Monday, August 14, 2023
ರಂಗೀ
ರಂಗೀ
Friday, August 11, 2023
ರಂಗೀ-ಗೆಳೆಯ
ರಂಗೀ...
ಜಗತ್ತಿನ ಬಗ್ಗೆ ನೀನು
ಯಾವತ್ತೂ ತಲೆಯನ್ನು
ಕೆಡಸಿಕೊಳ್ಳಬೇಡ..!! ಅದು
ಯಾವಾಗಲೂ ಸುಟ್ಟು ಉರಿದು
ಬೂದಿಯಾಗುವುದನ್ನೇ....
ಕಾಯುತ್ತಿರುತ್ತದೆ ರಂಗೀ....
ನಮ್ಮ ಬುಡಕ್ಕೆ ನಾವೆ...
ನೀರೇರೆದುಕೊಳ್ಳಬೇಕು..!!
ಬಿರುಗಾಳಿಗೂ ಬೇರುಗಳು
ಜಗ್ಗದಂತೆ..!!
ನಿನ್ನದೊಂದು ಸಿಹಿಯೋ..ಅಥವಾ
ಕಹಿ ಮುತ್ತಿಗಾಗಿ ನಾನು
ಬೇಲಿ ಮೇಲಿನ ಹೂವಾಗಿ
ಅರಳಿಬಿಡುತ್ತೇನೆ
ಗೆಳೆಯ...
ಮತ್ತೊಂದು ದುಂಬಿಯ
ದಾಳಿಗೆ ಸಿಕ್ಕು ನಲುಗಿ
ಹೋಗದಂತೆ
ಕಾಪಿಟ್ಟುಕೊಳ್ಳುವೇಯಾ..?
ಇಲ್ಲಿ...ಹೂವಾದರೇನು?
ಹೆಣ್ಣಾದರೇನು..? ಸೌಂದರ್ಯದ
ಘಮಲಿನಮಲು ಇರುವವರೆಗೆ
ಮಾತ್ರ ಬೆಲೆ
ಗೆಳೆಯ...
ಆಸ್ವಾದಿಸುವವರೆಲ್ಲ
ರಸಿಕರೆ..? ಎಂದು ಹೇಗೆ
ಕರೆಯಲಿ... ಮುಡಿಯ
ಮಲ್ಲಿಗೆಯನ್ನೆ.. ಹೊಸಕಿ
ಹಾಕುವ ಜನರಿಹರಿಲ್ಲಿ...!!
ನೀನು ಹೊರಟು ಹೋದ
ದಾರಿಯನ್ನೇನು...ನಾನು
ನೆನಪಿಟ್ಟುಕೊಂಡಿಲ್ಲ
ಗೆಳೆಯ...
ಬರುವ ಹಾದಿಯನ್ನೆ
ಕಾಯುತ್ತಿದ್ದೇನೆ...!!
ಕವಲಾಗಿಸಿಬಿಡಬೇಡ
ಯಾಕೇ....
ಎಲ್ಲರೂ ನೋವಿನಲ್ಲಿರುವಾಗ
ವೀಣೆಯನ್ನೆ...ನುಡಿಸುತ್ತಾರೆ
ಎಂಬುದು ನನಗರಿವಾಗಿರಲಿಲ್ಲ
ಗೆಳೆಯ...
ಈಗರಿವಾಯಿತು... ನೋಡು
ಬಿಟ್ಟು ಹೋದ ನಿನ್ನ ನೋವಿನ
ನೆನಪುಗಳ ತೊಡೆದು
ಹಾಕಲು ಈ ತಂತಿಗಳ
ನಾದವೇ.... ಮದ್ದೆಂಬುದು..
ಹೂವಿನಂತವಳು....ನೀ
ಹೂವಿಗೆ ನೋವು ಕೊಟ್ಟರೆ
ಹೇಗೆ ಹೇಳು..
ರಂಗೀ...
ಚುಚ್ಚು ಮಾತುಗಳಿಂದ
ನನ್ನೆದೆಯನ್ನು
ಇರಿದಿದ್ದೆ ಸಾಕಿತ್ತು..!!
ಯಾವ ಧರ್ಮದ
ದೇವರನ್ನು ಅಮೃತ ಶಿಲೆಯಲ್ಲಿ
ಕೆತ್ತಿಸಿಟ್ಟರೇನಾಯಿತು?
ಪೂಜಿಸುವ ಎದೆಗಳೆ
ಕಲ್ಲಾಗಿ ಹೋಗಿರುವಾಗ..!!!
ರಂಗೀ...
ಕತ್ತಲು... ಕಳೆದು, ಬೆಳಕನ್ನು
ಸಂಭ್ರಮಿಸುವುದಾದರು
ಯಾವಾಗ..? ಪ್ರೀತಿಯನ್ನು
ಹಂಚುವ ಕೈಯಲ್ಲಿ
ಬಂದೂಕನ್ನು ಹಿಡಿದಿರುವಾಗ..!!!
ಕಜಲ್
ಮಸೀದಿ-ಮಂದಿರ ಚರ್ಚಗಳೆಲ್ಲ ಬಿಕ್ಷೆ
ಬೇಡುವ ಕೇಂದ್ರಗಳಾಗಿ ಮಾರ್ಪಟ್ಟು ಬಿಟ್ಟಿವೆ..!!
ಡೇಬಿಟ್/ಕ್ರೇಡಿಟ್ ಕಾರ್ಡಗಳಿದ್ದರೆ ಮಾತ್ರ... ಕಲಿಯಗದ
ಶ್ರೀಮಂತ ಅಲ್ಲಾ-ಯೇಸು-ದೇವರುಗಳ ದರ್ಶನ
ವಾಗುವುದು ಸಾಕಿ...
ದೇಹಿ ಎಂದು ಹೋದವರೆಲ್ಲ... ದೀನವಾಗಿ
ಸುಡು ಬಿಸಿಲಿನಲ್ಲಿ, ಕಂಕುಳಲ್ಲೊ..ಹೆಗಲ ಮೇಲೊ
ಮಕ್ಕಳನ್ನು ಹೊತ್ತುಕೊಂಡು ಕಾಯುತ್ತಿರಬೇಕಷ್ಟೆ..!!
ಅವರು ಮೆಕ್ಕಾಗೆ ಹೋದರೆ, ಇವರು ಕಾಶಿಯನ್ನು
ಸುತ್ತಿ ಬಂದರು ಮತ್ತವರು ಜೆರುಸೇಲಂ ಗೆ ಹೋಗಿದ್ದರು
ಮತ್ತೊಂದಿಷ್ಟು ಜನ..... ಹಾಲು-ತುಪ್ಪ
ಕುರಿ-ಕೋಳಿಗಳನ್ನು ಬಲಿ ಕೊಡುವ ದೇವ-ದೇವತೆಯರನ್ನು
ಪೂಜಿಸಿದರು-ಆರಾಧಿಸುತ್ತಿರುವರು ಸಾಕಿ...
ಅಲ್ಲಿ, ಇಲ್ಲಿ, ಮತ್ತೆಲ್ಲಿಗೋ... ಹೋಗಿ ಬಂದವರು
ಸಂತರಾದರೂ..? ಸಮಾಜಕ್ಕೆ ಮಾದರಿಯಾದರೂ..?
ಲೋಕೊದ್ಧಾರಕರಾದರೊ..? ಹೋಗಲಿ ಮನೆಯನ್ನು
ಬಿಡಿ... ಮನಸ್ಸಿಗಾದರೂ ಶಾಂತಿ ದಕ್ಕಿದೇಯಾ..?
ಯಾವ ಕಂಪೋಡಿನ ಹತ್ತಿರ ಹೋದರೂ...
ಕಾಮದ ಘಮಟು ವಾಸನೆ ಮೂಗಿಗೆ ಬಡೆಯುತ್ತದೆ..!!
ಕಟ್ಟಡಗಳ ಯಾವ ಮೂಲೆಯೂ ಸಾಕಾಗುತ್ತಿಲ್ಲ
ಕಂತೆ..ಕಂತೆಗಳ ಮೂಟೆಯನ್ನು ಒಟ್ಟಲು
ಸಾಕಿ....
ಕೋರ್ಟಿನ ಕಟಕಟೆಗಳಿಗೂ ಗೆದ್ದಲು ಹತ್ತಿರಬಹುದು!
ಜೈಲಿನ ಕಂಬಿಗಳಿಗೂ.. ತುಕ್ಕು ಹಿಡಿದಿರಬಹುದು..!!
ಶಿಕ್ಷೆಯನ್ನು ಬರೆಯುವ ಲೇಖನಿಯ ಮಸಿಯು ಮಂಕಾಗಿರಬಹುದು...!!
ಎಲ್ಲವನ್ನೂ... ಗೆದ್ದವೆಂದುಕೊಂಡವರು... ಮೇಲಿನವನ
ಲೆಕ್ಕದಿಂದ ನುಣುಚಿಕೊಳ್ಳಬಲ್ಲರಾ...?
ಕಜಲ್
ಕಜಲ್
ನಿನ್ನ ಅವಳ ಪ್ರೇಮ ಚರಿತ್ರೆಯನ್ನು
ಬರೆದ ಗೋಡೆಗಳ ಮೇಲೀಗ, ಎಲೆಯಡಿಕೆ
ಜಗಿದುಗುಳಿದ ಕೆಂಪು ಕಲೆಯಿಂದಲೆ ತುಂಬಿ ಹೋಗಿದೆ
ಗಾಲೀಬ್...!!
ಅದಕ್ಕೂ... ಇನ್ನೇನು ಕೆಲವೆ ದಿನಗಳಲ್ಲಿ
ಬಣ್ಣವನ್ನು ಬಳೆದುಬಿಡುತ್ತಾರೆ..!!
ಹಚ್ಚಿದಷ್ಟು ನೆರೆತು ಹೋಗುವ ತಲೆಗೂದಲುಗಳಿಗೆ
ಸವರಿದಂತೆ
ಮಧುಶಾಲೆಯಿಂದ ಎದ್ದು ಹೋದವರು...
ಮರಳಿಬಂದ ಇತಿಹಾಸವೇ.. ಇಲ್ಲ..!!
ಅವರೇನು ಭೋದಿ ವೃಕ್ಷದ ಕೆಳಗೆ ಕುಳಿತು
ಜ್ಞಾನವನ್ನೇನು ಹೊಂದಲಿಲ್ಲ.... ಬದಲಾಗಿ
ಆ ಮರದ ಬೇರಿಗೆ ಗೊಬ್ಬರವಾಗಿ ಮಣ್ಣಾಗಿ ಹೋಗಿದ್ದಾರೆ
ಗಾಲೀಬ್...
ಅವರಿಗೆ ಮೊದಲೆ ಹೇಳಿದ್ದೆ.. ನಾನು ಕೊಡುವುದು
ಅಮೃವಲ್ಲ ವಿಷವೆಂದು..ಆದರೂ.. ಗುಟುಕರಿಸಿ
ಕುಡಿಯುತ್ತ, ನಗುತ್ತ, ಅಳುತ್ತ, ನೋವನೆಲ್ಲ ಗೆದ್ದವರ
ಹಾಗೆ ಬೀಗುತ್ತಿದ್ದರಷ್ಟೆ...
ಅವಳ ಪಾದವ ತೊಳೆದು ನೀರು
ಕುಡಿದವರೆಲ್ಲ... ನನ್ನ ಮಧು ಶಾಲೆಯ
ಮಧುವನ್ನು ಹೀರದೆ ಹೋದವರೇನು..?
ಗಾಲಿಬ್...
ಬದುಕಿನ ಕೊನೆಯ ಉಸಿರಿನವರೆಗೂ ಅವಳೆಂದಿಗೂ
ತೀರದ ದಾಹದಂತೆ.... ಹನಿ... ಹನಿ... ಪ್ರೀತಿಗಾಗಿ
ಚಡಪಡಿಸಿ, ತಡವರಿಸುತ್ತ, ನರಳಾಡುತ್ತಿರಬೇಕಷ್ಟೆ...
ಯಾರೋ ಹೇಳಿದರು ಬಿಕ್ಕುತ್ತಿರುವ ನಿನ್ನ
ಗಂಟಲಿಗೆ, ಗಂಗಾಜಲವನ್ನು ಸುರಿಯಿರೆಂದು...
ಅವರಿಗೆಲ್ಲ ಏನು ಗೊತ್ತು? ಬೇಕಿರುವುದು ಹನಿ ಮಧು.!!
ಉಸಿರು ನಿಲ್ಲಲು ಅವಳ ಕೊನೆಯ ಭೇಟಿ ಅಲ್ಲವೆ
ಗಾಲೀಬ್....!!
ಉರಿದು.. ಸುಟ್ಟು ಹೋದ ನಿನ್ನ ಭಸ್ಮವನ್ನು...
ಅವಳ ಮೇಲ್ಮುದ್ದೆ ಮಾಳಿಗೆಯಲ್ಲಿ ಸುರಿದು ಬರುವೆ..
ಜಿಟಿಜಿಟಿಯಾಗಿ... ಸುರಿಯುವ ಮಳೆಯ ಹನಿಗಳು
ಬೂದಿಯೊಡಗೂಡಿ ಜಂತಿಯ ಒಳಗಿಳಿದು, ಅವಳ
ಪಾದದ ಮೇಲೆ ಬಿದ್ದು ತೋಯಿಸಿ ಹೋದರೆ.....
ನಿನ್ನ ಸಾವು ಸಾರ್ಥಕವಲ್ಲವೇನು...?