Saturday, April 25, 2020

ಶಾಯರಿ

ಯಾವ ವಿಷವು
ನನ್ನನು ಕೊಲ್ಲುವುದಿಲ್ಲ!
ರಂಗೀಯ ನೆನಪುಗಳ
ಪಂಜು ನನ್ನೆದೆಯಲ್ಲಿ
ಉರಿಯುತಿರಲು
ಸಾಕಿ....
ಯಾವ ಅಮೃತವು
ಉಳಿಸಿಕೊಳ್ಳಲಾರದು
ವಿರಹಿಯನ್ನು. 
ಒಲವ ತೈಲವ,
ನಂದುತಿರುವ ಹಣತೆಗೆ 
ಸುರಿಯದ ಹೊರತು.

ಶಾಯರಿ

ರಂಗೀಯು ತೊರೆದು
ಹೋದ, ದುಃಖಕ್ಕಾಗಿ
ಶರಾಬನ್ನು
ಕುಡಿಯುತ್ತಿಲ್ಲ
ಸಾಕಿ...
ಅವಳಿಗಾಗಿ,
ಲೆಕ್ಕವಿರದಷ್ಟು
ಹೂಗಳನ್ನು 
ಕೊಂದಿದ್ದೇನೆ. ಅದರ
ಪಶ್ಚಾತ್ತಾಪಕ್ಕಾಗಿ.

ಉಸಿರುಗಟ್ಟಿ ಹೋಗುತ್ತಿವೆ,
ಧರ್ಮ ಗ್ರಂಥಗಳು
ನಿಟ್ಟುಸಿರು, ಜೀವಗಳನ್ನು
ಬಲಿ ಪಡೆದ ಕಟ್ಟಡಗಳಲ್ಲಿ
ಸಾಕಿ...
ನಾನು ಬರೆದದ್ದು
ಪ್ರೇಮಗ್ರಂಥ. ಮಡಿ
ಮೈಲಿಗೆ ಮುರ್ಚಟ್ಟುಗಳಿಂದಲೆ
ತುಂಬಿ ಹೋಗಿದೆ. 
ಬದುಕಿಸುತ್ತದೆ ನಾಲ್ಕು
ದಿನ ಹೆಚ್ಚಿಗೆ
ಓದಿದವರನ್ನು.

ಕಜಲ್

ನಾನೇನು...ಅಸಹಾಯಕ ಶೂರರೆದುರು
ಶಪತಗೈದವಳೇನಲ್ಲ, ಬಿಚ್ಚಿದ ಮುಡಿಯ
ಕಟ್ಟಿಕೊಳ್ಳಲು ನೆತ್ತರಿನಾಭಿಷೇಕವನ್ನು
ಆಪೇಕ್ಷಿಸಿದವಳೇನಲ್ಲವೊ ಪಾಗಲ್..
ಬಟ್ಟಲು ಮದಿರೆ ಕುಡಿಯಲು, ಬಿಡಿಗಾಸು ಇಲ್ಲದ
ನೀನು...ಹೂಗಾರನು ಮಾರಿ, ಅಳಿದುಳಿದು ಚೆಲ್ಲಿದ
ಹೂವಿನ ಪಕಳೆಗಳ ತಂದು, ಸಿಂಚೈಸುವೆಯಲ್ಲ 
ಎನ್ನ ಮೇಲೆ!!! ಹಾ.....‌‌ ಆ ಮಧುರ ಕ್ಷಣಕ್ಕಾಗಿಯೆ
ನಾನಿಲ್ಲಿ ಕಾಯುತಿರುವೆ.

ತುಳುಕುವ ಮದಿರೆ, ಅರಮನೆಯ ತುಂಬೆಲ್ಲ 
ಘಮಘಮಿಸುವ ಅತ್ತರಿನ ಸುವಾಸನೆ,
ಸಂಜೆಗೆ ಕಾಲ್ಗೆಜ್ಜೆಯ ಸದ್ದು, ಅತ್ತಿತ್ತ ಹೋಗದೆ,
ಸುತ್ತ ಸುಳಿದಾಡುವ ಭಂಗಿ ಸೇದಿ ಬಿಟ್ಟ ಘಾಟು,
ವಾಕರಿಕೆ ತರಿಸುವಷ್ಟು ಹೂಗಳ ಪರಿಮಳ ಇವೆಲ್ಲವ
ತೊರೆದು, ನಿನ್ನ ಜೊತೆಯಲ್ಲಿ ಊರಿನ ನಡು ಬೀದಿ ಬೀದಿಗಳನ್ನು ಸುತ್ತಬೇಕೆಂದಿರುವೆ ಪಾಗಲ್.
ಹಸಿವೊ, ಬಾಯಾರಿಕೆಯೊ, ಬಿಸಿಲೊ ನೆರಳೊ, ಬಿಸಿಯೊ ತಂಗಳೊ, ಏನಿದ್ದರು ಸರಿ ನಡೆದುಬಿಡುವೆ ನಿನ್ನೊಂದಿಗೆ
ವಿರಹದುರಿಯಡುಗೆಯಲ್ಲಿ ನನಗೊಂದೆರಡು ತುತ್ತು ಮೀಸಲಿರಲಿ.

ಮೈ ತುಂಬ ಸಿಂಗರಿಸಿಕೊಂಡ ಆಭರಣಗಳು
ಭಾರವಾಗಿಬಿಟ್ಟಿವೆ, !! ತೆಗೆದಿಟ್ಟು ಬರಲೆ?, ಕರೆದುಕೊಂಡು
ಹೋಗುವೆಯಲ್ಲ ನೀನು ಪಾಗಲ್..
ಊರೊಳಗಿನ ಎಲ್ಲ ಅಂಗಡಿಗಳಿಗೂ ಹಳೆಯ ಗಿರಾಕಿ ನೀನು.

ಹೀಗೆ

ಎಲ್ಲರು ಮಲಗಿರುವಾಗ, ನಾನೊಬ್ಬನೇಕೆ
ಎದ್ದಿರಲಿ?
ಬುದ್ದನ ಹಾಗಿಲ್ಲೀ...ಯಾರು ಪ್ರಭುದ್ಧರೆನಲ್ಲವಲ್ಲ!!
ಬೆಳಕನು ಅರಸಲು ಇರುಳಲಿ ಮನೆ ಬಿಟ್ಟವರದೆಷ್ಟು ಮಂದಿ
ಎಲ್ಲರ ಮನೆಯ ಬಾಗಿಲುಗಳು, ಜೈಲು ಕೋಣೆಗಿಂತಲೂ
ಬಲಿಷ್ಠವಾಗಿರುವಾಗ.

ಹೇಳುವುದಕ್ಕೆ, ಕೇಳುವುದಕ್ಕೆ ಇನ್ನೇನುಳಿದಿದೆ?
ಮಾತು ಮಾತಿಗೂ ಬೆನ್ನು ತೋರಿಸುವವರೀರುವಾಗ!
ಸುಮ್ಮನೆ, ಒಡೆದು ಹೋದ ಮುತ್ತುಗಳ ಜೋಡಿಸುವ
ವ್ಯರ್ಥ ಪ್ರಯತ್ನ
ಮುಟ್ಟಿದರೆ ನುಂಗಿಬಿಡುವಂತಹ ವಿಲಕ್ಷಣ ಸೋಂಕಿತ
ಮನಸುಗಳು.

ಅಳಿಸುವುದಕ್ಕೆ ನನ್ನ ಕೈಯ್ಯಲ್ಲೊಂದು ಡಸ್ಟರ್ ಇರಬೇಕಾಗಿತ್ತು!!
ಅಳಿಸಿ ಬರೆದರೆ? ಮತ್ತೆ ಜೀವ-ಭಾವ ಮೂಡುವುದೇನು
ಸಂಬಂಧಗಳಲ್ಲಿ!
ಹುಚ್ಚುತನ!! ನಾನೇನ್ನಬಹುದು, ಅವರು ತೆವಲೆಂದು ಕರೆದು ಬಿಡುತ್ತಾರೆ.
ಬರೆದ ಪದಗಳಿಗೆ ಬೆಲೆಯಿಲ್ಲವೆಂದ ಮೇಲೆ, ಪುಸ್ತಕ
ಲೇಖಕನಿಗೂ, ಓದುಗರ ಜೇಬಿಗೂ ಹೊರೆ.

ಹೋಗಲಿಬಿಡಿ ಎಂದು ಕೈಯ್ಯನ್ನು ತೊಳೆದುಕೊಂಡು ಬಿಡುವುದಾ?
ಯಾರೊ ಹಚ್ಚಿದ ದೀಪವನು ಊದಿ, ಕತ್ತಲಲಿ ಗಹಗಹಿಸಿ 
ನಗುತ್ತಲಿರುವುದಾ?
ಹರಕು-ಮುರಕು ಗುಡಿಸಲಿಗೆ ಕಡ್ಡಿಯ ಗೀರಿ, ಬಂಗಲೆಯಲ್ಲಿ ಹೊದ್ದು ಮಲಗಿಬಿಡುವುದಾ?

ತುಂಬಿಕೊಳ್ಳಲಿಲ್ಲ ಅರಿವನ್ನು, ಹಂಚಿಕೊಳ್ಳಲಿಲ್ಲ
ಅನುಭವವನ್ನು, ತೋರಿಸುವ ದಾರಿಗಳಂತು ಪ್ರಪಾತಗಳೆ.
ಹಾದಿಗೆ ಹಚ್ಚಿದ ಮುಳ್ಳುಗಳ ನಡುವೆಯೂ ಹೂವೊಂದು
ನಸುನಗುತ್ತದೆ, ಚಿವುಟದಿದ್ದರೆ ಸಾಕು, ದುಂಬಿ ಮಧುವನ್ನು
ಹೀರಲಿ, ಗೂಡನ್ನು ತುಂಬಿಸಲಿ, ತುಂಬು ಜೇನು ಎಲ್ಲರ
ನಾಲಿಗೆಯ ಮೇಲಿನ ವಿಷವನ್ನು ಕಳೆಯಲಿ, ಬದಲಾಗಲಿ,
ಹೊಸಬೆಳಕು ಮೂಡಲಿ.

ಇದಾಗದಿದ್ದರೆ?, ಜೇನು ವಿಷವಾಗಿಬಿಡಲಿ, ಬಿದ್ದು ಹೋಗಲಿ ಸಾಲು ಸಾಲು ಹೆಣಗಳು, ಗಂಟಲಿಗೆ ಹನಿ ನೀರು ದಕ್ಕದಂತೆ.
ತಟ್ಟಿಬಿಡಲಿ ನಿಸ್ಸಹಾಯಕ ಕೈಗಳ ಶಾಪ, ದಾರಿ ಹೆದ್ದಾರಿಗಳಗುಂಟ
ತುಂಬಿ ಬಿಡಲಿ ಮಾಂಸದ ಮುದ್ದೆಗಳು. 
ಶತ ಶತಮಾನಗಳಿಂದ ಹಸಿವಿನಿಂದ ಹಾರಾಡುತಿರುವ ಹದ್ದುಗಳು ಕುಕ್ಕಿ... ಕುಕ್ಕಿ.. ಎಳೆದು ತಿಂದು ತೇಗಿಬಿಡಲಿ, 

ಬಹುಶಃ ಅವುಗಳಿಗೂ ಅಜೀರ್ಣವಾಗಬಹುದೇನೊ?
ಮತ್ತೊಬ್ಬರನ್ನು ತಿಂದೆ ಬದುಕಿದಂತವರಿವರು,
ಸುಲಭವಾಗಿ ಹೇಗಾದರೂ ಜೀರ್ಣವಾದಾರು?
ರಕ್ತ ಬೀಜಾಸುರನ ಸಂತತಿಯೆ ಇರಬಹುದೇನೊ?
ಎಲ್ಲವು ಅಳಿಯಿತು ಎನ್ನುತ್ತಿರುವಾಗಲೆ, ಮೂಲೆಯಲ್ಲೊಬ್ಬ
ಉಸಿರಿರುತ್ತಾನೆ.

ಸಾಕು...ಸಾಕು.. ಒಂದೆ ಉಸಿರಿಗೆ ಅದೇಷ್ಟೊಂದು ಸಾಥಗಳು!!
ಇಲ್ಲದಿದ್ದರೆ? ಆಳುತ್ತಿದ್ದರೇನು ಸ್ವಾಮಿ ಮಸಾಲೆಯ ವಾಸನೆಗೆ
ಬಂದ ಮಂದಿ.
ಕಂಡು ಹಿಡಿಯಬೇಕ್ಹೇಗೆ ಕಾಗೆಗಳೊ? ಕೋಗಿಲೆಗಳೊ? ಎಂಬುದನ್ನು
ವದರುವುದನ್ನು ಸಮರ್ಥಿಸುಕೊಳ್ಳುತ್ತವೆ, ನಾವು ಕೋಗಿಲೆಗಳೆಂದೆ

ನಿಜ. ಇವರು ವದರುತ್ತಾರೆ, ವಟಗುಟ್ಟುತ್ತಾರೆ, ಗುಂಯ್ಯಗುಡುತ್ತಾರೆ
ಎಲ್ಲಿ?  ಹೂಗಾರನ ಹೊಟ್ಟೆಯ ಮೇಲೆ ಹೊಡೆದು, ಕತ್ತಿನ ತುಂಬಾಹೂ ಹಾರವನ್ನು ಹಾಕಿಸಿಕೊಂಡು, ಹೆದರಿಸಿ-ಬೆದರಿಸಿ ಹಾಕಿಸಿಕೊಂಡ ಪೆಂಡಾಲಿನ ನೆರಳಿನಲ್ಲಿ
ಇವರ ಬಾಯ್ಚಪಲಕ್ಕೊಂದೆರಡು ಗುಡಿಸಲು, ಡಬ್ಬಾ ಅಂಗಡಿಗಳಿಗೆ
ಹೋಮವನ್ನು ಮಾಡಿದರಾಯಿತು. ಮುಗಿಯಿತು.

ಊರಿಗೆ ಬೆಂಕಿ ಹಚ್ಚಿ, ಬಂದು ಕುಳಿತುಕೊಳ್ಳುತ್ತಾರೆ,
ಅದೆ ಬಡವರ ಬೇವರಿನಲ್ಲಿ ಮಿಂದೆದ್ದ, ಸುಭದ್ರವಾದ
ಕಲ್ಲು ಕೋಟೆಯ ಅರಮನೆಯಂಥಹ ಮನೆಯಲ್ಲಿ.
ಎರಡು ತಿಂಗಳು ಸಂಬಳ ಪಡೆಯದ ಆಳು ತಂದುಕೊಟ್ಟ
ಪಾನೀಯವನ್ನು ಕುಡಿದು, ಹೇಳುತ್ತಾರೆ 'ಇಂದಿನ ಕಾರ್ಯ
ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿಯುವಂತದ್ದು'

ಉಳಿಯುತ್ತದೆ ಸ್ವಾಮಿ, ಕೆಲವರ ಹೆಸರು ಪೋಲಿಸ್ ಕೇಸ್
ರಜಿಸ್ಟಾರ್ ನಲ್ಲಿ, ವಾರಂಟ್ ನಲ್ಲಿ, ತಲೆ ಮರೆಸಿಕೊಂಡವರಲ್ಲಿ,
ಗಡಿಪಾರು ಆದವರಲ್ಲಿ, 

ಬುದ್ಧ ಬಿಟ್ಟುಬಂದ ಕತ್ತಿ ಗುರಾಣಿಗಳು ಇವರ ಬೆನ್ನ ಹಿಂದೆಯೆ ಇವೆ,
ಕಳಿಂಗ ರಣರಂಗಕ್ಕೆ ಸಿದ್ಧವಾಗುತ್ತಿದ್ದಾರೆ ಎಲ್ಲರೂ...
ಯುದ್ಧವಾದ ಮೇಲೆ? ಸಾಮ್ರಾಟನಂತೆ, ಮರಗುವರಾ?
ಕರಗುವರಾ? ಚಿಂತಿಸುವರಾ? ದುಃಖಿಸುವರಾ? ಎಲ್ಲದಕ್ಕಿಂತಲೂ ಮೊದಲು, ದೀಕ್ಷೆಗಾಗಿ ಹಪಹಪಿಸುವರಾ?
ಇಲ್ಲಾ....!! ಹರಿಸಿದ ನೆತ್ತರಿನ ಗುರುತುಳಿಯದಂತೆ, ಸಾಗರಕ್ಕೆ
ಕಾಲುವೆಯನೆ ಕಟ್ಟುವರಾ?

ಕಟ್ಟಿಸುವುದೆ ಇರಲಾರರೆ? ಸುಂಮಗಳೆಯನು ಅಮಂಗಳೆಯನ್ನಾಗಿಸಿ,
ಮತ್ತೆ ನಡು ಬೀದಿಗೆ ಬಂದು, ಮುಂಜಾನೆ ಮುನ್ಸಿಪಾಲ್ಟಿ ನೌಕರ
ಗುಡಿಸಿದ ರಸ್ತೆಯ ಮೇಲೆ, ಅವಳ ಕೈಯಲ್ಲೆ ರಂಗೋಲಿಯನ್ನು
ಹಾಕಿಸಿ, ಎದೆಯುಬ್ಬಿಸಿ ಬೀಗುವುದಿಲ್ಲವೇನು? ನಾವೆ
ಸಮಾಜ .......ಕರೆಂದು.

ಮತ್ತೆ, ಮುಗ್ದ? ಜನತೆ ತಲೆದೂಗುತ್ತಾರೆ, ಕಿವಿಗಡಚಿಕ್ಕುವಂತೆ
ಚಪ್ಪಾಳೆಯನ್ನು ಹೊಡೆಯುತ್ತಾರೆ, ಬೆನ್ನನ್ನು ತಟ್ಟಿಸಿಕೊಳ್ಳುತ್ತಾರೆ.
ಮುಂದೇನು?, ಮುಂದೇನು?... ಮುಂದೇನು?
ಈ ನಡು ರಸ್ತೆಯ ಕ್ರಾಂತಿ ಕಾರ್ಯಕ್ಕೆ, ಖಾತೆಯಲ್ಲೊಂದಿಷ್ಟು
ಹಣ ಜಮಾವಣೆಯಾಗುತ್ತದೆ, ಕಲ್ಲಿನ ಕೋಟೆಯಲ್ಲಿ
ಅಮಂಗಳೆಗೆ ಸುಖದ ಪರಿಚಯವನ್ನು ಮಾಡಿಸುತ್ತಾರೆ.

ಮತ್ತದೇ... ನಿಟ್ಟುಸಿರು, ಮತ್ತದೆ ಸವಕಲು ಪ್ರಶ್ನೆ, ಮತ್ತದೆ ನಿರ್ಭಾವ ನೋಟ, ಮತ್ತದೇ ದಾರಿ ತಪ್ಪಿಸುವವರ ಮಾತುಗಳು.
ಯಾವುದನ್ನು ಕೇಳಬೇಕು, ಅರ್ಥೈಸಿಕೊಳ್ಳಬೇಕು, ಚರ್ಚಿಸಬೇಕು, 
ಅಳವಡಿಸಿಕೊಳ್ಳಬೇಕು, ಅನುಸರಿಸಬೇಕು. ಎಲ್ಲದಕ್ಕೂ
ನಿರುತ್ತರ.

ಯಾಕೆ ಹೀಗೆ, ಈ ಮಣ್ಣಿನ ಗುಣಧರ್ಮವೆ ಹೀಗೆಯೆ?
ಶಿಲುಬೆಗೆರಿದವನಿಗದೇಷ್ಟು ಬೆಳಕು!!! ದೇವಧೂತನಿಗೂ
ಶಾಂತಿ ಸಿಕ್ಕಿಲ್ಲವಾ!?
ಮಣ್ಣು ಗೋರಿಯ ಮೇಲೆ ಕಲ್ಲಿನ ಕಟ್ಟೆಯನ್ನು ಕಟ್ಟಿ,
ಸುಕೋಮಲ ಹೂವನ್ನು ಹೊದಿಸಿಕೊಳ್ಳುವ ಅಲ್ಲಾನಿಗೂ
ಏಕೆ? ನೆಮ್ಮದಿ ಸಿಕ್ಕಿಲ್ಲವಾ?
ಹಣ್ಣು, ಹಾಲು, ತುಪ್ಪ, ಬಂಗಾರಗಳಿಂದ ಅಲಂಕೃತಗೊಳ್ಳುವ
ಮುಕ್ಕೊಟಿ ದೇವರುಗಳಿಗೂ ಆಸೆಗಳೆ ತೀರಿಲ್ಲವಾ?

ಯಾರಲ್ಲಿ ಕೇಳಬೇಕು? ಅವರು ಚಿಂತಾನಾಶೀಲರು
ಇವರು ದೈವ ಭಕ್ತರು, ಕೆಲವರು ನಾಸ್ತಿಕರು, ಹಲವರು
ಸಂಶೋಧಕರು. ಬಹುಶಃ ಎಲ್ಲರೂ ಹೇಳುವುದೆ ಒಂದೆ
'ಹುಚ್ಚ' ನೀನು... ಇಲ್ಲಿ ಬಾ ಶಾಂತಿಯಿದೆ, ಅಲ್ಲಿ ನೋಡು
ಕ್ರಾಂತಿಯ ಭ್ರಾಂತಿಯಿದೆ, ನಾವು ಕೊಂದು ಬದುಕೋಣ‌.

ಎಲ್ಲ ಎಲ್ಲವ ನೋಡಿ, ಎಲ್ಲರ ಮಾತಿನ ಮಂಟಪದ
ಅಡಕತ್ತರಿಯಲ್ಲಿ ಸಿಕ್ಕು, ನನಗೆ ನಾನೆ ಹಾಕಿಕೊಳ್ಳುವ
ಪ್ರಶ್ನೆ. ಯಾಕಾದರೂ ಬಂದೇನೊ ಈ ಭೂಮಿಗೆ.

ಹಿ ಶಾ

ಅಬ್, ಇಸ್ ಗಲೀ ಮೆ ಹೀ...
ಮೇರಿ ಸಾಂಸ ಚಲಿ ಜಾತಿ ಹೈ!
ಯೇ.. ನಾ ಪೂಚೊ
ಕ್ಯೂಂ....?
ಜೊ..‌ ಛೊಡ್ಕೆ ಛಲಿ ಗಯೀ
ಹೈ ವೊ... ಉಸ್ಕಾ ಪೈರೊಂಕಾ 
ನಿಶಾನಾ, ಲಾ ಪತಾ ಹೈ!

ಉಸ್ಕೊ ಭೂಲ್ ಜಾನೇಕೊ
ಮೈ ನಾ... ಕೀಯಾ ಭಗವಾನ್
ಕಿ ಮಂದಿರಮೆ ದುವಾ....!!!

ಉಸ್ಕೊ ಭ್ಹೂಲಾನಾ ನಹೀ ಸಕಾ
ಮಂದಿರ ಮೆ ಬೈಟ್ಕೆ, ಭಗವಾನ್
ಕೆ ಸಾಮ್ನೆ ಕಿತ್ನೆ ಕಿಯೆತೊಬಿ ದುವಾ!!
ಸರ್ ಜುಕಾಕೆ ಕರೂಂಗಾ ಹರ್ದಿನ್ 
ತುಜೆ ಸಲಾಂ ಸಾಕಿ...
ಜೀವನ್ ಕಾ ಸಾರಾ ಘಮ ಮೀಟಾದಿಯಾ
ತೆರೆ ಆಂಗನ್ ಕೆ ಏಕ್ ಪ್ಯಾಲಾ ದವಾ!!


ಕಥಾ

'ಎದ್ದೇಳವ್ವ, ಸಾಕಿನ್ನ ಅತ್ತದ್ದ, ಕಾವ್ ಕೊಟ್ಟ ಮರಿ ಮಾಡಿದ್ದ ಹಕ್ಕಿನ ಹದ್ದು ಬಂದ ಕಿತ್ಗೊಂಡ ಹೋದಂಗ ಆತ, ಆಸ್ರ ಅನ್ಕೊಂಡಿದ್ದ ಕೋಲು ಮುರ್ದಬಿದ್ದೈತಿ, ಮಲ್ಲಯ್ಯ ಹಿಂಗ ಕೊಟ್ಟ, ಹಾಂಗ ಕಸ್ಗೊಂಡಬಿಟ್ಟ 

'ಜೀವಾ ಅಂದ್ರ ಹೆಂಗಪ್ಪಾ, ಹುಲ್ಲಕಡ್ಡಿ ಮಾಡಿಯೇನು? ಇವತ್ತ ಒಣಗಿ ಹ್ವಾದದ್ದು
ನಾಳೆ ಚಿಗಿತೈತಿ ಅನ್ನಾಕ. 

'ಹುಚ್ಚುಡುಗಿ, ಯಾರ್ ಜೀವ ಯಾರ ಕೈಯ್ಯಾಗ ಇರ್ತೈತಿ ಹೇಳ, ನಾಕ ಮಕ್ಳನ್ನ ಇದ ಕೈಯ್ಲೆ ಹೊತ್ಗೊಂಡ ಹೋಗಿ ಮಣ್ಣ ಮಾಡಿ ಬಂದಿನಿ ನಿನ್ನ ಅಣ್ಣ, ಅಕಂದ್ರದ್ದು, ಹಾಂಗಂತ ನಿಮ್ಮವ್ವ ಹಡೆದ ಬಿಟ್ಲೆನು? ನಿ ಹುಟ್ಟಿದ ಮ್ಯಾಲ ಸಾವಿನ ಜಾತ್ರಿ ನಿಂತು ಮನಿಯಾಗ ಮತ್ ನಿನ್ ಹಿಂದ ನಾಕ್ಮಂದಿ ತಮ್ಮ ತಂಗಿ ಹುಟ್ಟಿದ್ರ.
'ಇಲ್ಲೆ ಹಡಿಯೊ ತ್ರಾಸ ಬಂದಿಲ್ಲಪ್ಪ, ಕೂಡಿ ಬಾಳೋದ ಬಂದೈತಿ, ಅವ್ವ ನೀನು ಜೊತೆಯಾಗೆ ಇದ್ರಿ, ನಮ್ಮನ್ನ ಹಡದ್ರಿ, ಈಗ ನನ್ ಗತಿ ಏನ ಹೇಳ್ರಿ? ಹಡಿಯಾಕ ಗಂಡ ಇಲ್ಲ, ಬದಕಾಕ ಇದ್ದೊಂದ ಎಸಳು ಬಾಡಿ ಹೋತ. 
'ಮಗನ ಕಳ್ಕೊಂಡ ದುಃಖ ನಿನ್ನ ಹಿಂಗ ಮಾತಾಡ್ಸಾಕ ಹತ್ತೈತಿ, ಗಂಡನ ಮನಿ ಇವತ್ತ್ ನಿನ್ ಪಾಲಿಗೆ ಮುಚ್ಚಿರ್ಬೋದು, ಲೋಕದ ಬಾಗ್ಲ ಯಾವಾಗ್ಲೂ ತೆಗದಿರ್ತೈತಿ, ಹುಡಕ್ಕೊಂತ ಹೋಗ್ಬೇಕಷ್ಟ. ನಾವು ಮೊನ್ನೆ ಇಟಗಿ ಭೀಮವ್ವನ ಗುಡಿಗೆ ಹೋಗಿದ್ವಿ, ನೆಪ್ಪೈತನು?
'ಹ್ಮೂಂ, ನೆಪ್ಪಿಲ್ದೇನು? ಮಗಾ ಆರಾಮಾಗಿ ಬರ್ಲಂತಂದ ಕಾಯಿ ಕಟ್ಟಿ ಬಂದಿದ್ವಲ್ಲ!.
'ಹೌದು, ಕಟ್ಟಿದ ಕಾಯಿ ಫಲ ಪಲಿಸ್ಲಿಲ್ಲ, ಯಾವ ಸಾಮಿ ಮನಿ ಅಡ್ಗಿ ಸಾಂಬಾರ ಆಗೈತೊ ಏನೊ?, ಹೋಗ್ಲಿಬಿಡು ಹುಳ ಬಿದ್ದ ಹಣ್ಣನ್ನ ಎಷ್ಟಂತ ತೊಳಿಯಾಕ ಆಗ್ತದ. ಹ್ಮ, ಭೀಮವ್ವನ ಗರ್ಭ ಗುಡಿ ಒಳಗ ಒಂದ ಕಡಿಗೆ ಎರಡು ಸಾಲು ಬರ್ದಿದ್ರು, ಅದನ್ನ ನೀನ್ ಎಷ್ಟ ಚಂದ ಓದಿ ಹೇಳಿದಿ, ನೆನಪೈತನು?'
ಕ್ಷಣಕಾಲ, ಮೌನವಹಿಸಿದ ಮಂಜುಳಾ 
ತಟ್ಟನೆ ತಲೆ ಎತ್ತಿ ತಂದೆಯ ಮೊಗವನ್ನು ದಿಟ್ಟಿಸಿ ನೋಡಿದಳು. ತಂದೆಯ ಕಣ್ಣಲ್ಲಿ ಕಣ್ಣೀರಿನ ಕಡಲು ಮಾಯವಾಗಿ, ಪೌರ್ಣಿಮೆ ಚಂದ್ರನು ಬೆಳಗಿದಂತೆ ಭಾಸವಾಯಿತು.
"ಹಡದ ಮಕ್ಕಳಿಗೆ ತಾಯಿ ಆಗೋದ ದೊಡ್ಡ ಮಾತಲ್ಲ!, ಎಲ್ಲಾ ಮಕ್ಕಳಿಗೂ ತಾಯಾಗೋದು ದೊಡ್ಮಾತು!". ಮೆಲ್ಲನೆ ಉಸಿರಿ, ಸಂದಿಗ್ಧತೆಗೊಳಗಾದಂತೆ ಕಂಡು ಬಂದಳು. ಅತ್ತ ಸೂರ್ಯ ಸಣ್ಣಗೆ ಕರಗುತ್ತಿದ್ದ, ಹಕ್ಕಿಗಳ ಹಿಂಡು ಚಿಲಿಪಿಲಿಗೈಯ್ಯುತ್ತ ಮರಳಿ ಗೂಡಿಗೆ ಹೊರಟಿದ್ದವು, ಅಪ್ಪ ಭುಜದ ಮೇಲೆ ಕೈಯಿಟ್ಟ, ಕತ್ತಲಾಗುತ್ತಾ ಬಂತು ಹೊರಡೋಣ ಎಂಬ ವಿಚಾರದೊಂದಿಗೆ.
ಮಂಜುಳಾ ಧೀರ್ಘ ನಿಟ್ಟುಸಿರೊಂದನ್ನು ಹೊರಬಿಟ್ಟು, ಸೇರಗಿನಂಚಿಂದ ಕಣ್ಣೀರು, ಮೂಗನ್ನು ಒರೆಸಿಕೊಂಡು, ತೊಡೆಯ ಮೇಲೆ ಹಾಕಿಕೊಂಡಿದ್ದ ಮಗನ ಶವವನ್ನು ಎತ್ತಿ ಹೆಗಲ ಮೇಲೆ ಹಾಕಿಕೊಂಡು ಎದ್ದು ನಿಂತಳು.
'ಆವತ್ತ ನನ್ನ ಹೊಟ್ಟ್ಯಾನ ಕೂಸಿನ ಬದ್ಕ ಕಟ್ಟೊಕಾ ತಯಾರಿದ್ದಾಕಿ ನಾ, ಇವತ್ತ 

ಶಾಯರಿ

ಇವುಗಳೆಲ್ಲದರ
ಮರಣೋತ್ತರ ಪರೀಕ್ಷೆಯನ್ನು
ನಡೆಸಲಾಗಿ,
ಎಲ್ಲದರಲ್ಲಿಯೂ
ರಂಗೀಯ ನಿರಾಕರಣೆಯ
ಸೋಂಕೆ 
ಕಾರಣವಾಗಿದೆಯಂತೆ
ಸಾಕಿ....
ಹೂಗಳನ್ನೆ
ಹೊಸಕಿದವಳಿಗೆ
ನಾನು ಯಾವ ಲೆಕ್ಕ!!
ಮದ್ದಿಲ್ಲದ ರೋಗಕ್ಕೆ
ತುತ್ತಾದ ಬಡಪಾಯಿ
ರೋಗಿ ನಾನೀಗ!