Monday, June 29, 2026

ಚುಟುಕುಗಳು


ಸೃಷ್ಟಿ ಒಂದೆ...
ನೋಡುಗರ ದೃಷ್ಟಿಗಳು
ಬೇರೆ ಬೇರೆಯಾಗಿರುತ್ತವೆ
ಸಾಕಿ...
ಮೋಸವು ಒಂದೆ
ಮಾಡುವ ವಿಧಾನಗಳು
ಬೇರೆ ಬೇರೆ..


ಅವಳು ಅಕ್ಕಿಯನ್ನು
ತುಂಬಿಟ್ಟ ಸೇರನ್ನು ಒದ್ದಳು...
ನಾನು ಖಾಲಿಯಾಗಿ ಬಿದ್ದಿದ್ದ
ಬಟ್ಟಲಿಗೆ ಮಧುವನ್ನು ತುಂಬಿಸಿದೆ..


ನಾನು ಹೊರಟ
ಹಾದಿಯಲ್ಲಿ
ಸೂರ್ಯನೆಂದು
ಅಸ್ತವಾಗುವುದಿಲ್ಲ
ಸಾಕಿ...
ಬಿಸಿಲಲ್ಲಿ
ನಿಲ್ಲಿಸಿದವಳನ್ನು
ಚಂದಿರನೂರಿನಲ್ಲಿ
ಬಿಟ್ಟು ನಡೆದಿರುವೆ..!!

ಕೊಟ್ಟ ಮಾತನ್ನು
ಮುರಿದೆಯೇಕೆ..?
ಕೇಳುವವರಾದರು
ಯಾರು
ಸಾಕಿ...
ಜಗತ್ತು ಅವಳ
ಅಧರದ ಅಮಲಿಗೆ
ಶರಣಾಗಿರುವಾಗ...!!


ಅವಳಿಂದು ಗಟ್ಟಿ
ಬಂಗಾರವನ್ನು
ಕೇಳಿದಳು...!!
ನಾನು ಕೊಟ್ಟೆ..😍
ಅವಳೀಗ
ಲಟ್ಟಣಿಗೆಯನ್ನು
ಹುಡುಕುತ್ತಿದ್ದಾಳೆ..😇


ಒಲವಿನ ಕಾನೂನಿನಲ್ಲಿ
ಅವಳು ಅಪರಾಧಿಯಾಗಿದ್ದರು
ನಿರಪರಾಧಿಯಾಗಿ
ಉಳಿದಳು...
ಸಾಕಿ...
ನಾನು
ನಿರಪರಾಧಿಯಾಗಿದ್ದರೂ...
ನೋಡುಗರ ಕಣ್ಣಿಗೆ
ಅಪರಾಧಿಯಾಗಿ
ಉಳಿದುಬಿಟ್ಟೆ...

ಯಾರು ಯಾರಿಗೆ
ಎಷ್ಟು ಅವಶ್ಯಕತೆ ಇತ್ತೊ...
ಅಷ್ಟೇ ಬಳಸಿಕೊಂಡರು
ಸಾಕಿ...
ಹೋಗುವಾಗ ಮಾತ್ರ
ಬಳಸಿಕೊಂಡಿದ್ದಕ್ಕಿಂತಲೂ
ಹೆಚ್ಚಿನ ದುಃಖವನ್ನೆ
ನೀಡಿ ಹೋದರು...!!


ಕುಡಿಯುವ ನೀರಿಗೂ...
ಬೆಲೆಯನ್ನು ಕಟ್ಟಿರುವಾಗ,
ಬಟ್ಟಲು ಮದಿರೆಗೆಂಥಹ
ಚೌಕಾಸಿ ಬಿಡು
ಸಾಕಿ....
ಕಾಲಚಕ್ರದ ಮಹಿಮೆ
ನೋಡು...
ನೀರು ಬಿಟ್ಟು,
ಮದ್ಯವನ್ನು ಕುಡಿಸುವವಳ
ಮಧ್ಯದಲ್ಲಿ ತಂದು
ಕೂರಿಸಿದೆ..!!


ಇತಿಹಾಸ
ಯಾವತ್ತಿದ್ದರೂ...
ಸತ್ತವರ ಕಥೆಯನ್ನೆ
ಸಿಹಿಯಾಗಿ ಹಂಚುತ್ತದೆ
ಸಾಕಿ....
ಅವಳು ಕೊಟ್ಟ
ನೋವಿನ ಲೆಕ್ಕವನ್ನು
ಮಾತ್ರ...ಎಲ್ಲಿಯೂ
ತೋರಿಸುವುದಿಲ್ಲ..!!


ಮೇಲಿನವನ
ಲೆಕ್ಕವು ತಪ್ಪಿ
ಹೋಯಿತಿಂದು
ಸಾಕಿ...
ಸಭ್ಯಸ್ಥನು ಮಧು
ಶಾಲೆಯ
ಮೆಟ್ಟಿಲನ್ನೇರಿಬಿಟ್ಟ..!!


ಅವಳಿಗೆ ಪ್ರೀತಿಯ
ಪರಿಚಯವನ್ನು
ಮಾಡಿಕೊಡಲು
ಪ್ರಯತ್ನಪಟ್ಟೆ...!!
ಅವಳೋ....
ನನಗೆ ಸಾವಿನ
ಗೆಳೆತನವನ್ನು
ಮಾಡಿಸಿಬಿಟ್ಟಳು...!!

ಬೆಳಿಗ್ಗೆ ಉಪ್ಪನ್ನು
ಬೇಡಿದ್ದೆ‌.. ..
ನೀಡಲಿಲ್ಲ..!!
ಎದೆಯ ಗಾಯವನ್ನು
ತೋರಿಸಿದೆ...
ಖಾರವನ್ನೆ..
ಸುರಿದು ಬಿಟ್ಟರು...

ಪ್ರೀತಿಯ
ಜೋಳಿಗೆಯಲ್ಲಿ
ವಿಷವನ್ನೆ ತುಂಬಿ
ಕಳುಹಿಸಿದಳು...!!
ಕವಿತೆಯ ಪದಗಳಿಗೆ
ನಾ ಹೇಗೆ
ಉಣಬಡಿಸಲಿ...!!

ಸೇಡವು-

ಬಿಟ್ಟ ಹೋದ ಮ್ಯಾಲ
ಮತ್ಯಾಕ ಮಾಡತಿ ಚಿಂತಿ..!!
ಕೈಯ್ಯಾಗ ಕಳ್ಳಿಹಾಲ ಕೊಟ್ಟ
ಪ್ರಸ್ತದ ಕೋಣ್ಯಾಗ ಕೇಸರಿ ಹಾಲ ಹಿಡದ ಕುಂತಿ..!!

ಹಗಲ ಯಾವ್ದೊ...? ರಾತ್ರಿ ಯಾವ್ದೊ..?
ಒಟ್ಟ ಹತ್ತವಲ್ದಾಗೈತಿ ನಿದ್ದಿ...!!
ಅರಳಿಕಟ್ಟಿ ಮ್ಯಾಲ ಕುಂತ ಮಾತಾಡೊರಿಗೆ
ದೊಡ್ಡದಾಗೈತಿ ನೋಡ..ನಮ್ ಸುದ್ದಿ...!!

ಮೂರ ಹೊತ್ತಿಗಲ್ಲದಿದ್ರೂ...
ಒಂದ ಹೊತ್ತ ಉಂಡಾದ್ರು ಬದುಕಬೊದು ಹಂಗಾ..!!
ನಿನ್ ಹಿಡಿ ಪ್ರೀತಿ ತುತ್ತ ಇರಲಾರದನ
ಘಳಿಗೆ ಉಸಿರಾಡೊದಾದ್ರು ಹೆಂಗ...!!

ಹಗ್ಗ ಕಟ್ಟಿ ಎಳಿಬೇಕ ಮಲ್ಲಯ್ಯನ
ತೇರ ಪಾದಗಟ್ಟಿ ಮುಟ್ಟಸಾಕ...!!
ಸೀರಿದ ಚಿಂಗ ಅರವಿ ಕೊಟ್ಟ ಹೋಗಲಿಲ್ಲ
ನೀನss ಉರುಳ ಹಾಕ್ಕೊಳ್ಳಾಕ...!!!

ನಂಬಿಕೆಯನ್ನೊ ಮಳಿ ಸುರಸಲಾರ್ದನ ಎದಿ
ನೆಲದಾಗ ಪ್ರೀತಿ ಬೀಜ ಯಾಕರ ಬಿತ್ತಿದಿ...!!
ನೋವನ್ನೊ ಉರಿಬಿಸಿಲ ಬರಗಾಲನ
ಹೊದಿಸಿ..ಹ್ಯಾಂಗರ ನಕ್ಕೊಂತ ಹೋದಿ..!!

Tuesday, January 6, 2026

ಹೆಸರಿಡದ ಕವಿತೆಗಳು

ಅವನು ನಿಜಕ್ಕೂ... ಕವಿಯೆ...
ಅವಳಂದಕೆ ಸೋತ ಪದಗಳ
ಸೂಸಿ... ಸಾವೆ....ಇರದ ಕವಿತೆಗಳ
ಕಟ್ಟಿ.. ಕಲ್ಲೆದೆಗಳಲ್ಲೂ ಹೂವರಳಿಸುವ
ಅವನ ವಾಚನ, ಅವಳ ಕಿವಿಗೂ
ಬಿದ್ದಿತ್ತು, ಮಾರ್ಜಾಲ ಜಗತ್ತಿಗಂಜಿ
ಅವಳು ನಗಲಿಲ್ಲ...
ಇಲ್ಲಿ ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ....
ರಾಮನಿಗೆ ದಕ್ಕದ ಮಾಯಾ ಜಿಂಕೆಯ
ಹಾಗೆ, ಮಿಂಚಿ ಮಾಯವಾದಳ
ಚಿತ್ತಾರವನ್ನು ನೆತ್ತರಿನಲ್ಲೆ ಚಿತ್ರಿಸಿಟ್ಟ
ಕಾಮದ ಲೋಕ ಬೆಂಕಿಯಿಟ್ಟಿತು...!!
ಬಂಡೆಗಲ್ಲುಗಳ ಮೇಲೆ ಕೆತ್ತಿದ
ಹೆಸರಿನ ಮೇಲೆ; ಬೀಡಾ ಉಗುಳಿ
ಅದನ್ನು ಅತ್ಯಾಚಾರಗೊಳಿಸಲಾಯಿತು..
ಇಲ್ಲಿ ಕವಿ ಸೋತಿಲ್ಲ....

ಅವನು ನಿಜಕ್ಕೂ‌... ಕವಿಯೆ....
ಅವನೆಂದು ಕನಸಿನರಮನೆಯ ಕಟ್ಟಲಿಲ್ಲ..
ವಾಸ್ತವದ ಗುಡಿಸಲಿನಲ್ಲಿಯೆ
ಬದುಕನ್ನು ಕಟ್ಟಿಕೊಳ್ಳಲೆತ್ನಿಸಿದ,
ಅಂತಸ್ತಿನ ಸಣ್ಣ ಕಿಡಿಯೊಂದು ಸೋಕಿ
ಅದು ಸುಟ್ಟು ಬೂದಿಯಾಗಿ ಹೋಯಿತು...
ಇಲ್ಲಿ ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ...
ಉಸಿರುಸಿರಿನಲ್ಲೂ ಅವಳೆ
ಬೇರೆತು ಹೋಗಿರುವಾಗ...ಮರೆತು ಬಿಡುವ
ಪ್ರಮೇಯವೆಲ್ಲಿ ಬಂತು...!!
ಇವನ ಉಸಿರು ನಿಲ್ಲದ ತನಕ
ಅವಳ ಹೆಸರಿಗೆ ಸಾವಿಲ್ಲ...
ಅವಳ ಸಾವಿನ ನಂತರ ಇವನ
ಉಸಿರಿಗೆ ಅರ್ಥವಿಲ್ಲ...
ಇಲ್ಲಿ ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ...
ಯಾವ ಪದವ ಕಟ್ಟಿದರೇನು
ಅವಳದೆ ಭಾವ....
ಯಾವ ವಾದ್ಯವ ನುಡಿಸಿದರೇನು
ಅವಳದೆ ರಾಗ.....
ಜಗತ್ತಿಗೇನು..? ತನ್ನಿಚ್ಚೆಯಂತೆ
ನಡೆಯದೆ ಹೋದರೆ ಹುಚ್ಚ, ತೆವಲುಗಾರ
ನೆನ್ನುತ್ತದೆ..
ಅದೆಂದು ಒಳಗಣ್ಣಿನಿಂದ ನೋಡುವುದೆ
ಇಲ್ಲ..!! ಎಲ್ಲ ವ್ಯಾಪಾರಿಕರಣ...
ಎಲ್ಲ ವ್ಯಾಪಾರಿಕರಣ... ಹೀಗಾಗಿ
ಇಲ್ಲಿ ಕವಿ ಸೋತಿಲ್ಲ... ಸೋಲುವುದು ಇಲ್ಲ...

ಚುಟುಕುಗಳು


ಕತ್ತರಿಸಲು ಖಡ್ಗವನ್ನು ಹಿಡಿದು
ನಿಂತವರ ಮುಂದೆಯೆ... ಕತ್ತನ್ನು
ಒಡ್ಡಿದ್ದೆ..!!
ಪ್ರೀತಿಸುವವಳು.. ಅವಳಿಗಾಗಿ
ಸರ್ವಸ್ವವನ್ನೆ ಕೊಟ್ಟಿದ್ದೆ...
ಕಲ್ಲು ಎದೆಯವರು ಕೊರಳಿಗೆ
ಹಾರವನ್ನು ಹಾಕಿದರು...!!
ಮುಷ್ಠಿಯಲ್ಲಿ ಇದ್ದ ಜೀವವನ್ನು
ಅವಳು ಉಫ್ ಎಂದು
ಊದಿಬಿಟ್ಟಳು...
@@@@

ನಮ್ಮಿಬ್ಬರನ್ನು ಬೇರ್ಪಡಿಸಲು
ಕಾಲಕ್ಕೂ ಕಸುವಿಲ್ಲ ಎಂದವಳು....
ಕಾಲಿನ ಕಸಕ್ಕಿಂತ ನನ್ನನ್ನು
ಕಡೆಯಾಗಿಸಿದಳಲ್ಲ...
ಪ್ರಶ್ನಿಸುವುದಾದರೂ ಯಾರನ್ನು
ಈಗ..ಕಾಲವನ್ನೊ..?
@@@@@

ಬಾಳ ದಾರಿಯಲ್ಲಿ
ಸಾವು ಹಾದಿ ತಪ್ಪಿಬಿಟ್ಟಿದೆ..!!
ನೋವು... ಎದೆಯ ಅಂಗಳದಲ್ಲಿ
ದಣಿವಿಲ್ಲದೆ ನೃತ್ಯುಸುತ್ತಿದೆ
ಗೆಳೆಯ...
ಮರಳುಗಾಡಿನಲ್ಲಿ ಸಾಕಲು
ಹವಣಿಸುವ ಬಸವನ
ಹುಳುವಿನಂತಾಗಿದೆ ನನ್ನ ಪಾಡಿಗ...

ಅವನಿಗಿಂತ ನಾನೇನು ಕಮ್ಮಿ
ಒಂದು‌ ಧಮ್ ಎಳೆದುಬಿಟ್ಟೆ
ಉಸಿರುಗಟ್ಟಿದ ಹಾಗಾಯಿತು..
ಎದೆಯ ಗೂಡಲ್ಲಿ ಅವನಿನ್ನು
ಬೆಚ್ಚಗೆ ಇದ್ದಾನೆ

@@@
ಅವಳ ಕೆಂದುಟಿಯಲ್ಲಿ...
ಅಮೃತವೆ ತುಂಬಿತ್ತಂತೆ...!!
ಅವಳು,  ಮಾತಿನಲ್ಲೆ
ವಿಷವನ್ನು
ಉಣಬಡಿಸಿದಳು..!!


@@@

ಬಾಳಿನ
ಹಾದಿಯುದ್ದಕ್ಕೂ....
ಮುಳ್ಳುಗಳನ್ನೆ ಚೆಲ್ಲಿದವರು
ನನ್ನ ಹೆಣದ ಚಟ್ಟಕ್ಕೆ
ಹೂವಿನ ಹಾಸನ್ನು
ಹೊದಿಸುತ್ತಿದ್ದಾರೆ...!!

@@
ಯಾವುದೋ... ಲೋಕದಲ್ಲಿ
ಮುಳುಗಿದ್ದ ನನ್ನನ್ನು..
ಬೀಗವೆ ಇಲ್ಲದ ನಿನ್ನೆದೆಯ
ಸೆರೆಮನೆಯಲ್ಲಿ
ಬಂಧಿಯಾಗಿಸಿಕೊಂಡುಬಿಟ್ಟೆ...!!
ಇಲ್ಲಿಂದ ಹೊರಡುವುದು
ಇನ್ನೂ ನಿನ್ನ ಉಸಿರು
ನಿಂತ ಮೇಲೆಯೆ....

@@
ಯಾವುದೋ... ಲೋಕದಲ್ಲಿ
ಮುಳುಗಿದ್ದ ನನ್ನನ್ನು..
ಬೀಗವೆ ಇಲ್ಲದ ನಿನ್ನೆದೆಯ
ಸೆರೆಮನೆಯಲ್ಲಿ
ಬಂಧಿಯಾಗಿಸಿಕೊಂಡುಬಿಟ್ಟೆ...!!
ಇಲ್ಲಿಂದ ಹೊರಡುವುದು
ಇನ್ನೂ ನಿನ್ನ ಉಸಿರು
ನಿಂತ ಮೇಲೆಯೆ....

@@@
ಸಿಗರೇಟ್ ಎಷ್ಟೇ ದುಬಾರಿ
ಆಗಿದ್ದರೂ..
ಸುಟ್ಟು ಬೂದಿಯಾಗುತ್ತದೆ..!
ಹಾಲು ಅದೇಷ್ಟೆ...
ಮಂದವಾಗಿದ್ದರೂ..
ಸರಿಯಾದ ಅಳತೆಯಲ್ಲಿ
ಸಕ್ಕರೆಯನ್ನು ಹಾಕದಿದ್ದರೆ...
ಚಹಾ, ಸಪ್ಪೆ ಎಂದೆನ್ನಿಸುತ್ತದೆ...!!
ಸಂಬಂಧಗಳನ್ನು ಕೇವಲ
ಅನುಕೂಲಕ್ಕಾಗಿ ಉಳಿಸಿಕೊಂಡಿದ್ದರೆ..
ಒಂದಿಲ್ಲೊಂದು ದಿನ ಉರಿದು ಹೋಗುತ್ತವೆ..!!
ನೀವು ಸೋಲದೆ, ಬಾಳಿನುದ್ದಕ್ಕೂ
ಅವರೆ ಸೋಲುತ್ತಿರಲೆಂದು
ಬೀಗುವವರ ಬದುಕಿನಲ್ಲಿ
ಅರ್ಥವೆಲ್ಲಿದೆ...??

@@@@
ಛೇ...
ನಿನ್ನ ಮಧುರಸವಿಂದು
ಅದೇಷ್ಟು ಕಹಿಯಾಗಿದೆ
ಸಾಕಿ...
ಏಕೆ...? ಅವಳ
ಅದರದ ಸವಿ
ಮತ್ತೆ ನೆನಪಾಯಿತೇನು?

@@@@
ನಿಮ್ಮನ್ನು ಬಿಟ್ಟು....
ಅವರೆಲ್ಲ ಅದೇಷ್ಟು
ಮುಂದೆ ಹೊರಟು ಹೋಗಿದ್ದಾರೆ...
ಕ್ಷಮಿಸಿ, ನನ್ನ ಬಳಿ
ಅಂತಾವ ಮುಖವಾಡಗಳಿಲ್ಲ..!!

,@@@
ನನ್ನ ಪ್ರೀತಿಯ
ಋಣವನ್ನು ತೀರಿಸಲಾಗದೆ
ಹೋಗುತ್ತಿರುವುದಕ್ಕೆ
ಪಶ್ಚಾತ್ತಾಪಿಸಬೇಡ...!!
ಹುಟ್ಟಿದ ಪ್ರತಿಯೊಂದು
ಜೀವಿಯೂ... ಒಂದಿಲ್ಲೊಂದು
ಋಣವನ್ನು ಹೊತ್ತುಕೊಂಡು
ಸಾಯಲೆಬೇಕು...!!

@@@@

ಅವಳು ನನ್ನ ಬಳಿ
ಬಿಟ್ಟು ಹೋಗಿದ್ದ
ಪ್ರೀತಿಯನ್ನು, ಮತ್ತೆ
ಎದುರಾದಾಗ ಕೊಡಲು
ಹೋದೆ...!!
ಅವಳ ಉಡಿ ತುಂಬಿ
ತುಳುಕುವಷ್ಟು ಒಲವನ್ನು
ಮತ್ತಾರೋ ಸುರಿದಿಟ್ಟಿದ್ದರು...💐
👌

Tuesday, July 8, 2025

ಚುಟುಕು

ಕುಡಿದು... ಖಾಲಿಯಾದ
ಮದ್ಯದ ಬಾಟಲಿಯನ್ನು
ಎಸೆಯಬಹುದು....!!
ಎದೆಯಿಂದ ಅವಳ
ನೆನಪುಗಳನ್ನಲ್ಲ... 
ಮತ್ತೀಳಿದ ಮೇಲೆ
ಕುಡಿದದ್ದು ಯಾವ ಬ್ರ್ಯಾಂಡೆಂದು
ನೆನಪಾಗದೆ ಹೋಯಿತು....!!
ಮರೆಯಲೆಂದೆ ಕುಳಿತವನಿಗೆ
ಮರೆಯಲಾಗಲಿಲ್ಲ ಅವಳ
ಹೆಸರನ್ನ....!!

ಅಕ್ಷರ ಬಡವ....

Monday, March 17, 2025

ಸೇಡವು (ಚಿತ್ತಿ ಮಳಿಯಾಗ )

ಚಿತ್ತಿ ಮಳಿಯಾಗ ಮನಸಿನ ಚಿತ್ತಕ್ಕ
ಬೆಂಕಿ ಹಚ್ಚಿ ಕೂರಬೇಡ...
ಮತ್ತಿನ ಗಮ್ಮತ್ ಅರಿಯದ ಹುಡುಗನ
ತಲಿಗೆ, ನಿನ್ ಪ್ರೀತಿ ಅಮಲು ಎರಿಸಬ್ಯಾಡ..

ಜೋಳ ಬಿತ್ತಾಕ ಹದ ಮಾಡಿದ ಹೊಲದಂಗ
ನನ್ನೆದಿ ನೆಲದಾಗ ...ಪ್ರೀತಿ ಬೀಜ ಬಿತ್ತದನ...ವಿರಹದ ಕಸ ಬಿಳಿಸಿ ಹೋಗಬ್ಯಾಡ...
ಅನ್ನ.. ಕೊಡೊ ಭೂಮಿಗೆ ದುಡಿಯೊರ ಇಲ್ದಂಗ
ಆಗೈತಿ, ಅಂತದ್ರಾಗ...ನನ್ ದುಃಖಕ್ಕ ಯಾರ ಹೆಗಲ
ಕೊಡ್ತಾರ..

ಧರ್ಮರಾಯನ ಬಾಯಿಂದಲೂ ಅಧರ್ಮ
ನುಡದಿತ್ತಂತ... ಅಂತ ಬಾಯಿಲೆ ಏನು ಹೇಳಬ್ಯಾಡ...
ಮಾತೆಲ್ಲ ಮುತ್ತಾಗು..ವು ಕಣ್ಣಾಗ..!! ಆ ಕಣ್ಣಂಚಿದ
ನೋಡಿಬಿಡೊಮ್ಮೆ.. ಓದ್ಕೊಂಡು ಎದಿಯಾಗ ಮುಚ್ಚಿಟ್ಕೊಂಡಬಿಡ್ತೀನಿ ಕಪ್ಪೆಚಿಪ್ಪನಂಗ..

ಕೆರಿ ದಂಡಿ ಯಾವಾಗಲೂ ಮೆತ್ತಗ ಇರುವಂಗ
ತುಪ್ಪದಾಗ ಹುರದ ಮಾಡಿದ ಬೇಸನ ಉಂಡಿ
ಹಂಗ ಆಗೈತಿ‌ ಮನಸ್ಸು...!!
ಪ್ರೀತಿ ಹಾಲಿಗೆ ಹೆಪ್ಪ್ ಹಾಕತೀಯೊ ಉಪ್ಪ ಹಾಕತಿಯೋ
ಗೊತ್ತಿಲ್ಲ..
ಒಟ್ಟನ್ಯಾಗ ಒಡದ ಹಾಕಬ್ಯಾಡ ನೋಡ ಈ
ಹುಡುಗನ ಕನಸ್ಸು...!!

ಚುಟುಕುಗಳು

ಬಟ್ಟಲೊಳಗಿನ ಮಧುವನ್ನು
ನೋಡಿದಾಗಲೆಲ್ಲ... ಅವಳ
ಕೆಂದುಟಿಯ ರಂಗು
ನನ್ನೆದೆಯನ್ನು ಸುಡುತ್ತದೆ...!!
ಕಣ್ಣುಮುಚ್ಚಿ.. ಒಂದೇ.. ಗುಟುಕಿಗೆ
ಕುಡಿದುಬಿಟ್ಟೆ..!!
ಒಳಗಿಳಿದ ಮದ್ಯವೀಗ..
ತೊಂಡೆ ತುಟಿಗಳ
ಸವಿಯನ್ನು ನೆನಪಿಸುತ್ತಿದೆ...!!

ಅವಳು ಸುಮ್ಮನಿದ್ದಾಳೆ..!!
ನಾನು ಸುಮ್ಮನಿದ್ದೆನೆ..!!
ಜಗತ್ತೇಕೊ ನಮ್ಮಿಬ್ಬರ
ಕುರಿತು ಸುಮ್ಮನೆ ಕೂರುತ್ತಿಲ್ಲ..!!
ನಿನ್ನೆ..ಮೊನ್ನೆ..ನಾಳೆ..ನಾಡಿದ್ದು..
ಹೀಗೆ ದಿನಗಳನ್ನು ಎಣಿಸುತ್ತ
ಕುಳಿತಿದೆ...
ಸಮಯವೇನು ಇವರ ಗಡಿಯಾರದಲ್ಲಿ
ಯಾವಾಗಲೂ ಒಂದೇ ರೀತಿ
ಇರುತ್ತದೆ ಎನ್ನುವ ಭ್ರಮೆಯಲ್ಲಿ..!!


ಪ್ರೀತಿ ಕೆಟ್ಟದ್ದೆ..‌!!?
ಅವಳು ಕಡೆಗಣಿಸಿ
ಹೋದರೆ..‌!!
ಕುಡಿತ ಒಳ್ಳೆಯದೆ...
ಅದು ಬೇರೆಯವರು
ಕುಡಿಸಿದರೆ...!!

ಉರಿಯುವ ಕಟ್ಟಿಗೆಯ
ಮೇಲೆ ಮದ್ಯವನ್ನು
ಸುರಿದೆ...!!
ಬೆಂಕಿಯು ಮತ್ತಷ್ಟು
ಧಗಧಗಿಸತೊಡಗಿತು..
ಅದೇ ಮಧುವನ್ನು
ಗಂಟಲಿಗಿಳಿಸಿಕೊಂಡೆ
ಎದೆಯೊಳಗಿನ
ಬೆಂಕಿಯೆಲ್ಲ ತಣ್ಣಗಾಯಿತು..!!


ಪ್ರೀತಿಯೊಳಗಿನ
ಎಲ್ಲ ಸುಖ:-ದುಃಖಗಳನ್ನು
ಒದಗಿಸಿಕೊಟ್ಟ
ದೇವರು... ಬದುಕಿನ
ಪುಟದಲ್ಲಿ ಅವಳ
ಹೆಸರನ್ನು ಬರೆಯುವುದನ್ನೆ
ಮರೆತುಬಿಟ್ಟನೇಕೊ...?

ಮಾಡಿದ ಕರ್ಮಗಳನ್ನೆಲ್ಲ
ಇದೆ ಜನ್ಮದಲ್ಲಿ ಅನುಭವಿಸದೆ..
ಇನ್ನಾವ ನದಿಯಲ್ಲಿ
ಹೋಗಿ ತೊಳೆದುಕೊಳ್ಳಲಿ
ಗುರುವೆ....
ಗಂಗೆಯ ಮಗನಾದರೂ...
ಶರಶಯ್ಯಯೆ ಮೇಲೆ
ಮಲಗುವುದು ತಪ್ಪಲಿಲ್ಲ..!!
ನಾನು..? ಹುಲು ಮಾನವ
ತಪ್ಪಿಸಿಕೊಳ್ಳಬಲ್ಲೇನೆ...?