Saturday, September 17, 2022

ಬಾ ರಂಗೀ..

ಎಲ್ಲರಿಗೂ....ಅವಳು ಬಿಟ್ಟು
ಹೋದದ್ದನ್ನು ಹೇಳಲು ಕುಳಿತರೆ ಕಾರಣ!!
ಅವರೆಲ್ಲ ಕಿವಿ ಮುಚ್ಚಿಕೊಂಡು ಲೊಚಗುಟ್ಟುತ್ತಾರೆ
ಇವನದೆನಯ್ಯ ನಿತ್ಯ ಸಂಜೆಯ ಪುರಾಣ!!
ದಿನಕ್ಕೊಂದು ಬಣ್ಣ ಬಳಿದು ಕತೆ ಹೇಳಲಿಕ್ಕೆ ನಾನೇನು
ವರದಿಗಾರನೆ? ಇವರಿಗೆ ಏನು ಹೇಳೊಣ!!
ಬಾ ರಂಗಿ....ಸಂಕಟಕ್ಕಾಗದೆ, ನೋಟಿನ ಕಂತೆಗೆ
ಜೊಲ್ಲು ಸೋರಿಸುತ್ತ ಕೈ ಚಾಚುವರ ಜೊತೆಯಲ್ಲಿ  ಬದುಕುವುದಕ್ಕೆ ಅರ್ಥವುಂಟೇನು? ಸಣ್ಣದೊಂದು ಗುಟುಕು ಕುಡಿದು ಬರೋಣ!!!

ಹಸಿವಿಗಾಗಿ ಚೆಲ್ಲಿದ ಚಹಾದ ಹನಿಯ
ಹೀರಲು ಹಾರಾಡುತ್ತವೆ ನೊಣ!!
ಇವುಗಳಿದ್ದರೆ ಗಿರಾಕಿಗಳು ಬರುವುದಿಲ್ಲವಲ್ಲ
ಹೀಗಾಗಿ ಮಾಲೀಕ ಉರುಳಿಸುತ್ತಾನೆ ಇವುಗಳ ಹೆಣ!!
ಒಬ್ಬರನ್ನು ಕೊಂದೆ... ಒಬ್ಬರ ಹಸಿವನ್ನು
ಇಂಗಿಸಿಕೊಳ್ಳುವುದೀದು ಸಮಾಜದ ದರ್ಪಣ!!
ಬಾ ರಂಗೀ.... ಜಗದ ಪಾಡು ಇದೊಂದು
ದಿನದ್ದೇನು? ಸಣ್ಣದೊಂದು ಗುಟುಕು ಕುಡಿದು ಬರೋಣ!!

ಒಂದು ಹೆಸರಿಗಾಗಿ ನೂರು-ಸಾವಿರ-ಲಕ್ಷಗಟ್ಟಲೆ
ಹೆಸರಗಳನ್ನು ಅಳಿಸಿದ ಕತೆಯನ್ನು ಇತಿಹಾಸ
ಹೇಳುತ್ತದೆ ಕೇಳೋಣ!!?
ಯಾರು? ಯಾತಕ್ಕಾಗಿ ಕೊಂದರು, ಸುಟ್ಟರು, ಹುಗಿದರು
ಅಗೆದಷ್ಟು-ಬಗೆದಷ್ಟು ಗಾಯ ಹಸಿಯಾಗುತ್ತ, ಕಿವುವಾಗಿ
ಸೋರುತ್ತ, ನಾರುತ್ತಲೆ ಸಾಗುತ್ತಿದೆಯಲ್ಲ!! ಇದು ನಮಗಲ್ಲ
ಮರೆತುಬಿಡೋಣ!!?
ಲಾಭವಿಲ್ಲದೆ ಯಾವನೂ ತಕ್ಕಡಿಯನ್ನು ತೂಗಲಾರ
ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುವುದಂತೂ ದೂರದ ಮಾತು...
ಬಾ ರಂಗೀ... ಕಗ್ಗತ್ತಲೆಯಲ್ಲಿ ನಗ್ನರಾಗಿದ್ದುಕೊಂಡೆ
ಜರತಾರಿ ಬಟ್ಟೆಯನ್ನು ತೊಟ್ಟಿರುವೆನೆಂಬುವರ ಮದ್ಯದಲ್ಲಿ
ನಮ್ಮದೇನಿದೆ? ಒಂದು ಗುಟುಕು ಕುಡಿದು ಬರೋಣ!!

ಇದ್ದಾಗ ಪ್ರೇಮಿಸದೆ, ಸತ್ತ ಹೆಣಕ್ಕೊಂದು ಕಟ್ಟಡವ
ಕಟ್ಟಿ, ಕಾಲಕಾಲಕ್ಕೂ ಪೂಜಿಸಿಕೊಂಡು ಬರುವುದೆ
ನಿಜವಾದ ಪ್ರೀತಿಯ ಉಳಿವು ಎಂಬೀವರ ಅಂಬೋಣ!!
ಕಲ್ಲಿನಲ್ಲಿ ಕೆತ್ತಿಸಿದ, ಗೆದ್ದಲು ಹತ್ತುವ ಪತ್ರಗಳಲ್ಲಿ, ಸ್ಮಾರಕಗಳಲ್ಲಿ
ಗಿಡ-ಮರ, ನದಿ ಬೆಟ್ಟ-ಗುಡ್ಡಗಾಡುಗಳಲ್ಲಿ ಅಲೆದು 
ದುರಂತ ಅಂತ್ಯಗೊಂಡ ಪ್ರೇಮದ ಕಟ್ಟು ಕಥೆ?ಗಳನ್ನು
ಹೇಗೆ ನಂಬೋಣ!!
ಬಾ ರಂಗೀ.... ಉಸಿರಿದ್ದಾಗಲೆ ದೇಹವೆರಡೂ ಜೀವ
ಒಂದು ಎಂದು ಬಾಳಲು ಬಿಡದ ಕಟುಕರ ಸಂಗದಲ್ಲಿ
ಸೌಖ್ಯವಿದೇಯೆ?? ನಡಿ..ನಡಿ..ಒಂದು ಗುಟುಕು
ಕುಡಿದು ಬರೋಣ!!

Thursday, August 25, 2022

ರಂಗೀ


ಊರೊಳಗೆಲ್ಲ
ಮದರಂಗಿಯಿಂದ
ರಂಗೇರಿದವಳ ಅಂಗೈಯದ್ದೆ
ಮಾತು
ರಂಗೀ...
ಹಚ್ಚಿಕೊಂಡಿರಬಹುದೇನೊ?
ಪ್ರೀತಿಯನ್ನು ಕೊಂದ
ರಕ್ತದ ಕಲೆ
ಕಾಣಿಸದಿರಲೆಂದು!

Monday, June 20, 2022

ರಂಗೀ..

ಸಾಧನೆಯ ಹಾದಿಯಲ್ಲಿ
ಕಲ್ಲು-ಮುಳ್ಳಾದವರು 
ಇಂದೇತಕೆ...? ಗೋರಿಯ
ಮೇಲೆ ಹೂ ಹಾಸನ್ನೇ... ಹಾಸಿರುವರು
ರಂಗೀ...
ಬಹುಶಃ... ನಾ...
ನಡೆದು ಬಂದ ಹಾದಿ
ಇವರಿಗಿಂತ ಭಿನ್ನವಾಗಿತ್ತೇನೊ?

Saturday, June 4, 2022

ರಂಗೀ

ಎದೆಯನ್ನು
ಇರಿಯಲೂ... ನೂರಾರು
ಆಯುಧಗಳಿದ್ದವು
ರಂಗೀ...
ಅವಳು ಆರಿಸಿಕೊಂಡಿದ್ದು
ಮಾತ್ರ
ಪ್ರೀತಿಯನ್ನು!!

Friday, June 3, 2022

ಸಾಕಿ. ಕಜಲ್

ಹೀಗೆ....ಹೆರಳುಗಳ ಹರವಿ, ಕೈ ತುಂಬ
ಬಳೆಗಳ ತೊಟ್ಟುಕೊಂಡು, ಹತ್ತಿಯ ಹಾಸಿಗೆಯ
ಮೇಲೆ ಹೂವಿನಂತವಳು ನೀ....ಮಲಗಿಬಿಟ್ಟರೆ!!
ಹೇಗೆ? ಸಾಕಿ....
ಬಾಯಾರಿ ಬಂದಿರುವೆ, ಅರಸಿಕರು ಕುಡಿದು
ಬಿಟ್ಟು ಹೋದ ಮಧು ಬಟ್ಟಲುಗಳನ್ನಾದರೂ...
ತೋರಿಸು, ಕುಡಿದು ವಿಷ ವಿರಹದಾಹವನೀಗಿಸಿಕೊಳ್ಳುವೆ...
ಎಂಜಲಾದರೂ ಏನಾಯಿತು? ನನ್ನ ಬಿಟ್ಟು ಹೋದ
ಪ್ರೀತಿಯ ಎಂಜಲನ್ನು ಮತ್ತೊಬ್ಬನು ಉಣ್ಣುತ್ತಿಲ್ಲವೇನು?

ಈ ಸಂಜೆಗೆ ಹೂವನ್ನು ತರಲಿಲ್ಲವೆಂದೆನಾದರು
ಬೇಸರಿಸಿಕೊಂಡಿರುವೇಯಾ? ಸಾಕಿ...
ದಿನದಂತೆ ಹಿಡಿತುಂಬ ನಿನ್ನಿಷ್ಟದ ಮೈಸೂರು
ಮಲ್ಲಿಗೆಯನ್ನೆ ತರುತ್ತಿದ್ದೆ...ದಾರಿಯಲ್ಲೊಂದು ಶವಯಾತ್ರೆಯು ನಡೆದಿತ್ತು ಕೇಳಿದೆ, ಆ ಜೀವವೂ...
ಅವಳ್ಹೆಸರಿನಲ್ಲಿಯೆ ಉಸಿರು ಚೆಲ್ಲಿತೆಂಬುದು ಗೊತ್ತಾಯಿತು!
ಹಿಡಿಯಲ್ಲಿದ್ದ ಅಷ್ಟೂ.... ಹೂಗಳನ್ನು ಅವನೆದೆಯ ಮೇಲೆ
ಸುರಿದು ಬಂದುಬಿಟ್ಟೆ... ತಪ್ಪಾಯಿತೇನು?

ಬರಿಗೈಯಲ್ಲೆ ಬಂದಿರುವೇನೆಂದು ದಾಸಿಗೆ ಹೇಳಿ
ನಿನ್ನರಮನೆಯ ಆವರಣದಿಂದಾಚಗೆ ದೂಡಿಸಿಬಿಡಬೇಡ
ಸಾಕಿ....
ಬಟ್ಟಲೊಳಗಿನ ಮಧು ಸಿಗದಿದ್ದರೂ ಸರಿ... ಗಾಳಿಯಲ್ಲಿ
ತೇಲಿ ಬರುವ ಅದರ ಸುವಾಸನೆಯನ್ನೆ ಹೀರುತ್ತಾ ನೆಮ್ಮದಿಯ ನಿದ್ದೆಯನ್ನಾದರು ಮಾಡುತ್ತೇನೆ!!ನಿನ್ನಂಗಳದಲ್ಲಿ
ಇಲ್ಲವಾದರೆ, ಮಸೀದಿ, ಮಂದಿರ, ಚರ್ಚಗಳೆಂದು ಕಾಣದ ದೇವರಗಳ ಹುಡುಕುತ್ತ...ಇದ್ದೊಂದಿಷ್ಟು ಮನಸ್ಸಿನ
ಶಾಂತಿಯನ್ನೇಕೆ ಹಾಳು ಮಾಡಿಕೊಳ್ಳಲಿ.

ನನ್ನ ನಿನ್ನರಮನೆಯ ಸಂಬಂಧ ಇದೊಂದು ಸಂಜೆಗೆ
ಮುಗಿದು ಹೋಗುವುದ್ದಂತೇನು ಸಾಕಿ....
ಅವಳಿಲ್ಲವಾಯಿತು!! ಇನ್ನೇನಿದ್ದರು ಏಳೆಳು ಉರುಳುಗಳ
ನಂಟು ಇಲ್ಲಿಗೆ.... ಗಟ್ಟಿಯಾಗಲಿಲ್ಲವೇನು?
ಉಸಿರು ನಿಂತ ಮೇಲೆ..!!? ಮಸಣಕ್ಕೆ ಸಾಗಿಹಾಕಿ ಬಿಡಬೇಡ
ನಿತ್ಯ ಸುಗಂಧವ ಸೂಸುವ ನಿನ್ನರಮನೆಯ ತೋಟದಲ್ಲಿ
ಹುಗಿದಿಸಿಬಿಡು... ನೋವು ನೆರಿಗೆಗಳಳಿಸುವ ಹೂಗಳ
ಬೇರುಗಳಿಗೆ ಗೊಬ್ಬರವಾದರು ಆಗಲಿ..
ಆಗುವುದಿಲ್ಲವೇನು...? ಹೇಳು... ಆಗುವುದಿಲ್ಲವೆನು?

Sunday, May 22, 2022

ಗೆಳೆಯ

ಕೆನ್ನೆಗೆ...
ಅರಿಷಿಣವ ಸವರಿ,
ದೃಷ್ಟಿಬೊಟ್ಟನೊಂದನಿಡುವ
ಅವಕಾಶವನ್ನು ಏಕೆ
ಕಳೆದುಕೊಂಡುಬಿಟ್ಟೆ
ಗೆಳೆಯ..!!
ಗಿಣಿ ಕಚ್ಚಿ ಬಿಟ್ಟ
ಹಣ್ಣಿನಂತೆ, ಈ
ಗಲ್ಲದ ಮೇಲೆ ನಿನ್ನ
ಹಲ್ಲಿನ ಗುರುತನ್ನಾದರೂ
ಉಳಿಸಿ ಹೋಗಬೇಕಿತ್ತಲ್ಲವೇನು?

Monday, May 9, 2022

ರಂಗೀ

ಅವಳನ್ನೊಮ್ಮೆ
ತಡೆದು ನಿಲ್ಲಿಸು!! ನನ್ನ
ಕಣ್ಣೀರಿನಿಂದ ಅವಳ
ಅಂಗಾಲನ್ನು
ತೊಳೆಯಬೇಕಿದೆ
ರಂಗೀ....
ಒಲವನ್ನು ಹೊಸಕಿ
ಹೋದ ಪಾಪದ ಗುರುತು....
ಊರಿನವರಿಗೆಲ್ಲ
ಗೊತ್ತಾಗದಿರಲಿ!!