Saturday, November 12, 2022

ಮಂಗಳಮುಖಿ ೪

ಮಂಗಳಮುಖಿ -೪

'ಯವ್ವಾ ಹ್ಯಾಂಗ ಕೆ.ಜಿ ಬೆ ಟಮಾಟಿ ಹಣ್ಣು'

'ಯಪ್ಪಾ ಹದ್ನೆಂಟ ರುಪೈ ಕಿಲೊ ನೋಡ ನನ್ಮಗ್ನ, ಹೇಳ್ ಎಷ್ಟ ಕೊಡ್ಲೆಪ್ಪ, ಎನ್ನುತ್ತಾ  ಎಡಗೈಯಿಂದ ತಕ್ಕಡಿಯನ್ನು ಎತ್ತಿಕೊಳ್ಳುತ್ತಾ, ಬಲಗೈಯಿಂದ ಟೊಮ್ಯಾಟೊ ಹಣ್ಣಿನ ಬುಟ್ಟಿಗೆ ತಾನೆ ಕೈ ಹಾಕಿ ಒಳ್ಳೊಳ್ಳೆ ಹಣ್ಣುಗಳನ್ನು ಆರಿಸಿ ತೂಗಲು ಮುಂದಾದಳು ಕಲ್ಲವ್ವ,

'ಭಾಳ ತುಟ್ಟಿ ಆತಲ್ಲಬೆ, ಮೊನ್ನೆರ ಹನ್ನೆರ್ಡ ರುಪಾಯ್ಗೆ ಕೆಜಿ ಹಂಗ ಒದಿದ್ನಿ' 

'ಯಪ್ಪಾ ದಿನ್ದಿಂದ ದಿನಕ್ಕ ರೇಟ್ ಹೆಚ್ಚು ಕಡ್ಮಿ ಆಕ್ಕಿರ್ತಾವೊ ತಂದೆ, ಹೊಲ್ದಾಗ ನೀರ ಕಮ್ಮಿ ಆಗಿ ಪಿಕ ಬರ್ವಲ್ದಂಗ ಆಗೈವು ನೋಡ್ಪಾ' ಮುಖವನ್ನು ಗಿಂಜುತ್ತಾ, ಬೇಗಬೇಗನೆ ಹಣ್ಣುಗಳನ್ನು ಆರಿಸಿಕೊಂಡು ಕೆ.ಜಿ ಲೆಕ್ಕದಲ್ಲಿ ತೂಗಿ ಗಿರಾಕಿಯ ಚೀಲಕ್ಕೆ ಹಾಕಲು ತಕ್ಕಡಿಯನ್ನು ಮುಂದಕ್ಕೆ ಚಾಚಿದಳು.

'ಅಯ್ಯ, ಬ್ಯಾಡ ಬಿಡ್ಬೆ ಇವತ್ತ, ಊರ ಸೇರಾಕ ರೊಕ್ಕ ಕಮ್ಮಿ ಬಿಳ್ತಾವ, ಅದಲ್ದನಾ ಮನ್ಯಾಗ ಸಣ್ಣ ಸಣ್ಣ ಯಾಡ ಹುಡ್ರ ಅದಾವು ಅವುಕ್ಕ ತಿನ್ನಾಕ ಇನ್ನಾ ಬಿಸ್ಕಿಟ್ ಪಡ್ಕ ತಗೊಂಡ ಹೋಗ್ಬೇಕು, ಮಾಲಾಕ್ನು ಇವತ್ತ್ ಚೂರು ರೊಕ್ಕಾನು ಕಮ್ಮಿ ಕೊಟ್ಟಾನ' ಎನ್ನುತ್ತಲೆ ಮುಂದಕ್ಕೆ ಹೆಜ್ಜೆ ಹಾಕುವವನಿದ್ದವನ ಕೈ ಚೀಲವನ್ನು ಕಸಿದುಕೊಂಡು ಹಣ್ಣನ್ನು ಸುರಿದುಕೊಡುತ್ತಾ,

'ರೊಕ್ಕೆಲ್ಲರ ಓಡಿ ಹೊಕ್ಕತೇನ ಮಗ್ನ, ಇವತ್ತಿಲ್ಲ, ನಾಳ್ಗಿ ತಂದ ಕೊಡ, ಏನ ದುಡ್ದ ಕಟ್ಗೊಂಡ್ ಸಾಯೋದೈತ ಹೇಳು, ಸತ್ತಾಗೇನ ಹೊತ್ಗೊಂಡ ಹೊಕ್ಕಿವೇನು ಎಲ್ಲಾನು?, ತಗೊಂಡ ಹೋಗ್ಪಾ,' ಅಂತಃಕರಣದಿಂದ ನುಡಿದಳು

ಅವಳು ಮಾತುಗಳನ್ನು ಕೇಳಿ ಆ ಗಿರಾಕಿ ಮರುಮಾತನಾಡದೆ,

ತಲೆಯಾಡಿಸಿ, ಚೀಲವನ್ನು ಎತ್ತಿ ಹೆಗಲ ಮೇಲಿಟ್ಟುಕೊಂಡು ನಡೆದನು.

ಐದು ನಿಮಿಷದಲ್ಲಿ  ಕುಳಿತ ಸ್ವಲ್ಪ ದೂರದಿಂದ ಏನೊ ಕೂಗಾಡ, ಗದ್ದಲದ ಸದ್ದು ಕೇಳಿಸಿದಂತಾಯಿತು ಕಲ್ಲವ್ವನಿಗೆ, ಆಗಲೆ ಹಳ್ಳಿಗೆ ಹೋಗುವ ಹೊತ್ತಾದ್ದರಿಂದ ತಡಬಡಿಸಿ ಎದ್ದು,  ತರಕಾರಿಗಳನ್ನು ಪುಟ್ಟಿಯಲ್ಲಿ ತುಂಬಿಕೊಂಡು, ಅಲ್ಲಿಯೆ ಹಿಂದ ಇದ್ದ ಶೆಟ್ಟರ ಕಿರಾಣಿ ಅಂಗಡಿಯಲ್ಲಿಟ್ಟು, ಮೇಲೆ ಹಸಿಮಾಡಿದ ಗೋಣಿಚೀಲವೊಂದನ್ನು ಹೊದಿಸಿ, ಅಂದು ಸಂಪಾದನೆ ಮಾಡಿದ ಹಣವನ್ನು ಲೆಕ್ಕ ಹಾಕಿ, ಹಳ್ಳಿಗೆ ಹೋಗಲು ಬೇಕಾಗುವಷ್ಟು ಹಣವನ್ನಷ್ಟೆ ಕೈಯಲ್ಲಿ ಹಿಡಿದುಕೊಂಡು, ಉಳಿದ ಹಣವನ್ನು  ಎದೆಯ ರವಿಕೆಯಲ್ಲಿ ತುರುಕಿಕೊಳ್ಳುತ್ತಾ ಗದ್ದಲ ನಡೆದ ದಿಕ್ಕಿನತ್ತ ನಡೆದಳು. ಅದಾಗಲೆ ಗುಂಪು ಚದುರಿ ಹೋಗಿ ಒಬ್ಬಿಬ್ಬರು ಅಷ್ಟೇ ನಿಂತುಕೊಂಡಿದ್ದರು, ಕೆಳಗೆ ಒಬ್ಬ ವ್ಯಕ್ತಿಯು ಅಳುತ್ತಾ ಕುಳಿತುಕೊಂಡಿದ್ದನು ಅವನ ಅನತಿ ದೂರದಲ್ಲಿ ಮಂಗಳಮುಖಿಯರ ಗುಂಪೊಂದು ನಗುತ್ತಾ, ಕೆಕೆ ಹಾಕುತ್ತಾ ನಿಂತಿತ್ತು. 

ಕಲ್ಲವ್ವ ಸಮೀಪಕ್ಕೆ ಹೋಗಿ ನೋಡಿದಾಗ, ಆ ಮಂಗಳಮುಖಿಯರ ಗುಂಪಿನಲ್ಲಿ ತನ್ನ ಮಗನಿದ್ದದ್ದನ್ನು ಕಂಡು ಕಣ್ಣ ಹುಬ್ಬುಗಳನ್ನು ಗಂಟಿಕ್ಕಿಕೊಂಡು, ನೆಲದ ಮೇಲೆ ಕುಳಿತುಕೊಂಡ ವ್ಯಕ್ತಿಯ ಕಡೆಗೆ ನೋಡಿದಳು, ಅರೆ! ಅವನೆ, ಈಗ ತಾನೆ ನನ್ನ ಬಳಿ ತರಕಾರಿಯನ್ನು ತೆಗೆದುಕೊಂಡು ಬಂದವನಲ್ಲವೆ ಎಂದುಕೊಳ್ಳುತ್ತಾ, ಅವನ ಹತ್ತಿರ ಹೋಗಿ 'ಯಾಕ್ಮಗ್ನ ಏನಾತ' ಅನ್ನುತ್ತಾ ಕುಕ್ಕರ್ಗುಂಡಿಲೆ ಅವನೆದುರು ಕುಳಿತು ಕೇಳಿದಳು. ತಲೆಯೆತ್ತಿ ನೋಡಿದ ವ್ಯಕ್ತಿ, 'ನೋಡ್ಬೆ, ಊರ್ಮುಟ್ಟಾಕ ಅಂತಿಟ್ಗೊಂಡಿದ್ದ ರೊಕ್ಕಾನೆಲ್ಲ ಕಸ್ಕೊಂಡ್ಬಿಟ್ರು' ಎಂದನು ಹತಾಶೆಯ ಧನಿಯಲ್ಲಿ, ' ಅಯ್ಯ ತಮ್ಮ ಹೋದ್ರ ಹೋಗ್ಲ ತಗೋ ಅತ್ಲಾಗ ಹಾಳಾಗಿ, ಈಕ ನಾ ಕೊಡ್ತಿನಿ ತಗೊ ಏಳು, ನಾಳೆರ ಇಲ್ಲ ನಾಡಿದ್ದರ ತಂದು ಕೊಡ್ವಂತಿಯಂತ, ಏಳ, ಏಳ ಹೊತ್ತ್ ಮುಳ್ಗಾಕ ಬಂತ ಆಗ್ಲೆ' ಎನ್ನುತ್ತಾ, ಅವನ ಮರುಮಾತಿಗೂ ಕಾಯದೆ, ತನ್ನೂರಿಗೆಂದು ತೆಗೆದಿಟ್ಟುಕೊಂಡಿದ್ದ ಹಣವನ್ನು ಅವನ ಜೇಬಿಗೆ ತುರುಕಿ, ಭುಜಕ್ಕೆ ಕೈ ಹಾಕಿ ಎಬ್ಬಿಸಿ, ಜೊತೆಯಲ್ಲಿಯೆ ಕರೆದುಕೊಂಡು ನಡೆಯುತ್ತಾ, ಮಂಗಳಮುಖಿಯರ ಕಡೆಗೊಮ್ಮೆ ನೋಡಿದಳು, ಅವರಾಗಲೆ ಹಣದ ವಸೂಲಿಗಾಗಿ ಮತ್ತೊಬ್ಬನ ಮೈ ಮೇಲೆ ಬಿದ್ದಿದ್ದರು. 

ದಾರಿಯಲ್ಲಿ ಹೋಗುತ್ತಾ, ಕಲ್ಲವ್ವ ಆ ವ್ಯಕ್ತಿಯನ್ನು ಕೇಳಿದಳು

'ತಮ್ಮಾ, ತಪ್ಪ ತಿಳ್ಕೊಬ್ಯಾಡ, ನಿನ್ ಹೆಸರೇನ್ಪಾ?'

'ಹ್ಞಾಂ..., ಶಂಕ್ರಯ್ಯ ಬೆ'

'ಊರು?'

'ಇಲ್ಲೆ ಬೆ, ನಿಡಗುಂದಿ '

' ಹೌದಾ!!, ಹೆಂಡ್ರು ಮಕ್ಳು?'

'ಹ್ಞೂಂ ಲಗ್ನ ಆಗಿ ಎರ್ಡ ಹೆಣ್ಮಕ್ಳ ಅದಾವ್'

'ಗಂಡು?'

' ಇಲ್ವಾ, ನಾನ ಯಾವುದ್ಕೂ ಆಸೆನ ಪಟ್ಟಾಂವಲ್ಲ, ಹೆಣ್ಣಾದ್ರನ, ಗಂಡಾದ್ರೆನ ಮಕ್ಳ, ಮಕ್ಳ.. ಗಂಡ... ಗಂಡಂತದ ಹಡ್ಕೊಂತ ಕುಂತ್ರ, ಆಕಿ ಆರೋಗ್ಯಾ ಹಾಳಾಗಿ ಹೊಕ್ಕೈತಲ್ರಿ, ಅದಕ್ ಮ್ಯಾಲ...ಮ್ಯಾಲ ಯಾಡು ಹೆಣ್ಣ್ ಆದ್ವು, ಅದ್ಕ ಎಲ್ಲಿದ ತಗಿ ಅತ್ಲಾಗ ಅನ್ಕೊಂಡ, ಆಪ್ರೇಷನ್ ಮಾಡ್ಸಬಿಟ್ಟಿನ ನೋಡ್ವಾ, '

'ಛಲೊ ಆತ ನೋಡ ನನ್ನಪ್ಪ, ನಿಮ್ಮಂತೊರು ಊರಿಗೆ ನಾಕ್ಮಂದಿ ಇದ್ರಂದ ಸಾಕ, ಹೆಣ್ಣ ಹಡಿಯೊ ಹೆಣ್ಮಕ್ಳ ಭಾಳೆ ಬಂಗಾರಾಗಿರ್ತೈತಿ' ಎಂದು ಹುಸಿ ನಗವನ್ನು ಮುಖದಲ್ಲಿ ತುಂಬಿಕೊಳ್ಳುತ್ರಾ,  ಉಗುಳನ್ನು ನುಂಗಿಕೊಂಡು

'ಯಪ್ಪಾ, ಅವ್ರೆಲ್ಲ ಈಗ ನಿನ್ಹತ್ರ ರೊಕ್ಕಾ ಕಿತ್ಕೊಂಡ ಹೋದ್ರಲ್ಲಾ, ಅವ್ರಗೇನ ನಿ ಕೈಗಡ ಏನರ ಕೊಡೊದಿತ್ತೇನ' ಸ್ವಲ್ಪ ಅಳುಕಿನ ಧ್ವನಿಯಲ್ಲಿಯೆ ಕೇಳಿದಳು.

ಪ್ರಶ್ನಾರ್ಥಕವಾಗಿ, ಹುಬ್ಬುಗಳನ್ನು ಗಂಟಿಕ್ಕಿಕೊಂಡು ಕಲ್ಲವ್ವನನ್ನೆ ದಿಟ್ಟಿಸಿನೋಡಿದನು.

ಅವನ ಈ ನೋಟವನ್ನು ಕಂಡಂತ ಕಲ್ಲವ್ವಳು ಮನದಲ್ಲಿಯೆ ಹೆದರಿಕೊಂಡಳು.

'ಇಲ್ಲವ್ವ, ಇವ್ರ ಹತ್ರ ಯಾರ ಕೈಗಡ ತಗೊತಾರ್ಬೆ'

'ಮತ್ತ್ ಹಾಂಗ ಎದಿಮ್ಯಾಲ ಬಿದ್ದ ಹಂತೇಕಿನ ರೊಕ್ಕಾನೆಲ್ಲಾ ಕಿತ್ಗೊಂಡ ಹೋದ್ರು'

'ಅದಾ...‌ಅವ್ರದೊಂದು ಛಾಳಿ ಅದು'

'ಛಾಳಿ..!!! ಹಂಗಂದ್ರ'

'ಅಯ್ಯ, ಇತ್ತಿತ್ಲಾಗ ಇವ್ರ ಆಟ ಭಾಳ ಜೋರಾಗೈತ್ಬೆ ಯವ್ವ, ದುಡಿಯಂಗಿಲ್ಲ ದುಖ್ ಪಡೊಂಗಿಲ್ಲ, ಮುಂಜಾನಿದ್ದ ಸಂಜಿತನ್ಕ ಊರ...ಊರ ಸಂತಿ ಅಡ್ಡಾಡಿ, ರೊಕ್ಕಾ ಇಸ್ಗೊತಾರ, ಕೊಟ್ರ ಛಲೊ, ಕೊಡದಿದ್ರ? ಈಗ ನೋಡಿದೆಲ್ಲವ್ವ, ಹಿಂಗಾ, ತ್ರಾಸ್ ಅಂದ್ರು ಇಲ್ಲ, ಬ್ಯಾನಿ ಅಂದ್ರು ಇಲ್ಲ, ಇರ್ಲಿ, ಇರ್ದ ಹೋಗ್ಲಿ ಎದಿಮ್ಯಾಲ ಬಿದ್ದು ಇದ್ಬದ್ದ ರೊಕ್ಕಾನೆಲ್ಲ ಕಸ್ಗೊಂಡ ಹೋಕ್ಕಾರ, ಇತ್ತಿತ್ಲಾಗ ಇವ್ರನ್ನ ಹೇಳೊರ ಕೇಳೊರ ಯಾರಿಲ್ದಂಗಾಗೈತಿ'

ಅವನ ಮಾತುಗಳನ್ನು ಕೇಳುತ್ತಿದ್ದಂತೆಯೆ, ಕಲ್ಲವ್ವನ ನಡಿಗೆ ಸಣ್ಣದಾಯಿತು, ಬಾಯರಿದಂತಾಗಿ, ಮೈಯಲ್ಲ ಬೆವರಿಕೊಂಡು,  ಕ್ಷಣಕಾಲ‌ ಕಣ್ಣಿಗೆ ಕತ್ತಲು ಕಟ್ಟಿದಂತಾಗಿ, ಆ ಹುಡುಗನ ತೋಳನ್ನು ಹಿಡಿದುಕೊಂಡು ನಿಂತುಬಿಟ್ಟಳು.

'ಯಾಕಬೆ,‌ ಏನಾತ?' ಎಂದನಾತ ತುಸು ಗಾಬರಿಯಿಂದ

'ಏನಿಲ್ಲಪಾ ತಂದೆ, ನಿ ಹೇಳಿದ್ದ ಮಾತ ಕೇಳಿ, ನನ್ನೆದಿ ಝಲ್ ಅಂದಂಗಾತು ಅದ್ಕ,' ಎಂದಳು ಮೆಲ್ಲನೆ ಸಾವರಿಸಿಕೊಳ್ಳುತ್ತಾ

ಕಣ್ಣನ್ನು ತೆರೆದಳು.

'ಈಗ ಹ್ಯಾಂಗೈತಿ ಆರಾಮ, ಐತಿಲ್ಲೊ, ಏನ್ ನೀರು ಪಾರು ಕುಡಿತಿರೊ' ಕೇಳಿದನು ಕಾಳಜಿಯಿಂದ

'ಬ್ಯಾಡ್ತಮ್ಮ, ಬ್ಯಾಡ, ಅಲ್ಲಾ, ಮತ್ತ್ ಅವಕ್ಕ...ದಗದಾ ಬಗ್ಸಿ ಅಂತ ಏನಿಲ್ಲನ'

'ಯಾ ದಗದಾ ತರ್ತಿಬೆ, ಹಿಂಗ ಗಂಡರಗೂಳಿ ಅಡ್ಡಾಡ್ದಂಗ ಅಡ್ಡಾಡ್ತಾವು, ಕೆಲವೊಬ್ರ ಅದಾರ, ತಂ ಪಾಡಿಗೆ ತಾವು ದುಡ್ಕೊಂಡ, ಛಲೊತ್ನಾಗಿ ಬಾಳೆ ಮಾಡಾಕ ಹತ್ತ್ಯಾವು, ಇವ್ ಒಂದಿಷ್ಟು ಪ್ಯಾಸನ್ ಅಂತಂದ ಗಂಡ ಹೋಗಿ ಹೆಣ್ಣಿನ ವೇಷಾ ಹಾಕ್ಕೊಂಡ, ಹಿಂಗ ಬೀದಿ ಬೀದಿ ಅಲಿತಾವ,'

'ಅಂದ್ರ ಇವ್ರ ಹೊಟ್ಟಿ ಉಪಜೀವ್ನ ಇದ ಅಂದಂಗಾತು'

'ಹೌದವ್ವಾ, ಇದ ಕಾಡೋದು, ಬೇಡೊದು, ಇಸ್ಕೊಳ್ಳುದು ಮಜಾ ಮಾಡೋದ, ಹೊಟ್ಟಿಗೊಂದಿಷ್ಟ ಹಿಟ್ಟ, ಜುಟ್ಗೊಂದಿಷ್ಟ ಹೂವ, ಆತಲ್ಲ ಮತ್ತಿನ್ನೇನ ಯಾರ್ದ ದುಡ್ಡ್ ಹಾಂ ಎಲ್ಲವ್ವನ ಜಾತ್ರಿ' ಹೇಳುತ್ತಾ... ಹೇಳುತ್ತಾ ನಿಲ್ದಾಣ ಬಂದೆ ಬಿಟ್ಟಿತು.

ಕೊಡುವ ಹಣವನ್ನು ಇನ್ನೆರಡು ದಿನದಲ್ಲಿ ಕೊಡುವುದಾಗಿ ಹೇಳಿ ಕಲ್ಲವ್ವನನ್ನು ಹಳ್ಳಿಯ ಬಸ್ಸಿಗೆ ಹತ್ತಿಸಿ, ತಾನು ತನ್ನೂರಿನ ಹಾದಿಯನ್ನು ಹಿಡಿದನು.

ಮಂಗಳಮುಖಿ ೫

ಮಂಗಳಮುಖಿ - ೫



ಬಸ್ಸಿನಲ್ಲಿ ಹತ್ತಿ ಕುಳಿತುಕೊಂಡ ಕಲ್ಲವ್ವನಿಗೆ ಲೋಕದ ಪರಿವೆ ಇಲ್ಲದ ಹಾಗಾಗಿ ಹೋಯಿತು, ಬಸ್ ಕಂಡಕ್ಟರ್ ಎರಡೆರಡು ಸಲ ಕೂಗಿ, ಹಣವನ್ನು ಪಡೆದು ಟಿಕೆಟನ್ನು ಕೊಟ್ಟು ಮುನ್ನಡೆದಿದ್ದನು, ಕಲ್ಲವ್ವನ ತಲೆಯಲ್ಲಿ ಅದೆ ಮಾತುಗಳು, ಅವರ ಚೆಲ್ಲಾಟಗಳು, ಹಣವನ್ನು ಕಿತ್ತುಕೊಂಡ ರೀತಿ, ಮಗನು ಅವರ ಸಂಗದಲ್ಲಿ ಇದ್ದದ್ದನ್ನು ಕಂಡು, ಎಡವಿದ ಬೆರಳಿನ ಮೇಲೆ ಕೈ ಜಾರಿ ಬಿದ್ದ ಪಾತ್ರೆಯ ನೀಡುವ ನೋವಿನಷ್ಟೆ ಅಧಿಕ ಸಂಕಟ, ತಳಮಳವುಂಟಾಗಿಬಿಟ್ಟಿತ್ತು ಕಲ್ಲವ್ವನೆದೆಯಲ್ಲಿ.


########


ಸಮಯ ಆಗಲೆ ರಾತ್ರಿ ಹತ್ತೂವರೆ ಎಂದು ಸೂಚಿಸುತ್ತಿತ್ತು, ಕಾಂತಳು ಎಂದಿನಂತೆಯೆ, ಮನೆಯ ಬಾಗಿಲವರೆಗೂ ಇಬ್ಬರು ಯುವಕರ ಜೊತೆಯಲ್ಲಿಯೆ ಬಂದು ನಿಂತಗೊಂಡು ಕ್ಷಣಕಾಲ ಲಲ್ಲೆಯನ್ನು ಹೊಡೆದು, ಒಳಗೆ ಬಂದಳು. ಗೋಡೆಗಾಣಿಸಿಕೊಂಡು ಓಡುವ ಗಡಿಯಾರವನ್ನೆ ನೋಡಿಕೊಂಡು ಕುಳಿತಿದ್ದಂತಹ ಕಲ್ಲವ್ವನತ್ತ ಒಂದು ಉದಾಸೀನತೆಯ ನೋಟವನ್ನು ಬಿರಿ, ಮನೆಯ ಬಾಗಿಲನ್ನು ಮುಚ್ಚಿ, ತನ್ನ ಮಲಗುವ ಕೋಣೆಗೆ ಹೋಗಿ ಮಲಗಿಕೊಂಡುಬಿಟ್ಟಳು.


'ಯವ್ವಾ... ಕಲ್ಲವ್ವ,... ಕಲ್ಲವ್ವ.. ಕಲ್ಲವ್ವಾ... ಯಾರು ಇಲ್ಲನಬೆ ಹಟ್ಯಾಗ, ಎಷ್ಟೊತ್ತ್ ಆತ ನಾ‌ ಮನಿ ಬಾಗಲ್ದಾಗ ನಿಂತ್ಗೊಂಡ ದನಾ ಒದ್ರದಂಗ ಒದ್ರಾಕ್ಹತ್ತೀನಿ, ಒಬ್ರನೂ ಹ್ಞಾಂ ಅನುವಲ್ರು ಹ್ಞೂಂ ಅಂತರ ಅನುವಲ್ರ, ಚಿಗವ್ವಾ, ಬೇ ಕಲ್ಲವ್ವಾ' ಮತ್ತೊಂದೆರಡು ಸಾರಿ ಕೂಗಿದಳು ಹಿಂದಿನ ಮನೆಯ ಶಾಂತವ್ವ.


ಶಾಂತವ್ವಳ ಕೂಗಿಗೆ ಎಚ್ಚರಕೊಂಡ ಕಾಂತಳು, ಎದ್ದು ಹಾಳು ಮುಖದಲ್ಲೆ ಹೊರಗೆ ಬಂದಳು. ಸಮಯ ನೋಡಿಕೊಂಡಾಗ ಏಳು ಇಪ್ಪತ್ತಾಗಿತ್ತು


'ಹ್ಞೂಂ... ಏನ್ ಬೇಕಿತ್ತವ್ವ ಬೆಳ್ಗ ಬೆಳ್ಗೆನ ಬಂದ ನಿದ್ದಿ ಹಾಳ ಮಾಡಿದಿ' ಕಣ್ಣನ್ನು ತಿಕ್ಕಿಕೊಳ್ಳುತ್ತಾ, ಮೈಯನ್ನು ಮುರಿಯುತ್ತಾ,


ಕಣ್ಣನ್ನು ತಿಕ್ಕಿಕೊಳ್ಳುತ್ತಲೆ ಕೇಳಿದಳು.


'ಏನಿಲ್ಲ, ಗಿಂಡಿ ಹಾಲ್ ಬೇಕಾಗಿತ್ತ್ ಆವಾಗ್ಲಿಂದ ಕರಿಯಾಕ್ಹತ್ತಿನಿ ಯಾರು ಹ್ಞೂಂ ಅನುವಲ್ರಿ, ಹ್ಞಾಂ ಅನುವಲ್ರಿ'


ಕಾಂತಾಳು ಇನ್ನೇನೊ ಹೇಳಬೇಕೆನ್ನುವಷ್ಟರಲ್ಲಿ ಎದುರು ಮನೆ ಬಸಲಿಂಗ ಓಡುತ್ತಾ ಬಂದು ಎದುಸಿರನ್ನು ಬಿಡುತ್ತಾ, 'ನಿಮ್ಮವ್ವ.....


'ಹ್ಞೂಂ.. ನಮ್ಮವ್ವ?'


'ನಿಮ್ಮವ್ವ... ತ್ವಾಟದಾಗ ಸತ್ತ ಬಿದ್ದಾಳ..' 


'ಏನಂದಿ..!!!' ಅಂತ ಪ್ರಶ್ನೆ ಕೇಳಿದ ಕಾಂತಾಳು ಬಸಲಿಂಗನ ಮರುತ್ತರಕ್ಕು ಕಾಯದೆ, ತೋಟದ ಕಡೆಗೆ ಓಟಕಿತ್ತಳು,


###


ಒಂದೆ ಉಸಿರಿನಲ್ಲಿ ಓಡಿಬಂದಳು ಕಾಂತಳು ಅವಳ ಹಿಂದೆಯೆ ಹಳ್ಳಿಗೆ ಹಳ್ಳಿಯೆ ಬಂದು ಜಮಾಯಿಸಿಬಿಟ್ಟಿತಲ್ಲಿ ಕಾಂತಳು ತಾಯಿಯ ಹೆಣವನ್ನು ನೋಡಿದಳು. ಕಲ್ಲವ್ವ ಹೊಲದಲ್ಲಿ ಬೊರಲಾಗಿ ಬಿದ್ದಿದ್ದಳು, ಎಡಗೈಯಲ್ಲಿ ದನಕ್ಕೆಂದು ಕೊಯ್ದುಕೊಂಡಿದ್ದ ಕಸ, ಬಲಗೈಯಲ್ಲಿ ಬಲವಾಗಿ ಹಿಡಿದುಕೊಂಡಿದ್ದ ಕುಡಗೋಲು ಎರಡರಲ್ಲಿ ಒಂದನ್ನು ಕೈ ಬಿಟ್ಟಿರಲಿಲ್ಲ. ಆಗ ಅಲ್ಲೊಂದು, ಇಲ್ಲೊಂದು ಮಾತುಗಳು ಕೇಳಿ ಬರಲಾರಂಭಿಸಿದವು


'ಎಂಥ ಹೆಣ್ಮಗ್ಳರಿ, ನಾಕಾಳ ಗಂಡಿನ ಕೆಲ್ಸಾನ ಒಬ್ಬಾಕಿ ನಿಗ್ಸ್ತಿದ್ಳ, ಹಗ್ಲೆನು, ರಾತ್ರೆನು ಎರ್ಡು ಒಂದ ಮಾಡ್ಬಿಡ್ತಿದ್ಲು ಹೊಲ್ದಾಗ ದಗ್ದ ಅದಾವಂತಂದ್ರ,'


'ಹೌದ್ರಿ, ಅದ್ಕ ದ್ಯಾವ್ರ ದೇವ್ರಂತವ್ರನ್ನ ಜಲ್ದಿ ತನ್ ಹತ್ರಕ್ಕ ಕರ್ಸಿಕೊಂಡ ಬಿಡ್ತಾನ ನೋಡ್ರಿ, ಅಲ್ಲ,.. ನನವು ಮೂರ ಮೊಮ್ಮಕ್ಳನ್ನು ಅದೆಷ್ಟು ಹಚ್ಗೊಂಡಿದ್ಳು ಅಂತೀನಿ, ಉಂಡ್ರು ಬಿಟ್ರು ಎಲ್ಲಾ ಈಕಿ ಮನಿಯಾಗ, ಇನ್ನೀಕಿ ಇಲ್ಲ ಅನ್ನೊ ಸುದ್ದಿ ಅವಕ್ಕೇನರ ಗೊತ್ತಾತಂತಂದ್ರ ಏನ್ಮಾಡ್ತಾವೊ ಏನೊ?'


ಎಲ್ಲರೂ ಕಲ್ಲವ್ವನ ಗುಣಗಾನವನ್ನು ಮಾಡುವವರೆ, ಕೊನೆಗೆ ಊರಿನ ಹಿರಿಯರು ಬಂದು ಬಂಡಿಯಲ್ಲಿ ಹೆಣವನ್ನು ಹಾಕಿಕೊಂಡು ಬಂದು ಶಾಸ್ತ್ರಗಳನ್ನು ಮುಗಿಸಿಕೊಂಡು, ಮರಳಿ ತೋಟಕ್ಕೆ ಕಲ್ಲವ್ವನ ಹೆಣವನ್ನು ತಂದು ತೋಟದ ಮದ್ಯದಲ್ಲಿ ಗುಂಡಿಯನ್ನು ತೋಡಿ, ಹುಗಿದು,‌ ಎಲ್ಲರೂ ಕೊನೆಯದಾಗಿ ಕೈ ಮುಗಿದು ಊರಿಗೆ ಮರಳಿದರು.


##


ವಾರ ಕಳೆಯಿತು, ಕಲ್ಲವ್ವನನ್ನು ಕ್ರಮೇಣವಾಗಿ ಮರೆತ ಜನರು ತಮ್ಮ ನಿತ್ಯದ ಬದುಕಿನಲ್ಲಿ ಕಳೆದುಹೋಗಿದ್ದರು. ಭೂ ಗರ್ಭದಲ್ಲಿ ನಿಶ್ಚಿಂತೆಯಾಗಿ ಮಲಗಿದ್ದ ಕಲ್ಲವ್ವನ ಹುಗಿದ ಜಾಗದಲ್ಲೊಂದು ಕಟ್ಟೆಯನ್ನು ಕಟ್ಟಿ ಹೂವಿನ ಹಾರಗಳಿಂದ ಸಿಂಗರಿಸಿದ್ದರು. ಅವಳ ನೆನಪಿಗಾಗಿ ಒಂದು ಗಿಡವನ್ನು ನೆಟ್ಟಿದ್ದರು. ತಾಯಿಯ ಮರಣದ ನಂತರ ಕಾಂತಾಳ ಮನಸ್ಸು ಬಹಳಷ್ಟು ಘಾಸಿಗೊಂಡಿತ್ತು. ಯಾರ ಸಂಪರ್ಕಕ್ಕೂ ಸಿಗದೆ,  ಕಲ್ಲವ್ವನ ಕಟ್ಟೆಯ ಪಕ್ಕದಲ್ಲೆ ಕುಳಿತಿರುತ್ತಿದ್ದಳು. 


ಅವತ್ತು ಒಂದು ದಿನ ಮಧ್ಯಾಹ್ನ ಮೂರರ ಹೊತ್ತು,  ಸಣ್ಣಪ್ಪನ ಮಡದಿ ಶಾಂತವ್ವಳು ತಲೆ ತುಂಬಾ ಸೇರಗನ್ನು ಹೊದ್ದುಕೊಂಡು ಕೈಯಲ್ಲಿ ಬುತ್ತಿಯನ್ನು ಕಟ್ಟಿಕೊಂಡು ಕಾಂತಾಳ ಎದುರು ಬಂದು ನಿಂತುಗೊಂಡಳು. ಅವಳನ್ನು ಕಣ್ಣೆತ್ತಿ ನೋಡಿದ ಕಾಂತಳು 


'ನೀವ್ ಯಾಕ ಬರಾಕ ಹೋಗಿದ್ರಿ ಇಷ್ಟ ಬಿಸ್ಲಾಗ' ಸೋತ ದ್ವನಿಯಲ್ಲಿ ಕೇಳಿದಳು.


'ಎರ್ಡ ದಿನ್ದ ಹೊತ್ತಾತ್ ಹೊಟ್ಟಿಗೆ ಸರಿಯಾಗಿ ಕೂಳು ನೀರಿಲ್ಲ, ಅಂತಾದ್ರಾಗ ಸುಡೊ ಬಿಸ್ಲಾಗ ಇಲ್ಲೆ ಹಿಂಗ ಬಂದ ಕುಂತ್ಗೊಂಡ್ರ ಹ್ಯಾಂಗ?'


'ಎರ್ಡ ದಿನ ಕೂಳ ತಿನ್ದಿದ್ರ ನಾನೇನ ಸಾಯೋದಿಲ್ಲಾಳ್ಬೆ'


'ಮುಚ್ಚ ಬಾಯಿ ಭಾಡೆನ ಮಗ್ನ, ನನ್ಗ ಎದ್ರುತ್ರ ಕೊಡ್ತಿ, ನಿಮ್ಮವ್ವ ಇದ್ದಿದ್ರ ನಿ ಹಿಂಗ ಇರಾಕ ಬಿಡ್ತಿದ್ಲನ ನಿಂಗ' ಗದರಿಸಿದಳು ತುಸು ಗಡಸಿನ ಧನಿಯಲ್ಲಿ.


ತಾಯಿಯ ಹಳೆಯ ನೆನಪುಗಳೆಲ್ಲ ಉಕ್ಕಿಬಂದು, ಎರಡು ಕೈಯಿಂದ ಮುಖವನ್ನು ಮುಚ್ಚಿಕೊಂಡು ಗಳಗಳನೆ ಅಳತೊಡಗಿದಳು.


'ಸಾಕ್ಬಿಡು ಅತ್ತಿದ್ದ, ಹ್ವಾದ ಜೀವ ಏನ್ ಹೊಳ್ಳಿ ಬರ್ತದನು, ದೇವ್ರಂತಾಕಿ, ದೇವ್ರ ಹಂತೇಕನ......' ಮಾತು ಗಂಟಲದಲ್ಲೆ ಸಿಕ್ಕಿ ಹಾಕಿಕೊಂಡಿತು ಶಾಂತವ್ವಳಿಗೆ, ಗಂಟಲು ಕಟ್ಟಿ ಉಮ್ಮಳಿಸಿ ಬಂದ ಎದೆಯ ದುಃಖವನ್ನು ಸೀರೆ ಸೇರಗಂಚಿನಿಂದ ಬಾಯನ್ನು ಮುಚ್ಚಿಕೊಂಡು ಕಣ್ಣೀರಾದಳು.


ಕಾಂತಳು ಶಾಂತವ್ವಳು ದುಃಖಿಸುವ ಪರಿಯನ್ನು ಕಂಡು ಎದ್ದು ಬಂದು ಅವಳ ಕಾಲನ್ನು ಹಿಡಿದುಕೊಂಡು ಮತ್ತಷ್ಟು ಜೋರಾಗಿ ಅಳಲಾರಂಭಿಸಿದಳು. ಶಾಂತವ್ವಳು ಅವಳ ತೋಳನ್ನು  ಹಿಡಿದು ಎಬ್ಬಿಸಿಕೊಂಡು, ಸಮಾಧಾನ ಮಾಡಿ, ಅಲ್ಲೆ ತೋಟದ ಬದುವಿನಲ್ಲಿದ್ದ ಬೇವಿನಗಿಡದ ನೆರಳಿಗೆ ಕರೆ ತಂದು, ಕುಡಿಯಲಿಕ್ಕೆ ನೀರನ್ನು ಕೊಟ್ಟು, ಬುತ್ತಿಯ ಗಂಟನ್ನು ಬಿಚ್ಚಿ, ತಾಟಿನಲ್ಲಿ ಅನ್ನವನ್ನು ನೀಡಿ ಕೊಟ್ಟಳು. ಒಂದೆರಡು ತುತ್ತುಗಳನ್ನು ಉಂಡ ನಂತರ ಊಟ ಸೇರದೆಂದು ತಟ್ಟೆಯನ್ನು ಕೆಳಗಿಟ್ಟು ಕೈ ತೊಳೆದುಕೊಂಡು ಬಿಟ್ಟಳು ಕಾಂತ. ಕ್ಷಣಕಾಲ ಇಬ್ಬರು ಮೌನವಾಗಿದ್ದರು, ಆಗಾಗ ಬೀಸುವ ಸುಂಯ್ಯ ಎಂಬ ಗಾಳಿ, ಗುಂಯ್ಯ ಎಂದು ತಿಪ್ಪೆಗುಂಡಿಯಿಂದ ಹಾರಾಡಿ ಬರುತ್ತಿದ್ದ ನೊಣಗಳು, ನಿಮ್ಮದು ಆಗಿದ್ದರೆ ನನ್ನ ಪಾಲಿನದ್ದು ನೀಡಿಬಿಡಿ ಎಂದು ಅವರಿಬ್ಬರ ಎದುರಿನಲ್ಲಿ ಬಾಲವನ್ನು ಅಲ್ಲಾಡಿಸಿಕೊಂಡು ನಿಂತಿದ್ದ ಪಕ್ಕದ ತೋಟದ ಚಂದಪ್ಪನ ನಾಯಿ, ಚೆಲ್ಲಿದ ಅನ್ನದಗಳನ್ನು ತನ್ನ ಗರ್ಭವ ಸೇರಿಸಿಕೊಳ್ಳುವ ಕಾತುರದಲ್ಲಿ ಕಾ...ಕಾ.. ಎಂದು ಒಂದೆ ಸಮನೆ ಒದರುತ್ತಿದ್ದ ಕಾಗೆಗಳ ಗುಂಪು, ಇವಾವು ಅವರಿಬ್ಬರ ಅರಿವಿಗೆ ಬಂದಿಲ್ಲವೇನೊವೆಂಬಂತೆ, ಶಿಲ್ಪಿಯು ಕೆತ್ತಿಟ್ಟ ಮಾತಿಲ್ಲದ ಮೂರ್ತಿಗಳಂತೆ ಕುಳಿತುಬಿಟ್ಟಿದ್ದರು. ಸಮಯ ಕಳೆಯುತ್ತಿತ್ತು, ನಾಯಿಯು ಹಸಿವನ್ನು ತಾಳಲಾರದೆ, ಶಾಂತವ್ವಳ ಪಕ್ಕದಲ್ಲಿದ್ದ ಬುತ್ತಿಯ ಚೀಲಕ್ಕೆ ಬಾಯಿಯನ್ನು ಹಾಕಿ ಓಟ ಕಿತ್ತಿತು, ಮರದ ಕೊಂಬೆಯ ಮೇಲೆ ಕುಳಿತ ಕಾಗೆಗಳೆಲ್ಲ ನಾಯಿ ಹಿಂದೆ ಹಾರಿ ಹೋದವು. ಆಗ ಎಚ್ಚೆಂತಹ ಕಾಂತಳು, 'ಅಯ್ಯೊ, ಆ ನಾಯಿ ನಮ್ಮ ಬುತ್ತಿಯನ್ನು ಒಯ್ಯುತ್ತಿದೆ,' ಎಂದು ಎದ್ದು ಅದನ್ನು ಹಿಂಬಾಲಿಸಲು ಮುಂದಾದಳು. ಆಗ ಶಾಂತವ್ವಳು ಅವನ ಕೈಯನ್ನು ಹಿಡಿದು ಕುಳ್ಳರಿಸಿದಳು.


'ಕೈ ಬಿಡ್ಬೆ ಯವ್ವಾ, ಆ ನಾಯಿ ಬುತ್ತಿ ಕಸ್ಕೊಂಡ ಹೊಂಟೈತಿ

ಹೊಡ್ದ ಕಿತ್ಗೊಂಡ ಬರ್ತಿನಿ'


'ಬ್ಯಾಡೆಪ್ಪ, ಹೋದ್ರ ಹೋತ್ ಬಿಡು ಅತ್ಲಾಗ'


'ಹಂಗಂದ್ರ ಹ್ಯಾಂಗ್ಬೆ'


'ಒಂದ ಕಳ್ಕೊಂಡ್ರ ಏನಾತ ಮತ್ತೊಂದ ಸಿಕ್ತಲ್ಲ'


ಹುಬ್ಬನ್ನು ಗಂಟಿಕ್ಕಿಕೊಂಡು ಏನು ಎನ್ನುವ ದೃಷ್ಠಿಯಲ್ಲಿ ಶಾಂತವ್ವಳನ್ನು ನೋಡಿದಳು ಕಾಂತಳು.


'ಗೊತ್ತಾಗ್ಲಿಲ್ಲೇನ?'


ಇಲ್ಲವೆಂದು ತಲೆಯಾಡಿಸಿದಳು.


' ನೀನ್ ಮತ್ತ್ ನನ್ ಹೊಳ್ಳಿ ಅವ್ವಾ ಅಂತಂದ ಬಾಯ್ತುಂಬಾ ಕರ್ದೆಲ್ಲ, ಇದಕ್ಕಿಂತ ಮತ್ತೀನೆನ ಬೇಕಿತ್ತ, ತಮ್ಮ'


ಮತ್ತೊಮ್ಮೆ ಎದೆಯೊಳಗಿನ ದುಃಖವೊ, ಮಾಡಿದ ತಪ್ಪಿನ ಅರಿವಾದಂತಾಗಿ ಗಳಗಳನೆ ಅಳತೊಡಗಿದಳು ಕಾಂತಳು.


'ಹೋಗ್ಲಿ ಬಿಡು ಆದದ್ದಾತು, ಮತ್ತ್ ಅದನ್ನ ಯಾಕ ಮನಸ್ನ್ಯಾಗ ಇಟ್ಗೊಂಡ ಮರ್ಗತಿದಿ'


'ತಪ್ಪಾತ್ಬೆ ಯವ್ವಾ, ಆವತ್ತ ನಿಮ್ಗ ನಾನ ಅನ್ಬಾರ್ದ ಅಂದ ಬಿಟ್ನಿ'


'ಹುಚ್ಚಪ್ಪ, ಮಕ್ಳ ತಪ್ಪ ಮಾಡ್ತಾವಂತಂದು ದೊಡ್ಡವ್ರು ಮಾಡೊಕಾಗ್ತದನು, ಬಾ.. ಕುಂದರಿಲ್ಲೆ' ಹಿಡಿದಿದ್ದ ಕೈಯನ್ನು ಎಳೆದು ಪಕ್ಕದಲ್ಲಿ ಕುಳ್ಳರಿಸಿಕೊಂಡಳು.


'ಹೌದ್ವಾ.. ನಾ ದೊಡ್ಡ ತಪ್ಪ ಮಾಡ್ಬಿಟ್ನಿ, ಅಲ್ಬೆ ಆ ಬುತ್ತಿನರ ತಗೊಂಡ ಬರ್ತಿನ ಹೋಗಿ' ಮತ್ತೆ ಎಳಲನುವಾದಳು.

"ಬ್ಯಾಡ ಹೋಗ್ಲಿಬಿಡು, ಹೋದದ್ದೇನು ಹಿಡಿ ಅನ್ನ ಒಂದ ಸಿಲ್ವಾರ ತಾಟ. ಅದೇನ ನಮ್ಮಿಬ್ರ ಹಸಿವನ್ನ ಬ್ಯಾರೆ ಕಿತ್ಗೊಂಡ ಹೋಗಿಲ್ಲ!!, ಸಂಜಿಕ ಮತ್ ಚಟಾಕ ಅಕ್ಕಿ ಹಾಕಿದ್ರಾತು, ನಾಳೆ ಸಂತ್ಯಾಗೊಂದ ಬ್ಯಾರೆ ತಾಟ ತಂದ್ರಾತು"


ಈ ಮಾತಿಗೆ ಕಾಂತಳ ಬಳಿಯಲ್ಲಿ ಉತ್ತರವಿರಲಿಲ್ಲ. ಮತ್ತೆ ಶಾಂತವ್ವಳೆ ಮುಂದುವರಿದು " ಮತ್ ಮುಂದ ಹ್ಯಾಂಗಪಾ ಜೀವ್ನಾ?" ಕೇಳಿದ ಪ್ರಶ್ನೆಗೆ ಕ್ಷಣ ಅವಕ್ಕಾದ ಕಾಂತಳು ಎದೆಯ ಮೇಲೆ ಜಾರಿದ್ದ ಸೀರೆ ಸೇರಗನ್ನು ಸರಿಪಡಿಸಿಕೊಂಡು, ಪಕ್ಕದಲ್ಲಿ ಬಿದ್ದಿದ್ದ ಬೇವಿನಕಡ್ಡಿಯನ್ನು ತೆಗೆದುಕೊಂಡು ನೆಲದ ಮೇಲೆ ಗೀರತೊಡಗಿದಳು.

ಇದನ್ನು ಕಂಡು ಶಾಂತವ್ವಳು ಮತ್ತೆ ತಾನೆ ಮಾತಿಗಿಳಿದಳು.




ಮಂಗಳಮುಖಿ ೬

ಮಂಗಳಮುಖಿ ೬

ನೋಡ ಶಶಿಯಪ್ಪ ಆದದ್ದ ಆಗಿ ಹೋತು, ಮನಿಗೆ ಗಂಡ ಮಗ ಆದಂತಾವ ವಂಶದ ಹೆಸರನ್ನ ಉಳಿಸಿ-ಬೆಳಸಿಕೊಂಡ ಹೋಗ್ಬೇಕಿತ್ತು, ಈಗ ನೀ ಹಿಂಗ ಆಗಿ ಬಂದಿದಿ ಏನ್ ಮಾಡಾಕ ಬರ್ತೈತಿ ಹೇಳು? ಹಣೆಬರಕ್ಕ ಹೊಣೆ ಯಾರು? ಅಂತ್ಹಂದಂಗ ನಿಮ್ಮವ್ವನ ಹಣೆಬರಕ್ಕ, ನಿನ್ನ ಹಣೆಬರಕ್ಕ ಹೊಣೆ ಯಾರಪ್ಪ? ಇವತ್ತ, ಆ ಶಿವ ನಂ ಹಣ್ಯಾಗ ಏನ ಬರ್ದಾನ ಅದನ್ನ ಉಣ್ಬೇಕಲ್ಲ! ಹರೆ ತುಂಬಿದ ಕೊಡಾ ಇದ್ಹಂಗ ಇದ್ಲ ನಿಮ್ಮವ್ವ ನಿನ್ನನ್ನ ಹಡದಾಗ, ತುಂಬಿದ ಜೋಳದ ತೆನಿಯಂತ ಸಂಸಾರನ ನೋಡಾಕಾಗ್ದೇನೊ ಏನೋ ದ್ಯಾವ್ರು ಆಕಿ ಉಣ್ಣೊ ಗಂಗಾಳ ಕಸ್ಗೊಂಡ ತೊಳ್ದ ಡಬ್ಬ (ಬೊರಲು) ಹಾಕ್ಬೀಟ್ಟಬಿಟ್ಟ, ಮುಟ್ಟಿದ್ರ ತುಳುಕೊ ಹಾಲಿನ ಗಿಂಡಿಯಂತ ವಯಸ್ಸಿದ್ರುನೂ... ನಿನ್ನ ಸಲವಾಗಿ ಆಕಿ ಮೆಹಬೂಬ್ ನ ಟಾಂಗಾ ಕುದರಿ ಕಣ್ಣಿಗೆ ಹಾಕಿದ ಬಟ್ಟಿ ಹಂಗ ತನ್ನ ಬಾಳ್ಯಾಕ ಮಂದಿ ಕಣ್ಣ ಬಿಳಬಾರ್ದಂತ ನಡುನ್ಯಾಗ ಅಲಾದಿ(ಯಾವಾಗಲೂ) ಕುಡಗೋಲ ಇಟ್ಗೊಂಡ ಹೊಲ-ಮನಿ-ಸಂತಿ-ನೀನು... ಇಷ್ಟ ಆಗಿಹೋತ ಅಕಿ ಜೀವ್ನ. ಈ ಬಾಳೆವ ಹಿಂಗ..!, ಉಪ್ಪೇನು? ಖಾರೇನು? ಎಲ್ಲಾನು ನುಂಗಿಕೊಂಡ ಹೋಗೊದ ಜೀವ್ನ ನೋಡಪಾ... ತಮ್ಮಾ.. ಬದ್ಕಿನ ಹಾದ್ಯಾಗ ಯಾವ ತಿರುವನ್ಯಾಗ ಯಾ ದಾರಿ ಸಿಗ್ತೈತೊ ಯಾರಿಗ್ಗೊತ್ತು? ನಡೆಯೊ ದಾರಿ ಎಲ್ಲ ಮಲ್ಗಿ ಹೂ ಹಾಸಿಂದ ಇರ್ಬೇಕಲ್ಲ!!? ಕಲ್ಲು ಮುಳ್ಳಿಂದು ಸಿಗ್ತೈತಿ ಆರಿಸ್ಗೊಂತ, ಸರಿಸ್ಗೊಂತ, ಸುಟಗೊಂತ ನಡಿತಿರ್ಬೇಕು. ಇಲ್ಲಾ, ನಂಗ ಛಲೋ ಹಾದಿನ ಹುಡ್ಕಿ ಕೊಡ್ರಿ ಅಂದ್ರ ಹ್ಯಾಂಗ? ದ್ಯಾವ್ರ ನೆತ್ತಿಮ್ಯಾಲ ಏರೊ ಹೂವಾನು ಕಟ್ಟಿದ ದಾರದ ನೋವನ್ನ ನುಂಗಿಕೊಂಡಿದ್ಕ ಅದು ಆ ಕಳಕಮಲ್ಲಯ್ಯನ ಕೊಳ್ಳಾನ ಹಾರಾನು ಆಕ್ಕೈತಿ, ಗೌರಿ ತಲಿಮ್ಯಾಲಿನ ದಂಡಿನೂ ಆಕ್ಕೈತಿ ಗೊತ್ತನು?'
ಈ ಮಾತಿಗೆ ಅಲ್ಲಿ ಉತ್ತರವಿರಲಿಲ್ಲ, ಮುಂದುವರಿದು ಕಲ್ಲವ್ವ "ನಿಮ್ಮವ್ವಗ ನಿ ಹಿಂಗ ಆಗಿ ಬಂದಿದ್ಕ ಏನೂ.. ತ್ರಾಸ್ ಇದ್ದಿಲ್ಲ, ಮದ್ವಿ ಮಾಡ್ಕೊಂಡ ಸಂಸಾರ ಮಾಡದಿದ್ರೂನು ಚಿಂತಿದ್ದಿಲ್ಲ, ಹಿಂಗ ಉಂಡಾಡಿ ಗುಂಡನಂಗ ಮನ್ಯಾಗ ಮಾಡಿ ಹಾಕಿದ್ದನ್ನ ತಿಂದು ಅಡ್ಡಾಡಿದ್ರು ನಿಮ್ಮವ್ವೇನ ಜಗ್ಗತಿದ್ದಿಲ್ಲ, ರಟ್ಟಿಯೊಳ್ಗ ಶಕ್ತಿ ಇರೋತನ್ಕಾನೊ ದುಡದ, ಕುಂದ್ರಿಸಿ ಕೂಳ ಹಾಕ್ತಿದ್ಳು,  ಗೊತ್ತಿಲ್ಲನು? ಇಂತದೆಲ್ಲಾ ಬಿಟ್ಟ ನೀನು...' ಎಂದು ರಾಗ ಎಳೆಯುತ್ತ ಶಶಿಯಪ್ಪನ ಮುಖವನ್ನು ನೋಡಿದಳು.
ಶಶಿನು ಕಣ್ಣ ತುಂಬಾ ನೀರನ್ನು ತುಂಬಿಕೊಂಡು   ನೋಡಿದನು...
'ನೀನು ಸಂತಿ ಬಜಾರದೊಳ್ಗ ಮಂದಿ ಮುಂದ ಕೈ ಚಾಚಿ ಭಿಕ್ಷೆ ಬೇಡೊದಲ್ದ,  ಬೆವರು ಸುರಿಸಿ ದುಡ್ದ ಕಂಡೊರ ದುಡ್ಡಿಗೆ ಜಬರ್ದಸ್ತ ಮಾಡಿ ಕಸಕೊಳ್ಳದನ್ನ ನೋಡಿ ನಿಮ್ಮವ್ವನ ಎದಿ ಒಡ್ದ ಹೋತ ತಮ್ಮಾ.. ಒಡ್ದ ಹೋತ..
ನಿಮ್ಮಪ್ಪ ಸತ್ತಾಗ್ನೂ ಇಷ್ಟೊಂದ ನೊಂದಕೊಂಡಿದ್ದಿಲ್ಲ ಆಕಿ'
ಆ ಮಾತುಗಳನ್ನು ಕೇಳಿ ಶಶಿಕಾಂತನಿಗೆ ದುಃಖವನ್ನು ತಡೆದುಕೊಳ್ಳಲಾಗಲಿಲ್ಲ, ಗಳಗಳನೆ ಅಳತೊಡಗಿದನು,   ಅವನ ಬೆನ್ನನ್ನು ಸವರಿ ಸಮಾಧಾನಿಸುತ್ತ, 'ತಮ್ಮಾ, ಈಗೇನು ಕಾಲ‌ ಮಿಂಚಿಲ್ಲ, ನೋಡಲ್ಲಿ ಹೊಲ ಹ್ಯಾಂಗ ಪಡ(ಬೀಳು- ಸಾಗುವಳಿಯಾಗದೆ ಇರುವಂತಹದ್ದು) ಬಿದ್ದು ಕಸ ಬೆಳ್ದ ನಿಂತೈತಿ, ನಿನ್ ಮೈಯ್ಯೊಳಗ್ನೂ ಇನ್ನೂ ಕಸುವು ಐತಿ, ನೆಲಾನ ಹದಾ ಮಾಡಿ ಬೀಜ ಬಿತ್ತಿ ಬೆಳೆದೆಂತಂದ್ರ ಬಂಗಾರದಂತ ಬೆಳಿ ಬರ್ತೈತಿ, ನೀನು ದಾರಿಗೆ ಹತ್ತೊದಲ್ದ ಮತ್ ನಾಕ್ಮಂದಿಗೆ ಕೆಲ್ಸ ಕೊಟ್ಟಂಗ ಆಕ್ಕೈತಿ, ನಿಮ್ಮವ್ವ... ತಾನು ಬದುಕೊದಲ್ದ ಅಕಿ ಜೊತಿಗೆ ನಾಕ ಮನಿ ದೀಪ ಉರಿತಿದ್ವು ಈ ಹೊಲದಾಗ. ಕೂಡಗೋಲು, ಹಗ್ಗ ಎರಡು ನಿನ್ನ ಕೈಯ್ಯಾಗ ಅದಾವು ನೋಡಪಾ, ನಾವೇನು ಇವತ್ತೊ ನಾಳೆನೊ ಉರುಳಿ ಹೋಗೊ ಮರಗಳ ಇದ್ಹಾಂಗ ಅದೀವಿ,  ಕಾಡ ಬಾ ಅಂತೈತಿ ನಾಡ ಹೋಗ್ ಅನ್ನಾಕ್ಹತ್ತೈತಿ ಇನ್ನೇಷ್ಟ ದಿನ್ದ ಈ ಭೂಮಿ ಋಣ ನಮ್ಗ?'  ಕಣ್ಣಂಚಲಿ ನೀರನ್ನು ತಂದುಕೊಂಡು ಆಕಾಶದ ಕಡೆಗೆ ನೋಡುತ್ತಾ ಕಣ್ಮುಚ್ಚಿಕೊಂಡು ನಮಸ್ಕರಿಸಿ, ಮೊಣಕಾಲಿನ ಮೇಲೆ ಭಾರವನ್ನು ಹಾಕುತ್ತ ಎದ್ದು ಹಿಂಬದಿಗೆ ಹತ್ತಿದ್ದ ಮಣ್ಣನ್ನು ಜಾಡಿಸಿಕೊಂಡು ಎಲೆಕೆಂಚಿಯ ಚೀಲವನ್ನು ನಡುವಿನಲ್ಲಿ ಸಿಕ್ಕಿಸಿಕೊಳ್ಳುತ್ತ ಮನೆಯ ದಾರಿಯತ್ತ ಹೆಜ್ಜೆಯನ್ನು ಹಾಕಿದಳು.
ಶಶಿಕಾಂತಳು ಪುಟ್ಟ ಮಗುವಿನ ಕೈಯಲ್ಲಿನ ಗೊಂಬೆಯನ್ನು ಕಿತ್ತುಕೊಂಡಾಗ ಹೇಗೆ ಬಿಕ್ಕಳಿಸಿ... ಬಿಕ್ಕಳಿಸಿ... ಅಳುವುದೊ ಹಾಗೆ ಅತ್ತು...ಅತ್ತು... ಹಗುರಾಗತೊಡಗಿದಳು. ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಹೊಲದ ಕಡೆಗೊಮ್ಮೆ ನಿಟ್ಟುಸಿರನ್ನು ಬಿಡುತ್ತಾ ನೋಡಿದಳು. ಬಿಸಿಲು, ಮಳೆ, ಗಾಳಿ, ಹಸಿರು, ದನ-ಕರುಗಳು, ಸೆಗಣಿ-ಗೆಂಜಲು, ಹೊಟ್ಟು-ಮೇವು, ಬೆಳೆ, ರಾಶಿ, ಲಾಭ-ನಷ್ಟ, ನೋವು-ಸಂಕಟ, ಸುಖ-ಸಮೃದ್ಧಿ ಎಲ್ಲವೂ ಕಣ್ಮುಂದೆ ಹಾದು ಹೋದವು, ಹಾಗೆ ಇತ್ತ, ಬಿದ್ದಿದ್ದ ತನ್ನ ವ್ಯಾನಿಟಿ ಬ್ಯಾಗಿನತ್ತ ಒಮ್ಮೆ ನೋಡಿದಳು. ಹಣ..!! ಸೌಂದರ್ಯ, ಮೋಜು-ಮಸ್ತಿ, ಅಂಕೆಯಿಲ್ಲ, ಸ್ವಾತಂತ್ರ್ಯದ ಮೇರೆಗೆ ಮಿತಿಯೆ ಇಲ್ಲ, ಯಾವ ದಾರಿಗೂ ಅಡೆತಡೆಗಳಿಲ್ಲ, ಸ್ವಚ್ಛಂದ ಹಕ್ಕಿ, ಬಣ್ಣ-ಬಣ್ಣದ ಜಗತ್ತು, ಸೀರೆ,ಹೂವು,ಸಿನಿಮಾ ಏನೆಲ್ಲ ಬೇಕು ಸುಖಕ್ಕೆ ಅದೆಲ್ಲ ಕೈ ಚಾಚಿ ಕರೆಯುತ್ತಿತ್ತು.
ಮತ್ತೆ ಮಣ್ಣಿನತ್ತ ನೋಡಿದನು, ಸಾಲದ ಶೂಲಕ್ಕೆ ಸತ್ತವರ ಮುಖಗಳು, ಮಳೆ ಬೆಳೆಯಿಲ್ಲದೆ ಎಲುಬಿನ ಹಂದರವಾಗಿ ಕಟುಕರಿಗೆ ಮಾರಲು ನಿಂತಂತಹ ದನಕರುಗಳು, ಮದುವೆ ಮುಂಜಿ ಕಾರ್ಯಗಳಿಗೆ ಮಾಡಿದ ಸಾಲವನ್ನು ತೀರಿಸಲಾಗದೆ ಮಂಗಳೂರು-ಬೆಂಗಳೂರು ಕೇರಳವೆಂದು ಕುಟುಂಬ ಸಮೇತರಾಗಿ ಗುಳೆ ಹೋಗುತ್ತಿರುವ ಯುವ ಜನಾಂಗದ ಚಿತ್ರ ಎಳೆಎಳೆಯಾಗಿ ಮೂಡಿದವು.
ಈಗ ಮತ್ತೆ ಬ್ಯಾಗಿನತ್ತ ನೋಡಿದನು, ಹೋಗಿ ಬಂದಲೆಲ್ಲ ಹಣ, ಯಾರಿಗೂ ಲೆಕ್ಕ ಕೊಡಬೇಕಿಲ್ಲ, ಕೂಡಿಡಬೇಕಿಲ್ಲ, ಬೇಕು-ಬೇಡವಾದದ್ದನ್ನು ತಿಂದುಂಡು ಬದುಕಬಹುದಾದಂತ ಜಗತ್ತು.
ಇಲ್ಲಿ, ಹೌದು ಇಲ್ಲಿ ಒಡಹುಟ್ಟಿದವರಲ್ಲದಿದ್ದರೂ.. ರಾಖಿ ಹಬ್ಬಕ್ಕೆ ಹೊಲದಲ್ಲಿ ದುಡಿಯೆಲೆಂದೆ ಬರುತ್ತಿದ್ದ ಹೆಣ್ಣು ಮಕ್ಕಳು ರಾಖಿಯನ್ನು ಕಟ್ಟುತ್ತಿದ್ದರು, ನಡುವಿನಮನಿ ಬಸಮ್ಮ ತನಗೆಂದೆ ತರುತ್ತಿದ್ದ ಮುಟುಗಿ ರೊಟ್ಟಿ, ಕರುವನ್ನು ಹಾಕಿದ ಆಕಳ ಹಾಲಿನಿಂದ ಗಿಣ್ಣವನ್ನು ಮಾಡಿಕೊಂಡು ಬರುತ್ತಿದ್ದ ಶಿವವ್ವ, ಮಕ್ಕಳಿಲ್ಲದ ಸಂಗಪ್ಪ ಪೇಟೆಯ ಸಂತೆಗೆಂದು ಹೋದಾಗಲೆಲ್ಲ ಕೈ ತುಂಬಾ ಸಿಹಿ ತಿನಿಸುಗಳನ್ನು ತಂದು ಕೊಡುತ್ತಿದ್ದ, ಒಬ್ಬನೆ ಮಗ ನೆಲಕ್ಕೆ ಇಳಿಸಿದರೆ ಪಾದವೆ ಸವೆದು ಹೋಗುವವೇನೊ ಎಂದು ಬೆನ್ನಿಗೆ ಸೀರೆಯಿಂದ ಕಟ್ಟಿಕೊಂಡು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಾದರ ಚೆನ್ನವ್ವ, ಒಂದು ಎರಡು ಮೂರು ನಾಲ್ಕು ಹೀಗೆ ನೆನಪಿನ ಬುತ್ತಿಯಿಂದ ತಾನಾಡಿ ಬೆಳೆದ ಪರಿಸರ, ಊರ ಹತ್ತಿರದ ಕಳಕಮಲ್ಲಯ್ಯನ ಜಾತ್ರೆ, ಗೆಳೆಯರ ಜೊತೆಯಲ್ಲಿ ಕೂಡಿಕೊಂಡು ತೇರನ್ನು ಎಳೆದು, ಉತ್ತತ್ತಿಯನ್ನು ಒಗೆದು, ಬಿದ್ದ ಉತ್ತತ್ತಿಗಾಗಿ ಗುದ್ದಾಡಿಕೊಂಡು ತಿಂದದ್ದು, ಬೆಟ್ಟದ ಮೇಲೆ ಹತ್ತಿ ಗಾಳಿಪಟವನ್ನು ಹಾರಿಸಿದ್ದು, ಹಾಲು ಕೊಡಲು ಹೋದಾಗ, ಹಾಲನ್ನು ಕುಡಿದು ಅದಕ್ಕೆ ನೀರನ್ನು ಬೇರೆಸಿ ಮನೆಯವರಿಗೆ ಕೊಡುತ್ತಿದ್ದದ್ದು ಎಲ್ಲ ಎಲ್ಲವು ಸುಳಿಯತೊಡಗಿದವು. ತಾನೇನು ಕಳೆದುಕೊಂಡೆ ಎಂಬ ಹುಚ್ಚು ಭಾವ ಅವನ ತಲೆಯನ್ನು ಹೊಕ್ಕು  ತಲೆಯಲ್ಲ ಭಾರವಾದಂತಾಗಿ ತಲೆಯನ್ನು ಜಾಡಿಸಿಕೊಂಡು ಮತ್ತೆ ಬ್ಯಾಗಿನತ್ತ ನೋಡಿದನು.
ನೆಮ್ಮದಿಯಿಲ್ಲ, ನೆಲೆಯಿಲ್ಲ, ಗುರುತಿಲ್ಲ, ತನ್ನವರು - ಹೊರಗಿನವರು ಯಾರು? ಯಾರೂ? ಲೆಕ್ಕಕ್ಕೆ ಸಿಗುತ್ತಿಲ್ಲ. ಒಂದೂರಿನಿಂದ ಒಂದೂರಿಗೆ, ಮತ್ತೊಬ್ಬರ ಗೆಳೆತನ, ಇನ್ನೊಂದು ಗುಂಪು, ಅದೇ ಅಲೆದಾಟ..!!ಸಿಕ್ಕ ಸಿಕ್ಕಲ್ಲಿ ಭಾರಿ ಭೋಜನಗಳು, ಕಂಠಪೂರ್ತಿ ಕುಡಿದು ಸ್ವರ್ಗದಲ್ಲೆ ತೇಲಾಡುವ ದಿನಗಳು, ದಿನಪೂರ್ತಿ ಕನ್ನಡಿಯ ಮುಂದೆ ನಿಂತು ತೀಡಿಕೊಳ್ಳುವ ಉಬ್ಬು-ತಗ್ಗುಗಳು..ಛೇ...ಛೇ.. ಬದುಕೇ...!!
ತಲೆಯೊಳಗೊಂದು ಗುಂಗಿ ಹುಳ ಹೊಕ್ಕು ಗುಂಯ್ಯ...ಗುಟ್ಟಂತಾಗಿ ತಲೆ ಸಿಡಿದು ಹೋಗುವಂತಹ ಅನುಭವವಾಗತೊಡಗಿತು ಶಶಿಕಾಂತಳಿಗೆ...ಯಾವುದು ಸರಿ? ಯಾವುದು ತಪ್ಪು? ಎಲ್ಲಿ ನಿಲ್ಲಲಿ? ಏನು ಮಾಡಲಿ? ಯಾವುದನ್ನು ಆರಿಸಿಕೊಳ್ಳಲಿ? ಹಿಂದೆ ಹೋಗಬಹುದಾ? ಸಾಧ್ಯವಿಲ್ಲ!! ಎಲ್ಲ ಕಳೆದುಕೊಂಡಾಗಿದೆ, ಸರಿಪಡಿಸಲಾಗುವುದೇ? ಯಾವುದಂತ? ಮಾವನ ಮರ್ಯಾದೆಯನ್ನೊ? ಅವ್ವನ ನೋವನ್ನೊ? ಸಾವನ್ನೊ?. ಮತ್ತೇ.... ಮುಂದೆ ಸಾಗಲಾ? ಹೀಗೆ...!! ಸಾಗಿ ಏನನ್ನು ಕಟ್ಟಬೇಕು? ಯಾವುದನ್ನು ಉಳಿಸಬೇಕು? ಯಾರಿಗೆ ಮಾದರಿಯಾಗಬೇಕು? ಯಾರು ಬರುವರು ಜೊತೆಗೆ?
ಹಿಂದೆ ಸರಿಯಲಾ?...ಮುಂದೆ ಹೋಗಲಾ? ಇಲ್ಲೇ ನಿಲ್ಲಲಾ?
ನಿಂತರೆ...? ಹೋದವರಾರು ಬರುವುದಿಲ್ಲ!! ಇದ್ದವರು ಜೊತೆಗಿರುವುದಿಲ್ಲ ಎಲ್ಲ ಮುನ್ನಡೆಯುವವರೆ!! ಹಾಗಿದ್ದರೆ ನಾನೇನು ಮಾಡಲಿ? ಏನು ಮಾಡಲಿ? ಏನು ಮಾಡಲಿ?
ತಲೆಯ ಕೂದಲನ್ನು ಹಿಡಿದುಕೊಂಡು ಆಕಾಶದತ್ತ ಮುಖಮಾಡಿಕೊಂಡು ನಿಂತಳು.
ಪಶ್ಚಿಮದಲ್ಲಿ ಬೆಳಕು ಅಸ್ತಂಗತವಾಗತೊಡಗಿತ್ತು. ಇನ್ನೇನಿದ್ದರು ಬೆಳಕು ಮೂಡುವುದನ್ನು ಕಾಯಬೇಕಷ್ಟೆ..

Wednesday, November 9, 2022

ಸೇಡವು -೩


ಕೋಳಿ ಕೂಗೊ ಮುಂಚೇಕ ಎದ್ದೇಳುವಾಕಿ
ಹೊತ್ತಾತೇಳು ಧಡಿಯಾಂತ ಕತ್ತ್ ಹಿಚ್ಗುವಾಕಿ!!
ನೀರೊಲಿಗೆ ಹಸಿ ಕಟಗಿ ಹಾಕಿ ಕುಂದ್ರಾಕಿ
ಮನಿಯೆಲ್ಲ ಹೊಗಿಯೆಬ್ಬಿಸಿ ಅತಗೊಂತ ಒಡಾಡುವಾಕಿ!!
ಈಕಿ... ನನ್ನಾಕಿ... ಈಕಿ ನನ್ನಾಕಿ...

ಬಿಸಿಬಿಸಿ ರೊಟ್ಟಿ ಬಡ್ದ ಕೊಡ್ತೀನಿ ಬಾ...ಂತ ಕರಿಯುವಾಕಿ
ಸಂತಿನ ಜಾಸ್ತಿ ತಂದಿಲ್ಲಂತ ಚಮಚ ಕಾಸಿ ಬರಿ ಇಡಾಕಿ!!
ನಾ ಉಪವಾಸಿದ್ರು ಸರಿ, ನಿನ್ನ ಹೊಟ್ಟಿ ತಣ್ಣಗಿರ್ಲಿ ಅನ್ನಾಕಿ
ನುಗ್ಗೊಳು ಹಸಿಕಾರ ಚಟ್ನಿ ಕಲ್ ನ್ಯಾಗ ಅರ್ದ್ ತಾಟಿನ ತುಂಬ ಹಚ್ಚಿ ಕೊಡುವಾಕಿ!!
ಈಕಿ... ನನ್ನಾಕಿ ಈಕಿ...ನನ್ನಾಕಿ...!!

ಈ ಸಲದ ಹಬ್ಬಕ್ಕ ಹೊಸಾ ದಡಿ ಸೀರಿನ ಬೇಕನ್ನಾಕಿ
ಹ್ವಾರೆಕ ಹೊಂಟನಿಂತ್ರ, ಛಲೊ ಸೀರಿನ ಹರ್ದ ಬುತ್ತಿರೊಟ್ಟಿ
ಕಟ್ಟಿ ಕಳಸಾಕಿ!!
ಹೊರಗ ಚಾ ಕುಡದೇನಂದ್ರ ಕಿಸೆದನ್ ರೊಕ್ಕಾನೆಲ್ಲ ಕಳುಮಾಡಿರುವಾಕಿ
ಸಂಜಿಕ್ ಮನೆಗ್ ಬಂದ್ನೆಂದ್ರ ನನ್ ಬಿಟ್ಟ ಹೊರಗ
ಏನ್ ತಿಂದ್ ಬಂದ್ರೆಂತ ಕೇಳುವಾಕಿ
ಈಕಿ...ನನ್ನಾಕಿ... ಈಕಿ..... ನನ್ನಾಕಿ

ತವ್ರಿಗೆ ಹೊಕ್ಕೇನಂತ ನಸಿನ್ಯಾಗ ಎದ್ದು ರೆಡಿಯಾಗಾಕಿ
ನೀವೊಬ್ರ ಆಕ್ಕಿರಲ್ಲ ಮನಿಯಾಗಂತಂದು ಗಂಟುಮೂಟಿ
ಹೊರ್ಸಕೊಂಡು ಕರ್ಕೊಂಡ ಹೋಗಾಕಿ!!
ಹೋದಮ್ಯಾಲ ಚಾ ಕುಡಿಯೋಣ ತಡಿರಿ ಅನ್ನಾಕಿ
ಖಾಲಿ ಕುಂತ ಏನ್ಮಾಡ್ತೀರಿ... ಹೊಲದ ಕಡೆಗೆ
ಎಮ್ಮಿನರ ಹೊಡ್ಕೊಂಡ ಹೋಗ್ರಿ ಅಂತ ಕಳಿಸುವಾಕಿ
ಈಕಿ... ನನ್ನಾಕಿ... ಈಕಿ... ನನ್ನಾಕಿ...

ಶಿವನ ನೆತ್ತಿಮ್ಯಾಲಿನ ಗಂಗವ್ವ ಅಪ್ಪಿತಪ್ಪಿಯಾದ್ರೂ
ಇಳ್ದ ಬರಬೊದ್ರಿ.. ಈಕಿ ಸರಿಯೊದಿಲ್ರಿ...
ಕಂಕುಳದಾಗಿನ ಕೂಸನ್ನಾದ್ರು ಮರಿಬೋದು
ನನ್ ಮಾತ್ರ ಮರಿಯೊದಾಗ್ಲಿ, ಬಿಡೊದಾಗ್ಲಿ
ಉಣ್ಸದಾಗ್ಲಿ, ಅಳ್ಸೊದಾಗ್ಲಿ, ನಗ್ಸೊದಾಗ್ಲಿ ಯಾವದಂದ್ರ
ಯಾವುದಕ್ಕೂ ಬಿಡಾಕಲ್ರಿ.. ಈಕಿ.. ಬಿಡಾಕಲ್ರಿ ಈಕಿ

Monday, November 7, 2022

ಸೇಡವು -೨

ಕಂಬದ ಹಿಂದ ನಿಂತ್ಕೊಂಡ
ಒಂಟಿ‌ ಕಣ್ಣಿಲೆ ಹಿಂಗ ನನ್ ನೋಡಬ್ಯಾಡ!!
ಕಾರ್ತಿಕ ಮಾಸ ಐತಿದು
ಮೈ ಬಣವಿಗೆ ಮೋಹದ ಕಿಚ್ಚ ಹಚ್ಚಬ್ಯಾಡ!!

ಬಂಗಾರ ಬಳೆನ ಯಾಕ
ತರಲಿಲ್ಲಂತ ಸೆಡವು ಮಾಡ್ಕೊಂಡ ಕುಂದ್ರಬ್ಯಾಡ!!
ಬಂಗಾರದಂತ ಮೈಯ್ಯಾಕಿಗೆ ಯಾಕಂತ
ಹಸಿರ ಬಳೆ ತಂದೇನ.. ಹಾಕ್ಕೊಳ್ದ ಇರಬ್ಯಾಡ!!

ಗೌರಿ ಹುಣ್ಮಿ ಬೆಳ್ಕನ್ಯಾಗ
ಆರತಿ ತಾಟ ಹಿಡ್ಕೊಂಡ ಎದುರು ಬರಬ್ಯಾಡ!!
ಮಳ್ಳ ಹುಡ್ಗನ ಎದಿಯಾಗ
ಕೊಡಿ ಬಿದ್ದ ಕೆರಿ ಹಂಗ ಪ್ರೀತಿನ ಉಕ್ಕಸಬ್ಯಾಡ!!

ವಳ್ ನ್ಯಾಗ ರುಬ್ಬಿದ ಹೂರಣದ
ಖಡ್ಬ ಮಾಡಿ ತಾಟಿನ ತುಂಬಿಟ್ಟ ಕೊಡ್ಬೇಡ!!
ಚಮಚ ಆಕಳ ತುಪ್ಪದ್ಕೀನ ನಿನ್
ತುಟಿ ತುಪ್ಪದ ಗಿಂಡಿ ಬೇಕಿತ್ ಅಳತಿ ಮಾಡಬ್ಯಾಡ!!

ಕಡ್ಲಿ ಹೊಲ್ದಾನ ಹುಳಿಹತ್ತಿ ಉರಿಯುವಂಗ
ನನ್ ಮನಸನ್ನ ಉರ್ಸಗೊಂತ ಕುಂದ್ರಬ್ಯಾಡ!!
ಬೇವಿನಕಟ್ಟಿ ಬೆಂದ ಹೊಂಟಾನಿಲ್ಲೆ
ಬೆಣ್ಣಿ ಮಾತಿಲೆ ಮಾತ ಕೊಡೊದ ಮರಿಬ್ಯಾಡ!!

Friday, November 4, 2022

ರಂಗೀ


ಮದ್ಯವನ್ನು ಕುಡಿದು
ನಾನು ಹಾಳಾಗಿ
ಹೋಗುತ್ತಿದ್ದೇನೆಂಬುದು
ಜಗದ ಚಿಂತೆ
ರಂಗೀ....
ಇದೆಂತಹ ಹುಚ್ಚರ
ಸಂತೆ...!!!
ಉಸಿರಾಡಿಸುವ ಉಸಿರಿನ
ಉಸಿರನ್ನೆ ಕೊಲ್ಲುತ್ತಿರುವವರಲ್ಲ
ಸಿಡಿಮದ್ದುಗಳನ್ನು
ಸಿಡಿಸಿ...

ನಾನು ಒಂದೊಂದೆ
ಗೆಲುವಿನ ಮೆಟ್ಟಿಲನ್ನು
ಹತ್ತುತ್ತಿರುವಾಗ,
ಅವರೆಲ್ಲರೂ ಒಂದೊಂದು
ದಿಕ್ಕಿನಲ್ಲಿದ್ದರು
ರಂಗೀ...
ನಾನೀಗ ಮೊದಲ
ಸೋಲಿನ ಮೆಟ್ಟಿಲನ್ನು
ತುಳಿದಿರುವೆ!!
ಈಗ ಒಂದೇ ದಿಕ್ಕಿನಲ್ಲಿ
ಗುಂಪೊಂದು ಕೂಡಿದೆ.!!

ಕೇವಲ.....
ನಿನ್ನ ಮಧುಬಟ್ಟಲನ್ನು
ಚುಂಬಿಸಿದಾಕ್ಷಣದಿಂದ
ಬಿಟ್ಟು ಬಿಡುವುದಕ್ಕೆ
ಜೀವ ಹೋದಂತಾಗುತ್ತಿದೆಯಲ್ಲ
ರಂಗೀ....
ಇದಕ್ಕೂ....
ಮೊದಲೇ...ಅವಳದರಕ್ಕೆ
ಚುಂಬಿಸಿಬಿಟ್ಟಿದ್ದರೆ...!!!?

ಅವಳ ಕಂಗಳಲ್ಲೆ...
ಸಾವಿರಾರು ದೀಪಗಳು
ಬೆಳಗುತಿರುವಾಗ, ಮತ್ತೇಕೆ
ಎಣ್ಣೆಯನ್ನು ತರಲಿ
ರಂಗೀ....
ಇವಳ ಬಾಯ್ಬಡಿತದ
ಸದ್ದಿಗೆ, ಮನೆಯ ಮೇಲ್ಛಾವಣಿಯೆ
ಹಾರಿಹೋಗುತ್ತಿರುವಾಗ
ಪಟಾಕಿಗಳನ್ನು ತರುವ
ದುಸ್ಸಾಹಸವನ್ನು ನಾನೇಕೆ
ಮಾಡಲಿ!!

ನೀ..ಮುಡಿದ ಮಲ್ಲಿಗೆಗೂ
ಅವಳು ಮುಡಿದ ಹೂವಿಗೂ
ಎಷ್ಡೊಂದು ವ್ಯತ್ಯಾಸವಿದೆ
ರಂಗೀ...
ನಿನ್ನದರಲ್ಲಿ
ಅನುಭವಿಸಲಿಕ್ಕಾಗದಷ್ಟು... ಕಾಮ!!
ಅವಳದರಲ್ಲಿ
ದಕ್ಕಿಸಿಕೊಳ್ಳಲಾರದಷ್ಟು ಪ್ರೇಮ!!

ಒಂದು ಇಷ್ಟವಿಲ್ಲದ್ದು
ಮತ್ತೊಂದು ದಕ್ಕಲಾರದ್ದು!

ಕುಡಿದು, ಗಟಾರದ
ದಂಡೆಗೆ ಬಿದ್ದ ನನ್ನನ್ನು
ನೋಡಿದ, ದಾರಿಹೋಕ
ಹೇಳುತ್ತಾನೆ "ಎದ್ದೇಳೊ
ಸೊಳ್ಳೆಗಳು ಕಚ್ಚಿ ಮಾರಣಾಂತಿಕ
ಕಾಯಿಲೆಗಳು ಬರಬಹುದೆಂದು
ರಂಗೀ...
ಪಾಪ...ಅವನಿಗೇನು ಗೊತ್ತು!!
ಅವಳ ನೆನಪುಗಳು ಮೊದಲೆ
ನನ್ನೆದೆಯಲ್ಲಿ ಮಾರಣ
ಹೋಮವನ್ನು ಮಾಡಿರುವುದು.

ನಿನ್ನರಮನೆಗೆ
ಬರುವಾಗ, ಜೇಬಿನ
ತುಂಬಾ ದುಡ್ಡಿರುತ್ತದೆ
ರಂಗೀ...

ಏನು..!??
ಅವರಿಗೆ ಮದ್ಯದೊಂದಿಗೆ
ತಿನ್ನಲು ಹುರಿದ
ಕಡಲೆಬೀಜಗಳಿಲ್ಲವೆ?
ರಂಗೀ...
ನನ್ನ ಕಥೆಯನ್ನು
ಹೇಳಿಬಿಡು!! ಬಾಯಿಯನ್ನು
ಚಪ್ಪರಿಸುತ್ತ, ಬಾಟಲಿಯನ್ನು
ಖಾಲಿ ಮಾಡುತ್ತಾರೆ
ನೋಡು..

ಅವಳಿಂದ,
ಹಿಡಿ ಪ್ರೀತಿಯನ್ನಾದರೂ...
ಭಿಕ್ಷೆ ಬೇಡಿ ಪಡೆಯತ್ತೇನೆಂದಾಗ
ನೂರಾರು ಜನರು
ಅಡ್ಡಗಾಲನ್ನು ಹಾಕಿದರು
ರಂಗೀ....
ಗುಟುಕು ವಿಷವನ್ನು
ಕುಡಿಯಲು ಕುಳಿತಿರುವೆನೀಗ!!!
ತಡೆಯಲು...ಒಂದೇ...ಒಂದು
ಮನಸ್ಸು ಇಲ್ಲವಿಲ್ಲಿ..!!

ನಿನ್ನರಮನೆಯ ನೃತ್ಯ,
ಸಂಗೀತದ ಕುಣಿತದಲ್ಲಿ...
ಕೈ ಜಾರಿ ಬಿದ್ದ, ಮದ್ಯದ
ಬಟ್ಟಲಿನ ಸದ್ದಿಗೆ...ಇಡೀ...
ವಾತಾವರಣವೆ ಸ್ತಬ್ಧವಾಯಿತಲ್ಲ
ರಂಗೀ....
ಹೊರ ಜಗತ್ತು ಎಷ್ಟು.....
ಕಿವುಡವಾಗಿರಬಹುದು!!?
ಆ ಸಂಜೆ ಅವಳು ಒಡೆದು
ಹೋದ, ನನ್ನೆದೆಯ ಗೂಡಿನ
ಸದ್ದು ಯಾರಿಗೂ....
ಕೇಳಿಸಲೆ ಇಲ್ಲವಲ್ಲ!!

ಮೊದಲ ಭೇಟಿಯ
ಕುಡಿ ನೋಟಕ್ಕೆ...
ಎದೆಯ ಬೆಟ್ಟವಿದು
ಛಿದ್ರವಾಗಿ ಹೋಯಿತಲ್ಲ
ರಂಗೀ...
ನಿತ್ಯ ಸಿಂಗರಿಸಿಕೊಳ್ಳುವ
ಇವಳ ಮನೆಯ
ಕನ್ನಡಿಯ ಪಾಡು
ಏನಾಗಿರಬೇಡ?

ಹೋದವಳೇನೋ....
ಹೋದಳು!
ಹೋಗುವ ಮುನ್ನ
ತನ್ನ ಮರೆತು ಹೋಗುವ
"ಶಾಪ" ವೊಂದನ್ನಾದರು
ಕೊಟ್ಟು ಹೋಗಿದ್ದರೆ,
ಎಷ್ಟೊಂದು ಸುಖವಿರುತ್ತಿತ್ತು
ರಂಗೀ...
ಹಗಲಿರುಳು ಬೇಯಿಸಿ
ಸಾಯಿಸುವಂತಹ,
ವಿರಹದ "ತಾಪ" ದ
ಮದ್ದಿಗೆ, ನಿನ್ನ ಮದ್ಯದ
ದಾಸನಾಗುವುದಾದರೂ..
ತಪ್ಪುತ್ತಿತ್ತು!!

ಕಠಿಣವಾದ ಮಾತುಗಳಿಂದ
ಕೋಮಲ ಹೃದಯಗಳು
ಘಾಸಿಗೊಳ್ಳುತ್ತವಲ್ಲವೆ
ರಂಗೀ...
ಏನು ಮಾಡಲಿ,
ಎಷ್ಟೇ.. ಕುಡಿದರೂ...ಈ
ನಾಲಿಗೆಯ ಮೇಲಿನ
ಒರಟುತನ ಮಾತ್ರ
ಮೃದುವಾಗುತ್ತಿಲ್ಲ.

ಹಿಂತಿರುಗಿ
ಹೇಗೆ ನೋಡಲಿ
ರಂಗೀ...
ಗಾಯ ಮಾಡಿದವರೆಲ್ಲ
ಯಾವಾಗಲೂ ನನ್ನ
ಬೆನ್ನ ಹಿಂದಿದ್ದವರಲ್ಲವೆ!!

ಬರೀ......
ಅಂಗೈಯಲ್ಲೆ....ರಂಗೇರಿದ
ಮದರಂಗಿಯ ಕಂಡು,
ರಾತ್ರಿಯ ನಶೆ ಇಳಿದು
ಮತ್ತೆ... ಒಲವಿನ ಪಿತ್ತದ
ಮತ್ತೇರಿತಲ್ಲ
ರಂಗೀ..!!!
ತಪ್ಪಿ... ಇವಳೊಮ್ಮೆ
ನನ್ನ ನೋಡಿ ನಕ್ಕು ಬಿಟ್ಟರೆ!!
ಎದೆ ಬಡಿತವ ನಿಲ್ಲಿಸಿದ
ಪಿರಾತಕಿ ಇವಳಾಗುವಳೇನೊ?

ಆಧುನಿಕತೆಯ ರಭಸಕ್ಕೆ
ಸಿಕ್ಕು.. ಅವಳ
ಹೆರಳುಗಳೇನೊ...ಜಡೆಯೆಂಬ
ಸಂಕೋಲೆಯಿಂದ....?
ಮುಕ್ತವಾದವು
ರಂಗೀ...
ಮುಡಿಯೇರಿ...ನೋಡುಗರ
ಕಣ್ಮನ ಸೆಳೆಯುತ್ತಿದ್ದೀ....
ಮಲ್ಲಿಗೆಗಳು.....ಕಾಲನ
ಕಾಲಲಿ ಸಿಕ್ಕು, ಹೊಸಕಿ
ಹೋಗುತ್ತಿವೆಯೇನೊ?

ಇವುಗಳನ್ನು
ಹೇಗೆ ಸಂತೈಸಲಿ
ರಂಗೀ...
ಅವಳೀಗ ನಿರಾಭರಣ
ಸುಂದರಿ...!!
ಮೂಸುವ ಮಾತಿರಲಿ...
ಇತ್ತ...
ಕಣ್ಣೆತ್ತಿಯೂ ನೋಡುತ್ತಿಲ್ಲ!!

ಸಕ್ಕರೆಯನ್ನು
ಹಾಕಿ

Monday, October 3, 2022

ರಂಗೀ

ಹೋದವಳೇನೋ....
ಹೋದಳು!
ಹೋಗುವ ಮುನ್ನ
ತನ್ನ ಮರೆತು ಹೋಗುವ
"ಶಾಪ" ವೊಂದನ್ನಾದರು
ಕೊಟ್ಟು ಹೋಗಿದ್ದರೆ, 
ಎಷ್ಟೊಂದು ಸುಖವಿರುತ್ತಿತ್ತು
ರಂಗೀ...
ಹಗಲಿರುಳು ಬೇಯಿಸಿ
ಸಾಯಿಸುವಂತಹ,
ವಿರಹದ "ತಾಪ" ದ
ಮದ್ದಿಗೆ, ನಿನ್ನ ಮದ್ಯದ 
ದಾಸನಾಗುವುದಾದರೂ..
ತಪ್ಪುತ್ತಿತ್ತು!!