Saturday, July 30, 2016

ನಾನು ಅಪ್ಪ ಕಣೋ / ಣೇ

ನಾನು ಅಪ್ಪ ಕಣೋ
ನಿನ್ನವ್ವನ ಹಾಗೆ ಹಾಲುಣಿಸುವನಲ್ಲ
ಅತ್ತರೆ ಜೋಗುಳ ಹಾಡಿ ಮಲಗಿಸುವನಲ್ಲ
ನಡು ರಾತ್ರಿಯ ಒದ್ದೆ ಬಟ್ಟೆಯ ಬದಲಿಸುವನಲ್ಲ
ಎಣ್ಣೆಯ ಹಚ್ಚಿ ಮ್ಯೆಯನು ತಿಕ್ಕಿ ತೊಳೆಯುವನಲ್ಲ
ಅಗುಳಗುಳ ಹಿಚುಕಿ ಉಣಿಸುವನಲ್ಲ
ತೊದಲು ನುಡಿಗಳ ಗುರುವಾಗುವನಲ್ಲ
ನಿನ್ನ ಮನದ ಮಾತುಗಳರಿಯುವ ತಾಯಿ ಮಮತೆಯವನಲ್ಲ
ನೀನಿಲ್ಲದ ಅಂಗಳವ ನೆನೆದು ಕೊರಗುವನಲ್ಲ

ನನಗೆ ಇಷ್ಟು ಮಾತ್ರ ಗೊತ್ತು ನಾನಾಗದ
ನಾನೇರದ, ನಾ ಮುಟ್ಟದ ಗುರಿಗಳನೆಲ್ಲವ
ನಿನ್ನ ರೂಪದಲಿ ಪಡೆಯುವ ಹಂಬಲ
ಅದಕಾಗಿ ಎಷ್ಟೊ ರಾತ್ರಿಗಳನು ಹಗಲಾಗಿಸಿರುವೆ
ಉಡದುಣ್ಣದೆ, ಮಲಗದೆ ನಿನ್ನ ಶಿಖರದ ತುದಿಯ
ಮುಟ್ಟಿಸಲು, ನಿನ್ನ ಹೆತ್ತವಳಾರೆಂದು ಕೇಳುವಂತೆ
ಮಾಡಿ ಅದರಲಿ ನನ್ನ ನಾ ಹುಡುಕುವೆ

ಗೊತ್ತಾ ಮಗನೆ/ ಳೆ

Wednesday, July 13, 2016

ಬೇಸಿಗೆ ಬಾನು

ಬೇಸಿಗೆಗೆ ಕಡಲನು
ಬೇಡುವ ಬಾನು
ಭೂವಿಗೆ ಹಸಿರನು
ಉಣಿಸದಿರುವುದೇ ತಾನು 

ನಾನೇಷ್ಟು ಓದಿದ್ದೆ ಗೊತ್ತಾ

ನಾನೇಷ್ಟು ಓದಿದ್ದೆ ಗೊತ್ತಾ ...
ನಾನೇಷ್ಟು ಅರಿತಿದ್ದೆ ಗೊತ್ತಾ ...
ನಾನೆಂಥ ಮನಸ್ಸಿನವಳು
ಅಂಥ ತಿಳಿದುಕೊಂಡೆ
ಮದುವೆಯಾಗಿದ್ದೆ ನೀನು
ಯಾಕೆ ...

ನಾನಷ್ಟು ಓದಿದ್ದು, ಅರಿತಿದ್ದು
ನಿನಗೆ ಮುಳುವಾಯಿತೆ
ಅದಕೆ ಬಂಧನವಿರದ
ಅಡುಗೆ ಮನೆಗೆ ನೂಕಿ
ಬಿಟ್ಟೆ ನನ್ನೆಲ್ಲ ಓದು
ಅರಿವು ಅಡುಗೆಯ
ವಗ್ಗರಣೆ ವಾಸನೆಗೆ
ಕಮರುವಂತೆ 

ಯಾವ ದಾರಿ

ಹೂವಿರದ ಬಳ್ಳಿಯಲಿ
ಜೇನು ಸುಳಿಯದು ಸನಿಹದಲಿ
ಶಶಿಯಿರದ ಬಾನಿನಲಿ
ಕಡಲುಕ್ಕೇರದು ತೀರದಲಿ

ನೋವಿಲ್ಲದ ಎದೆಯಲಿ 
ಜಾರದು ಬಿಂದು ಕಣ್ಣಿನಲಿ
ನಗುವಿರದ ಮೊಗದಲಿ
ಗೆಲುವಿರದು ಬಾಳಿನಲಿ

ದೇವರಿರದ ಗುಡಿಯಲಿ
ಯಾವ ದೀಪವ ಬೆಳೆಗಲಿ
ನೀನಿಲ್ಲದ ಪಯಣದಲಿ
ಯಾವ ದಾರಿಯ ಹಿಡಿಯಲಿ 

Tuesday, July 12, 2016

ಒಲವಿನ ಪ್ರೀತಿಯಲಿ

ಒಲವಿನ ಪ್ರೀತಿಯಲಿ
ನೋವಿಗೆ ಸೋಲಿರಲಿ 
ಪ್ರೀತಿಯ ಬದುಕಿನಲಿ
ನಲಿವಿಗೆ ಜಯವಿರಲಿ 

ಮುಳ್ಳಿನ ಹಾದಿಯಲಿ
ಹೂವಿನ ನಗೆಯಿರಲಿ
ಮೆಚ್ಚಿನ ದಿನಗಳಲಿ
ನೋವಿನ ಅರಿವಿರಲಿ 

ಹೇಗೆ ಬರೆಯಲಿ

ಹೇಗೆ ಬರೆಯಲಿ ನಾನು
ಹೇಳದೆ ಹೋದರೆ ನೀನು 
ಹೇಳಿ ಹೋಗಿದ್ದರೆ ನೀನು
ಮರೆಯುತ್ತಿದ್ದೇನೆ ನಿನ್ನ ನಾನು 

ನೆನಪಾಗಿ ಉಳಿದರೆ ನೀನು 
ಹೇಗೆ ಮಲಗಲಿ ನಾನು 
ಮಲಗಿದರೆ ನಾನು
ನೆನಪಾಗುವೆ ನೀನು 

ಉಸಿರೊಂದೆ ನನಗೆ ನೀನು
ಉಸಿರಾಡ ಬೇಕು ನಾನು 
ಉಸಿರಾಗದಿದ್ದರೆ ನೀನು
ಹೇಗೆ ಬದುಕಲಿ ನಾನು 

ನೀನಿಲ್ಲದ ಮನದಲಿ

ನೀನಿಲ್ಲದ ಮನದಲಿ
ನೀನಿರದ ನೆನಪಿನಲಿ
ಏನೆಂದು ಬರೆಯಲಿ
ಬಿಳಿ ಹಾಳಿಯಲಿ

ಆಡಿದ ಮಾತಿರಲಿ
ನೋಡಿದ ಕನಸಿರಲಿ
ಮೀಡಿದ ಶ್ರುತಿಯಿರಲಿ
ಹಾಡಿದ ಗೀತೆಯಿರಲಿ

ಒಂದಾದರೂ ನೆನಪಿರದ
ಮನದಲಿ ಏನೆಂದು
ಬರೆಯಲಿ ಬಿಳಿ
ಹಾಳೆಯಲಿ

ನೀನಿಲ್ಲದ ನೆನಪುಗಳ
ಬರೆದು ಹೇಗೆ ಇರಲಿ
ಆ ಬಿಳಿ ಕಾಗದವ
ಸಾಯಿಸಿ ...