Sunday, May 24, 2020

ಶಾಯರಿಗಳು

ಅವಳಿಗಿನ್ನೂ...
ನನ್ನಮೇಲದಷ್ಟು
ಕೋಪವಿರಬಹುದು
ಸಾಕಿ....
ಮದುವೆಯ
ಮೊದಲ ರಾತ್ರಿಯಲ್ಲಿ
ಚೂರಾದ ಬಳೆಗಳನ್ನು
ತಂದು.... ನನ್ನ ಗೋರಿಯ
ಮೇಲೆ ಚೆಲ್ಲಿರುವಳಲ್ಲ!!

ಚುಟುಕುಗಳು


ಭಾರವಾಗುವುದಿಲ್ಲೇನು?
ಚೆಲುವೆ, ಮೂಗಿಗೆ
ಈ ನತ್ತು!!
ತರದಿದ್ದರೆ ಸಾಕು...
ನಿನ್ನ ಸೌಂದರ್ಯಕ್ಕೆ
ಕುತ್ತು!!

ಚುಟುಕು

ನನ್ನೊಳಗಿನ ಬರಹಗಾರ
ಮಲಗಿಕೊಂಡಿದ್ದಾನೆ.
ಸತ್ತು ಹೋಗಿಲ್ಲ!
ಲೇಖನಿಯೊಳಗಿನ
'ಶಾಯಿ' ಖಾಲಿಯಾಗಿದೆಯೆ
ಹೊರತು, ನಿಬ್ಬಿನ
ಹರಿತವಿನ್ನು
ಕಡಿಮೆಯಾಗಿಲ್ಲ!

Monday, May 18, 2020

ಹಾಯ್ಕು ೨೦೧-೨೫೦

ಇಂದು ಅವರ
ಹುಟ್ಟು ಹಬ್ಬ.
ಓ!!! ಅವರಿನ್ನೂ... ಬದುಕಿದ್ದಾರ!

Tuesday, April 28, 2020

ಕಥೆ-

'ಲೆ ಹಂಸಿ..., ಹಂಸಿ' ಎರಡು ಸಾರಿ ಮೆತ್ತಗೆ ಕೂಗಿದಳು ಮನೆಯ ಆವರಣದಲ್ಲಿ ಕುಳಿತುಕೊಂಡಿದ್ದಂತಹ  ನೀಲವ್ವ, ಅವಳು ಬರಲಿಲ್ಲ ಈ ಸರ್ತಿ ಬೀದಿಗೂ ಕೇಳುವ ಹಾಗೆ ಚೀರಿ ಕರೆದಳು'ಲೇ ಹಂಸಿ' ಅಷ್ಟೇ ಈ ಸಲ ಮಾತ್ರ ಒಂದೆ ಕೂಗಿಗೆ ಹೊರಗಡೆ ಬಂದಿತ್ತು ಆಕೃತಿ ಆದರೆ ಇದು ಬೇರೆ. ಅಂದರೆ ಹಂಸಿಯ ಮಮ್ಮಿ. 'ಏನತ್ತೆ‌ ಹೀಗೆ ಮನೆಯ ಮುಂದೆ ಕುಳುತುಕೊಂಡು ಹೀಗೆ ಕೂಗಿದರೆ ಹೇಗೆ? ಅದು ಕರೆಯುವುದಾದರು ಹೇಗೆ ಅವಳ ಹೆಸರು ಹಂಸಿಕಾ ಮೊಮ್ಮಗಳ ಹೆಸರನ್ನು ಚೆನ್ನಾಗಿ ಕರೆಯೊದಿಕ್ಕೆ ಬರೋದಿಲ್ವಾ ನಿಮ್ಗೆ, ನಾಳೆ ಅವಳ ಪ್ರೆಂಡ್ಸೆಲ್ಲ ಹಾಗೆ ಕರೆಯುವುದಿಲ್ಲವಾ? ಹಂಸಿ ಅಂತಾ ಕರೆದರೆ ಅವಳಿಗೆ ಎಷ್ಟೊಂದು ನೋವಾಗುತ್ತದೆ ಗೊತ್ತಿಲ್ಲನ ನಿಮ್ಗ ಆಕಿ ಗೆಳ್ತೆರೆಲ್ಲ
ನಾಳೆ ಹಂಗಾ ಕರೆಕ ಹತ್ತಿದ್ರ ಆಕಿ ಅತ್ಗೊಂತ ಮನಿಗ ಬರ್ತಾಳ ಮತ್ತಕಿನ ಸಮಾಧಾನ ಮಾಡೋದ ಎಷ್ಟ ಕಷ್ಟ ಐತಂದ ನಿಮ್ಗೂ ಗೊತ್ತೈತಿ.
'ಅಲ್ವಾ, ನಾನು ಮೊದ್ಲಾಕ ಮೆತ್ಗ ಕರ್ದ್ನೆಲ್ಬೆ ಓ ಅನ್ಲಿಲ್ಲ ಅದ್ಕ ಚೂರ ಜೋರಾಗಿ ಕರ್ದ್ನಿ'
'ಏನ್ ಬೇಕಾಗಿತ್ತ ಹೇಳ್ರಿ ' ಸಿಡಿಮಿಡಿಯಲ್ಲಿ ಕೇಳಿದಳು ಸೊಸೆ ಪಲ್ಲವಿ.
'ಟೈಂ ಎಷ್ಟಾತವ?'
'ಐದ್ಸಲ ಆತೀಗ ಕೇಳಾಕ ಹತ್ತ್ ಏನ್ಮಾಡ್ತಿರಿ ಟೈಂ ತಗೊಂಡು, ಯಾಕ? ಯಾರಾರ ಬರೋರ ಅದಾರನು ಮತ್ತ ನಿಮ್ಮ ಊರಿಂದ' ಕೊಂಕು ನುಡಿಯಲ್ಲಿ ಕೇಳಿದಳು.
'ಹಂಗೆನಿಲ್ಲವ, ನಿಮ್ಮಾಂವ ಇಲ್ಲೆ ಎರ್ಡ ಹೆಜ್ಜಿ ಹೋಗಿ ಬರ್ತಿನಂತಂದ ಹೋದವ್ರು ಇನ್ನ ಬಂದಿಲ್ಲ ಅದ್ಕ ಕೇಳಿದ್ನವ'
'ಹ್ಞೂಂ... ಇವ್ರೊಬ್ರು ಮಾಡಿದ್ನ ತಿಂದ ಕುಂದ್ರಲಾರ್ದನ ಇಂತ ದೊಡ್ಡ ಊರಾಗ ಅಡ್ಯಾಡಕ ಹೋಗ್ಯಾರನು ಅದು ಈ ಮೆಡಿಸನ್ ಸಿಗಲಾರ್ದ ರೋಗ ಬಂದಂತ ಟೈಂನ್ಯಾಗ'
ಈ ಸಲ ಕಲ್ಲವ್ವನ ಎದಿ ಝಲ್ ಎಂದಿತ್ತು ರೋಗದ ಮಾತನ್ನು ಕೇಳಿ
'ಯವ್ವ, ಮಗ್ಗರ ಒಂಚೂರು ಪೋನ ಮಾಡ್ವಾ ಎಲ್ಲೆದನ ಅನ್ನೊದರ ಹುಡ್ಕೊಂಡ ಬರ್ತಾನ ಬರೊ ದಾರ್ಯಾಗ' 
'ಅಯ್ಯ.. ಅವ್ರಿಗೆ ಆಫೀಸ್ನಾನ ಕೆಲಸ ಮಾಡಿ ಮಾಡಿ ಸುಸ್ತಾಗಿ ಬರ್ತಿರ್ತಾರ ಅಂತದ್ರಾಗ ಈ ತಲಿನೋವೊಂದನ್ನು ಅವ್ರಗೆ ಪೋನ್ ಮಾಡಿ ಹೇಳ್ಲೆನು?, ಬರ್ತಾರ ತಗೋರಿ ಇನ್ನ ಟೈಮ್ ರ ಎಷ್ಟ ಆಗೈತಿ, ಊಟದ ಹೊತ್ತಿಗೆ ಬಂದ್ರ ಸಾಕಾಗೈತಿ '
ಕಲ್ಲವ್ವನ ಮರುಮಾತಿಗೂ ಕಾಯದೆ ಮನೆಯೊಳಗೆ ನಡೆದು ದಪ್ಪೆಂದು ಬಾಗಿಲನ್ನು ಹಾಕಿಕೊಂಡಳು. 
ಸೊಸೆಯ ಈ ನಡೆಯಿಂದ ಹೊಟ್ಟೆಯಲ್ಲಿ ಖಾರ ಕಲಿಸಿದಷ್ಟು ಸಂಕಟಗೊಂಡು, ಉಕ್ಕಿ ಬರುವ ದುಃಖವನ್ನು ನುಂಗಿಕೊಂಡು ಎದೆಯ ಮೇಲಿನ ರವಿಕೆಯಿಂದ ಕಂಚಿಯನ್ನು ತೆಗೆದು ಎರಡೆಲೆ ಅಂಬಾಡಿ ಅಡಕೆ, ಕಾಚು ಸುಣ್ಣವನ್ನು ಸವರಿ ಬಾಯಲ್ಲಿ ಹಾಕಿಕೊಂಡು ಕುಳಿತುಕೊಂಡಳು ಗೇಟನ್ನೆ ದಿಟ್ಟಿಸುತ್ತಾ.

ಮತ್ತರ್ದ ಗಂಟೆ ಕಳೆಯಿತು, ಎಂದಿನಂತೆ ಬರುವ ಮಗನು ಇವತ್ತು ಸಮಯಕ್ಕೆ ಸರಿಯಾಗಿ ಬಂದಿರಲಿಲ್ಲ, ಬಾಯೊಳಗೆ ಹಾಕಿಕೊಂಡಿದ್ದಂತಹ ಎಲೆ ಅಡಿಕೆ ಖಾಲಿಯಾಗಿತ್ತು, ಚಡಪಡಿಕೆ ಮತ್ತಷ್ಟು ಶುರುವಾಗಿತ್ತು. ಈ ಸಲ ಮಾತ್ರ ತಡೆದುಕೊಳ್ಳಲಾಗಲಿಲ್ಲ ನಿಧಾನವಾಗಿ ನೆಲದ ಮೇಲೆ ಕೈಯೂರಿ ಎದ್ದು ಮನೆಯೊಳಗೆ ಹೋದಳು. ಪಲ್ಲವಿ ಅಡುಗೆ ಮನೆಯಲ್ಲಿ ಏನೊ ತಯಾರಿಯನ್ನು ಮಾಡುತ್ತಿದ್ದಳು ಬಹಳಷ್ಟ ಹಡಾಹುಡಿಯಿಂದ ಕೂಡಿದ್ದಳು. ಮೊಮ್ಮಗಳು ಹನ್ಸೀಕಾ ಟಿ.ವಿ.ಯೊಳಗಿನ ಕಾರ್ಟೋನ್ ನನ್ನು ನೋಡುತ್ತಾ ಕುಳಿತುಕೊಂಡಿದ್ದಳು. ಅಡುಗೆ ಮನೆಯ ಬಾಗಿಲ ಹತ್ತಿರ ಹೋಗಿ 'ಯವ್ವಾ,?' ಎಂದು ಕೂಗಿದಳು ಮೆತ್ತಗಿನ ಧನಿಯಲ್ಲಿ.
ಪಲ್ಲವಿಗೆ ಅತ್ತೆ ಕೂಗಿದ್ದು ಕೇಳಿಸದಾಗಿತ್ತು, ಕೆಲಸದ ಧಾವಂತದಲ್ಲಿ. ಈ ಸಲ ಮತ್ತೊಮ್ಮೆ ಚೂರು ಜೋರಾಗಿ ಕೂಗಿದಳು. ಅತ್ತೆ ಕರೆದದ್ದಕ್ಕೆ ಸಿಡಿಮಿಡಿಗೊಂಡ ಪಲ್ಲವಿ
'ಏನ್ರಿ ಅತ್ತೇರ? ಭಾಳ ಕಾಟ ಆತಲ್ಲ ನಿಮ್ದು, ಒಂದಿಷ್ಟ ನೆಮ್ದಿಯಾಗಿ ಕೆಲ್ಸ ಮಾಡಾಕನು ಬಿಡೊದಿಲ್ಲ ನೋಡ ನೀವು'
ಏನೊ ಹೇಳಲು ಮುಂದಾದ ಕಲ್ಲವ್ವನಿಗೆ ಮನೆಯ ಕಂಪೌಂಡಿನ ಗೇಟು ತೆರೆದ ಸದ್ದು ಕಿವಿಗೆ ಬಿದ್ದಿತು. ಒಂದೆ ಉಸಿರಿನಲ್ಲಿ ಮನೆಯಿಂದಾಚೆ ಅವಸರಿಸಿ ಹೊರ ಬಂದಿದ್ದಳು.
ಮಗ ಶ್ರೀಕಾಂತ ಗೇಟನ್ನು ತೆಗೆದು ಬೈಕನ್ನು ಕಂಪೌಂಡಿನ ಒಳಗಡೆ ಒತ್ತಿಕೊಂಡು ಬರುತ್ತಿದ್ದನು. ಮಗ ಬಂದಿದ್ದನ್ನು ಕಂಡು ಸ್ವಲ್ಪ ಧ್ಯರ್ಯ ಬಂದಂತಾಗಿ ಅವನ ಹತ್ತಿರ ಹೋದಳು ಕಲ್ಲವ್ವ.
ಕಲ್ಲವ್ವಳ ಹಿಂದೆಯೆ ಸೊಸೆ ಪಲ್ಲವಿನು ಬಂದಿದ್ದಳು. ಅತ್ತೆ ಮಾತನಾಡುವ ಮುನ್ನವೆ ಇವಳು ಶುರುವಿಟ್ಟುಕೊಂಡಳು. 'ಏನ್ರೀ ಎಷ್ಟ ಲೇಟಾಗಿ ಬಂದ್ರೆಲ್ಲ ಇವತ್ತ, ನಾಳೆ ಏನೈತಂದ ಗೊತ್ತಿಲ್ಲನ ನಿಮ್ಗ ಇಷ್ಟೊತ್ತಾಗಿ ಬಂದ್ರ ಕೆಲ್ಸ ಹ್ಯಾಂಗ ಮಾಡೋದ, ಕಿರಾಣಿ ಅಂಗಡಿಗೆ ಹೋಗಿ ಸಾಮಾನೆಲ್ಲ ತರೋದ ಯಾವಾಗ, ನಾ ರೆಡಿ ಮಾಡ್ಕೊಳ್ಳದ' ಅಂತವಳ ಬಾಯೊಳಗಿನ ಮಾತನ್ನು ಶ್ರೀಕಾಂತ ಮಾತು ತುಂಡರಿಸಿಬಿಟ್ಟಿತು.
'ಸಾಕು ಸುಮ್ನಿರ್ತಿಯನು ಒಂದಿಟು. ಕಣ್ಗೆ ಕಾಣ್ಸುವಲ್ದ ನಿಂಗ ಗಾಡಿ ಗಾಲಿ ಪಂಕ್ಚರ್ ಆಗಿದ್ದು, ಅರ್ಧ ದಾರಿಲಿಂದ ಹೆಣಾ‌ನ ಹೊತ್ಗಂಡ ಬಂದಂಗ ಒತ್ಗೊಂಡ ಬಂದೀನಿ, ದಾರ್ಯ್ಯಾಗಿದ್ದ ಎರ್ಡ ಪಂಕ್ಚರ್ ಅಂಗಡಿನು ಬಾಗ್ಲಾ ಹಾಕ್ಯವು ಈ ಸೋಂಕಿನ ಕಾಟಕ್ಕ' ಸಿಡುಕಿಲೆ ನುಡಿದನು. ಗಾಡಿಯನ್ನು ತಳ್ಳಿಕೊಂಡು ಬಂದಿದ್ದರಿಂದ ಮೈಯೆಲ್ಲಾ ಬೆವತು ಹಾಕಿಕೊಂಡ ಶರ್ಟ್ ಬೆವರಿನಲ್ಲಿಯೆ ಮಿಂದು ಹೋಗಿತ್ತು. 
'ನಿಮ್ಮಪ್ಪ ಕೊಡೊದ ಕೊಡ್ಸಿದ ಟೂಬಲೆಸ್ ಟೈಯರ್ ಇರೋ ಗಾಡಿನರ ಕೊಡ್ಸದ ಬಿಟ್ಕೊಟ್ಟು ಇಂಥ ಡಗ್ಗಾ ಗಾಡಿ ಕೊಡ್ಸ್ಯಾನ'
'ಹ್ಞೂಂ.... ಕೊಟ್ಟಿದ್ದನ್ನ ಚನ್ನಾಗಿ ಇಟ್ಗೊಳ್ಳಾಕ ಬರೋದಿಲ್ಲ ಮತ್ತ್ ಬ್ಯಾರೆ ಗಾಡಿ ಕೊಡ್ಸಬೇಕಿತ್ತನ'
ಇಬ್ಬರ ನಡುವೆ ಕಲ್ಲವ ಬಾಯಿ ಹಾಕಿ 'ಯವ್ವಾ ಮನಿ ಅಂಗಳದಾಗ ನಿಂತ್ಗೊಂಡ ಬಾಯಿ ಮಾಡಾಕ ಹೋಗಬ್ಯಾಡ್ರಿ, ಅಕ್ಕಪಕ್ಕದವ್ರ ನೋಡ್ತಾರ' ಅಂದಾಗ ಇಬ್ಬರ ಬಾಯಿಗೂ ಬೀಗ ಬಿದ್ದಿತ್ತು. 
ಸ್ನಾನ ಮಾಡಿ, ಪಲ್ಲವಿ ಮಾಡಿಕೊಟ್ಟ ಚಹಾವನ್ನು ಕುಡಿಯುತ್ತ ಟಿ.ವಿ‌ ಮುಂದೆ ಕುಳಿತುಕೊಂಡನು ಶ್ರೀಕಾಂತ.
ಮೆಲ್ಲಗೆ ಮಗನ ಹತ್ತಿರ ಬಂದು ಕುಳಿತುಕೊಂಡ ಕಲ್ಲವ್ವ 'ಶ್ರೀ...'
'ಹ್ಞೂಂ'
'ಟೈಮು ಏಟಾತ್ಪಾ?'
ಕೈಯಲ್ಲಿದ್ದ ವಾಚನ್ನು ನೋಡುತ್ತಾ, 'ಏಳು ಚಿಲ್ರ ಆಗೈತಿ'
'ಹೌದಾ!!, ಇನ್ನೇನು ಅವ್ರ ಉಂಡು ಮಲ್ಗೊ ಹೊತ್ತು, ಶ್ರೀ..
'ಮತ್ತೇನಬೆ ನಿಂದು'
'ನಿಮ್ಮಪ್ಪ ಯಾಡ ಹೆಜ್ಜಿ ಹಿಂಗ ಹೋಗ್ ಬರ್ತಿನಂತಂದ ಹೋದೊರು ಇನ್ನ ಬಂದಿಲ್ಲ, ಹಾಂಗ ತಟಗ ಒಂದಿಟು ಹೊರಗ ಹಣಕಿ ಹಾಕ್ಕೊಂಡ ಬರ್ತಿಯೇನು?'
'ಏನು?, ಇಂಥಾ ಹೊತ್ನ್ಯಾಗ ಹೊರ್ಗ ಅಡ್ಯಾಡಕ ಹೋಗ್ಯಾನ, ಬುದ್ದಿಗಿದ್ದಿ ನೆಟ್ಗ ಐತಿಲ್ಲೊ ಅತಂದು. ನಾವ್ ಪಾಸ್ ಇಲ್ದ ಅಡ್ಯಾಡಿದ್ರ ಮುಕ್ಳಿ ಮೇಲೆ ಬಾರಿಸಿ ಕಳಸ್ತಾರ. ಅದು ಒತ್ತೊಟ್ಟಿಗಿರ್ಲಿ ಆ ಹಾಳ ಜಡ್ಡನ್ನ ತಾನು ಅಂಟಿಸ್ಗೊಂಡ ಬಂದು ನಮ್ಗು ತಂದು ಹಚ್ಚಿದ್ರ ಏನ ಮಾಡೊದು. ತಿಂದ ಒಂದ ಮೂಲ್ಯಾಗ ಸುಮ್ಕ ಕುಂದ್ರಾಕ ಏನಾಗಿತ್ತಂತ ಅತ್ಗ, ಇನ್ನೊಂದ ಅರ್ಧ ತಾಸ ನೊಡುಣ ತಡಿ, ಬಂದ್ರ ಸರಿ ಇಲ್ದಿದ್ರ ಪೋಲಿಸ್  ಕಂಪ್ಲೇಟ್ ಕೊಡೊಣಂತ. ಇನ್ನ ಏನ ಊಟದ ಟೈಂ ಆಗಿಲ್ಲಲ್ಲ ಇನ್ನ' ಎಂದು ಬಿರುಸಾಗಿಯೆ ಮಾತನಾಡಿದನು ಶ್ರೀ.
ಅವನಾಡಿದ ಮಾತುಗಳನ್ನು ಕೇಳಿ, ಕಲ್ಲಿನ ಮೇಲೆ ಈರುಳ್ಳಿಯನ್ನು ಇಟ್ಟು ಅಂಗೈಯಿಂದ ಜಜ್ಜಿದಾಗ ಹೇಗೆ ಅಪ್ಪಚ್ಚಿಯಾಗುವುದೊ, ಹಾಗೆ ಅವಳೆದೆಯ ಮೇಲೆ ಮಗನ ಮಾತುಗಳು ಗುದ್ದಿದವು. ಹೊಟ್ಟೆಯೊಳಗಿನ ಸಂಕಟವನ್ನು ಹತ್ತಿಕ್ಕಿಕೊಂಡು ಮತ್ತೆ ಮನೆಯ ಅಂಗಳಕ್ಕೆ ಬಂದು ಕುಳಿತುಬಿಟ್ಟಳು ಕಳೆದ ದಿನಗಳನ್ನು ಮೆಲಕು ಹಾಕುತ್ತ.
' ಹನ್ನೆರಡು ಲಕ್ಷ! ಅಷ್ಟಕೊಂಡ ರೊಕ್ಕಾ ನಮ್ಕಡೆ ಎಲ್ಲ ಅದಾವೊ ಯಪ್ಪ, ಇರೋದೆರ್ಡ ಎಕ್ರೆ, ಅದ್ರಾಗಿಂದ ಬಂದ ರೊಕ್ಕದಾಗಿಂದ ನಿನ್ನ ಇಷ್ಟ ಒದ್ಸಿದ್ದ ದೊಡ್ದದಾದದ್ದು, ಅಂತಾದ್ರಾಗ ನೌಕ್ರಿ ಸೇರಾಕ ಅಷ್ಟ ರೋಕ್ಕಾ ಕೇಳಿದ್ರ ನಾನೆಲ್ಲಿಂದ ತರ್ಲೆಪ್ಪ' ಸಣ್ಣಪ್ಪನು ಭಯಮಿಶ್ರಿತ ಧನಿಯಲ್ಲಿ ಕೇಳಿದನು.
'ಅದೆಲ್ಲ ನಂಗ ಗೊತ್ತಿಲ್ಲ ನೋಡ್ಪಾ, ನಾನೀಗ ವ್ಯವಹಾರ್ನ ಕುದ್ರಿಸಿ ಬಂದೀನಿ. ರೊಕ್ಕ ಹೊಂದಿಸಿ ಕೊಡಬೇಕಷ್ಟೆ.‌ ಅದೇನ ಸಣ್ಣ ಪೋಸ್ಟ್ ಅಲ್ಲದು ಜಗ್ ಆಗಿ ಇನಕಂ ಬರೊವಂತದ ಐತಿ.
ಆ ಏಜೆಂಟ್ ನಡುಮನಿ ಸಂಗಯ್ಯನ ಹತ್ರ ಮಾತಾಡೀನಿ ಎರ್ಡ ಎಕ್ರೆಕ ಹತ್ತ  ಲಕ್ಷ ಕೊಡ್ಸತಾನಂತ, ಮತ್ತ ಈ ಮನಿನೊಂದ ಮಾರಿದ್ರ ಅದೊಂದ ನಾಕ ಲಕ್ಷ ಬರ್ತೈತಿ, ಹನ್ನೆರ್ಡ ಅಲ್ಲಿ ಕೊಟ್ಟ, ಇನ್ನೆರಡ ನಿಂ ಹಂತ್ಯಾಕ ಇಟ್ಗೊಂಡಿರಿ, ಇಲ್ಲಾ ಬ್ಯಾಂಕನ್ಯಾಗ ಎಫ್ ಡಿ ನರ ಮಾಡಿಡ್ರಿ ಬಡ್ಡಿ ರೊಕ್ಕ ಬರ್ತದ. ನಾನು ನೌಕ್ರೀ ಸೇರಿದ ಯಾಡ ವರ್ಷದಾಗ ಇದ್ರಪ್ಪನಂತಾದ ಹೊಲ್ಮನಿ ಮಾಡಿ ಕೊಡ್ತೇನ ಬೇಕಿದ್ರ.'
'ಆಯ್ತಪಾ ವಿಚಾರ ಮಾಡಿ ನೊಡೋಣ ತಗೋ '
'ವಿಚಾರ ಅಲ್ಲ, ಇದಾ ಕಡೆದು ' ಎಂದು ಕಡ್ಡಿ ತುಂಡ ಮಾಡಿ ಹೇಳಿದ ಹಾಗೆ ಹೇಳಿ ಹೊರಗೆ ಹೊರಟು ಹೋದನು ಶ್ರೀ.
ಕಲ್ಲವ್ವ ಗಂಡನ ಹತ್ತಿರ ಬಂದು ' ಏನ್ರೀ ಆಸ್ತಿ ಅಳಿಯೊ‌ ಮಾತ್ ಮಾತಾಡ್ತಾನಲ್ರೀ ಇಂವಾ' ಆತಂಕದಿಂದಲೆ ಕೇಳಿದಳು 
'ಒಬ್ನ ಮಗಾ ಅಂತಂದ ನೆತ್ತಿ ಮ್ಯಾಲಿಟ್ಟ ಬೆಳ್ಸಿದ ಪರಿಣಾಮ ಇದ ಕಲ್ಲಿ, ಒಂದೀನಾನರ ಹೊಲ್ಮನಿ ಕೆಲ್ಸಕ್ಕ ತಬ್ಬಿದ್ರ ಅರವಾಗ್ತಿತ್ತು ರೊಕ್ಕದ ಬೆಲಿ. ಶಾಲ್ಯಾಗ ಶ್ಯಾಣೆ ಅದಾನ ಶ್ಯಾಣೆ ಅದಾನ ಅನ್ಕೊಂಡು ಹೊಟ್ಟಿಬಟ್ಟಿ ಕಟ್ಟಿ ಇಲ್ಲಿ ತನ್ಕ ಒದ್ಸಕೊಂತ ಬಂದಿವೆಲ್ಲ ಅದು ನಮ್ ತಪ್ಪು. ಹೋಗ್ಲಿಬಿಡು ಮುಂದ್ಕೆಲ್ಲ ಅವ್ನ ಹೆಸ್ರಿಗೆ ಹೋಗುವಲ್ಲ ಎಲ್ಲಾ, ಅವಂಗ ಅದ್ರಾಗ ಆಸಕ್ತಿ ಇಲ್ಲ ಅಂದ ಮ್ಯಾಲ ನಾವೇನ ಮಾಡೊದೈತ ಹೇಳು?' ನೋವಿನ ಧನಿಯಲ್ಲಿ ಹೇಳಿದನು.
'ತಲೆತಲಾಂತರಗಳಿಂದ ಬಾಳಿ ಬದ್ಕಿದಂತ ಮನಿ ಇದು, ನಮ್ಮವ್ವ ಹೇಳ್ತಿದ್ಲು ಆಕಿ ಈಟ ಇರಾಕಿಂತ ಈ ಮನಿ ನೋಡ್ಯಾಳಂತ ಆವಾಗ ಹ್ಯಾಂಗ ಇದ್ವೊ ಈಗೂ ಅಷ್ಟ ಗಟ್ಟಿಮುಟ್ಟಿ ಅದಾವು ಮನಿ ತೊಲಿಗಳು ಅಂತಂದ್ಲು ನಮ್ಮವ್ವ.'
'ಕಲ್ಲಿ ಸಾವ್ರ ವರ್ಷ ಬಾಳಿದ್ರೇನು ಸಾಯೋದ ತಪ್ಪತೈತನು? ನೋಡಿದಿಲ್ಲ ನಂ ಗಡಾದ ಮ್ಯಾಲಿನ ಶಿವಾಜಿ ಮಹಾರಾಜ್ರ ಕಟ್ಸಿದ ಉಡೇದ ತೊಟ್ಲ, ಅಕ್ಕ-ತಂಗಿ ಹೊಂಡ ಹ್ಯಾಂಗ ಪಾಳ ಬಿದ್ದಾವು. ಅಂತಂಥ ಕೋಟಿ ಕಟ್ಟದವ್ರ ಅಳ್ದ ಹೋಗ್ಯಾರ ಇನ್ನ ನಮ್ದು ಯಾವ ಲೆಕ್ಕ'
'ಮತ್ತ್ ಹೊಟ್ಟಿಬಟ್ಟಿಗೆ ಏನ್ ಮಾಡೊದ ರಿ, ಇದ್ದ ಗಂಗಾಳ್ದನ ಅನ್ನ ಚೆಲ್ಲಿ ಮಂದಿ ಮನಿಗೆ ಭಿಕ್ಷೆಕ ಹೋಗೊನು?'
'ಹೋಗ್ಬೇಕು ಕಲ್ಲಿ, ಹೊಗ್ಬೇಕು. ಮಗನ ಸುಖಕ್ಕ ನಾವ್ ಎಲ್ಲಾ ತಯಾರ್ ಆಗಿರ್ಬೇಕು. ಏನು? ಇವತ್ತ್ ನಂ ಹೊಲ್ದಾಗ ದುಡ್ದದ್ದನ್ನು ನಾಳೆ ಇನ್ನೊಬ್ರ ಹೊಲ್ದಾಗ ದುಡಿಯಾಕ ಹೊಕ್ಕಿವಿ ಅಷ್ಟ. ಅಷ್ಟಕ್ಕೂ ನಾಳೆ ಶ್ರೀಯಪ್ಪಂದು ನೌಕ್ರಿ ಆತಂದ್ರ ಕುಂದ್ರಿಸಿ ಕೂಳ ಹಾಕೊದಿಲ್ಲನು'
'ಆದ್ರೂ ಯಾಕಾ ಇದು ನಂಗ ಅರಿ ಕಂಡ ಬರುವಲ್ದ ಆಗೈತಿ ನೋಡ್ರಿ'
'ಸರಿಯೇನು, ಬೆಸಯೇನು ಹುಡ್ಗ ಆಗ್ಲೆ ನಿರ್ಧಾರ ಮಾಡ್ಕೊಂಡ ಬಿಟ್ಟಾನ. ದೇವ್ರ ಮಾಡ್ದಂಗ ಆಕ್ಕತೆ ನಡಿ ಅತ್ಲಾಗ' ಎನ್ನುತ್ತಾ ಎದ್ದು ನಿಂತನು.
'ಮತ್ತೆಲ್ಲಿಗೆ ಹೊಂಟ್ರಿ?'
'ಏಜೆಂಟ ಸಂಗಯ್ಯನ ಮನಿಕಡೆಗೆ'
ಕಲ್ಲಿಯ ಮರು ಮಾತಿಗೂ ಕಾಯದೆ ಹೊರ ನಡೆದುಬಿಟ್ಟನು ಸಣ್ಣಪ್ಪ.

Sunday, April 26, 2020

ನಿರ್ಭಾವುಕತೆಗಳು

ಬೆಂಕಿಗೆ ಸಿಕ್ಕ
ಕಲ್ಲು ಬಂಡೆಯು
ಸಿಡಿದು
ಹೋಗುತ್ತದೆ
ಪಾಗಲ್!!
ಹೂವಿನಂತವಳೆಂದು
ನೀನೆ.... ಹೇಳುತ್ತಿದ್ದೆಯಲ್ಲ!
ಹೇಳು, ತಾಳಿಕೊಳ್ಳಲಿ ಹೇಗೀಗ
ವಿರಹದ ಬಿಸಿಯ!
ಅದುಮಿಟ್ಟುಕೊಳ್ಳುವುದಾದರು
ಎಲ್ಲಿ? ಅಲೆಗಲೆಗಳಂತ ಉಕ್ಕಿ ಬರುತಿರುವ
ಬಯಕೆಗಳ ಹಸಿಯ!
ಬೇಡ...ಬೇಡವೆಂದರು ತನುವಿದು
ನೆನೆದು ನಿನ್ನ ಬಿಸಿ ಸ್ಪರ್ಶದ ಸವಿಯ
ಏರಿಸಿಕೊಳ್ಳುತಿದೆ ಅಮಲಿನ ನಶೆಯ
ಕೇಳಿಸಿದೇನು ನಿನಗೆ ನನ್ನೊಳಗಿನ
ಒಂಟಿ ಹಕ್ಕಿಯ ನೋವಿನ ಮಿಡಿತ

Saturday, April 25, 2020

ಚುಟುಕು

ಕನಸನ್ನೆ...
ಅವಳ ಮಲ್ಲಿಗೆಯ 
ನಗುವಿಗೆ ಸೋತ
ಮನವಿದು.. ಬೇಡುತಿದೆ
ಮರಳಿ ಮರಳಿ ಅವಳ
ನಗುವನ್ನೆ..

ನಗುವಿಗೆ ಸೋತ
ಮನಸ್ಸಿದು.. ತಾರೆಗಳ
ರಾತ್ರಿಗಳಿಗೂ.. ಬೇಡುತಿದೆ
ಬರೀ.. ಅವಳ
ಕನಸನ್ನೆ..

ವಿರಹದ ಶಾಹಿ 

ವಿರಹದ ಬಿಸಿ ಶಾಯಿಗೆ
ಎದೆಯ ಬಿಳಿ ಹಾಳೆಯು
ಉರಿಯುತಿವುದು...!!!

ಬರೆಯಲಿ ಹೇಗೆ ?
ಪದಗಳ... 
ಎದೆಹಾಳೆಗೆ
ಸಹಿಸಿಕೊಳ್ಳಲಾರದಷ್ಟು
ನೋವಿರುವಾಗ...!!!

ಮೊದಲೆ

ನಿನ್ನ ಮನದ ಮೂಲೆಯಲಿ
ನಮ್ಮೊಲವಿನ ಕುರುಹುವಾಗಿ
ಒಂದೆ ಒಂದು ಹಣ್ಣೇಲೆಯಷ್ಟು
ನೆನಪಿದ್ದರೂ.... 
ಬಂದು ಬಿಡು ಗೆಳತಿ
ನಿನ್ನ ಪ್ರೀತಿಯ ಚಿಗುರು
ವಿರಹಿಗಳ ಹಾದಿಯ ಗೊಬ್ಬರ
ವಾಗುವ ಮೊದಲೆ..

ಹಂಬಲ ಚಪಲ
ಸುರಿವ ಮಳೆಯ
ಕೊನೆಯ ಹನಿಯಾಗಿ
ನಿನ್ನ ಚುಂಬಿಸೊ..
ಹಂಬಲ

ಮೊದಲ ದುಂಬಿಯಾಗಿ
ನಿನ್ನೆದೆಯ ಮಧುವ
ಸವಿಯಬೇಕೆನ್ನುವ
ಚಪಲ..

ಮುತ್ತಿನ ಹನಿಗಳು

ಗೆಳತಿ
ನಿನ್ನ ಮಾತಿಲ್ಲದ ಮೌನಕೆ
ಮುಗಿಲ ಮೋಡವದು
ಹೆಪ್ಪಾಗಿ ಕಪ್ಪಾಗಿ ಮಲಗಿತ್ತದು
ನಿನ್ನಷ್ಟೇ ಮುನಿಸಿನಿಂದಲೆ..
ಈಗ ನೋಡು ನಿನ್ನೀ.. ಬೆಳ್ಳಿ
ಬೆಳದಿಂಗಳ ನಗುವಿಗೆ...
ಮೋಡವದು ಕರಗಿ... ನಾಚಿ
ನೀರಾಗಿ ನಮ್ಮ ಪ್ರೀತಿಯ
ಅಂಗಳಕೆ ಮುತ್ತಿನ ಹನಿಗಳನೆ....
ಸುರಿಸುತಿದೆ..

ನನ್ನ ಬಿಡುತಿಲ್ಲ

ಹೊತ್ತುಗಳು.... ಸರಿದವು
ಮುತ್ತುಗಳು.. ನೆನಪಾದವು
ಬಿಡುವ ಉಸಿರುಸಿರು... ಬಿಸಿಯಾಯ್ತು..
ನಿನ್ನ ನೆನೆ ನೆನೆದು.. 
ಆದರೂ ನೀ..
ಬರಲಿಲ್ಲ...
ನಿನ್ನ ನೆನಪುಗಳು ಮಾತ್ರ 
ನನ್ನ ಬಿಡುತಿಲ್ಲ..

ಯೌವ್ವನದ ಹೊಳೆ

ಮತ್ತೆ.. ಮತ್ತೆ...
ನಿನ್ನ ಬಿಸಿಯಪ್ಪುಗೆಯ
ಅಪ್ಪುಗೆಗೆ ಕಾಯುತಿರುವ
ಈ ತೋಳುಗಳಿಗೆ ತಬ್ಬುಗೆಯ
ಹಸಿವನು ಹೆಚ್ಚಿಸದಿರು..
ನಿನ್ನ ತನುವಿನಪ್ಪುಗೆಗೆ 
ಕಾದು.. ಕಾದು... ಕಾದ
ದೇಹವಿದು ಉರಿದು ಹೋಗುವ
ಮೊದಲೆ.. ಬಂದು ಸುರಿಸಿಬಿಡು
ನಿನ್ನ ಅಧರದ ತಂಪಿನ ಮಳೆ
ನಿನ್ನ ಮುತ್ತಿನ ಮಳೆಯಲಿ
ಹರಿದು ಹೋಗಲಿ.... ಈ
ಯೌವ್ವನದ ಹೊಳೆ