Thursday, September 28, 2017

ಹರೆಯದ ಹೊರೆ

ಈ ಹರೆಯಕೆ ಹೊರಿಸದಿರು ನಿನ್ನ
ನೆನಪುಗಳ ಹೊರೆಯ..
ತಾಳಲಾರೆನು ಪದೆ..ಪದೆ
ಬಂದೊರಗುವ ವಿರಹಗಳ  ಅಲೆಯ

ಓದಿರುವೆಯೊ... ಇಲ್ಲವೊ...
ನಾ ಕೊಟ್ಟು ಕಳಿಸಿರುವ ಓಲೆಯ
ಸಾಲು..  ಸಾಲುಗಳಲು ತುಂಬಿ
ಕಳಿಸಿರುವೆ ನನ್ನೊಲವಿನ ಸುಧೆಯ

ಹಗಲಿರುಳು ನಿನ್ನ ಬರುವಿಕೆಗೆ ಕಾದಿಹೆ ನಾ...
ನೋಡು ನಿಲ್ಲದೆ ಓಡುತಿಹುದೀ...ಸಮಯ
ನೀ.. ಬಾರದೆ ಹೋದ ಹೊತ್ತುಗಳ ನೆನಪುಗಳ
ಅಳಿಸಿ ಹಾಕಲಿ ನಿನ್ನ ನಗುವ ಪ್ರಳಯ

ಮುಂಗೋಪವದು ತರವಲ್ಲ ನನ್ನಲಿ
ಇದನರೀಯೊ.. ಇನಿಯ
ನಿನ್ನ ಬಿಸಿ ಸ್ಪರ್ಶಕ್ಕೆಂದೆ ಕಾದು.. ಕಾದು
ಕಾದ ಹಂಚಾಗಿದೆ ಈ ಹರೆಯ..

ಆಲಿಸದೇನೊ... ನಿನ್ನ ಮನವು.. ನನ್ನ
ಮನದೊಳಗಿನ ನೋವಿನ ಕರೆಯ
ಇಳಿಸು ಬಾರೊ... ಇನಿಯ
ಈ ಹರೆಯದ ಹೊರೆಯ

ಮತ್ತೆ ಬಾರದು.. ಇಂಥಾ..ಸಮಯ

Wednesday, September 27, 2017

ಅಪ್ಪಿಗೆ

ಯಾವ ಸ್ವರ್ಗದಲ್ಲೂ
ಸಿಗದ ಸುಖವ
ಕೊಡುವುದು
ನಿನ್ನ
ಅಪ್ಪುಗೆ

ಬಾಳಪೂರ್ಣ ನಿನ್ನ
ಜೊತೆಗಿರಲು ಕೊಡುವೆ
ನಿನ್ನೊಲವಿಗೆ ನನ್ನಯ
ಒಪ್ಪಿಗೆ

Saturday, September 23, 2017

ಒಂಟಿ ಕಾಲ್ಬದುಕಿನ ಬೆಲೆ

ಕಾಲು ಕತ್ತರಿಸಿ ಹೋದುದಕೆ ವ್ಯಥೆಯಿಲ್ಲ
ಕಾಲವು ನಿಲ್ಲದೇ... ಉರುಳುತಿಹುದು
ಎಂಬುದೊಂದು ಚಿಂತೆಯು ಸುಡುತಿಹುದಲ್ಲ ...
ಮೊದಲೆ...ಮಧ್ಯಮ ವರ್ಗದ ಬದುಕಿದು
ಕಾಲವು.. ಕಾಲನು ಕಸಿದುಕೊಂಡು ಬದುಕಿನ
ಮಧ್ಯದಲಿ ಒಂಟಿ ಕಾಲಲಿ ನಿಲ್ಲಿಸಿಬಿಟ್ಟಿದೆಯಲ್ಲ...

ಸಾವಿರ... ಲಕ್ಷ ರೂಪಾಯಿಗಳ ಕೊಟ್ಟು..
ಪುಸ್ತಕಗಳ ಚೀಲವನು... ಹೊತ್ತು ಬರುವಷ್ಟು
ಶಕ್ತಿ ನನ್ನ ಬೆನ್ನಿಗಿಲ್ಲ..
ಹಗಲಿರುಳು ನೂರಾರು ಚೀಲಗಳ...
ಮಣಭಾರವನು ತಂದೆಯು ಹೊತ್ತು ಹಾಕಿದರೂ...‌
ದಿನದ ಬದುಕು ನಡುಗಡ್ಡೆಯಾಗಿದೆಯಲ್ಲ

ಬೇಡವಣ್ಣ ನನಗೆ ಕ್ರೀಡಾಂಗಣ...ಚಿತ್ರಾಂಗಣ..
ನೃತ್ಯಾಂಗಣ...ರಂಗಾಯಣ...ನೀಡಿರಣ್ಣ
ಕೊಠಡಿಯೊಳಗೊಂದಿನ ಮೂಲೆ...
ಅರಳಿಸ ಬೇಕಿದೆ ನನ್ನ ಕನಸುಗಳನೆಲ್ಲವ...
ಗೋಡೆಗೆ ತೂಗು ಹಾಕಿದ ಕರಿ ಹಲಗೆಯ ಮೇಲೆ.. ತೋರಿಸಿಕೊಡಬೇಕಿದೆ ಈ ಜಗಕೆ ಒಂಟಿ ಕಾಲ್ಬದುಕಿನ ಬೆಲೆ

ಒಂಟಿ ಕಾಲಲೆ ಕಂಡುಕೊಳ್ಳಬೇಕಿದೆ ಬದುಕಿಗೆ ನೆಲೆ
ಬದುಕಲಿ ಕಾಡುವ ನೂರೆಂಟು ಪ್ರಶ್ನೆಗಳಿಗೆ
ಉತ್ತರವ ಕಂಡುಕೊಳ್ಳಲು... ಜಗದೆಲ್ಲ ಕೌತುಕಗಳ
ಓದಿ ತಿಳಿಯುವ ದಾಹವನಿಂಗಿಸಿಕೊಳ್ಳಲು...
ಕಾಲಲಾಗದವನು.. ಎಂದು ನುಡಿಯುವ ಕುಹಕಿಗಳ
ಬಾಯನ್ನು ಮುಚ್ಚಿಸಿ.. ಈ ಒಂಟಿ ಕಾಲ್ಕಂಬದ ಮೇಲೆ
ಮನೆಯ ಹತ್ತು ತೊಲೆಗಳ ಹೊತ್ತು ನಿಲ್ಲಲು ಬೇಕಿದೆ
ಎನಗೆ ಅಕ್ಷರಗಳ ಸೆಲೆ...

Thursday, September 21, 2017

ಚುಟುಕು ಗುಟುಕು ೪೩೦

ಅವನು
ರಾತ್ರಿಯಲ್ಲಷ್ಟೇ..
ಬರೆಯುತ್ತಾನೆ
ಎಷ್ಟೊಂದು
ಚುಟುಕು

ಯಾರಿಗೆ ಗೊತ್ತು
ಅದೇಷ್ಟು
ಪ್ರಭಾವ
ಬೀ(ರು)ರಿರಬೇಕು
ಸಂಜೆಯ
ಗುಟುಕು

ಪದ್ಯ.. ಗದ್ಯ... ಮದ್ಯ.. ೪೩೩

ನಿನ್ನ
ನೋಡಿದ ಕ್ಷಣವೆ
ಬರೆದೆ ನಾ
ಪದ್ಯ...

ನಿನ್ನ
ಪ್ರೇಮದ
ತೆಕ್ಕೆಯಲಿ
ಮೈ
ಮರೆತು ಬರೆದದ್ದು
ಗದ್ಯ...

ನೀ...
ಬಿಟ್ಟ
ಘಳಿಗೆಯಲಿ ನಾ
ಕುಡಿದದ್ದು
ಬರಿ
ಮದ್ಯ

ಪ್ರೀತಿ... ಭೀತಿ..೪೩೬

ನಿನ್ನ ನೆನಪುಗಳು
ಬಂದಾಗಲೆಲ್ಲ
ಕಣ್ಮುಚ್ಚಿ ಕೂರುವೆ
ಗೆಳತಿ..
ನಾವಿಬ್ಬರು ಕಂಡ
ಕನಸುಗಳೆಲ್ಲ.. ಎಲ್ಲಿ
ಹರಿದು ಹೋಗುವವೊ
ಎಂಬ ಭೀತಿ

ನಮ್ಮಯ ಸ್ಥಿತಿ

ಆರಿ ಹೋಯಿತು ಕಾವು
ಇತಿಹಾಸದ ಕರಾಳ ಪುಟದಲ್ಲಿ
ಸೇರಿಹೋಯಿತು ಇನ್ನೊಂದು ಸಾವು
ಬೂದಿಯಾಯಿತು ಹೊತ್ತಿದ ಚಿತೆಯು
ಕೇಳದಾದವು ಕರ್ಣಗಳು ನೊಂದವರ ವ್ಯಥೆಯ

ಮೌನವಾದವು ಧರಣಿ ಪ್ರತಿಭಟನೆಗಳು
ಬೀಕೊ ಎನ್ನುತಿಹುವು..ಒಣಗಿದ ಮಾಲೆಯಲಿ
ಕುಳಿತ ಗಾಂಧೀ ಪಟಕೆ ನೆರಳು ನೀಡುವ ಗುಡಾರಗಳು
ನಿಸ್ತೇಜನರಾದರೂ ಕೂಗಿ..ಕೂಗಿ ಕೇಳುವರು
ಇದೊಂದಿನದ ಮಾತೆಲ್ಲವೆಂದು ಮನೆ ಸೇರಿದರೆಲ್ಲ
ಹಿಂಬಾಲಕರು

ನಾಯಿಗಳು ಓಡಾಡುತಿವೆ ಗಲ್ಲಿ.. ಗಲ್ಲಿಗಳ ಮೂಸಿ
ಇನ್ನೂ ಅನುಮಾನದ ಹೊಗೆಯನ್ನೆ ಊದುತ್ತ..
ಕುಳಿತಿಹರು ಬೆತ್ತದ ಮಾಲೀಕರು... ರಾಷ್ಟ್ರ ನಾಯಕನನ್ನೆ
ಕೊಂದ ಪಾತಕರ ಹಿಡಿದ ಪಡೆ ನಮ್ಮದು... ಏನಾಗಿದೆ
ಇಂದು... ಹೊರಗಿನಿಂದಲೆ ಬಂದು ನಾಡೊಳಗಿನ
ಹಿರಿಯರ ಕೊಂದು ಹೋದವರ ಸುಳಿವು ಸಿಗುತ್ತಿಲ್ಲವಲ್ಲ

ಹೇಗಾಗಿದೆಯೊ ನೋಡಿ... ನಮ್ಮದೆ ನೆಲದಲ್ಲಿ
ನಮ್ಮನೆಯ ಬರಹಗಾರರ ಪರಿಸ್ಥಿತಿ
ಬದುಕಬೇಕಾದರೆ ಬರೆಯುವ ಹಕ್ಕನ್ನೆ ....
ತೊರೆಯಬೇಕಾದಂತಹ ದುಸ್ಥಿತಿ
ಬರೆಯಬೇಕಾದರೆ ಬದುಕುವ ಹಕ್ಕನ್ನೆ...
ತೂಗುಗತ್ತಿಗೆ ಕೊಡುವಂತಹ ವಿಷಮಸ್ಥಿತಿ