಹಾಕುವರೆಂಬ ಭರವಸೆ ನನ್ನೊಳಗಿನ್ನು ಉಳಿದಿಲ್ಲ ಸಾಕಿ....
ವಿರಹಿಗಳು ಕುಡಿದು ಬಿಸಾಡಿ ಹೋದ,
ಮದ್ಯದ ಬಾಟಲಿಯ ಕೊನೆಯ ಹನಿಗಳನ್ನಾದರು ನೀ..‌. ತುಟಿಗೆ ಸವರಿಬಿಡು
ಚಪ್ಪರಿಸಿ, ಸ್ವರ್ಗದ ಮೆಟ್ಟಿಲನ್ನೇರಿಬಿಡುವೆ.

ಉಸಿರು ನಿಂತ ಮೇಲೆ? ಹಳೆಯ ಮನೆಯ ತೊಲೆಗಳಿಂದ ಮಾಡಿದ, ಶವದ ಪೆಟ್ಟಿಗೆಯಲ್ಲಿ ತುರುಕಿಕೊಂಡು, ಮೊದಲೆ ಹೂತು ಹೋಗಿದ್ದ ಖುಣಿಯನ್ನ ಕೆಬರಿ, ಅಸ್ಥಿಪಂಜರಗಳನ್ನು ಹೊರಹಾಕಿ, ನನ್ನನಲ್ಲಿ ಹುಗಿದುಬಿಟ್ಟಾರು ಸಾಕಿ...
ಹುಗಿಯುವುದಾದರೆ, ನಿನ್ನ ಹೂದೋಟದಲ್ಲೆ ಹೂಳು, ವಿವಸ್ತ್ರವಾಗಿಸಿ. ಅನುದಿನವು ನಿನ್ನ
ಸುಕೋಮಲ ಹೆರಳುಗಳನ್ನು ಸಿಂಗರಿಸುವ
ಗುಲಾಬಿ ಗಿಡಗಳ ಬೇರಿಗೆ ಗೊಬ್ಬರವಾಗಿಯಾದರು ಸಾರ್ಥವಾಗುತ್ತೇನೆ.

ಅಳಿಸಿ ಹೋದನೆಂದು ಯಾರಲ್ಲಿಯೂ ಬಾಯ್ಬಿಡಬೇಡ ಸಾಕಿ...
ಸತ್ತವರ ಹೆಸರನ್ನು ಎತ್ತಿ ಹಿಡಿದುಕೊಂಡು
ಕೆಸರೆರಚಾಟವನಾಡುವರಿಲ್ಲಿ ನಾಟಕದ ಜನರು. 

ಇಲ್ಲಿ ನನ್ನೊಬ್ಬನ ಸಾವಿನಿಂದ ಅಂಕಣದ ಪರದೆ ಎಳೆಯದು ಸಾಕಿ... ಎಳೆಯದು
ಮುಗಿಯದು.
ನಾನೀಗ ಪಾಪ-ಪುಣ್ಯ, ಕರ್ಮ-ಫಲಗಳ
ಬೆಲೆಯನರಿಯದ ಮುಗ್ದ ಮಗುವಿನಂತೆ.
ಕರೆದುಕೊಂಡು ಹೋಗು, ತೋರಿಸುವ ದಾರಿ
ಮಸಣದ್ದೆ ಆದರು ಸರಿ. ಕಣ್ಮುಚ್ಚಿ ನಡೆದುಬಿಡುವೆ ನಿನ್ನ ಹಿಂದೆ.

ಕಜಲ್

ಊರೂರ ಬೀದಿಗಳಲೆಯುವ ಭಿಕಾರಿಯ 
ಹೆಗಲಿಗಾದರೊಂದು ಜೋಳಿಗೆ ಇರುತ್ತದೆ.
ಮೈ ಮೇಲೆ ಹಾಕಿಕೊಂಡ ತುಂಡು ಬಟ್ಟೆಯಲ್ಲಿ
ಬಕ್ಕಣದ ಕುರುಹುವು ಇಲ್ಲದಂತಹ ಪಕೀರ
ನಾನು ಸಾಕಿ....
ಮುಳುಗುವ ಸೂರ್ಯನಿಗೆ, ಅರಳುವ ಚಂದ್ರನಿಗೆ
ಮತ್ತೆ ಉದಯಿಸುವ ದಿನಕರನಲ್ಲಿ ಬೇಕಿದ್ದರೆ, ಬೇಡಿಕೊಳ್ಳುವೆ

ಕನ್ನಡ ಶಾಯರಿಗಲು

ಬಾವಿಕಟ್ಟಿ ಮ್ಯಾಲ ಎಷ್ಟೊ ಮಂದಿ
ಕೊಡಾ ನೀರನ್ನ ಜಗ್ಗಿ ಕೊಟ್ನಿ ಹುರುಪಿಲೆ
ಎದ್ರು ಮನಿ ಹನ್ಮಿ ಮೊಖ ನೋಡ್ಕಂತ!
ಮನಿಗ ಬಂದ ಅತ್ಗೊಂತ ಕುಂತಿನಿಲ್ಲೆ
ಅಂಗ್ಯಯ್ಯಾಗ ಎದ್ದ ಬೊಬ್ಬಿ ಉದ್ಕೊಂತ!

ನಮ್ಮವ್ವ ಗಿಣಿಗೆ ಹೇಳ್ದಂಗ ಹೇಳ್ತಿದ್ಲು
ಸುಮ್ಕ ಕುಂದ್ರ ಮನಿಯಾಗ, ಸುಮ್ಕ ಕುಂದ್ರಂತಂದ
ತಮ್ಮಾ ಅವ್ವನ ಮಾತ ಕೇಳಲಿಲ್ಲಲೆ!
ಹನ್ಮಿ ಕೇಳಿದ್ಲಂತಂದ ಮೊಳ ಹೂವ 
ತರಾಕ ಹೋದೆ ಬಜಾರಕ್ಕ, ಮೀಸಿ ಮಾಂವ
ಕರೋನಾ ಬಂದೈತಂತ, ಮೈಯ್ಯಾಗ ಕರಿಯವ್ವ
ಹೊಕ್ಕಂಗಾಡಿ, ಬೆಸ್ನ್ಯಾಗ ನಾಕ ಬಿಟ್ಟ
ಕಳ್ಸಿದ್ನಲೆ ಕುಂಡಿ ಮ್ಯಾಲೆ!


ಗೆಳೆಯ

ಅಳುವವರು ಮತ್ತು
ಆಳುವವರು...
ಯಾವಾಗಲೂ ಹೆಗಲುಗಳನ್ನು
ಬದಲಿಸುತ್ತಲೆ ಇರುತ್ತಾರೆ
ಗೆಳೆಯ.
ಇಂದು ನಾನು, ನಾಳೆ
ನೀನು, ನಾಡಿದ್ದು ಮತ್ತಾರೊ?
ಒಟ್ಟಿನಲ್ಲಿ ಅವರ ಬುಡ
ಯಾವಾಗಲೂ ಹಸಿಯಾಗಿರಬೇಕಷ್ಟೆ.

ಹಾಯ್ಕುಗಳು

ಹಾಯ್ಕುಗಳು.

೧೬೪.
ಶಿವರಾತ್ರಿ ಬಂದಾಗಲೆಲ್ಲ
ಹಣ್ಣಿನ ವ್ಯಾಪಾರ
ಜೋರಾಗಿರುತ್ತದೆ.

೧೬೫.
ಅಂಗಡಿಯಲ್ಲಿ ಯಾವ
ದೇವರಿರುತ್ತಾರೊ,
ದುಡಿಯುವ ಕೈಗಳು ಅವುಗಳನ್ನೆ
ಪೂಜಿಸುತ್ತಾರೆ.

೧೬೬.
ಬಾಯಿಂದ ಬಾಂಧವ್ಯಗಳನ್ನು
ಬೇಸೆಯಬೇಕೆಂದಾಗ,
ನೆಲದ ಮೇಲೆ ಕುಳಿತವನು 
ಎದ್ದು ನಿಂತ.

೧೬೭.
ಬಿಟ್ಟು ಹೋದ ಸಂಜೆಗೆ
ಕಾರಣವ ಹೇಳಲಿಲ್ಲ.
ತಂದ ಮಲ್ಲಿಗೆಯ ಮುಡಿದಿದ್ದರು ಸಾಕಿತ್ತು.

೧೬೮.
ಕರೆಂಟ್ ಹೋಗಿ ಆಫೀಸ್ ನಲ್ಲಿ
ಕಂಟ್ರ್ಯಾಕ್ಟರ್ ಬೆವತು ನೀರಾಗಿದ್ದ.
ಗಿಡಗಳನ್ನು ಕಡೆದು ನಿವೇಶನಕ್ಕಾಗಿ ನಕ್ಷೆ ಹಾಕುತ್ತಿದ್ದ.

೧೬೯.
ಮದುವೆ ಮಂಟಪದಲ್ಲಿ
ಅನ್ನವನ್ನು ಕೆಡಿಸದಿರಿ ಎಂಬ ಬೋರ್ಡಿತ್ತು.
ಅಕ್ಷತೆಗಾಗಿ ಜನರು ಪರದಾಡುತ್ತಿದ್ದರು.

೧೭೦.
ಮಕ್ಕಳು ಪುಡಿಗಾಸಿಗಾಗಿ ಅಳುತ್ತಿದ್ದರು
ಅಪ್ಪನ ಜೇಬಿನಲ್ಲಿ ಹಣವಿರಲಿಲ್ಲ.
ಹಡೆದದ್ದು ಸಾಕುವುದಕ್ಕಾ, ಕಾಮಕ್ಕಾ, ಅರ್ಥವಾಗಲಿಲ್ಲ.

ಹಾಯ್ಕು -೧೭೧
ಮಾತಿಗಿಂತ, ಮೌನದ ದರವೆ
ದುಬಾರಿಯಾಗಿತ್ತು.
ಕೊಂಡುಕೊಂಡೆ! ನೋವನ್ನು ಒತ್ತೆಯಿಟ್ಟು.

೧೭೨.
ಯಾವಾಗಲೂ ಹತ್ತಿ ಬಟ್ಟೆಯನ್ನೆ
ಧರಿಸಬೇಡಿ.
ಕಡ್ಡಿ ಗೀರುವವರು ಕಾಯುತ್ತಿರುತ್ತಾರೆ.

೧೭೩.
ಹೊಟ್ಟೆಗಾಗಿ ಸೇರಗು ಹಾಸಿದ
ಹಾದರದ ಹೆಂಗಸಿಗೂ ಹೇಳುತ್ತಾರೆ
'ಕೆಲಸ' ಮುಗಿದ ನಂತರ ಕೊಡುತ್ತೇನೆ.

೧೭೪.
ಹಾಸಿಗೆಯಲ್ಲಿ ದೇಹಗಳು ಬಿಸಿಯಾಗುತ್ತವೆ.
ಆಸ್ತಿಯಲ್ಲಿ ತಲೆಗಳು ಬಿಸಿಯಾಗುತ್ತವೆ.
೨ನ್ನೂ ಸರಿದೂಗಿಸಲು 'ಕೈ' ಯನ್ನು ಬಿಸಿ
ಮಾಡಿಕೊಳ್ಳುತ್ತಾರೆ.

೧೭೫.
ವಂದನಾರ್ಪಣೆಗಾಗಿ ಮೈಕನ್ನು ಹಿಡಿದುಕೊಂಡಾಗ
ಕಾರ್ಯಕ್ರಮ ಮುಗಿಯಿತು ಎಂದುಕೊಳ್ಳುತ್ತಾರೆ.
'ಇವರು' ಮತ್ತೆ ಶುರುವಿಟ್ಟುಕೊಳ್ಳುತ್ತಾರೆ.

೧೭೬.
ಉಕ್ಕಿಹೋದ ಹಾಲಿಗಾಗಿ ಅತ್ತೆ
ಸೊಸೆಗೆ ಮಂಗಳಾರತಿ ಎತ್ತುತ್ತಿದ್ದಳು.
ಹಾಲನ್ನು ಕುಡಿದ ವಲೆ ನಗುತ್ತಿತ್ತು.

೧೭೭.
ಬೇಸಿಗೆಯ ಹೊಸ್ತಿಲಲ್ಲಿ ನಿಂತಿದ್ದರು
ಕಂಡವರ ಮನ-ಮನೆಗೆ ಬೆಂಕಿಯ
ಹಚ್ಚಿ, ಚಳಿಯನ್ನು ಕಾಯಿಸಿಕೊಳ್ಳುತ್ತಿದ್ದಾರೆ.

೧೭೮.
ಹಲ್ಲಿ ಬಿದ್ದ ಹಾಲು 
ವಿಷಪೂರ್ಣವಾಗಿ ಹೋಗಿತ್ತು.
ಕುಡಿಸಲು ಕೆಲವರು ತಲೆಗಳನ್ನು ಎಣಿಸುತ್ತಿದ್ದರು.

೧೭೯.
ಸಂಸಾರ ಸನ್ಯಾಸದ ಕುರಿತು
ಉಪನ್ಯಾಸ ನೀಡುತ್ತಿದ್ದರು ಸ್ವಾಮೀಜಿ.
ಎದೆಯೊಳಗೆ ಮದನ ಹೂವರಳಿಸುತ್ತಿದ್ದ‌.

೧೮೦.
ಮಹಿಳಾ ದೌರ್ಜನ್ಯದ ವಿರುದ್ಧ
ಸಾವಿರಾರು ಮಹಿಳೆಯರು ಸೇರಿದ್ದರು.
ಕಣ್ಣುಗಳನ್ನು ಬಿಟ್ಟು, ಯಾರೊಬ್ಬರ ಮೊಗವು
ಕಾಣಿಸುತ್ತಿರಲಿಲ್ಲ.

೧೮೧.
ಬೇಕಿದ್ದರೆ ಹೂಗಳನ್ನು ಕೊಂದುಬಿಡಿ
ಅಕ್ಷತೆಯನ್ನು ಬಳಸಬೇಡಿ ವೇದಿಕೆಯಲ್ಲಿ.
ಭೂ ತಾಯಿ ನಗುತ್ತಿದ್ದಳು, ಇವರ ರೀತಿ-ನೀತಿಗೆ.

೧೮೨.
ತೋಡಿದ ಖೆಡ್ಡಾದಲ್ಲಿ ಆನೆಯೆ
ಬೀಳಬೇಕೆಂದೆನಿಲ್ಲ!, ಮತ್ತು
ಹೆಚ್ಚಾದರೆ, ನಾವೆ ಬಿಳಬೇಕಾಗುತ್ತದೆ.

೧೮೩.
ಮಹಿಳಾ ದಿನಾಚರಣೆಯ ಆಚರಣೆಗೆ
ಹೋಗಲು ತಯಾರಾಗಿದ್ದಳು ಮನೆಯೊಡತಿ.
ರಜೆ ಸಿಗದ ಕೆಲಸದಾಳು ಸಂಜೆಗಸವನ್ನು ಗುಡಿಸುತ್ತಿದ್ದಳು.

೧೮೪.
ಕೊಲ್ಲಲು ಸಿದ್ಧವಾಗುವ ಕೈಗಳು
ಕಣ್ಣೀರನ್ನು ಒರೆಸಲು ಸಾಧ್ಯವಿಲ್ಲ.
ನರಿಗಳು ಸಹಾನುಭೂತಿಯ ಮಾತುಗಳನ್ನು
ಆಡುತ್ತವೆ.

೧೮೫.
ನನ್ನ ನೆಲವೀಗ ಬಲಿಷ್ಠವಾಗುತ್ತಿದೆ
ವಿಷದ ಬೀಜಗಳನ್ನು ಬಿತ್ತಲಾಗುತ್ತಿಲ್ಲ.
ಬೆಳೆ ಬೆಯಿಸಿಕೊಳ್ಳುವವರು ಹತಾಶರಾಗಿದ್ದಾರೆ.

೧೮೬.
ತಂದು ಹಾಕುವವರನ್ನು ನಂಬಬಾರದು
ನಾವೆನೆಂಬುದನ್ನು ಅರಿತುಕೊಂಡಿರಬೇಕು. 
ಕಬ್ಬಿಣವನ್ನು ಕಟ್ಟುವುದಕ್ಕಷ್ಟೆ ಉಪಯೋಗಿಸಬೇಕು.

೧೮೭.
ಹಿಂದೆ ಸರಿದುಬಿಡು ಮಳೆರಾಯ
ಅನ್ನವಿನ್ನು ಒಲೆಯ ಮೇಲಿದೆ.
ಇನ್ನೂ ಹಸಿವನ್ನು ಅರಗಿಸಿಕೊಳ್ಳುವ ಶಕ್ತಿ ನಮ್ಮೊಳಗುಳಿದಿಲ್ಲ.

೧೮೮.
ಶರಣಪ್ಪ ಮಾಂಸಾಹಾರವ ತ್ಯಜಿಸುತ್ತೇನೆಂದ
ಸಹಪಾಠಿಗಳು ಸಂತೋಷವ ವ್ಯಕ್ತಪಡಿಸಿದರು.
ಸೊಂಕು ಭೇದ-ಭಾವವಿಲ್ಲದೆ ಅಪ್ಪಿಕೊಳ್ಳುತ್ತಿತ್ತು.

೧೮೯.
ಬೇಕಾದವರು ಬೇಡವಾದಾಗ, ಬೇಕಾದವರಿಗೆ
ಬೇಡವಾದವರು ನಮಗೆ ಬೇಕಾಗುತ್ತಾರೆ.
ಇಲ್ಲಿ ಬೇಕು-ಬೇಡಗಳಿಷ್ಟೆ ಪ್ರಾಮುಖ್ಯತೆ.

೧೯೦.
ಪವಿತ್ರ ಸ್ಥಳಗಳಲ್ಲಿಯೂ ಔಷಧಿಯನ್ನು
ಸಿಂಪಡಿಸುತ್ತಿದ್ದಾರೆ.
ಯಾರು ಮಾಡಿದ್ದನ್ನು ಯಾರು ಉಣ್ಣುವುದೊ?.

೧೯೧.
ಕೆಲವು ಆತ್ಮೀಯರ ಒತ್ತಾಸೆಗಾಗಿ
ಅನೌಪಚಾರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗುತ್ತದೆ.
ಅವಮಾನದ ಸನ್ಮಾನವನ್ನು ಸ್ವೀಕರಿಸಬೇಕಾಗುತ್ತದೆ.

೧೯೨.
ವೇದಿಕೆಯ ಮೇಲೆ 

೧೯೩.
ವಿಲ್ ಪತ್ರವನ್ನು ಓದಿದಾಗ
ಮಕ್ಕಳಿಗೆ ಅನಿಸಿತು.
ಅಪ್ಪ ಇನ್ನೂ ಬದುಕಬೇಕಿತ್ತು.

೧೯೪.
ಅವರು ಬೆಟ್ಟವನ್ನು ಬಿಟ್ಟುಕೊಟ್ಟರು.
ಇವರು ದುಡ್ಡನ್ನು ಕೈಗಿಟ್ಟರು.
ಮನೆ‌ ಮಕ್ಕಳು ಬೀದಿ ಪಾಲು.

೧೯೫.
ದೀಪ ಹಚ್ಚಲು 'ಎಣ್ಣೆ' ಇಲ್ಲವೆಂದವರು
ಬಾಗಿಲನ್ನು ತೆರೆಯಲೆಂದೆ ಕಾಯುತ್ತಿದ್ದಾರೆ.
ಮನೆಯಲ್ಲಿ, ಬಾಟಲಿಯ 'ಎಣ್ಣೆ' ಖಾಲಿಯಾಗಿದೆ.

೧೯೬.
ಅವನು ಕೇಳಿದ ಖಾಲಿ ಇದ್ದೀರಾ?
ಏನೆಂದು ಉತ್ತರಿಸಲಿ.
ಮೇಲಿನವನೆ ಇನ್ನೂ ಸುಮ್ಮನೆ ಕುಳಿತಿಲ್ಲ.

೧೯೭.
ತಿಂಡಿಯ ಪೊಟ್ಟಣವ ಕೊಟ್ಟು
ಪೋಟೊವನ್ನು ತೆಗೆಸಿಕೊಳ್ಳುತ್ತಿದ್ದರು.
ಒಂದೆರಡು ಜಿರಲೆಗಳು ಹೊರಬಂದವು.

೧೯೮.
ಕೆಚ್ಚಲನ್ನು ಹಿಂಡುವಾಗ ಆಕಳು ಕಣ್ಮುಚ್ಚಿರುತ್ತದೆ.
ಪೋಟೊದಲ್ಲಿ ಕಣ್ಣು ಮುಚ್ಚಿದ್ದ ಅಧಿಕಾರಿ 
ಛಾಯಾಗ್ರಾಹಕನಿಗೆ ಬೈಯ್ಯುತ್ತಿದ್ದ.

೧೯೯.
ಹಸಿವಾದಾಗ, ಕೈ ಚಾಚುವವರ
ನೈತಿಕತೆಯನ್ನು ಪ್ರಶ್ನಿಸುವಂತಿಲ್ಲ!
ಸಾವಿಗೂ..‌.ಹಸಿವಾಗುತ್ತದೆ.

ಕಜಲ್

ಬಣ್ಣದ ಮಾತುಗಳ ಆಡುವವರ ನಡುವೆ
ಸಿಕ್ಕು, ನರಳಾಡಿ, ನೊಂದು-ಬೆಂದು
ಹೋಗದಿರು ಪಾಗಲ್!!!
ಇಂದು ಹೋಳಿಯ ಹಬ್ಬ. ಬಣ್ಣ ಬಣ್ಣದ
ಪುಡಿಯ ಬುಟ್ಟಿಗಳಿವೆಯಿಲ್ಲಿ, ಬಂದುಬಿಡು
ಎರಚಿಬಿಡುತ್ತೇನೆ, ಮೊಗದ ಗುರುತೆ ಸಿಗದ ಹಾಗೆ.