Friday, January 27, 2017

ಬದುಕಬೇಕಿದೆ ನಿನ್ನೊಡನೆ

ಮೂಡುತಿದೆ ಮೋಹ
ಮೋಡದ ಮರೆಯಿಂದ
ಮಲೆಗಳ ತುದಿಯ
ಚುಂಬಿಸೊ....
ಹಂಬಲವ ಹೊತ್ತು
ಬರುವ ರವಿಯಂತೆ

ಚಿಮ್ಮುತಿದೆ ಆಸೆ
ಕಡಲ ತಟವ ಚಿಮ್ಮಿ ಚಿಮ್ಮಿ
ಸಾಗರದ ಬಂಧನವ ತೊಡೆದು
ಬಂಡೆಯನು ತೊಯಿಸುವ
ನೀರಂತೆ

ಉಕ್ಕೇರುತಿದೆ ಪ್ರೀತಿ
ಮನದ ಕುಡಿಕೆಯಿಂದ
ವಿರಹದ ಕುದಿಗೆ ಕುದ್ದು ಕುದ್ದು
ಇನ್ನು ತಡೆಯಲಾಗದೆಂದು
ಪುಟಿ ಪುಟಿದು ಬರುವ
ಹಾಲಿನಂತೆ

ಕಟ್ಟಬೇಕಿದೆ ಬದುಕು
ಅರ್ಧ ಚಂದ್ರಾಕೃತಿಯ
ಹುಳುವಿನರಮನೆಯಂತೆ
ಅದರೊಳು ನಿನ್ನ ಸದಾ
ನನ್ನ ಪ್ರೀತಿಯ ಬೆಚ್ಚಗಿನ
ಹೊದಿಕೆಯಲಿ ಮಲಗಿಸಿ
ಹೊನ್ನ ಕನಸುಗಳ ಕಾಣುವಂತೆ

ಬದುಕಬೇಕಿದೆ ನಾನು
ನಿನ್ನೊಡನೆ

ವೇದನೆಯ ಮರೆಯಲು

ನೀ ಬಿಟ್ಟು ಹೋದ
ಗಾಯದ ಗುರುತನ್ನು
ಊದು ಊದು ಊದಿದೆ
ವಲೆಗೆ ಊದಿದ ಬೆಂಕಿ
ಹೆಚ್ಚಾದಂತೆ, ಊದಿದ
ಗಾಯವು ಮರೆಯಾದರೂ
ಕೆಂಡದ ನೋವು ಇನ್ನೂ
ಹಾಗೆ ಮನವ ಸುಡುತಿದೆ

ಗಾಯದೆದೆಗೆ ಮುಲಾಮು
ಹಚ್ಚುವ ವೈದ್ಯರಾರು
ಇಲ್ಲವಿಲ್ಲಿ
ನಿನ್ನ, ನಿನ್ನ ನೆನಪುಗಳ
ಕೇಳಿ ಹೇಳಿ ಸೀಳಿ
ಕೆಂಡವ ಕೆದರಿ ಅವರ
ಚಳಿಯ ಮನವ
ಕಾಯಿಸಿಕೊಳ್ಳುವರಿಲ್ಲಿ

ಅವರಾಡುವ ಮಾತುಗಳು
ಉರಿವ ಸೌದೆಗೆ ನೀರು
ಚಿಮುಕಿಸಿದಂತೆ
ಕಾಯ್ದ ಎಣ್ಣೆಯೂ
ಕೈಗೆ ಸಿಡಿದಂತೆ
ಕುದಿವ ಗಂಜಿಯ
ಗಟಗಟನೆ ಕುಡಿದಂತೆ
ಸುಡುವ ಬೆಂಕಿಯ
ಮೈಗೆ ಹಚ್ಚಿಕೊಂಡು
ನಿಂತಂತಾಗಿದೆ

ಬಂದುಬಿಡು, ಯಾವುದಾದರೂ
ನೆನೆಪಿನ ಮದ್ದನು ತಂದು
ಲೇಪಿಸು ಆದ ಗಾಯದ
ಗುರುತಿಗೆ
ಮನಸಿಗೆ ಮಾತುಗಳ ಸಿಂಚನವ
ಸಿಂಪಡಿಸದಿದ್ದರೂ ನಿನ್ನ
ಮಂದಾರದ ಮೌನವದೊಂದಾದರೂ
ಸಾಕು ಸಾವಿರ ವೇದನೆಯ ಮರೆಯಲು

ಮನದ ಪನ್ನೀರು

ಚಕೋರಿ
ಬಾನೊಳ್ಹಾರುವ ಜೋಡಿ ಹಕ್ಕಿಗಳ
ರಕ್ಕೆಗಳ ಬಲವಾದರು ಕುಂದುವುದು
ನಮ್ಮಿಬ್ಬರ ಮನದಾಸೆಯ ಹಕ್ಕಿಗಳ
ರೆಕ್ಕೆಗಳೆಂದಾದರೂ ಕುಂದಾವು

ಚಂದ್ರಿಕೆ
ಕತ್ತಲ ಬೆಳ್ಳಿಗೆ ಹೇರುವುದು
ಹಗಲೆ ಬಂಧ
ಮಿಂಚಿನ ಬಳ್ಳಿಯ
ಮೊಗದ ನಗುವ ಬೆಳ್ಳಿಗೆ
ಯಾವ ಋತುವು
ಯಾವ ಹೊತ್ತು
ಹೋರಿಸಲಾದಿತು
ನಿರ್ಬಂಧ

ದೀಪಿಕೆ
ತರುವಿನಾ ತಂಗಾಳಿ ತರುವುದು
ದೀಪಕೆ ತಮಸ್ಸು
ಜೀವನಾ ಜ್ಯೋತಿ ಬೆಳಗುವಾ
ಸುಮತಿ
ತಮವಾರು ತುಂಬುವರು ನಮ್ಮಲಿ
ನೀ ಸುಡುವ ಬೆಂಕಿ

ಅಸ್ತಿನಿ
ಅಸ್ತಮವಾಗುವನವನು ಅವಧಿ
ಅಳಿದ ಬಳಿಕ
ಯಾವ ಅವಧಿಗಳಿಲ್ಲ ಜಗದಲಿ
ಎರಡು ಮನಗಳಸ್ತಮವ ಕಾಣಲು
ಕಾಯದ ಕಾಯಿ ಒಡೆದು ಬಿದ್ದರೂ
ಚೆಲ್ಲುವುದು ಹರಿಯುವುದು
ತಣಿಸುವುದು ಮನದ ಪನ್ನೀರು

ನಯವಂಚಕಿ

ಕಾದ ಕಂಗಳಲಿ ಕಣ್ಣೀರು ಸುರಿದಿರೆ
ಬೆಂದ ಮನದಲಿ ಅಗ್ನಿ ಸುಡುತಿರೆ
ನೀ ಬರುವ ದಾರಿಗೆ ಕಾದಿಹೆ ನಾ
ಹೋಗುವ ದಾರಿ ಅರಿಯೆ ನಾ

ಕಾದು ಸೋತ, ಕನಸು ಕಂಡ
ನಿನ್ನಂದವ ಮನದಲಿ ರೂಪಿಸಿದೀ
ಕಣ್ಣೇರಡನು ಕಿತ್ತು ಹಾಕಲೆ?
ನಿಜ
ಮನದ ಮೋಹದ ಸೆಳೆತಕೆ
ಬಲಿಯಾಗಿ ನೋಡುವ
ಕಂಗಳಿಗೇಕಿ ಶಿಕ್ಷೆ

ಕಾಣದ ಮನವ ಹೇಗೆ ದಂಡಿಸಲಿ
ನಿಲ್ಲದೆ ಕುಳ್ಳದೆ ಮಲಗದೆ
ಎಲ್ಲಿಯೂ ನಿಲ್ಲಗೊಡದೆ
ಕಣಕಣದಳವಳ ಹರಿಸಿ
ಅವಳಿಲ್ಲದ ಬಾಳು ರಸವಿರದ
ಬಾಳೆಯಂತಾಗಿಸಿ
ದೇಹವ ನೋವಿನ ಮುದ್ದೆಯ
ಮಾಡಿದ ಮನಸನು
ಹೇಗೆ ಲತಾಯಿಸಲಿ

ನಿಗ್ರಹಣಕ್ಕದಾವ ಮಂತ್ರವ ಪಠಿಸಲಿ
ಹರೆಯದೆ ಹಾರದೆ ನುಸುಳದಂತೆ
ನಿನ್ನ ಚೆಲುವು ನನ್ನ ಕಾಡದಂತೆ
ನಿನ್ನ ನಗವು ನನ್ನಿರಿಯದಂತೆ
ನಿನ್ನ ಮಾತುಗಳು ಕೊರೆಯದಂತೆ
ಅಷ್ಟಧಿಗ್ಬಂಧನದಲಿ ಕುಳಿತುಬಿಡಲೆ

ಮೋಸಗಾತಿ ಮಾಟಗಾತಿ ವಂಚಕಿ
ಪ್ರೇಮ ಸಂಚಲಿ ಸಿಲುಕಿಸಿ
ಮೋಹದ ಬಲೆಯಲಿ ಬಿಳಿಸಿ
ವಿಲವಿಲನೆ ಒದ್ದಾಡಿ ನಿನ್ನ ಹೆಸರ
ಕೂಗಿ ಕೂಗಿ ಬಾಯಾರಿ ಸಾಯಲೆಂದು
ಸಂಚನು ಹೂಡಿದೆಯಾ ನಯವಂಚಕಿ

ಬುದ್ದಿ ಬಾರದು

ಜಡೆ ಹಿಂದ ಅಲೆಯವಗ
ನಡು ಬಾಗಿದ ಮ್ಯಾಲೂ
ಬುದ್ಧಿ ಬರೋದಿಲ್ಲ
ಮಾತ ಮಾತಿಗೂ ನಗಾಕಿಗೆ
ಮನಿ ತುಂಬಾ ಮೊಮ್ಮಕ್ಳ
ಬಂದ್ರು ಬುದ್ದಿ ಬರೋದಿಲ್ಲ

ಮಾಸ್ತರ್ರು ಎಷ್ಟೋ ವರ್ಷ
ಪಾಠ ಮಾಡಿದ್ರು ಹುಡುಗರ
ಬುದ್ದಿ ಹೋಗೊದಿಲ್ಲ
ಕೆಲಸದಾಕಿ ಎಷ್ಟೋ ವರ್ಷ
ಅಂಗಳದ ಕಸ ಹೋಡದ್ರು
ಎದಿ ಮ್ಯಾಲಿನ ಸೆರಗ
ಹೊದಿಯೊದ ಕಲಿಯೊದಿಲ್ಲ

ಯಾವ ಶಿಕ್ಷೆ

ಹಣೆಗೆ ಕುಂಕುಮವಿರದ ನಿನ್ನ
ಗಂಡು ಮೊಗದ ರೂಪಕೆ
ಮೋಸ ಹೋದ ಕಣ್ಣುಗಳಿಗೆ
ಯಾವ ಶಿಕ್ಷೆಯ ನೀಡಲಿ

ಮೋಹದ ಮಾತುಗಳ
ಹೆಣೆದ ಬಲೆಯಲಿ ಬಿದ್ದ
ನನ್ನ ತಿರುಳನು ಯಾವ ಕಾರಗೃಹಕ್ಕೆ
ತಿರುವಲಿ

ಉದ್ದವಿರದ, ಹೂಗಳ ಮುಡಿಯದ
ಆ ಜಡೆಯನು ಹಿಂಬಾಲಿಸಿದ
ದೇಹಕೆ ಎಷ್ಟು ಭಾರದ
ಸರಪಳಿಯ ಬೀಗಿಯಲಿ

ಗೆಜ್ಜೆಗಳ ಕಟ್ಟದ ನಿನ್ನ ಕಾಲುಗಳ
ದಾರಿಯಲೆ ನಡೆದ ನನ್ನ
ಕಾಲುಗಳಿಗಾವ
ಹಗ್ಗವ ಕಟ್ಟಲಿ

ಸರಿ ತಪ್ಪುಗಳ ವಿಮರ್ಶಿಸದೆ
ಪ್ರೀತಿ ಪ್ರೇಮಗಳೆಂಬ ಹಗಲು
ಕನಸುಗಳ ಸವಿಯುತ
ಅಮವಾಸೆಯ ಕತ್ತಲಲೂ
ಚಂದಿರನ ಬೆಳಕನು ಹಂಬಲಿಸಿದ
ಅಂಕೆ ಮೇರೆಗಳಿರದ, ಗೋಡೆ
ಕೋಣೆಗಳಿರದ ಮನವು
ಸರಿಯಾದದ್ದನ್ನೆ ಅನುಭವಿಸುತ್ತಿದೆ

ಜಾರಿ ಬಿದ್ದಿದೆ ನೀ ತೊಡಿಟ್ಟಿದ್ದ
ಪ್ರಣಯವೆಂಬ ಖೇಡ್ಡಕ್ಕೆ
ಮನವೆಲ್ಲ ಜರ್ಜರಿತಗೊಂಡಿದೆ
ಏರುವ ಸಾಹಸಗಳೆಲ್ಲವ
ಮುಗಿಸಿ
ಬಾಯಾರಿದೆ ಮನಕೆ ನಿನ್ನ
ಹೆಸರನು ಕೂಗಿ ಕೂಗಿ

ನೀನು ಕೊಟ್ಟಿರುವ ನೋವಿಗೆ
ತಪ್ಪಿ ನಿನ್ನ ಹಿಂದೆ ಬಿದ್ದ ಮನಕೆ
ನಾನಾವ ಶಿಕ್ಷೆಯ ವಿಧಿಸಲಿ

Thursday, January 26, 2017

ಈ ಪ್ರೀತಿಗೆ

ಅಂಗ ಸಂಗವ ಬಯಸಿರೆ
ಕಪ್ಪು ಬಿಳುಪಿನ ಬಟ್ಟಲು
ಕಂಗಳು
ಹರೆಯದ ನಶೆಯಲಿ
ತೇಲುತಿವೆ ರೆಪ್ಪೆಗಳು
ಎಚ್ಚರಗೊಳಿಸುವರಾರೊ
ಸೌಂದರ್ಯದ ಸೇರಗನು
ಎಳೆದು
ಕಣ್ಣ ಕಾ..ಮನಾ... ಬಿಲ್ಲುಗಳ
ಕಟ್ಟಿ

ತಿಳಿಯ ಹರೆವ ಹಳ್ಳದ
ಮನವು ಬಯಸುತಿರೆ
ನೂರೆಂಟು ಕಾಮನೆಗಳ
ಅಗ್ನಿಯ ಸ್ಪರ್ಶವ
ಸಮಾಧಾನದ ಮಳೆಯದೇಷ್ಟು
ಧೋ ಎಂದು ಸುರಿದರೂ
ಮರೆಯೆಂಬ ಹರಿವ ಕಾಲುವೆಯನೆ
ಹರಿಸಿದರೂ
ಹೂ ಬಾಣದ ಬೇಡನು ಹಚ್ಚಿದ
ಕಾಮಾಗ್ನಿಯು ಆರುತ್ತಿಲ್ಲವಲ್ಲ

ನೋಡಿದೊಡೆ ಹುಟ್ಟಿ
ಮುಟ್ಟಿದೊಡೆ ಉರಿದು
ಸರಿದೊಡೆ ಬೂದಿಯಾಗುವ
ಅಂಗ ಸಂಗದ ಪ್ರೀತಿಗೆ
ನಾನೇನನ್ನಲಿ ?

ಹುಟ್ಟುವವರೆಗೂ ಕಾದು
ಮೊಗ್ಗಾದ ಮೇಲೆ ಕಾವಿಟ್ಟು
ಅರಳಿದ ಸುಮದ ಘಮವ ಹೀರಿ
ಅಂತರಂಗದ ಆಳಕೆ ಮಧುವನು
ತುಂಬಿ
ಪ್ರೀತಿಯ ಹೂವನು
ಹಿಸುಕದೆ ಹೊಸುಕದೆ ಕಾಯುವ
ಮುಳ್ಳಿನ ಪ್ರೀತಿಗೆ
ನಾನೇನ ಹೇಳಲಿ