Friday, May 31, 2019

ಆಲಿಸೊ ಗಾಲಿಬ್

ಆಲಿಸು... ಗಾಲಿಬ್!!!

ಅದೇಷ್ಟೋ....ಸುಕೋಮಲ
ಹೂಗಳ ಎದೆಗಳನ್ನು ತುಳಿದು ಹಾಕಿದ
ಪಾಪದ ಫಲವಲ್ಲೇನಿದು ಗಾಲಿಬ್..!!!
ಭಗ್ನ ಎದೆಗಳ ಮಾತುಗಳನಾಲಿಸಿದವಳ,
ಒಡೆದ ಹಿಂಬಡಿಗಳ ನೋವನ್ನೆ...
ಆಲಿಸುವರು ಯಾರಿಲ್ಲ ಈಗಿಲ್ಲಿ....

ನಿನಗೆ ನೆನಪಿದೆಯಾ...? ಮಧುವಧಿಪತಿ
ಪಾನಮತ್ತಿನಲಿ... ಭಾವೋನ್ಮತ್ತದಿ...
ಈ ಪಾದಗಳ ಮೇಲೆ ತಲೆಯನಿಟ್ಟು,
ದುಃಖವನೆಲ್ಲವ ತೋಡುಕೊಳ್ಳುತ್ತಿದ್ದ ಪರಿ...
ಅರೆಘಳಿಗೆಯಲ್ಲಿ ಎಷ್ಟು ಹಗುರವಾಗಿಬಿಡುತ್ತಿದ್ದೆ
ನೀನು....ಅಲ್ಲವೆ ಗಾಲಿಬ್..
ಕಣ್ಣೀರಿನಿಂದಲೆ ತೊಳೆಯಿಸಿಕೊಂಡ ಪಾದಗಳಲ್ಲವೆ?
ಅದಕ್ಕೆ ನೋಡು ಉಪ್ಪನುಂಡುಂಡು ಹೇಗೆ
ಬಾಯ್ತೆರೆದಿವೆ!!!

ಅಂಗಾಲಿನೊಳು ಚುಚ್ಚುವ ನೋವನ್ನು ನಿನ್ನ
ಮುಂದೆ ಹೇಗೆ ತೊಡಿಕೊಳ್ಳಲಿ ಗಾಲಿಬ್...
ಕುಡಿದು ಬಿಸುಡಿದ, ಒಡೆದು ಬಿದ್ದ ಬಟ್ಟಲುಗಳ
ಗಾಜಿನ ಚೂರುಗಳ ತುಳಿದ ಪಾದಗಳಲ್ಲಿ....
ಗಾಯದ ಗುರುತುಗಳು ಒಂದೂ...ಇಲ್ಲ, ಅಡಿಯಿಂದ...
ಮುಡಿಯವರೆಗೂ ಚುಚ್ಚುತಿರುವ ನೋವು ಮಾತ್ರ,
ಯಾರಿಗೂ ಕಾಣಿಸುತ್ತಿಲ್ಲ...

ಸೀಳುಬಿಟ್ಟ ಹಿಂಬಡಿಯ ಈ ಕಾಲುಗಳಲಿ
ಕಾಲ್ಗೆಜ್ಜೆಗಳು ತುಂಬಿಕೊಂಡಿದ್ದಾಗ...ಎಲ್ಲರೂ..
ಶರಣಾಗಿದ್ದರಲ್ಲವೆ ಗಾಲಿಬ್....
ಘಲ್...ಘಲ್...ಕಾಲ್ಗೆಜ್ಜೆಯ ನಾದಕ್ಕೆ, ಹಣದ
ಸುರಿಮಳೆಯನ್ನೇ... ಸುರಿಸುತ್ತಿದ್ದವರು...
ಇಂದೊಬ್ಬರು ಇಲ್ಲವಲ್ಲ!! ದಣಿದ ಪಾದಗಳಿಗೆ
ಎಂಟಾಣೆಯ ಮದ್ದು ಬೇಕಿದೆ, ಎಲ್ಲ ಎದ್ದು
ಹೋಗಿರುವರಲ್ಲ!!!

ಮೆಹಂದಿಯೇನೊ ಹಚ್ಚಿಕೊಂಡೆ, ರಂಗೇರಿತು..
ಗೆಜ್ಜೆಯನ್ನೇನೊ ಕಟ್ಟಿಕೊಂಡೆ..............
ನರ್ತಿಸುವ ಶಕ್ತಿಯು ಬೇಕಲ್ಲ ಗಾಲಿಬ್...
ಕಾಲಲ್ಲಿ ಬಲವಿದ್ದರಷ್ಟೆ ಈ ರಂಗಮಂಚ!!!
ಇಲ್ಲದಿದ್ದರೆ...? ಕಣ್ಣೆತ್ತಿಯು ನೋಡದು ಈ ಪ್ರಪಂಚ
ಈಗೀಗ ಸಾವನ್ನು ಪ್ರೀತಿಸುವಾಸೆ ಚಿಗುರಿ,   ಹೆಮ್ಮರವಾಗುತಿಹುದು....ಸತ್ತಮೇಲೆ? ಹುಗಿದ
ಗೋರಿಗೂ ಭಾರವಾಗುವೆನೇನೊ...?

ಬೆನ್ನು ತೋರಿಸಿದವಳ ಹೆಸರಿನಲ್ಲಿ ಕಟ್ಟುವ
ಕಲ್ಲು ಕಟ್ಟಡಗಳಲ್ಲಿ, ಗೆದ್ದಲುಗಳು ಮನೆ ಮಾಡಿ,
ಪುಡಿ...ಪುಡಿಯಾಗಿ...ಹೋಗುವ ಹಾಳೆಗಳ ಮೂಲೆಯಲ್ಲಿ
ನನ್ನದೊಂದು ಹೆಸರನ್ನಾದರು ಸೇರಿಸಿಬಿಡು ಗಾಲಿಬ್....
ಇತಿಹಾಸವ ಓದುವವರಿಗೆಲ್ಲ ಅರಿವಾಗಬೇಕಲ್ಲವೆ?
ನೊಂದವರ ಮನಕೆ ಮದ್ದಾದ ಮನವೊಂದು...
ಮದ್ದಿಲ್ಲದೆ... ಸದ್ದಿಲ್ಲದೆ....ಮಸಣದ ಹೂವಾಗಿ
ಮಣ್ಣು ಸೇರಿ ಹೋದದ್ದನ್ನು!!!!

Wednesday, May 29, 2019

ಚುಟುಕು

ಧ್ಯಾನಿಸುತ
ಇರಬೇಡ ಹೀಗೆ,
ಹಳಿಯ ಸಣ್ಣ
ಬಿರುಕು ಬಂಡಿಯನ್ನು
ಮಲಗಿಸಿಬಿಡುತ್ತದೆ...!!
ಮುರಿದೆ ಬಿದ್ದಿದೆ
ಎಂದ ಮೇಲೆ, ಕಣ್ಮುಚ್ಚಿ
ಕೂರುವುದೇಕೆ?
ಕಣ್ತೇರೆದು ನೋಡು
ಹೊಸದೊಂದು ದಾರಿ
ನಿನಗಾಗಿಯೆ ಕಾಯುತ್ತಿದೆ..!!

Tuesday, May 28, 2019

ಚುಟುಕು

ಹಾಲು...
ಹಾವಿಗೂ ಅನಿವಾರ್ಯ
ಬೇಟೆಯಾಡಿ ತಿನ್ನುವುದೆ
ಅದರ ಧರ್ಮ!!
ವಿಷವನ್ನೆ ಕಕ್ಕುವೆ
ಎಂದರಿತಿದ್ದರೂ... ಭರವಸೆಯ
ಹಾಲನೇರೆಯುತ್ತಿರುವೆ...
ತಿದ್ದಿಕೊಳ್ಳದಿದ್ದರೆ? ಅದು...
ನಿನ್ನ ಕರ್ಮ!!!

🙏🙏🙏

ಚುಟುಕು

ಮಾಡ್ಕೊಂಡ
ಬಿಟ್ರ.. ಬದುಕನ್ಯಾಗ
ಲೆಕ್ಕಿಲ್ಲದಷ್ಟ
ತಪ್ಪ...
ಮುಳುಗೆ
ಹೋಗ್ತದ ನೋಡೊ
ತಮ್ಮಾ...
ಬಾಳಿನ ತೆಪ್ಪ...

ಅಣ್ಣವ್ರೆ ಮಸ್ತ್

ಚುಟುಕು

ಕಣ್ಣಲ್ಲೆ....
ಕೊಲ್ಲುವ
ಕಲೆಯನ್ನು ಅವಳಿಗೆ
ಹೇಳಿಕೊಡಬೇಕಿಲ್ಲ!!
ನೋಡಿಬಿಡಿ ಒಮ್ಮೆ.....
ಎದೆ ಬಡಿತ ನಿಂತು
ಹೋದರೆ....‌‌‌
ನಾವು ಜವಾಬ್ದಾರರಲ್ಲ

Sunday, May 26, 2019

ಚುಟುಕು

ಸುಂದರಿ ಸಿಕ್ಕ
ಮೇಲೂ...
ಮದಿರೆಯ
ಸಹವಾಸವೇತಕೊ
ಸಖ....!!
ಅನುಭವಿಸಿಲ್ಲವೇನು?
ನನ್ನಧರಗಳಲ್ಲಿ
ಜಗದೊಳದೆಲ್ಲದರ
ಸುಖ...!!!

Saturday, May 25, 2019

ನಕ್ಕುಬಿಡು ಗೆಳತಿ

ಹುಸಿಯಾಗಿಯಾದರೊಮ್ಮೆ
ನಕ್ಕುಬಿಡು ಗೆಳತಿ...
ಪ್ರೀತಿಯ ಹೂವು ಅರಳುವುದಿಲ್ಲ
ಎಂದರಿತಿದ್ದರೂ...ಕಾಯುತ್ತಿರುವೆ.

ಹುಚ್ಚನೆಂದಾದರೂ ನಾಲ್ಕು
ಮಾತುಗಳನ್ನಾಡಿಬಿಡು ಒಡತಿ...
ಹಚ್ಚೆ ಹಾಕಿಸಿಕೊಂಡ ಎದೆಯೊಳಗಿನ
ಬಡಿತ ನಿಂತುಹೋಗುವುದೆನ್ನುವ ಮಿಡಿತಕ್ಕೆ

ನಿನ್ನ ಸೌಂದರ್ಯದ ಭಿಕ್ಷುಕನೆಂದಾದರು
ಕಣ್ಣೇತ್ತಿ ನೋಡಿಬಿಡು ಒಮ್ಮೆ....
ಕಣ್ಣಲ್ಲೆ ಕಟ್ಟಿಕೊಂಡ ಸಾವಿರ ಕನಸುಗಳಿವೆ
ನಿನ್ನ ನೋಟಕ್ಕೆ ಸಿಕ್ಕು ಸುಟ್ಟು ಹೋಗಿಬಿಡಲಿ!!!