Tuesday, May 31, 2016

ನಮ್ಮವ್ವ

ಬಣ್ಣ ಬಣ್ಣದ ಸೀರಿ
ನವಿಲು ಚಿತ್ತಾರದ
ರೇಷ್ಮೆ ಸೀರಿ
ಏನ್ಮಾಡ್ಲಿ
ಎದೆ ಮ್ಯಾಲಿನ
ಸೇರಗ ಆಗಲಿಲ್ಲಂದ್ರ
ಏನ ಬಂತ ನಮ್ಮವ್ವ
ಮುತ್ತಿನ ಮೂಗುತಿ
ಹರಳಿನ ಬೆಂಡಾಲಿ
ಜೊಡು ಕೈ ಬಳೆ
ಏನ್ಮಾಡ್ಲಿ
ಹಣಿಮ್ಯಾಲಿ ಹುಡಿ
ಕುಂಕ್ಮನ ಇಲ್ಲಂದ್ರ
ಏನ ಬಂತ ನಮ್ಮವ್ವ
ಊರ್ಗೆ ಸಾವಕಾರ
ಕಾರು ಮೋಟಾರು
ನೆಲಕ್ಕೆ ಮುಟ್ಟದ ಕಾಲು
ಏನ್ಮಾಡ್ಲಿ
ಒಂದ ಹೆಣ್ಣಿಗೆ  ಒಬ್ಬ ಗಂಡ
ಆಗದಿದ್ರ
ಏನ ಬಂತ ನಮ್ಮವ್ವ
ಮಳಿಗೆ ಊರು
ತಂಪಾಗ್ಯೆತಿ
ಕರ್ಲು ಸಂಪಾಗ್ಯೆತಿ
ಏನ್ಮಾಡ್ಲಿ
ಮಡಿಲಾಗ ಒಂದ
ಇಲ್ಲಂದ್ರ
ಯಾರಿಗೆ ಹೇಳ್ಲೆ 
ನಮ್ಮವ್ವ

ಗುಟ್ಟು

ಗುಟ್ಟು ಹೆಂಗಿರ್ಬೆಕಂದ್ರ
ಬಾಗಿಲ ಇಲ್ಲದ
ಮೊಟ್ಟೆ ಹಂಗಿರ್ಬೆಕ
ಬದಾಮಿ ಕಾಯಿಯಷ್ಟ
ಗಟ್ಟಿಯಾಗಿರ್ಬೆಕ
ಭೂಮಿಯೊಳಗಿನ
ಬೆಂಕಿಯಂತಿರಬೇಕ

ಪ್ರತೀಕ

ಕೋಗಿಲೆಯೊಂದು
ಸುಮಧುರವಾಗಿ
ಹಾಡುವುದೊಂದರ
ಪ್ರತೀಕ
ಕೋಗಿಲೆಯೊಂದು
ತಾಯ್ತನದ
ಸವಿಯನನುಭವಿಸದಿರುವುದರೊಂದರ
ಪ್ರತೀಕ

ಇರಬೇಕು

ಅಡುಗೆ ಮಾಡುವನ
ಮನಸ್ಸು ತಿಳಿಯಾಗಿರಬೇಕು
ಅಡುಗೆ ಉಣ್ಣುವನ
ಹೊಟ್ಟೆ ಹಸಿದಿರಬೇಕು 

ಪಾಠ ಮಾಡುವ
ಗುರುವಿಗೆ ಅರಿವಿರಬೇಕು
ಪಾಠ ಕೇಳುವ
ವಿದ್ಯಾರ್ಥಿಗೆ  ದಾಹವಿರಬೇಕು   

ಬೆಲೆ

ಓಲೆಯೇನೊ ಸುಂದರವಾಗಿದೆ
ನಿಜ ಆದರೆ ಅದು ಬಂಗಾರ
ವಾಗಿರ್ಲಿಕ್ಕಂದ್ರ ಏನ ಬೆಲೆ               

ಹೂವೇನೂ ಅಂದವಾಗಿದೆ
ನಿಜ ಆದರೆ ಅದು ಸುಮಾನ
ಬೀರದಿದ್ರೆ ಏನ ಬೆಲೆ   

ಕೆರೆಯೇನೂ ಮೂಕವಿಸ್ಮಿತವಾಗಿದೆ 
ನಿಜ ಆದರೆ ಅದರ ನೀರು
ಕುಡಿಯಲಾಗದಿದ್ರೇನು ಬೆಲೆ 

ನೀನೇನೊ ಜ್ಞಾನಿಯಾಗಿರುವೆ
ನಿಜ ಆದರೆ ನಿನ್ನಲ್ಲಿ
ಮಾನವೀಯತೆಯಿಲ್ಲದಲೇನು ಬೆಲೆ

Saturday, May 28, 2016

ದಿನಗಳು

ಪ್ರೀತಿಗೆ ಬಹಳ ದಿನ
ಉಪವಾಸ ಇಡಬಾರ್ದು
ದ್ವೇಷಕ್ಕ ಬಹಳ ದಿನ
ಖೂಳ ಹಾಕಬಾರ್ದು

ನೀತಿಗೆ ಬಹಳ ದಿನ
ಸತಾಯ್ಸಿರಬಾರ್ದು
ಅನ್ಯಾಯಾನ ಬಹಳ ದಿನ
ಸಹಿಸ್ಕೊಬಾರ್ದು

ಹೆಂಡ್ತಿನ ಬಹಳ ದಿನ
ರಮೀಸಬಾರ್ದು
ತಾಯಿನ ಬಹಳ ದಿನ
ನೋಯಿಸಬಾರ್ದು

...ದಿನಗಳು

ಸೋಲಿನ ದಿನಗಳ
ಮರೆಯದೆ ಸೋತೆ
ಗೆಲುವಿನ ದಿನಗಳ
ಉಳಿಸದೆ ಸೋತೆ

ನೋವಿನ ದಿನಗಳ
ಅಳಿಸದೆ ಹೋದೆ
ಹರುಷದ ದಿನಗಳ
ಗಳಿಸದೆ ಹೋದೆ

ದಾರಿದ್ರ್ಯ ದಿನಗಳ
ಕಳಚಲು ಎದ್ದೆ
ಪಾವಿತ್ರ್ಯ ದಿನಗಳ
ಬಳಚಲು ಬಿದ್ದೆ

ಸಾವಿನ ದಿನಗಳ
ಕಹಿಯನು ಅರಿತೆ
ಬದುಕಿನ ದಿನಗಳ
ಸವಿಯನು ಮರೆತೆ