Thursday, May 25, 2023

ಹಗ

ಇನ್ನೂ ಇವರ ಕಥಾ ಸಂಕಲನದ ಬಗ್ಗೆ ಹೇಳಬೇಕೆಂದರೆ ಅಥವಾ ವಿಮರ್ಶಿಸಬೇಕೆಂದರೆ ನನಗಂತೂ ಸುಲಿದ ಬಾಳೆ ಹಣ್ಣಿದ್ದ ಹಾಗೆನೆ. ಸಾಹಿತ್ಯ ಪ್ರಕಾರದ ಯಾವುದೇ ವಿಷಯವಿರಲಿ ಅಂದರೆ ಅದು ಬರೆಯುವುದೆ ಇರಲಿ ಇಲ್ಲವೆ ಓದುವುದೆ ಇರಲಿ ಅದರಲ್ಲೂ ಸಾಹಿತ್ತಿಕ ಹೊಸ ಪ್ರಕಾರಕ್ಕೆ ಕೈ ಹಾಕುವ ಮುನ್ನವಂತೂ ನಮ್ಮಿಬ್ಬರ ನಡುವೆ ಸಾಕಷ್ಟು ಚರ್ಚೆಗಳು ನಡೆದೆ ನಡೆಯುತ್ತಿರುತ್ತವೆ. ನಮ್ಮವ್ವ ಕವನ ಸಂಕಲನದ ನಮ್ಮವ್ವ ಎಂಬ ಕವನಗಳು, ಚೌಕಟ್ಟಿನ ಬಂಧವೇಕೆಂದು ಗಜಲ್ ಪೂರಕವಾಗಿ ಕಜಲ್, ಸಾಕಿಯ ಪ್ರತಿರೂಪವಾಗಿ ರಂಗೀ, ಹೀಗೆ ಹತ್ತು ಹಲವಾರು ಪ್ರಾಯೋಗಿಕ ಸಾಹಿತ್ಯದ ಕೃಷಿಯನ್ನು ಕೈಗೊಂಡಿದ್ದಾರೆ. ನನಗಿನ್ನು ಚೆನ್ನಾಗಿ ನೆನಪಿದೆ ನಾನು ಉಡುಪಿಯಲ್ಲಿ ನನ್ನ ಗೆಳೆಯನೊಂದಿಗೆ ಬೈಕನಲ್ಲಿ ಹೋಗುತ್ತಿರಬೇಕಾದರೆ ಅಪಘಾತವಾಗಿ, ಮನೆಯಲ್ಲಿ ಆರಾಮನ್ನು ತೆಗೆದುಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ, ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ  ಕರೆದಿದ್ದಂತಹ ರಾಷ್ಟ್ರಮಟ್ಟದ ಕಥಾ ಸ್ಪರ್ದೆಯಲ್ಲಿ ಭಾಗವಹಿಸುವಿಕೆ ಹಾಗೂ ಅದಕ್ಕೆಂದೆ ಕೇವಲ ಚಂದ್ರವ್ವ ಎಂಬ ಕಥೆಯ ಅಂತ್ಯದ ಎಳೆಯನ್ನು ಹೇಳಿದಾಗ ನನಗೆ ಕ್ಷಣ ಶಾಕ್ ಆಯಿತು. ಕೇವಲ ದೀರ್ಘ ಕವನ, ಚುಟುಕು, ಶಾಯರಿಗಳನ್ನು ಬರೆಯುತ್ತಿದ್ದವರು ಇಂದು ಕಥೆಗಾರನಾಗಿ ನನ್ನ ಮುಂದೆ ಕುಳಿತಿರುವುದನ್ನು ಕಂಡು ಇವರೊಳಗಿರುವ ಆ ಸಾಹಿತ್ಯದ ಬಗೆಗಿನ ಸೆಳೆತ, ಮೋಹ, ಶ್ರದ್ಧೆ, ತಾಳ್ಮೆ ಎಂತಹದ್ದೆಂದು ನನಗರಿವಾಯಿತು. ಆಗ ನಾನು ಇದು ಹೀಗೆ ಬರಲಿ ಎಂದು ಸೂಚಿಸಿದ್ದೆ ಕೂಡ, ಆ ಕಥೆಯನ್ನು ಬರೆಯಲಾಯಿತು, ಕಳುಹಿಸಿಯು ಆಯಿತು; ಅಲ್ಲಿ ವಿಮರ್ಶಕರ ಮೆಚ್ಚುಗೆಗೆ ಆಯ್ಕೆಯಾಗಿ ವಿಶೇಷ ಬಹುಮಾನವನ್ನು ಪಡೆದುಕೊಂಡದ್ದು ಇವರ ಮುಂದಿನ ಹಲವಾರು ಕಥೆ, ಕಾದಂಬರಿಗಳಿಗೆ ಪ್ರೇರಣೆಯಾಯಿತು ಎಂದರೆ ಸುಳ್ಳಲ್ಲ, ಆಗಿನ್ನು ಇವರು ಕಾದಂಬರಿಕಾರರಾಗಿರಲಿಲ್ಲ. ಅದಕ್ಕೂ ಬಹಳ ದಿನಗಳನ್ನೇನು ತೆಗೆದುಕೊಳ್ಳಲಿಲ್ಲ, ಇವರೊಳಗಿನ ಸಾಹಿತ್ಯದ ತುಡಿತ ಎಷ್ಟಿತ್ತೆಂದರೆ ನಿರ್ಣಯ ಎಂಬ ಕಾದಂಬರಿಯನ್ನು ಕೇವಲ ಆರು ತಾಸುಗಳಲ್ಲಿ ಬರೆದು ಕೊಟ್ಟದ್ದು ನನಗಿನ್ನು ಆಶ್ಚರ್ಯವಾಗಿಯೆ ಕಾಡುತ್ತಲಿದೆ.  ಇರಲಿ ಇತ್ತ ಕಥಾ ಸಂಕಲನದ ಬಗ್ಗೆ ನಾವು ನೋಡುವುದಾದರೆ, ಏನು ಕಥೆಗಳು ? ಏನನ್ನು ಹೇಳುತ್ತವೆ, ಓದುಗನನ್ನು ಯಾವ ದಿಕ್ಕಿಗೆ ತಂದು ನಿಲ್ಲಿಸುತ್ತವೆ ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಕಥಾ ಸಂಕಲನದಲ್ಲಿ ಒಂದೊಂದೆ ಕಥೆಗಳನ್ನು ಓದುತ್ತಾ ಹೋದಂತೆ ಕೌಟುಂಬಿಕ, ಸಾಮಾಜಿಕ, ರಾಜಕೀಯ, ಅಪರಾಧ, ಅಸಹಾಯಕತೆ, ಬದುಕಿನ ಗುರಿ, ಹುಟ್ಟಿದ ಜೀವದ ಸಾರ್ಥಕತೆ ಹೀಗೆ ಹತ್ತು ಹಲವಾರು ವಿಷಯಗಳನ್ನು ನಮಗೆ ಮನನವನ್ನು ಮಾಡಿಸುತ್ತಾ ಸಾಗುತ್ತವೆ. ಎಲ್ಲ ಕಥೆಗಳ ಒಳ ಹೂರಣವನ್ನು ನಾನಿಲ್ಲಿ ಬಡಿಸುತ್ತ ಸಾಗುವುದಿಲ್ಲ, ಒಬ್ಬೊಬ್ಬ ಓದುಗನಲ್ಲೂ ಒಂದೊಂದು ಮನಸ್ಥಿತಿ ಇರುತ್ತದೆ, ಆಯಾ ಕಥೆ, ಸನ್ನಿವೇಶ, ಸಂಭಾಷಣೆ, ಪಾತ್ರಗಳು ಓದುಗನ ಎದೆಯಲ್ಲಿ ಅಚ್ಚಳಿಯದೆ ಉಳಿದು ಹೋಗುತ್ತವೆ. ಓದು ಓದುಗರ ಬಾಳಿನ ಹಾದಿಗೆ ಬೆಳಕಾಗಬೇಕು, ಮಾರ್ಗದರ್ಶಕವಾಗಬೇಕು, ಗುರುವಾಗಬೇಕು, ನಿರ್ದೇಶಿಸಬೇಕು ಎಲ್ಲದಕ್ಕೂ ಮೊದಲಾಗಿ ಅವರಲ್ಲಿ ಮನುಷ್ಯತ್ವ, ಮಾನವಿಯತೆ, ಕರುಣೆ, ಅನುಕಂಪ, ತ್ಯಾಗದೊಂದಿಗೆ ಮಾನವನನ್ನಾಗಿಸಬೇಕು. ಅದು ಪ್ರತಿಯೊಬ್ಬ ಲೇಖಕರ/ಕಿಯರ ಸಿದ್ಧಾಂತವಾಗಬೇಕು, ಬರಹ ಕೇವಲ ಜನರ ಭಾವನೆಗಳನ್ನು ಕೆರಳಿಸುತ್ತ, ಮುಖಕ್ಕೆ ಮಸಿ ಬಳಿಯುತ್ತ, ಬೆಳೆಯುತ್ತ ಸಾಗುವುದು ಸಾಹಿತ್ಯದ ಭಾಗವಾಗಬಾರದು. ಮತ್ತು ಇನ್ನೊಂದು ಮುಖ್ಯ ಅಂಶವೆನೆಂದರೆ ಅವರು ಈ ನೆಲದ ಘಮಲನ್ನು ಎತ್ರಿ ಹಿಡಿದಿರುವುದು; ಕಥೆಗಳನ್ನು ಸಾಹಿತ್ತಿಕ ಭಾಷೆಯಲ್ಲಿ ವಿಸ್ತರಿಸುತ್ತ ಸಾಗಿ ಪಾತ್ರಗಳ ಸಂಭಾಷಣೆಯನ್ನು ಆಡು ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ, ಈಗೀನ ಕಾಲಘಟ್ಟಕ್ಕೆ ಇದು ಅತ್ಯವಶ್ಯವು ಕೂಡಾ. ಹೊಟ್ಟೆಪಾಡಿಗಾಗಿ ಆಂಗ್ಲ ಭಾಷೆಯ ಮೊರೆಹೋಗಿ ಮಾತೃಭಾಷೆಯ ಕಡೆಗಣನೆಯು ಹೆಚ್ಚಾಗುತ್ತ ಸಾಗಿದೆ. ಇತ್ತಿತ್ತಲಾಗಿ ಕೆಲವೊಂದು ಆಡು ಭಾಷೆಯ ಪದಗಳೆ ಅಳಿದು ಹೋದಂತಿವೆ ಮತ್ತು ಮರೆತು ಹೋಗುತ್ತಿದ್ದೇವೆ ಕೂಡ, ಅದರ ಮರುಬಳಕೆ ಹಾಗೂ ಮುಂದಿನ ಪೀಳಿಗೆಗೆ ಶಬ್ದ ಸಂಗ್ರಹದ ಅವಶ್ಯಕತೆಯೂ ಬಹಳಷ್ಟಿದೆ ಈ ನಿಟ್ಟಿನಲ್ಲಿ ಇವರ ಪ್ರಯತ್ನ ಶ್ಲಾಘನೀಯ

ಗಹ

ಅಪ್ಪ ಹೋದ ಮೇಲೆ..... 

   ಬದುಕು ಒಂಥರಾ ವಿಚಿತ್ರ! ಹೌದಲ್ವಾ?, ಅಲ್ಲವಾ?, ನಾನಂತೂ ಈ ವಿಷಯದಲ್ಲಿ ಅಡ್ಡಗೋಡೆಯ ಮೇಲಿಟ್ಟ ದೀಪದಂತೆ ಆಗಿಬಿಟ್ಟಿದ್ದೇನೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಏನಾದರೊಂದು ದೊಡ್ಡ ಗಂಡಾಂತರ ಕಾದಿರುತ್ತದೆ ಅದು ಸಂಖ್ಯೆ ಎಂಟರಿಂದ ಪ್ರಾರಂಭವಾಗುವ ಎಂಟರಿಂದ ೮೮ ರಲ್ಲಿ ಅತೀವ ಪಿತ್ತವಾಗಿ ರಾತ್ರಿ ಎಂದರೆ ರಾತ್ರಿ, ಬೆಳಗಿನ ನಸುಕಿನ ಜಾವ ಎಂದರೂ ಸರಿ, ಇನ್ನೂ ಚಳಿಗಾಲದಲ್ಲಂತೂ ನನ್ನ ಪಾಡು ಬೇಡ. ನಮ್ಮದು ಚಹಾದ ಅಂಗಡಿಯ ವ್ಯಾಪಾರವಾದ್ದರಿಂದ ನಾಲ್ಕು ಜನ ಗಂಡಾಳುಗಳು ಇದ್ದರು ಒಬ್ಬರು ಕಂಠೆಪ್ಪ ಮ್ಯಾಗೇರಿ, ಅಬ್ದುಲ್ ಸಾಬ (ಗಿಡ್ಡಪ್ಪಣ್ಣ), ಇಮಾಮಸಾಬ (ಚಿಟ್ಟ್ಯಾ), ಇವರು ಮೂವರು ಮಾತ್ರ ಖಾಯಂ ಆಗಿ ಕೆಲಸಕ್ಕೆ ಬರುತ್ತೀದ್ದರೆ ನಾಲ್ಕನೇ ಆಸಾಮಿ ಆಟಕ್ಕುಂಟು ಲೆಕ್ಕಕ್ಕಿದ್ದಿಲ್ಲ ಹೀಗಾಗಿ ಅವನ ಹೆಸರು ಅಷ್ಟೊಂದು ನೆನಪಿನಂಗಳದಲ್ಲಿ ಉಳಿದಿಲ್ಲ. ಹೀಗೆ ನಾಲ್ಕು ಜನ ಇದ್ದರು ನನಗೆ ಹೊತ್ತಿಲ್ಲದ ಹೊತ್ತಿನಲ್ಲಿ ಬರುತ್ತಿದ್ದ ತಂಪಿಗೆ ಚುಟುಗಿ (ಬರೆ, ಸೀಮೆಎಣ್ಣೆಯ ಚಿಕ್ಕ ಚಿಮಣಿಯಲ್ಲಿ ಸೂಜಿಯನ್ನು ಕಾಯಿಸಿ, ಎರಡು ಹುಬ್ಬುಗಳ ಮಧ್ಯದಲ್ಲಿ ಇಲ್ಲವೆ ಹೊಕ್ಕಳಿನ ಕೆಳಗಡೆ ಎರಡು ಬರೆಯನ್ನು ಹಾಕುತ್ತಿದ್ದರು)ಯನ್ನು ಹಾಕಿಸಿಕೊಂಡು ಬರಲು ಕಂಠೇಪ್ಪಜ್ಜ ನನ್ನನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಹೋಗಿ ಚುಟುಗಿಯನ್ನು ಹಾಕಿಸಿಕೊಂಡು ಬರುತ್ತಿದ್ದನು. ಅದನ್ನು ಹಾಕುವಾಗ ನರಕಯಾತನೆ ಇಬ್ಬರಿಗೂ ಹಸುಗೊಳ್ಳದಂತೆ(ಹಿಡಿದುಕೊಳ್ಳಲಾಗದಂತೆ) ಒದ್ದಾಡಿ ಬಿಡುತ್ತಿದ್ದೆ..; ಹೀಗಾದರೂ ಬಿಡುತ್ತಿದ್ದಲ್ಲ ಕಂಠೇಪ್ಪಜ್ಜ ಎರಡು ಕೈ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬರೆಯನ್ನು ಹಾಕಿಸಿಕೊಂಡು ಬರುತ್ತಿದ್ದ. ವರುಷ ಕಳೆಯಿತು ಬರೆಯನ್ನು ಹಾಕುವವನಿಗೂ, ಹಾಕಿಸಿಕೊಂಡು ಬರುವವನಿಗೂ, ಹಾಕಿಸಿಕೊಳ್ಳುವವನಿಗೂ ಸಾಕು ಸಾಕಾಗಿ ಹೋಗಿತ್ತು. ಇಂತಹ ಸಂದರ್ಭದಲ್ಲಿ ನಮ್ಮ ಚಹಾದಂಗಡಿ ಚಹಾ ಕುಡಿಯಲು ಬಂದಂತಹ ಒಬ್ಬ ಮುದುಕ 'ಈ ಹುಡುಗ್ಗ ಜರದಾ ತಂಬಾಕನ್ನ ಸಣ್ಣಗೆ ಅರೆದು, ನೀರಿನಲ್ಲಿ ಹಾಕಿ ಕಲಿಸಿ ಕುಡಿಸಿಬಿಡಿ ಎಲ್ಲಾ ಪಿತ್ತ ಹೊರಗಡೆ ಕಿತ್ಗೊಂಡ ಬರತದ' ಎಂದು ಸಲಹೆಯನ್ನು ನೀಡಿದ. ಬಹುಶಃ ಆ ದೇವರು ನಮ್ಮ ಮೂವರ ಕಷ್ಟವನ್ನು ನೋಡಲಾಗದೆ ಇವನನ್ನು ಕಳಿಸಿಕೊಟ್ಟಿರಬೇಕು. ಅಂದು ಸಂಜೆ ಅಜ್ಜಿ ಶ್ಯಾವಂತ್ರಮ್ಮ ತನ್ನ ಕೆಂಚಿಯೊಳಗಿಂದ ನರಸಿಂಗಸಾ ತಂಬಾಕನ್ನು ತೆಗೆದು ಕಂಠೇಪ್ಪಜ್ಜನ ಕೈಗೆಕೊಟ್ಟು ಸಣ್ಣಗೆ ಅರಿಸಿ ಒಂದು ಲೋಟ ನೀರಿನಲ್ಲಿ ಹಾಕಿಕೊಂಡಿಟ್ಟುಕೊಂಡು, ನನ್ನನ್ನು ತನ್ನ ಪಕ್ಕದಲ್ಲಿ ಕುರಿಸಿಕೊಂಡು 'ನೋಡಪ್ಪಿ ಇದನ್ನ ಕುಡದೆಂತಂದ್ರ ನಿಂಗ ಹೊಳ್ಳ-ಮುಳ್ಳ (ಪದೇ ಪದೇ) ಚುಟಗಿ ಹಾಕಿಸೋದ ತಪ್ಪತ್ತಂತ ಕುಡಿತೀಯಾ ಇದನ್ನ' ತಲೆಮೇಲೆ ನೇವರಿಸುತ್ತ ಬಹಳಷ್ಟು ನೊಂದುಕೊಂಡು ಕೇಳಿಕೊಂಡಿದ್ದಳು. ನೋವು-ನಲಿವುಗಳನ್ನು ಅಳೆದು ತೂಗಿ ನೋಡುವಂತಹ ವಯಸ್ಸೇನಲ್ಲ ನಂದು, ಕಾರಣವಿಷ್ಟೇ.. ಅ ಹಿರಿಜೀವ ಅಷ್ಟೊಂದು ನೊಂದುಕೊಂಡು ಯಾಕೆ ಮಾತನಾಡುತ್ತಿದ್ದಳೆಂದರೆ, ಅಜ್ಜಿಗೆ ಅಪ್ಪನೊಬ್ಬನೆ ಮಗ, ಆತನಿಗೆ ಸತತ ಒಂದರ ಮೇಲೊಂದರಂತೆ ಎರಡು ಹೆಣ್ಣು ಮಕ್ಕಳು ಹುಟ್ಟಿದ ತಿಂಗಳಲ್ಲಿ ಅಸುನೀಗಿದ್ದವು!, ಮತ್ತೇರಡು ಹೆಣ್ಣು ಮಕ್ಕಳ ನಂತರ ಕಲಬುರ್ಗಿಯ ಶರಣಬಸಪ್ಪನಲ್ಲಿ ಗಂಡು ಮಗುವಿಗಾಗಿ ಹರಕೆಯನ್ನು ಹೊತ್ತು ಐದನೇ ಮಗುವಾಗಿ ಅದು  ವಂಶವನ್ನು ಬೆಳಗುವ ಮೊದಲನೇ ಗಂಡು ಮಗುವಾಗಿ ನನ್ನ ಜನನವಾದ್ದರಿಂದ ಹಾಗೂ ನಾನು ಸ್ವಲ್ಪ ಮೆದುಕಲು (ಮೆತ್ತಗೆ) ಇದ್ದುದರಿಂದ ಅಜ್ಜಿ ಅಷ್ಟೊಂದು ಸಂಕಟಗೊಳಪಟ್ಟಿದ್ದಳು. ಅಜ್ಜಿಯ ಮಾತಿಗೆ ಮರುಮಾತನಾಡದೆ ಹ್ಞೂಂ... ಎಂದು ಆ ತಂಬಾಕು ಮಿಶ್ರಣದ ಗ್ಲಾಸನ್ನು ಹಿಡಿದುಕೊಂಡು ಹೊರಬಂದು, ಅಜ್ಜಿಯ ಮುಖವನ್ನೊಮ್ಮೆ ನೋಡಿ ಕಣ್ಮುಚ್ಚಿಕೊಂಡು ಒಂದೇ ಗುಟುಕಿಗೆ ಕುಡಿದುಬಿಟ್ಡೆ... ಅಷ್ಟೇ ಎರಡು ನಿಮಿಷ ಕೂಡ‌ ಆಗಿರಲಿಲ್ಲ ಹೊಟ್ಟೆಯಲ್ಲಿ ಏನೋ ಕಲಿಸಿದಂತಾಗಿ, ತಲೆಯಲ್ಲ ತೂರಾಡಿದಂತಾಗಿ ವ್ಯಾ....ಕ ಅಂತ ಒಂದು ಸಲ ಹೀಗೆ ವಾಂತ ಮಾಡಿದೆ ಹೊಟ್ಟೆಯೊಳಗಿನ ಕಲ್ಮಶ, ಎದೆಯೊಳಗೆ ಕಟ್ಟಿಕೊಂಡಿದ್ದಂತಹ ಹಚ್ಚನೆಯ ಕಫವೆಲ್ಲ ಒಂದೆ ಏಟಿಗೆ ಹೊರಬಿದ್ದಿತ್ತು, ಎರಡು ಮೂರು ಸಲ ವಾಂತಿಯನ್ನು ಮಾಡಿದಾಗ ಸಮಾಧಾನವಾಯಿತು, ಆ ರಾತ್ರಿ ಒಂದು ಲೋಟ ಹಾಲನ್ನು ಕುಡಿದು ಮಲಗಿದ್ದೆನಷ್ಟೇ, ಮರು ದಿವಸದಿಂದ ಹೊಸದೊಂದು ಬೆಳಕು ಮೂಡಿತ್ತು, ಹೊತ್ತಿಲ್ಲದ ಹೊತ್ರಿನಲ್ಲಿ ಕಾಡುತ್ತಿದ್ಸ ತಂಪು ಮಾಯವಾಗಿ ಹೋಗಿ‌ ಮತ್ತೆಂದು ಹತ್ತಿರ ಸುಳಿಯಲೆ ಇಲ್ಲ...

ಕಜಲ್

ಏಕೆ ಹಚ್ಚಿಟ್ಟುಕೊಂಡಿರುವೆ..
ದೀಪವನ್ನು ಸುಮ್ಮನೇ...!!
ಕತ್ತಲು.... ಕಾಲಕಾಲಾಂತರದ್ದು
ಇದೊಂದು ರಾತ್ರಿಗೆ ಸುಟ್ಟು ಹೋಗಿ
ಬಿಡುವುದೇನೆ..!?
ಸಾಕಿ....
ಬೆತ್ತಲೆ ಬಯಲು, ಬಾನು
ಬೇಕಿದ್ದರೆ ದೇಹಗಳನ್ನು ಕಾಣಬಹುದು..!
ಮನಸ್ಸುಗಳನ್ನೆಂದಾದರೂ
ಕಂಡಿರುವೇಯೇನು?

ಯಾರ ಎದೆಯಲ್ಲಿ ಪ್ರೀತಿಯ
ಬಳ್ಳಿಯನ್ನು ನೆಡಲಿ..!!
ಯಾವ ದಿಕ್ಕಿಗೆ ಒಲವ 
ಸುಧೆಯನ್ನು ಹರಿಸಲಿ...!!??
ಸಾಕಿ...
ಎಲ್ಲರೆದೆಯಲ್ಲೂ ಗೋರಿಗಳೆ
ಬಾಯ್ತೆರೆದು ಕುಳಿತಿವೆ,
ಮತ್ತೊಬ್ಬರನ್ನು ನುಂಗಿ ಹಾಕಲು!
ಯಾವ ತಿರುವಿನಲ್ಲೂ ದಾಹಿಗಳಿಲ್ಲ!!
ಕತ್ತಿಯ ಮಸೆಯುತ್ತ ನಿಂತಿಹರು
ರಕ್ತದ ಕೊಡಿಯನ್ನೆ ಹರಿಸಲು..!!

ಅರಮನೆಯನ್ನು ಬಿಡು, ಪುಟ್ಟ
ಗುಡಿಸಲನ್ನು ಕಟ್ಟಿಕೊಳ್ಳಲು ಜಾಗವಿಲ್ಲವಿಲ್ಲಿ!
ಊರ ಒಳ-ಹೊರಗೆ, ಕೆರೆ- ಬಾವಿಗಳ ತುಂಬಾ
ದೊಡ್ಡವರ ಹೆಜ್ಜೆ ಗುರುತುಗಳೆ..
ಸಾಕಿ....
ಬರೆದು ಕೊಟ್ಟ ಪುಟಗಳ ಕೆಳಗೆ, ಬಣ್ಣದ ಹಾಳೆಗಳನ್ನು
ಕೊಟ್ಟರಷ್ಟೆ ಇಲ್ಲಿ ಉಸಿರಾಟ..!!
ವಾಹನ ದಟ್ಟಣೆಯ ಸದ್ದಿನಲ್ಲಿ ಯಾರಿಗೆ
ಕೇಳುವುದು ಹೇಳು ನಮ್ಮಂಥ ಬಡಪಾಯಿಗಳ 
ನರಳಾಟ!!

ಹಜ


ಬೇಸಿಗೆಯಾದ್ದರಿಂದ ಪಡಸಾಲೆಯಲ್ಲಿ ಹಾಕಿದ್ದ ಫ್ಯಾನು ಗುರ್.. ಗುರ್.. ಎಂದು ಸದ್ದು ಮಾಡುತ್ತ ತನ್ನ ಕೆಳಗಿದ್ದವರ ತಲೆ ಮತ್ತು ಮೈಯನ್ನು ತಂಪು ಮಾಡಲು ಹರಸಾಹಸಗೈಯ್ಯುತ್ತಿತ್ತು. ಅಲ್ಲಿ ಕುಳಿತವರಲ್ಲಿ ಕೆಲವರು ಮೌನಕ್ಕೆ ಶರಣಾಗಿದ್ದರೆ, ಮತ್ತಿಷ್ಟು ಜನ ದುಗುಡದಲ್ಲಿದ್ದರು; ಇನ್ನೊಂದಿಷ್ಟು ಜನ ದರ್ಪ-ದೌಲತ್ತಿನ ಭಾವದಲ್ಲಿ ತೇಲಾಡುತ್ತಿದ್ದರು. "ಮತ್ತೇನೈತಪಾ ನೀಲಪ್ಪ, ನಿಮ್ಮಕ್ಕ ಅಂತೂ ಎಲ್ಲಾದಕ್ಕೂ ತಯಾರ ಆಗಿ ಬಂದಾಳ, ನಾವು ಹೇಳೊದ ಮುಗಿತು, ಕೇಳೊದ ಮುಗಿತು, ಒಟ್ಟನ್ಯಾಗ ಆಕಿ ಪಾಲಿಂದ ಆಸ್ತಿ ಕೊಟ್ರ ಸೈ ಅಂತಾಳಲ್ಲ " ತೊಡೆ ಮೇಲೆ ಹಾಕಿಕೊಂಡಿದ್ದ ಶಲ್ಯೆದಿಂದ ಮುಖ ಮತ್ತು ಕುತ್ತಿಗೆಯ ಸುತ್ತ ಬರುತ್ತಿದ್ದ ಬೆವರನ್ನು ಒರಿಸಿಕೊಳ್ಳುತ್ತಾ, ಎಡಕ್ಕೆ ಕುಳಿತುಕೊಂಡಿದ್ದಂತಹ ನೀಲಪ್ಪ ಮತ್ತವನ ಪರಿವಾರ ಹಾಗೂ ಅವನ ಬೆಂಬಲಿಗರ ಕಡೆ ನೋಡುತ್ತ ವಿಷಾದದ ಧ್ವನಿಯಲ್ಲಿ ಕೇಳಿದನು. ಈ ಪ್ರಶ್ನೆಗೆ ನೀಲಪ್ಪ ಎದುರುಗಡೆ ಕುಳಿತಿದ್ದ ಅಕ್ಕ ಬಸವ್ವಳನ್ನು ನೋಡಿದನು. ಬಸವ್ವ ಮೂಗನ್ನು ಮುರಿಯುತ್ತ ಮುಖವನ್ನು ಅತ್ತಕಡೆ ಮಾಡಿಕೊಂಡಳು. ಬಸವ್ವ ಮತ್ತು ನೀಲಪ್ಪ ತಂದೆಗೆ ಇಬ್ಬರೆ ಮಕ್ಕಳಾದರೂ... ಅಂತ ಹೇಳಿಕೊಳ್ಳುವ ಆಸ್ತಿಯೇನಿರಲಿಲ್ಲ ನಾಲ್ಕು ಎಕರೆ ತೋಟ ಎರಡಂಕಣದ ಮನೆ ಬಿಟ್ಟರೆ ಇನ್ನೇನು ಇದ್ದಿಲ್ಲ...

"ನೋಡ್ರಿ ಸಾವಕಾರ್ರೆ ಈಗ ನಾವಿರೊ ಪರಿಸ್ಥಿತಿಯೊಳಗ ಹತ್ತ ಹೆಣ್ಣ ಮಕ್ಕಳು ಇದ್ರುನೂ ಮದುವಿ ಮಾಡಿ ಕೊಡಾಕ ಬರತೈತ್ರಿ ಆದ್ರ ನಂಗ ಇರೋದು ಎರಡು ಗಂಡ ಮಕ್ಕಳ ರೀ..
ಇವತ್ತ ಯಾ.. ಊರಿಗೆರ ಹೋಗ್ರಿ, ಕೆರಿಗರ ಹೋಗ್ರಿ ಅಷ್ಟ ಯಾಕ್ರೀ ಒಬ್ಬ ಭಿಕ್ಷೆ ಬೆಡಿಕೊಂಡ ತಿನ್ನೊನ ಮನಿಗೆ ಹೆಣ್ಣ ಕೇಳಾಕ ಹೋದ್ರ, ಹೋದರ ಇನ್ನೊಂದ ಲಕ್ಷ ಹೆಚ್ಚಗಿ ಹೋಗುವಲ್ದಾಕ ನನ್ನ ಮಗಳನ್ನ ಒಕ್ಕಲತನದ ಮನಿಗೆ ಕೊಡೊದಿಲ್ಲ ಅಂತಾರ ರಿ.. ಮೂಲಿಮನಿ ಶಂಕ್ರಪ್ಪಗ ಏನ ಕಡಿಮಿ ಆಗೈತ್ರಿ ಇಪ್ಪತ್ತ ಎಕರೆ ತೋಟ, ಮೂವತ್ತೆರಡ ಎಕರೆ ಎರೆ ಹೊಲ, ದೆವ್ವನಂತ ಮನಿ, ಎರಡು ಕಾರು ಒಂದು ಟ್ರ್ಯಾಕ್ಟರ್, ಮೂರು ಮೋಟರ್ ಬೈಕು, ಮನಿತುಂಬ ಆಳು-ಕಾಳು ಇಷ್ಟಿದ್ದು ಅವನ ಒಬ್ಬ ಒಬ್ಬ ಮಗನಿಗೆ ಕನ್ಯೆ ಸಿಗುವಲದ್ದ ಆಗೈತ್ರಿ ಇಂತಾದ್ರಾಗ ನಮ್ಮ ಮಕ್ಕಳನ್ನ ಯಾರ ಕಣ್ಣೆತ್ತಿ ನೋಡಬೇಕ್ರಿ, ಜಗ್ಗಷ್ಟು (ಸಾಕಷ್ಟು) ಓದಿಸಿ ನೌಕರಿ ಕೊಡ್ಸಬೇಕಂತಂದ್ರ ನಮ್ಮ ಜಾತಿಗೆ ಅದೇನ ಪರಸೆಂಟೆಜ ಸಾಲೊದಿಲ್ಲಂತ, ಮೊನ್ನೆ ಕೆರಿಯಾನ ಹನಮನ ಮಗ ನನ್ನ ಸಣ್ಣ ಮಗನಗಿಂತ ಮಾರಕಸ್ಸು ಕಮ್ಮಿ ತಗೊಂಡಾನ ಹಾಗಿದ್ರುನು ಅವಂಗ ರೋಣದಾಗ ಫ್ರೀ ಹಾಸ್ಟೆಲ್ ಸಿಕ್ಕೈತಿ ನಮಗ ಅದರ ಗೇಟ್ ನೋಡೊ ಭಾಗ್ಯಾನು ಇಲ್ದಂಗ ಆಗೈತಿ
ಇಷ್ಟೇಲ್ಲಾ ರಗಳಿಯೊಳಗ ನಂಗೂ ಅರ್ಧ ಪಾಲು ಕೊಡು ಅಂತಂದ ಕೇಳಿದ್ರ ನಾನೆಲ್ಲಿಗೆ ಹೋಗಲ್ರೀ " ಕೈ ಮುಗಿದು ಮುಂದುವರೆಯುತ್ತಾ " ಅಲ್ಲ ಅವರಿಗೇನು ಉಣ್ಣಾಕ ಕಮ್ಯಾ (ಕಡಿಮೆ) ಉಡ-ತೊಡಾಕ ಕಮ್ಯಾ, ಇರೊ ಮೂರ ಮಂದಿಗೆ ಮೂರು ಮನಿ ಅದಾವು ಎರಡ ಬಾಡಿಗೆ ಕೊಟ್ಟಾರ, ಮನಿ ಹೊಲದಿಂದ ಕಾಳು - ಕಡಿ ಬರತಾವು, ನಾಕೈದು ಅಂಗಡಿ ಬಾಡಿಗೆ ನಡಿತಾವು, ಊರ ತುಂಬಾ ಬಡ್ಡಿ ಸಾಲ ಕೊಟ್ಟಾರ ಇಷ್ಟು ಸಾಲದ್ದಂತ ಈ ಬಡವನ ಗಂಗಾಳದ ಮ್ಯಾಲ ಯಾಕ ಕಣ್ಣ ಬಿತ್ತೊ ನಮ್ಮವ್ವ.. '' ದೈನ್ಯತೆಯಿಂದ ಅಕ್ಕನನ್ನ ದಿಟ್ಟಿಸಿತ್ತಾ ನಿಂತನು.

"ಆವಾಗಿಂದ ಬ್ಯಾರೆ ಈಗಿಂದ ಬ್ಯಾರೆ, ಅವಾಗೇನ ಮೂರ ಕಾಸಿನ ಕಿಮ್ಮತ್ತ ಇದ್ದಿಲ್ಲ ಭೂಮಿಗೆ ಈಗ ಹಂಗಲ್ಲ ಬಂಗಾರ.. ಬಂಗಾರದ ರೇಟ್ ಅಗೈತೆ ಗೊತ್ತನು..ಇನ್ನ ರೊಕ್ಕ ಕೊಟ್ರ ಬಂಗಾರರ ಸಿಗತೈತಿ, ಭೂಮಿ ಸಿಗೋದಿಲ್ಲ ಗೊತ್ತೈತನು. ಊರಿಂದ ಎಡವಿ ಬಿದ್ರ ತೋಟ ಐತಿ ಎರಡ ಎಕರೆ ಎನ್. ಎ. 
ಮಾಡ್ಸಿದ್ರ ನಲವತ್ತ ಮನಿ ಕುಂದ್ರತಾವು, ಒಂದೊಂದಕ್ಕ ಆರು - ಎಂಟು ಲಕ್ಷ ಅಂತಂದ್ರ ಹತ್ರ ಹತ್ರ ಮೂರ ಕೋಟಿ ಸನೇಕ ರೊಕ್ಕ ಕೂಡತೈತಿ ಎಲ್ಲ ಖರ್ಚ ತಗದ ಏನಿಲ್ಲ ಅಂತಂದ್ರು ಎರಡು ಐವತ್ತರ ಉಳಿತೈತಿ ಇದೇನ ಸಣ್ಣ ರೊಕ್ಕ ಅತನ ಮತ್ತ
ನೀನು ಏಳಲ್ಲ ಹದಿನಾಕ ಜನ್ಮ ಎತ್ತಿ ಬರಬೇಕು ಇಷ್ಟ ರೊಕ್ಕ ದುಡದ ಗಳಿಸಬೇಕಂದ್ರ.." ಕಣ್ಣುಗಳನ್ನು ಕಾಸಗಲ ಮಾಡಿಕೊಂಡು ಆಸೆ ಕಂಗಳಿಂದ ತಮ್ಮನನ್ನು ನುಂಗುವ ಹಾಗೆ ನೋಡತೊಡಗಿದಳು.


Sunday, May 21, 2023

ಮು


'ಕಥೆ' ಈ ಒಂದು ಶಬ್ದ ಬಾಲ್ಯದಿಂದಲೂ ನನಗೆ ಬಹಳಷ್ಟು ಅಪ್ಯಾಯಮಾನವಾದಂತಹದ್ದು ಒಂದು ರೀತಿಯಲ್ಲಿ ಇಲ್ಲಿಯವರೆಗೂ ಜೀವಾಮೃತವನ್ನೆ ಉಣಿಸಿಕೊಂಡೆ ಬಂದಿದೆ ಎನ್ನಬಹುದು ಅಷ್ಟರಮಟ್ಟಿಗೆ ನನ್ನನ್ನು ಆವರಿಸಿಕೊಂಡಂತಹ ಭಾವ; ನಮ್ಮ ಮನೆಯಲ್ಲಿ ಅಷ್ಟೇ ಏನು, ನಮ್ಮ ವಂಶಸ್ಥರಲ್ಲಾಗಲಿ, ದೂರದೂರದ ಸಂಬಂದಗಳಲ್ಲಾಗಲಿ ಯಾರೆಂದರೆ ಯಾರೊಬ್ಬರಿಗೂ ಸಾಹಿತ್ಯದ ಗಂಧ-ಗಾಳಿ ಗೊತ್ತಿರಲಿಲ್ಲ!. ಕೆಲವು ಹಿರೀಕರು ಹೊಟ್ಟೆಪಾಡಿಗಾಗಿ ಹುಟ್ಟೂರನ್ನು ಬಿಟ್ಟು ಹೋದ ಹಾಗೆ ನಮ್ಮ ಹಿರಿಯರು ಹೊಟ್ಟೆ ಪಾಡಿಗಾಗಿಯೆ ಹಳ್ಳಿಯನ್ನು ಬಿಟ್ಟು ಊರೂರು ಅಲೆದು ಗಜೇಂದ್ರಗಡದಲ್ಲಿ ನೆಲೆಯೂರಲು ಆಯ್ಕೆ ಮಾಡಿಕೊಂಡ ಕೆಲಸವೆಂದರೆ ಚಹಾದಂಗಡಿ. ಅಪ್ಪ-ಅವ್ವ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಎಂಟರವರೆಗೂ ಬಿಡುವಿರದೆ ದುಡಿಯುತ್ತಿದ್ದರು ನಾವೊ ಉಂಡಿದ್ದು-ಆಡಿದ್ದು ಸರಿ. ಓದಿದ್ದು?- ಬರೆದಿದ್ದು? ಇಲ್ಲಿಯೆ ನೋಡಿ ದೊಡ್ಡ ಸಮಸ್ಯೆ. ಮನೆಯಲ್ಲಿ ಬೇರೆ ಯಾರು ವಿದ್ಯಾವಂತರಿರಲಿಲ್ಲ ಏನು ಬರೆದೆ? ಏನು ಓದಿದೆ?, ಮುಂದಿನ ಭವಿಷ್ಯವೇನು? ಇಂತಹುದನೆಲ್ಲ ವಿಚಾರಿಸಿ, ಸರಿದಾರಿಗೆ ಅಂದರೆ ನೌಕರಿ ಸೇರಲು/ತನ್ನ ಕಾಲಿನ ಮೇಲೆ ತಾನು ನಿಂತು ದುಡಿಯುವಂತಹ ಕೌಶಲ್ಯ ತರಬೇತಿಯ ಯಾವ ಯಾವ ಕೋರ್ಸ್‌ಗಳನ್ನು ಮಾಡಬೇಕು ಮತ್ತು ಹೇಗೆ ಪರೀಕ್ಷೆಗಳನ್ನು ಎದುರಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಹೇಳುವರಾರು ಇರಲಿಲ್ಲ ಹೀಗಾಗಿ ಈ 'ಕಥೆ'' ಎನ್ನುವ ಪದ ಆಗ ನನ್ನನ್ನು ಬಹಳಷ್ಟು ಆಳವಾಗಿ... ಅಂದರೆ ಹೇಗೆ ಹೇಳಬೇಕೆಂದರೆ ಅಕ್ಕಮಹಾದೇವಿಯ ಎದೆಯಾಳದಲ್ಲಿ ಬೇರೂರಿದ ಚೆನ್ನಮಲ್ಲಿಕಾರ್ಜುನನಂತೆ ಈ ವಿಷಯವು ಬೇರೂರಿಬಿಟ್ಟಿತು. ಮುಖ್ಯವಾಗಿ ಆಗೆಲ್ಲ ನನ್ನನ್ನು ಚಹಾದಂಗಡಿಯ ಹುಡುಗನೆಂದೆ ಗುರುತಿಸುತ್ತಿದ್ದರು. ಈ ಗುರುತಿಸುವಿಕೆಯಿಂದಾಗಿ ನನ್ನೊಳಗೆ ಒಂಥರಾ ಯಾರಲ್ಲೂ ಹೇಳಿಕೊಳ್ಳಲಾರದಂತಹ ಕಸಿವಿಸಿ, ಸಂಕಟವಾಗುತ್ತಿತ್ತು. ಇದರಿಂದ ಹೊರಬರಲು ಪಟ್ಟ ಹಲವಾರು ಪ್ರಯತ್ನಗಳಲ್ಲಿ ಇದು ಒಂದು. ಆದರೆ ಬೆಳೆಯುತ್ತ.. ಬೆಳೆಯುತ್ತ ಬಂದಂತೆಲ್ಲ ಬದುಕಿಗೆ ಕೀಳರಿಮೆ, ಅಹಸ್ಯವೇನಿಸುವಿಕೆ, ಗುರುತಿಸುವುದಿರುವಿಕೆ ಇವೆಲ್ಲದಕ್ಕೂ ಮೀಗಿಲಾಗಿ ಹಸಿವೊಂದಿತ್ತು... ಬಾಳಿನ ಹಸಿವು ಎಲ್ಲವನ್ನು ಕಸಿದುಕೊಂಡುಬಿಟ್ಟಿತ್ತು, ಅದರಲ್ಲೂ ನಮ್ಮ ಗಜೇಂದ್ರಗಡದಂತಹ ವಾಣಿಜ್ಯ ನಗರದಲ್ಲಿ ಕಲೆ-ಸಾಹಿತ್ಯ-ಸಾಂಸ್ಕೃತಿಕ ವಿಷಯಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಡುತ್ತಿರಲಿಲ್ಲ ಶಾಲೆಯ ಗೋಡೆಯ ಮೇಲೆ ನೀತಿ ಕಥೆಯ ಹೇಳುವ ತೈಲವರ್ಣ ಚಿತ್ರಗಳು, ಜಾಲಿಹಾಳ ಸರ್ ಕೈಯಲ್ಲಿ ಆಕಳದ ಗೆಜ್ಜೆಯನ್ನು ಕಟ್ಟಿ, ತಾಳಕ್ಕೆ ತಕ್ಕಂತೆ ಟೇಬಲ್ ಗೆ ಕುಟ್ಟುತ್ತಾ 'ಧರಣಿ ಮಂಡಲ ಮಧ್ಯದೊಳಗೆ' ಎಂಬ ಹಾಡನ್ನು ಮಣ್ಣಿನಲ್ಲಿ ಮಣ್ಣಾಗುವವರೆಗೂ ಎದೆಯಲ್ಲಿ ಜೀವಂತಿಕೆಯಿಂದ ತುಳುಕುವಂತೆ ಹಾಡಿ- ಹಾಡಿಸಿದ ಜನಪದ ಗೀತೆ ಅಲ್ಲದೆ ಟೋಪಿ ಮಾರುವವ ಮತ್ತು ಮಂಗ, ಮೊಸಳೆ ಮತ್ತು ಮಂಗ, ಬೆಕ್ಕು ಮತ್ತು ಮಂಗ, ಹಾಲು ಮಾರುವವ, ಮೊಲ ಮತ್ತು ಆಮೆ ಹೀಗೆ ಹತ್ತು ಹಲವಾರು ಕಥೆಗಳು ಬದುಕಿಗೆ ಬೇಕಾದಂತಹ ನೈತಿಕತೆ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಲು, ಮಾರ್ಗದರ್ಶಕವಾಗಿಯೂ ಪ್ರೇರಣೆಯಾಗಿದ್ದವು.

  ಇದೀಷ್ಟು ಪೀಠಿಕೆಯನ್ನು ಏಕೆ ಕೊಟ್ಟೆನೆಂದರೆ, ಈಗ ರಾಶಿ ರಾಶಿಗಟ್ಟಲೆ ಹರಿದು ಬರುತ್ತಿರುವ ಸಾಹಿತ್ಯದಲ್ಲಿ ಏನಿದೆ? ಓದಿದರೆ ಏನು ಪ್ರಯೋಜನವಿದೆ? ಯಾವ ದಿಕ್ಕಿನಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ? ನಮ್ಮೊಳಗೆ ಯಾವ ಮೌಲ್ಯವನ್ನು ಕಟ್ಟಿಕೊಡುತ್ತದೆ? ಸಮಾಜದಲ್ಲಿ ಬದುಕಲು ಹೇಗೆ ಪ್ರೇರಿಪಿಸುತ್ತದೆ? ಬದುಕಿಗೊಬ್ಬ ಮಾದರಿ ಮನುಷ್ಯನನ್ನಾಗಿಸಿ ರೂಪಗೊಳಿಸಲು ಎಷ್ಟೊಂದು ಬಲವನ್ನು ತುಂಬುತ್ತದೆ? ಒಂದೇ... ಎರಡೇ... ಹೀಗೆ ಕೆದಕುತ್ತಾ ಹೋದಂತೆ ನಮಗೆ ನಿರಾಶೆ ಭಾವವೊಂದನ್ನು ಬಿಟ್ಟು ಮತ್ತಿನ್ನೇನು ದೊರಕದು. ಪದಕ್ಕೆ ಪದ ಪೋಣಿಸಿ ಕವಿತೆಯೆಂದರು, ಸಾಲಿಗೆ ಸಾಲು ಸೇರಿಸಿ ಕಥೆ ಎಂದರು, ಪುಟಕ್ಕೆ-ಪುಟ ಜೋಡಿಸಿ ಕಾದಂಬರಿ ಎಂದರು, ಸರಿ ಎಂದರು ಹಿಂಬಾಲಕರು, ಬಹುಪರಾಕ್ ಹಾಕಿದರು ಬಾಯಿ ಬಡುಕರು. ಇಂತಹ ಪುಸ್ತಕಗಳಿಂದ/ವಿಷಯಗಳಿಂದ  ಸ್ವಾಭಿಮಾನವಿಲ್ಲದ ಓದುಗರನ್ನು ಸೃಷ್ಟಿಸುತ್ತಾ ಸಾಗುತ್ತಿದ್ದೇವೆ.
ಹೀಗಾದರೆ.. ಮುಂದಿನ ಪೀಳಿಗೆ ನಮ್ಮನ್ನು ಬಿಡಿ ಬೇಂದ್ರೆ-ಕುವೆಂಪು ಅಂಥವರನ್ನೆ ಮರೆತುಬಿಡುತ್ತಾರೆ. ನಮ್ಮ ಓದು ಮತ್ತು ಬರಹ ಇಂದಿನ ವಾಸ್ತವಿಕತೆಯನ್ನು ಮುಂದಿನ ತಲೆಮಾರಿಗೆ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುವಂತಹ ವಿಷಯವಾಗಿರಬೇಕು, ಓದುಗ ಪುಸ್ತಕವನ್ನು ಓದುತ್ತಾ ಹೋದಂತೆ ಮಗ್ನನಾಗಬೇಕು, ಭಾವಪರವಶಗೊಳ್ಳಬೇಕು, ಅಳಬೇಕು, ನಗಬೇಕು, ಉತ್ಸಾಹಿತನಾಗಿ ಆ ಕಥೆಯ/ಕಾದಂಬರಿಯ ನಾಯಕ/ಕಿಯು ಅವನ ಬದುಕಿನಲ್ಲಿ ತಿರುವನ್ನು ತಂದುಕೊಡಬೇಕು, ಕಾಡುಮೃಗದಂತಹ ಮನಸ್ಸಿನವರು ಹೂವಾಗಿ ಅರಳಬೇಕು, ಹುಟ್ಟುತ್ತಾ ಯಾರು ಒಳ್ಳೆಯವರು ಆಗಿರುವುದಿಲ್ಲ, ಕೆಟ್ಟವರು ಆಗಿರುವುದಿಲ್ಲ ಕಾಲ, ಸಮಯ, ಸಂದರ್ಭಗಳು ಒಳ್ಳೆಯವನನ್ನು - ಕೆಟ್ಟವನನ್ನಾಗಿಸುತ್ತದೆ, ಕಟುಕರನ್ನು- ಸಾಧುವಿರಂತೆ ಮಾಡುತ್ತವೆ. ಹಾಗಂತ ನಾವು ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಈ ಭೂಮಿಯಲ್ಲಿ ಹುಟ್ಟಿದಂತಹ ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ದಿನ ಒಂದು ತಿರುವು ಬಂದೆ ಬರುತ್ತದೆ ಆ ತಿರುವನ್ನು ಹೇಗೆ ತನಗೆ ಲಾಭವನ್ನಾಗಿಸಿಕೊಂಡೊ/ಬಳಸಿಕೊಳ್ಳುತ್ತಾನೋ ಅದರ ಮೇಲೆ ಅವನ ಮುಂದಿನ ಭವಿಷ್ಯ ನಿರ್ಧಾರಗೊಳ್ಳುತ್ತದೆ.
ಬರಹ ಸಮಾಜಕ್ಕೆ ಹೊರೆಯಾಗದೆ ಓದುಗನ ಅಂತಃಕರಣವನ್ನು ಜಾಗೃತಿಗೊಳಿಸಿದರೆ ಸಾಕು! ಅರ್ಧ ಊರು, ದೇಶ ನಿಶ್ಚಿಂತೆಯಿಂದ ಉಸಿರಾಡಿದಂತೆ.

ಬದುಕು ಹೇಗೆ? ಯಾವಾಗ? ಎಲ್ಲಿಗೆ ತಂದು ನಿಲ್ಲಿಸುತ್ತದೇಯೊ ಅರಿವಾಗುವುದೇ ಇಲ್ಲ! ಎರಡು ಸಾಲುಗಳನ್ನು ಬರೆಯುತ್ತಿದ್ದವನನ್ನು ಧೀರ್ಘ ಕವನ, ಚುಟುಕು, ಕಾದಂಬರಿ, ಶಾಯರಿ, ಕಜಲ್ ಗಳನ್ನು ಬರೆಯುವಂತೆ ಪ್ರೇರೆಪಿಸಿದ ನಮ್ಮ ನಿಕಟಪೂರ್ವ ಕ.ಸಾ.ಪ.ದ ಸಾಹಿತ್ಯ ಬಳಗಕ್ಕೂ, ನಿಕಟಪೂರ್ವ ಅಧ್ಯಕ್ಷರು ಆದಂತಹ ಶ್ರೀಯುತ ಐ.ಎ.ರೇವಡಿ. ಶಿಕ್ಷಕರು ಇವರಿಗೆ ಮತ್ತು ಮುಖ್ಯವಾಗಿ ದಾರವಾಡದ ಮೌನಿ ಎಂ.‌ಧಾರವಾಡ ಇವರು ಮುಂಬೈನ ಡೊಂಬಿವಿಲಿಯಲ್ಲಿ ಆಯೋಜಿಸಿದ್ದಂತಹ ರಾಷ್ಟ್ರ ಮಟ್ಟದ ಕಥಾ ಸ್ಪರ್ಧೆಯಲ್ಲಿ ನನ್ನ ಚೊಚ್ಚಲ ಅಂದರೆ ಇದೆ ಸ್ಪರ್ಧೆಗಾಗಿ ಬರೆದಂತಹ ಮೊದಲ ಕಥೆ 'ಚಂದ್ರವ್ವ' ಕಥೆಗೆ ವಿಶೇಷ ಬಹುಮಾನವನ್ನು ನೀಡುವ ಮೂಲಕ ಮತ್ತಷ್ಟು ಕಥೆಗಳ‌ನ್ನು ಬರೆಯಲು ದಾರಿಮಾಡಿಕೊಟ್ಟರೆಂದರೆ ತಪ್ಪಾಗಲಾರದು ಹಾಗೂ ಗುರುರಾಜ್ ಎಲ್. ಶ್ರೀಮತಿ ಗೀತಾ ಶ್ರೀಧರ ಯಾಳಗಿ, ಚಂದ್ರಶೇಖರ ಮಾಡಲಗೇರಿ ಇನ್ನೂ ಹಲವರು ನನ್ನ ಕಥಾಯಾನಕ್ಕೆ ಸಾಥ ನೀಡಿದಂತವರಿಗೂ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ - ತಾಲೂಕ ಘಟಕ ಗಜೇಂದ್ರಗಡದ ಅಧ್ಯಕ್ಷರು - ಸದಸ್ಯರುಗಳಿಗೆಲ್ಲರಿಗೂ, ಮುಖಪುಟದ ಎಲ್ಲ ಸಹೃದಯರಿಗೂ ಈ ಅಕ್ಷರ ಬಡವನಿಂದ ಅನಂತ... ಅನಂತ.. ಪ್ರಣಾಮಗಳು.

ಆ ನು


"ಎಲ್ಲ ಬಲ್ಲವರಿಲ್ಲ,
ಬಲ್ಲವರು ಬಹಳಿಲ್ಲ,
ಸಾಹಿತ್ಯವೆಂಬುವುದು
ಎಲ್ಲರಿಗಿಲ್ಲ" ಎಂಬ ಸರ್ವಜ್ಞನ ನುಡಿಯಂತೆ ವೃತ್ತಿಯಿಂದ ವ್ಯಾಪಾರಸ್ಥರಾದರು ಪ್ರವೃತ್ತಿಯಿಂದ ಭಾವನಾ ಜೀವಿಯಾಗಿ ಸಾಹಿತ್ಯದತ್ತ ವಾಲಿರುವ ಅಪರೂಪದ ವ್ಯಕ್ತಿತ್ವ ಹೊಂದಿರುವಂತಹ ಶ್ರೀ ಶರಣಪ್ಪ ಕ.ಬೇವಿನಕಟ್ಟಿ ಇವರು  ನಿಷ್ಠುರ ಮಾತಿನ, ಮೃದು ಮನಸ್ಸಿನ ಹಾಗೂ ಜಾನಪದ ಶೈಲಿಯ ಕವನಗಳ ಬರೆಯುವಲ್ಲಿ ಇವರು ನಿಸ್ಸೀಮರು, ಪದಗಳ ಜೋಡಣೆಯ ಅಕ್ಕಸಾಲಿಗ, ಆಡು ಮಾತಿನ ಪದಗಳಿಂದಲೆ ಕವನ ಕಟ್ಟುವ ಕಲೆ ಇವರಿಗೆ ಕರತಲಾಮಲಕವಾಗಿದೆ. ಗಜೇಂದ್ರಗಡ ನಗರವು ಸುತ್ತಮುತ್ತಲಿನ ನಗರಗಳಾದಂತಹ ರೋಣ, ನರೇಗಲ್, ಯಲಬುರ್ಗಾ, ಗುಡೂರು, ಬೇಲೂರು ಇವೆಲ್ಲ ನಗರಗಳ ವ್ಯಾಪಾರಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿರುತ್ತದೆ ಇಂತಹ ವಾತಾವರಣದಲ್ಲಿದ್ದುಕೊಂಡು ಸ್ವತಃ ಒಬ್ಬ ವ್ಯಾಪಾರಸ್ಥರಾಗಿ, ರೈತರಾಗಿ, ಸಾಮಾಜಿಕವಾಗಿ  ಕ್ರಿಯಾಶೀಲವಾಗಿದ್ದುಕೊಂಡು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ ವಾಚನ, ಅಲ್ಲದೇ ನಾಡಿನ ಪ್ರತಿಷ್ಠಿತ ಸಾಹಿತ್ತಿಕ ಸಂಸ್ಥೆಗಳು ಆಯೋಜಿಸಿದಂತಹ ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆ, ಉಪನ್ಯಾಸ, ಅತಿಥಿಯಾಗಿ ಭಾಗವಹಿಸಿ ಊರ ಕೀರ್ತಿಯನ್ನು ನಾಡಿನಾದ್ಯಂತ ಪಸರಿಸಿದ್ದಾರಲ್ಲದೆ, ನಮ್ಮ ಗಜೇಂದ್ರಗಡ ನಗರದಲ್ಲಿ ನಡೆಸುತ್ತಿದ್ದಂತಹ ಮಹತ್ವಪೂರ್ಣ ವಾರದ ಸಾಹಿತ್ಯ ಚಿಂತನಾಗೋಷ್ಠಿಗಳಾದಂತಹ ೧೫೦, ೧೭೫, ೨೦೦ ವಾರಗಳ ಸಾಹಿತ್ಯ ಚಿಂತನಾಗೋಷ್ಠಿಗಳ ಸಂಭ್ರಮಾಚರಣೆಯ ಪ್ರಯುಕ್ತವಾಗಿ ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಮತ್ತು ಸಾಹಿತ್ಯ ಸಿರಿ ಎಂಬ ಪುಸ್ತಕ ಪ್ರಶಸ್ತಿಗಳ ಆಯ್ಕೆಯಲ್ಲಿ ಮುಖ್ಯ  ವಿಮರ್ಶಕರಾಗಿ ಯಾವುದೇ ಕಪ್ಪು ಚುಕ್ಕೆ ಬರದ ಹಾಗೆ ಕಾರ್ಯ ನಿರ್ವಹಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಈಗಾಗಲೇ ನಮ್ಮವ್ವ - ಅವಳೆದೆಯ ಮಾತುಗಳು ಕವನ ಸಂಕಲನ ಹಾಗೂ ನಿರ್ಣಯ - ಕಾದಂಬರಿ ಈಗ ಚಂದ್ರವ್ವ ಎಂಬ ಕಥಾ ಸಂಕಲನವನ್ನು ಹೊರತರುತ್ತಿರುವುದು ನಮಗೆಲ್ಲ ಅತೀವ ಸಂತೋಷವನ್ನುಂಟುಮಾಡಿದೆ. ಚಂದ್ರವ್ವ ಎಂಬ ಕಥೆಗೆ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ವಿಶೇಷ ಬಹುಮಾನವನ್ನು ಪಡೆದುಕೊಂಡು ಬಂದು ನಮ್ಮ ಕನ್ನಡ ಕಂಪನ್ನು ನಾಡಿನಾಚೆಗೂ ಪಸರಿಸಿದ ಚೈತನ್ಯವಿದು. ಐದುವರೆ ವರ್ಷಗಳ ಕಾಲ ನಮ್ಮೊಡಗೂಡಿ ಕನ್ನಡ ಸಾಹಿತ್ಯ ಪರಿಷತ್ತು ರೋಣ-ಗಜೇಂದ್ರಗಡ ತಾಲೂಕ ಘಟಕದ ಅವಿಭಾಜ್ಯ ಅಂಗವಾಗಿ ಕಾರ್ಯವನ್ನು ನಿರ್ವಹಿಸಿದ್ದು
ಈ ಕಥಾಸಂಕಲನದ ಮೂಲಕ ನಾಡು ಮೆಚ್ಚುವ ಅದ್ಭುತ ಕಥೆಗಾರನಾಗಿ ಸಾಹಿತ್ಯ ಲೋಕಕ್ಕೆ ಪರಿಚಿತವಾಗಿ ಅವರು ಊರಿನ ಅಭಿನವ ಬೇಂದ್ರೆಯಾಗಿ ಬೆಳೆಯಲಿ ಎಂಬುದೆ ನನ್ನ ಸದಾಶಯ.
.

ಹಜ

ಮಜ್ಜಿಗೆ ಕಡಿಯಾಕ ಕಡಗೋಲ.. ಬೇಕು
ಮನಸ್ಸ ತಣ್ಣಗಾಗಾಕ ಆಕಿವು ನಾಕ ಮಾತ ಸಾಕು!!
ಗ್ವಾಡಿ ಅಂದಮ್ಯಾಲ ಸುಣ್ಣ ಬಳಿಬೇಕು
ಬಯಲ ಸೀಮೆ ಹೆಣ್ಣಿನ ತುಟಿಗೆ ಬಣ್ಣ ಹಚ್ಚಬೇಕು!!

ಜೋಗ ನೋಡಾಕ ಅಷ್ಟ ದೂರ ಯಾಕ ಹೋಗಬೇಕು
ತುಳುಕೊ ಬಿಂದ್ಗಿ ಹೊತ್ಗೊಂಟ ಹೊಂಟವಳ ನಡು ನೋಡಿದ್ರ