Sunday, October 14, 2018

ಭಾಗ ೧೫

ಕಾಗದವನ್ನು ಓದಿ ಮುಗಿಸಿದ ನಂತರ ಅಖಿಲನು ದೇವಾಲಯದ ಕಲ್ಲುಗಂಬದಂತೆ ನಿಸ್ತೇಜಿತನಾಗಿ ನಿಂತುಬಿಟ್ಟನು. ಅಡಿಯಿಂದ ಮುಡಿಯವರೆಗೂ ಇರುವ ರಕ್ತನಾಳಗಳಲ್ಲಿನ ನೆತ್ತರು, ಗಡಿಗೆಯಲ್ಲಿದ್ದ ಸುಣ್ಣಕ್ಕೆ ನೀರನ್ನು ಸುರಿದಾಗ ಯಾವ ರೀತಿ ಕೊತಕೊತನೆ ಕುದಿಯುವುದೊ ಆ ರೀತಿಯಲ್ಲಿ ಕುದಿಯತೊಡಗಿತು, ಎದೆಯಲ್ಲಿ ಸಾವಿರಾರು ಅಶ್ವಗಳ ಓಟದ ಸದ್ದಿನಂತೆ ಎದೆಯು ಬಡೆದುಕೊಳ್ಳತೊಡಗಿತು, ಮೂಗಿನ ಹೊಳ್ಳೆಗಳಿಂದ ಬಾಲವ ತುಳಿಸಿಕೊಂಡ ಘಟಸರ್ಪವು ಬುಸುಗುಟ್ಟುವ ಹಾಗೆ ಉಸಿರಾಡತೊಡಗಿದನು, ಎರಡು ಕೈಗಳ ಮುಷ್ಠಿಯನ್ನು ಬಿಗಿದು, ಅಮ್ಮಾ...ಎಂದು ಜೋರಾಗಿ ಕೂಗಿಕೊಳ್ಳಬೇಕೆಂಬ ಸಂಕಟವನ್ನು ಗಂಟಲಿನ ಅರ್ಧದಲ್ಲೆ ಕತ್ತರಿಸಿಕೊಂಡುಬಿಟ್ಟನು. ಜೋರಾಗಿ ಕೂಗಿ ಆ ಸದ್ದಿಗೆ ಯಾರಾದರು ಬಂದರೆ...?. ಕಣ್ಣುಗಳಿಂದ ಅಶ್ರುಧಾರೆ ಒಂದೆ ಸಮನೆ ಸುರಿಯಲಾರಂಭಿಸಿತು, ತಲೆಯ ಕೂದಲನ್ನು ಕಿತ್ತಿಕೊಳ್ಳುವ ಹಾಗೆ ಜಗ್ಗುತ್ತಾ, ತಲೆಯನ್ನು ದೇವಾಲಯದ ಕಂಬಕ್ಕೆ ಗುದ್ದತೊಡಗಿದನು. ಗುದ್ದಿಕೊಳ್ಳುವ ರಭಸಕ್ಕೆ ಹಣೆಯಂಚಿನಲ್ಲಿ ಚಿಕ್ಕ ಗಾಯವಾಗಿ ನೆತ್ತರು ಜಿನುಗತೊಡಗಿತು. ಕಾದ ಕೆಂಡದ ಮೇಲೆ ನೀರನ್ನು ಚಿಮುಕಿಸಿ ಕೆಂಡವನ್ನು ಆರಿಸುವ ಹಾಗೆ ತನ್ನ ಮೇಲಿನ ಕೋಪವನ್ನು ತಾನೆ ನಿಯಂತ್ರಿಸಿಕೊಂಡು, ಅಳುತ್ತಾ ದಪ್ಪನೆ‌ ರಮೇಶನ ಕಾಲಿನಡಿಯಲ್ಲಿ ಕುಳಿತುಬಿಟ್ಟನು.
'ಅಣ್ಣಾ... ಇಲ್ಲ...ಇಲ್ಲ ಈ ಹೊಲಸು ಬಾಯಿಯಿಂದ ನಿಮ್ಮನ್ನು ಅಣ್ಣಾ ಎಂದು ಕರೆಯುವ ಯೋಗ್ಯತೆಯು ನನಗಿಲ್ಲವಾಗಿದೆ. ಎಷ್ಟು ದುಡುಕಿಬಿಟ್ಟೆ ನಾನು, ಹಾಳಾದ್ದು ಈ ದುಡ್ಡು ಬಂದು ನನ್ನ ಬುದ್ದಿಯನ್ನು ಹಾಳುಗೆಡವಿದ್ದಲ್ಲದೆ, ನಿಮ್ಮನ್ನು ಕೊಂದು ಹಾಕುವ ಮಟ್ಟಕ್ಕೆ ಇಳಿದು ಬಿಟ್ಟಿತಲ್ಲ. ಈ ಪಾಪಕ್ಕೆ ಪ್ರಾಯಶ್ಚಿತ್ತ ವುಂಟೆ, ಗಂಗೆ ಯಮುನೆಗಳಲ್ಲಿ ಮುಳುಗೆದ್ದರು ತೊಳೆದು ಹೋಗುವುದೆ?  ಹೌದು ಹೋಗಬಹುದು !!! ತಿನ್ನುವ ಅನ್ನದಲ್ಲಿ ವಿಷವನ್ನು ಕಲಿಸಿಕೊಟ್ಟ ಈ ಕೈಗಳಿಗಂಟಿದ ವಿಷದ ವಾಸನೆ ಹೋಗಬಹುದು!!!!, ಇವರನ್ನು ಕೊಲ್ಲಲು ಹರಿಸಿದ ಬೆವರಿನ ವಾಸನೆ ತೊಳೆದು ಹೋಗಬಹುದು,!!! ತೊಟ್ಟ ಈ ಅಂಗಿ, ಧೂಳು ಎಲ್ಲವು ತೊಳೆದು ಹೋಗಬಹುದು, ಆದರೆ....ಆದರೆ..ಈ ಮನಸ್ಸಿನಲ್ಲಿಗಾಗಲೆ ಪಾಪದ ಪ್ರಜ್ಞೆಯ ಬೀಜವೊಂದು ಮೊಳಕೆಯೊಡೆದು ಸಸಿಯಾಗಿಬಿಟ್ಟಿದೆಯಲ್ಲ, ಅದನ್ನು ಹೇಗೆ ಕಿತ್ತೊಗೆಯುವುದು. ಸಸಿಯಿದ್ದಾಗಲೆ ಇಷ್ಟೊಂದು ಕಾಡುತ್ತಿರುವ ಈ ಪಾಪವು ನಾಳೆ ಹೆಮ್ಮರವಾಗಿ ಬೆಳೆದುಬಿಟ್ಟರೆ..!!!!! ಅಬ್ಬಬ್ಬಾ..!!! ಸಹಿಸಿಕೊಳ್ಳಲಸಾಧ್ಯ. ಅಸಾಧ್ಯ, ಅಲ್ಲಾ, ತಾಯಿಯನ್ನು ಉಳಿಸಿಕೊಳ್ಳಲು ಹೋಗಿ ಮಾತೃ ಮನದ ಒಂದು ಮುಗ್ದ ಜೀವವನ್ನು ಬಲಿ ತೆಗೆದುಕೊಂಡುಬಿಟ್ಟೆನಲ್ಲ, ಕೇಳಿದ್ದರೆ ಕೊಡುತ್ತಿದ್ದರೊ ? ಇಲ್ಲವೆಂದ ಕಾರಣಕ್ಕೆ ತಾನೆ ನಾನು ಕೊಂದದ್ದು, ಮತ್ತೀಗ ನೀನು ಕೇಳದೇನೆ ಕೊಟ್ಟುಬಿಟ್ಟಿರುವೆಯಲ್ಲ, ಏನಾಗಿ ಹೋಯಿತು ನನ್ನ ಬುದ್ದಿಗೆ, ಎಲ್ಲೊ ತನ್ನ ಕಷ್ಟದಲ್ಲಿ ತಾನು ಒದ್ದಾಡುತ್ತಿದ್ದವನನ್ನು ಸಹಾಯ ಮಾಡುವೆ ಎಂಬ ನೆಪದಲ್ಲಿ ಕರೆದುಕೊಂಡು ಬಂದು ಬಲಿಯನ್ನು ತೆಗೆದುಕೊಂಡುಬಿಟ್ಟೆನಲ್ಲ,!!!! ಈಗೇನು ಮಾಡುವುದು, ಈಗೇನು ಮಾಡುವುದು, ಹ್ಞಾಂ..!! ಹಣವನ್ನೆಲ್ಲ‌ ಅವರ ಮಗಳ ಆಪರೇಷನ್ ಗೆ ಕೊಟ್ಟು ನನ್ನ ಈ ಪಾಪವನ್ನು ಕಳೆದುಕೊಂಡು ಬಿಡಲೆ ? ಹೇಗೆ ? ಹೇಗೆ ಸಾಧ್ಯವಿಗ, ಅವರ ಮೊಬೈಲ್ ನಂಬರಾಗಲಿ, ವಿಳಾಸವಾಗಲಿ, ಕೆಲಸ ಮಾಡುತ್ತಿದ್ದ ಆಫೀಸಿನ ವಿಷಯವಾಗಲಿ ಒಂದು ಗೊತ್ತಿಲ್ಲ... ಹೋಗಲಿ,  ನಮ್ಮೂರಿನಲ್ಲಿರುವ ಎಲ್ಲ ಆಸ್ಪತ್ರೆಗಳನ್ನು ಅಲೆದಾಡಿ ಅವರ ಮಗಳನ್ನು ಹುಡುಕುವ ಪ್ರಯತ್ನವೊಂದನ್ನು ಮಾಡಲೆ, ಹೌದು ಅದು ಸರಿ ಹಾಗೆ ಮಾಡಬಹುದು, ಆದರೆ...ಅವರು ಸಿಕ್ಕಾಗ ಏನಂತ ಹೇಳಿ ಹಣವನ್ನು ಕೊಡುವುದು ನಿಮ್ಮ ಮಗನನ್ನು ಕೊಂದು ಈ ಹಣವನ್ನು ತಂದಿರುವೆ ಎಂದು ಹೇಳಲೆ, ಅಥವಾ ನನ್ನ ಕೈಯಲ್ಲಿ ನಿಮಗೆ ಕೊಡು ಎಂದು ಹೇಳಿ ಕಳುಹಿಸಿದರೆಂದು ಹೇಳಲೆ, ಆಗದು...ನನ್ನಿಂದಾಗದು ನಾನು ಹೇಗೆ ಅವರನ್ನು ಎದುರಿಸಲು ಸಾಧ್ಯ ಇಂತಹ ಘೋರ ಕೃತ್ಯವನ್ನು ಮಾಡಿ.: ರಮೇಸನ ಕಾಲಡಿಯಿಂದ ಎದ್ದು ಕಣ್ಣೀರನ್ನು ಒರೆಸಿಕೊಂಡು ಏನು ಮಾಡಬೇಕೆಂದು ಅತ್ತಿತ್ತ ಅಲೆದಾಡತೊಡಗಿದನು.
'ಇಲ್ಲ ಸಧ್ಯಕ್ಕಂತು ನನ್ನ ತಾಯಿಯ ಪರಿಸ್ಥಿತಿ ಗಂಭೀರವಾಗಿದೆ, ರಮೇಶರು ನನ್ನ ತಾಯಿಯ ಉಳಿವಿಗಾಗಿ ಹಣವನ್ನು ಬಿಟ್ಟಿದ್ದಾರೆ, ಮೊದಲು ನನ್ನ ತಾಯಿಯನ್ನು ಉಳಿಸಿಕೊಳ್ಳೊಣ,
ನಂತರದಲ್ಲಿ ಮುಂದಿನ ಕೆಲಸ‌. ತಪ್ಪಂತು ನಡೆದುಹೋಗಿಬಿಟ್ಟಿದೆ. ಹೆಣವನ್ನು ಇದೆ ಸ್ಥಿತಿಯಲ್ಲಿ ಇಲ್ಲೆ ಬಿಟ್ಟು ಹೋಗಲೆ, ಬೇಡ...ಬೇಡ ಬೆಳಿಗ್ಗೆ ಯಾರಿಗಾದರೂ ಗೊತ್ತಾಗಿ, ಪೋಲಿಸರಿಗೆ ತಿಳಿಸಿ ಅವರು ಬಂದು ಹುಡುಕಾಡಿ ಎಲ್ಲ ತಲೆ ಬುಡಕ್ಕೆ ತಂದುಬಿಟ್ಟರೆ, ಹಾಗಾಗುವುದು ಬೇಡ. ಏನು ಮಾಡುವುದು ಈಗ ಎಂದುಕೊಳ್ಳುತ್ತಿರುವಾಗಲೆ, ಎದುರಿಗೆ ಇನ್ನೂ ಸಣ್ಣಗೆ ಉರಿಯಿತ್ತಿರುವ ಚಿತೆಯನ್ನು ಕಂಡು ಒಂದು ಉಪಾಯವು ಹೊಳೆಯಿತು ಅಖಿಲನಿಗೆ.
  ರಮೇಶನ ಹೆಣವನ್ನು ಹೊತ್ತುಕೊಂಡು ಹೋಗಿ ಅದೆ ಉರಿಯುವ ಚಿತೆಯಲ್ಲಿ ಒಗೆದುಬಿಟ್ಟು, ಅಲ್ಲೆ ಪಕ್ಕದಲ್ಲಿ ಬಿಟ್ಟು ಹೋಗಿದ್ದ ಕಟ್ಟಿಗೆ ಮತ್ತು ಟೈರಗಳನ್ನು ಎತ್ತಿಕೊಂಡು ಶವದ ಮೇಲೆ ಒಗೆದು ಬೆಂಕಿಯನ್ನು ಹೆಚ್ಚಿಸಿದನು. ಮರಳಿ ದೇವಾಲಯಕ್ಕೆ ಬಂದು ಬಟ್ಟೆಗಳನ್ನು ಬದಲಾಯಿಸಿಕೊಂಡು, ಗಾಯಗೊಂಡ ಹಣೆಗೊಂದು ಕರ್ಚೀಪ್ ನ್ನು ಕಟ್ಟಿಕೊಂಡು, ಅಳಿದುಳಿದ ಸಾಮಾನುಗಳನ್ನು ತನ್ನ ಹಳೆಯ ಬಟ್ಟೆಗಳನ್ನು ರಮೇಶನ ಬ್ಯಾಗಿನಲ್ಲಿ ಹಾಕಿ, ಬೆಂಕಿಯಲ್ಲಿ ಒಗೆದು ಸಾಕ್ಷಿಗಳೆಲ್ಲವನ್ನು ನಾಶಪಡಿಸಿ, ಉರಿದು ಹೋಗುತ್ತಿದ್ದ ರಮೇಶನ ಚಿತೆಗೆ ನಮಸ್ಕರಿಸಿ, ತಾಯಿಯನ್ನು ಕಾಣಲು ಆಸ್ಪತ್ರೆಗೆ ಹೊರಡುವ ಸಲುವಾಗಿ ಮುಖ್ಯ ರಸ್ತೆಗೆ ಬಂದು ನಿಂತುಕೊಂಡನು.

ಭಾಗ ೧೪

ಮೊದಲಿಗೆ,
ನಿನ್ನನ್ನು ನಾನೆಂದು ಕರೆಯಬೇಕೆಂಬುದೆ ತಿಳಿಯದಂತಾಗಿದೆ ನನಗೆ. ಮಿತ್ರನೆನ್ನಲೆ, ಸಹೋದರನೆನ್ನಲೆ ಇಲ್ಲಾ ಈ ದೇವಾಲಯದಲ್ಲಿ ಎಲ್ಲರಿಗೂ ಮುಕ್ತಿಯನ್ನು ಕೊಡಲೆಂದೆ ನಸುನಗುತ್ತ ಕುಳಿತುಕೊಂಡ ಕಾಲ ಭೈರವನೆಂದುಕೊಳ್ಳಲೆ, ನಿಜ..ನಿಜ ನೀನು ನನ್ನ ಪಾಲಿಗೆ ಸಾಕ್ಷಾತ್ ಕಾಲ ಭೈರವನೆ.
ಬಾಳಿನ ದೋಣಿಯಲ್ಲಿ ಹುಟ್ಟಿಲ್ಲದೆ ಸುಳಿಗೆ ಸಿಕ್ಕು ಮುಳುಗುತ್ತಿದ್ದ ನನ್ನ ಹಡುಗನ್ನು ದಡವ ಸೇರಿಸಿದ ಆಪತ್ಭಾಂದವ, ಸರಿಯಾದ ಸಮಯಕ್ಕೆ ಸಿಕ್ಕು ನನ್ನೆಲ್ಲ ಕಷ್ಟದ ದಿನಗಳಿಗೆ ಪರದೆಯನ್ನು ಎಳೆದವನು ನೀನು. ನನಗಿಂತಲು ವಯಸ್ಸಿನಲ್ಲಿ ಕಡಿಮೆಯಾದರು, ನಿನ್ನ ಬುದ್ದಿ, ಸಾಮರ್ಥ್ಯ, ಶಕ್ತಿ, ಧೈರ್ಯಗಳಿಗೆ ನಾನು ಶಿರಸಾವಹಿಸಿ ನಮಿಸುತ್ತೇನೆ. ಇಂದು ನೀನು ಮಾಡಿದ ಈ ಉಪಕಾರವನ್ನು ನಾನದೇಷ್ಟು ಜನ್ಮಗಳನೆತ್ತಿ ಬಂದರು ತೀರಿಸಲಾರದಂತದ್ದು. ಸಾಯುವವರೆಗೂ ನಿನ್ನ ಹೆಸರನ್ನು ನಾನು ನನ್ನ ಕುಟುಂಬವು ನೆನಪಿಸಿಕೊಂಡೆ ಉಣ್ಣುತ್ತೇವೆ.
   ವಿಷಯ ಇದಲ್ಲವೀಗ. ವಿಷಯ ಹಣವನ್ನು ಹಂಚಿಕೊಂಡಾಗ ನಿನ್ನ ತಾಯಿಯ ಆಪರೇಷನ್ ಖರ್ಚಿಗೆ ಹಣವು ಕಡಿಮೆಯಾದದ್ದು, ಹಣವು ಕಡಿಮೆ ಬಂದಿದ್ದರಿಂದ ನಿನ್ನ ಮೊಗದಲ್ಲಿ ಸಂತಸದ ಬದಲು, ನೋವೆ ಮನೆ ಮಾಡಿಕೊಂಡಿದ್ದನ್ನು ನಾನು ಗಮನಿಸಿದೆ. ಅದನ್ನು ನೀನು ನನ್ನೆದುರು ನೀನು ತೋರ್ಪಡಿಸದೆ ಹೋದೆ, ಸ್ವಲ್ಪವು ನೊಂದುಕೊಳ್ಳದೆ ನನ್ನ ಆರೋಗ್ಯ, ಯೋಗಯೋಕ್ಷೇಮದ ಬಗ್ಗೆ ನೀನು ತೋರಿಸುತ್ತಿರುವ ಕಾಳಜಿಯನ್ನು ನೋಡಿ ನನ್ನ ಮನಸ್ಸು ತುಂಬಿ ಬಂದಿತು. ಹತ್ತು ಹೋರಿಗಳನ್ನು ಹೇರುವುದಕ್ಕಿಂತ ಒಂದು ಮುತ್ತನ್ನು ಹೇರು ಎಂದು ಹಿರಿಯರು ಹೇಳಿರುವ ಮಾತುಗಳು ಅದೇಷ್ಟು ಸತ್ಯವೆಂಬುದನ್ನು ನಿನ್ನ ನಡೆ ನುಡಿಗಳಿಂದ ನೀನು ನಿರೂಪಿಸಿಬಿಟ್ಟೆ.
  ಮಿತ್ರ, ನೀನು ತಿಂಡಿಯನ್ನು ತರಲು ಹೋದಾಗ, ಇವೆಲ್ಲ ವಿಷಯಗಳು ನನ್ನನ್ನು ಕಾಡಿ ನನ್ನ ಮನಸ್ಸಿಗೆ ಯಾಕೊ ಸಮಾಧಾನವೇನಿಸಲಿಲ್ಲ, ನಿನ್ನ ಬ್ಯಾಗನ್ನು ತೆಗೆದುಕೊಂಡು ಅದರಲ್ಲಿ ನನ್ನದೊಂದು ಹತ್ತು ಸಾವಿರ ಹಣವನ್ನು ನಿನ್ನ ಭಾಗದಲ್ಲಿ ಸೇರಿಸಿದೆ, ಮತ್ತೆರಡು ನಿಮಿಷದ ನಂತರ ಏನೊ ಹೇಳಿಕೊಳ್ಳಲಾಗದಂತಹ ಸಂಕಟ, ಮತ್ತಿಪ್ಪತ್ತು ಸಾವಿರ ಹಣವನ್ನು ನಿನ್ನ ಭಾಗಕ್ಕೆ ಸೇರಿಸಿದೆ, ಕರಳು ತಡೆದುಕೊಳ್ಳಲಾಗಲಿಲ್ಲ, ಕೊನೆಗೆ ನನ್ನೆಲ್ಲ ಪಾಲಿನ ಹಣವನ್ನೆಲ್ಲ ನಿನ್ನ ಭಾಗಕ್ಕೆ ಸೇರಿಸುತ್ತಿರುವೆ. ಒಪ್ಪಿಸಿಕೊಂಡುಬಿಡು, ಈ ಹಣವೆನ್ನೆಲ್ಲಾ ನೋಡಿ ನೀನು ಭಾವಪರವಶವಾಗಿ ನನ್ನನ್ನು ಹುಡುಕಿಕೊಂಡು ಬಂದು ಹಣವನ್ನು ಕೊಡುವುದು ಬೇಡ. ಅದು ಅಸಾಧ್ಯದ ಮಾತು ಕೂಡಾ. ಹಾಗೆಂದೆ ನಿನಗೆ ಹೇಳದೆ ಹಣವನ್ನೆಲ್ಲ ನಿನ್ನ ಬ್ಯಾಗಿನಲ್ಲಿ ಇಡುತ್ತಿರುವೆ. ಎದುರಿಗೆ ಮಾತನಾಡಿ ಕೊಡೋಣವೆಂದರೆ ನೀನೆನಾದರು ಪಡೆದುಕೊಳ್ಳುವೇಯ್ಯಾ..? ಇಲ್ಲ ಅಸಾಧ್ಯದ ಮಾತು. ಯಾಕೆಂದರೆ ನಿನ್ನೊಳಗೆ ಅಂತಹದೊಂದು ನಿಷ್ಟೆಯಿದೆ.
ಯಾಕೊ ಏನೊ ಮನಸ್ಸು ಸಹೋದರ ಎಂದು ಕರೆಯಲು ಹಪಹಪಿಸುತ್ತಿದೆ, ಕರೆಯುತ್ತೇನೆ ತಪ್ಪೇಣಿಸದಿರು. ಹುಟ್ಟುವ ಮೊದಲೆ ತಾಯಿಯನ್ನು ಕಳೆದುಕೊಂಡ ಬೆಳೆದವನು ನಾನು. ನನ್ನ ತಂದೆ ನನ್ನ ಸುಖಕ್ಕಾಗಿ ತಮ್ಮ ಸುಖವನ್ನು ತ್ಯಾಗ ಮಾಡಿಕೊಂಡು ನನ್ನನ್ನು ಬೆಳೆಸಿದರು. ತಾಯಿಯ ಕೊರತೆ ಕಾಡದಂತೆ, ಹ್ಹ...ಹ್ಹ....ಹ್ಹ... ಕಾಡದಿರುವುದೆ ...?ನೀನೆ ಹೇಳು.? ಆಡಲಿಕ್ಕೆ ಹೋದಾಗ ಎಡವಿ ಬಿದ್ದು ಆದ ಗಾಯಕ್ಕೆ ಮದ್ದನ್ನು ಹಚ್ಚಲು, ದೀಪಾವಳಿ ಹಬ್ಬಕ್ಕೆ ಎಣ್ಣೆ ಸ್ನಾನ ಮಾಡಿಸಿ, ನೀಟಾಗಿ ಹಣೆಯಲ್ಲಿ ಕ್ರಾಫ್ ಒಂದನ್ನು ಎಳೆದು, ಹೊಸ ಹೊಸ ಬಟ್ಟೆಗಳನ್ನು ಹಾಕಿ, ದೇವರ ಮುಂದೆ ಕೈ ಮುಗಿದು ನಿಲ್ಲಿಸಿಕೊಂಡು ಮಂಗಳಾರತಿ ಕಲಿಸಿಕೊಡಲು, ನಾನು ಬದುಕಿನಲ್ಲಿ ಸೋತಾಗ, ಮಡಿಲಲ್ಲಿ ಮಲಗಿಸಿಕೊಂಡು ಬದುಕಿ ಸಾಧಿಸುವುದಕ್ಕೆ ಸಾವಿರಾರು ದಾರಿಗಳಿವೆ ಕಂದಾ, ನಿನ್ನಿಂದಾಗದೇನಿದೆ ಈ ಜಗದಲೆಂದು ಹುರಿದುಂಬಿಸಲು, ತನ್ನ ಮಗನಿಗೆ ತಕ್ಕಂತ ಹುಡುಗಿಯನ್ನು ಹುಡುಕಿ ನಾಲ್ಕು ಅಕ್ಷತೆ ಕಾಳುಗಳನ್ನು ತಲೆಯ ಮೇಲೆ ಹಾಕಿ, ಸಂಸಾರದ ಏಳು ಬೀಳುಗಳನ್ನು ತೂಗಿಸಿಕೊಂಡು ಹೋಗುವುದನ್ನು ಕಲಿಸಲಿಕ್ಕಾದರು ಅಮ್ಮಾ ಬೇಕಲ್ಲವೆ ಸಹೋದರಾ.
   ನೋಡು ನನಗೇನೊ ಒಬ್ಬಳೆ ಮಗಳು ನಿಜ. ಅವಳ ಮೇಲೆ ಬೆಟ್ಟದಷ್ಟು ಪ್ರೀತಿಯಿದೆ, ನನ್ನಾಕೆ, ಮಗಳ ಮೇಲೆ ಜೀವವನ್ನೆ ಇಟ್ಟುಕೊಂಡಿದ್ದಾಳೆ. ಅವಳು ಸತ್ತರೆ....?????,
ಸತ್ತಾಳು... ಅವಳು ಸತ್ತರೆ ಸತ್ತಾಳು ನಾಲ್ಕು ದಿನದ ದುಃಖವಷ್ಟೆ, ನನ್ನಾಕೆ ನನ್ನನ್ನು ಬೈಯ್ಯುವುದು, ಮಗಳನ್ನು ಉಳಿಸಿಕೊಳ್ಳಲಾಗದ ಕೈಲಾಗದ ಗಂಡ, ತಂದೆ ಎಂದೆಲ್ಲ ನನ್ನನ್ನು ಜರಿಯಬಹುದು, ನನ್ನೊಂದಿಗೆ ಮಾತನಾಡುವುದನ್ನು ಬಿಡಬಹುದು, ಅವಳನ್ನು ಸಂತೈಸಿ ಮತ್ತೆ ಸರಿ ದಾರಿಎ ತರಲು ತಿಂಗಳು ವರುಷಗಳೆ ಕಳೆದು ಹೋದಾವು, ಹೋಗಲಿ ಬಿಡು.‌ ಇಬ್ಬರ ಮನಸ್ಸುಗಳು ತಿಳಿಯಾಗಿ, ಮತ್ತೆ ನಾನು ನನ್ನಾಕೆಯ ಮಿಲನದ ನಂತರ ಮತ್ತೊಂದು ಜ್ಯೋತಿಯನ್ನು ಬೆಳಗಿಸಿಕೊಳ್ಳಬಲ್ಲೆವು ಮಿತ್ರ. ಆದರೆ ತಾಯಿ..? ತಾಯಿಯನ್ನು ಒಮ್ಮೆ ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವೇನೊ ಸಹೋದರ. ಇಂತಹ ಎಷ್ಟೊ ಲಕ್ಷ ಲಕ್ಷಗಳ ತುಂಬಿದ ಬ್ಯಾಗನ್ನು ತುಂಬಿಕೊಟ್ಟರು ತಾಯಿ ಎಂಬ ದೈವವನ್ನು ಮರಳಿ ತರಲಾದಿತೆ. ಇಲ್ಲವಲ್ಲ.. ಆಪರೇಷನ್ ಮಾಡಿದರೆ ಉಳಿಯಬಹುದು ಉಳಿಯದಲೆ ಇರಬಹುದು, ಆದರೂ ತಾಯಿಯನ್ನು ಉಳಿಸಿಕೊಳ್ಳಲು ನೀನು ನಡೆಸಿರುವ ಹೋರಾಟಕ್ಕೆ ಇದು ನನ್ನ ಚಿಕ್ಕ ಕಾಣಿಕೆ. ಈ ಹಣವನ್ನು ತೆಗೆದುಕೊಂಡು ತಾಯಿಯನ್ನು ಗುಣಪಡಿಸಿಕೊ, ನಾನು ಆ ದೇವರಲ್ಲಿ ಪ್ರಾರ್ಥಿಸುವೆ ನಿನ್ನ ಅಲ್ಲ ಅಲ್ಲ ನಮ್ಮಿಬ್ಬರ ತಾಯಿ ಬೇಗ ಗುಣಮುಖವಾಗಲೆಂದು. ಋಣವಿದ್ದರೆ, ತಾಯಿಯು ಆರೋಗ್ಯವಾಗಿ ಮನೆಯನ್ನು ಸೇರಿದರೆ ನಾನೆ ಆವಾಗ ಕುಟುಂಬ ಸಮೇತನಾಗಿ ಬಂದು ನಿನ್ನ ಮನೆಯಲ್ಲಿ ತಾಯಿಯ ಕೈಯಿಂದ ಒಂದೆರಡು ತುತ್ತನ್ನು ಉಂಡು ಹೋಗುತ್ತೇನೆ. ಹೇಗಿದ್ದರು ನೀನು ಕೊಟ್ಟಿರುವ ನಂ ನನ್ನ ಹತ್ತಿರ ಭದ್ರವಾಗಿಯೆ ಇದೆ. ಈಗ ನಾನು ಕಾಯುತ್ತಿರುವುದು ನೀನು ತರುವ ಅಮೃತದಂತಹ ತಿಂಡಿಯನ್ನು. ಅದನ್ನು ತಿಂದು‌ ಹೊರಟು ಹೋಗಿಬಿಡುವೆ ಸಹೋದರ. ಪುನರ್ ಜನ್ಮವಂತ ಒಂದಿದ್ದರೆ ಒಂದೆ ತಾಯಿಯ ಹೊಟ್ಟೆಯಲ್ಲಿ ಅಣ್ಣತಮ್ಮಂದಿರಾಗಿ ಹುಟ್ಟುವ. ಇಂತಿ ನಿನ್ನ ಶ್ರೇಯೊಭಿಲಾಷಿ.
ರಮೇಶ

ಭಾಗ ೧೩

ರಮೇಶನ ಭುಜವನ್ನು ಯಾರೊ ಹಿಡಿದು ಅಲುಗಾಡಿಸಿದಂತಾಯಿತು. ತಟ್ಟನೆ ಕಣ್ಬಿಟ್ಟು ನೋಡಿದನು ಹೆದರಿಕೆಯಿಂದ, ಎದುರಿಗೆ ಅಖಿಲನು ನಿಂತಿದ್ದನು ನಗುತ್ತಾ, ಕೈಯಲ್ಲಿದ್ದ ನೀರಿನ ಬಾಟಲನ್ನು ಕೊಟ್ಟು ಕೈ ತೊಳೆದುಕೊಳ್ಳಲು ಹೇಳಿದನು, ಬ್ಯಾಗುಗಳನ್ನು ಸೈಡಲ್ಲಿಟ್ಟು, ಬಾಟಲಿಯನ್ನು ತೆಗೆದುಕೊಂಡು ಕೈಯನ್ನು ತೊಳೆದುಕೊಂಡು, ಅಖಿಲನ ಕೈಯಲ್ಲಿದ್ದ ಪೊಟ್ಟಣವನ್ನು ಪಡೆದುಕೊಂಡು ಗೋಡೆಗೆ ಆತುಕೊಂಡು ಕುಳಿತು ತಿಂಡಿಯ ಪೊಟ್ಟಣವನ್ನು ಬಿಚ್ಚಿದನು, ಎಗ್ಗರೈಸ್, ಅನ್ನದ ವಾಸನೆ ಮೂಗಿಗೆ ಬಡೆದದ್ದೆ ತಡ ಗಬಗಬನೆ ನಾಕೈದು ತುತ್ತನ್ನು ಉಂಡು ' ಯಾಕೊ ಇದರ ರುಚಿ ಬದಲಾಗಿದೆಯಲ್ಲ.?'
' ಬೆಳಿಗ್ಗೆಯಿಂದ ಏನನ್ನು ತಿಂದಿಲ್ಲವಲ್ಲ, ಬಾಯಿ ರುಚಿಯನ್ನು ತಿಳಿಯಲು ಟೈಂ ಹಿಡಿಯುತ್ತದೆ, ಬೇಗ ಬೇಗ ಊಟಮಾಡಿ ಹೊರಡುವ'
'ಮತ್ತೆ ನೀನು.?'
'ನಂದಾಯಿತು, ಹೊಟ್ಟೆ ನನ್ನದು ಬಹಳಷ್ಟು ಹಸಿದುಬಿಟ್ಟಿತು, ನಿಮಗೆ ಪಾರ್ಸಲ್ ಕಟ್ಟುವ ಸಮಯದಲ್ಲೆ, ಅಲ್ಲೆ ನಾನು ಉಂಡು ಬಂದುಬಿಟ್ಟೆ'
' ಹೌದಾ. ಸರಿ ಸರಿ '
ಎನ್ನುತ್ತಾ ಎರಡೆ ತುತ್ತಿನಲ್ಲಿ ಎಲ್ಲವನ್ನು ಮುಗಿಸಿ. ನೀರನ್ನು ಕುಡಿದು ಕೈಯನ್ನು ತೊಳೆದುಕೊಂಡು ಅಖಿಲನ ಮುಖವನ್ನು ನೋಡಿದನು ರಮೇಶನು. ಅವನ ಮೊಗದಲ್ಲಿ ಒಂದು ಸಣ್ಣ ನಗುವು ಸುಳಿದಾಡುತ್ತಿತ್ತು, ಆ ಕ್ಷಣ ಯಾಕೊ ಎದೆ ಉರಿಯತೊಡಗಿತು, ಗಂಟಲು ಕಟ್ಟಿಕೊಂಡಿತು, ಹೊಟ್ಟೆಯಲ್ಲಿ ಬೆಂಕಿಯಿಟ್ಟಂತಹ ಅನುಭವ, ಹೊಟ್ಟೆ ಮತ್ತು ಗಂಟಲನ್ನು ಹಿಡಿದುಕೊಂಡು ನೆಲದ ಮೇಲೆ‌ ಬಿದ್ದು ಹೊರಳಾಡಲಾರಂಬಿಸಿದನು ರಮೇಶನು. ಆ ದೃಶ್ಯವನ್ನು ನೋಡುತ್ತಾ, ಅಖಿಲನು ಅಂಗಡಿಗೆ ಹೋದಾಗಿನ ಘಟನೆಯನ್ನು ನೆನಪಿಸಿಕೊಂಡನು.

ಹೆದರುತ್ತಲೆ ಅಂಗಡಿಯೊಳಗೆ ಕಾಲಿಟ್ಟನು ಅಖಿಲನು. ಅತ್ತಿತ್ತ ನಾಕೈದು ಜನ ತಿಂಡಿಯನ್ನು ತಿನ್ನುತ್ತಾ, ಇವತ್ತು ಊರಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡುತ್ತಾ ಕುಳಿತುಕೊಂಡಿದ್ದರು
'ಎಷ್ಟು ಚಂದ ನಡದಿತ್ರಿ ಮೆರವಣಿಗೆ, ಯಾರೊ ಊರಿನ ಸುಖಾನ ಹಾಳ ಮಾಡೊಕಂತಂದ ಈ ರೀತಿ ಮಾಡ್ಯಾರ, ಅವರ ಉದ್ಧಾರ ಆಗೊಲ್ರೀ ಈ ಜನ್ಮದಾಗ, ಸಾಕಷ್ಟ ಮಂದಿ ಪಾಪ ತಟ್ಟತ್ತ ಅವ್ರಿಗೆ ನೋಡಿರಂತ'
ತಲೆಗೊಬ್ಬರು ಮಾತನಾಡುತ್ತಿದ್ದನ್ನು ಕೇಳಿ ಬೆವರಿಕೊಂಡ ಅಖಿಲನು ನೇರ ಮಾಲೀಕನ ಹತ್ತಿರ ಹೋಗಿ ಪಾರ್ಸಲ್ ಹೇಳಿ ತಾನು ಅಲ್ಲಿಯೆ ಕುಳಿತು ತಿಂಡಿಯನ್ನು ತರಿಸಿಕೊಂಡು ತಿನ್ನುತ್ತಾ
' ಅಮ್ಮಾ... ನಿನ್ನನ್ನು ಉಳಿಸಿಕೊಳ್ಳುವ ಸಲುವಾಗಿ ಎಷ್ಟೆಲ್ಲಾ ಪ್ರಯತ್ನಪಟ್ಟೆ ಆದರೂ ಆಗುತ್ತಿಲ್ಲ ಕೈಗೆ ಸಿಕ್ಕಿದ ಹಣವು ನಿನ್ನ ಆಪರೇಷನ್ ಮಾಡಿಸಲು ಆಗುವುದಿಲ್ಲ, ಪೂರ್ತಿ ಹಣವನ್ನು ನಾನೊಬ್ಬನೆ ಕದ್ದಿದ್ದರೆ..?!!!!, ಏನು ಮಾಡುವುದಿಗ' ಎಂದುಕೊಳ್ಳುತ್ತಿರುವಾಗಲೆ, ಅಂಗಡಿಯಲ್ಲಿಟ್ಟಿದ್ದ ಟಿವಿಯಲ್ಲಿ ಹಿಟ್ ನ ಒಂದು ಜಾಹಿರಾತು ಇವನನ್ನು ತನ್ನತ್ತ ಸೆಳೆಯಿತು.
'ಕೊಂದು ಬಿಡಿ ಒಂದೆ ಒಂದು ಜಿರಲೆಯು ಉಳಿಯದ ಹಾಗೆ ಒಂದೆ ಸ್ಪ್ರೇನಲ್ಲಿ ' ಆ ಜಾಹಿರಾತಿನಿಂದ ಕ್ಷಣಕಾಲ ವಿಚಲಿತನಾದಂತಾದ‌ ಅಖಿಲನು ' ಕೊಂದುಬಿಟ್ಟರೆ....!!!!,
ಎನ್ನುತ್ತಾ ಪ್ಯಾಂಟಿನ ಜೇಬಿನಲ್ಲಿಟ್ಟಿದ್ದ ವಿಷವನ್ನು ನೆನಪಿಸಿಕೊಳ್ಳುತ್ತಾ,
' ಕೊಂದೆಬಿಟ್ಟರೆ...?,
' ಹೌದು ಕೊಂದೆಬಿಟ್ಟರೆ ಎಲ್ಲ ಹಣವು ನನ್ನದಾಗುವುದಾಗ' 'ಛೆ...ಛೆ...ಹಾಗೆಲ್ಲ  ನಂಬಿದವರ ಬೆನ್ನಿಗೆ ಚೂರಿ ಹಾಕುವುದು ತಪ್ಪಾಗುವುದಿಲ್ಲವೆ..?'
' ಅದೇನು ನ್ಯಾಯದಿಂದ ಸಂಪಾದಿಸಿದ ಹಣವಾ...? ತಪ್ಪು ಒಪ್ಪುಗಳನ್ನು ಪರಾಮರ್ಶಿಸಲು.'
' ಅದು ಸರಿ, ನಾನೆ ನೇರವಾಗಿ ಕೇಳಿ ಬಿಡುತ್ತೇನೆ, ನನ್ನ ತಾಯಿ ಚಿಕಿತ್ಸೆಗೆ ಇಷ್ಟೊಂದು ಹಣ ಸಾಲುವುದಿಲ್ಲ, ಎಲ್ಲ ಹಣವನ್ನು ನನಗೆ ಕೊಟ್ಟುಬಿಡು ಎಂದು.'
'ಆಹಾ....ಹಾ... ಧರ್ಮರಾಯ ಕೇಳಿದ ತಕ್ಷಣವೆ ಕೊಟ್ಟು ಕಳುಹಿಸಲು ಅವನೇನು ದಾನಶೂರ ಕರ್ಣನೆಂದುಕೊಂಡೆಯಾ...? ಅವನಿಗೂ ನಿನಗೇಷ್ಟು ಹಣದ ಅವಶ್ಯಕತೆ ಇದೆಯೊ... ಅಷ್ಟೇ ಹಣದ ಅವಶ್ಯಕತೆ ಅವನಿಗೂ ಇದೆ'
' ನಿಜ ಹಾಗಂತ ಕೊಂದು ಬಿಡುವುದಾ,'
'ಮತ್ತೀನ್ನೇನು ಮಾಡುವೆ, ಉಳಿದ ಹಣಕ್ಕಾಗಿ ಯಾರ ಬಳಿ ಹೋಗಿ ಕೈ ಚಾಚುವೆ, ಈಗಾಗಲೆ ಸಮಯವಾಗಿಬಿಟ್ಟಿದೆ, ಇಂತಹ ಅವಕಾಶ ಪದೆ ಪದೆ ಮನೆ ಬಾಗಿಲನ್ನು ಬಡಿದುಕೊಂಡು ಬರುವುದಿಲ್ಲ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡುಬಿಡು'
, 'ಹೌದೆ..?'
' ಹ್ಞೂಂ..'
.' ಹೇಗೆ,?'
'ನಿನ್ನೆ ಔಷಧಿ ಅಂಗಡಿಯಲ್ಲಿ ಅಕಸ್ಮಾತ್ ಪೋಲಿಸ್ ನವರ ಕೈಗೆ ಸಿಕ್ಕು ಹಾಕಿಕೊಂಡರೆ ಜೀವಂತವಾಗಿರಬಾರದೆಂದು ವಿಷದ ‌ಬಾಟಲಿಯನ್ನು ತಂದಿದ್ದಿಯಲ್ಲ ಅದನ್ನೆ ಅವನಿಗೆ ತಿಂಡಿಯಲ್ಲಿ ಕಲಿಸಿ ತಿನ್ನಿಸುಬಿಡು.'
' ಹ್ಞಾಂ...!!!, ಯಾರಿಗಾದರೂ ಗೊತ್ತಾದರೆ,'
'ಹುಚ್ಚಪ್ಪ ಯಾರಿಗೆ ತಾನೆ ಗೊತ್ತಾಗುತ್ತದೆ. ಒಬ್ಬರಿಗೊಬ್ಬರಿಗೂ ಮನೆಯ ಪರಿಚಯವಿಲ್ಲ ಮತ್ತು ಅವನ ಸ್ನೇಹಿತರು ಮನೆ ಮಂದಿಗಾಗಲಿ, ನಿನ್ನ ಸ್ನೇಹಿತರು ಕುಟುಂಬದವರಿಗಾಗಲಿ ನಿಮ್ಮಿಬ್ಬರ ಪರಸ್ಪರ ಪರಿಚಯವೆ ಇಲ್ಲ. ಹೀಗಿರುವಾಗ ಇಂತಹ ಸುವರ್ಣಾವಕಾಶವನ್ನು ಏಕೆ ಕಳೆದುಕೊಳ್ಳುವೆ..?'
' ಮತ್ತೆ ಅವನ ಹೆಂಡತಿ ಮಕ್ಕಳ ಗತಿ.'
' ದಿನ ಸಾಯುವವರಿಗೆ ಅಳುವವರು ಯಾರ್ರೀ.., ಅವನ ಕುಟುಂಬದ ಚಿಂತೆ ನಿನಗೆ ಬೇಡ ಮೊದಲು ನಿನ್ನ ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯನ್ನು ಉಳಿಸಿಕೊಳ್ಳು, ದಿನವು ಹಿಂಡಿ ಹಿಂಡಿ ಸತಾಯಿಸುವ ಆ ರೋಗದಿಂದ ನಿನ್ನ ತಾಯಿಗೆ ಮುಕ್ತಿಯನ್ನು ನೀಡು.'
' ಅವನಿಗೆ ಮಂಪರು ಬರಿಸಿ ದುಡ್ಡನ್ನು ದೋಚಿದರೆ,' 'ಎಚ್ಚರವಾದ ತಕ್ಷಣವೆ, ನನಗೆ ದಕ್ಕಲಾರದ್ದು ನಿನಗೂ ದಕ್ಕಬಾರದೆಂದು ಪೋಲಿಸ್ ಸ್ಟೇಶನ್ ಗೆ ಹೋಗಿ ನಿನ್ನ ಮುಖ ಚಹರೆ ಹಾಗೂ ನಿನ್ನ ತಾಯಿಯ ಆಸ್ಪತ್ರೆಯ ವಿಷಯವನ್ನು ತಿಳಿಸಿಬಿಟ್ಟರೆ ಅಷ್ಟೇ ನಿನ್ನ ಕಥೆ, ನೀನು ಜೈಲು ನಿನ್ನನು ಹೆತ್ತ ತಪ್ಪಿಗೆ ತಾಯಿ ಮಸಣದ ಪಾಲು, ಮರೆತುಬಿಟ್ಟಿಯಾ.. ಹೆತ್ತ ತಾಯಿಗಾಗಿ ಏನಾದರು ಮಾಡಲು ಸಿದ್ದವೆಂಬುದನ್ನು.' 'ಇಲ್ಲ...ಇಲ್ಲ ಮರೆತಿಲ್ಲ, ಆದರೆ ಅವನನ್ನು ಕೊಂದು ನಾ ಹೇಗೆ ನೆಮ್ಮದಿಯಿಂದ ಇರಲಿ'
'ಅದು ನಿನ್ನ ತಾಯಿ ಬದುಕುಳಿದ ನಂತರ ಚಿಂತಿಸುವ ವಿಷಯ. ಹ್ಞೂಂ ಹೊರಡು ತಡಮಾಡಬೇಡ, ಕೈಗೆ ಸಿಕ್ಕ ಹಕ್ಕಿ ಹಾರಿಹೋಗುವ ಮುನ್ನ ಕತ್ತರಿಸಿಬಿಡು ಅದರ ಕುತ್ತಿಗೆಯನ್ನು, ಪಾಪ ಪುಣ್ಯಗಳ ಲೆಕ್ಕ ಈ ಹೊತ್ತಿನಲ್ಲಿ ತೂಗಿ ನೋಡುವುದಲ್ಲ ಹ್ಞೂಂ ನಡೆ, ಎದ್ದೇಳು' ಅಖಿಲನ ದುರಾಸೆಯ ಮನಸ್ಸು ಹಣಕ್ಕಾಗಿ ಹುಚ್ಚನನ್ನಾಗಿಸಿಬಿಟ್ಟಿತು, ಹೌದು ಇದೆ ಸರಿಯಾದ ನಿರ್ಣಯ. ಅವನ‌ ಕಣ್ಣಲ್ಲಿಗ ಕ್ರೂರತೆ ತುಂಬಿಕೊಂಡುಬಿಟ್ಟಿತು, ಅನ್ನವನ್ನು ಪೂರ್ತಿಯಾಗಿ ಉಣ್ಣದೆ, ಅರ್ಧದಲ್ಲೆ ಕೈಯನ್ನು ತೊಳೆದುಕೊಂಡು, ಕೊಟ್ಟ ಪಾರ್ಸಲ್ ನ್ನು ತೆಗೆದುಕೊಂಡು ಹಣವನ್ನು ಕೊಟ್ಟು ದಾರಿಯ ಮದ್ಯದಲ್ಲಿ ತಿನ್ನುವ ಅನ್ನಕ್ಕೆ ವಿಷವನ್ನು ಬೇರಸಿ ನಗುನಗುತ್ತಲೆ ರಮೇಶನಿಗೆ
ಉಣ್ಣಲಿಕ್ಕಿದ್ದನು.
ಕಣ್ಣುಗಳೆಲ್ಲ ಕೆಂಪಾಗಿ ರಕ್ತ ಕಾರುವ ಸ್ಥಿತಿಯನ್ನು ತಲುಪಿ, ವಿಲವಿಲನೆ ಒದ್ದಾಡತೊಡಗಿದನು ರಮೇಶನು ಒಂದೆರಡು ಸಾರಿ‌ ಅಖಿಲನ ಕಡೆಗೆ ನೋಡಿ ಯಮಯಾತನೆಯ ನೋವಿನಲ್ಲೂ ಮುಗುಳು ನಗುತ್ತಾ, ಕೊನೆಯುಸಿರನ್ನು ಬಿಟ್ಟುಬಿಟ್ಟನು. ಅಖಿಲನು ತಡಮಾಡದೆ ರಮೇಶನ ಬ್ಯಾಗನ್ನು ಎಳೆದುಕೊಂಡು ಜಿಪ್ಸನ್ನು ಎಳೆದು ನೋಡಿ ಗಾಬರಿಯಾಗಿಬಿಟ್ಟನು. ಬ್ಯಾಗಿನೊಳಗಿದ್ದ ಹಣವೆಲ್ಲ ಖಾಲಿ.. ಒಂದು ನೋಟು ಇಲ್ಲ, ನೆತ್ತಿಗೇರಿದ್ದ ಹಣದ ಹುಚ್ಚು ಝರ್ರನೆ ಕೆಳಗಿಳಿದು ಬಿಟ್ಟಿತು ಅಖಿಲನಿಗೆ, ' ನನ್ನ ಹಣ ?' ಎಂದುಕೊಳ್ಳುತ್ತಲೆ, ತನ್ನ ಬ್ಯಾಗನ್ನು ಎಳೆದು ಜಿಪ್ಸನ್ನು ತೆಗೆದು ನೋಡಿದಾಗ ಸಿಡಿಲು ಬಡಿದು ಸುಟ್ಟು ನಿಂತ ಒಂಟಿ ಮರದ ಹಾಗೆ ಸ್ತಂಬ್ದಭೂತವಾಗಿ ನಿಂತುಬಿಟ್ಟನು. ಬ್ಯಾಗಿನ ತುಂಬೆಲ್ಲಾ ಹಣವಿತ್ತು, ಆ ಹಣದ ಮೇಲೊಂದು ಪತ್ರವೊಂದಿತ್ತು. ಅದನ್ನು ತೆಗೆದುಕೊಂಡು ಕೆಳಗೆ ದೇವಾಲಯದ ಕಂಬಕ್ಕೆ ಆನಿಸಿ ಕುಳಿತುಕೊಂಡು, ಚೀಟಿಯನ್ನು ಬಿಚ್ಚಿ ದೇವಾಲಯದ ದೀಪದ ಬೆಳಕಿನಲ್ಲಿ ಒಂದೊಂದೆ ಅಕ್ಷರಗಳನ್ನು ಓದುತ್ತಾ ಹೋದಂತೆ ಕೈ ಕಾಲುಗಳೆಲ್ಲ ನಡುಗಿ, ತನ್ನ ತಲೆಯನ್ನು ತಾನೆ ಜಜ್ಜಿಕೊಳ್ಳುವ ಹಾಗಾಗಿಬಿಟ್ಟಿತು ಅಖಿಲನಿಗೆ.

ಭಾಗ ೧೧

ಬೌ..ಬೌ..ಬೌ..ಎಂದು ನಾಯಿ ಬೊಗಳುವ ಶಬ್ದಕ್ಕೆ ಬೆಚ್ಚಿಬಿದ್ದು ಕಣ್ಬಿಟ್ಟ ರಮೇಶನು ಮಾತನಾಡಲು ಬಾಯಿಯನ್ನು ತೆರೆಯಲು ಹೋದಾಗ ಅಖಿಲನು ತಟ್ಟನೆ ಅವನ ಬಾಯಿಯನ್ನು ಮುಚ್ಚಿಬಿಟ್ಟು ಶ್....ಎಂದು ಸನ್ನೆಯನ್ನು ಮಾಡಿದನು. ಹೊರಗಡೆ ಇದ್ದ ನಾಯಿ ಒಂದೆ ಸಮನೆ ಬೊಗಳುತ್ತಲೆ ಇತ್ತು, ಆಗ ಕೇಳಿ ಬಂದಿತ್ತು ಡಬ್ಬಿಯ ಮೂಲೆಯೊಂದರಲ್ಲಿ ಇನ್ನು ಕಣ್ತೆರೆಯದ ಮೂರ್ನಾಕು ಮರಿಗಳು ಕುಂಯ್ಯಂ...ಕುಂಯ್ಯಂ ಎಂದು ಕುಂಯ್ಯಗುಡುತ್ತಲಿದ್ದವು. ' ಓಹೊ ಈ ಮರಿಗಳಿಗಾಗಿ ಹೊರಗಡೆ ತಾಯಿ ನಾಯಿ ಬೊಗಳುತ್ತಿದೆ, ಅಯ್ಯೊ ಶಿವ್ನೆ ಇದೆಂತಹ ಪಾಡಾಯ್ತು ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗಾಯ್ತಲ್ಲ, ನಾಯಿ ಬೊಗಳುವುದನ್ನು ಕೇಳಿ ಯಾರಾದರು ಬಂದ ಬಿಟ್ಟರೆ,' ಆ ವಿಷಯವು ನೆನಪಾಗುತ್ತಿದ್ದಂತೆಯೆ ಮೈಗೆಲ್ಲ ಪೆಟ್ರೋಲ್ ಹಾಕಿ ಸುಟ್ಟಂತಹ ಅನುಭವವಾಯಿತು ರಮೇಶನಿಗೆ,
'ಈಗೇನು ಮಾಡುವುದು' ಭಯದಿಂದ ಕೇಳಿದನು ರಮೇಶ ಅಖಿಲನಿಗೆ, 'ನನಗೂ ಗೊತ್ತಾಗುತ್ತಿಲ್ಲ ಸರ್, ಏನ್ಮಾಡಬೇಕೆಂಬುದು, ಈಗಾಗಲೆ ಅರ್ಧಗಂಟೆ ಮೇಲಾಯಿತು ಅದು ಬೊಗಳುವುದಕ್ಕೆ ನಿಂತು.'
'ಇದರ ಶಬ್ದ ಕೇಳಿ ಯಾರಾದರು ಬಂದು ಬಿಟ್ಟರೆ' ಕೈ ಕಾಲುಗಳ ನಡುಕವನ್ನು ತಡೆಯುತ್ತಾ ಕೇಳಿದನ ರಮೇಶನು.
'ಅದೆ ಭಯ ನನಗೂ ಇರುವುದು ಸರ್, ಯಾರಾದರು ಬಂದು ಬಾಗಿಲ ತೆಗೆದರೆ ನಾವಿಬ್ಬರು ಸೀದಾ ಹೋಗುವುದು ಮಾವನ ಮನೆಗೆನೆ, ಕೆಲಸವೇನೊ, ಹೂವಿನಂತಾಯಿತು ಆದರೆ ಹೊರಗೆ ಹೊರಡುವುದೆ ಅಸಾಧ್ಯವೆಂದಿನಿಸಿಬಿಟ್ಟಿದೆ ಈಗ' ಹತಾಶೆಯ ಧ್ವನಿಯಲ್ಲಿ ಮಾತನಾಡಿದನು ಅಖಿಲನು. ರಮೇಶನು ಕೈ ಗಡಿಯಾರವನ್ನು ನೋಡಿಕೊಂಡನು ಸಮಯ ಆಗಲೆ ಸಂಜೆ ಐದು ಇಪ್ಪತ್ತಾಗಿತ್ತು, ' ಏನು ಬೆಳಗ್ಗೆಯಿಂದ ಇಲ್ಲೆ ಇದ್ದೀವಾ..!!!!?' ಇಷ್ಟಗಲ ಬಾಯಿ ತೆಗೆದು ಕೇಳಿದನು.
ಹೌದೆನ್ನುವಂತೆ ತಲೆಯಾಡಿಸುತ್ತಾ' ನೀವು ಬಹಳ‌ ಸುಸ್ತಾಗಿದ್ದಿರಂತ ಕಾಣಿಸುತ್ತೆ, ರಾತ್ರಿಯೆಲ್ಲ ನಿದ್ರೆಯನ್ನು ಮಾಡಿರಲಿಕ್ಕಿಲ್ಲೇನೊ..?, ಪ್ರಶಾಂತವಾಗಿ ಮಲಗಿಬಿಟ್ಟಿದ್ದೀರಿ, ಅದು ಅಲ್ಲದೆ ಬೆಳಿಗ್ಗೆ ನಾವಂದುಕೊಂಡು ಹಾಗೇಯೆ, ಇಲ್ಲಿ ಅವಿತುಕೊಂಡ ಅರ್ಧಗಂಟೆಯಲ್ಲಿಯೆ ಊರಲ್ಲಿ ನಾಲ್ಕೈದು ಪೋಲಿಸ್ ವ್ಯಾನ್ ಗಳು, ಜೀಪುಗಳು ಎಂಟ್ರಿಯಾಗಿವೆ ಅಲ್ಲದೆ ಊರ ತುಂಬಾ ೧೪೪ ಸೆಕ್ಷನ್ ಅನ್ನು ಹೇರಿದ್ದಾರೆ, ಹೀಗಾಗಿ ಹೊರಗಡೆ ಹೋಗಲು ಅವಕಾಶವೆ ಸಿಗಲಿಲ್ಲ, ಆ ಸೆಕ್ಯೂರಿಟಿ ಗಾರ್ಡ್ ಸಹ ಇಲ್ಲಿಂದಲೆ‌ ಮರೆಯಾದದ್ದೆಂದು ಎರಡು ಸಲ ಪೋಲಿಸ್ ಜೀಪ್ ನಲ್ಲಿ ಬಂದು, ಇದೆ ಡಬ್ಬಾ ಅಂಗಡಿ ಮುಂದೆ ನಿಂತು ಮಾತನಾಡಿ ಹೋಗಿದ್ದಾರೆ, ಹೀಗಾಗಿ ನಾನು ಹೊರಗಡೆ ಒಂದು ಅಡಿ ಇಡುವ ಸಾಹಸವನ್ನುಂತು ಮಾಡಲೆ ಇಲ್ಲ, ' ಪೋಲಿಸ್ ಜೀಪ್ ಅನ್ನುವ ಶಬ್ದ ಕೇಳಿ ಚಳಿ ಬಂದ ಹಾಗಾಗಿ ಬಿಟ್ಟಿತು ರಮೇಶನಿಗೆ, 'ಈಗೇನಯ್ಯ ಮಾಡೋದು, ಹಾಳಾದ್ದು ಈ ನಾಯಿ ಬೇರೆ ಬೊಗಳಿ ಬೊಗಳಿ ನಮ್ಮನ್ನೆಲ್ಲಿ ಸಿಕ್ಕಿ ಹಾಕಿಸಿಬಿಡುತ್ತೊ..' ಎನ್ನುತ್ತಾ ಬಹು ಆತಂಕಗೊಂಡುಬಿಟ್ಟನು ರಮೇಶನು. 'ಸರ್ ಅದು ಒಂದು ತಾಯಿ, ತನ್ನ ಮಕ್ಕಳಿಗೆ ಯಾವಾಗ ಹಾಲು ಕೊಟ್ಟು ಹೋಗಿತ್ತೊ, ಏನೊ..?  ಈಗ ಬಂದಿದೆ, ಅದರ ಮರಿಗಳನ್ನು ನೋಡಿ ತಾಯಿಯ ಬೊಗಳುವಿಕೆಯನ್ನು ಕೇಳಿ, ಹೇಗೆ ಅವುಗಳು ಚೀರಾಡುತ್ತೀವೆ, ನನ್ನ ತಾಯಿಯು ಅದೇಷ್ಟೊಂದು ಕಷ್ಟ ಪಟ್ಟಿರಬೇಕಲ್ವಾ, ನಾನು ಹುಟ್ಟುತ್ತಲೆ ತಂದೆಯನ್ನು ಕಳೆದುಕೊಂಡೆನಂತೆ,  ಮಗನನ್ನು ತಿಂದವಳು ಎಂಬ ಪಟ್ಟವನ್ನು ಕಟ್ಟಿ, ಅತ್ತೆ ಮಾವಂದಿರು ಮನೆಯಿಂದ ಹೊರ ಹಾಕಿದರಂತೆ, ಎರಡ್ಮೂರವರ್ಷ ತವರು ಮನೆಯಲ್ಲಿದ್ದು, ಅಣ್ಣಂದಿರ ಹೆಂಡತಿಯರು ಕೊಡುವ ಕಾಟವನ್ನು ಸಹಿಸಿಕೊಂಡು ದಿನಗಳನ್ನು ದೂಡುತ್ತಿರಬೇಕಾದರೆ, ನಾನು ಯಾವುದೊ ಒಂದು ವಿಷಯಕ್ಕೆ ಹಠ ಮಾಡಿದ್ದಕ್ಕಾಗಿ ಅತ್ತಿಗೆಯರೆಲ್ಲ ಸೇರಿ ನನ್ನ ಕೈಗೆ ಬರೆಯನ್ನು ಎಳೆದುಬಿಟ್ಟಿದ್ದರು,' ಬಲಗೈಯಲ್ಲಿ ಅಚ್ಚೊತ್ತಿದ್ದ ಬರೆಯ ಕಲೆಯನ್ನು ತೋರಿಸುತ್ತಾ,' ಅವತ್ತೆ ನಮ್ಮ ತಾಯಿ ಮನೆಯಿಂದ ಹೊರಬಂದು,ಈ ಊರಿನ ಅಜ್ಜನ ಮನೆಯಲ್ಲಿ ಆಶ್ರಯಿಸಿ, ಸಮಾಜದೊಳಗಿನ ಹುಳುಗಳನ್ನು ಎದುರಿಸಿ, ಕೂಲಿನಾಲಿ ಮಾಡಿ, ಅಷ್ಟೊ ಇಷ್ಟೊ ಓದಿಸಿ ಇಂದು ಹಾಸಿಗೆಯಲ್ಲಿ ಮಲಗಿದ್ದಾಳೆ, ' ಕಣ್ಣಂಚಿನಿಂದ ಜಾರುತ್ತಿದ್ದ ಹನಿಯನ್ನು ಒರೆಸಿಕೊಂಡು,' ಅಂತ ತ್ಯಾಗಮೂರ್ತಿಯನ್ನು ಉಳಿಸಿಕೊಳ್ಳಲು ನಾನು ಏನು ಬೇಕಾದರು ಮಾಡಲು ಸಿದ್ಧ ಸರ್. ನಿನ್ನೆ ರಾತ್ರಿಗೆ ನನ್ನ ಮುಖವನ್ನು ತೋರಿಸಿದ್ದು ನನ್ನ ತಾಯಿಗೆ, ಇಷ್ಟೊತ್ತಾದರು ನಾನು ಕಾಣದಿರುವುದನ್ನು ಕಂಡು ಅವಳದೇಷ್ಟು ಸಂಕಟಗೊಳ್ಳುತ್ತಿರುವಳೊ ಗೊತ್ತಿಲ್ಲ,' ರಮೇಶನು ಅಖಿಲನ ಭುಜದ ಮೇಲೆ ಕೈಯಿಟ್ಟು 'ಅಗುವುದೆಲ್ಲ ಒಳ್ಳೆಯದಕ್ಕೆ ಎಂದು ತಿಳಿದಿಕೊ‌ ಮಿತ್ರ, ನನಗೂ ಅದೆ ಸಂಕಟ ಕಾಡುತ್ತಿದೆ, ನಿನ್ನೆ ಬೆಳಿಗ್ಗೆ ಆಫೀಸ್ ಗೆ ಹೋಗುವಾಗ ನನ್ನ ತಂದೆಯ ಮುಖವನ್ನು ನಾನು ನೋಡಿದ್ದು, ಮನೆಯಲ್ಲಿ ಕಾಯುತ್ತಿರುವ ಹೆಂಡತಿ, ಅಸ್ಪತ್ರೆಯಲ್ಲಿ ಮಗಳು, ಹ್ಞಾಂ ನಾವೊ ತ್ರಿಶಂಕು ಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ತುತ್ತು ಕೈಗೆ ಬಂದಿದೆ ಉಣ್ಣುವುದಷ್ಟೆ ಬಾಕಿ,' ಎಂದು ನಿಟ್ಟುಸಿರನ್ನು ಬಿಟ್ಟನು. ಅಷ್ಟೊತ್ತು ಒಂದೆ ಸಮನೆ ಬೊಗಳುತ್ತಿದ್ದ ನಾಯಿಯು ಸ್ವಲ್ಪ‌ ಸುಮ್ಮನಾಯಿತು, ಪಟ್ ಪಟ್ ಡಂ...ಡಂ.. ಎಂದು ಪಟಾಕಿಗಳ ಶಬ್ದವು ಕೇಳಿಬಂತು, ರಾಮನಾಮ್ ಸತ್ಯ ಹೈ ಎಂದು ಯಾರೊ ಹೆಣವನ್ನು ಹೊತ್ತುಕೊಂಡು ಅದೆ ದಾರಿಯಲ್ಲಿ ಬರುತ್ತಿದ್ದರು. ಆ ಪಟಾಕ್ಷಿಗಳ ಶಬ್ದಕ್ಕೆ ನಾಯಿ ಹೆದರಿ ದೂರ ಓಡಿ ಹೋಯಿತು, ಅಖಿಲನ ಕಣ್ಣಲ್ಲಿ ಮಿಂಚು ಹರಿದಾಡಿತು, ' ಸರ್ ಇದೆ ಸುಸಮಯ, ಬಹುಶಃ ಇಲ್ಲಿಂದ ಎರಡು ಕಿ.ಮೀ ದೂರದಲ್ಲಿ ಊರ ಹೊರಗೆ ಸ್ಮಶಾನವಿದೆ, ಈ ಹೆಣದ ಗುಂಪಿನಲ್ಲಿಯೆ ನಾವು ಕೂಡಿ ಹೊರಟು ಹೋಗೊಣ, ಸ್ಮಶಾನದಲ್ಲಿ ಹಣವನ್ನು ಎಣಿಸಿಕೊಂಡು ನಾವಿಬ್ಬರು ನಮ್ಮ ನಮ್ಮ ದಾರಿಯನ್ನು ಹಿಡಿದುಬಿಡೋಣ ಏನಂತೀರಾ..?'  ಎಂದನು ಅಖಿಲನು ಉತ್ಸಾಹದಿಂದ, ರಮೇಶನು ಹಾಗೆ ಆಗಲಿ ಎನ್ನುವಂತೆ ತಲೆಯಾಡಿಸಿ, ಹೊರಡಲು ಅನುವಾದರು, ಶವದ ಮೆರವಣಿಗೆ ಡಬ್ಬಿಯನ್ನು ಇನ್ನೇನು ದಾಟಿತು ಎಂದೆನ್ನುವಾಗ, ಸರಕ್ಕನೆ ಡಬ್ಬಿಯ ಬಾಗಿಲನ್ನು ತೆಗೆದು ಇಬ್ಬರು ಹೊರಗಡೆ ಬಂದು, ಮೆರವಣಿಗೆಯ ಹಿಂದೆ ತಲೆಯ ಮೇಲೊಂದು ಖರ್ಚಿಪನ್ನು ಹಾಕಿಕೊಂಡು ತಲೆತಗ್ಗಿಸಿ ನಡೆಯಲಾರಂಭಿಸಿದರು..
  ಎರಡು ಕಿ.ಮೀ ದೂರ ಶವಯಾತ್ರೆಯ ಹಿಂದೆ ನಡೆದು ಬಂದು, ಸ್ಮಶಾನದ ಮೂಲೆಯಲ್ಲಿದ್ದ ದೇವಸ್ಥಾನ ಹಿಂದೆ ಯಾರಿಗೂ ಕಾಣದ ಹಾಗೆ ಹೋಗಿ ಕುಳಿತುಕೊಂಡು ಸುಧಾರಿಸಿಕೊಳ್ಳಲಾರಂಭಿಸಿದರು.