Friday, July 6, 2018

'ಹ್ಞಾಂ... ಬಾರವ್ವ...ಬಾ..ಬಾ' ಎಂದು ಮಗಳನ್ನು ಒಳಗೆ ಕರೆದನು ಭರಮಪ್ಪ.
ಸೋಮಣ್ಣನನ್ನು ದಿಟ್ಟಿಸಿ ನೋಡುತ್ತಾ 'ಪಪ್ಪಾ, ನಾನೀಸಲ ಸರೆಗಮಪಾ ಕಾರ್ಯಕ್ರಮದಾಗ ಕಾಂಪಿಟ್ ಮಾಡ್ಬೇಕನ್ಕೊಂಡಿನಿ, ಪ್ರ್ಯಾಕ್ಟೀಸ್ ಗೆ ಎಂಟ್ರೇನ್ಸ ಫೀ ಅಂತಂದ ನಾಕ ಲಕ್ಷ ಬೇಕಾಗ್ಯಾವ ಕೊಡ್ರಿ ಪ್ಲೀಸ್' ಭಯಮಿಶ್ರಿತ ಧ್ವನಿಯಲ್ಲಿ ಕೇಳಿದಳು.
ಮಗಳ ಮಾತನ್ನು ಕೇಳಿ, ಸೋಮಣ್ಣ ಹಚ್ಚಿದ ಹೊಟ್ಟಿಯೊಳಗಿನ ಉರಿ ಈಗ ಮೈ ತುಂಬ ಹಚ್ಚಿದಂತವನಾಗಿ  ಜೋರಾಗಿ ಕೂಗಾಡತೊಡಗಿದನು.
'ಥೂ ನಿನ್ನ ಹುಚ್ವಿ ಬುದ್ದಿ ಎಲ್ಲಿಟ್ಟಿ ಅದ್ಕ್ಯಾಕ ನಾಕ ಲಕ್ಷ ಕೊಡ್ಬೇಕ ಬೆ, ನಾನೇನ ಇಲ್ಲೆ ರೊಕ್ಕದ ಗಿಡಾ ನೆಟ್ಟಿನಿ ಅಂತಂದ ತಿಳ್ಕೊಂಡಿಯೇನ ಏನರ..? ಹೋಗ್ಲಿ ನಾಕ‌ ಲಕ್ಷ ಕಮಾಯಿ ಮಾಡೋದ ಎಷ್ಟ ತ್ರಾಸ ಐತಂದ ಗೊತ್ತೈತೇನು ಏನಾರ, ಹೋಗ.. ಹೋಗವಾ ಸುಮ್ಕ, ನಾನು ಸೋಮಪ್ಪ ಭಾಳ ಒಂದ ಇಂಪಾರ್ಟೆಂಟ ವಿಷ್ಯಾ ಮಾತಾಡಕ್ಹತ್ತಿವಿ, ಕಾಲೇಜ್ ಗೆ ಹೊಂಡ ಮಿಕ್ಕ ವಿಷ್ಯಾನ ಸಂಜಿಕ ಮಾತಾಡೋನು ನಡಿ.. ನಡಿ' ಮಗಳ ಬೆನ್ನನ್ನು ತಟ್ಟುತ್ತಾ ಕೊಣೆಯಿಂದ ಹೊರಹಾಕಿ ಬಾಗಿಲನ್ನು ಮುಚ್ವಿಬಿಟ್ಟು, ಸೋಮಣ್ಣನ ಕಡೆಗೆ ನೋಡಿದನು, ಸೋಮಣ್ಣನು ಆವಾಗಲೆ ಹಣೆ ಹುಬ್ಬನ್ನು ಗಂಟಿಕ್ಕಿ ನಿಂತಿದ್ದನು. 'ನಂಗೊತ್ತೈತೊ ತಮ್ಮಾ ನಿ ಮನಸ್ನ್ಯಾಗ ಏನ ಲೆಕ್ಕ ಹಾಕ್ಹೊಳಾಕ ಹತ್ತಿಯಂತಂದು, ಒಬ್ಬಾಕಿ ಮಗ್ಳ ನಂಗ, ಹಂಗಂತ ಕೇಳ್ದಂಗೆಲ್ಲ ರೊಕ್ಕಾ ಕೊಟ್ಬಿಟ್ರ ರೊಕ್ಕದ ಬೆಲಿ ಗೊತ್ತಾಗ್ಬೇಕಿಲ್ಲ, ಅದು ಅಲ್ದ ಮದ್ವಿ ಅಂತ ಮಾಡಿ ಕೊಟ್ಟಮ್ಯಾಲ ಎಲ್ಲಾ ಅಕಿ ಹಿಂದನ ಹೋಗ್ತದಲ್ಲಪಾ ಆಸ್ತಿ, ಅದ್ಕ ಭಾಳ ಹದ್ದಬಸ್ತನ್ಯಾಗಿಟ್ಟ ಕಲ್ಸಕ್ಹತ್ತೀನಿ,' ಹಲ್ಲನ್ನು ಗಿಂಜುತ್ತಾ ನಿಂತನು. ಮತ್ತೆ ಬಾಗಿಲು ಬಡಿತದ ಶಬ್ದ, ಬಾಗಿಲನ್ನು ತೆರೆದರೆ ಈ ಸಲ ಅವನ ಧರ್ಮಪತ್ನಿ, 'ಏನ್ರೀ ಆ ಮಗಾ ಅಷ್ಟೊಂದು ಆಸೆಯಿಂದ ಕೇಳ್ಲಾಕ ಹತ್ತೈತಿ ಕೊಟ್ಟ ಕಳ್ಸಬಾಡ್ದರ್ಯಾ ರೊಕ್ಕಾನ,' ಅಳುತ್ತಾ ಸೇರಗಿನ ಅಂಚನ್ನು ಬಾಯಿಗೆ ಹಿಡಿದುಕೊಂಡು ಕೇಳಿದಳು.
ಈ ಸಲ‌ ರೌದ್ರಾವತಾರ ತಾಳಿದ್ದು ಮಾತ್ರ ಭರಮಪ್ಪ, ಹೆಂಡತಿಯ ಮುಡಿಯನ್ನು ಹಿಡಿದು ಟೇಬಲ್ ಮೇಲೆ ಬಗ್ಗಿಸಿ ಹಿಡಿದು ಬೆನ್ನ ಮೇಲೆ ರಪ್...ರಪ್.. ಅಂತ್ಹೇಳಿ ನಾಕೈದು ಏಟನ್ನು ಹಾಕಿದನು, ' ಏನೆ ನಿಮ್ಮಪ್ಪನ ಮನಿ ಗಂಟ ಐತಂದ ತಿಳ್ದಿಯೇನ ಇಲ್ಲೆ, ಒಮ್ಮೆ ಹೇಳಿದ್ರ ಅರ್ಥ ಆಗಂಗಿಲ್ಲ ನಿಮ್ಮ ತಾಯಿ ಮಗ್ಳಿಗೆ, ಆಕಿಗ ಹೇಳ ಈಗ ಸೂಕ್ಷ್ಮೀ ಹೇಳ ಕಳ್ಸನಿ, ಹೊಳ್ಳಿ ಇನ್ನೊಮ್ಮೆ ಕಾಂಪೀಟೇಷನ್ ಅಂತೆನಾದ್ರು ಸುದ್ದಿ ತಗದ್ರಿ
ಹೆಣ ಎತ್ತಿ ಹಂಡ್ಗ್ಯಾಗ ತುಂಬಿ ಹುಗ್ದ ಬಿಡ್ತೀನಿ ಊರ ಹೊರಗ, ಗೊತ್ತಾತಿಲ್ಲೊ, ನಡಿ ಇನ್ನ ಹೊರಗ' ಎಂದು ಅವನ ಹೆಂಡತಿಯನ್ನು ಬಲವಂತವಾಗಿ ಕತ್ತನ್ನು ಹಿಡಿದು ಕೋಣೆಯಿಂದ ಹೊರನೂಕಿ, ಟೇಬಲ್ ಮೇಲಿಟ್ಟಿದ್ದ ನೀರಿನ ಟಬ್ ನ್ನು ಎತ್ತಿ ಗಟಗಟನೆ ನೀರನ್ನು ಕುಡಿದು, ಎದೆಯ ಮೇಲಿನ ಅಂಗಿಯ ಎರಡು ಬಟನ್ ಗಳನ್ನು ತೆಗೆದು ಖುರ್ಚಿಯ ಮೇಲೆ ಕುಳಿತುಕೊಂಡನು. ಹತ್ತು ನಿಮಿಷ ಕಳೆದ ನಂತರ ಮೇಲಿನ ಮಾತನ್ನು ( ಈಗ ಹೆಂಗ ಮಾಡ್ಬೇಕಂತ ಮಾಡಿಯೊ ತಮ್ಮಾ ) ಕೇಳುತ್ತಾ ಗಹಗಹಿಸಿ ನಗತೊಡಗಿದನು.

   ಎಷ್ಟೆ ರೊಚ್ಚಿಗೆದ್ದರು, ಯಾರ ಹತ್ತಿರ ಹೋದರು ಬಗೆ ಹರಿಯದ ವಿಷಯವಿದು, ಹೊಟ್ಟಿಯೊಳಗ ಹುಟ್ಟಿದ ಮಗ್ಳ ಬಗ್ಗಿನ ಖಾಜಿ ಮಾಡಲಾರ್ದಾವ, ಹೆಂಡ್ತಿನ ನನ್ಮುಂದ ಹಿಂಗ ಹೊಡ್ದಾಂವ ಇನ್ನ  ಹತ್ತಿಲ್ಲ, ಸಂಬಂದಿಲ್ಲ ಸೂತ್ರಿಲ್ಲ, ನಮ್ಮನ್ನ ಇಂವ ಏನ ಮಾಡಾಕು ಹೇಸುದಿಲ್ಲ ಅನ್ನೊದನ್ನ ಮನಗೊಂಡ ಸೋಮಣ್ಣನು, ಎದ್ದು ನಿಂತು ಬಲಗೈಯನ್ನು ಮುಷ್ಟಿ ಮಾಡಿ ತೊಡೆಗೆ ಬಡೆದುಕೊಳ್ಳುತ್ತಾ, 'ನಂಗೆ ಎರ್ಡ ದಿನ ಟೈಂ ಕೊಡಿ ಹೇಳ್ತೀನಿ, ಲಕ್ಷ್ಮೀ ತವ್ರ ಮನೆಗೆ ಹೋಗ್ಯಾಳ, ನಾಳೆ ಬರ್ತಾಳ ಬಂದ ನಂತ್ರ ವಿಚಾರ್ಸಿ ನಿಮ್ಗೆ ಹೇಳ್ತಿನಿ'.
'ಎರ್ಡೆ ದಿನ ತಮ್ಮಾ, ಇಷ್ಟ ದಿನ ತಡ್ಕೊಂಡಿದ್ದ ದೊಡ್ದಾಗೈತಿ ನಂಗ, ನನ್ನಾಸೆನ ನಿರಾಸೆ ಮಾಡ್ಬೇಡ, ಮತ್ತ ನೀನೇರ ಈ ಊರ ಬಿಟ್ಟ ಎತ್ಲಾಗರ ಹೋದೆಂದ್ರ, ಪಾತಾಳ್ದಾಗ ಹುದಕ್ಕೊಂಡ್ರು ಹುಡ್ಕೊಂಡ ಕರ್ಕೊಂಡ ಬರ್ತೀನಿ ತಿಳ್ಕೊಂಡಿರು, ಗೊತ್ತಾತಿಲ್ಲ, ಹಂಗ ಒಂದ ವ್ಯಾಳೆ ನಿ ಸಿಗ್ಲಿಕ್ಕಲಿಲ್ಲಂದ್ರ ನಿಮ್ಮತ್ತಿ ಮಾವರ ಅದಾರಲ್ಲ ಕೋರ್ಟ ಜೈಲಂತಂದ ಅಡ್ಯಾಡಾಕ. ಹ್ಞಾಂ...ಬೇಕಿದ್ರ ಈ ಸೂಟಕೇಸ್  ಒಯ್ಯಿ ' ಸೂಟಕೇಸ್ ನ್ನು ಮುಂದಕ್ಕೆ ಸರಿಸುತ್ತ ಮುಗುಳ್ನಕ್ಕನು.
ಸ್ವಲ್ಪ ಹೊತ್ತು ಯೋಚಿಸುತ್ತಾ ನಿಂತು ನಂತರ ಒಲ್ಲದ ಮನಸ್ಸಿನಿಂದ ಸೂಟಕೇಸ್ ನ್ನು ಎತ್ತಿಕೊಂಡು ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಆಫೀಸ್ ನ ರೂಂ ನಿಂದ ಹೊರಬಂದು ಗಾಡಿಯನ್ನು ಪ್ರಾರಂಭಿಸಿ ಮನೆಯತ್ತ ಹೊರಟನು.

ಒಂದು ದಿನ ಕಳೆಯಿತು, ಭರಮಪ್ಪ ಎಂದಿನಂತೆ ಆಫೀಸನಲ್ಲಿ ಯಾರೊಂದಿಗೊ ಮಾತನಾಡುತ್ತ ಕುಳಿತಿದ್ದನು. ಟೇಬಲ್ ಮೇಲಿಟ್ಟಿದ್ದ ಪೋನು ರಿಂಗಣಿಸತೊಡಗಿತು, ನೋಡಿದರೆ ಸೋಮಣ್ಣನ ಕರೆ, ತಟ್ಟನೆ ಎದುರಿಗಿದ್ದವರೆನ್ನೆಲ್ಲ ಕೋಣೆಯಿಂದ ಹೊರಗಡೆ ಕಳುಹಿಸಿ ಒಂದೆ ಉಸಿರಿನಲ್ಲಿ ಪೋನ್ ನ್ನು ರಿಸೀವ್ ಮಾಡಿ' ಹೇಳು ತಮ್ಮಾ ಏನ್ಮಾಡ್ದಿ ' ಕುತುಹಲದಿಂದಲ ಕೇಳಿದನು.
' ನೀವ್ ಹೇಳ್ದಂಗ ಆಗಲ್ರೀ, ಗೌಡ್ರ ನಾವು ದುಡ್ಕೊಂಡ ತಿನ್ನೊರು ಮಾನಪಾನ ಅಂತ ಕುಂತಗೊಂಡ್ರ ಹೊಟ್ಟಿ ತುಂಬ ಬೇಕಲ್ರೀ, ಅದ್ರಾಗ ನಿಮ್ಮನ್ನ ಎದ್ರ ಹಾಕ್ಕೊಂಡ ಈ ಊರಾಗ ಬಾಳೆ ಮಾಡಕ ಆಕ್ಕೈತನ್ರೀ, ಇವತ್ತ ರಾತ್ರಿ ಹತ್ತ ಗಂಟೆಕ ಹಳೆ ಐಬಿಗೆ  ಬಂದ ಬಿಡ್ರಿ ಎಲ್ಲ ವ್ಯವಸ್ಥೆ ಮಾಡಿರ್ತೀನಿ, ಮತ್ತ ಗೌಡ್ರ ಮನಿಯಾಗ ಯಾರಿಗೂ ಹೇಳಾಕ ಹೋಗ್ಬ್ಯಾಡ್ರೀ, ಸುಮ್ನ ತೊಂದ್ರಿ'
'ಥೂ...ಥೂ... ಎಂತ ಮಾತೊ ತಮ್ಮಾ ಇದನ್ನೆಲ್ಲ ಮನಿಯಾಗ ಹೇಳಾಕ ಆಗ್ತದನ ಈಗ ಎಮ್ಎಲ್ಎ ಅವರ್ನ ಭೇಟಿಯಾಗಾಕ ಸಿಟಿಗ ಹೊಂಟಿನ, ನಾಳೆ ಮಧ್ಯಾಹ್ನಕ್ಕನ ನಾ ಬರೋದಂತಂದು ಹೇಳಿ ಐಬಿಗ್ಯಾ ಬಂದ ಕುಂತ್ಬಿಡ್ತೀನಿ' ಅತಿ ಉತ್ಸುಕತೆಯಿಂದ ನುಡಿದನು.
' ಹಂಗೆಲ್ಲಾ ಮಾಡ್ಬ್ಯಾಡ್ರೀ ಗೌಡ್ರ, ಮತ್ತ ಮಂದಿ ನಿಮ್ಮನ್ನ ಹುಡ್ಕೊಂಡ ಅಲ್ಲಿಗೂ ಬಂದ್ರ ಎಲ್ಲಾ ಕೆಲ್ಸ ಕೆಟ್ಟ ಹೋಕೈತಿ, ಬರೊಬ್ಬರ ರಾತ್ರಿ ಹತ್ತ ಗಂಟೆಕ ನೀವೊಬ್ರ ಕಾರ ಹೊಡ್ಕಂಡ ಬಂದ್ಬಿಡ್ರೀ, ಯಾರಿಗೂ ಸಂಶಯನ ಬರೋದಿಲ್ಲ,'
' ಹೌದೌದು ನೀನ ಹೇಳೊದು ಖರೆ ಅದ, ಹಾಗಿದ್ರ ನಾನಿಗ್ಲೆ ಒಬ್ನ ಸಿಟಿಗೆ ಹೋಗಿ ರಾತ್ರಿ ವ್ಯವಸ್ಥಕ್ಕ ಏನೆನ ಬೇಕ ಎಲ್ಲಾ ತಗೊಂಡ ಸೀದಾ ಅಲ್ಲಿಗೆ ಬಂದ ಬಿಡ್ತೀನಿ ಆಯ್ತಾ.'
' ಏನ ಬ್ಯಾಡ್ರಿ ಗೌಡ್ರ ನಾನೇಲ್ಲ ರೆಡಿ ಮಾಡಿಟ್ಟಿರ್ತೀನಿ ನೀವು ಡೈರೆಕ್ಟ್ ಐಬಿಗೆ ಕೈ ಬಿಸಗೊಂಡ ಬಂದ್ರ ಸಾಕ, ಸರೀ ರಾ...
ಪೋನ ಇಡ್ತೀನ ನೋಡ್ರಿ ' ಸೋಮಣ್ಣ ಕಾಲನ್ನು ಕಟ್ ಮಾಡಿಬಿಟ್ಟನು.
ಭರಮಪ್ಪ ಸ್ವರ್ಗದ ಬಾಗಿಲಲ್ಲಿ ನಿಂತ ಅನುಭವದ ಸವಿಯನ್ನು ಸವಿಯಲಾರಂಭಿಸಿದನು. ರಾತ್ರಿ ಸುಖದ ಕ್ಷಣಗಳನ್ನು ನೆನೆಯುತ್ತಾ ಡ್ರಾಯರ್ ನಿಂದ ಕಾರಿನ ಕೀಯನ್ನು ತೆಗೆದುಕೊಂಡು ಸಿಟಿಗೆ ಹೋಗಲು ಅನುವಾದನು.

'ಮತ್ತೀಗ ಏನ ಮಾಡೊದ್ರಿ ಗೌಡ್ರ', ಮೌನವ ಮುರಿದು ತಾನೆ ಮಾತನಾಡಿದನು ಸೋಮಣ್ಣ, ಭರಮಪ್ಪ ಸಣ್ಣ ಮುಗುಳುನಗೆಯೊಂದಿಗೆ ನೋಡುತ್ತಾ ಟೇಬಲ್ ನ ಡ್ರಾಯರ್ ನಿಂದ ಒಂದು ಸೂಟಕೇಸ್ ನ್ನು ತೆಗೆದು ಸೋಮಣ್ಣನ ಮುಂದಿಡುತ್ತಾನೆ, ಜೊತೆಗೆ ಅವನ ಮನೆ ಮತ್ತು ಹೊಲದ ಕಾಗದ ಪತ್ರಗಳನ್ನು ಇಟ್ಟು ಹಾರಾಡದಂತೆ ಅವುಗಳ ಮೇಲೆ ಗಾಜಿನ ಗುಂಡೊಂದನ್ನು ಇಡುತ್ತಾನೆ. ಸೋಮಣ್ಣನಿಗೆ ಕ್ಷಣ ಭರಮಪ್ಪನ ನಡೆಯನ್ನು ಕಂಡು ಅಯೋಮಯವಾಯಿತು.
'ನೋಡ ತಮ್ಮ ನಂದೊಂದ‌ ಕೆಲ್ಸ ಐತಿ ನೀನದನ್ನ ನಡ್ಸಿಕೊಟ್ರ
ನಿನ್ನ ಹೊಲ್ಮನಿ ಕಾಗದ ಪತ್ರಾನು ಕೊಟ್ಬಿಡ್ತೀನಿ, ಸಾಲಾನು ಕಳೆದ್ಬಿಡ್ತೀನಿ, ಜೊತ್ಗೆ ಈ ಸೂಟಕೇಸ್ ನ್ಯಾಗ ನಾಕ ಲಕ್ಷ ರೊಕ್ಕ ಐತಿ ಇದನ್ನು ಕೊಡ್ತೀನಿ, ಏನಂತಿ ಮಾಡಿಕೊಡ್ತೀಯಾ?'
ಭರಮಪ್ಪನ ಮಾತನ್ನು ಕೇಳಿ ಸೋಮಣ್ಣನಿಗೆ ಸ್ವರ್ಗಕ್ಕೆ ಮೂರೆಗೇಣು ಅನ್ನುವಷ್ಟು ಸಂತೋಷವಾಗಿಬಿಟ್ಟಿತು. ಊರಲ್ಲೆಲ್ಲಾ ಮಂದಿ ಎಷ್ಟೊಂದು ತಪ್ಪ..ತಪ್ಪಾಗಿ ಮಾತಾಡ್ತಾರ ಈ ವಯ್ಯನ ಬಗ್ಗೆ, ಇವರ ನೋಡಿದ್ರ ಇಷ್ಟ ಒಳ್ಳೆ ಮನಸ್ನೊರ ಅದಾರ, ಹಂಗಾದ್ರ ಜನ ಹೇಳಿದ್ದೆಲ್ಲಾ, ನಾ ಕಂಡಿದ್ದೆಲ್ಲಾ ಸುಳ್ಳೇನು..? ' ಒಂಥರಾ ಮನಸ್ಸು ಗೊಂದಲದ ಗೂಡಾಗಿ, ಭರಮಪ್ಪನ ಬಗ್ಗೆ ಯಾವುದೇ ರೀತಿಯ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಾರದೆ ಹೋದನು. ' ಹೇಳ್ರೀ..ಗೌಡ್ರ, ಏನ್ರೀ ವಿಷಯ' ಉಗುಳನ್ನು ನುಂಗಿಕೊಳ್ಳುತ್ತಾ ಅಳುಕಿನಿಂದಲೆ ಕೇಳಿದನು. ಭರಮಪ್ಪ ಮುಂದಕ್ಕೆ ಬಾಗಿ ಹತ್ತಿರ ಬಾ ಎಂದು ಬೆರಳಿನಿಂದ ಸನ್ನೆಯನ್ನು ಮಾಡಿದನು. ಸೋಮಣ್ಣನು ಮುಂದಕ್ಕೆ ಬಾಗಿದನು, ಭರಮಪ್ಪನು ಸೋಮಣ್ಣನ ಕಿವಿಯ ಹತ್ತಿರ ಬಂದು ಮೆಲು ಧ್ವನಿಯಲ್ಲಿ ' ಏನಿಲ್ಲ, ಇವತ್ತೊಂದು ರಾತ್ರಿ ನಿನ್ನ ಹೆಂಡ್ತಿ ಮುಡಿಗೆ ನಾ ಮಲ್ಗಿ ಮುಡ್ಸ್ತೀನಿ'.
ಭರಮಪ್ಪನು ಮಂಜಿನಗಡ್ಡೆಯ ತಂಪಿನಷ್ಟೆ ಮೆತ್ತಗೆ ಹೇಳಿದ್ದರು, ಸೋಮಣ್ಣನಿಗೆ ಬಯಲಿಗೆ ಬಡೆದ ಸಿಡಿಲಿನಂತಾಗಿ ಅಷ್ಟು ದೂರ ಹಿಂದೆ ಸರೆದು ಬಿದ್ದುಬಿಟ್ಟನು. ಅವನು ಬಿದ್ದದ್ದನ್ನು ನೋಡಿ ಭರಮಪ್ಪನು ಕೋಣೆಯೆ ಪ್ರತಿಧ್ವನಿಸುವಂತೆ ಗಹಗಹಿಸಿ ನಗತೊಡಗಿದನು. ಅವನ ದರ್ಪದ ನಗುವನ್ನು ಕಂಡ ಸೋಮಣ್ಣನ ಕಣ್ಣುಗಳು ಬೆಂಕಿಯನ್ನುಗುಳಲಾರಂಭಿಸಿದವು, ದೇಹದೊಳಗಿನ ನರನಾಡಿಗಳೆಲ್ಲ ಕಬ್ಬಿಣದಂತಾಗಿಬಿಟ್ಟವು, ಎದೆಯಲ್ಲಿ ಸಾವಿರಾರು ಕುದುರೆಗಳ ಒಟದಷ್ಟು ವೇಗವಾಗಿ ಎದೆಯು‌ ಬಡೆದುಕೊಳ್ಳತೊಡಗಿತು,'ಹೂವಂದ್ಕೊಂಡಿದ್ದು  ಹಾವಾಗಿ ವಿಷಾನ ಕಕ್ಕಿಬಿಟ್ತು, ದೇವ್ರೆಂತಂದ ನಂಬಿ ತಲಿನ ಬಾಗ್ಸಿದ್ದಕ್ಕ ಕತ್ತನ್ನ ಕೊಯ್ದುಬಿಟ್ಟಿಯಲ್ಲೊ ಪಾಪಿ, ಎಂತಾ ನಂಬ್ಕಿ ದ್ರೋಹ' ಅಂದುಕೊಳ್ಳುತ್ತಲೆ ಬಲಗೈಯನ್ನು ಎತ್ತಿ ಬಲವಾಗಿ ಟೇಬಲ್ ಮೇಲೆ ಗುದ್ದಿಬಿಟ್ಟನು ಸೋಮಣ್ಣ. ಅವನು ಗುದ್ದಿನಿಂದಾಗಿ ಟೇಬಲ್ ಮೇಲೆ ಕುಡಿಯಲಿಕ್ಕೆಂದು ಇಟ್ಟಿದ್ದ ಗಾಜಿನ ಲೋಟದ ನೀರು ಭರಮಪ್ಪನ ಮುಖಕ್ಕೆ ಸಿಡಿದರೆ ಲೋಟವು ನೆಲಕ್ಕೆ ಬಿದ್ದು ಫಳ್ಳೆಂದು ಶಬ್ಧ ಮಾಡುತ್ತಾ ಚೂರುಚೂರಾಯಿತು.ಆ ಸದ್ದಿಗೆ ಭರಮಪ್ಪನ ನಗು ಅರ್ಧಕ್ಕೆ ಸತ್ತು ಹೋಗಿತ್ತು, ಸೋಮಣ್ಣನ ರೌದ್ರಾವತರವ ಕಂಡು ಕ್ಷಣ ಬೆಚ್ಚಿಬಿದ್ದನು ಭರಮಪ್ಪ. ಕಟಕಟನೆ ಹಲ್ಲನ್ನು ಕಡಿಯುತ್ತಾ ' ಬೋಳಿ ಮಗನೆ, ಹೊಟ್ಟಿಗೇನ್ ಅನ್ನಾ ತಿಂತೀಯೊ ಇಲ್ಲಾ ಹೊಲ್ಸ ತಿಂತೀಯೊ, ನಿನ್ ಮಗ್ಳ ವಯಸ್ಸಿನ ಹೆಂಡ್ತದಾಳ ನನ್ನಾಕಿ, ಅಕಿ‌‌ಮ್ಯಾಲ ಆಸೆಪಟ್ಟಿ, ನಾಚ್ಕಿಲ್ಲೇನ್ಲೆ ನಿಂಗ, ಅದು ನನ್ನ ಹೆಂಡ್ರಿನ ನಾನ ಕರ್ಕೊಂಡ ಬಂದ ನಿನ್ನ ಮಂಚಕ್ಕ ಹತ್ತಸ್ಲಿ, ನಿಮ್ಮೌನ, ಇನ್ನ ನಮ್ಮ ಮದುವ್ಯಾಗಿನ ವರ್ಸ ಸೈತಿ ಆಗಿಲ್ಲ, ಅಷ್ಟರಾಗ ಸಾಕಷ್ಟು ನೋವುಂಡಿವ ನಾವು, ಏನ ಕಷ್ಟಕಾಲ್ದಾಗ ನಮ್ಗ ನೆರಳಕೊಟ್ಟಿದಿ ಅಂತಂದ ತಗ್ಗಿಬಗ್ಗಿ ನಡದ್ರ ನಮ್ಮ ಹೊಟ್ಟಿಮ್ಯಾಲ ಕುಣಿಯಾಕ ಬರ್ತೀ, ನಮ್ಮ ತಂದಿಯಷ್ಟ ವಯಸ್ಸಾಗೈತಿ, ಆ ವಯಸ್ಸಿಗರ ತಕ್ಕಷ್ಟ ಬುದ್ದಿ ಬ್ಯಾಡ, ಬೆಳ್ಕ‌ ಹರ್ದ್ರ ನಾಕ ಮಂದಿ ಜೊತಿ ಅಡ್ಡಾಡ್ತಿಯಲ್ಲ, ಅವ್ರು ಇದನ್ನ ಮಾಡ್ತಾರನ, ಅವ್ರ ಹೆಂಡ್ರ ಮಕ್ಳನ್ನು ಕರಿತಿಯೇನ ಹಾಸ್ಗಿಗೆ, ಏನ ನಮ್ಗ ಹೇಳೊರ ಕೇಳೊರ ಯಾರಿಲ್ಲಂತದ ಕಿತ್ಬಿ ಏಬ್ಸಿಯೇನ ಮಗ್ನ, ನೋಡ ನಾನ ನೋಡೊಕಷ್ಟ ಸಾಚಾ ಕಾಣ್ತೀನಿ, ಹೊಲ್ಮನಿಯಾಗ ದುಡ್ದ ಮೈಯಿದ ಮನಸ್ಸ ಮಾಡಿದ್ನೆಂದ್ರ ಐದ ನಿಮಿಷ್ದಾಗ ನಿನ್ನೆದಿನ ಇಲ್ಲೆ‌ ಸೀಳಿ‌ ಬಗ್ದ ಹಾಕ್ಬಿಡ್ತೀನಿ ಹುಷಾರ್, ನೀನೆಷ್ಟು ಸಾಚಾ ಅದಿ ಅಂತಂದ ಊರೂರ ಮಾತಾಡತೈತಿ‌ ಮಗ್ನ,ಹಳೆ ಮ್ಯಾನೇಜರ್ ರಾತ್ರೊ ರಾತ್ರಿ ಹೆಂಡ್ತಿ ಮಕ್ಳನ್ನ ಕರ್ಕೊಂಡು ಯಾಕ ಊರ್ಬಿಟ್ಟ ಹೋದ, ಮೂಲಿಮನಿ ಬಸ್ಯಾನ ಹೆಂಡ್ತಿ ಅಡ್ಗಿ ಮನ್ಯಾಗ ಊರ್ಲ ಹಾಕ್ಕೊಂಡ ಯಾಕ ಸತ್ಲು, ನಿಮ್ಮನಿ ಕೆಲ್ಸದಾಕಿ ಬೆಳ್ಕ ಹರಿಯೊ ‌ಮೊದ್ಲ ಕೆರಿಯಾಗ ಹೆಣ ಅಗಿ ಯಾಕ ತೇಲಾಡಕ ಹತ್ತಿದ್ಳು, ಹಿಂಗ ಸಾಕಷ್ಟ ವಿಷ್ಯ ನಂಗು ಗೊತ್ತಾದವು, ಗೊತ್ತಿದ್ರು‌ ನಾನ್ಯಾಕ ಸುಮ್ನಿದ್ಯಾ..? ಕೆಲ್ಸ ಇಲ್ದ ಹೊತ್ತನ್ಯಾಗ ಕರ್ದ ಕೆಲ್ಸ ಕೊಟ್ರಿ ಆ ಒಂದ ಋಣಕ್ಕ ಸುಮ್ನಿದ್ನಿ ಇಷ್ಟ ದಿವ್ಸ. ಸಾಕ‌ ಇವತ್ತಿಗ ಈಗ ಸಿಟಿಗೆ ಹೋಗಿ ಒಬ್ಬ ಬ್ರೋಕರ್ ಕರ್ಕೊಂಡ ಬಂದ ಹೊಲ್ಮನಿ ಎಲ್ಲಾ ಮಾರಿ ನಿನ್ನ ಸಾಲದ ರೊಕ್ಕಾನೆಲ್ಲ ಈ ವಾರ್ದಾಗ ನಿನ್ನ ಮೊಸಡಿಗೆ ಒಗಿತಿನಿ, ಥೂ.. ನಾಲಾಯಕ ನನ್ಮಗನ ನಿನ್ಮುಖ ನೋಡೊಕ ಹೆಸ್ಗಿ ಆಗಕ‌ ಹತ್ತೈತಿ ನಂಗೀಗ ' ರೋಷಾವೇಶದಿಂದಲೆ ಮಾತಾಡಿ ಭರಮಪ್ಪನ ಹಣೆಯ ಮೇಲೆ‌ ಬೆವರಿಳಿಸಿ, ಹೊರಡಲನುವಾದನು. ಸೋಮಣ್ಣನ ಮಾತುಗಳನ್ನು ಕೇಳಿ ಕ್ಷಣ ಭಯಭೀತನಾಗಿಬಿಟ್ಟಿದ್ದನು ಭರಮಪ್ಪ, 'ಅಲ್ಲಾ ಇಲಿ ಹಂಗಾ ಇದ್ದಂತೋನು ಇವತ್ತೇನ, ಹುಲಿಯಾಗ್ಬಿಟ್ಟೀವ, ಹ್ಞೂಂ... ಹ್ಞೂಂ... ಹ್ಞೂಂ... ನಾನೇನ ಹಗರ ಅದೀನೆನ ಎಂತೆಂತಾ ಸಿಂಹಗಳನ್ನ ಮಣ್ಣ ಮುಕ್ಸಿದ ಬೇಟೆಗಾರ ಅದೀನ ನಾ, ನಂಗ ಸವಾಲ್ ಹಾಕ್ತಾನ ಇಂವಾ' ಎಚ್ಚೆತ್ತ ಭರಮಪ್ಪ.
'ನಿಂದ್ರಲ್ಲೆ...' ಎಂದು ಗಡಸು ಧನಿಯಲ್ಲಿ ಆಜ್ಞಾಪಿಸಿದನು. ಸೋಮಣ್ಣನು ನಿಂತು ಹಿಂತಿರುಗಿ ಕೆಂಗಣ್ಣಿನಲ್ಲೆ ಕೆಕ್ಕರಿಸಿ ನೋಡಿದನು.
' ಹಾಂಗ ನೋಡಬ್ಯಾಡ್ಲೆ ತಮ್ಮ ಕೆಕ್ಕರಿಸಿ, ಕಣ್ಣ ಕಿತ್ತ ಬೊಂಡಾ ಬಜಿ ಮಾಡ್ಕೊಂಡ ತಿಂದ ಬಿಡಾವದೀನ ನಾ, ನನ್ಬಗ್ಗೆ ನಿಂಗಿನ್ನು ಗೊತ್ತಿಲ್ಲ ಲೆ ಮಳ್ಳ, ನಾ ರಾತ್ರಿ ಕಂಡಷ್ಟು ನಿ ಹಗ್ಲಿನ ಮುಖಾ ನೋಡಿಲ್ಲಾ ಸರಿಯಾಗಿ ತಿಳ್ಕೊ, ನಂಗ ದುಡ್ಡ ಮುಖ್ಯ ಅಲ್ಲಲೆ‌ ಮಬ್ಬ, ಸುಖಾ...!!! ಸುಖಾ...!!! ಸುಖಾ ಬೇಕ ನನ್ಗ ಅದು ರೊಕ್ಕ ಎಷ್ಟರ ಖರ್ಚಾಗ್ಲಿ, ಹೇ.. ಹೆಣ್ಣು ಯಾ ವಯಸ್ಸಿಂದಾದ್ರೇನು, ಮಗಳ್ದಾದ್ರೇನು, ಹೆಂಡ್ತಿದಾದ್ರೇನು, ಅಕ್ಕಂದಾದ್ರೇನು, ನಮ್ಗ ಮನಸ್ಸಿಗ ಬಂದ ತೋಟ್ದಾಗ ನಾವ್ ನೀರ ಹಾಸೋರ, ಖರ್ಚ ಎಷ್ಟರ ಬರ್ಲಿ ತೂಗಸ್ತೀವ ನಾವ್, ನಿನಿನ್ನು ಎಳ್ಸು ಲೆ ತಮ್ಮಾ, ಕದ್ದ ತಿನ್ನೊ ಹಣ್ಣಿನ ರುಚಿ ಅದು ಬ್ಯಾರೇನ ಇರ್ತತಲೆ'  ಅಮಲುಗಣ್ಣಿನಲ್ಲಿ ಮಾತನಾಡಿದನು,
' ಕಂಡ ಕಂಡೋರ ಹೊಲ್ದಾಗ ನೀರ ಹಾಸಿದ್ರ ಫಲ ಛಲೋ‌‌ ಸಿಗೊದಿಲ್ಲ' ಸಿಟ್ಟಿನಿಂದಲೆ ಉತ್ತರಿಸಿದನು ಸೋಮಣ್ಣ
'ಫಲದ ನೀರಿಕ್ಷೆ ನಾನಿಟ್ಕೊಂಡಿಲ್ಲ'
' ನಿ ಹಿಂಗ ಮಾಡಿದ್ರ ಒಂದು ಹೆಣ್ಣಿನ ಮಾನ ಹೋಗ್ತೈತಿ, ಒಂದ ಹೆಣ್ಣಿನ ಮಾನಂದ್ರ ಒಂದು ಕುಟುಂಬದ ಮಾನ ಹೋದ್ಹಾಂಗ, ಮಾನಾ ಹೋದಾಕಿ ಸತ್ತ ಹೋದ್ಲಂದ್ರ, ಆ ಕುಟುಂಬನ ಸತ್ತ ಹೋದ್ಹಾಂಗಾಕೈತಿ, ನಿನ್ನ ಕ್ಷಣ್ದ ಸುಖಕ್ಕ ಇಡೀ ಒಂದ ಕುಟುಂಬಾನ ಉರ್ದ ಹೊಕ್ಕೈತಿ, ನಿನ್ಗ ಪಾಠ ಕಲ್ಸೊರು ಯಾರಿಲ್ಲಂತಂದ ಇಷ್ಟೇಲ್ಲಾ ಹಾರಾಡಕ ಹತ್ತಿದಿ, ಈಗ ಪೋಲಿಸ್ ಸ್ಟೇಶನ್ಗೆ ಹೋಗಿ ಕಂಪ್ಲೇಟ್ ಕೊಟ್ಟ, ಒದ್ದ ಒಳಗ ಹಾಕಸ್ತೀನಿ'
'ಹ್ಹ.....ಹ್ಹ.........ಹ್ಹ.....ಹ್ಹ.....' ಹೊಟ್ಟೆಯನ್ನು ಹಿಡಿದುಕೊಂಡು ಕಣ್ಣಲ್ಲಿ ನೀರು ಬರುವವರೆಗೂ ನಕ್ಕನು ಭರಮಪ್ಪ ' ಲೇ‌ ಮಳ್ಳ, ಎಮ್ಎಲ್ಎ ನನ್ನ ಬಕ್ಣದಾಗ ಅದಾನ, ಸ್ಟೇಷನ್ ನನ್ನ ಮನಿ ಇದ್ಹಂಗ, ಇಡಿ ಊರ್ಗೆ ಊರ್ ನನ್ನ ಅಂಗೈಯ್ಯಾಗ ಐತಿ, ಮೊನ್ನೆ ಇದ ಕೊಣ್ಯಾಗ ನಮ್ಮನಿ ಕೆಲ್ಸದಾಕಿ ನೆಲಾ ವರ್ಸಾಕಂತ ಬಂದಿದ್ಲು, ಸೀರಿ ಸೆರಗ ಬೆಸ್ಯಾಗಿ ಹೊದ್ಕೊಬೇಕಿಲ್ಲ, ನನ್ನೆದ್ರುಗೆನ ಎದಿ ಬೆಣ್ಣಿ ಕಾಣ್ಸುವಂಗ ಕೆಲ್ಸ ಮಾಡಾಕ ಹತ್ತಿದ್ಲು, ತಡ್ಕೊಳ್ಳಾಕ ಆಗ್ಲಿಗ ಬೆಣ್ಣಿನ ಕರ್ಗಿಸಿ ತುಪ್ಪ ಮಾಡ್ಕೊಂಡ ಗಟಗಟಂತಾ ಕುಡ್ದ ಬಿಟ್ನಿ, ಉಡಿತುಂಬಾ ರೊಕ್ಕಾ ತುಂಬಿ ಕಳ್ಸದ್ನಿ, ಹುಚ್ಚ ಮುಂಡೇದ ಹೊಳಿಗೆ ಹಾರಿ ಪ್ರಾಣ ಬಿಡ್ತು, ಅದರ ಬಗ್ಗೆ ಯಾರರ, ಏನರ ಚಕಾರ ಏತ್ತಾರನು ಊರಾಗ, ಇಲ್ಲ, ಕೇಳಿಲ್ಲೆ ಕೊನೆದಾಗಿ ಹೇಳ್ತಿನಿ ತಮ್ಮಾ, ನಿನೇರ ಈ ವಿಷಯಕ್ಕ ಒಪ್ಕೊಲಿಲ್ಲಂದ್ರ, ನನ್ನ ಕಾಮಗಾರಿ ಕೆಲ್ಸದಾಗ ಸಾಕಷ್ಟ ರೊಕ್ಕಾ ಗೋಲಮಾಲ‌ ಮಾಡಿ ಅಂತಂದ ಹೇಳಿ ಕಂಪ್ಲೆಟ್ ಕೊಡ್ಸಿ, ಮ್ಯಾಕ ಏಳಾಕ ಬರ್ಲಾರ್ದಂಗ, ಹೆಂಡ್ತಿ ಮಗ್ಲ ಮತ್ತ ಮಲಗಾಕ ಬಂದಿರ್ಬಾರ್ದು ಹಂಗ ಮೈಯೊಳ ಸಣ್ಣಾಗಿ ಲಾಠಿಲೆ ನಾದಿಸಿಬಿಡ್ತೀನ ಮಗ್ನ, ನಿ ಹಣ್ಣಾದ ಮ್ಯಾಕ‌, ನಿನ್ನ ಹೆಂಡ್ತಿಯನ್ನೊ ಹಣ್ಣನ್ನ ತಿನ್ನೊದು ನಂಗೇನು ಕಷ್ಟದ ಕೆಲ್ಸ ಅಗೋದಿಲ್ಲ, ಏನೊ.. ಒಂದ ರಾತ್ರಿ, ಇಲ್ಲ ಬೇಜಾರಾದಾಗೊಮ್ಮೊಮ್ಮೆ ಕರೆದಾಗ ಕಳ್ಸುವಂತಿ, ನಾನೇನ ದಿನಾ ಬೇಕಂತ ಏನರ ಕೇಳಿನೇನ ನಿಂಗ, ಹ್ಯಾಂಗ ಮಾಡ್ತಿ ಹೇಳ
ಹಣ, ಮಣ್ಣು ತಗೊಂಡು ಹೆಣ್ಣ ಕಳ್ಸು ಇಲ್ಲಾಂದ್ರ ಎರಡು ಸಿಗ್ದ ಸುಡಗಾಡ ಸೇರು' ಆಗ ಕೋಣೆಯ ಬಾಗಿಲನ್ನು ಜೋರಾಗಿ ಬಡೆದು ಸದ್ದನ್ನು ಕೇಳಿ ಭರಮಪ್ಪನು ಸುಮ್ನಿರಬೇಕು ಎಂದು ತುಟಿಯ ಮೇಲೆ ಬೆರಳಿಟ್ಟು ಸನ್ನೆ ಮಾಡಿ, ಬಾಗಿಲನ್ನು ತೆರೆದಾಗ ಎದುರಿಗೆ ಅವನ ಮಗಳು ನಿಂತಿದ್ದಳು.

ವಾರ ಕಳೆಯಿತು. ಸೋಮಣ್ಣನ ತಾಯಿಯನ್ನು ಸುಟ್ಟ ಬೆಂಕಿಯು ಬೂದಿಯಾಗಿ, ಗಂಗೆಯ ಒಡಲನ್ನೆನೊ ಸೇರಿತ್ತು. ಇತ್ತ ಭರಮಪ್ಪನ ಒಡಲಲ್ಲಿ ಕಾಮದ ಬೆಂಕಿ ಮಾತ್ರ ದಿನ ದಿನವು ಕಾಡ್ಗಿಚ್ಚಿನಂತೆ ಅವನ ಅಂಗಾಂಗಗಳಲ್ಲೆಲ್ಲ ಹಬ್ಬಿ ಹೊತ್ತಿ ಉರಿಯುತ್ತಿತ್ತು, ತಾಳಲಾರದಂತಹ ತಾಪ, ಹೇಳಿಕೊಳ್ಳಲಾರದಂತಹ ಸಂಕಟ, ಆಫೀಸ್ ನಲ್ಲಿ ಅದೆ ತಾನೆ ದೇವರ ಪೂಜೆಯನ್ನು ಮುಗಿಸಿಕೊಂಡು, ಉರಿಯುವ ಮೈಯನ್ನು ತಣ್ಣಗಾಗಿಸಿಕೊಳ್ಳಲು ಕೊನೆಯ ಪಾಯಿಂಟ್ ನಲ್ಲಿ ಪ್ಯಾನ್ ನ್ನು ಹಾಕಿಕೊಂಡು ಖುರ್ಚಿಯ ಮೇಲೆ ಕಣ್ಮುಚ್ಚಿ ಕುಳಿತುಕೊಂಡಿದ್ದನು. ಕಣ್ಣ ತುಂಬೆಲ್ಲಾ ಲಕ್ಷ್ಮೀಯ ಚಿತ್ತಾರವೆ ಕುಣಿಯತೊಡಗಿತು,  'ಸಾಕಪ್ಪ ಸಾಕು, ಇನ್ನ ನನ್ನ ಕೈಲೆ ತಡ್ಕೊಳ್ಳದಾಗುದಿಲ್ಲ, ' ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಲೆ ಪಕ್ಕನೆ ಕಣ್ಬಿಟ್ಟು, ಟೇಬಲ್ ಮೇಲಿದ್ದ ಪೋನ್ ನ್ನು ಎತ್ತಿಕೊಂಡು ಸೋಮಣ್ಣನಿಗೆ ರಿಂಗಣಿಸಿದನು.
      ಇತ್ತ ಸೋಮಣ್ಣನು ಹಿಂದಿನ ದಿನ ತಾಯಿಯ ದಿವಸದ ಕಾರ್ಯವನ್ನು ಮುಗಿಸಿ, ಹೆಂಡತಿಯನ್ನು ಅವರ ತಂದೆ ತಾಯಂದಿರ ಜೊತೆಗೆ ಕಳುಹಿಸಿಕೊಟ್ಟಿದ್ದನು ಒಂದೆರಡು ದಿನ ನೆಮ್ಮದಿಯಿಂದ ಇದ್ದು ಬರಲು. ನೆಮ್ಮದಿ...!!!! ಈ ಶಬ್ದವೆ ಒಂಥರಾ ವಿಚಿತ್ರ, ಇದ್ದವನಿಗೆ ಮತ್ತಿನ್ನೇನೊ ಬೇಕೆನ್ನುವ ಅಶಾಂತಿ, ಇಲ್ಲದವನಿಗೆ ಬೇಕು...ಬೇಕೆಂಬ ಶಾಂತಿಯಿಲ್ಲದೆ ಹೊಯ್ದಾಡುವ ಮನಸ್ಥಿತಿ. 'ಸೊಸಿ ಬಂದ ಎರ್ಡ ತಿಂಗ್ಳದಾಗ ಅತ್ತಿನ ನುಂಗಿದ್ಳು,' ಅಂತ ಜನರಾಡುವ ಚುಚ್ಚು ನುಡಿಗಳಿಂದಾಗಿ ಲಕ್ಷ್ಮೀಯ ಮನಸ್ಸು ಘಾಸಿಗೊಂಡಿತ್ತು. ಕೆಲವರು ನೇರವಾಗಿ ಸೋಮಣ್ಣನ ಮುಂದೆಯು ಹೇಳಿದ್ದರು, ಅಂತವರ ಮಾತನ್ನು ತಲೆಗೆ ಹಾಕಿಕೊಂಡಿರಲಿಲ್ಲವಾದರೂ.. ಲಕ್ಷ್ಮೀಯು ನೊಂದುಕೊಂಡಿದ್ದು ಅವನಿಗರ್ಥವಾಗಿತ್ತು ಅದಕ್ಕಾಗಿಯೆ ಒಂದೆರಡು ದಿನ ಆರಾಮಾಗಿ ಇದ್ದು ಬರಲೆಂದು ತವರು ಮನೆಗೆ ಕಳುಹಿಸಿಕೊಟ್ಟಿದ್ದನು. ಅಡುಗೆ ಮನೆಯಲ್ಲಿ ನಾಷ್ಟ ಮಾಡಿ, ಕೆಲಸಕ್ಕೆ ಹೊರಡುವ ಅವಸರದಲ್ಲಿ ಚಹಾವನ್ನು ಮಾಡಿಕೊಳ್ಳುತ್ತಿದ್ದನು. ಆಗ ಟಿಪಾಯ್ ಮೇಲಿಟ್ಟಿದ್ದ ಪೋನು ರಿಂಗಣಿಸತೊಡಗಿತು. ಗ್ಯಾಸ್ ನ್ನು ಆಫ್ ಮಾಡಿ ಚಹಾವನ್ನು ಲೋಟಕ್ಕೆ ಹಾಕಿಕೊಂಡು ಕುಡಿಯುತ್ತಾ ಹೊರಗೆ ಬಂದು ನೋಡಿದರೆ ಭರಮಪ್ಪನ ಕರೆ. ತಟ್ಟನೆ ಪೋನನ್ನು ರಿಸೀವ್ ಮಾಡಿ ' ಗೌಡ್ರ ಹೊಂಟಿನ್ರೀ ಈಗ ಕೆಲ್ಸಕ್ಕ' ಗಡಿಬಿಡಿಯಿಂದೆಂದ
'ಇವತ್ತ ಕೆಲ್ಸಕ್ಕೇನು ಹೋಗ್ಬ್ಯಾಡ ತಮ್ಮಾ, ಸೀದಾ ಮನಿ ಕಡೆ ಬಾ, ಒಂದು ಭಾಳ ಮುಖ್ಯವಾದ ವಿಷ್ಯ ಮಾತಾಡೋದ ಅದ'
' ಐದ ನಿಮಿಷ್ದಾಗ ಅಲ್ಲಿರ್ತೀನ್ರೀ,' ಎನ್ನುತ್ತಲೆ ಒಂದೆ ಗುಟುಕಿಗೆ ಚಹಾವನ್ನು ಕುಡಿದು, ಮನೆಗೆ ಬೀಗ ಹಾಕಿ ಗಾಡಿಯನ್ನು ಹತ್ತಿಕೊಂಡು ನೇರ ಭರಮಪ್ಪನ ಮನೆಯತ್ತ ಹೊರಟನು.

     ಆಫೀಸ್ ನಲ್ಲೀಗ ಗಾಢ ಮೌನವು ಮನೆಮಾಡಿತ್ತು, ಒಂದೆ ಒಂದು ಪಿಸುಮಾತನ್ನು ಸಹ ಕಿವಿಗೊಟ್ಟು ಕೇಳಿದರು ಕೇಳಿಸದ ಹಾಗೆ ಮನೆಯಲ್ಲಿಯೆ ಆಫೀಸ್ ನ್ನು ನಿರ್ಮಿಸಿಕೊಂಡಿದ್ದನು ಭರಮಪ್ಪ, ಲಕ್ಷಾಂತರ ರೂಪಾಯಿಗಳ ಟೆಂಡರ್ ವ್ಯವಹಾರ ಯಾರ ಕಿವಿಗೆ ಬಿದ್ದರೆ ಟೆಂಡರ್ ಕೈ ತಪ್ಪುವ ಅವಕಾಶಗಳು ಸಾಕಷ್ಟು. ಆದ್ದರಿಂದಲೆ ತನ್ನ ಎಲ್ಲ ವ್ಯವಹಾರಕ್ಕೆ ಅನುಕೂಲವಾಗಲೆಂದು ಈ ಕೋಣೆಯನ್ನು ಭದ್ರ ಕೋಟೆಯನ್ನಾಗಿಸಿಕೊಂಡಿದ್ದನು. ಈಗ ಭರಮಪ್ಪನೆ ಕ್ಯಾಕರಿಸುತ್ತ ಮಾತನ್ನು ಪ್ರಾರಂಭಿಸಿದನು. ' ಏಲ್ಲಾ ಕೆಲ್ಸ ಆದ್ವಾ..' ಸ್ವಲ್ಪ ಅಧಿಕಾರಯುತ ಧ್ವನಿಯಲ್ಲಿ ಸೋಮಣ್ಣನನ್ನು ಕೇಳಿದನು.
'ಹೂನ್ರೀ..ಗೌಡ್ರ ' ತಲೆಯಾಡಿಸುತ್ತಲೆ ಮತ್ತಷ್ಟು ಕುರ್ಚಿಯಲ್ಲಿ ಮುದುಡಿಕೊಂಡು ಕುಳಿತನು.
'ನೋಡು ತಮ್ಮಯ್ಯ, ಸೀದಾ ವಿಷಯಕ್ಕ ಬಂದ್ಬಿಡ್ತೀನಿ, ಮತ್ತ ಮೊನ್ನೆ ನಿಮ್ಮ‌ ತಾಯಿಗೆ ತೋರ್ಸಿದ್ದು, ನಿನ್ನ ಮತ್ತ ನಿಮ್ಮಕ್ಕಾರ ಮದ್ವಿ ಖರ್ಚಿಗೆಂತ ಕೊಟ್ಟಿದ್ದ ಒಟ್ಟ ಬಡ್ಡಿ ಅಸಲು ಸೇರಿ ಹನ್ಯಾಡ ಲಕ್ಷ ರೂಪಾಯಿ ಆಗೈದ, ತಿಂಗ್ಳ ತಿಂಗ್ಳ ಬಡ್ಡಿನು ಹೆಚ್ಚಾಕ್ಕೊಂತ ಹೊಂಟದ, ನಿಂಗ ಕೊಡೊ‌ ಹತ್ತ ಸಾವ್ರ ಸಂಬ್ಳದಾಗ ಬರೆ ಬಡ್ಡಿ ಮುರ್ಕೊಳ್ಳಾಕ ಆಗೋದಿಲ್ಲ, ಹಿಂಗಿದ್ದಾಗ ಮತ್ತ ಈ ಸಾಲಾನೆಲ್ಲ ಹ್ಯಾಂಗ ತೀರ್ಸಸ್ತೀಯಪಾ ?'
ಅಂತಹ ವೇಗದ ಫ್ಯಾನಿನ ಗಾಳಿಯಲ್ಲೂ ಸೋಮಣ್ಣನಿಗೆ ಮೈ ತುಂಬಾ ಬೆವರಿಳಿದುಬಿಟ್ಟಿತು. ಖರ್ಚಿಫನಿಂದ ಬೆವರನ್ನು ಒರೆಸಿಕೊಳ್ಳುತ್ತಾ, ' ನಂಕಡೆ ಏನೈತ್ರೀ ಗೌಡ್ರ, ಅದ ಎರ್ಡ ಎಕ್ರೆ ಹೊಲ, ಹಳೆಮನಿ, ದುಡ್ದ ತೀರ್ಸಾನಂತಂದ್ರ ನಿಗಲಾರ್ದ ಸಾಲ ಆಗ್ಬಿಟ್ಟೈತಿ, ನನ್ಗೂ ಏನು ತಿಳಿವಲ್ದರಿ ಗೌಡ್ರ, ಬಜಾರ್ದಾಗ ಎಕ್ರೆಕ ನಾಲ್ಕ ಲಕ್ಷ ರೂಪಾಯಿ ನಡದೈತ್ರಿ, ಎರಡ ಎಕ್ರೆ ಮಾರಿದ್ರ ಎಂಟ ಲಕ್ಷ ಬರ್ತಾವು,  ಮನಿನ ಮಾರಾಕಂತ ಹಚ್ಚಿದ್ರ ನಮ್ಮ ಹಳ್ಳ್ಯಾಗ ಅಷ್ಟಾಕೊಂಡ ರೊಕ್ಕಾ ಕೊಟ್ಟ ಯಾರ ಹಿಡಿತಾರ್ರೀ..., ಅದು ಅಲ್ದ ಮ್ಯಾಲಿ ಛತ್ತು ಇವತ್ತೊ, ನಾಳ್ಯೊ ಅನ್ನೊಹಂಗ  ಐತದು, ಅಬ್ಬಬ್ಬಾ ಅಂದ್ರ ಒಂದ ಮೂರ ಲಕ್ಷಕ್ಕ ಹೋಕ್ಕೈತ್ರಿ, ಅಲ್ಲಿಲ್ಲೆ ಅಡ್ಡಾಡಿ ಮಾರೊದ್ಕೀನ, ದೊಡ್ಡ ಮನ್ಸ ಮಾಡಿ ನೀವಾ ಎಲ್ಲಾ ಸುದ್ದ ಮಾಡ್ಕೊಂಡ ಬಿಡ್ರೀ.. ನೀವೆಲ್ಲೆ ಬಂದು ಸೈನ ಹಾಕಂದ್ರ ನಾನು ನನ್ಹೆಂಡ್ತಿ ಅಲ್ಲಿಗೆ ಬಂದ ಸೈನ ಮಾಡ್ತೀವ್ರಿ, ನೀವ್ ನಮ್ಮ ಪಾಲಿನ ದೇವ್ರ ಇದ್ಹಂಗ ನೋಡ್ರಿ ಗೌಡ್ರ, ನಮ್ಗೂ ಮನಿಯ್ಯಾಗ ಹೀರೆರಂತ ಯಾರದರ್ರೀ.., ಹಗ್ಗಾನು ನಿಮ್ಮ ಕೈಯ್ಯಾಗ, ಕುಡ್ಗೊಲು ನಿಮ್ಮ ಕೈಯ್ಯಾಗ ಕೊಟ್ಟಿವ್ರಿ, ಕತ್ರಸ್ತೀರೊ, ಕಾಪಾಡ್ತೀರೊ, ನೇಣ ಹಾಕ್ತೀರೊ ಬಾಳೆಕ ಹಚ್ತೀರೊ ಎಲ್ಲಾ ನಿಮ್ಮ ಕೈಯ್ಯಾಗ ಐತ ನೋಡ್ರಿ ಗೌಡ್ರ',  ಕಣ್ಣಂಚಿನಲ್ಲಿ ಕಣ್ಣೀರನ್ನು ತುಂಬಿಕೊಂಡು ದೀನತೆಯಿಂದ ಎರಡು ಕೈಯನ್ನು ಜೋಡಿಸಿ ಮುಗಿಯುತ್ತಾ ನುಡಿದನು.
'ಹಂಗದ್ರ ಹ್ಯಾಂಗೊ ತಮ್ಮಾ, ಊರಾನ ಮಂದಿ ಏನ ತಿಳ್ಕೊಳಕ್ಕಿಲ್ಲ ನನ್ನ, ಅಲ್ಲಾ ದುಡಿಯಾಕಂತ ಇಟ್ಕೊಂಡು ಒಷ್ಟು ಆಸ್ತಿನ ನುಂಗಿ ನೀರ ಕುಡ್ದಬಿಟ್ಟ ಅಂತಾರಪಾ '
' ಗೌಡ್ರ,  ಊರಾನ ಮಂದಿ ನೂರ ಮಾತ ಆಡ್ತಾರ, ಬೆಂಕ್ಯಾಗ ಬೆಂದ ಬಂಗಾರದ್ಹಂತ ನಡ್ತಿ ಹೊತ್ತಬಂದ ಸೀತವ್ವನ ಶೀಲದ ಮ್ಯಾಲ ಸಂಶಯಪಟ್ಟಂತ ದೇಶಾ ನಮ್ದು, ಇನ್ನೂ ಇಂತಾದಕೆಲ್ಲಾ, ತಲಿ ಕೆಡ್ಸಿಕೊಳ್ಳಾಕ ಆಗ್ತದೇನ್ರೀ..'
'ಆದ್ರೂ ಇರ್ಲೆಪಾ ಜನಪವಾದ ಬರ್ಬಾರ್ದ ನೋಡ ನಂಗ, ಯಾಕಂದ್ರ ಬೆಳ್ಕ ಹರ್ದ ಕೋಳಿ ಕೂಗಿದ್ರ, ನಾಕ್ಮಂದಿ ದೊಡ್ಡೊರ ಜತಿ ಅಡ್ಡಾಡಂವಪಾ ನಾ, ಹೋದಲೆಲ್ಲ ನಂದ ನ್ಯಾಮೆ‌ ಕೆಡಬಾರ್ದ ನೋಡ, ಹೌದಲ್ಲ..?'
ಹೌದೌದು ಎನ್ನುವಂತೆ ತಲೆಯಾಡಿಸಿದನು ಸೋಮಣ್ಣ
ಮುಂದುವರೆಯುತ್ತಾ, ' ನೋಡ್ಪಾ ನೀನು ಬಾಯ್ಸತ್ತಾವ ಇದ್ದೀದಿ, ಏನ್ಮಾಡಬೇಕು ನಂಗೂ ಹಣ್ದ ಅವಶ್ಯಕತಿ ಭಾಳಂದ್ರ ಭಾಳ ಐತಿ, ಮುಂದಿನ ತಿಂಗ್ಳ ಎಮ್ ಎಲ್ಎ ಎಲೆಕ್ಷನ್ ಬಂತ ಸಾಹೇಬ್ರಗೊಂದಿಷ್ಟು ರೊಕ್ಕಾ ಕೂಡ್ಸಿ ಕೊಡ್ಬೇಕಾಗೈತಿ, ಹ್ಞೂಂ.... ಹ್ಯಾಂಗ ಮಾಡೋದನ್ನೊದ ತಿಳಿವಲ್ದಾಗೈತಿ ನೋಡ ನನ್ಗೂನು,'
ಗಲ್ಲಕ್ಕೆ ಕೈ ಇಟ್ಟುಕೊಂಡು ಚಿಂತಾಕ್ರಾಂತವಾದಂತಹ ರೀತಿಯಲ್ಲಿ ಕುಳಿತುಕೊಂಡನು ಭರಮಪ್ಪ.

ಎರಡ್ಮೂರು ದಿನಗಳು ಹೀಗೆ ಕಳೆದುಹೋದವು, ಅದೊಂದು ದಿನ ಸೋಮಣ್ಣನ ಬೀಗರ ಮನೆಯಲ್ಲಿ ದೇವರ ಪೂಜೆಯನ್ನು ಇಟ್ಟುಕೊಂಡಿದ್ದರು, ಅದಕ್ಕಾಗಿ ಭರಮಪ್ಪನನ್ನು ಕಾಡಿ...ಬೇಡಿ ಒಂದು ದಿನದ ರಜೆಯನ್ನು ಪಡೆಯಲು ಹರಸಾಹಸಪಟ್ಟಿದ್ದನು, ಆದರೆ ಅವನು ಕರುಣಿಸಿದ್ದು ಅರ್ಧ ದಿನದ ರಜೆಯನ್ನು ಮಾತ್ರ, ಇಷ್ಟು ಸಿಕ್ಕಿದ್ದೆ ಪುಣ್ಯವೆಂದುಕೊಂಡು,  ಹೆಂಡತಿಯನ್ನು ಬೆಳಿಗ್ಗೆ ಬೇಗ ಅವಳ ತವರೂರಿಗೆ ಕರೆದುಕೊಂಡು ಹೋಗಿ, ಪೂಜಾ ಕಾರ್ಯವನ್ನು ಮುಗಿಸಿಕೊಂಡು ಊಟ ಮಾಡಿಕೊಂಡು ತಾಂಬೂಲಕ್ಕೂ... ಕಾಯದೆ ಹೊರಟಿದ್ದರು. ಬರುವ ದಾರಿಯಲ್ಲಿ ಕಾಂಟ್ರ್ಯಾಕ್ಟರ ಭರಮಪ್ಪನ ಕಾರು ಡಿಸೇಲ್ ಖಾಲಿ ಆಗಿ ಕೈ ಕೊಟ್ಟು ನಿಂತಿತ್ತು, ದಾರಿಯ ಮಧ್ಯದಲ್ಲಿ ಭರಮಪ್ಪ ನಿಂತಿರುವುದನ್ನು ನೋಡಿ ಸೋಮಣ್ಣನಿಗೆ ಕೈ ಕಾಲುಗಳೆ ಆಡಲಿಲ್ಲ, 'ಅಲೆಲೆ...ಏನಪಾ ತಮ್ಮಾ.. ಕಾರ್ಯ ಮುಗ್ಸಿಕೊಂಡ ಈಗ ಬಂದೇನು..?' ಎಂದು ತಲೆಯತ್ತಿ ಸೋಮಣ್ಣನ ಹಿಂದೆ ಕುಳಿತಿದ್ದಂತಹ, ಅವನ ಹೆಂಡತಿ ಲಕ್ಷ್ಮೀಯತ್ತ ಕಣ್ಣು ಹಾಸಿದನು.
' ಹ್ಞೂಂ ನ್ರೀ ಗೌಡ್ರ' ತೊದಲುತ್ತಲೆ, ನುಡಿದು ಗಾಡಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ, ಕಾರಿನ ಹತ್ತಿರ ಬಂದನು, ಕಾರೊಳಗಡೆ ನೋಡಿದರೆ, ಭರಮಪ್ಪನ ಧರ್ಮಪತ್ನಿ, ಮತ್ತು ಮಗಳು ಕುಳಿತಿದ್ದರು. ಅವರಿಬ್ಬರನ್ನು ಕಂಡು ಮನಸ್ಸಿಗೊಂದಿಷ್ಟು ಸಮಾಧಾನವಾಯಿತವನಿಗೆ,
' ಥೂ... ಇಲ್ಲೂ ಕಂಜೂಸ್ ಬುದ್ದಿ, ಊರಿಗೆ ಹೊಂಟಿವಿ ಅಂತ ಗೊತ್ತಿದ್ದು ಗಾಡಿಗೆ ಎಣ್ಣಿ ಹಾಕ್ಸಕೊಂಡ ಹೋಗ್ಬೇಕ ಅನ್ನೊ ಕಬರ್ ಬ್ಯಾಡ ಇದ್ಕ' ಸಣ್ಣ ಧ್ವನಿಯಲ್ಲಿ ಗೊಣಗಿಕೊಳ್ಳುತ್ತಿದ್ದಳು ಭರಮಪ್ಪನ ಹೆಂಡತಿ, ಅವಳ ಮಾತುಗಳನ್ನು ಕೇಳಿ ಹ್ಞೂಂ... ಎಂದು ಗಂಟಲಿನಿಂದಲೆ ಗದರಿಸಿದನು ಭರಮಪ್ಪ, ಸೋಮಣ್ಣನು ಕಾರಿನ ಹತ್ತಿರ ಬಂದು ನಿಂತದ್ದನ್ನು ಅವಳು ಗಮನಿಸಿಯೆ ಇರಲಿಲ್ಲ, ಕಿಡಕಿಯಿಂದ ಸೋಮಣ್ಣನ್ನು ನೋಡಿ ಸುಮ್ಮನಾದಳಾಗ. ಜೇಬಿನಿಂದ ಎರಡು ಸಾವಿರ ನೋಟಿನ ಕಟ್ಟನ್ನು ತೆಗೆದು ಅದರೊಳಗಿಂದ ಒಂದು ನೋಟನ್ನು ಹಿರಿದು ಸೋಮಣ್ಣನಿಗೆ ಕೊಡುತ್ತಾ, 'ತಗೋಳಪಾ ಹಿಂದ ಕಾರಿನ ಡಿಕ್ಯಾಗ ಒಂದ ಕ್ಯಾನ ಐತಿ, ಇಲ್ಲೆ ಎರ್ಡ ಕಿ.ಮೀ. ದೋರ್ದಾಗ ಒಂದ ಬಂಕ್ ಐತಿ, ಆ ಕ್ಯಾನ ತುಂಬಾ ಎಣ್ಣಿ ಹಾಕ್ಸಿಕೊಂಡು ಬಾ, ಉಳ್ದ ರೊಕ್ಕಾನೇನ ನಂಗ ಕೊಡಬ್ಯಾಡ, ಮನ್ಯಾಗ ನಿಮ್ಮ ತಾಯಿಗ ಆರಾಮಿಲ್ಲಂತಂದೆಲ್ಲ..? ಮನಿಗೆ ಏನರ ಒಂದಿಷ್ಟು ಹಣ್ಣ ಹಂಪ್ಲ ಒಯ್ಯಿ, ಹ್ಞಾಂ.... ಆತಿಲ್ಲೊ...' ಅವನ ಮರು ಮಾತಿಗೂ ಕಾಯದೆ ಲಕ್ಷ್ಮೀಯ ಸೌಂದರ್ಯವನ್ನು ನೋಡುತ್ತಾ, ನೋಟನ್ನು ಸೋಮಣ್ಣನ ಅಂಗಿ ಜೇಬಿನಲ್ಲಿ ತುರುಕಿದನು. ಭರಮಪ್ಪನ ನೋಟ ತನ್ನ ಹೆಂಡತಿಯ ಮೇಲೆ ಬಿದ್ದಿದ್ದನ್ನು ಗಮನಿಸಿದ ಸೋಮಣ್ಣನು, ತಡಮಾಡದೆ ಬಿಲ್ಲಿನಂತೆ ಬಿಟ್ಟ ಬಾಣದಂತೆ ಹೋಗಿ ಡಿಸೇಲ್ ನ್ನು ತಂದುಕೊಟ್ಟು ಭರಮಪ್ಪನನ್ನು ಸಾಗುಹಾಕಿ ಹೆಂಡತಿ ಲಕ್ಷ್ಮೀಯನ್ನು ಕರೆದುಕೊಂಡು ಮನೆಗೆ ಬರುವ ಹೊತ್ತಿಗೆ ಜೀವಹೋಗಿ ಬಂದಂತಾಗಿತ್ತು ಸೋಮಣ್ಣನಿಗೆ.

    ಸಂಜೆ ಆರರ ಸಮಯ, ಏನೊ ಚಿಂತಿಸುತ್ತ ಮನೆಯ ಜಗಲಿಯಲ್ಲಿ ಚಹಾವನ್ನು ಕುಡಿಯುತ್ತ ಕುಳಿತುಕೊಂಡಿದ್ದನು ಸೋಮಣ್ಣ. ದೂರದಿಂದ ಯಾವುದೊ ಒಂದು ಕಾರು ರಸ್ತೆಯ ತುಂಬಾ ಧೂಳನ್ನು ಎಬ್ಬಿಸುತ್ತಾ ಬಂದು ಸೋಮಣ್ಣನ‌ ಮನೆಯ ಮುಂದೆ ನಿಂತುಕೊಂಡಿತು. ನೋಡಿದರೆ ಕಾಂಟ್ರ್ಯಾಕ್ಟರ ಭರಮಪ್ಪನ ಕಾರು, ಎದೆ ಝಲ್ ಎಂದುಬಿಟ್ಟಿತು ಸೋಮಣ್ಙನಿಗೆ, ದಡಬಡಬನೆ ಜಗಲಿಯಿಂದ ಇಳಿದ ಏರು ಕಟ್ಟಿದ್ದ ಲುಂಗಿನ್ನು ಉಚ್ಚಿ, ಕಾರಿನ ಬಾಗಿಲ ತನಕ ಹೋಗಿ ನಿಂತನು. ಕಾರಿನ ಬಾಗಿಲ ತೆಗೆದು ಹೊರಬಂದ ಭರಮಪ್ಪನು 'ಇದೇನಯ್ಯ ನಿನ್ನರಮನೆ' ಎಂದು ಹಂಗಿಸುವ ಧ್ವನಿಯಲ್ಲಿ ಕೇಳಿದ, ಹೌದೆನ್ನುವಂತೆ ತಲೆಯಾಡಿಸತ್ತಾ
'ಅಲ್ಲಾ, ಇಷ್ಟು ದೂರ ಯಾಕ ಬರಾಕ ಹೋದ್ರಿ.., ಒಂದ್ ಪೋನ್ ಮಾಡಿದ್ರ ನಾನ ಬರ್ತಿದ್ನೆಲ್ಲರಿ.' ಮೆಲುದನಿಯಲ್ಲಿ
'ಅಯ್ಯೊ ನಿನ್ನ ಪೋನ್ ನ್ಯಾಗ ನಿಂ ತಾಯಿ ಹೆಂಗಾದರ್ ಅಂತಂದ‌‌ ಏನಾರ ನೋಡಾಕ ಬರ್ತದನು...? ಬುದ್ದಿ ಎಲ್ಲಿಟ್ಟಿಯೊ ತಮ್ಮಾ, ಮೊನ್ನೆರ ಹೇಳಿದ್ದಿ ನಿಮ್ಮ ತಾಯಿಗೆ ಭಾಳ
ಹುಷಾರಿಲ್ಲಂತಂದ, ಅದ್ಕ ಇದ ದಾರ್ಯಾಗ ಹೊಂಟಿದ್ನ್ಯಾ, ನೊಡ್ಕೊಂಡ ಹೋದ್ರಾತಂದು ಬಂದ್ನಿ ನೋಡ್ಪಾ..' ಮಾತನಾಡುತ್ತಲೆ ಸೋಮಣ್ಣನ ಹೆಗಲಿನ ಮೇಲೆ ಕೈ ಹಾಕಿಕೊಂಡು ಅವನ ಅನುಮತಿಗೂ ಕಾಯದೆ ಮನೆಯೊಳಕ್ಕೆ ನಡೆದೆಬಿಟ್ಟನು. ಒಳಗೆ ಬಂದಂತಹ ಭರಮಪ್ಪನು ಸೀದಾ ಹೋಗಿದ್ದು ಅನಾರೋಗ್ಯ ಪೀಡಿತ ಸೋಮಣ್ಣನ ತಾಯಿಯ ಹತ್ತಿರವಾದರೂ.... ಕಣ್ಣುಗಳು ಮಾತ್ರ ಬೇಟೆಯನ್ನು ಹುಡುಕುವ ಶಿಕಾರಿಯ ನೋಟದಂತೆ, ಕಣ್ರೆಪ್ಪೆಗಳನ್ನು ಮಿಟುಕಿಸದೆ ಲಕ್ಷ್ಮೀಗಾಗಿ ಹುಡುಗಾಟತೊಡಗಿದವು. ಸೋಮಣ್ಣನಿಗೆ ಮಾತ್ರ ಜೇಡರ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಹುಳುವಿನಂತೆ ಚಡಪಡಿಸತೊಡಗಿದ್ದನು. ಭರಮಪ್ಪನು ಬಂದ ವಿಷಯವು ಗೊತ್ತಾಗಿ ಅಡುಗೆ ಮನೆಯಿಂದ ಲಕ್ಷ್ಮೀ ಚಹಾವನ್ನು ಮಾಡಿಕೊಂಡು ತಂದು ಭರಮಪ್ಪನ ಮುಂದೆ ಹಿಡಿದು ನಿಂತಳು. ಚಹಾದ ಲೋಟವನ್ನು ತಟ್ಟೆಯಿಂದ ತೆಗೆದುಕೊಳ್ಳುತ್ತಲೆ ಅವಳ ಸೌಂದರ್ಯ ರಾಶಿಯನ್ನು ಕಣ್ತುಂಬಿಕೊಳ್ಳತೊಡಗಿದನು, ಅವನ ಹುಳಕ ಮನಸ್ಸು ಇವಳನ್ನು ತನ್ನ ಹೂ ಹಾಸಿಗೆಗೆ ಆಹ್ವಾನಿಸುವ ಬಗ್ಗೆ ಮನಸ್ಸಿನಲ್ಲಿಯೆ ಹುತ್ತವೊಂದನ್ನು ಕಟ್ಟಲಾರಂಭಿಸಿತು, ಕೆಲಸದ ಅವಸರದಲ್ಲಿ ಲಕ್ಷ್ಮೀ ಸೀರೆಯ ಸೆರಗನ್ನು ನಡುವಿಗೆ ಸಿಕ್ಕಿಸಿಕೊಂಡಿದ್ದಳು, ಸೀರೆಯ ಚೂರು ಸರಿಸಿದ ಭಾಗದಿಂದ ಅವಳ ಹೊಕ್ಕಳು ಇವನಿಗೆ ದರ್ಶನಕೊಟ್ಟಿತ್ತು, ಮನದಲ್ಲಿ  ಅವಳನ್ನು ಪಡೆಯಬೇಕೆಂದು ಕಟ್ಟಿದ ಆಸೆಯ ಹುತ್ತದಲ್ಲಿ ಕಾಮದ ಹಾವು ಒಳಸೇರಿಬಿಟ್ಟು, ಹಸಿವಿನಿಂದ ಭುಸುಗುಟ್ಟತೊಡಗಿತು. ಅವಳನ್ನೆ ನುಂಗುವಂತೆ ನೋಡತೊಡಗಿದನು, ಹೇಳದೆ ಕೇಳದೆ ಹೀಗೆ ಅಚಾನಕ್ ಅಗಿ ಬಂದಿದ್ದರಿಂದ ಅವಳೇನು ಸಿಂಗರಿಸಿಕೊಂಡಿರಲಿಲ್ಲ, ಮುಡಿಯಿಂದ ಜಡೆಯಾಗಲು ಜಗಳವಾಡಿ ಅವಳ ಕೋಮಲ ಕೆನ್ನೆಗಳ ಮೇಲೆ‌ ನಾಟ್ಯವಾಡುತ್ತಿದ್ದ ಮುಂಗುರುಳುಗಳು, ಎರಡು ಕೆನ್ನೆಗಳಿಗೆ ತೆಳ್ಳಗೆ ಹಚ್ಚಿದ ಅರಿಶಿಣ, ಬೆವರಿನಿಂದ ಅವಳ ಮೈಯಲ್ಲಾ ಸಿಂಗರಿಸಿದ ಬೆವರಿನ ಹನಿಗಳು, ಬಳ್ಳಿಯಂತಹ ನಡುವು, ಜೇನು ತುಂಬಿ ನಿಂತ ಕೆಂದುಟಿಗಳು, ಆಹಾಹಾ..!!! ಹಾ... ಒಟ್ಟಿನಲ್ಲಿ ಬರಿ ತುಪ್ಪವನ್ನೆ ಹಾಕಿ ಮಾಡಿಟ್ಟ ಮೈಸೂರಪಾಕದಂತೆ ಕಂಡಳು. ಚಹಾವನ್ನು ಕುಡಿಯಲು ಮುಂದಾದಾಗ ತುಟಿಗೆ ಹತ್ತಿ ಚುರ್ರೆಂದಾಗಲೆ ಭರಮಪ್ಪನು ವಾಸ್ತವಕ್ಕೆ ಬಂದದ್ದು, ಸೋಮಣ್ಣನು ಇದನ್ನು ಗಮನಿಸಿ ಹೆಂಡತಿಯನ್ನು ಒಳಗಡೆ ಹೋಗು ಎಂದು ಕಣ್ಸನ್ನೆಯಿಂದಲೆ ಸೂಚಿಸಿದನು. ಲಕ್ಷ್ಮೀ ಅಯಿತೆಂದು ಗೋಣಾಡಿಸಿ ಒಳಗೆ ಹೋದಳು. ಭರಮಪ್ಪನಿಗೆ ಅತೀವ ರಸಭಂಗವಾಗಿಬಿಟ್ಟಿತು, ಚಹಾವನ್ನು ಕುಡಿಯದೆ ಲೋಟವನ್ನು ಟಿಪಾಯ್ ಮೇಲಿಟ್ಟು ಎದ್ದು ನಿಂತನು. ಸೋಮಣ್ಣನ ತಾಯಿಯ ಕೊಣೆಯಿಂದ ಬಿಕ್ಕಳಿಕೆಯ ಶಬ್ದವು ಬರಲಾರಂಭಿಸಿತು. ಭರಮಪ್ಪನು, ಸೋಮಣ್ಣನು ಒಳಗೆ ಹೋಗಿ ನೋಡಿದರೆ ಸೋಮಣ್ಣನ ತಾಯಿ ಮೆಲುಗಣ್ಣು ಮಾಡಿಕೊಂಡು ಬಿಕ್ಕತೊಡಗಿದ್ದಳು. ಭರಮಪ್ಪನಿಗೆ ಏನೊ‌ ಹೊಳೆದಂತಾಗಿ, ಅವಸರಿಸಿ ಅವನ ತಾಯಿಯನ್ನು ಕರೆದುಕೊಂಡು ತನ್ನ ಕಾರಿನಲ್ಲೆ ಹಾಕಿಕೊಂಡು ನಗರದ ದೊಡ್ಡಾಸ್ಪತ್ರೆಗೆ ಸೇರಿಸಿದನು. ಸೋಮಣ್ಣನು ಬೇಡ ಬೇಡ ಅಂತ ಎಷ್ಟೇ ಬೇಡಿಕೊಂಡರು,'ಸುಮ್ನಿರಯ್ಯಾ ತಾಯಿ ಅಂದ್ರೆ‌ ಎಲ್ರಿಗೂ ಒಂದೆ, ನನ್ನ ತಾಯಿ ಆಗಿದ್ರೆ ನಾನ್ ತೋರ್ಸ್ತಿರಲಿಲ್ವಾ..?' ಎಂದು ಸೋಮಣ್ಣನ ಬಾಯಿಯನ್ನು ಮುಚ್ವಿಸಿ, ಎರಡು ದಿನದಲ್ಲಿ ನಾಲ್ಕು ಲಕ್ಷ ಆಸ್ಪತ್ರೆಯ ಬಿಲ್ ಆಗಿಬಿಟ್ಟಿತ್ತು, ಆಪರೇಷನ್, ಆಯ್.ಸಿ.ಯು ರೂಮ್ ಹೀಗೆ ಅಂತೆಲ್ಲಾ ಹೇಳಿ, ಕೊನೆಗ ಮೂರನೆ ದಿನಕ್ಕೆ ಸೋಮಣ್ಣನ ತಾಯಿ‌ ತೀರಿಕೊಂಡುಬಿಟ್ಟಳು. ವಿಧಿಯಿಲ್ಲದೆ ಹೆಣವನ್ನು ಊರಿಗೆ ತೆಗೆದುಕೊಂಡು ಬಂದು ಎಲ್ಲ ಕಾರ್ಯವನ್ನು ಮಾಡಿ ಮುಗಿಸಿಬಿಟ್ಟರು.