Saturday, December 12, 2020

ನನ್ನಾಕಿ

ಮಾತ್..ಮಾತನ್ಯಾಗ ಬೆಲ್ಲ ತುಂಬಿ ಮಾತಾಡಾಕಿ
ನೂರ್ ಕೆಲ್ಸ ಹೇಳಿದ್ರ, ಒಂದ ಮಾಡಿ ಹಲ್ಬಿಟ್ಗೊಂಡ ನಿಂದ್ರುವಾಕಿ
ಅನ್ನ-ಸಾರು ಉಪ್ಪಾಗೈತಂದ್ರ ಹಣಿಹಣಿ ಬಡ್ಕೊಳ್ಳಾಕಿ
ಸಂಜಿಕೆಲ್ಲ, ಕೊಬ್ರಿ-ಬೆಲ್ಲ ಕುಟ್ಟಿಕೊಟ್ಟ ಬಾಯ್ನೆಲ್ಲ ಸಿಹಿ ಮಾಡಾಕಿ

ಕಸಮುಸರಿನೆಲ್ಲ ಬೂದಿ ಹಚ್ಚಿ ಬೆಳ್ಳನ ಬೆಳ್ಗ ತಿಕ್ಕುವಾಕಿ
ಬೆಳ್ಳನ ಬಟ್ಟಿಗೆ ಜಗ್ಗಷ್ಟು ನೀಲಿ ಹಾಕಿ ಲೊಚಗುಟ್ಟಾಕಿ
ವಗ್ದ...ವಗ್ದ.. ಟಾಕಿ ನೀರೆಲ್ಲ ಖಾಲಿ ಮಾಡಿ ಹಾಕಾಕಿ
ಹೊತ್ತ ಹಾಕಂದ್ರ, ನಡು ಬ್ಯಾನೆಂತಂದ ಚಾದರ ಹೊತ್ಗೊಂಡ ಮಲ್ಗುವಾಕಿ

ಸಿಂಬ್ಳ ಸೀನಕೊಂತನ ಖೊಣ್ಗಿ ರೊಟ್ಟಿ ಬಡ್ದ ಹಾಕಾಕಿ
ಮಗಳ ಮುಕ್ಳಿ ತೊಳಿತಲೆ, ಊಟಕ್ಕ ಬಂದ ಬಡಿಸುವಾಕಿ
ರುಚಿ ಹ್ಯಾಂಗೈತೆಂದು ಛೇಷ್ಟಿ ಮಾಡ್ಕೊಂತ ನಗುವಾಕಿ
ಬೆಕ್ಕ ಕುಡ್ದ ಹಾಲಿನ ಗಿಂಡಿ ನೋಡಿ ಅತಗೊಂತ ಕುಂದ್ರುವಾಕಿ

ಕತ್ಲದಾಗ, ಎಲ್ಲೇದಿ ಅಂದ್ರ ಹಲ್ಬಿಟ್ಟ ದಾರಿ ತೊರ್ಸುವಾಕಿ
ಒಂದ ಸಾಕಂದ್ರನು ಮೂರ ಮೂರ ಹಡ್ದ ಕೊಟ್ಟಾಕಿ
ಶ್ಯಾಣೆ ಅಂದ್ರು ಸೈನಾ, ದಡ್ಡಿ ಅಂದ್ರನು ಸೈ ಅನ್ನಾಕಿ
ಬಾಯ್ಬಿಟ್ರಂದ್ರ ಗಂಡ್ನಾಯಿಗಳ ಬಾಲಾನು ಮುದ್ರುಸ್ವಾಕಿ

ಕಪ್ಗಿದ್ರೇನ..ಬೆಳ್ಗಿದ್ರೇನ...ಸೊಟ್ಗಿದ್ರೇನ, ನೆಟ್ಗಿದ್ರೇನ
ಹ್ಯಾಂಗಿದ್ರೇನ... ಆಕಿ ನನ್ನಾಕಿ
ಬಳಕ ಬಳ್ಳೆಂತೂ ಅಲ್ಲ, ಬದ್ಕಿಗೆ ಗಂಧದ ತನ್
ತಾ ತಿಕ್ಕುವಾಕಿ ಆಕಿ ನನ್ನಾಕಿ
ಬೇಕ ಅನ್ಲಿಲ್ಲ.. ಬ್ಯಾಡ ಅನ್ಲಿಲ್ಲ, ತಂದ್ಕೊಟ್ಟದ್ರಾಗ
ಸುಖ ಕಾಣಾಕಿ ಆಕಿ ನನ್ನಾಕಿ
ಎದಿಹಾಲ ಕೊಟ್ಟಿಲ್ಲನ್ನೊದಷ್ಟ ಖರೆ...ಅವ್ವನ್ನ ಬಿಟ್ರ
ಈಕಿನ ನನ್ ತಾಯಿ ಈಕಿ ನನ್ನಾಕಿ
ನನ್ನಾಕಿ ನನ್ನಾಕಿ.

Friday, December 11, 2020

ಚುಟುಕು

ಕಿರು ಬೆರಳ ಹಿಡಿದು
ಸಪ್ತಪದಿಯ ತುಳಿದು,
ಹಿಂದಿಂದೆ ಬಂದವಳು
ನೀನಲ್ಲವೆ!?
ಬರುವ ಸಾವು, ಕ್ಷಣ
ಮುಂಚೆ ನನ್ನನ್ನೆ
ಕರೆದೊಯ್ಯಲಿ.
ಕಣ್ತುಂಬಿಕೊಳ್ಳುವುದಾದರೂ
ಹೇಗೆ?
ಎದೆಯುಸಿರು ನೀನು..
ಕೊನೆಯುಸಿರೆಳೆಯುವುದನ್ನೆ.

Thursday, December 10, 2020

ಶಾಯರಿ

'ಕಳೆದು' ಹೋಗಲೆಂದೆ
ಬಟ್ಟಲನ್ನು
ಎತ್ತಿಕೊಳ್ಳುತ್ತೇನೆ
ಸಾಕಿ....
'ಮುಳುಗಿ' ಹೋಗುತ್ತೇನೆ
ನಶೆ ಏರಿದಷ್ಟು
ರಂಗೀಯ ನೆನಪಿನ
ಕಡಲಿನಲ್ಲಿ.

Tuesday, December 8, 2020

ಶಾಯರಿ

ಅರಸಿಕರಿಗೇನು
ಗೊತ್ತು?
ಕೊನೆಯ ಗುಟುಕಿನ
ಸಿಹಿ...
ಸಾಕಿ...
ನೆನಪಿಸುವುದಿಲ್ಲವೇನು?
ಬಿಟ್ಟು ಹೋಗುವಾಗ,
ತುಟಿಯಂಚಲಿ ತುಂಬಿ
ಹೋದ ರಂಗೀಯ
ಕಹಿ..

Sunday, December 6, 2020

ಚುಟುಕು

ಸಾಕುಬಿಡು!
ಕರಗಿ ಹೋಗಿ
ಬಿಡುವೇನು
ಬಿಸಿ ಮುತ್ತಿಗೆ!
ತಾಳಿಕೊಳ್ಳಲಾದಿತೆ?
ಇರುಳಲಿ ಅಪ್ಪುವ
ನಿನ್ನ ನೆನಪುಗಳ
ಮುತ್ತಿಗೆಗೆ!

Saturday, December 5, 2020

ಚುಟುಕು

ಬೀಗುಮಾನವ ಬಿಟ್ಟು
ಹೂ ನಗೆಯೊಂದನು
ಚೆಲ್ಲಿಬಿಡು ಚೆಲುವೆ!
ಮಾಗಿಯು ಮುಗಿಯುತ್ತ
ಬರುತ್ತಿದೆ. ಈ ಹೊತ್ತಲ್ಲಿ
ಬಿಂಕು-ಬಿನ್ನಾಣ ತರವೆ!

ನಿರ್ಭಾವುಕತೆಗಳು

ಬತ್ತಿ ಹೋದ ಈ
ತುಟಿಯ ತೊರೆಗೊಂದಿಷ್ಟು
ಸವಿಜೇನ ಸುರಿಸಿಬಿಡು!
ಕರಾಳತೆಯ ತುಂಬಿದೀ...
ಕಂಗಳ ಕೊಳದಲ್ಲಿ, ಭರವಸೆಯ
ಬೆಳಕನ್ನು ತುಂಬಿಬಿಡು!
ಬೇಕು-ಬೇಡಗಳ ಸಂದಿಗ್ಧಗಳ
ಸಂಕೋಲೆಯಲಿ ಸಿಕ್ಕ ಮಸ್ತಕಕ್ಕೆ
ಹೆಗಲೊಂದನ್ನು ನೀಡು!
ಮಾತಲ್ಲಿಯೆ ಬೆನ್ನ ಮೇಲೆ ಗೀರಿದ,
ಮಾಯದ ಗಾಯಗಳ ಮೇಲೆ
ಬೆರಳುಗಳಿಂದ, ನಾನಿರುವೆನೆಂದು ದೃಢೀಕರಿಸು.
ನಾಳೆಯ ಚಿಂತೆ ನನಗಿಲ್ಲ!
ಬರುವಂತಿದ್ದರೆ ಸಾವು, ಅದಿಂದೆ,
ಈಗಲೇ ಅಪ್ಪಿಕೊಂಡು ಬಿಡಲಿ!
ಜಗದ ಬೇರಾವ ಸುಖವು ಬೇಡ
ನನಗೀಗ! 
ಜಗವು ಅಳುತ್ತದೆ ಮೂರು ದಿನ!
ಮತ್ತೆ, ಬದುಕು ನಗುತ್ತಲೆ ಸಾಗುತ್ತದೆ ಮರುದಿನ!