Sunday, July 23, 2023

ಹೆಸರಿಡದ ಕವನಗಳು


ಇದು...ಸರಿಯಲ್ಲ ಎಂದು ಹೇಗೆ 
ಸಮರ್ಥಿಸಿಕೊಳ್ಳಲಿ...!! ತಾಯಿ...
ಇಂತಹ ಕೃತ್ಯಕ್ಕೆ ಅನಾದಿಕಾಲದಿಂದಲೂ
ಇತಿಹಾಸವಿದೆ, ಪ್ರೋತ್ಸಾಹವಿದೆ, ಅನುಕಂಪವಿದೆ
ಹೋರಾಟವು ಇದೆ..!! ನಿಸ್ಸಹಾಯಕತೆಯೂ ಇದೆ..

ಇಲ್ಲಿ ಯಾರನ್ನೂ ದೂಷಿಸಲಿ..!!  ಅಕ್ಕ..
ಕಾಲಕಾಲಕ್ಕೆ ಅಜ್ಞಾನವನ್ನು ಹೊಡೆದೊಡಿಸುವಂತಹ
ಜ್ಞಾನಿಗಳನ್ನೆ ಹುರಿದು ಮುಕ್ಕಿಬಿಟ್ಟಿದ್ದೇವೆ..
ಈಗೇನಿದ್ದರೂ ಜಾತಿಗಾಗಿ ಬಡಿದೆಬ್ಬಿಸುವ ಕಾವಿಗಳು,
ಸರಿಯೋ-ತಪ್ಪೊ ವಿಮರ್ಶಿಸದೆ ಪತ್ವಾ ಹೊರಡಿಸುವ ಮೌಲ್ವಿಗಳು!!
ಯಾವ ನೆಲವಾದರೇನು ಕಬಳಿಸಲು ಬಾಯ್ತೆರೆದು
ಕುಳಿತ ಕ್ರೈಸ್ತ ಮಿಶನರಿಗಳು..!!
ಇವುಗಳೆಲ್ಲದರ ಗೊಡವೆಗಳ ನಡುವೆ ನಿನ್ನ ಕೂಗು
ಕೇಳಿಸುವುದೆ...

ಜಾತಿಯ ಸೌಧಕ್ಕೆ ಎಲ್ಲ (ಅ)ಜ್ಞಾನಿಗಳು ಒಂದೊಂದಾಗಿ
ಇಟ್ಟಿಗೆಯನ್ನು ಕಟ್ಟುತ್ತಾ ಬಂದವರಲ್ಲವೆ ತಾಯಿ..
ಅದರ ಕಂದರದೊಳಗೆ ಬಿದ್ದು, ಬೆಂದು, ಉರಿದು
ಹೋಗುವವರು ನಮ್ಮಂತಹ ನಿಸ್ಸಹಾಯಕರೆ ಅಲ್ಲವೇ?
ಇಷ್ಟರ ಮೇಲೆ ಬೆಳೆ ಬೇಯಿಸಿಕೊಳ್ಳುವವರ ಸಂಖ್ಯೆಗೆನೂ ಕಡಿಮೆ ಇಲ್ಲ..!!

ಏನು ಮಾಡುವುದು..!! ನಿಟ್ಟುಸಿರೊಂದನ್ನು ಹೊರಚೆಲ್ಲಿ
ಜಿಟಿಜಿಟಿ ಸುರಿಯುವ ಮಳೆಯಲ್ಲಿ, ತಂಪು ಗಾಳಿಯೊಡಗೂಡಿ
ಬಿಸಿಬಿಸಿ ಎರಡು ಬೊಂಡಾ, ಒಂದು ಕಾಫೀಯನ್ನು ಹೀರುತ್ತ,
ಛೇ.. ಹೀಗಾಗಬಾರದಿತ್ತೆಂದು ಲೊಚಗುಟ್ಟಿದರೆ ಸಾಕು
ಇಲ್ಲದಿದ್ದರೆ ಅವರ ಕಪ್ ನಲ್ಲಿ ನೊಣ ಬಿದ್ದು ಸತ್ತು ಹೋಗಿಬಿಟ್ಟರೆ..!! ಅನಾಮತ್ತು ಮೂವತ್ತು ರೂಪಾಯಿ ಲುಕ್ಸಾನು..

ಈ ಮಣ್ಣಿನಲ್ಲಿ ಯಾವುದಕ್ಕೂ ಕೊರತೆಯಿಲ್ಲ..!! ಅಕ್ಕ
ಒಂದೆಡೆ ತುಂಬಿ ತುಳುಕುವ ವಿದ್ವತ್ ಕೋಶ...
ಮತ್ತೊಂದೆಡೆ ಅನಕ್ಷರಸ್ಥ ಕೂಪ..!! ಕೈ ಹಿಡಿದೆತ್ತುವವರನ್ನು
ಮಣ್ಣಲ್ಲಿ ಮಣ್ಣಾಗಿಸಿ ಸಂಭ್ರಮಿಸುತ್ತೇವೆ...
ಅದುಮಿ, ತುಳಿದು, ತಿಂದು, ತೇಗಿ ಕೊಬ್ಬಿದವರನ್ನು
ಹೊತ್ತುಕೊಂಡು ಮೆರೆದಾಡುತ್ತೇವೆ... ವಿಪರ್ಯಾಸವಾದರೂ ಸತ್ಯವಲ್ಲವೇನು..?

ಅಬ್ಬಾ... ಅಂತೂ ಇಂತೂ ನಿನ್ನ ವಿಷಯವಂತೂ
ಕೆಲವರ ಬೆರಳಿಗೆ ಸಾಕಷ್ಟು ಕೆಲಸವನ್ನು ಕೊಟ್ಟಿತು ತಾಯಿ..
ನಿನ್ನನ್ನು ಬೆತ್ತಲಾಗಿಸಿ....‌, ಬೆಚ್ಚಗಿನ ಗೂಡಿನವರು ಬೆಂಕಿಯನ್ನು
ಕಾಯಿಸಿಕೊಂಡರು, ಹೊಟ್ಟೆಯನ್ನು ತುಂಬಿಸಿಕೊಂಡರು!
ಇವತ್ತಿಗೆ ನಿನ್ನದು, ನಾಳೆಗೆ ಇನ್ನಾರದ್ದೊ... ನಿನ್ನ ಸುದ್ದಿಯಂತೂ ನಾಳೆಗೆ ರದ್ದಿಯಲ್ಲವೆ...
ಇಟ್ಸ್ ಆಲ್ ರೈಟ್ ಮುಂದಕ್ಕ ಹೋಗೊಣ.

ಅಕ್ಷರ ಬಡವ.

Wednesday, June 14, 2023

ರಂಗೀ

ನೆನಪುಗಳೇನೊ...
ಅಚ್ಚಳಿಯದೆ ಉಳಿದುಕೊಂಡು
ಬಿಡುತ್ತವೆ... ಬದುಕಿನ
ಪುಟಗಳಲ್ಲಿ
ರಂಗೀ....
ಸಂಬಂಧಗಳೇ....
ಋತುವಿಗಳಿಗಿಂತಲೂ
ಹೆಚ್ಚಾಗಿ ಬದಲಾಗುತ್ತಲೆ 
ಇರುತ್ತವೆ...

Wednesday, June 7, 2023

ಚುಟುಕು

ಹಿಂದೆ ಆಡಿಕೊಳ್ಳುತ್ತಾರೆ
ಎಂದ ಮಾತ್ರಕ್ಕೆ
ಮುಡಿಗೆ ಮಲ್ಲಿಗೆಯನ್ನು
ಮುಡಿಯದೆ ಇರಲಾದಿತೆ..?
ಉಪ್ಪನ್ನು ಸುರಿಯಲೆಂದೆ
ನಿಂತವರಿಗೆ... ಹಾಲಾದರೇನು?
ಅನ್ನವಾದರೇನು?

Tuesday, June 6, 2023

ಚುಟುಕು

ಹೆಗಲು ಕೊಟ್ಟು
ಮಾತ್ರಕ್ಕೆ ಋಣಗಳು
ತೀರಿ ಹೋಗುತ್ತವೆ
ಎಂದಾದರೆ... 
ಸಂಬಂಧಗಳಿಗೆಲ್ಲಿದೆ
ಬೆಲೆ..!!!
ಮಸೀದಿ, ಗುಡಿ-ಗುಂಡಾರಗಳನ್ನು
ಸುತ್ತು ಹಾಕಿದರೆ
ಪಾಪವು ಕಳೆದು 
ಹೋಗುತ್ತೆಂದಾದರೆ
ಪುಣ್ಯಕ್ಕೆಲ್ಲಿದೆ ಇಲ್ಲಿ
ನೆಲೆ..!!

ಚುಟುಕು

ಪಡೆದುಕೊಂಡವರಿಂದ
ನಾನೇನು ಹೆಚ್ಚಿನದನ್ನು
ನಿರೀಕ್ಷಿಸಲಿರಲಿಲ್ಲ!!
ಹನಿ ಕಣ್ಣೀರೊಂದನ್ನು
ಹೊರತುಪಡಿಸಿ...
ಇರಲಿ ಬಿಡಿ... ಅವರೆಲ್ಲ
ನಿಶ್ಚಿಂತರಾಗಿದ್ದಾರೆ ಈಗ
ನಿಟ್ಟುಸಿರೊಂದನು
ಹೊರ ಚೆಲ್ಲಿ..!!

ಚುಟುಕು

ಸತ್ತು... ಹೆಣವಾದ 
ಮೇಲಾದರೂ....
ಒಣ ಕಟ್ಟಿಗೆಗಳನ್ನಾದರು
ಇಟ್ಟು ಸುಡಬಾರದಿತ್ತೆ..!!
ಉಸಿರಿದ್ದಾಗ..
ಹಸಿ - ಬಿಸಿ ಮಾತುಗಳಿಂದ
ಬದುಕನ್ನು ಕೊಂದಿದ್ದೆ...
ಸಾಕಿತ್ತು..!!!

ಚುಟುಕು

ಕೊಟ್ಟು - ತೆಗೆದುಕೊಳ್ಳುವ
ಲೋಕದಲ್ಲಿ....ಬಿಟ್ಟು
ಹೋಗುವುದಕ್ಕೇನಿದೆ..??
ಹುಗಿದ ಗೋರಿಯ ಮೇಲೂ....
ಗೆದ್ದಿಲೊಂದು ಗೂಡನ್ನು
ಕಟ್ಟುತ್ತದೆ...!!
ನಿನ್ನ ನೆನಪನಿಲ್ಲಿ 
ಮರುಕಳಿಸುವುದಕ್ಕೆ
ಈ ಬದುಕಿಗೂ ಒಂದಿಷ್ಟು
ಸುಂಕವನ್ನು ಕಟ್ಟಬೇಕಿದೆ..!!