Saturday, April 25, 2020

ಚು

ಈ ವರ್ಷ ನಮ್ಮ ಭಾಗದ,
ಅದೇಷ್ಟೊ ಹಳ್ಳಿಗಳ 
ಮನೆಗಳಲ್ಲಿ ಬೆಳಗುತ್ತಿಲ್ಲ
ದೀಪ!!
ಹಬ್ಬದ ಸಂತಸಕ್ಕೆ 
ತಣ್ಣೀರೆರಚಿ, ನಗುತ್ತಿದ್ದಾನೆ
ಮಳೆರಾಯ. ತೋರಿ
ತನ್ನ ಪ್ರತಾಪ!!

ನಡು ನೀರಿನಲ್ಲಿ...
ನಿಂತವರ ಮಧ್ಯದಲ್ಲಿ
ನಾ ಹೇಗೆ ಆಚರಿಸಿಕೊಳ್ಳಲಿ
ದೀಪಾವಳಿ!!!
ಸಾಕು...ಸಾಕೆಂದರು
ನಮ್ಮೆಲ್ಲರ ನೆತ್ತಿಯ
ಮೇಲೆ ರುದ್ರನರ್ತನಗೈಯ್ಯುತಿದೆ
ಮಳಿ!!

ಮೆಹಂದಿ ಹಚ್ಚಿಕೊಳ್ಳಬೇಕಿದ್ದ
ಹೆಂಗಳೆಯರ ಕೈಗಳಿಗೆಲ್ಲ 
ಮೆತ್ತುಕೊಂಡಿದೆಯಿಂದು
ಕೆಸರು!!
ಮನೆಯಂಗಳವು ಹಳ್ಳವಾದ
ರೀತಿಯ ಕಂಡು...ಬಿಡುತ್ತಿರುವರೆಲ್ಲ
ನಿಟ್ಟುಸಿರು!!

ಹೌದು, ಉಳಿತಾಯ
ಖಾತೆಯಲ್ಲಿ ಹಣವು
ಬಂದು ಬಿದ್ದಿದೆ!!!
ಇದರಿಂದಲೆ, 
ಬದುಕನ್ನು ಕಟ್ಟಿಕೊಳ್ಳಬಹುದೆ?
ಎಷ್ಟು ಜನರಿಗೆ
ಗೊತ್ತಿದೆ.

ಅವನ ಅಟ್ಟಹಾಸಕ್ಕೆ
ನಲುಗಿ ಹೋಗಿರುವ
ಈ ಹೂವುಗಳೆ
ಸಾಕ್ಷಿ!!!
ಸುಂಕ ಕಟ್ಟುವರಾರು?
ಕಂಡು..ಕಂಡು..
ಬೆಂದು ಹೋಗುತ್ತಿದೆ
ಮನಸಾಕ್ಷಿ!!

ಚು

ಚುಟುಕುಗಳು

ವರುಣ ಕೊನೆಗೂ
ಭೂರಮೆಯನ್ನು
ಚುಂಬಿಸಿಯೇ..
ಬಿಟ್ಟ.
ನೋಡಿಲ್ಲಿ...
ಎಲೆಗಳೆಲ್ಲ ನಾಚಿ,
ರಂಗೇರಿಬಿಟ್ಟಿವೆ
ಸಾಕ್ಷಿಗೆ

ಮನುಷ್ಯನ ಆಸೆ
ಗುಡಿಯ ಮುಂದಿರುವ
ಹುಂಡಿ...
ಎಂದಿಗೂ ಬತ್ತದ
ಒರತೆಗಳು.

ಕಾಯಿ
ಒಡೆಸಿದ್ದೇನೊ
ಬನಶಂಕರಿ
ತಾಯಿಗೆ.
ರುಬ್ಬಿ
ಹಾಕಿಬಿಡುವುದಿಂದೆ
ತಿಳಿ
ಸಾರಿಗೆ.

ನೋಡಿಲ್ಲಿ
ಸೂಜಿ ಮಲ್ಲಿಗೆ
ದುಂಡು ಮಲ್ಲಿಗೆ
ಕನಕಾಂಬರಿ.
ಪುಟ್ಟಿಯಲ್ಲಿ ತುಂಬಿಟ್ಟಿರುವೆ
ಎಲ್ಲ....ಬಾಡುವ ಮುನ್ನ 
ನೀ ಬರಬೇಕಿಲ್ಲಿಗೆ

ಹಿಡಿ ತುಂಬಾ
ಒಂದಿಷ್ಟು ಮಲ್ಗಿ
ಹೂವಾ ತಂದೀನಿ...
ನಾಚ್ಗೊಂತ ನಿಂದ್ರಬ್ಯಾಡ
ನೀ... ಮನಿ ಬಾಗ್ಲ
ಸಂದ್ಯಾಗ...
ಹೊತ್ತು ಮೀರಿ ಹೊಕ್ಕೈತಿ..
ಹೊತ್ತ ಮೀರ್ತಂದ್ರ
ಹೂ ಬಾಡಿ
ಹೊಕ್ಕೈತಿ....
ಹೂ ಬಾಡಿ ಹೋದ್ವಂದ್ರ
ನಾ ಸತ್ತ್....
ಹೊಕ್ಕೇನಿ..

ಕೆತ್ತಿರುವ
ಶಿಲೆಗಾರನಿಲ್ಲ,
ಸ್ತಂಭವಿದೆ.
ಕುಂಬಾರನಿಲ್ಲ,
ಮಾಡಿಟ್ಟ
ಹಣತೆಯಿದೆ.
ಎಣ್ಣೆ, ಬತ್ತಿಯ
ಹಾಕಿ, ಕಾಯುವ
ಪ್ರೇಮಿಯಿದ್ದೇನೆ.
ದೀಪ ಬೆಳಗಿಸುವ
ಜೀವ ಮಾತ್ರ...
ಸನಿಹದಲ್ಲಿಲ್ಲ.

ಸಾಲು ಕಂಬಗಳ
ಹಿಂದೆ....
ಸಾಲಲಾರದಷ್ಟು
ಕಥೆಗಳಿವೆ.
ನಾನೂ....
ಕಥೆಯಾಗಲೆಂದೆ
ಬಂದವನೇನಲ್ಲ.
ರಂಗೀಯು ಬರದಿದ್ದರೆ?
ನನ್ನ ಕಥೆಯನ್ನು
ಕಂಭಗಳೆ
ಹೇಳುವವಲ್ಲ!!!

ಹೆತ್ತ ಮಕ್ಕಳಿಗಿವಳು
ಹಡದವ್ವ...
ನಮ್ಮಂಥ ಹೊತ್ತು
ಗೊತ್ತಿಲ್ಲದೆ...
ಊರೂರು ಅಲೆವ, 
ಅಲೆಮಾರಿಗಳಿಗೆ
ಕೈ ತುತ್ತನಿಟ್ಟು, 
ತನ್ನೊಡಲ ಹಸಿವ,
ಇಂಗಿಸಿಕೊಳ್ಳುವ
ಕಾಯಕವ್ವ.

ತಲೆಯಲ್ಲಿ ನೆರೆತ
ಕೂದಲುಗಳನೇಣಿಸುತ
ನೀ...ಕೂರಬೇಡ.
ನಿನ್ನೊಲವ ಬೇರು
ಎದೆಯಾಳಕೆ 
ಇಳಿದು... 
ಹಣ್ಣನ್ನು ಬಿಟ್ಟಿದೆ.
ತಡಮಾಡದೆ,
ಓಡೋಡಿ ಬಾ
ಹಣ್ಣು ಮಣ್ಣ
ಸೇರುವ ಮುನ್ನ.

ಅದ್ಹೇಗೆ...
ಭೂದೇವಿಯನ್ನು
ಹೊತ್ತು ನಿಂತಿರುವೇಯೊ!!!
ತುಸು ತಾಳ್ಮೆಯನ್ನಾದರು
ಅನುಗ್ರಹಿಸು
ವರಹಾ....
ಸ್ವಾಮಿ.
ನನ್ನ ರಮೆಯು
ಬಾರದೆ....
ಉರಿದು 
ಹೋಗುತ್ತಿರುವನಿಲ್ಲಿ
ವಿರಹಿ ಪ್ರೇಮಿ.

ಕಾಯಿಸುವುದು
ನಿನಗೆ 
ಹೊಸತಲ್ಲ...
ಕಾಯುವುದು...
ಬೇಯುವುದು ನನಗೂ
ಹೊಸತೇನಲ್ಲ...
ಬಿಸಿಲು...!!!
ನಿನ್ನೆಯ ಹಾಗಿಲ್ಲ,
ಅಳಿದುಳಿದ ತಾಳ್ಮೆಯು
ಉರಿದು ಹೋಗುವ
ಮುನ್ನ... ನೀ ಬಂದು
ಸೇರು ನನ್ನನ್ನ.

ಕಲ್ಯಾಣಿಯೇನೊ
ಬತ್ತಿ ಹೋಗಿದೆ
ನಮ್ಮೆಲ್ಲರ ದುರಾಸೆಯಿಂದ.
ಚಿಂತೆಯಿಲ್ಲ !!! ಯಾರಿಗೂ....
ಜೀವ ಜಲವೇ...
ಇಂಗಿ ಹೋದ ಮೇಲೆ,
ನಾವಿನ್ನು ವರ್ಷಗಳನ್ನೇಣಿಸುವದರಲ್ಲಿ
ಅರ್ಥವಿಲ್ಲ.
ಏನು ಮಾಡುವುದು?
ಸ್ವಾರ್ಥವೆ ತುಂಬಿ ಬಿಟ್ಟಿದೆ
ಜಗದಲೆಲ್ಲ..

ಮೊನ್ನೆತಾನೆಯಷ್ಟೆ
ಬೇವಿನ ಕಹಿಯನುಂಡು
ಇಂದು...
ಮಾವಿನ ನೆರಳಿನಲ್ಲಿ
ಕುಳಿತಿರುವೆ.
ನೀ ಬರುವ ಹಾದಿಗೆ
ಹೂ ಹಾಸುವಷ್ಟು
ನಾನು ಸಾಹುಕಾರನಲ್ಲ.
ಪದಗಳಲ್ಲಿ ನಿನ್ನಂದವ
ಕಟ್ಟಿಕೊಡಲಾರದಷ್ಟು
ಬಡವನು ಅಲ್ಲ.

ನಿನ್ನನೂ...
ಬೇವಿನಮರಕ್ಕೆ
ಜಡಿದುಬಿಟ್ಟರಾ?
ತುಕ್ಕು ಹಿಡಿದರೇನಾಯಿತು
ನಿನಗೆ....ಪತ್ರಗಳೆ
ಬರುವುದಿಲ್ಲವಾ?
ನನಗೂ...
ವಯಸ್ಸಾದರೇನಾಯ್ತು?
ಎದೆಯಲ್ಲಿ  ಪ್ರೀತಿಯೇ....
ಉಕ್ಕುವುದಿಲ್ಲವಾ?.

ನೀನು....
ಬಿಟ್ಟು ಹೋದ
ಘಳಿಗೆ...ನೋಡು,
ನಿತ್ಯ ಹರಿದ್ವರ್ಣದಲ್ಲೆಲ್ಲೂ...
ಚಿಗುರಿಲ್ಲ.
ಚಿಗರಿ ಇಲ್ಲದ
ಕಾಡಿನಲ್ಲಿ...
ಸಾರಂಗವು
ಒಂಟಿಯಾಗಿಯೇ
ಅಲೆಯುತ್ತಿದೆ
ದಿಕ್ಕಿಲ್ಲದಂತೆ,
ಇದರರಿವು
ನಿನಗಿಲ್ಲ!!!

ಪುಣ್ಯಕ್ಕೆ....
ನೀನಿಲ್ಲದ
ಹೊತ್ತಿಗೆ,
ಕಲ್ಲುಗಂಭಗಳ
ನಡುವೆ ನಿಂತಿರುವೆ,
ಬದುಕಿರುವೆ.
ನಾಲ್ಕು ಜನರ
ಮದ್ಯವಿದ್ದಿದ್ದರೆ?

ಹೌದು...
ಇಂದು ಕಣ್ಣಿಗೆ
ಬಣ್ಣದ ಕನ್ನಡಕವನ್ನು
ಹಾಕಿಕೊಂಡಿರುವೆ.
ಚೆಂದ ಕಾಣುತ್ತೆನಂತಂದಲ್ಲ!!!
ಕಣ್ಣೊಳಗಿನ
ನೋವು....ನಿನ್ನನು
ನೋಯಿಸದಿರಲೆಂದು.

ತಲೆಯ ಮೇಲೆ
ಹೂವಿನ
ಚಪ್ಪರವಿಲ್ಲ!!!
ಕಲ್ಲು ಚಪ್ಪಡಿಯಿದೆ.
ನೋಡಿದವರೆಲ್ಲ
ಏನು ಅಂದಾರು.
ನಮ್ಮಿಬ್ಬರ ಕುರಿತು
ಏನೆಲ್ಲ ಸುದ್ದಿಯ
ಬಿತ್ತಾರು...


ಈ ವರುಷ...
ಮಲ್ಲಯ್ಯನ
ತೇರು...
ಪಥವನ್ನು 
ತಪ್ಪಿ ನಿಂತಿದೆ.
ನೀನೂ...
ಹಾದಿಯನ್ನು
ತಪ್ಪಬೇಡ!!!
ನಿನ್ಹೆಸರಲಿ
ಉಸಿರೊಂದು
ಜಪ ಮಾಡುತಿದೆ
ತಡ ಮಾಡಬೇಡ!

ಜಾತ್ರೆಯ 
ತಯಾರಿಗಾಗಿ
ಗೋಡೆಗಳಿಗೆಲ್ಲ
ಬಳಿದಿದ್ದಾರೆ 
ಸುಣ್ಣ...
ತುಸು ಹೆಚ್ಚಾದ್ರೂ
ಪರ್ವಾಗಿಲ್ಲ...
ಜಾತ್ರೆಗೆ, ಹಚ್ಗೊಂಡ
ಬಾ ನೀ...
ಮುಖಕ್ಕ ಬಣ್ಣ...

ತುಳಿದು ಹೋದವರ
ಹೆಜ್ಜೆ ಗುರುತೊಂದೊ....
ಮೆಟ್ಟಿಲುಗಳ ಮೇಲೆ
ಮೂಡಿಲ್ಲ...!!!
ತುಳಿಯಿಸಿಕೊಂಡು,
ಎಲ್ಲರನೂ ಮೇಲಕ್ಕೆ
ಕಳುಹಿಸಿದೆನೆಂಬ
ಜಂಭ... ಯಾವ
ಮೆಟ್ಟಿಲುಗಳಲ್ಲೂ
ಇಲ್ಲ..!!

ಗಾಲಿ
ಹೋಳಾಗಿ
ಬಿದ್ದಿದೆ...
ಯಾರಿಗಿಲ್ಲ
ಇದರ ಚಿಂತನೆ!
ಬಹುಶಃ...
ಇದು ಅನುಭವಿಸುತ್ತಿರುವುದೇನೊ?
ನನ್ನ ಹಾಗೆ
ಮೂಕ ವೇದನೆ!

ನಾಟಕಗಳಲ್ಲಿ 
ಮಾಡಿದ್ದೀರಿ...
ಎಂತೆಂತಹ
ಪಾತ್ರಗಳನ್ನು!!!
ಮುಗಿಸಿ
ನಡೆದಿರಲ್ಲ
ಇಂದು
ಬದುಕಿನ
ಪಾತ್ರವನ್ನು!!!
🙏🙏🙏🙏

ಇಂದೇನೊ
ಬೆನ್ನೆಲುಬಿಗೆ 
ರಜೆ
ಆಲೀಸುವರಾರು
ಹೊಟ್ಟೆಗೆ
ಬೀಳುವ
ಸಜೆ

ಕಡೆದು
ಸುಟ್ಟು ಬಿಟ್ಟರೂ...
ಮತ್ತೆ ಚಿಗುರಿ, 
ಹೂಗಳರಳಿಸಿ
ತೋರುತ್ತಿದೆ
ಪ್ರೀತಿ..
ಸುಟ್ಟ ಮನಗಳು
ಅರಿತುಕೊಳ್ಳುವವೇ...
ಇದರ ರೀತಿ
ನೀತಿ

ಬಾಡಿ ಹೋಗಿವೆ
ಗುಲಾಬಿಯ
ಹೂಗಳು
ಸುಡು ಬಿಸಿಲಿಗೆ!!
ಪ್ರೀತಿಯಿಂದ,
ಬಣ್ಣದ ಹಾಳೆಗಳಲ್ಲೆ
ಮಾಡಿಟ್ಟಿರುವೆ
ಹೂಗಳನ್ನು...
ನೀ ಬರದಿದ್ದರೆ!!
ಇವೂ... 
ಉರಿದು ಹೋಗುವವು.. 
ನನ್ನೆದೆಯ ವಿರಹದ 
ಬಿಸಿಗೆ

ಹೌದು ನಾನು
ಸ್ವಲ್ಪ ದಪ್ಪ
ಆದರೂ...
ನಾನಲ್ಲ ಬೆಪ್ಪ
ಸೋತಿರುವೆ,
ಕೊಟ್ಟುಬಿಡಲೆ
ಇಂದೆ... 
ನಿನ್ನ  ರಂಗೇರಿದ
ಕೆನ್ನೆಗಳಿಗೆ ಮುತ್ತುಗಳ
ಕಪ್ಪ..

ನಿನ್ನ ನೆನೆದಾಗಲೆಲ್ಲ...
ಮನಸ್ಸು ಮೆತ್ತಗಾಗುತ್ತಿತ್ತು..
ನಿನ್ನ ನೆನೆದಾಗಲೆಲ್ಲ...
ಮನಸ್ಸು ಮೆತ್ತಗಾಗುತ್ತಿತ್ತು..
ನೀನು.. ಬಿಟ್ಟು ಹೋದ 
ಮೇಲೆಕೆ....ಈ
ಮನಸ್ಸು ಕಲ್ಲಾಗಲಿಲ್ಲ

ಬೆರಸದಿರು ನೋಟಕ್ಕೆ
ನೋಟವ...
ಕಣ್ಣುಗಳವೇಷ್ಟು
ಮಾತನಾಡಿಕೊಳ್ಳುತ್ತವೆ,
ನಿನಗೆ ಗೊತ್ತಾ...?
ಬಿಡುವುದೆ ಇಲ್ಲ ರಾತ್ರಿಗೆ 
ನಿದ್ರಿಸಲು...
ಎಚ್ಚರವಾಗಿಯೆ ಇರುತ್ತವೆ
ನನ್ನ ನಯನಗಳು 
ನಿನ್ನನೆ ನೆನೆಯುತ್ತಾ...

ಮನಸಿನಲ್ಲಿ ಅವಳಿಗೆಂದೆ..
ಕನಸೊಂದು ಮೂಡಿತು..
ಒಪ್ಪಿಸಿಬಿಟ್ಟೆ ಕಾಗದಕ್ಕೆ
ಕಾಗದವು ಆ ಕನಸಿನ
ಸಾಲುಗಳನೊದಿ..
ಅವಳಿಗಿಂತಲೂ... 
ಹೆಚ್ಚು, ಇದೆ
ನಾಚಿ ಮುದುಡಿಕೊಂಡಿತು

ಸಮಾಜ
ಅದೇಷ್ಟು
ಬೆಂದಿದೆ!!!
ಅದಕ್ಕೆ 
ಇವಳನ್ನು
ಅರೆಬರೆ
ಸುಟ್ಟಿದೆ!!!

ಬ್ಯಾಟರಿಯು
ತಣ್ಣಗಾದರೆ?
ಗಡಿಯಾರದ
ಮುಳ್ಳೂ...
ನಿಂತು 
ಹೋಗುವುದಿಲ್ಲವೇನು?
ನೀನು
ಸುಮ್ಮನಾದರೆ?
ನನ್ನೆದೆಯ ಬಡಿತವು
ನಿಂತು ಹೋಗುವುದಿಲ್ಲವೇನು?

ಮನೆಯ
ಬಾಗಿಲಿಗೆ 
ಹಾಕಿದೆ ಬೀಗ
ಮನಸ್ಸಿಗಲ್ಲ!
ಕೂಗಿ ಬಿಡು
ಒಮ್ಮೆ
ಕರೆಗಂಟೆಯ
ಹಾಗೆ, ಬಂದು
ಬಿಡುವನು ಈ
ನಲ್ಲ!!

ಅವಳು
ಕವಿತೆಯಾಗಲೆಂದೆ
ಬಂದವಳು...
ಕಥೆಯಾದಳು!
ನಾನು!!!!!?
ಕಾದಂಬರಿಕಾರನಾದೆ.

ನಾನೂ...
ಸಾಯಬಹುದು
ಇಂದೊ...ನಾಳೆಯೊ
ಈಗಲೊ..
ದಿನಗಳನ್ನಲ್ಲ,
ಕ್ಷಣಗಳನ್ನು
ಲೆಕ್ಕವಿಟ್ಟಿಲ್ಲ
ಇಟ್ಟುಕೊಂಡುವರು
ನನಗೀನ್ನು
ಎದುರಾಗಿಲ್ಲ!

ಕೈಯ ಮೇಲೆ
ಕೈಯಿಟ್ಟು
ಆಣೆ 
ಮಾಡಿದ್ದವಳು
ಕಾಣೆಯಾಗಿದ್ದಾಳೆ!
ಹುಡುಕಿಕೊಂಡು
ಹೊರಟಾಗ,
ಅವಳೀಗ
ಮದುವೆ ಮಂಟಪದಲ್ಲಿದ್ದಾಳೆ!!!

ತವರಿಗೆ
ಹೋದವಳು
ಹೇಳಿದ್ದಳು ಬರುತ್ತೇನೆ
ಇಂದು ಸಂಜೆ!
ಬರದಿದ್ದರೆ!!!!!!
ಎಲ್ಲ ಪಾತ್ರೆಗಳನ್ನು
ನಾನೆ ತಿಕ್ಕಬೇಕಲ್ಲ
ಎಂತಹ
ಸಜೆ!!

ನಿನ್ನ ಚಿಗುರು 
ಮೀಸೆಯ ನಗುವಿಗೆ
ಸೋತು ಹೋಗಿದೆ
ಮನಸು...
ರಪ್ಪೆಗಳೆರಡು 
ಅಪ್ಪಿಕೊಳ್ಳುತ್ತಲೆ...
ಇಲ್ಲ, ನಲ್ಲ
ಬರಿ ನಿನ್ನದೆ
ಕನಸು..


ಕಡೆದು, ಗೂಡಿಸಿ
ಹಾಕಿಬಿಟ್ಟೆ...
ಹೊಲದೊಳಿದ್ದ
ಕಸ-ಕಡ್ಡಿ,
ಮುಳ್ಳು ಕಂಟಿಗಳ...!!
ಕಿತ್ತೊಗೆಯಲೆ
ಆಗುತ್ತಿಲ್ಲ....
ಮನದಾಳದಲ್ಲಿ
ಬೇರು ಬಿಟ್ಟಿರುವ
ಮೋಹ-ವ್ಯಾಮೋಹಗಳ..!!

ನನ್ನ ಬಗ್ಗೆ
ನಿನಗಿಲ್ಲ
ಒಂಚೂರು
ಮರುಕ...
ನನ್ನೆದೆಯ
ನೋವಿಗೆ,
ಭೂಮಿಯು
ಬಿಟ್ಟಿದೆ ನೋಡ..
ಬಿರುಕ

ಅಲ್ಲಿ ನಿನ್ನ
ಮನದಲ್ಲಿ
ತುಂಬಿದೆ
ಕತ್ತಲು!!
ಇಲ್ಲಿ ನನ್ನ
ಮನಸ್ಸಿಗೆ
ಹತ್ತಿದೆ
ಗೆದ್ದಿಲು!!

ಹೂಗಳನ್ನು 
ಮೂಸಬೇಡ,
ಅವುಗಳೆದೆಯಲ್ಲಿ
ಸುಗಂಧವಿಲ್ಲ!!
ನನ್ನನೆ ದಿಟ್ಟಿಸಿ
ನೋಡಬೇಡ,
ನಾನು 
ಅಂದವಿಲ್ಲ!!!
ಆದರೆ ಎದೆಯಾಳಕ್ಕೆ
ಇಳಿದು ನೋಡು..
ಮತ್ತೆ ನೀ...
ಎದ್ದು ಬರುವುದೆ
ಇಲ್ಲ!!!

ಖೇದವೇನಿಲ್ಲ!!
ನಿಂತು ಹೋಗಲಿ
ಉಸಿರು...
ನಿನ್ನ ಹೆಸರಿನಲ್ಲೆ
ಘಾಸಿಗೊಳಿಸಿದರು
ಮನಸ್ಸನ್ನು
ಉಸಿರಾಡುತಿರಲಿ
ಹೇಗೆ?
ನೋವಿನಲ್ಲೆ!!

ನಾನು
ಬಂಗಾರವೇನಲ್ಲ!!
ಕಬ್ಬಿಣವಂತೂ
ಮೊದಲೆ ಅಲ್ಲ!!
ಒಂದನ್ನು ಅರಿತಿಕೊ...
ತಾಮ್ರ ಬೆರೆಯದೆ
ಬಂಗಾರವು ರೂಪಗೊಳ್ಳದು,
ನೀನು ಸೇರದೆ...
ನಮ್ಮ ಬಾಳು
ಹೊನ್ನಾಗದು.

ಹಪ್ಪಳದ ಹಿಟ್ಟನ್ನು
ಹದವಾಗಿ ಲಟಿಸಲು
ಅವಳ ಕೈಯ್ಯಲ್ಲಿದೆ
ಲಟ್ಟಣಿಗೆ!!
ಹೇಳುವುದು, ಕೇಳುವುದು
ಮಾಡಬಾರದು ಈ
ಹೊತ್ತಿಗೆ!!
ಕೇಳಿದರೆ?!!!! ಸಿಗಬಹುದೇನೊ?
ಹೆಚ್ಚಿಗೆ!!

ಕಾಯಕವೇ
ಕೈಲಾಸವೆಂದ
ಬಸವಣ್ಣ....!!
ಕಾಯಕವ ಮರೆತು,
ನಿನ್ನ ಹೆಸರನ್ನೆ
ಹೇಳಿಕೊಂಡು
ಉದರವ 
ಹೊರೆಯುತಿಹರು
ನೋಡಣ್ಣ!!!!

ನೆತ್ತಿಯು
ಸುಡುವುದೆಂದರೆ
ಹೊಟ್ಟೆಯು
ತುಂಬುವುದೇನು?
ನಂ ಕೆಲಸವನ್ನು
ನಾವೆ ಮಾಡಿಕೊಳ್ಳದಿದ್ದರೆ!!!
ಕಾಯಕಕ್ಕೆ
ಅರ್ಥವುಂಟೇನು?

ನಾನು...
ಹೊಲಸು
ತಿಂಬುವ
ಹೊಲಿಯ...!!!
ನಾದರೂ...
ಅನುಸರಿಸೇನು
ಇಬ್ಬಗೆಯ
ನೀತಿಯ!!

ಬೇಡಿ ಬಂ್ಇರುವೆ
ಹನುಮ...
ತೂಗಿ ನೋಡು
ನನ್ನ ಕರ್ಮ

ಶುಭ ಕಾರ್ಯಕ್ಕೆಂದೆ
ಸುಣ್ಣದ ಗೋಡೆಯ
ಮೇಲೆ ಸುರಿದಿದ್ದಾರೆ
ಸುರುಮಾ...



ಶಾ

ಮಸಣವಾದರೇನು?
ಹೂಬನವಾದರೇನು?
ಅವಳೆ ಇಲ್ಲದ ಮೇಲೆ
ಸಾಕಿ...
ನನ್ನುಸಿರೆ... ನಿಂತು ಹೋದ
ಮೇಲೆ,
ಮಧು ಮಂಚವನು ಸಿಂಗರಿಸಿದರೇನು?
ಗೋರಿಗೆ ಹೂವಿನ ಚಾದರವ
ಹೊದಿಸಿದರೇನು?

ಚು

ಚುಟುಕು

ನೀನು....
ಕಸದಲ್ಲೆ, ಹುಟ್ಟಿದ್ದರು
ಸೂಸುವ ಸುಗಂಧ
ಮಾತ್ರ ದುರ್ಗಂಧವಾಗಿಲ್ಲ!!


ಮಾಡಿದ್ದನ್ನು ಇಲ್ಲಿಯೆ
ಉಂಡು ಹೋಗಬೇಕು!
ಪಾಪದ್ದು...
ಹಳಸಿ ಹೋಗುತ್ತದೆ!!
ಪುಣ್ಯದ್ದು, ಹೊಟ್ಟೆಯನ್ನಾದರು
ತುಂಬಿಸುತ್ತದೆ!

ಎಷ್ಟು ದರವಾದರೇನು?
ಖರಿದೀಸಿಕೊಳ್ಳಬೇಕೆಂದಿದ್ದೆ
ಈ ಸೀರೆಯನ್ನು 
ನನ್ನವಳಿಗಾಗಿ...
ಖರಿದಿಸಲಿಲ್ಲ!!!
ಕಾರಣವಿಷ್ಟೆ, ಇದರಷ್ಟು
ನುಣುಪು ನಡವು
ನನ್ನವಳದ್ದು ಇಲ್ಲದ್ದಕ್ಕಾಗಿ

ಸಾಲು ಕದ್ದವನ
ಮಾತು ಬಿಡು! ಅವನೇನು
ಭಾವವ ಕದಿಯಬಲ್ಲನೇನು?
ಮನಸ್ಸು ಕದ್ದವಳು
ನೀನು... ಬಾ ಇಲ್ಲಿ
ಉತ್ತರಿಸು, ಈ ವಿರಹದ
ಸೆರಮನೆವಾಸಿಯನ್ನು
ಬಿಡಿಸಿಕೊಂಡು ಹೋಗುವುದು
ಯಾವಾಗ?

ನನ್ನೆದೆಯೆ..
ಕತ್ತಲೆಯ ಕೂಪ!
ನಾನೇಕೆ ಹಚ್ಚಲು
ಹೋಗಲಿ...
ಬೇರೆಯವರಂಗಳದಲ್ಲಿ
ದೀಪ!!

ಇದಲ್ಲವೇನು ಮೋಸ?
ತುಟಿಯಂಚಿನಲ್ಲಿಯೆ.. ತುಂಬಿಟ್ಟು
ಕೊಂಡಿರುವೆಯಲ್ಲ,
ಮಧುರಸ...
ಅರಿವಾಗುತ್ತಿಲ್ಲವೇನು?
ಬಾಯಾರಿ.. ಕುಳಿತಿಹನಿಲ್ಲಿ
ಪ್ರೇಮದಾಸ!

ಕಲ್ಲು ಗೋಡೆಗಳಿಗಾಗಿ
ನಿಮ್ಮ ಮನಸ್ಸುಗಳನ್ನು
ಕಲ್ಲಾಗಿಸಿಕೊಳ್ಳಬೇಡಿ!
ಇಲ್ಲಿ ಯಾವುದು
ಶಾಶ್ವತವಲ್ಲ!! ಇದ್ದ
ನೆಲವನ್ನೆ, 
ಸ್ವರ್ಗವಾಗಿಸಿಕೊಂಡುಬಿಡಿ

ಎಷ್ಟರ ಮೆರದಾಡ್ತಿದಿ ಓಣ್ಯಾಗ
ಮೂಗಿಗೆ ಚುಚ್ಚಿಸಿಕೊಂಡ ದೊಡ್ಡ ಮೂಗುತಿ
ಕೇಳ್ದೊರ ಮುಂದೆಲ್ಲ, 

ಭಾರವಾಗುವುದಿಲ್ಲೇನು?
ಚೆಲುವೆ, ಮೂಗಿಗೆ
ಈ ನತ್ತು!!
ತರದಿದ್ದರೆ ಸಾಕು...
ನಿನ್ನ ಸೌಂದರ್ಯಕ್ಕೆ
ಕುತ್ತು!!

ಪ್ರೀತಿಯೂರಿನಲ್ಲಿ
ನೋವಿಗೆ ಮದ್ದಿಲ್ಲವೆಂದರಿತಿದ್ದರೂ
ಹೆಜ್ಜೆ ಇಟ್ಟೆ!
ಮರಳಲಿ ಹೇಗೆ?
ಅವಳಿಲ್ಲದೆ ಬರಿಗೈಯಲ್ಲಿ!
ಸಾವಾದರು ಬರಬಹುದಲ್ಲ!!!
ಕರೆಯಲೆಂದು, ಅದಕೆ
ಇಲ್ಲಿಯೇ... ಸುಮ್ಮನೆ
ಕುಳಿತುಬಿಟ್ಟೆ!!

ಕಣ್ಣ ಹನಿಗಳಿಗೆ
ಬೆಲೆ ಕಟ್ಟುವರಾರು?
ಅದು ಬರೀ ಉಪ್ಪು!
ಅತಿಯಾಗಿ ನಂಬಿ
ಮೋಸ ಹೋಗುವುದಿದೆಯಲ್ಲ
ಅದು ನಮ್ಮ ತಪ್ಪು!!

ಬಿಟ್ಟು ಹೋಗುವುದಾದರೆ....
ಹೇಳದೆ ಹೊರಟುಬಿಡು!!
ಕಾಯುವುದರಲ್ಲೂ ಒಂಥರಾ
ಸುಖವಿದೆ!
ನಿನಗೇನು ಗೊತ್ತು!!,
ನೀನಿಲ್ಲವೆಂಬ ಸತ್ಯದ
ಜೊತೆ ಬದುಕುವುದರಲ್ಲಿ
ಅನುಭವಿಸಿಕೊಳ್ಳಲಾರದಷ್ಟು
ಯಾತನೆಯಿದೆ!

ನಾವು ದೇವರಿಗೂ
ಬೆಲೆಯನ್ನು ಕಟ್ಟುತ್ತೇವೆ
ಉಡುಗೊರೆಯ 
ಅಂಗಡಿಯಲ್ಲಿ!!
ಸ್ವೀಕರಿಸುವವರು
ಪೂಜಿಸುವವರೊ? 

ಎಡೆಬಿಡದೆ ಸುರಿದು
ಹೋಗಿದೆ ಮಳೆ
ಫಸಲಿಗಿಂತಲೂ ಫಲವತ್ತಾಗಿ
ಬೆಳೆದಿದೆ ಕಳೆ
ಎರಡರ ನಡುವೆ ಸಿಕ್ಕು
ಕೊಳೆತು ಹೋಗುತ್ತಿದೆ
ಬೆಳೆದ ಬೆಳೆ

ಚಂದಿರನಿಗೂ ದಕ್ಕಿತಿಂದು
ಸ್ವಾತಂತ್ರ್ಯ.....
ಮೋಡಗಳ
ಸೆರೆಯಿಂದ!
ಇನ್ನಾದರೂ...
ಸಿಗಬಹುದೇನೊ?
ನಮಗೆಲ್ಲ ಮುಕ್ತಿ
ನೆರೆಯಿಂದ!!!

ಹೇಳಿಕೊಳ್ಳಬೇಕೆಂದಿರುವೆ
ನಿಮ್ಮೆದುರಿಗೊಂದು
ಗುಟ್ಟಿನ ವಿಷಯ!
ಕಾಡುತ್ತಿದೆ...
ಈ ಗುಟ್ಟು, ನಿಮ್ಮೊಳಗೆ
ಗುಟ್ಟಾಗಿ ಉಳಿಯುವುದೆ?
ಎಂಬ ಸಂಶಯ!!!

ಈಗೀಗ ಎಲ್ಲರೂ...
ಕಟ್ಟುತ್ತಿದ್ದಾರೆ
ಬೆಲೆಯನ್ನು!!
ಕಟ್ಟುವ ನೂಲಿಗೂ
ತೊಡುವ ನೂಲಿಗೂ...

ಯಾರಿಗೂ...
ಅರಿವಾಗುತ್ತಿಲ್ಲ
ನಮ್ಮಯ ಗೋಳು!!
ಇನ್ನೂರು ಕೊಟ್ಟರು
ಸಿಗುತ್ತಿಲ್ಲ ಆಳು!!
ಸಿಕ್ಕರೂ...ಪದೆ..ಪದೆ
ಮಳೆಯು ಸುರಿದು
ಮಾಡುತ್ತಿದೆ, ಮೂರಾಬಟ್ಟೆ
ನಮ್ಮೆಲ್ಲ‌ ಒಕ್ಕಲಿಗರ ಬಾಳು!!

ವರೋಪಚಾರ ಅಪರಾಧ!!!
ಅದಕ್ಕಾಗಿ,  ನಿನ್ನನ್ನು ಬಿಟ್ಟು
ಬೇರೇನು... ಬೇಡೆನು
ಚೆಂದುಳ್ಳಿ!!
ಸಂಸಾರ ಸಾಗಿಸಲು
ರಸಿಕತೆಯಾದರು ಬೇಕಲ್ಲವೆ?
ತಡಮಾಡಬೇಡ, ಹೊತ್ಗೊಂಡು 
ಬಾ ಪುಟ್ಟಿ,  ಈರುಳ್ಳಿ!!

ನಿಮ್ಮೊಳಗಿನಷ್ಟು
ಶಾಂತಿಯು ತುಂಬಿಕೊಂಡಿಲ್ಲ
ನನ್ನೆದೆಯಲ್ಲಿ
ಗಾಂಧಿ...
ಆದರೂ....
ವಿನಾಕಾರಣ, ಹಿಂಸಿಸುವ
ನೆನಪುಗಳಿಗೆ ಹಾಡಬೇಕಿದೆ
ನಾಂದಿ...

ನಾನೀಗ
ಬೀಜವಿಲ್ಲದ ಹಣ್ಣಾಗಬೇಕಿದೆ.
ಹಳತುಗಳ ನಡುವೆ
ಸಿಕ್ಕು...‌ಕೊಳೆತು
ಹೋಗುವ ಮುನ್ನ,
ಹೊಸತನಗಳೊಳಗೆ
ಬೆರೆತು ಮತ್ತೆ
ಚಿಗುರಬೇಕೆಂದೆನಿಸಿದೆ.

ಸುಡುವ ಸೂರ್ಯನಿಗೂ
ಕೂಡಿ ಬಂದಿತಿಂದು
ಕಂಕಣದ ಭಾಗ್ಯ!
ನೀಡುವೆ ನೀನೆಂದು
ಒಪ್ಪಿಗೆ, ಕೂಡಿಬರಲು
ನಮ್ಮಿಬ್ಬರಿಗೂ
ಕಂಕಣದ ಸೌಭಾಗ್ಯ!!

ಚು

ಇಡುವ ಹೆಜ್ಜೆಗಳು
ಎಚ್ಚರದಿಂದರಲೆಂದು
ನಾನೇನು ಎಚ್ಚರಿಸುವುದಿಲ್ಲ!!
ಕೊಟ್ಟಿರುವ ಗೆಜ್ಜೆಗಳಲ್ಲಿ
ಲಜ್ಜೆಯನ್ನೇನು
ತುಂಬಿಲ್ಲ!!
ತಿಳಿದಿರಲಿ, ಬದುಕಿನ
ಎಲ್ಲ ತಿರುವುಗಳಲಿ
ನನ್ನಂತವನೆ...ನಿನಗೆ
ಸಿಗುವುದಿಲ್ಲ!!

ಉಸಿರು ತುಂಬಿದವನನ್ನೆ
ಮಾರಿ, ಹೊಟ್ಟೆಯನ್ನು
ತುಂಬಿಸಿಕೊಳ್ಳಬೇಕಿ
ಬಡಪಾಯಿ....!
ಸಂಸಾರಕ್ಕಾಗಿ,
ಎಲ್ಲ ಸುಖಗಳನ್ನು
ಕೊಂದುಕೊಂಡು, ಸಂಪಾದಿಸಬೇಕಿದೆ.. 
ಒಂದೊಂದು
ರೂಪಾಯಿ..!

ನಿ

ನನ್ನ, ನಿನ್ನ ನಡುವಿನ ಸಂಬಂಧಕ್ಕೊಂದು
ಹೆಸರನ್ನು ಊರೆ ಇಟ್ಟು ಮಾತನಾಡಿ,
ಹೊಟ್ಟೆಯ ತುಂಬಿಸಿಕೊಂಡಿತು
ಮಾತನಾಡಲಿಲ್ಲ!!
ಆ ಸಂಜೆಯ ಇಳಿಹೊತ್ತಿನಲ್ಲಿ,
ಕಣ್ಣಂಚಿನ ಕೊನೆಯಲ್ಲಿ ಜಿನುಗುವ
ಹನಿಗಳಿಗೂ ನೀನು
ಉತ್ತರಿಸಲಿಲ್ಲ!!
ಎದೆಯೊಳಗಿನೊಲವು, ಬೆಂದು
ಬೆಂಗಾಡಾಗಿ, ಬಿರುಕು ಬಿಟ್ಟು, ಹನಿ
ಹನಿ ಪ್ರೇಮ ಸಿಂಚನಕಾಗಿ ಕಾದು
ಕುಳಿತಾಗಲೂ ನೀ...
ಉಸಿರೆತ್ತಲಿಲ್ಲ!!
ಮತ್ತೇತಕೆ ಬೇಕು ನಾನು?
ಸಮಯ ಕಳೆಯುವುದಕಾ?
ಕತ್ತಲು ಕರಗಿಸುವುದಕ್ಕಾ?

ನನ್ನೆದೆಯೇನು.. ದುಃಖದ
ಭಂಡಾರವೇನಲ್ಲ!
ಅವುಡುಗಚ್ಚಿ ಎಲ್ಲ ನೋವುಗಳನ್ನು 
ಅದುಮಿಟ್ಟುಕೊಳ್ಳಲು.
ತೋಡಿಕೊಳ್ಳಲೆ? ಹೇಗೆ?
ಮಿಡಿಯುವ ಮನಸ್ಸಿಗಿಂತ, ಆಡಿಕೊಳ್ಳುವ
ತಾಮ್ರದ ಬಾಯಿಗಳೆ ಹೆಚ್ಚು.
ಜಗತ್ತು... ಮೊದಲು ಮನೆಯಲ್ಲಿಯೆ
ಕೂಡಿ ಹಾಕಿ, ಹಿಂಡುತ್ತಿತ್ತು...ಹಿಂಸೆ
ಸಂಕಟಗಳಾರಿಗು ಕಾಣಿಸುತ್ತಿರಲಿಲ್ಲ!
ಈಗ!!! ಸಮಾನತೆಯ ಹೆಸರಿನಲ್ಲಿ ಬಯಲಿಗೆ
ಬಿಟ್ಟು, ಹಗಲಿರುಳು ಬೇಟೆಯಾಡುತ್ತಿದೆ
ಹೂವನ್ನು ಹೊಸಕುವುದು ಇವರಿಗೆ
ಹೊಸತಲ್ಲ! ವಿಧಾನ ಬೇರೆಯಾಗಿದೆಯಷ್ಟೆ!.

ಮ ೫

ಮಂಗಳಮುಖಿ - ೫

ಬಸ್ಸಿನಲ್ಲಿ ಹತ್ತಿ ಕುಳಿತುಕೊಂಡ ಕಲ್ಲವ್ವನಿಗೆ ಲೋಕದ ಪರಿವೆ ಇಲ್ಲದ ಹಾಗಾಗಿ ಹೋಯಿತು, ಬಸ್ ಕಂಡಕ್ಟರ್ ಎರಡೆರಡು ಸಲ ಕೂಗಿ, ಹಣವನ್ನು ಪಡೆದು ಟಿಕೆಟನ್ನು ಕೊಟ್ಟು ಮುನ್ನಡೆದಿದ್ದನು, ಕಲ್ಲವ್ವನ ತಲೆಯಲ್ಲಿ ಅದೆ ಮಾತುಗಳು, ಅವರ ಚೆಲ್ಲಾಟಗಳು, ಹಣವನ್ನು ಕಿತ್ತುಕೊಂಡ ರೀತಿ, ಮಗನು ಅವರ ಸಂಗದಲ್ಲಿ ಇದ್ದದ್ದನ್ನು ಕಂಡು, ಎಡವಿದ ಬೆರಳಿನ ಮೇಲೆ ಕೈ ಜಾರಿ ಬಿದ್ದ ಪಾತ್ರೆಯ ನೀಡುವ ನೋವಿನಷ್ಟೆ ಅಧಿಕ ಸಂಕಟ, ತಳಮಳವುಂಟಾಗಿಬಿಟ್ಟಿತ್ತು ಕಲ್ಲವ್ವನೆದೆಯಲ್ಲಿ.
########
ಸಮಯ ಆಗಲೆ ರಾತ್ರಿ ಹತ್ತೂವರೆ ಎಂದು ಸೂಚಿಸುತ್ತಿತ್ತು, ಕಾಂತಳು ಎಂದಿನಂತೆಯೆ, ಮನೆಯ ಬಾಗಿಲವರೆಗೂ ಇಬ್ಬರು ಯುವಕರ ಜೊತೆಯಲ್ಲಿಯೆ ಬಂದು ನಿಂತಗೊಂಡು ಕ್ಷಣಕಾಲ ಲಲ್ಲೆಯನ್ನು ಹೊಡೆದು, ಒಳಗೆ ಬಂದಳು. ಗೋಡೆಗಾಣಿಸಿಕೊಂಡು ಓಡುವ ಗಡಿಯಾರವನ್ನೆ ನೋಡಿಕೊಂಡು ಕುಳಿತಿದ್ದಂತಹ ಕಲ್ಲವ್ವನತ್ತ ಒಂದು ಉದಾಸೀನತೆಯ ನೋಟವನ್ನು ಬಿರಿ, ಮನೆಯ ಬಾಗಿಲನ್ನು ಮುಚ್ಚಿ, ತನ್ನ ಮಲಗುವ ಕೋಣೆಗೆ ಹೋಗಿ ಮಲಗಿಕೊಂಡುಬಿಟ್ಟಳು.
©©©©©
'ಯವ್ವಾ... ಕಲ್ಲವ್ವ,... ಕಲ್ಲವ್ವ.. ಕಲ್ಲವ್ವಾ... ಯಾರು ಇಲ್ಲನಬೆ ಹಟ್ಯಾಗ, ಎಷ್ಟೊತ್ತ್ ಆತ ನಾ‌ ಮನಿ ಬಾಗಲ್ದಾಗ ನಿಂತ್ಗೊಂಡ ದನಾ ಒದ್ರದಂಗ ಒದ್ರಾಕ್ಹತ್ತೀನಿ, ಒಬ್ರನೂ ಹ್ಞಾಂ ಅನುವಲ್ರು ಹ್ಞೂಂ ಅಂತರ ಅನುವಲ್ರ, ಚಿಗವ್ವಾ, ಬೇ ಕಲ್ಲವ್ವಾ' ಮತ್ತೊಂದೆರಡು ಸಾರಿ ಕೂಗಿದಳು ಹಿಂದಿನ ಮನೆಯ ಶಾಂತವ್ವ.
ಶಾಂತವ್ವಳ ಕೂಗಿಗೆ ಎಚ್ಚರಕೊಂಡ ಕಾಂತಳು, ಎದ್ದು ಹಾಳು ಮುಖದಲ್ಲೆ ಹೊರಗೆ ಬಂದಳು. ಸಮಯ ನೋಡಿಕೊಂಡಾಗ ಏಳು ಇಪ್ಪತ್ತಾಗಿತ್ತು
'ಹ್ಞೂಂ... ಏನ್ ಬೇಕಿತ್ತವ್ವ ಬೆಳ್ಗ ಬೆಳ್ಗೆನ ಬಂದ ನಿದ್ದಿ ಹಾಳ ಮಾಡಿದಿ' ಕಣ್ಣನ್ನು ತಿಕ್ಕಿಕೊಳ್ಳುತ್ತಾ, ಮೈಯನ್ನು ಮುರಿಯುತ್ತಾ,
ಕಣ್ಣನ್ನು ತಿಕ್ಕಿಕೊಳ್ಳುತ್ತಲೆ ಕೇಳಿದಳು.
'ಏನಿಲ್ಲ, ಗಿಂಡಿ ಹಾಲ್ ಬೇಕಾಗಿತ್ತ್ ಆವಾಗ್ಲಿಂದ ಕರಿಯಾಕ್ಹತ್ತಿನಿ ಯಾರು ಹ್ಞೂಂ ಅನುವಲ್ರಿ, ಹ್ಞಾಂ ಅನುವಲ್ರಿ'
ಕಾಂತಾಳು ಇನ್ನೇನೊ ಹೇಳಬೇಕೆನ್ನುವಷ್ಟರಲ್ಲಿ ಎದುರು ಮನೆ ಬಸಲಿಂಗ ಓಡುತ್ತಾ ಬಂದು ಎದುಸಿರನ್ನು ಬಿಡುತ್ತಾ, 'ನಿಮ್ಮವ್ವ.....
'ಹ್ಞೂಂ.. ನಮ್ಮವ್ವ?'
'ನಿಮ್ಮವ್ವ... ತ್ವಾಟದಾಗ ಹೆಣ ಆಗ್ಯಾಳ..' 
'ಏನಂದಿ..' ಅಂತ ಪ್ರಶ್ನೆ ಕೇಳಿದ ಕಾಂತಾಳು ಬಸಲಿಂಗನ ಮರುತ್ತರಕ್ಕು ಕಾಯದೆ, ತೋಟದ ಕಡೆಗೆ ಓಟಕಿತ್ತಳು,
###
ಹಳ್ಳಿಗೆ ಹಳ್ಳಿಯೆ ಜಮಾಯಿಸಿಬಿಟ್ಟಿತ್ತಾಗಲೆ, ಕಲ್ಲವ್ವನ ಹೆಣದ ಸುತ್ತ, ಒಂದೆ ಉಸಿರಿನಲ್ಲಿ ಓಡಿಬಂದ ಕಾಂತಳು, ಜನರನ್ನು ತಳ್ಳುತ್ತಾ ತಾಯಿಯ ಹೆಣದ ಮುಂದೆ ಬಂದು ನಿಂತಳು. ಕಲ್ಲವ್ವ ಹೊಲದಲ್ಲಿ ಬೊರಲಾಗಿ ಬಿದ್ದಿದ್ದಳು, ಎಡಗೈಯಲ್ಲಿ ದನಕ್ಕೆಂದು ಕೊಯ್ದುಕೊಂಡಿದ್ದ ಕಸ, ಬಲಗೈಯಲ್ಲಿ ಬಲವಾಗಿ ಹಿಡಿದುಕೊಂಡಿದ್ದ ಕುಡಗೋಲು ಎರಡರಲ್ಲಿ ಒಂದನ್ನು ಕೈ ಬಿಟ್ಟಿರಲಿಲ್ಲ. ಆಗ ಅಲ್ಲೊಂದು, ಇಲ್ಲೊಂದು ಮಾತುಗಳು ಕೇಳಿ ಬರಲಾರಂಭಿಸಿದವು
'ಎಂಥ ಹೆಣ್ಮಗ್ಳರಿ, ನಾಕಾಳ ಗಂಡಿನ ಕೆಲ್ಸಾನ ಒಬ್ಬಾಕಿ ನಿಗ್ಸ್ತಿದ್ಳ, ಹಗ್ಲೆನು, ರಾತ್ರೆನು ಎರ್ಡು ಒಂದ ಮಾಡ್ಬಿಡ್ತಿದ್ಲು ಹೊಲ್ದಾಗ ದಗ್ದ ಅದಾವಂತಂದ್ರ,'
'ಹೌದ್ರಿ, ಅದ್ಕ ದ್ಯಾವ್ರ ದೇವ್ರಂತವ್ರನ್ನ ಜಲ್ದಿ ತನ್ ಹತ್ರಕ್ಕ ಕರ್ಸಿಕೊಂಡ ಬಿಡ್ತಾನ ನೋಡ್ರಿ, ಅಲ್ಲ,.. ನನ್ವು ಮೂರ ಮೊಮ್ಮಕ್ಳನ್ನು ಅದೆಷ್ಟು ಹಚ್ಗೊಂಡಿದ್ಳು ಅಂತೀನಿ, ಉಂಡ್ರು ಬಿಟ್ರು ಎಲ್ಲಾ ಈಕಿ ಮನಿಯಾಗ, ಇನ್ನೀಕಿ ಇಲ್ಲ ಅನ್ನೊ ಸುದ್ದಿ ಅವಕ್ಕೇನರ ಗೊತ್ತಾತಂತಂದ್ರ ಏನ್ಮಾಡ್ತಾವೊ ಏನೊ?'
ಎಲ್ಲರೂ ಕಲ್ಲವ್ವನ ಗುಣಗಾನವನ್ನು ಮಾಡುವವರೆ, ಕೊನೆಗೆ ಊರಿನ ಹಿರಿಯರು ಬಂದು ಬಂಡಿಯಲ್ಲಿ ಹೆಣವನ್ನು ಹಾಕಿಕೊಂಡು ಬಂದು ಶಾಸ್ತ್ರಗಳನ್ನು ಮುಗಿಸಿಕೊಂಡು, ಮರಳಿ ತೋಟಕ್ಕೆ ಕಲ್ಲವ್ವನ ಹೆಣವನ್ನು ತಂದುಕೊಂಡು, ತೋಟದ ಮದ್ಯದಲ್ಲಿ ಗುಂಡಿಯನ್ನು ತೋಡಿ, ಹುಗಿದು,‌ ಎಲ್ಲರೂ ಕೊನೆಯದಾಗಿ ಕೈ ಮುಗಿದು ಊರಿಗೆ ಮರಳಿದರು.
##
ವಾರ ಕಳೆಯಿತು, ಕಲ್ಲವ್ವನನ್ನು ಕ್ರಮೇಣವಾಗಿ ಮರೆತ ಜನರು ತಮ್ಮ ನಿತ್ಯದ ಬದುಕಿನಲ್ಲಿ ಕಳೆದುಹೋಗಿದ್ದರು. ಮಣ್ಣ ಗರ್ಭದಲ್ಲಿ ನಿಶ್ಚಿಂತೆಯಾಗಿ ಮಲಗಿದ್ದ ಕಲ್ಲವ್ವನ ಹುಗಿದ ಜಾಗದಲ್ಲೊಂದು ಕಟ್ಟೆಯನ್ನು ಕಟ್ಟಿ ಹೂವಿನ ಹಾರಗಳಿಂದ ಸಿಂಗರಿಸಿದ್ದರು. ಅವಳ ನೆನಪಿಗಾಗಿ ಒಂದು ಗಿಡವನ್ನು ನೆಟ್ಟಿದ್ದರು. ಕಾಂತಾಳ ಮನಸ್ಸು ತಾಯಿ ತೀರಿಕೊಂಡಾಗಿನಿಂದ ಬಹಳಷ್ಟು ನೊಂದುಕೊಂಡಿತ್ತು, ಯಾರ ಸಂಪರ್ಕಕ್ಕೂ ಸಿಗದೆ, ಕಲ್ಲವ್ವನ ಕಟ್ಟೆಯ ಪಕ್ಕದಲ್ಲೆ ಕುಳಿತಿರುತ್ತಿದ್ದಳು. 
ಮಧ್ಯಾಹ್ನ ಮೂರರ ಹೊತ್ತು,  ಸಣ್ಣಪ್ಪನ ಮಡದಿ ಶಾಂತವ್ವಳು ತಲೆ ತುಂಬಾ ಸೇರಗನ್ನು ಹೊದ್ದುಕೊಂಡು ಕೈಯಲ್ಲಿ ಬುತ್ತಿಯನ್ನು ಕಟ್ಟಿಕೊಂಡು ಕಾಂತಾಳ ಎದುರು ಬಂದು ನಿಂತುಗೊಂಡಳು. ಬಂದವರನ್ನು ಕಣ್ಣೆತ್ತಿ ನೋಡಿದ ಕಾಂತಳು 
'ನೀವ್ ಯಾಕ ಬರಾಕ ಹೋಗಿದ್ರಿ ಇಷ್ಟ ಬಿಸ್ಲಾಗ'
'ಎರ್ಡ ದಿನ್ದ ಹೊತ್ತಾತ್ ಹೊಟ್ಟಿಗೆ ಸರಿಯಾಗಿ ಕೂಳು ನೀರಿಲ್ಲ, ಅಂತಾದ್ರಾಗ ಸುಡೊ ಬಿಸ್ಲಾಗ ಇಲ್ಲೆ ಹಿಂಗ ಬಂದ ಕುಂತ್ಗೊಂಡ್ರ ಹ್ಯಾಂಗ?'
'ಎರ್ಡ ದಿನ ಕೂಳ ತಿನ್ದಿದ್ರ ನಾನೇನ ಸಾಯೋದಿಲ್ಲಾಳ್ಬೆ'
'ಮುಚ್ಚ ಬಾಯಿ ಭಾಡೆನ ಮಗ್ನ, ನನ್ಗ ಎದ್ರುತ್ರ ಕೊಡ್ತಿ, ನಿಮ್ಮವ್ವ ಇದ್ದಿದ್ರ ನಿ ಹಿಂಗ ಇರಾಕ ಬಿಡ್ತಿದ್ಲನ ನಿಂಗ' ಗದರಿಸಿದಳು ತುಸು ಗಡಸಿನ ಧನಿಯಲ್ಲಿ.
ತಾಯಿಯ ಹಳೆಯ ನೆನಪುಗಳೆಲ್ಲ ಉಕ್ಕಿಬಂದು, ಎರಡು ಕೈಯಿಂದ ಮುಖವನ್ನು ಮುಚ್ಚಿಕೊಂಡು ಗಳಗಳನೆ ಅಳತೊಡಗಿದನು.
'ಸಾಕ್ಬಿಡು ಅತ್ತಿದ್ದ, ಹ್ವಾದ ಜೀವ ಏನ್ ಹೊಳ್ಳಿ ಬರ್ತದನು, ದೇವ್ರಂತಾಕಿ, ದೇವ್ರ ಹಂತೇಕನ......' ಮಾತು ಗಂಟಲದಲ್ಲೆ ಸಿಕ್ಕಿ ಹಾಕಿಕೊಂಡಿತು ಶಾಂತವ್ವಳಿಗೆ, ಗಂಟಲು ಕಟ್ಟಿ ಉಮ್ಮಳಿಸಿ ಬಂದ ಎದೆಯ ದುಃಖವನ್ನು ಸೀರೆ ಸೇರಗಂಚಿನಿಂದ ಬಾಯನ್ನು ಮುಚ್ಚಿಕೊಂಡು ಕಣ್ಣೀರಾದಳು.
ಕಾಂತಳು ಶಾಂತವ್ವಳು ದುಃಖಿಸುವ ಪರಿಯನ್ನು ಕಂಡು ಎದ್ದು ಬಂದು ಅವಳ ಕಾಲನ್ನು ಹಿಡಿದುಕೊಂಡು ಮತ್ತಷ್ಟು ಜೋರಾಗಿ ಅಳಲಾರಂಭಿಸಿದಳು. ಶಾಂತವ್ವಳು ಅವಳ ತೋಳನ್ನು  ಹಿಡಿದು ಎಬ್ಬಿಸಿಕೊಂಡು, ಸಮಾಧಾನ ಮಾಡಿ, ಅಲ್ಲೆ ತೋಟದ ಬದುವಿನಲ್ಲಿದ್ದ ಬೇವಿನಗಿಡದ ನೆರಳಿಗೆ ಕರೆ ತಂದು, ಕುಡಿಯಲಿಕ್ಕೆ ನೀರನ್ನು ಕೊಟ್ಟು, ಬುತ್ತಿಯ ಗಂಟನ್ನು ಬಿಚ್ಚಿ, ತಾಟಿನಲ್ಲಿ ಅನ್ನವನ್ನು ನೀಡಿ ಕೊಟ್ಟಳು. ಒಂದೆರಡು ತುತ್ತುಗಳನ್ನು ಉಂಡ ನಂತರ ಊಟ ಸೇರದೆಂದು ತಟ್ಟೆಯನ್ನು ಕೆಳಗಿಟ್ಟು ಕೈ ತೊಳೆದುಕೊಂಡು ಬಿಟ್ಟಳು ಕಾಂತ. ಕ್ಷಣಕಾಲ ಇಬ್ಬರು ಮೌನವಾಗಿದ್ದರು, ಆಗಾಗ ಬೀಸುವ ಸುಂಯ್ಯ ಎಂಬ ಗಾಳಿ, ಗುಂಯ್ಯ ಎಂದು ತಿಪ್ಪೆಗುಂಡಿಯಿಂದ ಹಾರಾಡಿ ಬರುತ್ತಿದ್ದ ನೊಣಗಳು, ನಿಮ್ಮದು ಆಗಿದ್ದರೆ ನನ್ನ ಪಾಲಿನದ್ದು ನೀಡಿಬಿಡಿ ಎಂದು ಅವರಿಬ್ಬರ ಎದುರಿನಲ್ಲಿ ಬಾಲವನ್ನು ಅಲ್ಲಾಡಿಸಿಕೊಂಡು ನಿಂತಿದ್ದ ಪಕ್ಕದ ತೋಟದ ಚಂದಪ್ಪನ ನಾಯಿ, ಚೆಲ್ಲಿದ ಅನ್ನದಗಳನ್ನು ತನ್ನ ಗರ್ಭವ ಸೇರಿಸಿಕೊಳ್ಳುವ ಕಾತುರದಲ್ಲಿ ಕಾ...ಕಾ.. ಎಂದು ಒಂದೆ ಸಮನೆ ಒದರುತ್ತಿದ್ದ ಕಾಗೆಗಳ ಗುಂಪು, ಇವಾವು ಅವರಿಬ್ಬರ ಅರಿವಿಗೆ ಬಂದಿಲ್ಲವೇನೊವೆಂಬಂತೆ, ಶಿಲ್ಪಿಯು ಕೆತ್ತಿಟ್ಟ ಮಾತಿಲ್ಲದ ಮೂರ್ತಿಗಳಂತೆ ಕುಳಿತುಬಿಟ್ಟಿದ್ದರು. ಸಮಯ ಕಳೆಯುತ್ತಿತ್ತು, ನಾಯಿಯು ಹಸಿವನ್ನು ತಾಳಲಾರದೆ, ಶಾಂತವ್ವಳ ಪಕ್ಕದಲ್ಲಿದ್ದ ಬುತ್ತಿಯ ಚೀಲಕ್ಕೆ ಬಾಯಿಯನ್ನು ಹಾಕಿ ಓಟ ಕಿತ್ತಿತು, ಮರದ ಕೊಂಬೆಯ ಮೇಲೆ ಕುಳಿತ ಕಾಗೆಗಳೆಲ್ಲ ನಾಯಿ ಹಿಂದೆ ಹಾರಿ ಹೋದವು. ಆಗ ಎಚ್ಚೆಂತಹ ಕಾಂತಳು, 'ಅಯ್ಯೊ, ಆ ನಾಯಿ ನಮ್ಮ ಬುತ್ತಿಯನ್ನು ಒಯ್ಯುತ್ತಿದೆ,' ಎಂದು ಎದ್ದು ಅದನ್ನು ಹಿಂಬಾಲಿಸಲು ಮುಂದಾದನು. ಆಗ ಶಾಂತವ್ವಳು ಅವನ ಕೈಯನ್ನು ಹಿಡಿದು ಕುಳ್ಳರಿಸಿದಳು.
'ಕೈ ಬಿಡ್ಬೆ ಯವ್ವಾ, ಆ ನಾಯಿ ಬುತ್ತಿ ಕಸ್ಕೊಂಡ ಹೊಂಟೈತಿ
ಹೊಡ್ದ ಕಿತ್ಗೊಂಡ ಬರ್ತಿನಿ'
'ಬ್ಯಾಡೆಪ್ಪ, ಹೋದ್ರ ಹೋತ್ ಬಿಡು ಅತ್ಲಾಗ'
'ಹಂಗಂದ್ರ ಹ್ಯಾಂಗ್ಬೆ'
'ಒಂದ ಕಳ್ಕೊಂಡ್ರ ಏನಾತ ಮತ್ತೊಂದ ಸಿಕ್ತಲ್ಲ'
ಹುಬ್ಬನ್ನು ಗಂಟಿಕ್ಕಿಕೊಂಡು ಏನು ಎನ್ನುವ ದೃಷ್ಠಿಯಲ್ಲಿ ಶಾಂತವ್ವಳನ್ನು ನೋಡಿದಳು ಕಾಂತಳು.
'ಗೊತ್ತಾಗ್ಲಿಲ್ಲೇನ?'
ಇಲ್ಲವೆಂದು ತಲೆಯಾಡಿಸಿದಳು.
' ನೀನ್ ಮತ್ತ್ ನನ್ ಹೊಳ್ಳಿ ಅವ್ವಾ ಅಂತಂದ ಬಾಯ್ತುಂಬಾ ಕರ್ದೆಲ್ಲ, ಇದಕ್ಕಿಂತ ಮತ್ತೀನೆನ ಬೇಕಿತ್ತ, ತಮ್ಮ'
ಮತ್ತೊಮ್ಮೆ ಎದೆಯೊಳಗಿನ ದುಃಖವೊ, ಮಾಡಿದ ತಪ್ಪಿನ ಅರಿವಾದಂತಾಗಿ ಗಳಗಳನೆ ಅಳತೊಡಗಿದಳು ಕಾಂತಳು.
'ಹೋಗ್ಲಿ ಬಿಡು ಆದದ್ದಾತು, ಮತ್ತ್ ಅದನ್ನ ಯಾಕ ಮನಸ್ನ್ಯಾಗ
ಇಟ್ಗೊಂಡ ಮರ್ಗತಿದಿ'
'ತಪ್ಪಾತ್ಬೆ ಯವ್ವಾ, ಆವತ್ತ ನಿಮ್ಗ ನಾನ ಅನ್ಬಾರ್ದ ಅಂದ ಬಿಟ್ನಿ'
'ಹುಚ್ಚಪ್ಪ, ಮಕ್ಳ ತಪ್ಪ ಮಾಡ್ತಾವಂತಂದು ದೊಡ್ಡವ್ರು ಮಾಡೊಕಾಗ್ತದನು, ಬಾ.. ಕುಂದರಿಲ್ಲೆ' ಹಿಡಿದಿದ್ದ ಕೈಯನ್ನು ಎಳೆದು ಪಕ್ಕದಲ್ಲಿ ಕುಳ್ಳರಿಸಿಕೊಂಡಳು.
'ಹೌದ್ವಾ.. ನಾ ದೊಡ್ಡ ತಪ್ಪ ಮಾಡ್ಬಿಟ್ನಿ, ಅಲ್ಬೆ ಆ ಬುತ್ತಿನರ ತಗೊಂಡ ಬರ್ತಿನ ಹೋಗಿ' ಮತ್ತೆ ಎಳಲನುವಾದಳು.