Monday, January 16, 2017

ನೀನಿಲ್ಲದ ಮನ

ನೀನಿಲ್ಲದ ಮನೆ
ನೀರಿಲ್ಲದ ಕೆರೆಗೆ ಬಾಯಾರಿ
ಬಂದ ಹಸುವಿನಂತಾಗಿದೆ

ನೀನಿರದ ಸಂಜೆಗಳು
ಹಿಂಡಿನಿಂದ ಬೇರ್ಪಟ್ಟ ಕಿರುಚುತ
ಹಾರುವ ಗಿಳಿಯಂತಾಗಿದೆ

ನೀನಿರದ ಸಮಯ
ಮುಳ್ಳುಗಳೆ ಇರದ ಗಡಿಯಾರವು
ನಿಂತಿರುವುದೊ ಓಡುತಿರುವುದೊ
ಚಲನೆಯಿಲ್ಲದಂತಾಗಿದೆ

ಮಾತುಗಳಿಲ್ಲದ ಕೋಣೆ
ಬೆಟ್ಟದಲಿ ಸಿಡಿಮದ್ದು ಸಿಡಿದು
ತೆಳೆಯುವ ನಿಶ್ಯಬ್ದದಂತಿದೆ

ಹೆಜ್ಜೆಗಳ ಸದ್ದಿಲದ ವರಾಂಡ
ಕಾಲಿಗೆ ಗೆಜ್ಜೆಯ ಕಟ್ಟದೆ ನರ್ತಿಸುವ
ರಂಗಮಂದಿರದಂತಾಗಿದೆ

ನೀನಿರದ ಈ ಮನ
ಉಸಿರಾಟ ನಿಂತು ಎದೆಯ
ನೆತ್ತರೆಲ್ಲ ಹೆಪ್ಪುಗಟ್ಟಿದಂತಿದೆ

Saturday, January 14, 2017

ನಮ್ಮವ್ವ ೧೭

ಸಂಕ್ರಾಂತಿ ಬಂತಂದ ಎಲ್ರೂ
ಸಿಹಿ ಹಂಚತಾರ ಬಾಯಿಗೆ
ಎಳ್ಳು ಬೆಲ್ಲ ತಿನಿಸ್ತಾರ
ಕೇಳವ್ವ
ವರುಷ ಪೂರ್ತಿ ಕೈಯಿಂದ ಹಂಚೊ
ಸಿಹಿನ ಬಾಯಿಂದ ಯಾಕ ಹಂಚೊದಿಲ್ಲೊ
ನಮ್ಮವ್ವ

ದೀಪಾವಳಿ ಬಂತಂದ ಮನಿ ಒಳಗ
ಮನಿ ಹೊರಗ ದೀಪಾ ಬೆಳಗತಾರ
ಕೇಳವ್ವ
ದೇಹಾ ಅನ್ನೊ ಮನಿಯೊಳಗ ಅರಿವು
ಅನ್ನೊ ಜ್ಯೋತಿನ ಯಾಕರ ಹಚ್ಚೊದಿಲ್ಲೊ
ನಮ್ಮವ್ವ

ಹಬ್ಬ ಹಬ್ಬ ಅಂತ್ಹೇಳಿ ಹುಳಿ ಬಿಟ್ಟ ಸಿಹಿ
ಉಣ್ಣಾಕ ಕುಂತಿರ್ತಾರ
ಕೇಳವ್ವ
ಮಂದಿ ಬಾಳೆಕ ಹುಳಿ ಹಿಂಡಾಕ
ತುದಿಗಾಲಿಲೆ ನಿಂತಿರ್ತಾರೊ
ನಮ್ಮವ್ವ

ಸಂಕ್ರಮಣ

ಬಂದಿದೆ ಸಂಕ್ರಮಣ
ತಂದಿದೆ ಬಾಗಿಲಿಗೆ ನವ ತೋರಣ
ನೇಗಿಲಿಗೆ ಹೆಗಲ ಕೊಟ್ಟ ಬಸವನ
ಪೂಜಿಸುವ ಪುಣ್ಯ ದಿನ
ದವಸ ಧಾನ್ಯಗಳ ನೀಡಿದ
ಭೂತಾಯಿಗೆ ನಮಿಸುವ ದಿನ

ರವಿಯು
ಧನುರ್ ನಿಂದ ಹೊಮ್ಮಿ ಮಕರವ
ಅಪ್ಪುವ ದಿನ
ಸುಡುವ ಧೀರ್ಘ ಹಗಲುಗಳ
ಪ್ರಾರಂಭೊತ್ಸವದ ದಿನ
ಹಸಿ ಹಸಿ ಭೂದೇವಿ ತಳಗಳ
ಫಸಲಿನ ತೆನೆಗಳ ಕಾಳುಗಳು ಗಟ್ಟಿಗೊಳ್ಳಲು
ಆರಂಭದ ದಿನ
ಮೈಗಂಟಿದ ಪಾಪಗಳ ತೊಳೆಯಲು
ತಣ್ಣೀರಿನ ಸ್ನಾನವಗಯ್ಯುವ ದಿನ
ನವ ಜೋಡಿಗಳು ಹಸೆಮಣೆಯೆರಲು
ಮುನ್ನುಡಿ ಬರೆಯವ ದಿನ
ತೀರ್ಥಯಾತ್ರೆಯ ಕೈಗೊಳ್ಳುವವರಿಗೆ
ಶುಭದಿನ
ತಾಯಿ ಗೌರಿ ಶಿವನ ಪಡೆಯಲು
ತಪವ ಪ್ರಾರಂಭಿಸಿದ ಮಹಾದಿನ

ಈ ದಿನ
ವರುಷದುದ್ಧಕೂ ಕೆಟ್ಟ ಮಾತುಗಳನಾಡಿ
ಅವರಿವರ ವಿಷಯಗಳ ಆಡಿ ಆಡಿ ವಿಷದ
ನಾಲಿಗೆಗೆ ಎಳ್ಳು ಬೆಲ್ಲಗಳ ಸವಿಯ ಸವಿಯುವ ದಿನ
ನೋಡಿ ಮಾಡಿ ಬೇರೆಯವರಿಗೂ ಕಲಿಸಿ
ನಿಮ್ಮ ದೇಹಕ್ಕೂ ಮೆತ್ತಿದ ಪಾಪದ ಕಲೆಗಳ
ತಣ್ಣೀರಿನಲಿ ಹರಿಯುವ ಹೊಳೆಯಲಿ
ನಿಮ್ಮೆಲ್ಲರ ಪಾಪವ ಹೊತ್ತು ನಿಲ್ಲುವ
ಕಲ್ಯಾಣಿಗಳಲಿ ಮೈ ತೊಳೆಯುವ ದಿನ

ಯಾವ ದಿನವಾದರೇನೂ ಮನವದು
ಅನುಕ್ಷಣವು ಬೆಳಕ ಬಯಸಿದಿದ್ದರೆ
ಯಾವ ಘಳಿಗೆಯಾದರೇನೂ ಕಾಯವದು
ಕಾಯಕವ ಮಾಡದಿದ್ದರೆ
ಸುಣ್ಣಕ್ಕೆ ಹೆಪ್ಪನು ಹಾಕಿದಂತೆ
ಕಲ್ಲನು ಬೆಣ್ಣೆಯಲಿಟ್ಟು ಕಾಯಿಸಿದಂತೆ

Friday, January 13, 2017

ನಮ್ಮವ್ವ ೧೬

ಶ್ರೀರಾಮನೇ ರಾಜ್ಯ ಆಳಿದ್ರೂ
ಸೀತೆ ಕಾಡಿಗೆ ಹೋಗೊದ ತಪ್ಪಲಿಲ್ಲ
ಸನ್ಯಾಸಿನೆ ದೇಶ ಆಳಿದ್ರೂ
ಹೆಣ್ಣಿನ ಮಾನ ಕಾಯೋರಿಲ್ಲ
ಕೇಳವ್ವ
ಗಂಡ ಷಂಡನಾದ್ರೂ ಹೆಂಡ್ತಿನ
ಹೊಡೆಯೊದ ಬಿಡೊದಿಲ್ಲ
ನಮ್ಮವ್ವ

ಬಾವಿ ಬಾಯಿಗೆ ಹೊಚ್ಚಬೊದು
ಹಂಡೆ ಬಾಯಿ ಮುಚ್ಚಬೊದು
ಚರಗಿ ಬಾಯಿ ಮುಚ್ಚಬೊದು
ಕೇಳವ್ವ
ಲಗಾಮ ಇಲ್ಲದ ಅತ್ತಿ ಬಾಯಿಗೆ
ಏನ ಹಾಕಿ ಮುಚ್ಚಲss
ನಮ್ಮವ್ವ

ವಟಗುಟ್ಟೊ ಹಕ್ಕಿನ ಹಾರಸಬಹುದು
ಗುಂಯ್ಯಗುಟ್ಟೊ ಹುಳನ ಬಡಿಬಹುದು
ಬೀಡ ಬಿಟ್ಟ ಮಂಗ್ಯಾನ ಒಡಿಸಬಹುದು
ಕೇಳವ್ವ
ಮೂರಹೊತ್ತು ತಿಂದುಂಡು ಮದುವಿಲ್ದ
ಕೆಲಸಿಲ್ದ ನಾದ್ನಿಯರ ಕೊಡೊ ಕಾಟಕ್ಕ
ಏನ ಮಾಡ್ಲೇ
ನಮ್ಮವ್ವ

ನಮ್ಮವ್ವ ೧೫

ಹಸಿರಿದ್ದ ಬದುನ ದನ ಬಿಡಾಂಗಿಲ್ಲ
ಕೇಸರಿದ್ದ ಕೆರಿನ ಎಮ್ಮಿ ಬಿಡಂಗಿಲ್ಲ
ಹಾದಿ ಹೊಲದನ ಫಸಲನ್ನ ಹೋಗೊರ
ಬರೋರ ಬಿಡಂಗಿಲ್ಲ
ಕೇಳವ್ವ
ಹಬ್ಬಕ್ಕ ತವರಿಗೆ ಹೊಂಡತಿನಂದ್ರ
ನನ್ನ ದ್ಯಾವ್ರು ಸೀರಿ ಸೆರಗ ಬಿಡವಲ್ರ
ನಮ್ಮವ್ವ

ಬಂಗಾರ ಎಷ್ಟ ದಿನ ನೀರಾಗಿದ್ರೂ
ತುಕ್ಕ ಹಿಡಿಯಾಂಗಿಲ್ಲ
ಕಬ್ಬಿಣನಾ ಎಷ್ಟ ಬಿಸಲಿಗೆ ಇಟ್ರುನೂ
ಅದು ಕರಗಂಗಿಲ್ಲ
ಕೇಳವ್ವ
ತವರನ್ಯಾಗ ಎಷ್ಟ ದಿನ ನಾನಿದ್ರೂ
ಅವರ ನನ್ನ ಮರೆಯಂಗಿಲ್ಲ
ನಮ್ಮವ್ವ

ಅಮಾಸಿ ಹಿಂದ ಹುಣ್ಣಿಮೆ ಬರತೈತಿ
ಹುಚ್ಚಯ್ಯದ ಹಿಂದ ತೇರ ಎಳಿತಾರ
ಹಸು ಹಿಂದ ಕರು ಒಡತೈತಿ
ಕೇಳವ್ವ
ನಾನಿಲ್ದ ಮೂರ ದಿನಕ ನನ್ನ ಕರೆಯಾಕ
ಬಂದಾರ ನೋಡ
ನಮ್ಮವ್ವ

Thursday, January 12, 2017

ನಮ್ಮವ್ವ ೬

ನಮ್ಮ ಹೊಲದಾಗಿನ ಮುಳ್ಳು
ನಮ್ಮ ಅಂಗಾಲಿಗೆ ಚುಚ್ಚತಾವು
ಕೇಳವ್ವ
ಮನದಾಗ ಇರವ್ನ ಮನಸಿಗೆ
ಚುಚ್ಚುವಂಗ ಮಾತಾಡ್ತಾನೊ
ನಮ್ಮವ್ವ

ಗುಲಾಬಿ ಹೂ ಹರಿಯಾಕ ಹೋದ್ರ
ಮೊದಲ ಅದರ ಮುಳ್ಳ ಚುಚ್ಚತಾವು
ಕೇಳವ್ವ
ಗಂಡನ್ನವಂಗ ಮಾತಾಡ್ಸಾಕ ಹೋದರ
ಬರೀ ಚುಚ್ಚ ಮಾತ ಮಾತಾಡ್ತಾನೊ
ನಮ್ಮವ್ವ

ಹೊಲದ ಬದುವಿಗೆ ದನ ಬರಬಾರ್ದಂತ
ಜಾಲಿ ಗಿಡದ ಬೇಲಿ ಹಾಕ್ತಾರ
ಕೇಳವ್ವ
ಬರೆ ಹೊಲಸ ಮಾತಾಡೊ ಇವನ ಬಾಯಿಗೆ
ಯಾವ ಹೊಲಿಗಿ ಹಾಕ್ತಾರೊ
ನಮ್ಮವ್ವ

ನಮ್ಮವ್ವ ೭

ಬೆಳ್ಳ ಬೆಳ್ಳನೆ ಮಲ್ಲಿಗೆ
ದುಂಡು ದುಂಡನಾ ಮಲ್ಲಿಗೆ
ಏಳು ಸುತ್ತಿನ ಮಲ್ಲಿಗೆ
ಜಡೆತುಂಬಾ ಮುಡಿಸವ್ನೆ
ನೋಡವ್ವ
ನಾಕು ತಿರುವಿನ ಜಿಲೆಬಿಯ
ತಂದಾನ ಬಾಯ್ತುಂಬ ತಿನಿಸ್ಯಾನ
ಮುಖದ ತುಂಬ ನಾಚಿಕಿನ
ತುಂಬಸ್ಯಾನ
ನಮ್ಮವ್ವ

ಹಚ್ಚ ಹಸಿರಿನ ಇಲಕಲ್ ಸೀರೆ
ಚಕ್ಕ ಚೌಕ ಖಾನಿಯ ಸೀರೆ
ಮೈತುಂಬ ಉಡಿಸ್ಯಾನ
ನೋಡವ್ವ
ನಲವತ್ತು ಗುಂಡಿನ ಬಂಗಾರದ
ಸರ ಹಾಕ್ಯಾನ
ಕೆನ್ನಿಗೆ ಮುತ್ತಿನ ಮುದ್ರೆನ ಒತ್ಯಾನ
ನಮ್ಮವ್ವ

ಊರ ಊರ ಸುತ್ತಸ್ಯಾನ
ಮಂದಿ ಮಕ್ಳ ತೋರಸ್ಯಾನ
ಮಾತ ಮಾತಿಗೂ ನಗಸ್ತಾನ
ನೋಡವ್ವ
ಜಾತ್ರೆನ ಜೋಕಾಲಿ ಹತ್ತಸ್ಯಾನ
ಬತ್ತಾಸು ಬೆಂಡು ಕೊಡಸ್ಯಾನ
ವರುಸ ತುಂಬುದರೊಳಗ
ಉಡಿಯಾಗ ಕುಡಿ ಹಾಕ್ಯಾನೊ
ನಮ್ಮವ್ವ