Tuesday, September 27, 2022

ರಂಗೀ

ಅನ್ನವನ್ನು ಬೇಯಿಸುವುದು
ಒಂದು ಕಲೆ...ಅಮ್ಮ ಹೇಳಿದ
ಮಾತಿನ ಅರ್ಥ ಈಗೀಗ
ಅರಿವಿಗೆ ಬರುತ್ತಿದೆ
ರಂಗೀ...
ಒಲವನ್ನು ಬೆಯಿಸಿಕೊಳ್ಳುವ
ಕಲೆ ನನಗೇತಕೊ
ಒಲೆಯಲೆ ಇಲ್ಲ....

ರಂಗೀ

ಆಯಾ...ಧರ್ಮದವರು
ತಮ್ಮ ತಮ್ಮ ಮನೆ ದೇವರುಗಳ
ದರ್ಶನಕ್ಕೆಂದು ತೀರ್ಥಯಾತ್ರೆಗಳಿಗೆ
ಹೋಗುವುದಿಲ್ಲವೇನು..?
ರಂಗೀ...
ನಾನು ಹಾಗೆ, ನನ್ನ 
ಮದ್ಯ ಕಾಮಿನಿಯ ದರ್ಶನಕ್ಕೆ
ಹೋದರೆ ತಪ್ಪೇನು?

ರಂಗೀ

ಹೂವಂತವಳೆ....
ಕಲ್ಲಾಗಿ ಹೋದಳು
ನನ್ನ ವಿಷಯದಲ್ಲಿ
ರಂಗೀ...
ಇತಿಹಾಸವಾಗುವೇನೇನು?
ನಾನು....
ಕಲ್ಲು ಬಂಡೆಯ ಮೇಲೆ
ಅವಳ್ಹೆಸರನ್ನೆ
ಕೆತ್ತಿ....

ರಂಗೀ

ತಂಗಳಿನ ಅನ್ನವನ್ನು
ಎಷ್ಟು ತಾನೆ ಬಿಸಿ
ಮಾಡುವರು? ವರ ಕೊಡದ
ಕಲ್ಲನ್ನು ಹೇಗೆ ತಾನೆ
ನಂಬುವರು
ರಂಗೀ...
ಬದುಕಿಗೆ ಉಪಯೋಗವಾಗದ!!
ಭಗ್ನ ಪ್ರೇಮಿಯ
ವಿಘ್ನ ಮಾತುಗಳಿಗೆ ಯಾರು
ತಾನೆ ಕಿವಿಯಾಗುವರು?

ಕವಿತಾಪತಿ


ಆತ್ಮೀಯರೆಲ್ಲ ಕೇಳುತ್ತಿರುತ್ತಾರೆ
ಎಷ್ಟೊಂದು ಬರೆಯುತ್ತೀರಿ ನೀವು!!
ನಾನೇನ್ನುತ್ತೇನೆ...
ತಿರುಪತಿ ತಿಮ್ಮಪ್ಪನ ಹುಂಡಿ
ಬರಿದಾದದ್ದನ್ನು ನಾವೆಂದು ಕಂಡಿಲ್ಲ!!
ಕಾರಣ? ಆತ ಲಕ್ಷ್ಮೀ'ಪತಿ'!😘😍
ಹಾಗೆ, ನನ್ನ ಬರವಣಿಗೆಯು ಕೂಡಾ...
ಎಂದಿಗೂ ಬತ್ತುವುದೇ...ಇಲ್ಲ
ಯಾಕೆಂದರೆ ನಾನು
ಕವಿತಾ'ಪತಿ'!!😜

Saturday, September 17, 2022

ಬಾ ರಂಗೀ..

ಎಲ್ಲರಿಗೂ....ಅವಳು ಬಿಟ್ಟು
ಹೋದದ್ದನ್ನು ಹೇಳಲು ಕುಳಿತರೆ ಕಾರಣ!!
ಅವರೆಲ್ಲ ಕಿವಿ ಮುಚ್ಚಿಕೊಂಡು ಲೊಚಗುಟ್ಟುತ್ತಾರೆ
ಇವನದೆನಯ್ಯ ನಿತ್ಯ ಸಂಜೆಯ ಪುರಾಣ!!
ದಿನಕ್ಕೊಂದು ಬಣ್ಣ ಬಳಿದು ಕತೆ ಹೇಳಲಿಕ್ಕೆ ನಾನೇನು
ವರದಿಗಾರನೆ? ಇವರಿಗೆ ಏನು ಹೇಳೊಣ!!
ಬಾ ರಂಗಿ....ಸಂಕಟಕ್ಕಾಗದೆ, ನೋಟಿನ ಕಂತೆಗೆ
ಜೊಲ್ಲು ಸೋರಿಸುತ್ತ ಕೈ ಚಾಚುವರ ಜೊತೆಯಲ್ಲಿ  ಬದುಕುವುದಕ್ಕೆ ಅರ್ಥವುಂಟೇನು? ಸಣ್ಣದೊಂದು ಗುಟುಕು ಕುಡಿದು ಬರೋಣ!!!

ಹಸಿವಿಗಾಗಿ ಚೆಲ್ಲಿದ ಚಹಾದ ಹನಿಯ
ಹೀರಲು ಹಾರಾಡುತ್ತವೆ ನೊಣ!!
ಇವುಗಳಿದ್ದರೆ ಗಿರಾಕಿಗಳು ಬರುವುದಿಲ್ಲವಲ್ಲ
ಹೀಗಾಗಿ ಮಾಲೀಕ ಉರುಳಿಸುತ್ತಾನೆ ಇವುಗಳ ಹೆಣ!!
ಒಬ್ಬರನ್ನು ಕೊಂದೆ... ಒಬ್ಬರ ಹಸಿವನ್ನು
ಇಂಗಿಸಿಕೊಳ್ಳುವುದೀದು ಸಮಾಜದ ದರ್ಪಣ!!
ಬಾ ರಂಗೀ.... ಜಗದ ಪಾಡು ಇದೊಂದು
ದಿನದ್ದೇನು? ಸಣ್ಣದೊಂದು ಗುಟುಕು ಕುಡಿದು ಬರೋಣ!!

ಒಂದು ಹೆಸರಿಗಾಗಿ ನೂರು-ಸಾವಿರ-ಲಕ್ಷಗಟ್ಟಲೆ
ಹೆಸರಗಳನ್ನು ಅಳಿಸಿದ ಕತೆಯನ್ನು ಇತಿಹಾಸ
ಹೇಳುತ್ತದೆ ಕೇಳೋಣ!!?
ಯಾರು? ಯಾತಕ್ಕಾಗಿ ಕೊಂದರು, ಸುಟ್ಟರು, ಹುಗಿದರು
ಅಗೆದಷ್ಟು-ಬಗೆದಷ್ಟು ಗಾಯ ಹಸಿಯಾಗುತ್ತ, ಕಿವುವಾಗಿ
ಸೋರುತ್ತ, ನಾರುತ್ತಲೆ ಸಾಗುತ್ತಿದೆಯಲ್ಲ!! ಇದು ನಮಗಲ್ಲ
ಮರೆತುಬಿಡೋಣ!!?
ಲಾಭವಿಲ್ಲದೆ ಯಾವನೂ ತಕ್ಕಡಿಯನ್ನು ತೂಗಲಾರ
ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುವುದಂತೂ ದೂರದ ಮಾತು...
ಬಾ ರಂಗೀ... ಕಗ್ಗತ್ತಲೆಯಲ್ಲಿ ನಗ್ನರಾಗಿದ್ದುಕೊಂಡೆ
ಜರತಾರಿ ಬಟ್ಟೆಯನ್ನು ತೊಟ್ಟಿರುವೆನೆಂಬುವರ ಮದ್ಯದಲ್ಲಿ
ನಮ್ಮದೇನಿದೆ? ಒಂದು ಗುಟುಕು ಕುಡಿದು ಬರೋಣ!!

ಇದ್ದಾಗ ಪ್ರೇಮಿಸದೆ, ಸತ್ತ ಹೆಣಕ್ಕೊಂದು ಕಟ್ಟಡವ
ಕಟ್ಟಿ, ಕಾಲಕಾಲಕ್ಕೂ ಪೂಜಿಸಿಕೊಂಡು ಬರುವುದೆ
ನಿಜವಾದ ಪ್ರೀತಿಯ ಉಳಿವು ಎಂಬೀವರ ಅಂಬೋಣ!!
ಕಲ್ಲಿನಲ್ಲಿ ಕೆತ್ತಿಸಿದ, ಗೆದ್ದಲು ಹತ್ತುವ ಪತ್ರಗಳಲ್ಲಿ, ಸ್ಮಾರಕಗಳಲ್ಲಿ
ಗಿಡ-ಮರ, ನದಿ ಬೆಟ್ಟ-ಗುಡ್ಡಗಾಡುಗಳಲ್ಲಿ ಅಲೆದು 
ದುರಂತ ಅಂತ್ಯಗೊಂಡ ಪ್ರೇಮದ ಕಟ್ಟು ಕಥೆ?ಗಳನ್ನು
ಹೇಗೆ ನಂಬೋಣ!!
ಬಾ ರಂಗೀ.... ಉಸಿರಿದ್ದಾಗಲೆ ದೇಹವೆರಡೂ ಜೀವ
ಒಂದು ಎಂದು ಬಾಳಲು ಬಿಡದ ಕಟುಕರ ಸಂಗದಲ್ಲಿ
ಸೌಖ್ಯವಿದೇಯೆ?? ನಡಿ..ನಡಿ..ಒಂದು ಗುಟುಕು
ಕುಡಿದು ಬರೋಣ!!

Thursday, August 25, 2022

ರಂಗೀ


ಊರೊಳಗೆಲ್ಲ
ಮದರಂಗಿಯಿಂದ
ರಂಗೇರಿದವಳ ಅಂಗೈಯದ್ದೆ
ಮಾತು
ರಂಗೀ...
ಹಚ್ಚಿಕೊಂಡಿರಬಹುದೇನೊ?
ಪ್ರೀತಿಯನ್ನು ಕೊಂದ
ರಕ್ತದ ಕಲೆ
ಕಾಣಿಸದಿರಲೆಂದು!