Monday, April 12, 2021

ಮಾಂವ

ನೀನಿಲ್ದ ಹೊತ್ತನ್ಯಾಗ, ಕರೆಂಟು
ಆಟ ಆಡಾಕ ಹತ್ತೈತಿ!
ಹಚ್ಚಿಟ್ಟ ಕಂದೀಲು ಸಣ್ಣ..ಗ ಹೊತ್ತ
ತಿನ್ನಾಕುಂತೈತಿ!
ಬ್ಯಾಸ್ಗಿ ಝಳ.. ಮೈ ಮ್ಯಾಲಿನ ಬಟ್ಟಿನೆಲ್ಲ
ತೊಯ್ಸಿ ಬಿಟ್ಟೈತಿ!
ಸುಡುಗಾಡ ಹಳೆ ನೆಪ್ಪೊಂದು ನೆನಪಾಗಿ
ಮೈಗೆಲ್ಲಾ ಬೆಂಕಿ ಹಚ್ಚಿ ಮಲಗಿಬಿಟ್ಟೈತಿ!

ಬೆಳಕ ಹರದ್ರ...ಯುಗಾದಿ ಐತಿ, ಬೇಗ ಬಂದು
ಕೊಡಬಾರದೇನೊ? ಗಲ್ಲಕ್ಕೊಂದು ಬೆಲ್ಲ!
ಸಿಹಿ ಬಿಟ್ಟು, ಬರೀ ಕಹೀ...ನ ಕೊಟ್ರ
ನಾ..ಹ್ಯಾಂಗರ ತಡಕೊಳ್ಳಲೊ ನಲ್ಲ!
ತೊಳದಿಟ್ಟ ಅನ್ನದ ಬೊಗೊಣಿ ಹಂಗ,
ಬರಿಗೈಯ್ಲೆ ಕಾಯಕ ಹತ್ತಿನೊ ಮಲ್ಲ!

ಬಿಸಿ ಜೋಳದ ರೊಟ್ಟಿ ಮ್ಯಾಲಿಟ್ಟ
ಬೆಣ್ಣಿಯಂತಾಗಿ ನಾ... ಕರಗಿ ಹೊಂಟೇನಿ!
ಎಷ್ಟ ಹಾರಾಡಿ, ಜಿಗಿದಾಡಿದ್ರು ಕೈಗೆ ಸಿಗ್ದ ಹಾಲನ್ನ
ಕಂಡ, ಚಟಪಟ ಒದ್ದಾಡೊ ಕಳ್ಳ ಬೆಕ್ಕನಂಗ ಆಗೀನಿ!

ಮೈ ಮ್ಯಾಲ ನಿನ್ ಮುತ್ತಿನ ಅಚ್ಚಿಲ್ದನ, ಮಣಭಾರ
ಬಂಗಾರದ ಸಾಮಾನ ಹಾಕ್ಕೊಂಡ ನಿಂತಿನಿ!
ಮತ್ತ ಇಳಿಲಾರ್ದನ ಗುಂಗ ಹಿಡ್ಸಾಕುಂತೈತಿ
ಮದ್ಯಾನದಾಗ...ಮುಡ್ಕೊಂಡ ಮಲ್ಗಿ ಹೂವಿನ
ವಾಸ್ನಿ!

ನಕ್ಕೆನಂದ್ರ ನಗು ಬರಾವಲ್ದು, ಅತ್ತೆನಂದ್ರ ಅಳು ಬರಾವಲ್ದು, ಏನೂ... ತಿಳಿದಂತ ಮಳ್ಳಿಯಂತಾಗಿನಿ!
ಇಳಕಲ್ ಸೀರಿ ಬ್ಯಾಡ, ಗುಳೇದಗುಡ್ಡದ ಖಣ ಬ್ಯಾಡ
ನಕ್ರ, ಸಾವ್ರ ಮುತ್ತ ಸುರಿಸೊ ಆ ನಗು ಮುಖಾನ
ಹೊತ್ಗೊಂಡ ಯಾವಾಗ ಬರ್ತೀಯಂತ ಕಾಯಾಕ
ಹತ್ತೀನಿ.... ನಾ ಕಾಯಾಕ ಹತ್ತೀನಿ...

Saturday, April 3, 2021

ರಂಗೀ..

ಹೀಗೇತಕೆ?
ಕೊರಡಾಗಿಸಿಬಿಟ್ಟೆ
ಎದೆಯ ಗೂಡನ್ನು!!
ರಂಗೀ...
ಸಾಧ್ಯವಾದರೆ ಸುಟ್ಟು
ಹಾಕಿಬಿಡು, 'ಪೀಡೆ' ತೊಲಗಿದರು
ತೊಲಗಬಹುದು!!
ಕಾರಣವಿಷ್ಟೆ. ಹನಿ ಕಣ್ಣೀರು
ಬಿದ್ದರು...ಮತ್ತೆ
ಚಿಗುರಬಲ್ಲದು ನಿನ್ನ
ಹೆಸರಿನಲ್ಲೆ!

Saturday, March 13, 2021

ಚುಟುಕು

ಸ್ಥಿರವಾಗಿ ನಿಂತಿದೆ
ಕುಡಿದು ತೂರಾಡುವಂತೆ
ಮಾಡುವ, ಬಾರೊಳಗಿನ
ಎಣ್ಣೆಯ ರೇಟು!!
"ಗಿರ್ರೆನ್ನಿಸುತ್ತಿದೆ"
ಕುಡಿಯದೆ ಇರುವವರ
ತಲೆಯನ್ನು.
ದಿನೆದಿನೆ ಏರುತ್ತಿರುವ
ಅಡುಗೆ ಮನೆಯ
ಎಣ್ಣೆಯ ರೇಟು!!

Sunday, March 7, 2021

ಶಾಯರಿ


ಆರಿ ಹೋದ
ಐದು ರೂಪಾಯಿಯ
ಚಹಾಕ್ಕೆ, ಎಂಟಾನೆ ಪ್ಲಾಸ್ಟಿಕ್
ಕಪ್ಪಿನ ಬೆಲೆಯೂ ಇಲ್ಲ
ಸಾಕಿ...
ನಿನ್ನಿಂದೇನೂ... ಆಗದು
ಎಂದರಿವಾದಕ್ಷಣವೆ, ಎಸೆದು 
ಬಿಡುತ್ತಾರೆ! ತೂಗು ತಕ್ಕಡಿ
ಯೊಳಗಿನ ಹುಳುಕು
ಬದನೆಯಂತೆ.

Thursday, December 17, 2020

ತಮ್ಮಾ - ತಿಮ್ಮಾ

ಕತ್ತಿ ಮ್ಯಾಲ ಏನ್ ಹೊರ್ಸಿದ್ರುನೂ ಬಾಯ್ಮುಚ್ಗೊಂಡ ಹೊಕ್ಕೈತಿ ಅನ್ಕೊಂಡ
ಏನೇನರ ಇಲ್ಲ ಸಲ್ಲದ್ದನ್ನ ಹೇರಬ್ಯಾಡೊ ತಮ್ಮಾ...
ತಡ್ಕೊತೈತಿ...ತಡ್ಕೊತೈತಿ ತಡ್ಕೊತೈತಿ ಎಲ್ಲಿ ತನ್ಕ? ಕಸುವು ನಿಗೋತನ್ಕ. ಕಸುವು ಮಿಕ್ಕಿದ ಮ್ಯಾಲೊಂದು
ಜಾಡ್ಸಿ ಒತ್ತಂತಂದ್ರ ಕೋಳಿ ಕೆಬ್ರಿದ ಸೆಗಣಿ ತಿಪ್ಪ್ಯಾಗ್ಹೋಗಿ ಬಿಳ್ತಿಯೋ ತಿಮ್ಮ...

ತಲಿಗೆ ಹೆಲ್ಮೆಟ್ ಹಾಕ್ಕೊಂಡ ರಸ್ತಾದಾಗ ಹೋಗೊರ
ಒಮ್ಮೊಮ್ಮೆ ಯಮನ ಪಾದನ ಸೇರ್ಕೊಂಡ ಬಿಡ್ತಾರೊ ತಮ್ಮಾ..
ತಲಿ ಗಟ್ಟಿ ಐತನ್ನೊ ಮದದಾಗ ಕಂಡ ಕಂಡ ಹೆಣ್ಮಕ್ಳ 
ತಲಿಗೆ ಉಣ್ಣಿ ಟೋಪ್ಗಿ ಹಾಕಕ ಹೋಗಬ್ಯಾಡ, 
ಆಕಿ ಒಮ್ಮೆಂದ್ರ ಒಮ್ಮೆ ಕೈಯ್ಯಾನ ಕುಟ್ಟೊ
ಒಂದ ಒನಕಿ ಏಟ ಹಾಕಿದ್ರ ಸಾಕ ನೆತ್ತಿಗೆರಿದ ಪಿತ್ತ ಇಳಸಾಕ ತಿಮ್ಮಾ...

 ವಿಶ್ವಾಸಕ್ಕ ಬಂದೊರ್ನ ಮನಿತಂಕ ಕರ್ದು ಉಣ್ಣೊ ತಾಟನ್ಯಾಗ ವಿಷ ಬೆರಸಿಕೊಡಬ್ಯಾಡೊ ತಮ್ಮ..
ರೊಕ್ಕೇನು? ಬಸ್ ಸ್ಟ್ಯಾಂಡನೊಳ್ಗ ಪಾಯ್ಕಾನಿ
ತೊಳಿಯೊ ಹೆಣ್ಮಗ್ಳು ದುಡಿತಾಳ. ಆಕಿಗಿಂತ 
ಕೀಳಾಗಿ ಬಾಳಬ್ಯಾಡೊ ತಿಮ್ಮಾ...

ಅವ್ರದ ತಂದ ಇವ್ರ ಅಂಗಳ್ದಾಗ, ಇವ್ರದ ತಂದ
ಅವ್ರ ಅಂಗಳ್ದಾಗ ಎಷ್ಟ ದಿನಾನಂತ ಹೇಸ್ಗಿ ಕೆಲ್ಸ
ಮಾಡ್ಕೊಂಡ ಇರ್ತಿಯೊ ತಮ್ಮಾ...
ಮೈ ಹೊಲಸಾದ್ರೇನಾತ ಗಟಾರ ನೀರಿಲೆರ ತೊಳ್ಕೊಬೊದು!
ಮನಸ್ಸ ಮೈಲ್ಗಿ ಮಾಡ್ಕೊ ಬ್ಯಾಡಲೆ, ಬ್ಯಾಡ.
ಕುಂಬಾರ ಮಡ್ಕಿನ ಒಂದ ಸಲ ಮಾಡ್ತಾನ,
ಅದ್ನ ಒಡ್ದ, ತೋಯ್ಸಿ, ತುಳ್ದ ಹದಮಾಡಿ ಮತ್
ಮಡ್ಕಿ ಮಾಡಾಕ ಹ್ಯಾಂಗ ಬರೊದಿಲ್ಲೊ ಹಾಂಗ
ನಂಬ್ಕಿ ಅನ್ನೋದು ಮತ್ ಹುಟ್ಟುದಿಲ್ಲ, ಕಟ್ಟೊಕೂ
ಆಗೋದಿಲ್ಲ ನೋಡ್ತಿಮ್ಮಾ....

ಕರಿ ನೆಲ್ದ ಮ್ಯಾಲ ಕೆಂಪ ಮಣ್ಣ ಹಾಕಿ ಸೈಟ್
ಮಾರ್ದಂಗಲ್ಲೊ ಗೆಣೆತನ್ದ ನಂಬ್ಕಿ ಗಳಸೊದ
ತಮ್ಮಾ...
ಅಡಿಪಾಯಕ್ಕ ತೆಗ್ಗ ತೋಡ್ದಾಗ ಗೊತ್ತಾಗೋದು
ಒಳಗ ಎಷ್ಟ ಗಟ್ಟಿ, ಎಷ್ಟ ಸಡ್ಲ ಐತೆನ್ನೊದ, ಸಡ್ಲ
ಕಂಡ್ತೂ ಚಿಗುರಾಕು ಬಿಡ್ದಂಗ ತುಳ್ದ ಹಾಕಬಿಡ್ತಾರೊ
ತಿಮ್ಮಾ...

ಗದ್ಗಿ ಏರಿದ ಮ್ಯಾಲ ಎಲ್ಲಾ ಭಂಡ ನನ್ಮಕ್ಳು ಹೇಳೊ
ಮಾತ ಒಂದ, ನಾನ್ಯಾರಿಂದಾನೂ ಮ್ಯಾಲ ಬಂದಿಲ್ಲಂತ ತಮ್ಮಾ...
ಹುಟ್ಟಿದ ಜೀವ ಕೈ ಚಾಚ್ದನ ಸತ್ತಿದ್ದಿಲ್ಲ, ಮುಕ್ಕಣ್ಣನು ಕಪಾಲ ಹಿಡ್ಕೊಂಡ ಭಿಕ್ಷೆ ಬೇಡ್ದಾವ ಅದಾನ, ಕಾಲಾನ‌ ನೀ ಮರಿಬೊದು.
ಕಾಲ ನಿನ್ನ ಮರೆಯೊದಿಲ್ಲೊ ತಿಮ್ಮಾ...
ನಿನ್ನ ಮರಿಯೊದಿಲ್ಲ..

Wednesday, December 16, 2020

ರಂಗೀ..೧

'ತಣ್ಣ'ಗಾದ ಒಲವನು
ನಿನ್ನೆದೆಯಲಿ ಹುಗಿದು,
ಅದನ್ನೇಕೆ ಮಸಣವನ್ನಾಗಿಸಲಿ
ರಂಗೀ....
ಬೇಕಿದ್ದರೆ ಒಂದೆರಡು
ಪ್ರೀತಿಯ ಸಸಿಗಳನ್ನು
ನೆಡುವೆ.
ಗಟ್ಟಿಗಿತ್ತಿಯಾದರೆ?
ನೀರೆರೆದು ಪೋಷಿಸಿಕೊ.

Tuesday, December 15, 2020

ಶಾಯರಿ

ಸಿಹಿ-ಕಹಿಗಳನೆರಡನ್ನು
ಸಮನಾಗಿ ಸ್ವೀಕರಿಸುವಷ್ಟು
ಪ್ರಭುದ್ಧನೇನಲ್ಲ
ಸಾಕಿ....
ಮದ್ಯ ಕಹಿಯಾದರು
ಚುಚ್ಚುವ ರಂಗೀಯ
ಸಿಹಿಯಾದ ನೆನಪುಗಳನ್ನು
ಅರೆಕ್ಷಣವಾದರು
ಮರೆಸುತ್ತದಲ್ಲ!
ಅಷ್ಟು ಸಾಕು.