Saturday, June 12, 2021

ಚುಟುಕು

ಇಲ್ಲಿ....
ಕರೋನಾದ ಹಾವಳಿ
ಹೆಚ್ಚಿದೆ, ನೋಡಬೇಡ
ನೀನು....ಹೀಗೆ 
ಸುಮ್ಮನೆ!
ಜೇಬಿನಲ್ಲಿ 'ಕಾಸಿಲ್ಲ',
ತನು-ಮನವು ಉರಿಯುವಂತೆ
ಮಾಡಬೇಡ ನೀ...
ಹಚ್ಚಿ, ಹಸಿ-ಬಿಸಿಯ
ಕಾಮನೆ!

Monday, June 7, 2021

ಶಾಯರಿ

ಸಾಲು...ಸಾಲು..
ಆತ್ಮೀಯರ ಸಾವುಗಳ ಕಂಡು, 
ಕಣ್ಣೊಳಗಿನ
ಕಣ್ಣೀರ ಕೊಳವು
ಬತ್ತಿ ಹೋಗಿದೆ
ಸಾಕಿ...
ಎದೆಯೊಳಗಿನ ದುಃಖಕ್ಕೀಗ
ಮಧುಶಾಲೆಯೊಳಗಿನ 
ಮಧುವೇನು ಬೇಕಿಲ್ಲ. 
'ಕಡ' ಕೊಡುವುದಾದರೆ
ಒಂದಿಷ್ಟು ಕಣ್ಣೀರನ್ನು 
ಕೊಡು!!

ಅಕ್ಷರ ಬಡವ.

Monday, May 24, 2021

ಕಾದಂಬರಿ ವಿಮರ್ಶೆ

#ಕಾದಂಬರಿ_ನಿರ್ಣಯ

#ಕಾದಂಬರಿಕಾರ_ಶರಣಪ್ಪ_ಬೇವಿನಕಟ್ಟಿ

ಸೃಜನಶೀಲ ಬರೆಹಗಾರರಾದ ಶರಣಪ್ಪ ಬೇವಿನಕಟ್ಟಿ ಅವರ ಸೃಜನಶೀಲ ಕೃತಿ #ನಿರ್ಣಯ, ನನಗೆ ಯಾವುದು ಸರಿಯೆಂದು ನಿರ್ಣಯಿಸುವಲ್ಲಿ ಗೊಂದಲವನ್ನೇ ಉಂಟು ಮಾಡಿದ ಕೃತಿ. ಈ ಕೃತಿ ಓದಿದ ನಂತರ ಮತ್ತೆ ಮತ್ತೆ ಕಾಡುವ ಗುಣವನ್ನು ಹೊಂದಿದ್ದು ಮನಸಿಗೆ ಅತೀವವಾದ ನೋವನ್ನು‌ ನೀಡಿತು. ಹಾಗೆಂದು ಕೃತಿಯ ದೋಷವಲ್ಲ, ಅದು ಕೃತಿಯ ಶ್ರೇಷ್ಠತೆ. ಇಂತಹ ಒಂದು‌ ಕಾಡುವ ನೋವನ್ನು ನೀಡುವ ಕೃತಿ ನೀಡಿದ ಶರಣಪ್ಪ ಬೇವಿನಕಟ್ಟಿ ಅವರಿಗೆ ಅಭಿನಂದನೆಗಳನ್ನು ಕೋರುವೆ.

ಇಂದು ಬೆಳಿಗ್ಗೆ ಎದ್ದವನೇ #ನಿರ್ಣಯ ಪುಸ್ತಕ ಹಿಡಿದು ಕುಳಿತೆ. ಓದಲು ಆರಂಭಿಸಿದ ಮೇಲೆ ಅದನ್ನು ಪೂರ್ಣಗೊಳಿಸಿಯೇ ಬಿಟ್ಟದ್ದು, ಅದರ ನಡುವೆ ಮಡದಿ ತಂದ ಚಹಾ ಓದಿನೊಡಗೂಡಿಯೇ ಮುಗಿದದ್ದು ವಿಶೇಷ. ಬಹು ವರ್ಷಗಳ ನಂತರ ಈ ರೀತಿ ಪುಸ್ತಕ ಓದಿದ್ದು ಇದೇ ಮೊದಲು. ಶಾಲಾ ಅವಧಿ, ಕಾಲೇಜು ದಿನಗಳಲ್ಲಿ ನಾನೊಬ್ಬ ಓದಿನ ರಾಕ್ಷಸನಾಗಿದ್ದೆ. ಈಗ ಓದೇ ಅಪರೂಪವಾಗಿ ಹೋಗಿದೆ. ಅದರ ನಡುವೆಯೂ ಬರೆಹವಂತೂ ನಿಂತಿಲ್ಲ. ಬರೆಹಕ್ಕಿಂತ ಓದು ಬಹು ಮುಖ್ಯ. ಓದಿನ ಪರಿಪಕ್ವತೆ ಇಲ್ಲದಿದ್ದರೆ ಬರೆಹ ಹೇಗೆ ಸಾರ್ಥಕವಾಗುತ್ತದೆ ಹೇಳಿ. ಅದು ಇರಲಿ ಬಿಡಿ. ಇತ್ತ ಶರಣಪ್ಪರ ಚಿಂತನಾಶೀಲತೆ, ಬದುಕಿನ ಸಂವೇದನಾ ಶೀಲ ಗುಣಧರ್ಮ, ಸತ್ಯದ ಹುಡುಕಾಟದಲ್ಲಿ ನೊಂದವರ ಬದುಕ ದೌರ್ಬಲ್ಯ ಮತ್ತು ಅದರ ಪರಿಣಾಮಗಳ ಘೋರತೆ ಕಾದಂಬರಿಯ ವಸ್ತು. ವಸ್ತುವಿನ ಆಯ್ಕೆ ಬಹಳ ಸುಂದರ ಮತ್ತು ಪ್ರಸ್ತುತವೂ ಹೌದು. ಆದರೆ ಕಥೆಯ ಅಂತ್ಯ ಅತ್ಯಂತ ಹೃದಯ ವಿದ್ರಾವಕವಾದುದು. ಗ್ರೀಕ್ ರುದ್ರ ನಾಟಕಗಳ ಪ್ರೇರಣೆ ಈ ಕಾದಂಬರಿಯಲ್ಲಿ ಕಾಣಬಹುದು. 

ಅಖಿಲ್ ಮತ್ತು ರಮೇಶ ಎಂಬೀರ್ವರ ಸುತ್ತ ಸುತ್ತುವ ಕಥೆಯು ಅವರ ಅತಿ ಘೋರವಾದ ಸವಾಲುಗಳ ನಡುವೆ ನರನರಳಿ ಸಾಗುವ ಬದುಕಿನ ಪಥ ಓದುಗನನ್ನು ಅತಿಯಾಗಿ ಕಾಡುತ್ತದೆ. ಸಾಮಾನ್ಯ ವರ್ಗದ ಜನರ ಜೀವನದ ಕಠೋರ ಸತ್ಯಗಳು ಕಥೆಯ ಕೇಂದ್ರ ವಸ್ತುವಾದರೂ ಅದರ ಮಹತ್ತರವಾದ ಉದ್ದೇಶ ಸಮಸ್ಯೆಯ ಪರಿಹಾರಕ್ಕೆ ತುಡಿಯುವಾಗ ಆಗುವ ಸಮಸ್ಯೆ ಮತ್ತು ಸವಾಲುಗಳನ್ನು ಓದುಗನಿಗೆ ಹೃದಯಸ್ಪರ್ಶಿ ಮುಟ್ಟುವಲ್ಲಿ ಕೃತಿ ಗೆಲ್ಲುತ್ತದೆ. 

ರಮೇಶ ಕೌಟುಂಬಿಕ ಬದುಕಿನಲ್ಲಿ ಕಾಣುವ ವ್ಯಥೆ, ಇಂದಿನ ಸಮಾಜದಲ್ಲಿನ ಅನಂತ ಕುಟುಂಬಗಳ ಸತ್ಯದ ಕಥೆಯೇ ಹೌದು.  ಅಖಿಲನ ಕಥೆಯು ಸಹ ಹೊರತಾದುದಲ್ಲ. ಆರಂಭದಲ್ಲೇ ಓದುಗನನ್ನು ಹಿಡಿದಿಟ್ಟುಕೊಳ್ಳುತ್ತಾ ಸಾಗಿ, ಕೊನೆಯಲ್ಲಿ ಕುತೂಹಲ ಮೈನವಿರೇಳಿಸುವ ಬರೆಹವಿದೆ. ಬದುಕಿನ ಸ್ವಾರ್ಥಕ್ಕಾಗಿ ತೆಗೆದುಕೊಳ್ಳುವ ನಿರ್ಣಯ ಅದೆಷ್ಟು ಮುಖ್ಯ ಎಂಬುದನ್ನು ಕಾದಂಬರಿ ಸಮರ್ಪಕವಾಗಿ ಸಾಧಿಸುತ್ತದೆ. 

ಒಬ್ಬ ಕಾದಂಬರಿಕಾರನಿಗೆ ಇರುವ ತಂತ್ರಗಾರಿಕೆ ಶರಣಪ್ಪರಿಗೆ ಸಿದ್ಧಿಸಿದೆ. ಮನೋವಿಜ್ಞಾನದ ಪ್ರಯೋಗಶೀಲತೆ, ವಾಸ್ತವದ ಸವಾಲುಗಳ ನಡುವೆ ಉಂಟಾಗುವ ಜಿಜ್ಞಾಸೆಗಳ ಮೂಲಕ ಕಾದಂಬರಿ ವಾಸ್ತವದ ಕಟು ಸತ್ಯವನ್ನೇ ಸಾಧಿಸುತ್ತಾರೆ. ಪಾರ್ಕಿನ ಸುತ್ತ ಆರಂಭವಾದ ಕತೆಯು ಪಾರ್ಕಿನ ನಡುವೆ ನಡೆವ ಕೆಲವು ಅಗೋಚರಿತ ವಿದ್ಯಮಾನಕ್ಕೂ ಸೂಕ್ಷ್ಮವಾದ ಸಂಕಲ್ಪಿಸಿ, ೫೦೦ ರೂಪಾಯಿ ಪಡೆದುದು ಅಷ್ಟಾಗಿ ಒಪ್ಪದಿದ್ದರು ಒಪ್ಪವಾಗಿಸಿದ್ದಾರೆ. ಅಂತ್ಯದಲ್ಲಿನ ತಿರುವು ತೀವ್ರವಾಗಿ ಓದುಗನಿಗೆ ಅಚ್ಚರಿಯ ಫಲಿತವನ್ನು ನೀಡುತ್ತದೆ. 

ಕಾದಂಬರಿಯನ್ನು ಸವಿವರವಾಗಿ ತಿಳಿಸಲು ಬಯಸಲಾರೆ. ಏಕೆಂದರೆ ಓದುಗನಿಗೆ ಕಾತುರತೆ ಇಲ್ಲವಾಗುತ್ತದೆ. ಕಾದಂಬರಿ ಎಲ್ಲರೂ ಓದಬೇಕಾದ ಗುಣಧರ್ಮಗಳನ್ನು ಹೊಂದಿದೆ. ಹಾಗಾಗಿ ಎಲ್ಲರೂ ಓದುವಂತೆ ಕೋರುವೆ. ಇಂದಿನ ಬರೆಹಗಾರರಿಗೆ ಬರೆಯುವುದೊಂದೇ ಧರ್ಮವಾಗಿ ಓದಿನ ಭಾವ ಇಲ್ಲದಾಗಿ ಬರೆಹಗಳು ನಿಸ್ಸಾರವಾಗಿವೆ. ಓದು ಕಾಡಬೇಕು, ಎದೆಯ ಪೀಡಿಸಬೇಕು, ಮತ್ತೆ ಮತ್ತೆ ಯೋಚಿಸಬೇಕು. ಅದೇ ಕೃತಿಯ ಗೆಲುವು. ಈ ನಿಟ್ಟಿನಲ್ಲಿ ಶರಣಪ್ಪ ಯಶಸ್ವಿಯಾಗಿದ್ದಾರೆ. 

ಕೃತಿ ಸಂಪೂರ್ಣಗೊಂಡ ಬಳಿಕ ನಿರುತ್ತರನಾಗಿ ಕುಳಿತ ನನಗೆ "ಏನಾಯ್ತು ರೀ ನಿಮಗೆ" ಎಂದು ಮಡದಿ ಪ್ರಶ್ನಿಸಿದಾಗ ಮೌನವೊಂದೇ ಉತ್ತರವಾಯಿತು. ಇಂತಹ ಕೃತಿಯ ಓದು ನಮಗೆ ಬೇಕು. ಆದರೆ ಬಡತನದವರು ಧರ್ಮ, ಸತ್ಯ, ನ್ಯಾಯದ ಪಥ ಹಿಡಿದು ಸೋಲುತ್ತಾರೆ ಆದರೆ ಸಿರಿವಂತರಿಗೆ ಇದರ ಹಂಗಿಲ್ಲ  ಆದರೂ ಗೆಲ್ಲುತ್ತಾರೆ. ಇಲ್ಲಿ ಈ ದ್ವಂದ್ವಗಳು ನನಗೆ ಕಾಡುವ ಪ್ರಶ್ನೆಯಾಗೇ ಉಳಿದವು. ಇವುಗಳಿಗೆ  ಉತ್ತರ ಏಕಿಲ್ಲ. ಕತೆಯನ್ನು ಸುಖಾಂತ್ಯಗೊಳಿಸಿದ್ದರೂ ಚೆನ್ನಾಗಿತ್ತು. ಆದರೆ ಕಾದಂಬರಿಕಾರ ಈ ಪ್ರಯತ್ನಕ್ಕೆ ಕೈಹಾಕದೇ ಗೆದ್ದಿದ್ದಾನೆ. 

ಒಟ್ಟಾರೆ #ನಿರ್ಣಯ ಕಾದಂಬರಿಯನ್ನು ಓದಿ ಅದರ ನಿರ್ಣಯವನ್ನು ನೀವೇ ಹೇಳಬೇಕು. ಇದು ನನ್ನ ಅನುಭವಕ್ಕೆ ದಕ್ಕಿದ್ದು. ಸೂಪರ್ ಶರಣಪ್ಪರೇ. ನಿಮ್ಮ ಬರೆಹಕ್ಕೊಂದು ಶರಣು.

👌👌👌👌🙏🙏🙏🙏

ಪ್ರೀತಿಯಿಂದ,.

ಡಾಕೇಶ್ ತಾಳಗುಂದ
೨೪.೦೫.೨೦೧೯

Monday, April 12, 2021

ಮಾಂವ

ನೀನಿಲ್ದ ಹೊತ್ತನ್ಯಾಗ, ಕರೆಂಟು
ಆಟ ಆಡಾಕ ಹತ್ತೈತಿ!
ಹಚ್ಚಿಟ್ಟ ಕಂದೀಲು ಸಣ್ಣ..ಗ ಹೊತ್ತ
ತಿನ್ನಾಕುಂತೈತಿ!
ಬ್ಯಾಸ್ಗಿ ಝಳ.. ಮೈ ಮ್ಯಾಲಿನ ಬಟ್ಟಿನೆಲ್ಲ
ತೊಯ್ಸಿ ಬಿಟ್ಟೈತಿ!
ಸುಡುಗಾಡ ಹಳೆ ನೆಪ್ಪೊಂದು ನೆನಪಾಗಿ
ಮೈಗೆಲ್ಲಾ ಬೆಂಕಿ ಹಚ್ಚಿ ಮಲಗಿಬಿಟ್ಟೈತಿ!

ಬೆಳಕ ಹರದ್ರ...ಯುಗಾದಿ ಐತಿ, ಬೇಗ ಬಂದು
ಕೊಡಬಾರದೇನೊ? ಗಲ್ಲಕ್ಕೊಂದು ಬೆಲ್ಲ!
ಸಿಹಿ ಬಿಟ್ಟು, ಬರೀ ಕಹೀ...ನ ಕೊಟ್ರ
ನಾ..ಹ್ಯಾಂಗರ ತಡಕೊಳ್ಳಲೊ ನಲ್ಲ!
ತೊಳದಿಟ್ಟ ಅನ್ನದ ಬೊಗೊಣಿ ಹಂಗ,
ಬರಿಗೈಯ್ಲೆ ಕಾಯಕ ಹತ್ತಿನೊ ಮಲ್ಲ!

ಬಿಸಿ ಜೋಳದ ರೊಟ್ಟಿ ಮ್ಯಾಲಿಟ್ಟ
ಬೆಣ್ಣಿಯಂತಾಗಿ ನಾ... ಕರಗಿ ಹೊಂಟೇನಿ!
ಎಷ್ಟ ಹಾರಾಡಿ, ಜಿಗಿದಾಡಿದ್ರು ಕೈಗೆ ಸಿಗ್ದ ಹಾಲನ್ನ
ಕಂಡ, ಚಟಪಟ ಒದ್ದಾಡೊ ಕಳ್ಳ ಬೆಕ್ಕನಂಗ ಆಗೀನಿ!

ಮೈ ಮ್ಯಾಲ ನಿನ್ ಮುತ್ತಿನ ಅಚ್ಚಿಲ್ದನ, ಮಣಭಾರ
ಬಂಗಾರದ ಸಾಮಾನ ಹಾಕ್ಕೊಂಡ ನಿಂತಿನಿ!
ಮತ್ತ ಇಳಿಲಾರ್ದನ ಗುಂಗ ಹಿಡ್ಸಾಕುಂತೈತಿ
ಮದ್ಯಾನದಾಗ...ಮುಡ್ಕೊಂಡ ಮಲ್ಗಿ ಹೂವಿನ
ವಾಸ್ನಿ!

ನಕ್ಕೆನಂದ್ರ ನಗು ಬರಾವಲ್ದು, ಅತ್ತೆನಂದ್ರ ಅಳು ಬರಾವಲ್ದು, ಏನೂ... ತಿಳಿದಂತ ಮಳ್ಳಿಯಂತಾಗಿನಿ!
ಇಳಕಲ್ ಸೀರಿ ಬ್ಯಾಡ, ಗುಳೇದಗುಡ್ಡದ ಖಣ ಬ್ಯಾಡ
ನಕ್ರ, ಸಾವ್ರ ಮುತ್ತ ಸುರಿಸೊ ಆ ನಗು ಮುಖಾನ
ಹೊತ್ಗೊಂಡ ಯಾವಾಗ ಬರ್ತೀಯಂತ ಕಾಯಾಕ
ಹತ್ತೀನಿ.... ನಾ ಕಾಯಾಕ ಹತ್ತೀನಿ...

Saturday, April 3, 2021

ರಂಗೀ..

ಹೀಗೇತಕೆ?
ಕೊರಡಾಗಿಸಿಬಿಟ್ಟೆ
ಎದೆಯ ಗೂಡನ್ನು!!
ರಂಗೀ...
ಸಾಧ್ಯವಾದರೆ ಸುಟ್ಟು
ಹಾಕಿಬಿಡು, 'ಪೀಡೆ' ತೊಲಗಿದರು
ತೊಲಗಬಹುದು!!
ಕಾರಣವಿಷ್ಟೆ. ಹನಿ ಕಣ್ಣೀರು
ಬಿದ್ದರು...ಮತ್ತೆ
ಚಿಗುರಬಲ್ಲದು ನಿನ್ನ
ಹೆಸರಿನಲ್ಲೆ!

Saturday, March 13, 2021

ಚುಟುಕು

ಸ್ಥಿರವಾಗಿ ನಿಂತಿದೆ
ಕುಡಿದು ತೂರಾಡುವಂತೆ
ಮಾಡುವ, ಬಾರೊಳಗಿನ
ಎಣ್ಣೆಯ ರೇಟು!!
"ಗಿರ್ರೆನ್ನಿಸುತ್ತಿದೆ"
ಕುಡಿಯದೆ ಇರುವವರ
ತಲೆಯನ್ನು.
ದಿನೆದಿನೆ ಏರುತ್ತಿರುವ
ಅಡುಗೆ ಮನೆಯ
ಎಣ್ಣೆಯ ರೇಟು!!

Sunday, March 7, 2021

ಶಾಯರಿ


ಆರಿ ಹೋದ
ಐದು ರೂಪಾಯಿಯ
ಚಹಾಕ್ಕೆ, ಎಂಟಾನೆ ಪ್ಲಾಸ್ಟಿಕ್
ಕಪ್ಪಿನ ಬೆಲೆಯೂ ಇಲ್ಲ
ಸಾಕಿ...
ನಿನ್ನಿಂದೇನೂ... ಆಗದು
ಎಂದರಿವಾದಕ್ಷಣವೆ, ಎಸೆದು 
ಬಿಡುತ್ತಾರೆ! ತೂಗು ತಕ್ಕಡಿ
ಯೊಳಗಿನ ಹುಳುಕು
ಬದನೆಯಂತೆ.