Friday, December 2, 2016

ಬಿತ್ತಲೆದೆಗೆ ಬೀಜವ

ನಿನ್ನ ಎದೆಯಲೊಂದು
ಬಿತ್ತಬೇಕೆಂದಿದ್ದೆ ಪ್ರೇಮದ
ಬೀಜವ
ನಿರಾಕರಿಸಿದೆ...
ಏಕೇ?

ನನ್ನ ಪ್ರೇಮದ ಬೇರು
ನಿನ್ನ ಉಸಿರಾಡಲು ಬಿಡದಂತೆ
ಬಿಗಿಯುತ್ತಿತ್ತೆ ?

ನರನಾಡಿಗಳಲಿ ಹೊಕ್ಕು
ನೆತ್ತರನೆಲ್ಲವ ಹೀರಿ ನಿನ್ನಂದವ
ಬತ್ತಿಸುತಿತ್ತೆ ?

ಪ್ರೇಮದ ಅಮಲಿನಲಿ
ತೇಲಿಸಿ, ಕಣ್ಣಿಗೆ ಪೊರೆಯನು
ಸುತ್ತುತ್ತಿತ್ತೆ?

ಹುಚ್ಚಿ...

ಒಮ್ಮೆ ನೀನು ಬಿತ್ತಲು
ಹದವಾಗಿದ್ದರೇ
ಹೂಗಳ ಬೃಂದಾವನವನೇ
ಸೃಷ್ಟಿಸುತ್ತಿದ್ದೆ 

ರಸಸುಗಂಧದಿಂದ ನಿನ್ನ
ಎದೆಯನು ಭರಿಸುತ್ತಿದ್ದೆ
ಎಸಳುಗಳ ಕಾಂತಿಯಿಂದ
ನವಿಲನು ನಾಚಿಸುವ
ಬಿಲ್ಲನು ಮೀರುವ
ರಂಗನು ಬಳೆಯುತ್ತಿದ್ದೆ

ನಿರ್ಮಲ ಪ್ರೀತಿಯ
ಕಾಂತೀಯ ಕಣ್ಣೊಳು ತುಂಬಿ
ಜಗವನೆಲ್ಲವ ಸುಂದರವಾಗಿಸುತ್ತಿದ್ದೆ
ನಿನ್ನರಿವಿಗೆ ಬರುವಂತೆ
ಪ್ರೇಮದ ಬೇರು ಇಳಿದು
ಕನಸಿನ ಟೊಂಗೆ
ಟಿಸುಲೊಡೆಯುವಂತೆ
ಚಿಗುರುತಿದ್ದೆ

ಬದುಕಿಗೆ ಮುನ್ನುಡಿ

ಕುಂದುಗಳು ಎಷ್ಟೋ ಇವೆ ಬಾಳಿನಲಿ
ಕಂದರಗಳು ಅಷ್ಟೇ ಇವೆ ಹಾದಿಯಲಿ
ಕಳಚುತ್ತಾ, ಜಾರುತ್ತ, ಹೊರುತ್ತ ಬದುಕಬೇಕೊ?
ಇಳಿಯುತ್ತ, ಹಾರುತ್ತ, ಬೀಳುತ್ತ ಸಾಗಬೇಕೊ?

ಎಷ್ಟು ಗಂಟುಗಳ ಬಿಡಿಸುತ್ತ ಸಾಗಲಿ
ಬದುಕುವ ದಿನಗಳಿಗಿಂತ ನೋವಿನ
ದಿನಗಳೇ ಉಳಿದಿರುವಾಗ
ಎಷ್ಟು ತಡೆಗಳ ದಾಟಿ ನಡೆಯಲಿ
ನಡೆಯುವ ಹಾದಿಗಿಂತ ಓಡುವ
ರಸ್ತೆಯೇ ಮುಂದಿರುವಾಗ

ಎಷ್ಟು ದೀಪಗಳ ಹಚ್ಚುತ್ತ ಹೋಗಲಿ
ಮನೆಯ ಕೋಣೆಗಿಂತ ಜಗದ
ಕೋಣೆಗಳೇ ಕತ್ತಲಲಿರುವಾಗ
ಎನಿತು ದಿವಸವ ಬೆಳಕ ಹಿಡಿದಿರಲಿ
ಮನೆಯ ಅಂಗಳಕ್ಕಿಂತ ಜಗದ
ಅಂಗಳವೇ ದೊಡ್ಡದಿರುವಾಗ

ಹೇಳುವ ಮಾತುಗಳನದೇಷ್ಟು ಹೇಳಲಿ
ಹೇಳುವ ಉತ್ತರಕ್ಕಿಂತ ಕೇಳುವ
ಪ್ರಶ್ನೆಗಳೆ ಹೆಚ್ಚಿರುವಾಗ
ಎಷ್ಟು ಬರೆಯುತ್ತ ಕುಳಿತಿರಲಿ
ಒಲ್ಲದ ಬದುಕಿಗೆ ಬದುಕುವ
ಮುನ್ನುಡಿ ಕೇಳುತಿರುವಾಗ

ಏನು ನಿನ್ನ ಪ್ರಾಯ

ಏನು ನಿನ್ನ ಪ್ರಾಯ
ತೋರಿ ನೀನು ಮಾಯ
ಮಾಡಿದೆಲ್ಲ ಎದೆಗೆ
ಒಂದು ಗಾಯ

ನೋಡಿ ನಿನ್ನ ರೂಪ
ಮತ್ತೇಳಲಿಲ್ಲ ಭೂಪ
ಹಾಕಿದ್ಹೇಂತ ಟಾಪ
ನೋಡಿದೋರು ಎಲ್ಲ ಇಲ್ಲಿ
ತೋಪ ತೋಪ ತೋಪ

ಎಂಥ ಮನಸ್ಸು ನಿಂದು
ಕೇಳಿದ್ನೆಯಲ್ಲೆ ಅಂದು
ನಾಚದಿರು ಇಂದು
ಬಿದ್ಹೊದರಲ್ಲೆ ಎಲ್ಲ
ಬೆಂದು ಬೆಂದು ಬೆಂದು

ಕಾಡುತಿರುವ ಕವಿತೆಗಳು

ಏಕೇ ಹೀಗೆ ಕಾಡುತಿರುವಿರಿ
ಕವಿತೆಗಳೆ ಅರ್ಧದಲೆ ಹುಟ್ಟಿ
ಹುಟ್ಟಿದರ್ಧದಲೆ ನಿಲ್ಲುತಿರುವಿರಿ

ಬಾವಿಯ ನೀರನು ಸೇದುವ
ಹಗ್ಗವು ಅರ್ಧದಲೆ ತುಂಡಾದ ಹಾಗೆ
ಕಂಡ ಕನಸು ನನಸಾಗುವ ಮೊದಲೇ
ಎಚ್ಚರವಾದಂತೆ
ಹಾರುವ ಹಕ್ಕಿಯು ಗೂಡು
ಸೇರದೆ ಬೇಡನ ಬಲೆಗೆ ಸಿಕ್ಕಂತೆ

ಅದೇಷ್ಟೊ ಕವನಗಳು ಅರ್ಧದಲೆ
ಹುಟ್ಟಿ ಅರ್ಧಕ್ಕೆ ನಿಂತಿರುವಿರಿ
ನಿದ್ರಿಸಗೊಡದೆ ಅನ್ಯಮನಸ್ಕನಾಗಿಸಿ
ನಿಮ್ಮನು ನೋಡಿ, ಓದಿ ಮನಸು
ಉರಿಯುವ ಹಾಗೆ ಯಾಕೆ ಹೀಗೆ
ನಿಲ್ಲುವಿರಿ ಅರ್ಧದಲೆ 

ನಿಮ್ಮನ್ನು ಪೂರ್ಣಗೊಳಿಸಲು
ನನ್ನಲ್ಲಿ ಶಬ್ದಗಳಿಲ್ಲವೊ, ಮನಸಿಲ್ಲವೊ.
ಸಮಯವಿಲ್ಲವೊ, ಸಮಯವಿದ್ದರೂ
ಏಕಾಂತವಿಲ್ಲವೊ, ಏಕಾಂತವಿದ್ದರೂ
ಭಾವನೆಗಳಿಲ್ಲವೊ ಒಂದೂ ನನ್ನರಿವಿಗೆ
ಬರುತಿಲ್ಲ

ಮರೆಯಾಗಿ ಮರುಗಿಸದಿರಿ
ಕಾಣದೆ ಕಾಡದಿರಿ
ನಲುಗಿಸಿ ನೋಯಿಸದಿರಿ
ಬನ್ನಿ ಸೇರಿಕೊಳ್ಳಿರಿ
ಅರ್ಧಕ್ಕೆ ನಿಲ್ಲದೆ
ನನ್ನನೂ ನಿಲ್ಲಿಸದೆ

Thursday, December 1, 2016

ಕಾಮದ ದಾಹ

ಕಾಮದ ದಾಹ ಇಬ್ಬನಿ
ಮಂಜಿನಂತೆ ಎಷ್ಟು ಬಿದ್ದರೂ
ಭೂಮಿ ತೊಯ್ಯೋದಿಲ್ಲ

ಇರುಳಿನ ನಕ್ಷತ್ರಗಳಂತೆ
ಎಷ್ಟು ಲೆಕ್ಕವಿಟ್ಟರೂ ಅದು
ಮುಗಿಯುವುದಿಲ್ಲ

ಕಡಲಿನ ಒಡಲಂತೆ
ಬಳಸಿ ಬಳಸಿದಷ್ಟು
ನೀರು ಬರಿದಾಗುವುದಿಲ್ಲ

ಮರುಭೂಮಿಯ ಮರಳಂತೆ
ಗಾಳಿಗೇಷ್ಟೆ ಹಾರಿ ಹೋದರು
ದಿನ್ನೆಗಳು ಮರೆಯಾಗುವುದಿಲ್ಲ

ಅದೊಂದು ಶಿವನ ಕಂಠದಲ್ಲಿರುವ
ವಿಷದಂತೆ
ಸಜ್ಜನರು ಉಗುಳಲು ಆಗದ, ನುಂಗಲು
ಆಗದಂತಹ ಹೆಜ್ಜೇನಿನ ಸಿಹಿಯ ವಿಷದಂತೆ

ಲೋಕದಲಿ ಕಾಮದ
ದೀಪವ ಹಚ್ಚಬೇಕು
ವಲೀನ ಹಚ್ಚಬಾರದು

ಮನೇಲಿ ಅದರ
ಕಡ್ಡಿ ಗೀಚಬೇಕ
ದೀಪಾನ ಹಚ್ಚಬಾರದು

ಕ್ಷಮೆಯಿರಲಿ ಕಾಗದಗಳೆ

ಅವಳ ಪ್ರೀತಿಯ ಪಡೆಯಲು
ಅವಳ ಮನವ ಸೆಳೆಯಲು
ನಿಮ್ಮನ್ನೇಷ್ಟು ಹರಿದುಬಿಟ್ಟೆ
ಕರುಣೆ ತೋರದೆ ಬಿಸಾಕಿಬಿಟ್ಟೆ

ನಾನು ಬರೆಯುವ ಪದಗಳು
ನಾನು ತಿದ್ದುವ ಸಾಲುಗಳು
ಒಂದಾದರೂ ಕೂಡಲಿಲ್ಲ, ಸೇರಲಿಲ್ಲ
ಹರಿದು ಬಿಸಾಡುವದ ನಾ ಬಿಡಲಿಲ್ಲ

ನಿನ್ನ ಮೈಯ ಮೇಲೆ ಅದೇಷ್ಟೋ
ಮಾತುಗಳನು ಬರೆದುಬಿಟ್ಟೆ
ಹಿತವಾಗದೆ, ತೃಪ್ತಿಯಾಗದೆ ನಿನ್ನ
ಮೈಯ ತುಂಬೆಲ್ಲಾ ಗೀಚಿಬಿಟ್ಟೆ

ಕೋಣೆಯ ಮೂಲೆ ಸಾಲದಾಗಿದೆ
ಪುಸ್ತಕದ ಹಾಳೆಗಳು ಸಾಲದಾಗಿದೆ
ಓಡುವ ಸಮಯ ನಿಲ್ಲದಾಗಿದೆ
ಅವಳಿನ್ನು ನನಗೆ ಸಿಗದಾಗಿದೆ

ಅವಳ ಪ್ರೀತಿಯ ಪಡೆಯಲು
ಎಷ್ಟೋ ಕಾಗದಗಳ ಹರಿದುಬಿಟ್ಟೆ
ನಿನ್ನ ನೋವ ತಡೆಯಲು
ಬಾಳಿಂದ ಅವಳನೇ ಮರೆತುಬಿಟ್ಟೆ

ಕ್ಷಮೆಯಿರಲಿ ಕಾಗದಗಳೇ

Monday, November 28, 2016

ಎಲ್ಲಿ ಕಳೆದಿರುವಿರಿ ಕವಿತೆಗಳೆ

ಎಲ್ಲಿ ಕಳೆದಿರುವಿರಿ ಕವಿತೆಗಳೆ
ಎಲ್ಲಿ ಅಡಗಿರುವಿರಿ ಪದಗಳೆ
ಬನ್ನಿ ಸೇರಿಕೊಳ್ಳಿರಿ ನನ್ನಲೊಮ್ಮೆ
ದಾರಿ ಕಾಯುತ್ತಿರುವೆ ನಿಮ್ಮನ್ನೆ

ಕೇಳಿರಿಲ್ಲಿ ಅವಳ ನೋವನ್ನು
ಸೀರೆ ಸೇರಗಂಚಲಿ ಕಟ್ಟಿರುವಳು
ಕಣ್ಣಂಚಲಿ ಹಿಡಿದಿಟ್ಟಿರುವಳು
ತುಟಿಯಂಚಲಿ ತಡೆಹಿಡಿದಿಹಳು
ಬರೆಯಬೇಕಿದೆ, ಕರಗಿಸಿ ನಲಿಸಬೇಕಿದೆ
ಅವಳ ಮನವನ್ನು
ಬಂದುಬಿಡಿ ಅಕ್ಷರಗಳೆ

ನೋಡಿರಿಲ್ಲಿ ಇವನ ಸಂಕಟವನು
ಹೇಳಲಾಗದೆ, ನುಂಗಲಾಗದೆ, ಮರೆಯಲಾಗದೆ 
ಬಾಟಲಿಯ ಮದ್ಯವ ಹಿಡಿದು ಲೋಕದ 
ಮಧ್ಯದಲಿ ಕುಳಿತಿರುವನು
ಮರೆಸಬೇಕಿದೆ, ಬದುಕಿಸಿ ಗೆಲ್ಲಿಸಬೇಕಾಗಿದೆ
ಇವನ ಬದುಕನ್ನು
ಓಡಿ ಬನ್ನಿ ಅಕ್ಷರಗಳೆ

ಬರೆಯಬೇಕಿದೆ ಬಹಳಷ್ಟು
ಬರದುದಿದೆ ತೃಣದಷ್ಟು
ಜಗದ ನೋವನೆಲ್ಲವ
ಬೆರಸಬೇಕಿದೆ ನಿಮ್ಮಲ್ಲಿ
ಜಗದ ಸುಖವನೆಲ್ಲವ
ತುಂಬ ಬೇಕಿದೆ ನಿಮ್ಮಲ್ಲಿ

ಬನ್ನಿ ಪದಗಳೆ
ಈ ಪೆದ್ದು ಕವಿಯೊಳಗೆ