Tuesday, January 31, 2023

ವ್ಯಾಖ್ಯಾನ...


ದಾರವಾಡದಲ್ಲಿ ಜರುಗಿದಂತಹ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ನಂತರ ಇಂದು ಮತ್ತೆ ಸುಶೀಲಣ್ಣ ಕುಂದರಗಿ ಇವರ  ಆಜ್ಞೆಯ ಮೇರೆಗೆ ಇಂದಿಲ್ಲಿ ಒಂದೆರಡು ಮಾತುಗಳನ್ನಾಡುವ ಸದಾವಕಾಶ ಒದಗಿ ಬಂದಿದೆ. ಅವರಿಗೂ ಕಾರ್ಯಕ್ರಮದ ಆಯೋಜಕರಿಗೂ ಮತ್ತು ಇಲ್ಲಿಯ ತನಕ ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನಸೂರೆಗೊಳಿಸಿದಂತಹ ಎಲ್ಲ ಗಾನ ಕೋಗಿಲೆಗಳಿಗೆ ಮತ್ತು ಇಲ್ಲಿ ನೆರೆದಿರುವಂತಹ ಎಲ್ಲ ಸಾಹಿತ್ಯಾಸಕ್ತರಿಗೂ ನನ್ನ ನಮನಗಳನ್ನು ಸಲ್ಲಿಸುತ್ತ ಸಮಯದ ಅಭಾವವಿರುವುದರಿಂದ ನೇರವಾಗಿ ವಿಷಯಕ್ಕೆ ಬರುತ್ತಿದ್ದೇನೆ. ಜನಪದ ವ್ಯಾಖ್ಯಾನ ಇದು ನನ್ನ ಪಾಲಿಗೆ ಬಂದಂತಹ ಸೌಭಾಗ್ಯವೆ ಎಂದು ಹೇಳಬೇಕು ಕಾರಣವಿಷ್ಟೆ. ಈ ಜನಪದಕ್ಕೆ ಯಾವುದೇ ಜಾತಿ -ಧರ್ಮ ಮೇಲು-ಕೀಳು ಅಸ್ಪೃಶ್ಯತೆ-ಕೀಳರಿಮೆ, ದೌರ್ಜನ್ಯ-ದರ್ಪ, ಅಹಂಕಾರ-ಹಗೆತನ ಯಾವುದೆಂದರೆ ಯಾವುದರ ಸೊಂಕು ಇದರಲ್ಲಿ ಸುಳಿದಿಲ್ಲ. ಇಲ್ಲಿ ನಮಗೆ ದಕ್ಕುವುದು ಬರೀ ಪ್ರೀತಿ-ಪ್ರೇಮ, ನಿವೇದನೆ, ಅಂತಃಕರಣದ ನೋವು, ಹೇಳಲಾಗದಷ್ಟು ಸಂತೋಷ, ಕರುಣೆ-ದಯೆ, ಸಹಾನುಭೂತಿ ಒಟ್ಟಾರೆಯಾಗಿ ಸಿಗುವುದು ಒಡಲಾಳದ ಮಡಿಕೆಯಲ್ಲಿ ಕಟೆದ  ಅನುಭವದ ಬೆಣ್ಣೆ ಇದನ್ನು ನಾವು ಯಾವಾಗ? ಎಷ್ಟು? ಹ್ಯಾಗಬೇಕೊ ಹಾಗೆ ಕರಗಿಸಿಯೊ ಅಥವಾ ಸವರಿಕೊಂಡು ಬಾಯ್ಚಪ್ಪರಿಸಿ ಉಣ್ಣುವಂತಹದ್ದಾಗಿದೆ  ಹಾಗೆ ಇನ್ನೂ ಗರ್ವಪಟ್ಟು ಹೇಳುವುದಾದರೆ ಇವುಗಳಿಗೆಲ್ಲ ಯಾರೊಬ್ಬರ ಹೆಸರಿನ ಹಂಗಿಲ್ಲ. ಯಾರು? ಎಲ್ಲಿ? ಹೇಗೆ? ಬರೆದರು ಎಂಬ ಹೆಸರು- ಗುರುತಿನ ಹಂಗಿಲ್ಲ.

ನನ್ನ ಪಾಲಿಗೆ ಇಂದು ವ್ಯಾಖ್ಯಾನಿಸಲು ಸಿಕ್ಕ ಜನಪದ ಗೀತೆ ಸಂಸಾರ. ಸಂ ..... ಸಾರ
ಸಂ...ಸಾರ ಅಂತಂದ ಯಾಕ ಅಂತಂದನೆಪಾ ಅಂತಂದ್ರ ಈಗ ನೀವ್ ನೋಡ್ರಿ ಇವತ್ತಿನ ಹತ್ತ ನಿಮಿಷ ಮಾತಾಡೊ ಕಾರ್ಯಕ್ರಮಕ್ಕ ನಿಮ್ಮ ನಿಮ್ಮ ಮನಿಯಾಗ ನಿಮ್ಮ ಹೆಣ್ಮಕ್ಳು ಜಲ್ದಿ ಎದ್ದು ನೀರ ಕಾಸಿ ಬಟ್ಟಿ ಇಸ್ತ್ರೀ ಮಾಡಿಕೊಟ್ಟು ಬರುವಾಗ ಹುಷಾರು ಹೊತ್ತಿಗೆ  ಊಟ ನಾಷ್ಟ ಮಾಡ್ರಿ, ಸಂಜಿಕ ಜಲ್ದಿ ಬಂದ್ಬಿಡ್ರಿ ಗಿರಮಿಟ್ ಮಿರ್ಚಿನೊ, ಮಂಡಕ್ಕಿನೊ ಮಾಡಿಟ್ಟಿರತಿನಿ ಬಂದು ತಿನ್ನೊರುವಿರಂತ ಅಂತಂದ ಅಷ್ಟ ಜ್ವಾಕಿ ಮಾಡಿ ಕಳಿಸಿಕೊಡ್ತಾರ ನಮ್ಮ ಮನಿಯಾಗ ಹಂಗಿಲ್ಲ ಮುಂಜಾನೆ ಎದ್ದ ದಾಡಿ ಮಾಡ್ಕೊಂಡ ಜಳಕ ಮಾಡಿ ಹೊಸ ಬಟ್ಟಿ ಹಾಕ್ಕೊಂಡು ನಮ್ಮಾಕಿ ಮುಂದ ನಿಂತಗೊಂಡು

ಆಕಿಗೆ ಅಂದೆ
ಈಗ ಹ್ಯಾಂಗ ಕಾಣಕ
ಹತ್ತೀನಿ!!😘
ಯಾಕ ಇಷ್ಟ ಜಲ್ದಿ ಎದ್ದು
ಎಲ್ಲಿಗೆ ಹೊಂಟಿರಿ ಅಂದ್ಲು!!🤔
ಕುಂದಗೋಳ ದೇಸಾಯರ
ವಾಡೇಕಾ...😍
ಯಾಕ ದನಾ ಕಾಯೋರ
ಕಮ್ಮಿ ಬಿದ್ದಾರನು ಅಂದ್ಲು...,🤐

ಮಾತ... ಇಲ್ಲ. ಸುಮ್ನ ಬ್ಯಾಗ ಎತ್ಕೊಂಡ ಬಸಸ್ಟ್ಯಾಂಡಗೆ ಬಂದಬಿಟ್ಟ್ಯಾ...
-------
ಅಡಗೀಯ ಮನಿಯಾಗ ಮಡದೀಯ ಸುಳಿವಿಲ್ಲ |
ಅಡಿಗೆ ಬಾಯಿಗೆ ರುಚಿಯಿಲ್ಲ | ಹಡೆದವ್ವ |
ಮಡದಿ ತವರಿಗೆ ಹೋಗ್ಯಾಳ

ಮೂರು ದೃಷ್ಟಾಂತಗಳು
೧. ರಸಿಕತೆ - ಯಾಕ ಬಾಯಿಗೆ ರುಚಿ ಬರೋದಿಲ್ಲಪಾ ಅಂತಂದ್ರ ನಮ್ಮ ದೋಸ್ತಂದ ಮದುವಿಯಾದ ಸಂತೋಷಕ್ಕ ಅವ್ರ ಮನಿಗೆ ಉಟಕ್ಕ ಕರದಿದ್ನಾ ಮೂರ ಮಂದಿ ಹೋಗಿದ್ವಿ, ಕೈ ತೊಳಕೊಂಡು ಸಾಲ ಹಿಡಿದು ನಾಲ್ಕು ಮಂದಿ ಕುಂತಗೊಂಡ್ವಿ ಅವ್ನ ಹೆಂಡ್ತಿ ಬಂದ ಊಟದ ತಾಟ ಇಟ್ಟ ಹೋದಳು ನೋಡ್ತೀವಿ ಕಾಮತ ಹೋಟಲ್ ನ್ಯಾಗ ಉಪ್ಪಿಟ್ಟು ಇಟ್ಟ ಕೊಟ್ಟಂಗ ಅನ್ನ ಇಟ್ಟ ಕೊಟ್ಟಿದ್ರು ನಾನವಂಗ ಕೇಳಿದ್ಯಾ
"ಯಾಕೊ ನಿಮ್ಮ ಹೆಣ್ಮಕ್ಳು ಬ್ರಾಹ್ಮಣ್ಸನು'
'ಯೇ.. ಅಲ್ಲೊ ಮಾರಾಯ ನಮ್ಮ ಮಂದಿಯಾಕಿಯ'
'ಮತ್ ಬರೀ ಅನ್ನಾ ನಿಡ್ಯಾರಲ್ಲೊ'
'ಏ ಮತ್ ನಿಮ್ ಮನಿಯಾಗ ನಿಮ್ಮ ತಂಗಿಗೆ ಅಡಗಿ ಮಾಡದ ಕಲಿಸಿ ಕೊಟ್ಟಿಲ್ಲಲ್ಲ ಆಕಿಗೆ' ಅಂತಂದ ನನ್ನ ಮ್ಯಾಲ ಮುರಕೊಂಡ ಬಿದ್ದ
'ಹೋಗ್ಲಿಬಿಡು, ಒಂದಿಷ್ಟು ಸ್ವೀಟಾದ್ರು ಮಾಡ್ಸಬೇಕಿತ್ತಿಲ್ಲೊ'
'ಯೇ...ಹೇ... ಹಾಗಿಲ್ಲಪ್ಪ ಇಬ್ರೂ ಡಯಟ್ ನ್ಯಾಗ ಅದೀವಿ ಅದ್ಕ ಸ್ವೀಟ್ ಗೀಟ ಏನು ಮಾಡಿಲ್ಲ '
ಅಲ್ಲ ಇಬ್ರನ್ನೂ ಸೇರಿಸಿ ತೂಗಿದ್ರೂನು ೫೦ ಕೆ.ಜಿ. ತೂಗೊದಿಲ್ಲ ಅಂತದ್ರಾಗ ಮತ್ ಡಯಟ್!! ಹಾಳಾಗಿ ಹೋಗ್ಲಿ ಅತ್ಲಾಗ ಅನ್ಕೊಂಡ, ಉಣ್ಣೊಕ ನನ್ನ ಕೈ ಚೂರು ಮುಂದ ದಬದಬ ಸಾರ ಹಾಕ್ಕೊಂಡ ಗಬಗಬ ಕಲಿಸಿಕೊಂಡ ಒಂದ ತುತ್ತ ಬಾಯಿಗೆ ಇಟ್ಗೊಂಡನ್ರೀ.... ಹೇಳ್ತಿನ್ ನಿಮ್ಗ ಕರೆಂಟ್ ಹೊಡ್ದ ಕಾಗಿ ಹಂಗ ಆಗಿಬಿಡ್ತ ಆಗ ನನ್ನ ಪಾಡು. ಜಗಿಲಿಲ್ಲ, ನುಂಗಲಿಲ್ಲ ಮಗ್ಗಲದಾಗ ಕುಂತಗೊಂಡ ಇಬ್ರು ಗೆಳೆಯರಿಗೆ ತಲಿಲೆ ಸೊನ್ನಿ ಮಾಡಿದ್ಯಾ ತಿನಬ್ಯಾಡ್ರಲೆ ಅಂತ, ಅವ್ರು ಮಕ್ಳು ಬ್ಯಾರೆನ ತಿಳ್ಕೊಂಡ ಬಿಟ್ರೊ ಎನೊ ಹ್ಞಾಂ ಮಗ ಅಡಗಿ ಮಸ್ತ್ ಇದ್ದಾಗ ಐತಿ, ಅದ್ಕ ಎಲ್ಲಾ ತಾನ ತಿನ್ನಾಕ ನಮ್ಗ ಬ್ಯಾಡ ಅನ್ನಾಕ ಹತ್ತಾನ ಅಂದ್ಕೊಂಡ್ರೊ ಏನೋ ಅವ್ರು ತಡನ ಮಾಡ್ಲಿಲ್ಲ ಗಬಗಬ ಅಂತ ಹೇಳಿ ಒಂದೊಂದು ತುತ್ತು ಬಾಯಿಗೆ ಹಾಕ್ಕೊಂಡ ಬಿಟ್ರು...!! ಏನ್ ಹೇಳ್ಲಿ ನಿಮ್ಗ ಅವ್ರ ಕತಿನಾ... ಎಮ್ಮೆ ಗಂಜಲಾ ಕುಡದ ಮ್ಯಾಲ ಮೊಸಡಿ ಹ್ಯಾಂಗ ಮಾಡಿರತಾವಲ್ಲ ಹಾಂಗ ಮಾರಿ ಮಾಡಕೊಂಡ ನನ್ನ ನೋಡಾಕ ಹತ್ತಿಬಿಟ್ರು. ಯಾಕಂತಂದ್ರ ಆ ತಂಗೆವ್ವ ಅನ್ನಕ್ಕ ಉಪ್ಪು ಹಾಕಿದ್ಲೊ ಏನ... ಉಪ್ಪನ್ಯಾಗ ಅಕ್ಕಿ ಹಾಕಿ ಅನ್ನ ಮಾಡಿದ್ಲೊ ಗೊತ್ತಿಲ್ಲ ಒಂದ ತುತ್ತಿಗೆ ಬಾಯಿ ಕೊರದಂಗ ಆಗಿ ಮುಖ-ಮುಖ ನೋಡ್ಕೊಂತ ಕುಂತಗೊಂಡ್ವಿ. ನಮ್ದ ಹಿಂಗಾತು ಇನ್ನ... ಗಂಡನ ಪಾಡ ಹ್ಯಾಂಗ ಆಗೀರಬ್ಯಾಡ ಅನ್ಕೊತ ಮೂವಾರು ಅವನ್ನ ನೋಡ್ತೀವಿ ಅಂವಾ... ಹೆಂಡ್ತಿ ಮುಖಾ ನೊಡ್ಕೊಂತನಾ ಉಣ್ಣಾಕ ಹತ್ತ್ಯಾನ ಆಕಿ ಕಣ್ಣ ಸನ್ಯಾಗ ಕೇಳಾಕ ಹತ್ತ್ಯಾಳ ಅಡಗಿ ಹ್ಯಾಂಗ ಆಗೈತಿ ಅಂತ
ಇವನು ಕಣ್ಣ ಸನ್ನಿಲೆ ಮಸ್ತ್ ಆಗೈತಂತಂದು ಸೊನ್ನಿ ಮಾಡಾಕ ಹತ್ಯಾನ. ಇದನ್ನ ನೋಡಿ ಒಂದ ತುತ್ತಿಗೆ ದಿಕ್ಕನೆ ಎದ್ದ ನಿಂತ ಹೊಂಟನಿಂತ ತಕ್ಷಣ ಅಂವಾ ಅಂದ
ಯಾಕೊ ದೋಸ್ತ' ನಾ ಅಂದೆ 'ಹೊಟ್ಟಿ ತುಂಬಿ ಹೋತೊ ಮಾರಾಯ'
ಅವನ ಹೆಂಡ್ತಿ ಅಂದ್ಲು 'ಅಣ್ಣಾರ ಇನ್ನೊಂದ ತುತ್ತ ರೀ'
ನಾನು ಕೈ ಮುಗಿದು 'ಸಾಕ ತಾಯಿ ಮಹಾಭಾರತದೊಳಗ ಶ್ರೀ ಕೃಷ್ಣ ಪರಮಾತ್ಮ ಹ್ಯಾಂಗ ದ್ರೌಪದಿ ಕೈಯ್ಯಾನ ಒಂದ ಅಗಳ ಉಂಡು ಸಂತೃಪ್ತನಾಗ್ತನಲ್ಲ ಹಾಂಗ ಇದೊಂದು ತುತ್ತು ಸಾಯೊ ತನಕ ಮರೆಯೊದಿಲ್ಲವ್ವ' ಅಂತ ಹೇಳಿದ್ದಷ್ಟ ತಡ ಮುಸುರಿ ಕೈನ ಮುಕುಳಿ ಹಿಂದ ಪ್ಯಾಂಟಿಗೆ ಒರಿಸಗೊಂತ ಮನಿಕಡೆಗೆ ಓಟನ..
ಹಿಂಗ ಮಣ್ಣೇತ್ತಿನ ಅಮವಾಸೆ ಸುನೆ ಹೆಂಡ್ತಿ ತವ್ರಿಗೆ ಹೋಗಿದ್ಲು ಇಂವಾ ಮತ್ ಪೋನ ಮಾಡಿದ ದೋಸ್ತ ನಿಮ್ ತಂಗಿ ಊರಿಗೆ ಹೋಗಿ ವಾರಾತೊ ಯಾಕೊ ಮನಿಯಾನ ಅಡುಗಿನ ರುಚಿ ಬರುವಲ್ದೊ ಅಂದ
ನಾನಂದೆ ಬರೋದಿಲ್ಲ ದೋಸ್ತ..ಬರೋದಿಲ್ಲ ಇನ್ನೊಂದ ವಾರ ತಡಿ ನಾನಾ ಹೋಗಿ ತಂಗ್ಯಮ್ಮನ್ನ ಕರಕೊಂಡ ಬಂದ ನಿನ್ ಕಡೆ ಬಿಟ್ಟ ಬರ್ತಿನಿ ಅಂತ ಹೇಳಿ ಕಾಲ್ ಕಟ್ ಮಾಡಿಬಿಟ್ಯಾ
ಇದು ಬಾಂಧವ್ಯದ ರಸಿಕತೆ

೨. ಬೇಸರ - ಮೊದ್ಲ ನಂ ಗಂಡ ಮಕ್ಳ ಗಿಡದಾನ ಮಂಗ್ಯಾ ಇದ್ಹಂಗ ಹೆಂಡ್ತಿ ತವ್ರಿಗೆ ಹೋಗ್ಯಾಳಂತಂದ ತಕ್ಷಣ ಅವತ್ತ ರಾತ್ರಿ ಏನೊ ಬೆಳಕ ಹರೆತನಾನು ಡಾಬಾದಾಗ ಟೆಂಟ್ ಎರಡನೆ ದಿನ ಸಾವಜಿ ಖಾನಾವಳಿ ಮೂರನೆ ದಿನಕ್ಕ ಭೀಮಾಂಬಿಕಾ ಖಾನಾವಳಿ ನಾಲ್ಕನೆ ದಿನಕ್ಕ ಬಾಯಿ ರುಚಿ ಇಲ್ಲ ರುಚಿ ಇಲ್ಲ

೩. ಸರ್ವಾಧಿಕಾರಿ- ಹೆಂಡ್ತಿ ಮ್ಯಾಲ ದೌಲತ್ತ ತೋರಸಿಲಿಕ್ಕಂತಂದ್ರ ನಮ್ಗ ಊಟ ಸೇರೊದರಿಲ್ಲ ನಾಕ ಬೈಗಳ ಬೈದ ಮ್ಯಾಲ ಗಂಟಲದಾಗ ಅನ್ನ ಇಳಿತಿರ್ತದ. ಏನ್ ಪಲ್ಯ ಮಾಡಿಲೆ ಇವನೌನ ಒಂದಕ್ಕರ ಉಪ್ಪಿಲ್ಲ ಖಾರಿಲ್ಲ ಒಂದಿಷ್ಟು ಕೊಬ್ರಿ, ಗುರಳ್ಳ ಪುಡಿ ಹಾಕಿ ಮಾಡಿದ್ರ ಏನ ನಿಮ್ಮಪ್ಪನ ಮನಿ ಗಂಟ ಹೊಕ್ಕಿತ್ತನ ದನಾನರ ತಿಂತಾವನಲೆ ಇಂತ ಖೂಳನ ಅಂದಾಗ
ಒಳಗಿಂದ ಒಂದ ಮಾತ ಬರ್ತದ್ರಿ ಅದ್ಕ ನಿಂಗ ಹಾಕಿನ
ನಮ್ಮಪ್ಪಗ ಹೇಳಿದ್ಯಾ ಇನ್ನೊಂದ ಎರಡ ವರ್ಷ ಬ್ಯಾಡ ತಡಿಯೊ ಮಾರಾಯ ಅಂತಂದ್ರು ಕೇಳಲಿಲ್ಲ ಇಂತಾಕಿನ ತಂದು ಜೋಡ ಮಾಡಿದ ನಂಗ
ಹ್ಞೂಂ.. ಮತ್ತೆ ನಾವೆನರ ಕರಿಯಾಕ ಬಂದಿದ್ವೇನು ಮನಿತನಕ ಇಪ್ಪತ್ತ ಊರ ಅಡ್ಯಾಡಿ ಕೊನಿಗೆ ಬಂದಿದ್ರೆಲ್ಲ ಮಾಡ್ಕೊಂಡ್ರ ಈಕಿನಾ ಮಾಡ್ಕೊತಿನಿ ಅಂತಂದ
ಆವಾಗ ಮಂಕ ಬಡದಿತ್ತಲೆ, ಇವಾಗ ಆಗಿದ್ರ ಲಕ್ಷ ಲಕ್ಷ ರೂಪಾಯಿ ವರದಕ್ಷಿಣೆ ಎಂಟೆಂಟ ತೊಲಿ ಬಂಗಾರ..
ಹೌದಪ್ಪ ಜೊಕಮಾರ ಕೊಡ್ತಿದ್ರ ನಿನ್ಗ, ಹದಿನೈದ ದಿನದ್ದ ಹೋತ್ತಾತ ಕಾಂತಾರ ಸಿನಿಮಾಕ ಕರ್ಕೊಂಡ ಹೋಗಂತಂದ
ಅಂದ ತಕ್ಷಣ ಗಂಟಲನ್ನ ಕ್ಯಾಕರಿಸಿ ಸರಿಮಾಡಿಕೊಂಡು
ಒಂದು ಕವನ ಹೇಳಿ ಬಿಡೊದು
ಎಷ್ಟರ ಸೆಡವು ನನ್ ಮ್ಯಾಲೆ
ಮುಡಿಗೆ ತೊಡಿಸ್ಲೇನ ಮಲ್ಲಿಗೆ ಮಾಲೆ
ಕೇಳ್ಲಿಲ್ಲಂತ ಸಿಟ್ಟಾಗಬೇಡ ನೀನು ಆ ಮೇಲೆ
ಆ ಮೊಗದಾಗ ಮಲ್ಗಿ ನಗುನ ಇಲ್ಲಂತಂದ್ರ
ನಾ ಹ್ಯಾಂಗರ ಬದುಕಿರ್ಲ್ಯಾ ಈ ಭೂಮಿ ಮ್ಯಾಲೆ!!

ಹಚ್ಚಡದ ಪದರಾಗ ಅಚ್ಚ ಮಲ್ಲಿಗೆ ಹೂವ|
ಬೆಚ್ಚಿ ನನ್ನ ಮ್ಯಾಲೆ ಒಗೆವಂಥ |ರಾಯರನ
ಬಿಟ್ಟಾಂಗ ಬರಲಿ ಹಡೆದವ್ವ ||

ಬಿಚ್ಚಿ ನನ್ನ ಮ್ಯಾಲೆ ಒಗೆವಂತ ಆಹಾ.... ಜೇನಿನ ಹುಟ್ಟಿಗೆ ಕೈ ಹಾಕಿ ಸೀದಾ ಬಾಯೊಳಗೆ ಹಿಂಡಿಕೊಂಡಂತಹ ಭಾವ. ಇದನ್ನ ನೆನಸಿಕೊಂಡರೆ ಹರೆದ ಹುಡುಗರು ಎರಡ ಹೆಜ್ಜೆ ಮುಂದಕ್ಕ ಹೋಗ್ತಾರ ನಮ್ಮಂತೊರು ಒಂದ ಹೆಜ್ಜಿ ಹಿಂದಕ್ಕ ಹೋಕ್ಕಿವಿ.
ಇಲ್ಲಿ ಒಂದು ಸಂದರ್ಭವನ್ನು ನಾನು ನೆನಪಿಸಿಕೊಳ್ಳ ಇಷ್ಟಪಡ್ತೀನಿ ಬಹುಶಃ ಆ ತಾಯಿ ಶಾರದೆ ಇಂತಹ ಗಳಿಗೆಯಲ್ಲಿ ಅಂತಹ ವಿಷಯವನ್ನು ನನಗೆ ನೆನಪು ಮಾಡಿಕೊಟ್ಟಿದ್ದಕ್ಕೆ ನಾನು ಧನ್ಯ ಎಂದುಕೊಳ್ಳುತ್ತೇನೆ. ೧೯೯೭-೯೮ ರಲ್ಲಿ ಗಂಗಾವತಿಯಿಂದ ೧೩ ಕಿ.ಮೀ ದೂರ ಇರುವ ಹೊಸಳ್ಳಿ ಕ್ಯಾಂಪನಲ್ಲಿ ನಾನು ಯಾವುದು ಒಂದು ಕಾರಣಕ್ಕೆ ೨೦ ದಿನ ಇದ್ದೆ ಈಗೀನ ಹಾಗೆ ಅಲ್ಲಿನ್ನೂ ಕಾಂಕ್ರೀಟ ಕಟ್ಟಡಗಳು ತಲೆಯೆತ್ತಿದ್ದಲ್ಲ. ಗುಡಿಸಲುಗಳೆ ಜಾಸ್ತಿ, ನಾನಿದ್ದ ಎದುರು ಗುಡಿಸಲಿನಲ್ಲಿ ಒಂದು ಕುಟುಂಬವಿತ್ತು ಇಬ್ಬರೆ ಗಂಡ-ಹೆಂಡತಿ ಅವರದ್ದು ಚಹಾದಂಗಡಿಯ ವ್ಯಾಪಾರ ಬೆಳಿಗ್ಗೆ ೫-೩೦ ಕ್ಕೆ ಆ ತಾಯಿ ಇಡ್ಲಿ ವಡೆ ಮತ್ತು ರಸಂ ನ್ನು ಮಾಡಿಟ್ಟಿರುತ್ತಿದ್ದಳು ಆ ಸುತ್ತಮುತ್ತಲಿನ ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರು ಬೆಳಿಗ್ಗೆ ಆರು ಗಂಟೆಗೆ ಎದ್ದು ಇವರ ಅಂಗಡಿಯಲ್ಲಿ ಇಡ್ಲಿ ವಡೆಯನ್ನು ತಿಂದು ಗದ್ದೆಗಳಿಗೆ ಹೊರಟುಬಿಡುತ್ತಿದ್ದರು ಎಂಟು ಗಂಟೆಯೊಳಗೆ ಮಾಡಿದ ಎಲ್ಲ ತಿಂಡಿ ಖಾಲಿಯಾಗಿಬಿಡುತ್ತಿತ್ತು. ಮತ್ತೆ ತಿಂಡಿಯೇನಾದರು ಬೇಕಾದರೆ ಗಂಗಾವತಿಗೆ ಹೋಗಬೇಕಾಗಿತ್ತಿತ್ತು. ಆದರೆ ಇದಲ್ಲ ವಿಶೇಷತೆ ವಿಷಯ ಏನಪ್ಪಾ ಅಂದರೆ ಆಕೆಯ ಗಂಡ ಸಾಯಂಕಾಲ ಐದು ಗಂಟೆಗೆ ಸೈಕಲ್ ತಗೊಂಡು ಗಂಗಾವತಿಗೆ ಹೋಗಿ ಅಲ್ಲಿಂದ ಕಿರಾಣಿ ಸಾಮಾನನ್ನು ತರುವುದರ ಜೊತೆಗೆ ಮಲ್ಲಿಗೆ ಹೂವನ್ನು ಹಿಡಿದುಕೊಂಡು ಬರುತ್ತಿದ್ದ, ರಾತ್ರಿ ಎಂಟು ಗಂಟೆಯನ್ನುವಷ್ಟರಲ್ಲಿ ಮಲಗಿಬಿಡುತ್ತಿದ್ದರು  ನಾನು ಹೋದ ದಿನದಿಂದ ಹಿಡಿದು ಬರುವ ಹಿಂದಿನ ದಿವಸದವರೆಗೂ ಇದನ್ನೆ ಗಮನಿಸುತ್ತಿದ್ದೆ ನನಗೆ ಕುತೂಹಲವನ್ನು ತಡೆದುಕೊಳ್ಳಲಾರದೆ ನಾನುಳಿದುಕೊಂಡಿದ್ದ ಗುಡಿಸಲಿನ ಮಾಲೀಕನ ಮಗನನ್ನು ಕೇಳಿಯೆಬಿಟ್ಟೆ. ಅವನೆಂದ ಇವತ್ತು ರಾತ್ರಿ ಆ ರಹಸ್ಯನ ನಿನಗೆ ತೋರಿಸ್ತೀನಿ ಅಂದ ನನಗೆ ಒಳಗೊಳಗೆ ಏನೇನೊ ಒಂಥರಾ
ಖುಷಿ ಮತ್ತು ಕಳವಳ ಈ ವಿಷಯವಂತೂ ಇಡಿ ಹಳ್ಳಿಗೆ ಗೊತ್ತಾದ್ದರಿಂದ ಯಾರು ಇವರ ಬಗ್ಗೆ ಅಷ್ಟೊಂದು ತಲೆಯನ್ನು ಕೆಡಸಿಕೊಳ್ಳುತ್ತಿರಲಿಲ್ಲ ನಾನು ಹೊಸಬ ನನಗೇನೊ ಕುತೂಹಲ. ಸರಿ ರಾತ್ರಿ ಎಂಟರ ಸಮಯ ನಮ್ಮ ಮಾಲೀಕನ ಮಗ ಗುಡಿಸಲಿನ ಬಾಗಿಲಿನ ಕಿಂಡಿಯಿಂದ ನನ್ನನ್ನು ನೋಡಲು ತಿಳಿಸಿದ ನಾನು ತುಂಬಾ ಮುಜುಗರದಿಂದಲೆ ನೋಡತೊಡಗಿದೆ.
    ಒಳಗಡೆ ಗುಡಿಸಲಿನಲ್ಲಿ ಇಬ್ಬರು ಊಟಕ್ಕೆ ಕುಳಿತುಕೊಂಡಿದ್ದರು. ಊಟವಾದ ನಂತರ ಅ ಅಜ್ಜ ಅಜ್ಜಿಯ ಭುಜವನ್ನು ಹಿಡಿದು ಮಂಚದ ಮೇಲೆ ಕುಳ್ಳರಿಸಿ ತಾನು ತಂದಂತಹ ಮಲ್ಲಿಗೆಯನ್ನು ಬಾಯಿಯಿಂದ ಹರಿದು ಎರಡು ಭಾಗ ಮಾಡಿ ಒಂದನ್ನು ಅಜ್ಜಿಯ ತುರುಬಿಗೆ ಮುಡಿಸಿ ಹಿಂದೆ ಸರಿದು ಅವಳ ಕಾಲಡಿಯಲ್ಲಿ ಕುಳಿತುಕೊಂಡು ಅಜ್ಜಿಯ ಪಾದಗಳೆರಡನ್ನು ತನ್ನ ತೊಡೆಯ ಮೇಲೆ ತೆಗೆದುಕೊಂಡು ಪೂಜೆ ಮಾಡಿ ಹೂವನ್ನು ಹಾಕಿ ಮತ್ತೆ ಆ ಪಾದಗಳನ್ನು ನೆಲಕ್ಕೆ ಸೋಕಿಸದೆ ಹಾಗೆ ಎತ್ತಿ ಹಾಸಿಗೆಯ ಮೇಲೆ ಇಟ್ಟು ಅಜ್ಜಿಯನ್ನು ಮಲಗಿಸಿ, ಸೊಳ್ಳೆಗಳನ್ನು ಓಡಿಸಲು ಹೊಗೆಯನ್ನು ಹಾಕಿ ನಂತರದಲ್ಲಿ ಮಂಚದ ಸುತ್ತ ಸೊಳ್ಳೆ ಪರದೆಯನ್ನು ಬಿಟ್ಟು ತಾನು ಕೆಳಗಡೆ ಮಲಗಿಕೊಂಡ ಇಂತಹ ದೃಶ್ಯ ಇಂದಿಗೂ ನನ್ನೆದೆಯಲ್ಲಿ ಅಚ್ಛಳಿಯದೆ ಉಳಿದುಬಿಟ್ಟಿದೆ. ಆಶಯ ನುಡಿಗಳನ್ನಾಡುವ ಸಂದರ್ಭದಲ್ಲಿ ಶ್ರೀಯುತರು ಹೇಳಿದ ಹಾಗೆ ನಾವೆಲ್ಲ ಪೂರ್ವ ಜನ್ಮದಲ್ಲಿ ನಿಜವಾಗಲೂ ತಪಸ್ಸನ್ನು ಮಾಡಿರಬೇಕು. ಎಲ್ಲಿಯ ಗಂಗಾವತಿ!! ಎಲ್ಲಿಯ ಕುಂದಗೋಳ!! ಎಷ್ಟೋ ವರ್ಷದ ಹಳೆಯ ನೆನಪು ಇಂದು ಇಲ್ಲಿ ನಾನು ಈ ಸಾಲುಗಳಿಗೆ ಸಂದರ್ಭಕ್ಕನುಗುಣವಾಗಿ ಹೇಳುವುದೆಂದರೆ ನನ್ನದು ದೊಡ್ಡ ಪುಣ್ಯವೆ.
   ಹಾಗೆ ನಾನು ನಮ್ಮಾಕಿಗೆ ಅಗಾಗ ಕಾಲೆಳೆಯಲು ಈ ಕೆಳಗಿನ ಸಾಲುಗಳನ್ನು ಹೇಳುತ್ತಿರುತ್ತೇನೆ.

ತಳಕ್ಯಾಡಿ ನುಳಿಕ್ಯಾಡಿ
ನುಲಿಯತ್ತ ಬರಬೇಡ!!
ನಿಮ್ಮಪ್ಪ ಕೊಟ್ಟ
ಮಂಚದ ಕಾಲು ಗಟ್ಟಿಲ್ಲ!!
ಮುರಿದು ಬಿದ್ದರೆ...
ಎರಡನೆ ಮದುವೆಗಾಗಿ ನನ್ನಲ್ಲಿ
ಸಮಯವಿಲ್ಲ!!

    ಈ ಸಾಲುಗಳನ್ನು ಹೇಳಿದ ಮೇಲೆ ಗಂಡಸರ ಪಾಡು ಏನಾಗಿರಬೇಡ!!?

ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ
ಲಿಂಗಕ ನೀರು ಎರೆದಾಂಗ| ಹಿಡಿ ಹೊಳೆಯ
ಗಂಗಪ್ಪ ಸಾಗಿ ಹರಿಧಾಗ ||

ಸಂಸಾರ ಅಂದಮೇಲೆ ಜಗಳ ಇದ್ದಿದ್ದ. ಜಗಳ ಮಾಡಲಾರ್ದ ಇರೋ ಸಂಸಾರದೊಳಗ ಸಾರನ ಇರೋದಿಲ್ಲ. ಅಂತ ಶಿವ ಪಾರ್ವತಿಯರ ಸಂಸಾರದೊಳಗ ಜಗಳಾಟ ಆಗ್ಯಾವು ಇನ್ನ ನಮ್ಮಂಥ ಸಾಮಾನ್ಯ ಜನರ ಬದುಕನ್ಯಾಗ ಜಗಳ ಇಲ್ಲಂತಂದ್ರ ಹ್ಯಾಂಗ ಅಂದ್ರ ನಾಹೇಳೊ ಅರ್ಥ ಬದುಕನ್ನ ಜಗಳ ಮಾಡ್ಕೊಂತ ಹೋಗಿಬಿಡ್ರಿ ಅನ್ನೊದಲ್ಲ ಮುನಿಸು ಒಂದಿಟು ಬಾಯಿ ಮಾಡ್ರಿ ಬಿ.ಪಿ. ಮತ್ತು ಮಾನಸಿಕ ಒತ್ತಡ ಕಮ್ಮಿ ಅಕ್ಕೈತಿ ಸಂತೋಷ ಸಮಯ ಇದ್ದಾಗ ಜೊತೆಗೆ ಹಂಚಿಕೊಂಡು ನಕ್ಕೊತ ಇರ್ರಿ ಆಯುಷ್ಯ ಹೆಚ್ಚಾಗ್ತದ ಅದ್ಕ ಶಿವ ತನ್ನ ನೆತ್ತಿ ತಣ್ಣಗಿರ್ಲೆಂತಂದ ಗಂಗಿನ ಕುಂದ್ರ್ಸಕೊಂಡು ಪಾರ್ವತಿನ ಪಕ್ಕಕ್ಕ ಕರ್ಕೊಂಡ ಕುಂತಾನ. ನಮ್ದು ನೆತ್ತಿ ತಣ್ಣಗಿರ್ಲೆಂತಂದ ಮತ್ತ ಇನ್ನೊಬ್ರನ್ನ ಕಟ್ಗೊಬ್ಯಾಡ್ರ ಮತ್ತ
ಒಬ್ರ ಹೆಂಡ್ರಿಗೆ ಎರಡು ಕ್ರೆಡಿಟ್‌ ಕಾರ್ಡ್ ಸಾಲೊದಿಲ್ಲ ಅಂತಾದ್ರೊಳಗ ಮತ್ತೊಬ್ಬಾಕಿನ ಕಟ್ಗೊಂಡ ಬಂದ್ವೆಂದ್ರ ತಲಿಮ್ಯಾಲ ಎ.ಟಿ.ಎಮ್ ಮೇಷಿನ್ ಇಟ್ಗೊಂಡ ತಿರಗ್ಯಾಡ
ಬೇಕಾಗ್ತದ.

ನಮ್ಮ ಮನಿಯಾಗನೂ ನಮ್ಮಾಕಿ ಯಾವುದಕ್ಕರ ಸಿಟ್ಟಾದ್ರ
ನಾನು ಹಿಂಗ ಹೇಳ್ತಿನ್ರಿ...

ಸಿಡಿದಾರ ಸಿಡಿಸಿಬಿಡು ನಿನ್ನ
ಮಾತಿನ ಸಿಡಿಮದ್ದು
!!ಕಣ್ಣೀರ ತುಂಬಿದ ಕಣ್ಣಿಲೆ
ನನ್ನ ನೋಡಬ್ಯಾಡ!!
ನೊಂದು - ಬೆಂದು ಬರೆಯಾಕ
ನಾ ಬೇಂದ್ರೆ ಅಜ್ಜ ಅಲ್ಲ

ಹಾಸಿಗೆ ಹಾಸಿಂದ ಮಲ್ಲಿಗೆ ಮುಡಿಯೆಂದ|
ಬೇಸತ್ತರೆ ಮಡದಿ ಮಲಗಿಂದ| ನನ ರಾಯ|
ತನ್ನ ನೋಡಿ ತವರ ಮನೆಯೆಂದ||

ಮಡದೀಯ ಬಡಿದಾನ ಮನದಾಗ ಮರುಗ್ಯಾನ |
ಒಳಗೋಗಿ ಸೆರಗ ಹಿಡಿಯೂತ | ಕೇಳ್ಯಾನ |
ನಾ ಹೆಚ್ಚೋ ನಿನ್ನ ತವರ ಹೆಚ್ಚೋ ||

ಬಹುಶಃ ಜಗತ್ತೀನಲ್ಲಿ ಅತೀ ಭಾವುಕ, ಅಂಜುಬುರುಕ, ಭಾವೋದ್ವೇಗ ಜೀವಿ ಯಾವುದಾದರು ಇದೆ ಅಂತಂದ್ರೆ ಅದು ಗಂಡು ಪ್ರಾಣಿ. ಹುಟ್ಟಿನಿಂದ ಹೆಣ್ಣು  ಸಾಯುವವರೆಗೂ ಗಂಡಿನ ನೆರಳಿನಲ್ಲಿಯೆ ಬದುಕಬೇಕೆಂಬುದನ್ನ ಸಮಾಜ ಶಾಸ್ತ್ರ, ಧರ್ಮ ಕಟ್ಟು ಪಾಡುಗಳೆಲ್ಲ ಹೇಳಿವೆ, ಹೇಳಿಕೊಂಡು ಬಂದಿವೆ ಹೇಳಿಕೊಂಡೆ ಸಾಗುತ್ತಿವೆ ಇದು ತಪ್ಪು. ಗಂಡೆ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಹೆಣ್ಣಿನ ಆಶ್ರಯ, ಮಡಿಲು ಆಕೆಯ ಸಹಾಯ ಸಹಕಾರ ಧೈರ್ಯದಿಂದಲೆ ಬದುಕನ್ನ ಸಾಗಿಸುತ್ತಾನೆ ಮಗುವಾಗಿದ್ದಾಗ ತಾಯಿ ಮಡಿಲು ಯೌವ್ವನಾವಸ್ಥೆಗೆ ಮಡದಿ ಮುಪ್ಪಿನಲ್ಲಿ ಮಗಳು ಮತ್ತು ಮೊಮ್ಮಗಳ ಮೇಲೆ ಹೆಚ್ಚು ವ್ಯಾಮೋಹವನ್ನು ಹೊಂದುಕೊಂಡಿರುವಂತವನಾಗಿರುತ್ತಾನೆ. ಮಕ್ಕಳು ಬೆಳೆದು ಕಾಲೇಜೊ ಹಾಸ್ಟೆಲೊ ಎಂದು ದೂರದೂರಿಗೆ ಹೋದಾಗ ಆಗ ಹೆಂಡತಿ ತವರೂರಿಗೆ ಹೋಗಿ ಬರುತ್ತೇನೆ ಎಂದಾಗ ಮೇಲ್ನೊಟಕ್ಕೆ ಹ್ಞೂಂ ಎಂದರು ಒಳಗೊಳಗೆ ಒಂಟಿತನದ ಭಾವ ಕಾಡಲು ಶುರುವಾಗಿರುತ್ತದೆ.

ನಮ್ಮಾಕಿ ತವರಿಗೆ
ಹೊಂಟು ನಿಂತಾಗಲೆಲ್ಲ ಅವಳ
ಸೇರಗನ್ನು ಹಿಡಿದು ನಾನು
ಬೇಡಿಕೊಳ್ಳುತ್ತೇನೆ ಹೋಗಬೇಡ
ಹೋಗಬೇಡ!! ಎಂದು...
ಆಗ ನನ್ನಾಕೆ ಕಣ್ಣಲ್ಲೆ ಕಣ್ಣೀಟ್ಟು
ಕೈಯಲ್ಲಿದ್ದ ಲಗೇಜನ್ನು ಕೇಳಗಿಟ್ಟು
ಕೇಳುತ್ತಾಳೆ...ಹಂಗಿದ್ರ ಜಾತ್ರಿಗೆ ಸೀರಿ
ತರಾಕ ಸೇಡಜಿ ಅಂಗಡಿಗೆ ಯಾವಾಗ
ಹೋಗುನು...?
ನಾನೆನ್ನುತ್ತೇನೆ ೭ - ೧೫ ರ ಲಾಸ್ಟ್ ಬಸ್
ಮಿಸ್ ಆಕ್ಕೈತಿ ಜಲ್ದಿ ನಡಿ
ಬಸ್ ಸ್ಟ್ಯಾಂಜಡಿಗೆ ಹೋಗುಣು.

ಇಂತಹ ಒಂದು ಸುಂದರ ಅನುಭವದ ಮೂಟೆಯನ್ನು ಕಟ್ಟಿಕೊಡಲು ಅವಕಾಶ ಮಾಡಿಕೊಟ್ಟಂತಹ ಸುಶೀಲಣ್ಣ ಕುಂದರಗಿ ಹಾಗೂ ರವಿ ಕಮದೊಳ್ಳಿ ಮತ್ತು ಕುಂದಗೋಳ ಧಣಿ ಮತ್ತವರ ತಂಡಕ್ಕ ನನ್ನ ಅನಂತ ಶರಣು 🙏

Tuesday, January 24, 2023

ಭೈರಾಗಿ.!!



ಹಂಗೀನ ಬದುಕನ್ಯಾಗ
ಹುಚ್ಚು ಮಲ್ಲರ ಸಂಗ ಯಾಕೋ?
ಜೋಳಗಿ ಹಿಡದ ಹೊಂಟಿ ಹಿಡಿ 
ಪ್ರೀತಿ ಇಲ್ಲದ ಬದುಕಬಲ್ಲವೇನೊ? ಭೈರಾಗಿ!!

ಮಳ್ಳ ಮಾತ ಮಾತಾಡಿ
ಮಂದಿ ಮೋಸ ಮಾಡೊರ ಹೆಗಲ್ಯಾಕೋ?
ಎರಡ ಪದ ಬರಿತೀವಂದ್ರ, ಅದು ಓದೋನ
ಎದಿ ದುಃಖ್ಖಾನ ಕಮ್ಮಿ ಮಾಡಿದ್ರ ಸಾರ್ಥಕ
ಅಲ್ಲವೇನೊ? ಭೈರಾಗಿ!!

ಮುಕ್ಕಣ್ಣನಿಗೂ ಬಿಡದ ತಾಪ-ತ್ರಯ
ನಮ್ಮನ್ನು ಬಿಟ್ಟಿತು ಹೇಗೊ?
ಸಂಸಾರದ ಮಡಿಕ್ಯಾಗ ಕಷ್ಟ-ಸುಖಾನ
ಸಮನಾಗಿ ಕಡದು-ಕುಡದ  ವಿಷಕಂಠ
ನಾಗಬೇಕಲ್ಲವೇನೊ? ಭೈರಾಗಿ!!

ಸಾಸಿವೆ ಜ್ಞಾನವನ್ನು ಹೊಂದದೆ
ಇಲ್ಲಿಯವರೆಗೂ ನಡೆದು ಬಂದು
ಬಿಟ್ಟೆವಲ್ಲೊ?
ತಪಗೈಯ್ಯಬೇಕು, ಒಳಗಿನೆಲ್ಲದವ
ಕಳೆದುಕೊಂಡು; ಬದುಕಬೇಕು ಭೈರಾಗಿ!!
ಬದುಕಬೇಕು...

ಶರಣಪ್ಪ ಬೇವಿನಕಟ್ಟಿ 🙏🙏🙏🙏

ಕಡು ಕತ್ತಲೆ ಹಾದಿಯ ಕ್ರಮಿಸಲು ಕಾವ್ಯದ 
ನಂದದ ಕಂದೀಲ ಕೈಗಿತ್ತ ಆತ್ಮ ಬಂಧುವೆ 
ಬರಿದಾದ ಜೋಗಿ ಜಂಗಮನ ಜೋಳಿಗೆಗೆ
ಅಕ್ಷರಗಳ ಅರಿವ ಸುರಿದು ಹರಸಿದ್ದು ನಿಜವೆ 
ಇಗೋ ನಿನಗೊಂದು ನಮನ !

*****

ಅಪವಾದದ ಅವಮಾನದ ಗೀರು ಗಾಯಗಳಿಗೆ
ಮದ್ದರೆವ ಸಾಹಿತ್ಯ ಸಿದ್ಧ ಸೂತ್ರವ ತಿಳಿಸಿದೆ 
ನೋವಿಗೊಂದು ನಲಿವಿಗೊಂದು ಕವಿತೆ ಬರೆವಂತೆ
ಗೆಳೆತನದ ಮರದ ಮರೆಯಲೇ ನಿಂತು ಹರಸಿದೆ
ಇಗೋ ನಿನಗೊಂದು ನಮನ !

*****

ತಿಳಿದಿರುವುದು ಅಲ್ಪ ತಿಳಿಯಬೇಕಿರುವುದು ಕಲ್ಪ
ಹಿಂದೆ ತೆಗಳಿ ಮುಂದೆ ಹೊಗಳುವವರ ಬಿಡೋ ಹುಚ್ಚ
ನಿನ್ನ ದಾರಿ ನೀ ಹಿಡಿದು ಸಾಗುತಿರು ಎನುತಲಿ ಎಚ್ಚರಿಸಿ
ಹೇಳಿದೆ ಹೀಗಳೆಯುವವರ ಸಾಹಿತ್ಯ ಶಿವನೂ ಮೆಚ್ಚ
ಇಗೋ ನಿನಗೊಂದು ನಮನ !

✍🏻ರಾಜ್ ಆಚಾರ್ಯ
       ೨೪-೦೧-೨೦೨೩




Saturday, November 12, 2022

ಮಂಗಳಮುಖಿ ೧

ಮಂಗಳಮುಖಿ ೧
   ಪೇಟೆಗೆ ಹೋಗಿ ಹಾಲು ಮತ್ತು ತೋಟದಲ್ಲಿ ಬೆಳೆದಂತಹ ತರಕಾರಿಗಳನ್ನು ಮಾರಿಕೊಂಡು ಮರಳಿ ಹಳ್ಳಿಗೆ ಬರುವ ಮಾರ್ಗ ಮಧ್ಯದಲ್ಲಿ ನಿಂಗವ್ವನ ಗಂಡನ ಬೈಕ್ ಗೆ ಎದುರಿನಿಂದ ಬರುತ್ತಿದ್ದ ಲಾರಿಯ ನಿಯಂತ್ರಣ ತಪ್ಪಿ ಇವನ ಬೈಕ್ ಗೆ ಗುದ್ದಿದರ ಪರಿಣಾಮ ನಿಂಗವ್ವನ ಗಂಡನ ಪ್ರಾಣ ಸ್ಥಳದಲ್ಲಿಯೆ ಹೋಗಿಬಿಡುತ್ತದೆ. ಲಾರಿ ಚಾಲಕ ಬೈಕ್ ಸವಾರನಿಗೆ ಏನಾಗಿದೆ ಎಂದು ನೋಡದೆ ಲಾರಿಯನ್ನು ಮತ್ತಷ್ಟು ವೇಗವಾಗಿ ಓಡಿಸಿಕೊಂಡು ಹೋಗಿಬಿಡುತ್ತಾನೆ. 
ಆಗಿನ್ನೂ ಚಿಕ್ಕ ವಯಸ್ಸು ನಿಂಗವ್ವನದು. ಒಬ್ಬನೆ ಮಗ, ಮೂರು ವರ್ಷದವನಿರಬೇಕು. ತುಂಬು ಹರೆಯದ, ಇನ್ನೂ ಬದುಕಿನ ಸಿಹಿ-ಕಹಿಗಳ ಅನುಭವಿಸಿದ  ವಯಸ್ಸಿನಲ್ಲಿ ಈ ದುರ್ಗತಿ ಬಂದಿದ್ದನ್ನು ನೋಡಿ ಊರಿಗೆ ಊರೆ ದುಃಖದ ಮಡುವಿನಲ್ಲಿ ಮಿಂದಿತ್ತು. ತವರು ಮನೆಯವರು ಎಷ್ಟೋ ಒತ್ತಾಯವನ್ನು ಮಾಡಿದರು ತವರಿಗೆ ಕರೆದುಕೊಂಡು ಹೋಗಲು. ಕೊಟ್ಟು ಹೆಣ್ಣು ಕುಲಕ್ಕೆ ಹೊರಗೆ ಎಂಬಂತೆ ನಿಂಗವ್ವ ಕಲ್ಲು ಬಂಡೆಯಂತೆ ಧೃಡ ನಿರ್ಧಾರಕ್ಕೆ ಬಂದುಬಿಟ್ಟಿದ್ದಳು. ಗಂಡ ಬಿಟ್ಟು ಹೋದಂತಹ ಮೂರುವರೆ ಎಕರೆ ತೋಟದಲ್ಲೆ ದುಡಿದು, ಮಗನನ್ನು ಬೆಳಸಿಕೊಂಡು, ಕಷ್ಟಾನೊ?, ಸುಖಾನೊ? ಬಂದದ್ದು ಬರಲಿ ಗಂಡನ ಮನೆ ಹೊಸ್ತಿಲನ್ನು ನಾನು ದಾಟಿ ಬರುವುದಿಲ್ಲ ಎಂದು ಹಿಡಿದುಕೊಂಡಿದ್ದ ಅವಳ ಹಠವೆ ಜಯಿಸಿತ್ತು. ನಿಂಗವ್ವನ ಗಂಡ ಅತ್ತೆ ಮಾವಂದರಿಗೆ ಒಬ್ಬನೆ ಒಬ್ಬ ಮಗ. ಇವರ ವಿವಾಹವಾದ ಎರಡು ವರ್ಷದಲ್ಲೆ ಅವರು ಶಿವನ ಪಾದವನ್ನು ಸೇರಿಕೊಂಡಿಬಿಟ್ಟಿದ್ದರು ಅನಾರೋಗ್ಯದಿಂದ. ಗಂಡನ ಮನೆಯಲ್ಲಿಗ ಇವಳು ಮತ್ತು ಹಾಲುಗಲ್ಲದ ಹಸುಗೂಸು ಮಾತ್ರ. ಈ ಕಾರಣಕ್ಕಾಗಿ ತವರು ಮನೆಯವರು ಇವಳನ್ನು ತವರಿಗೆ ಕರೆದುಕೊಂಡು ಹೋಗುವ ನಿರ್ಧಾರಕ್ಕೆ ನಿಂಗವ್ವ ತಣ್ಣೀರನ್ನು ಎರೆಚಿದ್ದಳು.  ಇವಳ ಈ ದಿಟ್ಟ ನಿರ್ಧಾರಕ್ಕೆ ಬೆಂಬಲವಾಗಿ, ಗಂಡನ ಪ್ರಾಣ ಸ್ನೇಹಿತನಾದಂತಹ ಮಲ್ಲಪ್ಪ ಮತ್ತು ಅವನ ಮಡದಿ ಶಾಂತವ್ವಳು ಬೆಂಗಾವಲಾದರು. ವಿಧಿ ಇಲ್ಲದೆ ತವರು ಮನೆಯವರು ನಿಂಗವ್ವಳನ್ನು ಗಂಡನ ಮನೆಯಲ್ಲಿಯೆ ಬಿಟ್ಟು ಹೋದರು. 
     ಕಾಲದ ಸುರುಳಿ ಸುತ್ತುತ್ತ ಬಂದಿತು. ಮಲ್ಲಪ್ಪನ ಬೆಂಬಲ, ಸಲಹೆಗಳೊಂದಿಗೆ ತೋಟವನ್ನು ನಳನಳಿಸುವಂತೆ ಮಾಡಿದಳು, ವರ್ಷಕ್ಕೆರಡು ಬೆಳೆಗಳು, ಕಾಲಕಾಲಕ್ಕೆ ಗೊಬ್ಬರ ನೀರನ್ನು ಕೊಡುತ್ತಾ ಬಂಗಾರದಂತಹ ಬೆಳೆಗಳನ್ನು ಬೆಳೆಯುವಲ್ಲಿ, ಬೆಳೆದ ಬೆಳೆ, ತರಕಾರಿಗಳನ್ನು ತಾನೆ ಖುದ್ದಾಗಿ ಮಾರುಕಟ್ಟೆಗೆ ಸಾಗಿಸಿ ಮಾರಾಟವನ್ನು ಮಾಡಿಕೊಂಡು ಬರುತ್ತಾ ಜೊತೆಜೊತೆಯಲ್ಲಿ ಮಗನ ಆರೈಕೆ, ಅಭ್ಯಾಸದ ಕಡೆಗೂ ಗಮನವನ್ನು ಹರಿಸಿ, ಬೆಳೆಸಿ ಕಾಲೇಜಿಗೆ ಸೇರಿಸಿದ್ದಳು. ಮಲ್ಲಪ್ಪನ ಮಗನು ನಿಂಗವ್ವನ ಮಗನು ಒಂದೆ ವಯಸ್ಸಿನವರಾದ್ದರಿಂದ ಇಬ್ಬರನ್ನು ಜೊತೆಗೂಡಿಯೆ ಪದವಿಪೂರ್ವ ಶಿಕ್ಷಣಕ್ಕೆ ಹಳ್ಳಿಯಿಂದ ಸುಮಾರು ಇಪ್ಪತ್ತೆರಡು ಕಿ. ಮೀ. ದೂರವಿರುವ ಗಜೇಂದ್ರಗಡ ನಗರದ ಕಾಲೇಜಿನಲ್ಲಿ ಸೇರಿಸಿ ಬಂದಿದ್ದರು. 

ಎಲ್ಲವು ಸರಿಯಾಗಿಯೆ ನಡೆದುಕೊಂಡು ಹೊರಟಿತ್ತು. ಎಲ್ಲವೂ... ಸರಿಯಾಗಿ, ನಾವಂದುಕೊಂಡಂತೆಯೆ ನಮ್ಮ ಬದುಕಿನ ಹಾದಿ ಹಾಸಿದ್ದರೆ!!! ನರೇಂದ್ರ ಬುದ್ಧನಾಗುತ್ತಿದ್ದನೊ?
ಕಂಸ ಸಾಯುತ್ತಿದ್ದನೊ? ಗಾಂಧಿ ಮಹಾತ್ಮನಾಗುತ್ತಿದ್ದನೆ?
ತಿಮ್ಮಕ್ಕ ಸಾಲುಮರಗಳ ತಾಯಿಯಾಗುತ್ತಿದ್ದಳೆ? ವೀರಪ್ಪನ್ ಬಂದೂಕು ಹಿಡಿದುಕೊಳ್ಳುತ್ತಿದ್ದನೆ? ಕಾಡುವ ಹಸಿವಿಗೆ ಮಂಚವನೇರುವ ದುಸ್ಥಿತಿ ಅವಳಿಗೆ ಬರುತ್ತಿರಲಿಲ್ಲ ಬದುಕೆ ಹೀಗೆ ಅಲ್ಲವೆ? ಹಾದಿಯೊಳಗಿನ ಅದಾವ ತಿರುವು ನಮ್ಮ ಬದುಕಿನ ದಿಕ್ಕನ್ನೆ ಬದಲಿಸಿಬಿಡುತ್ತದೆಯೋ? ಯಾರಿಗೆ ಗೊತ್ತು. ಹಾಲೆಂದುಕೊಂಡದ್ದು ವಿಷವಾಗಿಬಿಡುತ್ತದೆ,  ಕೊಳವಾಗಿದ್ದದ್ದು ಕೆಸರಾಗಿಬಿಡುತ್ತದೆ, ಕಲಿಸಿಟ್ಟ ಅಗುಳು ಹಳಸಿ ಹೋಗುತ್ತದೆ. ಹೀಗೆ ತುಂಬು ಚಂದಿರನ ಪ್ರತಿರೂಪವನ್ನೆ ಹೋಲುತ್ತಿದ್ದಂತಹ, ಹೆಂಗಸರು ಮುಟ್ಟಿದರೆ ಮಾಸಿ ಹೋಗುವವನೇನೊ? ಎಂಬಂತಹ ಮೈ ಬಣ್ಣ, ನಕ್ಕರೆ ಪೂರ್ಣಿಮೆಯ ಬೆಳಕನ್ನು ನಿವಾಳಿಸಿ ಒಗಿಯಬೇಕೆನ್ನುವಂತಹ ಸೆಳೆತ ಇಂತಹ ಸ್ಪುರದ್ರೂಪಿ ಶಶಿಕಾಂತನ ಯೌವ್ವನದ ಹಾದಿಯು ಒಂದು ತಿರುವನ್ನು ಕಂಡಿತು. 
ಮಲ್ಲಪ್ಪನ ಮಗ ನಾಗರಾಜನಿಗೂ ಗೊತ್ತಿರಲಿಲ್ಲ, ಕಾಲೇಜ್ ಬಿಟ್ಟ ತಕ್ಷಣ ಒಂದರ್ಧ ಗಂಟೆ ನಾಗರಾಜನನ್ನು ಬಸ್ ನಿಲ್ದಾಣದಲ್ಲಿಯೆ ಕೂರಿಸಿ, ಶಶಿಕಾಂತನು ಎಲ್ಲಿಗೂ ಹೋಗಿ ಬರುತ್ತಿದ್ದನು. ಬರುವಾಗ ಮಾತ್ರ ಅವನ ಮುಖ ಸೇಬು ಹಣ್ಣಿನ ಕೆಂಪು ಬಣ್ಣದ ಹಾಗೆ ರಂಗೇರಿರುತ್ತಿತ್ತು. ನಾಗರಾಜ ಈ ವಿಷಯವನ್ನು ಎಷ್ಟು ಕೇಳಿದರು ಶಶಿಕಾಂತನು ಒಂದು ದಿನವು ಗುಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ ' ಟೈಂ ಬರ್ಲಿ ತಗೊಳ್ಲೆ ಮಗ್ನ ಆವಾಗ ನಿಂಗ ಎಲ್ಲಾ ಗೊತ್ತಾಕೈತಿ' ಎಂದು ಊರ ಬಸ್ಸನ್ನು ಹತ್ತಿ, ಹಳ್ಳಿಯನ್ನು ತಲುಪುವವರೆಗೂ ಮೊಬೈಲ್ ನಲ್ಲಿ ಆ ವ್ಯಕ್ತಿಯೊಂದಿಗೆ ಮಾತನಾಡುತ್ತಲೆ ಇರುತ್ತಿದ್ದ.


ರಾತ್ರಿ ಎಂಟೂವರೆಯಾಗಿತ್ತು, ಮಲ್ಲಪ್ಪನು ಅದೆ ತಾನೆ ಊಟವನ್ನು ಮಾಡಿಕೊಂಡು ಬಂದು ಜಗುಲಿಯ ಮೇಲೆ ಕುಳಿತುಕೊಂಡಿದ್ದನು. ಮಡದಿ ಶಾಂತವ್ವ ವಿಳ್ಯೆದೆಲೆ ತಟ್ಟೆಯನ್ನು ತಂದು ಗಂಡನ  ಮುಂದಿಟ್ಟಳು. ಸಣ್ಣಪ್ಪನು ಒಂದೆರಡು ಎಲೆಗಳನ್ನು ತೆಗೆದುಕೊಂಡು ತೊಟ್ಟನ್ನು ಚಿವುಟಿ ಒಗೆದು,  ಬಲಗೈ ಹೆಬ್ಬರಳಿನಿಂದ ಸುಣ್ಣದ ಡಬ್ಬಿಯಲ್ಲಿದ್ದ ಸುಣ್ಣವನ್ನು ಗೀರಿಕೊಂಡು ಎಲೆಗಳಿಗೆ ಸವರಿ, ಒಂದೆರಡು ಅಡಿಕೆ ಹೋಳುಗಳನ್ನು ಮತ್ತು ಒಣ ಕೊಬ್ಬರಿಯ ತುಂಡೊಂದನ್ನು ಮುರಿದಿಟ್ಟುಕೊಂಡು ಎಲೆಯನ್ನು ಮಡಿಚಿ, ಬಾಯೊಳಗೆ ಹಾಕಿಕೊಂಡು ಜಗಿಯತೊಡಗಿದನು. ಹತ್ತು ನಿಮಿಷ ಕಳೆಯಿತು , ಎದುರು ಮನೆಯಿಂದ ನಿಂಗವ್ವ ಮೈ ತುಂಬಾ ಸೆರಗನ್ನು ಹೊದ್ದುಕೊಂಡು ಬಂದಳು 'ಯಣ್ಣಾ ಊಟಾಯ್ತಾ?, ಅತ್ತೆಮ್ಮ ನಿಂದು'  ಕೇಳುತ್ತ ತಲೆಯ ಮೇಲಿನ ಸೆರಗನ್ನು ಸರಿಪಡಿಸಿಕೊಂಡು ಶಾಂತವ್ವಳ  ಹತ್ತಿರಕ್ಕೆ‌ ಬಂದು ನಿಂತಳು. ಮಲ್ಲಪ್ಪನೆಂದರೆ ಎಲ್ಲಿಲ್ಲದ ಭಯ, ಭಕ್ತಿ, ಗೌರವವಲ್ಲದೆ ಸ್ವಂತ ಅಣ್ಣನಿಗಿಂತಲೂ ಒಂದು ಕೈ ಮೇಲೆಯೆ ಎನ್ನುವಂತಿದ್ದ ನಂಬಿಕೆ.

ನಿಂಗಪ್ಪ ಬಾಯಲ್ಲಿ ತುಂಬಿಕೊಂಡಿದ್ದ ವಿಳ್ಳದ ರಸವನ್ನು ಕಟ್ಟೆಯಾಚೆಗೆ ಉಗಿಯುತ್ತಾ, 'ನಿಂದೂಟ ಆತನವಾ?'
'ಹ್ಞೂಂ' 
'ಮತ್ತೇನವ ಸಮಾಚಾರ, ಬೆಳಿಗೆ ಹುಳಾ ಬಿದ್ದಾವಂತ, ಆ ಹಿತ್ಲಮನಿ ಸೀನ್ಯಾಗ ಹೇಳಿನಿ, ಹೊತ್ತಾರೆನೆ ಹೋಗ್ಬಿಟ್ಟು ಬೆಳಿಗೆಲ್ಲಾ ಎಣ್ಣಿ ಹೊಡ್ದಬಿಟ್ಟ ಬಂದ್ಬಿಡಂತ ಹೇಳಿನಿ'.
'ಹಂಗಾ ಆಗ್ಲಾಳಣ್ಣ' ಸೋತ ಧ್ವನಿಯಲ್ಲಿ ಮಾತನಾಡಿದಳು.
ಅವಳ ಮಾತಿನಲ್ಲಿ ಗೆಲುವಿಲ್ಲದಿರುವುದನ್ನು ಕಂಡುಕೊಂಡ ಮಲ್ಲಪ್ಪನು, ಮುಂದೆ ತುಂಬಿಟ್ಟಿದ್ದ ಚರಿಗೆ ನೀರನ್ನು ಎತ್ತಿಕೊಂಡು ಬೀದಿಯ ಪಕ್ಕಬಂದು, ಬಾಯಲ್ಲಿ ಹಾಕಿಕೊಂಡಿದ್ದ ವಿಳ್ಯದೆಲೆಯನ್ನು ಉಗುಳಿ, ಚರಿಗೆ ನೀರಿನಿಂದ ಬಾಯಿಯನ್ನು ತೊಳೆದುಕೊಂಡು, ಮರಳಿ ಕಟ್ಟೆಯ ಮೇಲೆ‌ ಕುಳಿತುಕೊಂಡು ಗಂಭೀರವಾಗಿ ಮಾತನಾಡಲು ಗಂಟಲನ್ನು ಕೆಮ್ಮಿ ಧ್ವನಿಯನ್ನು ಸರಿಪಡಿಸಿಕೊಂಡು ಎರಡು ನಿಮಿಷ ಸುಮ್ಮನಿದ್ದು, 'ಹೇಳವಾ ಏನರ ಬ್ಯಾರೆ ಮಾತಾಡೋದೈತನು?'
'ಅದು ಊರಿಂದ ಅಣ್ಣಯ್ಯ ಬೆಳಿಗ್ಗೆ ಪೋನ್ ಮಾಡಿದ್ದ'
'ಏನಂತ?'
'ಮಗ್ಳ ಸುಮವ್ವಗ ಗಂಡ ನೋಡಾಕ್ಹತ್ತಾರಂತ'
'ಹೌದಾ? ಆಗ್ಲೆ ಲಗ್ನ‌ ಮಾಡುವಷ್ಟ ಬೆಳ್ದ ಬಿಡ್ತಾ ಆ ಹುಡ್ಗಿ, ಇವನೌನ್ ಅಲ್ಲ ಬೆ ಮೊನ್ ಮೊನ್ನೆ ಶಾಣಬಸಪ್ಪನ ಜಾತ್ರ್ಯಾಗ ಲಂಗಾ ದಾವಣಿ ಹಾಕೊಂಡ ಓಡಾಡ್ತಿದ್ದ ಹುಡ್ಗಿ ಅದು. ಅದಕ್ಕ ಲಗ್ನಾನ? ಹಂಗವ್ವಾ.. ಹೆಣ್ಮಕ್ಳಂದ್ರ ನಿಲಗೇರಿ ಗಿಡ ಇದ್ದಂಗ ಪುರುಪುರು ಅಂತಂದ ಬೆಳ್ದ ನಿಂತ ಬಿಡ್ತಾವು, ನಮ್ಗ ಒಂದು ಹೆಣ್ಣಿಲ್ಲ, ಇದ್ದಿದ್ರ ಇಷ್ಟೊತ್ಗೆ ನಾನು ನೀನು ಅಜ್ಜಾ ಅಜ್ಜಿಯಾಗಿ ಮೊಮ್ಮಕ್ಳನ ಆಡಿಸಿಕೊಂತ ಕುಂದ್ರಬೇಕಾಗಿತ್ತ ನೋಡ್ವಾ, ಹ್ಞೂಂ.. ಮದ್ವಿ, ಮಕ್ಕಳು, ಮೊಮ್ಮಕ್ಳು ಹಿಂಗಾ ಕಣ್ಮುಚ್ಚಿ ಕಣ್ ತೆಗಿಯೊದ್ರಾಗ ಎಲ್ಲಾ ಆಗಿ ಹೋಗಿ ಬಿಡ್ತಾವು. ಹೊಟ್ಟಿ-ಬಟ್ಟಿಗೆ ಕಮ್ಮಿ ಇರ್ಲಿಲ್ಲಂತಂದ್ರ ದಿನಾ ಹ್ಯಾಂಗ ಹ್ವಾದವು ಅನ್ನೋದ ತಿಳಿಯಂಗಿಲ್ಲ ನೋಡ್ವಾ. ಮತ್ತೇನೀಗ ಇಲ್ಲೆ ಎಲ್ಲೇರ ಗಂಡ ನೋಡ್ಬೇಕಂತನು?'
ಅಷ್ಟೊತ್ತು ಸುಮ್ನಿದ್ದ ನಿಂಗವ್ವ, ಬಾಯಿಗೆ ಸೀರೆ ಸೇರಗನ್ನು ಹಿಡಿದು ಬಿಕ್ಕಳಿಸಿ ಅಳತೊಡಗಿದಳು.
'ಯಾಕ ನಮ್ಮವ್ವ, ಏನಾತು' ಶಾಂತಾಳು ನಿಂಗವ್ವನ ಭುಜಕ್ಕೆ ಕೈ ಹಾಕಿ ತಬ್ಬಿಕೊಂಡು ಕೇಳಿದಳು.
ನಿಂಗವ್ವ, ಕಣ್ಣೀರನ್ನು ಒರೆಸಿಕೊಳ್ಳುತ್ತಾ,
'ಮನ್ಯಾಗ ಎದಿಯುದ್ಕ ಬೆಳ್ದ ನಿಂತ  ಅಳಿಯಾ ಅದಾನ, ಅವನ್ನ ಬಿಟ್ಟ ಮತ್ ಹೊರ್ಗನೊರ್ ಯಾರಿಗೊ ಮಗ್ಳ ಕೊಡ್ತಾನಂತ, ನಾನೇನ ಸತ್ ಹೋಗಿನೇನು ಅವ್ರ ಪಾಲಿಗೆ, ಆಕಿನ್ನ ನಿನ್ನ ಮಗ್ಗ ತಗೊರವಾ ಅಂತ ಕೇಳಿದ್ರ ನಾನೇನ ಬ್ಯಾಡ ಅಂತಿದ್ನೇನು? ಕಳ್ಳು-ಬಳ್ಳಿಂತಂದ ಕಲಿಯೋದರ ಯಾವಾಗ? ಆಕಿನ್ನ ಈ ಮನಿ ಸೊಸಿ ಮಾಡ್ಕೊಂಡನೆಂತಂದ್ರ ಛಲೋ ಆಕ್ಕೈತಿಲ್ಲೊ? ಅವ್ರಿಗೆ ಮಗ್ಳು ಇಲ್ಲೆ ಕಣ್ ಮುಂದೆ ಇರ್ತಾಳ, ನಂಗೂ ಬ್ಯಾರೆ ಸೊಸಿನ ತಂದ ಆಕಿಗೂಟ ಏಗೊದ ತಪ್ಪತೈತಿ' ಎದೆಯೊಳಗಿದ್ದ ದುಗುಡವನ್ನೆಲ್ಲ ತೋಡಿಕೊಂಡಳು.
ವಿಷಯವನ್ನು ಅರಿತುಕೊಂಡ ನಿಂಗಪ್ಪನು 
'ಆತ ತಗೋಬೆ, ಇಷ್ಟಕ್ಕೆಲ್ಲ ಯಾಕ ಕಣ್ಣೀರ ಹಾಕಿ, ನಂ ಹುಡ್ಗೇನ ಕುರ್ಡನ, ಕುಂಟ್ನ ಅವ್ರ ಕನ್ಯೆ ಕೊಡೊದಿಲ್ಲ ಅನ್ನಾಕ... ನಾಳಿ ಮುಂಜಾನಿನ ಖುದ್ದ ಹೋಗಿ ಲಗ್ನದ ವಿಷಯನಾ ಮಾತಾಡಿಕೊಂಡ ಬರ್ತಿನಿ, ನಿನೇನ ಅದ್ರ ಬಗ್ಗೆ ಚಿಂತಿ ಮಾಡಾಕ ಹೋಗಬ್ಯಾಡ ಆತ'
ಹ್ಞೂಂ... ಎನ್ನುವ ರೀತಿಯಲ್ಲಿ ತಲೆಯನ್ನಾಡಿಸಿದಳು ನಿಂಗವ್ವ.

  ಬೆಳಿಗ್ಗೆ ಬೇಗ ಎದ್ದವನೆ, ನಿಂಗವ್ವಳ ತವರು ಮನೆಗೆ ಹೋಗಿ ಎಲ್ಲ ನಿಶ್ಚಿತಾರ್ಥ, ಮದುವೆಯ ಕುರಿತು ಮಾತನಾಡಿಕೊಂಡು ಬಂದು ನಿಂಗವ್ವಳಿಗೆ ತಿಳಿಸಿದನು. ಅಣ್ಣನು ತನ್ನ ಮಗಳನ್ನು ಶಶಿಕಾಂತನಿಗೆ ಕೊಡುವ ಮಾತನ್ನು ಕೇಳಿ ಎದೆತುಂಬಿ ಬಂದಿತ್ತು.  ವಾರದಲ್ಲಿ ಹೋಳಿಗೆ ಊಟ ಎನ್ನುವುದು ಖಾತರಿಯಾಯಿತು. ಇದೆ ಸಂದರ್ಭದಲ್ಲಿ ಮಲ್ಲಪ್ಪನ ಮಗ ನಾಗರಾಜನಿಗೂ ಪಕ್ಕದ ಹಳ್ಳಿಯಿಂದ ಹೆಣ್ಣನ್ನು ನಿಶ್ಚಿಯಿಸಿ ಎರಡು ಕಾರ್ಯಗಳನ್ನು ಒಂದೆ ದಿನ ಮಾಡಿ ಮುಗಿಸಿ, ಎರಡು ಮದುವೆಯನ್ನು ಒಂದೆ ಚಪ್ಪರದಲ್ಲಿ ಮಾಡಿ ಮುಗಿಸಿಬಿಡುವ ಯೋಚನೆಯೊಂದಿಗೆ, ಎಲ್ಲರೂ ಮದುವೆ ತಯಾರಿಯ ಕಾರ್ಯದಲ್ಲಿ ತೊಡಗಿಕೊಂಡರು. ಇಲ್ಲಿ ಶಶಿಕಾಂತನ ಮೊಗದಲ್ಲಿ ಮದುವೆ ಮದುಮಗನ ಕಳೆ ಇಲ್ಲದಿರುವುದನ್ನು ಯಾರೊಬ್ಬರು ಗಮನಿಸಲೆ ಇಲ್ಲ. ಮದುವೆಗೆ ಇನ್ನೊಂದು ವಾರ ಬಾಕಿ ಇದ್ದಾಗಲೆ,.

ಮಂಗಳಮುಖಿ ೨

ದಬ್...ದಬ್....ದಬ್...ದಬ್ಬೆಂದು ಬಾಗಿಲು ಬಡಿಯುವ ಸದ್ದು, ಮಲ್ಲಪ್ಪ ನಿದ್ದೆಗಣ್ಣಿನಲ್ಲಿ ಗೊಣಗುತ್ತಲೆ ಹಾಸಿಗೆಯಿಂದ ಎದ್ದು, ಕೋಣೆಯ ಲೈಟನ್ನು ಹಾಕಿ ಗೋಡೆಗೆ ನೇತು ಹಾಕಿದ್ದು ಗಡಿಯಾರವನ್ನು ನೋಡಿದನು ಆಗಲೆ ಐದು ಮುಕ್ಕಾಲಾಗಿತ್ತು, ' ಛೆ ಯಾಕಿಷ್ಟೊತ್ತು ಮಕ್ಕೊಂಡ್ಬಿಟ್ಟಿ ಇವತ್ತು,,' ಎಂದುಕೊಳ್ಳುತ್ತಲೆ ' ಯಾರ್ರೀ ಅದು..?' ಅಂತಾ ಕೇಳುತ್ತಲೆ ಬಾಗಿಲ ಹತ್ತಿರ ಬಂದು ಬಾಗಿಲನ್ನು ತೆಗೆದು ನೋಡಿದನು. ಹೊರಗೆ, ದೆವ್ವವನ್ನು ಕಂಡು, ಗರ ಬಡಿದವರಂತೆ ಕಣ್ಣಲ್ಲಿ ಭಯವನ್ನು ತುಂಬಿಕೊಂಡು ಕೈ ಕಾಲುಗಳೆಲ್ಲ ನಡಗಿಸುತ್ತಾ ನಿಂತಿದ್ದಳು ನಿಂಗವ್ವ.
'ಯಾಕ್ಬೆ ತಂಗಿ ಇಷ್ಟ ನಸಿನ್ಯಾಗ (ನಸುಕಿನಲಿ), ಬಾಗ್ಲ ಬಡಿಯಾಕ್ಹತ್ತಿಯಲ್ಲ, ಏನಾತ ?' ತನ್ನ ಪಿಚ್ಚುಗಟ್ಟಿದ ಕಣ್ಣುಗಳನ್ನು ತಿಕ್ಕುತ್ತಾ, ಹಾ... ಎಂದು ಆಕಳಿಸುತ್ತಲಿದ್ದನು.
'ಅಣ್ಣ...' ಎನ್ನುತ್ತಲೆ ಕಣ್ಣಿಂದ, ಕಾಲುವೆ ಒಡೆದು ಹರಿವ ನೀರಿನಂತೆ ಕಣ್ಣೀರು ಹರಿಯತೊಡಗಿತು.
ನಿಂಗವ್ವ ಅಳುವುದನ್ನು ಕಂಡ ಬೆದರಿದ ಮಲ್ಲಪ್ಪ, ಪೂರ್ಣವಾಗಿ ಎಚ್ಚರವಾದಂತಾಗಿ ' ಬಾ...ಬಾ... ಒಳಗ ಬಾರವ ಮೊದ್ಲ ನೀನು' ಎಂದು ಮನೆಯ ಒಳಗೆ ಕರೆದು ' ಲೆ ಇವ್ಳೆ, ಬಾರೆ ಬೇಗ, ' ಹೆಂಡತಿಯನ್ನು ಕೂಗುತ್ತಾ, ಪಡಸಾಲೆ ಕೋಣೆಯ ಲೈಟನ್ನು ಹಾಕಿ, ನಿಂಗವ್ವನಿಗೆ ಕುಳಿತುಕೊಳ್ಳಲು ಕುರ್ಚಿಯನ್ನು ಹಾಕಿದನು. ಸೀರೆ ಸೇರಗಂಚಿಂದ ಬಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಮುದ್ದೆಯಾಗಿ ಕುರ್ಚಿಯ ಮೇಲೆ ಕುಳಿತುಕೊಂಡಳು. ಅಷ್ಟರಲ್ಲಿ ತಲೆಯ ತುರುಬನ್ನು ಕಟ್ಟಿಕೊಳ್ಳುತ್ತಾ ಮಲಗುವ ಕೋಣೆಯಿಂದ ಹೊರಗಡಿಯಿಡುತ್ತ,
'ಏನ್ರೀ ನಿಮ್ದು, ರಾಮಾಯಾಣ ಇವತ್ತೊಂದ ದಿನಾನರ ಇನ್ನೊಂದ ಗಳ್ಗಿ ನಿದ್ದಿ ಮಾಡ್ತಿದ್ನಿ, ರಾತ್ರಿ ಎಷ್ಟೊತ್ತನಾ ನಿಂ...' ಬಾಯೊಳಗಿನ ಮಾತು ಎದುರಿಗೆ ನಿಂಗವ್ವ ಕುಂತಿದ್ದನ್ನು ನೋಡಿ ಮಾತು ಅರ್ಧದಲ್ಲೆ ಕತ್ತರಿಸಿತು. ಕಣ್ಣುಗಳನ್ನು ಕಾಸಗಲ ಅಗಲಿಸಿಕೊಂಡು ಅಳುತ್ತಿದ್ದ ನಿಂಗವ್ವನ ಹತ್ತಿರ ಬಂದು ಎರಡು ಕೈಗಳಿಂದ ಅವಳ ಭುಜವನ್ನು ಹಿಡಿದುಕೊಂಡು 'ಅಯ್ಯ, ಶಿವ್ನ ಯಾಕ ಯವ್ವಾ, ಏನಾತ ಮುಂಜ ಮುಂಜಾನೆದ್ದ ಕಣ್ಣೀರ ಹಾಕ್ಕೊಂತ ಬಂದಿಯಲ್ಲ ಹಡದವ್ವ, ಅಂತಾದೇನಾತಿಗ, 
ಅಲ್ಲಾ‌ ಇವತ್ತೀನ ದೈವದ ಕಾರ್ಯದ ಅಡ್ಗಿಗೆ ಎಲ್ಲಾ ನಿನ್ನೆ ರಾತ್ರಿನ ಹೆಚ್ಚಿ, ವಾಗತ್ತ ಮಾಡಿಬಂದಿದ್ನೆಲ್ಲಬೆ..‌ಏನಾರ ಇನ್ನೂ ಮಾಡೋದೈತನು, ಅಣ್ಣ ಏನಾರ ರಗಳಿ ಪಗಳಿ ತಗ್ದಾನನು ಮತ್ತ' ಉಸಿರು ಬಿಡದ ಹಾಗೆ ಒಂದೆ ಸಮನೆ ಪ್ರಶ್ನೆಗಳ ಸುರಿಮಳೆಯನ್ನೆ ಗೈದಳು.
'ಅಯ್ಯಯ್ಯ...ಯ್ಯ.. ನಿನ್ನ ಬಾಯೇನರ ಕಟ್ಗಿದಾಗಿತ್ತಂದ್ರ ಇಟೊತ್ತಿಗಾಗ್ಲೆ ಒಡ್ದ ಹೊಕ್ಕಿತ್ತ ನೋಡ, ಸ್ವಲ್ಪ‌‌ ಸುಮ್ಕೀರು ಇಟು.
ಅದೇನದು ಬಾವ್ಯಾನ ಕಪ್ಪಿ ಒಟಗುಟ್ಟೊ ಹಂಗ ಒಂದ ಸಮ್ನ ಒಟಗುಟ್ಟಾಕ ಹತ್ತೀದಿ, ಹೋಗಿ ಬಾಯ್ಯಾಗ ನೀರ ಹಾಕ್ಕೊಂಡ 
ಒಲಿ ಹೂಡ ಹೋಗು, ಸ್ವಲ್ಪ ಚಾ ಮಾಡ್ಕೊಂಡ ಬಾ ಹೋಗಿಟು ಜಲ್ದಿ'
'ಹ್ಞಾಂ....ಹ್ಞಾಂ... ಹ್ಞಾಂ.. ಸುಕುಮಾರ.‌ ಕೋಳಿ ಕೂಗೊದ ತಡ ಆಗೋದಿಲ್ಲ ಮುಂಜಾನಿಂದ ಸಂಜಿ ತನ್ಕ ಹಂಗ ಚಾ...ಚಾ.. ಅಂತಂದ ನನ್ ಜೀವ ಹಿಂಡ್ತಾನ, ತರ್ತೀನಿ ಇರಪ್ಪ ಒಂದಿಟು. ಇಲ್ಲಿ ನೋಡಿಲ್ಲೆ, ಇವತ್ತ ನಕ್ಕೊಂತ ಇರ್ಬೇಕಾದಾಕಿ ಅತ್ಗೊಂತ ಕುಂತಾಳ, ಏನಾತಂದ ಕೇಳ್ಬ್ಯಾಡ, ಚಾ ಬೇಕಂತ ಚಾ'
'ಅಯ್ಯ ನಿನ್ನ ಕೈ ಕಾಲ ಮುರ್ದ ಹಂಡೆ ತುಂಬ್ಲಿ, ನಿ ಹೋಗಿ ಮೊದ್ಲಾಕ ಮೊಖಾ ತೊಕ್ಕೊಂಡು ಚಾ ಮಾಡ್ಕೊಂಡ ಬಾ ಹೋಗಿಗ ಅದೇನ ವಿಷ್ಯಾ ಅಂತಂದ ನಾ ವಿಚಾರ ಮಾಡ್ತೀನಿ' ಅಧಿಕಾರದ ಧನಿಯಲ್ಲಿ ಹೇಳಿದನು.
ನಿಂಗವ್ವನನ್ನು ಬಿಟ್ಟು ಬಿರಬಿರನೆ ಸ್ನಾನದ ಕೋಣೆಯತ್ತ ಹೋದಳು ಮಲ್ಲಪ್ಪನ ಮಡದಿ ಶಾಂತವ್ವ.
ನಿಂಗವ್ವನ ಎದುರಿಗೆ ಇನ್ನೊಂದು ಖುರ್ಚಿಯನ್ನು ಹಾಕಿಕೊಂಡು ಕುಳಿತ ನಿಂಗಪ್ಪನು ' ಹ್ಞೂಂ... ಏನಾತವ ತಂಗಿ'
'ಅಣ್ಣಾ... ಶಶಿಯಪ್ಪ ಕಾಣಾಕ ಹತ್ತಿಲ್ಲ' ಬಾಯಿಗೆ ಹಿಡಿದಿದ್ದ ಸೆರಗನನ್ನು ಸರಿಸಿ, 
ನಿಂಗವ್ವನ ಮಾತಿನಿಂದ ಸ್ವಲ್ಪ ವಿಚಲಿತನಂತಾಗಿ ಕಂಡು ಬಂದ ಮಲ್ಲಪ್ಪ ' ಹ್ಞಾಂ, ಕಾಣಾವಲ್ಲ ಹಂಗಂದ್ರ ಏನ್ಬೆ ?'
'ಅಂವ ಮನಗೊ ಕೋಣ್ಯಾಗ್ನೂ ಇಲ್ಲ, ಹಿತ್ಲದಾಗೂ ಇಲ್ಲ, ಅದು ಅಲ್ದ ಮನಿ ಮುಂಬಾಗ್ಲ ತಗದಿದ್ದ ಇತ್ತ'
'ಹೇ ನಿಮಾಂಬ್ಳ ಇಲ್ಲೆ ಎಲ್ಲರ‌ ಹೊರ್ಗ ಹೋಗಿರ್ಬೇಕು ತಂಬ್ಗಿ(ಬೆಳಗಿನ ಕಾರ್ಯವನ್ನು ಮುಗಿಸಿಕೊಂಡು ಬರುವುದು)ತಗೊಂಡು'
'ಇಲ್ಲಣ್ಣ, ಅವ್ನು ಯಾವತ್ತು ಇಷ್ಟ ಜಲ್ದಿ ಎದ್ದಿದ್ದ ಇಲ್ಲ, ಜಗಲಿ ಮ್ಯಾಲಿಟ್ಟಿದ್ದ ಅವ್ನ ಬಟ್ಟಿ ಬ್ಯಾಗು ಕಾಣವಲ್ದ, ಮೊನ್ನಿ ಗೋವಿನ ಜ್ವಾಳ ಮಾರಿ ಬಂದ ಪಟ್ಟಿ ರೊಕ್ಕಾನು ಅವ್ನ ಕೈಯ್ಯಾಗ ಕೊಟ್ಟಿದ್ನಿ ತಿಜೋರಿಯೊಳ್ಗ ತಗದಿಡಾಕ, ಆ ರೊಕ್ಕಾನು ಕಾಣುವಲ್ದಾಗೈತಿ, ಎಲ್ಲೆ!!!! ಮೊನ್ನೆ ಮೂಲಿಮನಿ ಶಂಕ್ರಪ್ಪ ಹೇಳ್ದಂಗ ಏನರ...?' ಗದ್ಗರಿತ ದನಿಯಿಂದ ಮಲ್ಲಪ್ಪನನ್ನು ದಿಟ್ಟಿಸಿ ನೋಡಿದಳು ಮಾತನ್ನು ಅರ್ಧದಲ್ಲೆ ಕತ್ತರಿಸುತ್ತ
ನಿಂಗವ್ವನನ್ನೆ ದಿಟ್ಟಿಸಿ ನೋಡುತ್ತಾ, ಮೊನ್ನೆ ಸಂಜೆಯಲ್ಲಿ ಶಂಕ್ರಪ್ಪನು ತಾನು ಸಂತೆಯಲ್ಲಿ ಕಂಡ ವಿಷಯವನ್ನು ಹೇಳಿದ್ದು ನೆನಪಾಯಿತು.
'ಏ ನಿಂ ಶಶಿಯಪ್ಪ ಯಾವ್ದ ಹುಡ್ಗಿ ಕರ್ಕೊಂಡ ಗಡಾದನ ಸಿದ್ದಲಿಂಗೇಶ್ವರ ಟಾಕೀಸ್ ಗೆ ಸಿನಿಮಾ ನೋಡಾಕ ಬಂದಿದ್ನಪಾ?'
' ಹೇ ಹೋಗ್ಗ ನಿಮ್ಮೌನ ನಂ ಶಶಿಯಪ್ಪ ಅಂತವಲ್ಲ, ಬ್ಯಾರೆ ಯಾರನ್ನರ ನೋಡಿರಬೇಕ ನೋಡ ಮಗ್ನಾ, ಮದ್ವಿ ಇನ್ನೊಂದ ವಾರ ಇಟ್ಗೊಂಡ ಅಂವ ಯಾ ಹುಡ್ಗಿ ಕಟ್ಗೊಂಡು ಸಿನ್ಮಾಕ ಹೊಕ್ಕಾನಲೆ' ಗದರಿಸಿದನು ನಿಂಗಪ್ಪ
' ದೇವ್ರಾಣ್ಯಗೊ ಮಾರಾಯ, ಸುಳ್ಳು ಹೇಳಿ ನಂಗ್ಯಾವ ರಾಜ್ಯಾ ಆಳೊದೈತಿ'
'ಹುಡ್ಗಿ ಯಾರಂತ ನೋಡಿದೇನು?'
' ಇಲ್ಲೊ ಮಾರಾಯ ಅವ್ರ ಮುಂದ ಕುಂತಿದ್ರ ನಾ ಹಿಂದ ಕುಂತಿದ್ನಿ, ಆಕಿ ಹೆಗ್ಲ ಮ್ಯಾಲ ಕೈ ಹಾಕ್ಕೊಂಡ ಕುತ್ಗೊಂಡ ಸಿನ್ಮಾ ನೋಡದ ಬಿಟ್ಗೊಟ್ಟ ಏನೊ ಗುಸುಗುಸು ಅಂತಂದ ಮಾತಾಡತಿರೊ ಹಂಗ ಕಾಣ್ಸತಿತ್ತಾ... ಸಿನ್ಮಾ ಮುಗ್ದಿಂದ ಹಿಡಿಬೇಕ ಅಂತನ್ನುವಷ್ಟರದಾಗನ ಹ್ಯಾಂಗ ಪಾರಾಗಿಬಿಟ್ರನ ಪಾರಾಗಿ ಬಿಟ್ಟ ನೋಡ'

ಶಂಕ್ರಪ್ಪ ಅಂದಾಡಿದ ಮಾತುಗಳು ಇವತ್ತು ಶಶಿಕಾಂತನು ಹಣ ಮತ್ತು ಬಟ್ಟೆಯೊಂದಿಗೆ ಮನೆಯಲ್ಲಿ ಇಲ್ಲದಿರುವುದು ಹಲವಾರು ಅನುಮಾನಕ್ಕೆ ಆಸ್ಪದಕ್ಕೆ ಎಡೆ ಮಾಡಿಕೊಟ್ಟಿತು ನಿಂಗಪ್ಪನಿಗೆ. ತಡಮಾಡದೆ ಮಗ ನಾಗರಾಜನ್ನು ಎಬ್ಬಿಸಿ ತನ್ನ ಜೊತೆಯಲ್ಲಿ ಇಬ್ಬರು ಗೆಳೆಯರನ್ನು ಕರೆದುಕೊಂಡು ಶಶಿಯಪ್ಪನನ್ನು ಗಜೇಂದ್ರಗಡದ ಬಸ್ ಸ್ಟ್ಯಾಂಡವರೆಗೂ ಹೋಗಿ ಹುಡುಕಿಕೊಂಡು ಬರುವಂತೆ ಹೇಳಿ, ಪಕ್ಕದ ಮನೆಯವರನ್ನು ಎಬ್ಬಿಸಿ ಅವರ ಮೊಟಾರ್ ಬೈಕ್ ನ್ನು ಮಗನಿಗೆ ಕೊಟ್ಟು ಕಳುಹಿಸಿದನು. ಮನೆಯ ಒಳಗಡೆ ಬಂದು ಹೆಂಡತಿ ಮಾಡಿಕೊಟ್ಟ ಚಹಾವನ್ನು ಕುಡಿದು, ಸ್ನಾನ ಮಾಡಿ ಬಟ್ಟೆಯನ್ನು ಹಾಕಿಕೊಂಡು
'ಹೆದರ ಬ್ಯಾಡ ತಂಗಿ ಇಲ್ಲೆ ಎಲ್ಲರ ಇರ್ತಾರ ಅವ್ರ ಹುಡ್ಕಿ ಕರಕೊಂಡ ಬರ್ತಿನ ಹುಡ್ಗ ಬುದ್ದಿ. ಮತ್ ತವ್ರ ಮನಿಗೆ ಪೋನ್ ಮಾಡಾಕ ಹೋಗಬ್ಯಾಡ ಈ ಸುದ್ದಿ ನಮ್ ನಮ್ ಒಳಗ ಇರಲಿ ಸದ್ಯಾಕ‌‌. ಆತ'
ಎಂದಾಗ ಆಗಲಿ ಎಂಬಂತೆ ಅಳುತ್ತಾ ತಲೆಯಾಡಿಸಿದಳು ನಿಂಗವ್ವ.
'ಶಾಂತಾ, ತಂಗಿನ ಎಲ್ಲೂ ಕಳಿಸಾಕ ಹೋಗಬ್ಯಾಡ ದ್ಯಾವ್ರ ಕಾರ್ಯನಾ ಸ್ವಾಮೇರ ಬಂದ ಮ್ಯಾಕ ನೇಮದ ಪೂರತ್ಯಾಕ ಮಾಡಿ ಮುಗಿಸಿ ದಕ್ಷಣಾ ಕೊಟ್ಟ ಕಳಿಸಿಬಿಡ್ರಿ, ಊಟಕ್ಕ ಯಾರ್ಗೂ ಹೇಳಾಕ ಹೋಗಬ್ಯಾಡ್ರಿ, ತಿಳಿತಿಲ್ಲೊ?' ಎನ್ನುತ್ತಲೆ ಅವರ ಮರು ಮಾತುಗೂ ಕಾಯದೆ, ಬಾಗಿಲ ಬಳಿ ಬಿಟ್ಟಿದ್ದ ಚಪ್ಪಲಿಯನ್ನು ಹಾಕಿಕೊಂಡು ನಡೆದುಬಿಟ್ಟನು ನಿಂಗಪ್ಪ ಶಶಿಯನ್ನು ಹುಡುಕಲು ಗೊತ್ತು ಗುರಿಯಿಲ್ಲದೆ.

ಕಾಲೇಜು, ಗೆಳೆಯ-ಗೆಳತಿಯರು, ಸಿನಿಮಾ ಟಾಕೀಜು, ಲಾಡ್ಜಗಳು, ಕಾಲಕಾಲೇಶ್ವರ ಬೆಟ್ಟ, ಸರಕಾರಿ ಉದ್ಯಾನವನ, ದೇವಸ್ಥಾನಗಳು, ಮಠ- ಮಸಿದಿಗಳು, ಸಬ್ ರಿಜಿಸ್ಟ್ರಾರ್ ಆಫೀಸು ಎಲ್ಲ ಗಜೇಂದ್ರಗಡ, ಸುತ್ತಮುತ್ತ ಪರಿಚಯವಿರುವಂತಹ ಎಲ್ಲ ಜಾಗಗಳ ಮೂಲೆಮೂಲೆಯನ್ನು ಹುಡುಕಿದರು ಶಶಿಕಾಂತನ ಸುಳಿವು ಸಿಗಲೆ ಇಲ್ಲ.

ನಿಂಗವ್ವ ಬೆಳಿಗ್ಗೆಯಿಂದ ಹನಿ ನೀರನ್ನು ಕುಡಿಯದೆ ಕುಳಿತ ಜಾಗದಿಂದ ಕದಲಿರಲಿಲ್ಲ. ಸಮಯ ರಾತ್ರಿ ಎಂಟಾಗುತ್ತ ಬಂದಿತ್ತು. ಶಾಂತವ್ವಳೊಬ್ಬಳೆ ದೇವರ ಕಾರ್ಯವನ್ನು ಮುಗಿಸಿ, ಕೇಳಿದವರೆಲ್ಲರಿಗೂ ನಿಂಗವ್ವಳ ಮೈಯಲ್ಲಿ ಹುಷಾರಿಲ್ಲ ಎಂದ ಹೇಳುತ್ತಲೆ ಎಲ್ಲರನ್ನೂ ಸಾಗು ಹಾಕಿ ಬಂದಿದ್ದಳು. 
'ಅಯ್ಯ ನಮ್ಮವ್ವ ಮುಂಜಾನಿಂದಾನು ಹಂಗ ಖಾಲಿ ಹೊಟ್ಟಿಲೆ ಕುಂತಿದಿ, ಊಟ ಮಾಡ್ದಿದ್ರೇನಾತು ಕಪ್ ಚಾ ನರ ಕುಡಿಯೇಳವ ಮುಖಾ-ಮೊತಿ ತೊಳ್ಕೊಂಡ' ದುಃಖಭರಿತವಾದ ಧನಿಯಲ್ಲಿ ಹೇಳಿದಳು.
ಏನೊಂದು ಮಾತನ್ನು ಆಡಲಿಲ್ಲ ನಿಂಗವ್ವ. ಅಷ್ಟರಲ್ಲಿ ಊರಿನಿಂದ ಬರಿಗೈಯಲ್ಲಿ ಬಂದಂತಹ ನಿಂಗಪ್ಪನು, ಶಶಿಕಾಂತನ ಬಗ್ಗೆ ಯಾವುದೇ ಸುಳಿವು ಸಿಗದಿದ್ದ ಬಗ್ಗೆ ಹೇಳಿ, ಪೋಲಿಸ್ ಕಂಪ್ಲೇಟ್ ಮತ್ತು ತವರು ಮನೆಯವರಿಗೆ ವಿಷಯವನ್ನು ತಿಳಿಸಿ ಬಂದಿದ್ದೇನೆ ಎಂದು ಹೇಳಿದನು.
ವಾರ ಕಳೆಯಿತು, ಶಶಿಯ ಸಲುವಾಗಿ ನಾಗರಾಜನ ಮದುವೆಯನ್ನು ನಿಲ್ಲಿಸವುದು ಬೇಡವೆಂದು ನಿಂಗವ್ವಳೆ ಬಲವಂತ ಮಾಡಿ ಎಲ್ಲರನ್ನು ಒಪ್ಪಿಸಿ ನಾಗರಾಜನ ಮದುವೆಯನ್ನು ಮಾಡಿದ್ದರು. 

ದಿನ-ವಾರ-ತಿಂಗಳುಗಳೆ ಕಳೆದು ಹೋದವು. ಮಗನನ್ನು ನೆನೆಯುತ್ತ ನಿಂಗವ್ವ ದಿನೆ ದಿನೆ ಕುಗ್ಗುತ್ತಾ ಹೋದಳು. ತೋಟವು ಬಡವಾಗತೊಡಗಿತ್ತು.
ನಿಂಗಪ್ಪ ದಂಪತಿಗಳು, ತವರು ಮನೆಯವರು, ಊರು-ಕೆರಿಯ ಹಿರಿಯರೆಲ್ಲ ಎಷ್ಟೇ ಸಮಾಧಾನ ಮಾಡಿದರು, ಇದ್ದ ಒಬ್ಬನೆ ಒಬ್ಬ ಮಗನು ಇಲ್ಲವಾದದ್ದನ್ನು ನೆನೆದು ನೆನೆದು ದಿನವಿಡಿ ಅಳುತ್ತಾ 
ಕುಳಿತುಕೊಂಡು ಬಿಟ್ಟಿರುತ್ತಿದ್ದಳು. 
ಈ ಸಮಯದಲ್ಲಿ  ನಾಗರಾಜನ ಸೀಮಂತ ಕಾರ್ಯವು ಮುಗಿದು, ಮುದ್ದಾದ ಹೆಣ್ಣು ಮಗುವು ಹುಟ್ಟಿ, ನಾಮಕರಣವು ಜರುಗಿ ಹೋಯಿತು.
 ವರ್ಷವೆ ಕಳೆದು ಹೋಯಿತು. ಒಲೆಯ ಮೇಲೆ ರೊಟ್ಟಿ ಮಾಡುತ್ತ ಕುಳಿತಿದ್ದಳು ನಿಂಗವ್ವ, 'ನಿಂಗವ್ವ... ನಿಂಗವ್ವ.. ಬೆ ನಿಂಗವ್ವ' ಮನೆಯ ಹೊರಗಿನಿಂದ ಜೋರಾಗಿ ಯಾರೊ ಕೂಗಿದ ಸದ್ದು ಕೇಳಿಸಿತು ನಿಂಗವ್ವಳಿಗೆ..

ಮಂಗಳಮುಖಿ ೩

ರೊಟ್ಟಿ ಮಾಡುವುದನ್ನು ಬಿಟ್ಟು ಹೊರಬಂದು ನೋಡಿದಳು ಕಡೆಮನಿ ಬಸ್ಯಾ ನಿಂತಿದ್ದನು. ನಿಂಗವ್ವಳು ಹೊರಬರುತ್ತಿದ್ದಂತೆಯೆ ಬಸ್ಯಾ ' ಯಮ್ಮಾ ನಿನ್ ಮಗಾ ಬಂದಾನಬೆ' ಎಂದ ತಕ್ಷಣವೆ

ರಕ್ಕೆ ಬಂದ ಹಕ್ಕಿಯಂತಾಗಿಬಿಟ್ಟಳು ನಿಂಗವ್ವ

'ಎಲ್ಲಿ... ಎಲ್ಲದನಾ ನನ್ನ ಮಗಾ' ಅವನ ಭುಜವನ್ನು ಹಿಡಿದು ಅತ್ಯುತ್ಸಾಹದಿಂದ ಕೇಳಿದಳು.

'ಇಲ್ಲೇ ಬಸ್ ಸ್ಟ್ಯಾಂಡನಿಂದ ಇಳ್ದ ಬರಾಕ ಹತ್ತ್ಯಾನ'

' ಬಾ...ಬಾ.. ಹೋಗೋಣು ನನ್ನ ಮಗನ್ನ ಕರ್ಕೊಂಡ ಬರೋನು. ಎಂಥಾ ಸುದ್ದಿ ಕೊಟ್ಟಿ ನಾಳೆ ಸುಗ್ಗಿ ದಿನದೊಳಗ ಸೇರ ಕಡಬಿನ ಬ್ಯಾಳಿ ಮಾಡಿ ತಿನ್ ಸ್ತೀನಿ.' ಅವಸರಿಸಿದಳು.

ಬಸ್ಯಾ...' ತಡಿಬೆ... ಇನ್ನೇನ ..' ಅನ್ನುವುದರಲ್ಲಿಯೆ ನಿಂಗವ್ವನ ಮನೆಮುಂದೆ ಹಳ್ಳಿಯ ಅರ್ಧಕ್ಕರ್ದ ಜನ ಬಂದು ಸೇರಿಬಿಟ್ಟರು. ಆ ಗುಂಪಿನಲ್ಲಿ ತಾಯಿ ಹಸು ಕರುವನ್ನು ಹುಡುಕುವಂತೆ, ಗುಳಿಬಿದ್ದ ಕಣ್ಣುಗಳನ್ನು ಹಿಗ್ಗಿಸಿ ನೋಡತೊಡಗಿದಳು. ಶಶಿಕಾಂತನ ಇರುವಿಕೆಯ ಕುರುಹು ಎಲ್ಲೂ ಕಾಣಿಸಲಿಲ್ಲ. ಆಗ ಒಬ್ಬ ಹೆಂಗಸು ಗುಂಪಿನ ನಡುವಿನಿಂದ ಬಂದು ನಿಂಗವ್ವನ ಕಾಲಿಗೆ ಬಿದ್ದು ನಮಸ್ಕರಿಸಿದಳು. ನಿಂಗವ್ವ ' ಚೆನ್ನಾಗಿರು ಮಗಳೆ' ಎಂದು ಆಶೀರ್ವದಿಸುತ್ತಲೆ ಅವಳ ಕಣ್ಣುಗಳು ಮತ್ತೆ ಮಗನಿಗಾಗಿ ಹುಡುಕಾಡತೊಡಗಿದವು. ನಾಗರಾಜ ಬಂದು ಹಳ್ಳಿಯ ಎಲ್ಲ ಜನರನ್ನು ಅವರಿಬ್ಬರನ್ನು ಬಿಟ್ಟು ಹೊರಟು ಹೋಗಿ ಎಂದು ಹೇಳಿದನು. 

'ನಾಗು ಶಶಿಯಪ್ಪ ಬಂದಾನಂತಲ್ಲೊ ನನ್ ತಂದೆ, ಕಡೆಮನಿ ಬಸುವ ಹೇಳಿದ, ಎಲ್ಲಾದನಂವ, ಬಂದಾನನು? ಬಂದಿದ್ದ ಖರೆ ಐತೊ? ಇಲ್ಲೊ?'

ನಾಗರಾಜ ತಲೆಯನ್ನು ತಗ್ಗಿಸಿಕೊಂಡು ಕಾಲನ್ನು ಮುಟ್ಟಿ ಆಶೀರ್ವಾದವನ್ನು ಪಡೆದ ಹೆಂಗಸನ್ನು ತೋರಿಸುತ್ತಾ, 'ಇವಳೆ? ಅಲ್ಲ...ಅಲ್ಲ.. ಇವನೇ? ಶಶಿಯಪ್ಪ' ಗದ್ಗಗರಿತವಾದ ಧನಿಯಿಂದ.

ಆ ಹುಡುಗಿಯನ್ನು ಈಗ ದಿಟ್ಟಿಸಿ ನೋಡ ತೊಡಗಿದಳು ನಿಂಗವ್ವ. 'ಹೌದು... ಹೌದು ಥೇಟ್ 

ಶಶಿಕಾಂತನ ಅಚ್ಚೊದಿಂತಯೆ ಇದ್ದಾಳಲ್ಲ!! ಈ ಹುಡ್ಗಿ,' ಕಣ್ಣುಗಳನ್ನು ಕಾಸಗಲ ಮಾಡಿಕೊಂಡು ನೋಡತೊಡಗಿದಳು. ಅರಳಿದ ತಾವರೆಯಂತ ಮುಖವದನ, ಕಾಮನ ಬಿಲ್ಲಿನಂತಹ ತಿಡಿದ ಹುಬ್ಬುಗಳು, ಪಳಪಳನೆ ಹೊಳೆಯುವ ನಕ್ಷತ್ರದಂತಹ ಕಣ್ಣುಗಳು, ಗುಲಾಬಿಯನ್ನು ರುಬ್ಬಿ ಹಿಂಡಿ ಅದರ ಬಣ್ಣವನ್ನೆ ತುಟಿಗಳಿಗೆ ಸವರಿರುವಂತಹ ಕೆಂದುಟಿಗಳು, ಘಮ್ ಎಂದು ಬರುತ್ತಿದ್ದ ನೀಳ ಕೇಶರಾಶಿಯ ಘಮಲು, ತುಂಬಿದ ಎದೆ, ಕೈ ತುಂಬ ಬಳೆ, ಮುಡಿತುಂಬ ಹೂವ, ಜಗಮಗಿಸುವ ಸೀರೆ, ಕೊರಳಿನ ತುಂಬ ಆಭರಣಗಳ ಅಲಂಕಾರ, ಸಾಕ್ಷಾತ್ ಸ್ವರ್ಗಲೋಕದಿಂದ ಇಳಿದು ಬಂದಂತಹ ಅಪ್ಸರೆಯಂತೆಯೆ ಕಾಣುತ್ತಿದ್ದಳು. ಅವಳನ್ನು ನೋಡುತ್ತಲೆ ಏನೊಂದು ಅರ್ಥವಾಗದಂತೆ ಬಾಯಿಯನ್ನು ತೆರೆದುಕೊಂಡು, ಗರಬಡಿದವರಂತೆ ನಿಂತುಬಿಟ್ಟಳು ನಿಂಗವ್ವ. ನಾಗರಾಜನು ಹಳ್ಳಿಯ ಜನರನ್ನೆಲ್ಲ ಹಿಂದೆ ಸರಿಸಿ, ಶಶಿಕಾಂತಳ ಲಗೇಜನ್ನು ಎತ್ತಿಕೊಂಡು ಮನೆಯೊಳಗಿಟ್ಟು, ತಾಯಿ ಮಗ/ಳ ನ್ನು  ಮನೆಯ ಒಳಗೆ ಕರೆದೊಯ್ದನು. ವಿಷಯ ತಿಳಿದು ತೋಟದಲ್ಲಿ ಕೆಲಸ ಮಾಡುತ್ತಿದ್ದಂತಹ ನಿಂಗಪ್ಪ ದಂಪತಿಗಳು ಓಡೋಡಿ ಬಂದಿದ್ದರು.‌ ಶಶಿಯಪ್ಪನ ಅವತಾರವನ್ನು ಕಂಡು ಕ್ಷಣಕಾಲ ದಂಗಾಗಿ ಹೋಗಿದ್ದರು. ಸುದ್ದಿ ಹಳ್ಳಿ, ನಿಂಗವ್ವನ ತವರು ಮನೆ ಬಿಗರು- ಬಿಜ್ಜರು, ಎಲ್ಲ ಪರಿಚಯಸ್ಥರ  ಕಿವಿಗಳ ಮೇಲೆ ಹೋಗಿ ಬಿದ್ದಿತು.‌ ವಾರ ಕಳೆಯಯುವುದರಲ್ಲಿ ಜನರೆಲ್ಲ ಆಡಿಕೊಂಡರು, ನಕ್ಕರು, ಹಿಯ್ಯಾಳಿಸಿದರು ಸಹ ನಿಂಗವ್ವ ಅವುಗಳನ್ನೆಲ್ಲ ನುಂಗಿಕೊಂಡಳು. 

ನಿಂಗಪ್ಪನ ಮನೆಯಲ್ಲಿ ಎಲ್ಲರೂ ಊಟ ಮಾಡಿ ಮನೆ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಂಡಿದ್ದರು. ಅಲ್ಲಿಗೆ ನಿಂಗವ್ವಳು ಬಂದು ಕುಳಿತುಕೊಂಡಳು. ನಿಂಗವ್ವ ಬಂದಿದ್ದರಿಂದ ಎಲ್ಲರೂ ಮೌನಕ್ಕೆ ಶರಣಾದರು. ಹತ್ತು ನಿಮಿಷ ಕಳೆದ ಮೇಲೆ ನಿಂಗಪ್ಪನೆ 'ಊಟಾತನವ?'

ಆಯಿತು ಎನ್ನುವಂತೆ ತಲೆಯನ್ನಾಡಿಸಿದಳು ನಿಂಗವ್ವ. ಮತ್ತೆ ಮೌನ... 'ಮುಂದೇನಣ್ಣ?' ಈ ಸಲ ಮಾತ್ರ ನಿಂಗವ್ವನೆ ಮೌನವನ್ನು ಮುರಿದಿದ್ದಳು.

'ಯಾವ್ದುಕ್ಕಮ್ಮ?'

'ಅದೆ ಶಶಿಯಪ್ಪನ ವಿಚಾರ!!'

'ಏನ್ ಮಾಡೊದ್ವಾ?'

'ನಿನ ಹಿಂಗಂದ್ರ ಹ್ಯಾಂಗಣ್ಣ, ಇನ್ನ ಬಾಳಿ ಬದ್ಕ ಬೇಕಾದ ಕೂಸು ಐತದು'

'ಖರೆ ಐತಬೆ, ಮತ್ ಈಗೇನ ಮಾಡಾಕ ಹತ್ತಾನ ಅಂವಾ?'

'ಮಾಡೋದೆನೈತಣ್ಣ, ಏಳೊದ ಎಂಟಕ್ಕ, ಜಳಕ‌ ಮಾಡಿ, ತಾಸತನ ಕನ್ನಡಿ ಮುಂದ ನಿಂತ್ಗೊಂಡ ಸಿಂಗಾರ ಮಾಡ್ಕೊಂಡು, ಹೆಗ್ಲಿಗೊಂದು ಬ್ಯಾಗ ಹಾಕ್ಕೊಂಡ ಮನಿ ಹೊಸ್ಲ ದಾಟದಾಂವ ಬರೋದ ಸವರಾತ್ರಿ(ನಡು ರಾತ್ರಿ)ಗೆ,ಮತ್ ಏಳೊದು, ಹೋಗೊದು ಬರೋದು, ಎಂಟ್ ದಿನದ ಹೊತ್ತಾತು ಇಷ್ಟ ನಡದೈತಿ,'

'ಆತ ತಗೊಬೆ ನಾಳೆ ಏನನ್ನೊದ್ನ ವಿಚಾರ ಮಾಡೊಣಂತ'

ಎದ್ದು ನಿಂತವನೆ ಹೆಂಡತಿ ಶಾಂತವ್ವನ ಹತ್ತಿರ ಹೋಗಿ ಅವಳ ಕಿವಿಯಲ್ಲಿ ಏನೊ ವಿಷಯವನ್ನು ಹೇಳಿ ಮಲಗುವ ಕೋಣೆಗೆ ಹೊರಟು ಹೋದನು. ಸೊಸೆ ಮೊಮ್ಮಗಳನ್ನು ಎತ್ತಿಕೊಂಡು ಅವಳ ಸಹ ಒಳಗಡೆ ಹೋದಳು. ಶಾಂತವ್ವ ಎದ್ದು ಬಂದು ನಿಂಗವ್ವಳನ್ನು ಕರೆದುಕೊಂಡು ಅವಳ ಮನೆಯೊಳಗೆ ಹೋಗಿ ಬಾಗಿಲ ಚೀಲಕವನ್ನು ಹಾಕಿ, ನೆಲದ ಮೇಲೆ ಚಾಪೆಯನ್ನು ಹಾಸಿ ನಿಂಗವ್ವನನ್ನು ಜೊತೆಯಲ್ಲಿಯೆ ಕುಳ್ಳರಿಸಿಕೊಂಡು

'ನೋಡ್ವಾ ನಾನೀಗ ಹೇಳೊ ವಿಷ್ಯಾ ಭಾಳ ಗಂಭೀರ ಆದಂತದ ಐತಿ. ನೀ ಮನಸ್ನ ಗಟ್ಟಿಯಾಗಿ ಇಟ್ಕೊಬೇಕ ನೋಡ್ವಾ' ಆತಂಕದ ದನಿಯಲ್ಲಿ ಮೆಲ್ಲಗೆ ಹೇಳಿದಳು

'ಅಂದ್ರ' ಭಯಭೀತ ಕಣ್ಣುಗಳಿಂದ ನೋಡಿದಳು ನಿಂಗವ್ವ.

'ನಾಗು ಮೊನ್ನೆ ರಾತ್ರಿ ಎಲ್ಲಾ ವಿಷಯಾನು ಹೇಳಾಕ ಹತ್ತಿದ್ದ'

'ಏನ್ ವಿಷಯಾನ? ಯಾರ ಸುದ್ದಿನಾ?'

'ಅದ ಶಶಿಯಪ್ಪಂದ'

'ಏನ್ ಹೇಳಿದ'

'ಶಶಿಯಪ್ಪ ಈಗ ಗಂಡ್ಮಗ ಆಗಿ ಉಳ್ದಿಲ್ಲ!!'

ಶಾಂತವ್ವಳ ಮಾತಿಗೆ ತಲೆಯ ಮೇಲೊಂದು ದೊಡ್ಡದಾದ ಕಲ್ಲನ್ನು ಎತ್ತಿ ಹಾಕಿದಂತಹ ಭಾವವು ಆವರಿಸಿಕೊಂಡಿತು ನಿಂಗವ್ವಳಿಗೆ.

'ಗಂಡಾಗಿ ಉ....ಳದಿ....ಲ್ಲ!! ಹಂಗಂದ್ರ ಏನಬೆ, ವೊಟು ವಾಗತ್ತ್ಯಾಗಿ ಬಿಡಿಸರ ಹೇಳ ನಮ್ಮವ್ವ'

'ಅಂದ್ರ ಬೆಂಗ್ಳೂರ ಪ್ಯಾಟ್ಯಾಗ ಗಂಡಿದ್ದೊರ್ನ ಹೆಣ್ ಮಾಡ್ತಾರಂತ, ಹೆಣ್ಣಿದ್ದೊರ್ನ ಗಂಡ ಮಾಡ್ತಾರಂತ, ಅಂತಲ್ಲಿಗೆ ಹೋಗಿ ನಂ ಶಶಿಯಪ್ಪ ಹೆಣ್ಣಾಗಿ ಬಂದಾನ'

ಈ ಮಾತನ್ನು ಕೇಳಿದ ಮೇಲಂತೂ ಕಿವಿಯಲ್ಲಿ ಕಾದ ಸೀಸವನ್ನು ಸುರಿದ ಹಾಗಾಯಿತು ನಿಂಗವ್ವಳಿಗೆ

'ಹೆಣ್ಣಾಗೊದಂದ್ರ ಹ್ಯಾಂಗ ನಮ್ಮವ್ವ? ಮತ್ ಇಂವ ಹೆಣ್ ಆದ್ನಂದ್ರ ಇವಂಗ ಹೆಣ್ ಯಾರ ಕೊಡ್ತಾರು?'

'ಅಯ್ಯ ನಮ್ಮವ್ವ ಗಂಡ ಅಲ್ ಅಂದಮ್ಯಾಲ ಹೆಣ್ ತರೊ ವಿಚಾರ ಎಲ್ಲಿದ್ ತಗಿ'

'ಮತ್ ಇವಂಗ್ ಗಂಡ ಹುಡ್ಕಬೇಕೆನ?'

'ಇಲ್ಲಂತವ, ಹಂಗೂ ಬರೊದಿಲ್ಲಂತ, ಅತ್ಲಾಗ ಗಂಡು ಅಲ್ಲ! ಇತ್ಲಾಗ ಹೆಣ್ಣೂ ಅಲ್ಲ, ಅದೇನ ಅಂತಾರಲ್ಲ ಬೆ ಮಂಗ್ಳಮುಖೆರ ಅಂತ ನೋಡ, ನೀನು ಗಡಾದ ವಾರದ ಸಂತಿಯೊಳ್ಗ ಇಂತೊರ್ನ ಭಾಳ ಮಂದಿನ ನೋಡಿರಬೇಕಲ್ಲ!'

'ಹೌದು ನೋಡಿನಿ, ಅದ್ರ ಅವ್ರ ಬಗ್ಗೆ ನಾನಷ್ಟೊಂದ ತಲಿ ಕೆಡ್ಸಿಕೊಂಡಿದ್ದಿಲ್ಲ'

' ಹ್ಞೂಂ ಅವ್ರ ಜೊತಿ ಸೇರ್ಕೊಂಡ ಹಿಂಗ ಆಗ್ಯಾನ ನೋಡಿವ ಬಾಡ್ಯಾ ಊರ ಬಾಡ್ಯಾ, ಆವಾಗ ಪೋನ್ ನ್ಯಾಗ ಮಾತಾಡ್ತಿದ್ದ ಅಂತಿದ್ರಲ್ಲ ಇವ್ರ ಜೊತಿನ ಅಂತ ನೋಡ'

'ಅವ್ರದ ಹಾಳಾಗಿ ಹೋಗ್ಲಿ ಬಿಡ ತಾಯಿ, ಶಶಿಯಪ್ಪಂದ ಮುಂದೇನ ಜೀವ್ನ ಅಂತೀನಿ'

'ಅಂವಾ ಒಂದ ಬರಡು ಭೂಮಿ ಇದ್ದಂಗ ನೋಡಾವ, ಬಿತ್ತೊದಿಲ್ಲ, ಬೆಳೆಯೊದಿಲ್ಲ, ಎಮ್ಮಿ ಬಿದ್ದ ಹೊಳ್ಳಾಡಿದ ಕೆಸರಾಗಿನ ನೀರಿದ್ದಂಗ ಕುಡಿಯಾಕನೂ ಇಲ್ಲ, ಬಳಸಾಕನೂ ಇಲ್ಲ.'

'ಅಂದ್ರ, ನನ್ ಮನಿ ವಂಶದ ಕುಡಿ ಮುಂದ ಹಬ್ಬೊದಿಲ್ಲನು?'

ಇಲ್ಲವೆನ್ನುತ್ತ ತಲೆಯನ್ನಾಡಿಸಿದಳು ಶಾಂತವ್ವ.

'ಅಯ್ಯೋ... ಕಳಕಮಲ್ಲಪ್ಪ...ಇದ್ದ ಒಂದ ಮನಿ ಕುಡಿನೂ ಫಲ ಕೊಡಲಾರ್ದಂಗ ಮಾಡ್ಬಿಟ್ಟಲ್ಲ ತಂದೆ. ಮುಂದ ಹ್ಯಾಂಗ್ ನಂ ಬಾಳೆ, ನಾ ಯಾರ್ ಸಲುವಾಗಿ ಇಷ್ಟು ದಿವ್ಸ ಜೀವ ಸವಿಸಿದ್ನೊ 


ಮಂಗಳಮುಖಿ ೪

ಮಂಗಳಮುಖಿ -೪

'ಯವ್ವಾ ಹ್ಯಾಂಗ ಕೆ.ಜಿ ಬೆ ಟಮಾಟಿ ಹಣ್ಣು'

'ಯಪ್ಪಾ ಹದ್ನೆಂಟ ರುಪೈ ಕಿಲೊ ನೋಡ ನನ್ಮಗ್ನ, ಹೇಳ್ ಎಷ್ಟ ಕೊಡ್ಲೆಪ್ಪ, ಎನ್ನುತ್ತಾ  ಎಡಗೈಯಿಂದ ತಕ್ಕಡಿಯನ್ನು ಎತ್ತಿಕೊಳ್ಳುತ್ತಾ, ಬಲಗೈಯಿಂದ ಟೊಮ್ಯಾಟೊ ಹಣ್ಣಿನ ಬುಟ್ಟಿಗೆ ತಾನೆ ಕೈ ಹಾಕಿ ಒಳ್ಳೊಳ್ಳೆ ಹಣ್ಣುಗಳನ್ನು ಆರಿಸಿ ತೂಗಲು ಮುಂದಾದಳು ಕಲ್ಲವ್ವ,

'ಭಾಳ ತುಟ್ಟಿ ಆತಲ್ಲಬೆ, ಮೊನ್ನೆರ ಹನ್ನೆರ್ಡ ರುಪಾಯ್ಗೆ ಕೆಜಿ ಹಂಗ ಒದಿದ್ನಿ' 

'ಯಪ್ಪಾ ದಿನ್ದಿಂದ ದಿನಕ್ಕ ರೇಟ್ ಹೆಚ್ಚು ಕಡ್ಮಿ ಆಕ್ಕಿರ್ತಾವೊ ತಂದೆ, ಹೊಲ್ದಾಗ ನೀರ ಕಮ್ಮಿ ಆಗಿ ಪಿಕ ಬರ್ವಲ್ದಂಗ ಆಗೈವು ನೋಡ್ಪಾ' ಮುಖವನ್ನು ಗಿಂಜುತ್ತಾ, ಬೇಗಬೇಗನೆ ಹಣ್ಣುಗಳನ್ನು ಆರಿಸಿಕೊಂಡು ಕೆ.ಜಿ ಲೆಕ್ಕದಲ್ಲಿ ತೂಗಿ ಗಿರಾಕಿಯ ಚೀಲಕ್ಕೆ ಹಾಕಲು ತಕ್ಕಡಿಯನ್ನು ಮುಂದಕ್ಕೆ ಚಾಚಿದಳು.

'ಅಯ್ಯ, ಬ್ಯಾಡ ಬಿಡ್ಬೆ ಇವತ್ತ, ಊರ ಸೇರಾಕ ರೊಕ್ಕ ಕಮ್ಮಿ ಬಿಳ್ತಾವ, ಅದಲ್ದನಾ ಮನ್ಯಾಗ ಸಣ್ಣ ಸಣ್ಣ ಯಾಡ ಹುಡ್ರ ಅದಾವು ಅವುಕ್ಕ ತಿನ್ನಾಕ ಇನ್ನಾ ಬಿಸ್ಕಿಟ್ ಪಡ್ಕ ತಗೊಂಡ ಹೋಗ್ಬೇಕು, ಮಾಲಾಕ್ನು ಇವತ್ತ್ ಚೂರು ರೊಕ್ಕಾನು ಕಮ್ಮಿ ಕೊಟ್ಟಾನ' ಎನ್ನುತ್ತಲೆ ಮುಂದಕ್ಕೆ ಹೆಜ್ಜೆ ಹಾಕುವವನಿದ್ದವನ ಕೈ ಚೀಲವನ್ನು ಕಸಿದುಕೊಂಡು ಹಣ್ಣನ್ನು ಸುರಿದುಕೊಡುತ್ತಾ,

'ರೊಕ್ಕೆಲ್ಲರ ಓಡಿ ಹೊಕ್ಕತೇನ ಮಗ್ನ, ಇವತ್ತಿಲ್ಲ, ನಾಳ್ಗಿ ತಂದ ಕೊಡ, ಏನ ದುಡ್ದ ಕಟ್ಗೊಂಡ್ ಸಾಯೋದೈತ ಹೇಳು, ಸತ್ತಾಗೇನ ಹೊತ್ಗೊಂಡ ಹೊಕ್ಕಿವೇನು ಎಲ್ಲಾನು?, ತಗೊಂಡ ಹೋಗ್ಪಾ,' ಅಂತಃಕರಣದಿಂದ ನುಡಿದಳು

ಅವಳು ಮಾತುಗಳನ್ನು ಕೇಳಿ ಆ ಗಿರಾಕಿ ಮರುಮಾತನಾಡದೆ,

ತಲೆಯಾಡಿಸಿ, ಚೀಲವನ್ನು ಎತ್ತಿ ಹೆಗಲ ಮೇಲಿಟ್ಟುಕೊಂಡು ನಡೆದನು.

ಐದು ನಿಮಿಷದಲ್ಲಿ  ಕುಳಿತ ಸ್ವಲ್ಪ ದೂರದಿಂದ ಏನೊ ಕೂಗಾಡ, ಗದ್ದಲದ ಸದ್ದು ಕೇಳಿಸಿದಂತಾಯಿತು ಕಲ್ಲವ್ವನಿಗೆ, ಆಗಲೆ ಹಳ್ಳಿಗೆ ಹೋಗುವ ಹೊತ್ತಾದ್ದರಿಂದ ತಡಬಡಿಸಿ ಎದ್ದು,  ತರಕಾರಿಗಳನ್ನು ಪುಟ್ಟಿಯಲ್ಲಿ ತುಂಬಿಕೊಂಡು, ಅಲ್ಲಿಯೆ ಹಿಂದ ಇದ್ದ ಶೆಟ್ಟರ ಕಿರಾಣಿ ಅಂಗಡಿಯಲ್ಲಿಟ್ಟು, ಮೇಲೆ ಹಸಿಮಾಡಿದ ಗೋಣಿಚೀಲವೊಂದನ್ನು ಹೊದಿಸಿ, ಅಂದು ಸಂಪಾದನೆ ಮಾಡಿದ ಹಣವನ್ನು ಲೆಕ್ಕ ಹಾಕಿ, ಹಳ್ಳಿಗೆ ಹೋಗಲು ಬೇಕಾಗುವಷ್ಟು ಹಣವನ್ನಷ್ಟೆ ಕೈಯಲ್ಲಿ ಹಿಡಿದುಕೊಂಡು, ಉಳಿದ ಹಣವನ್ನು  ಎದೆಯ ರವಿಕೆಯಲ್ಲಿ ತುರುಕಿಕೊಳ್ಳುತ್ತಾ ಗದ್ದಲ ನಡೆದ ದಿಕ್ಕಿನತ್ತ ನಡೆದಳು. ಅದಾಗಲೆ ಗುಂಪು ಚದುರಿ ಹೋಗಿ ಒಬ್ಬಿಬ್ಬರು ಅಷ್ಟೇ ನಿಂತುಕೊಂಡಿದ್ದರು, ಕೆಳಗೆ ಒಬ್ಬ ವ್ಯಕ್ತಿಯು ಅಳುತ್ತಾ ಕುಳಿತುಕೊಂಡಿದ್ದನು ಅವನ ಅನತಿ ದೂರದಲ್ಲಿ ಮಂಗಳಮುಖಿಯರ ಗುಂಪೊಂದು ನಗುತ್ತಾ, ಕೆಕೆ ಹಾಕುತ್ತಾ ನಿಂತಿತ್ತು. 

ಕಲ್ಲವ್ವ ಸಮೀಪಕ್ಕೆ ಹೋಗಿ ನೋಡಿದಾಗ, ಆ ಮಂಗಳಮುಖಿಯರ ಗುಂಪಿನಲ್ಲಿ ತನ್ನ ಮಗನಿದ್ದದ್ದನ್ನು ಕಂಡು ಕಣ್ಣ ಹುಬ್ಬುಗಳನ್ನು ಗಂಟಿಕ್ಕಿಕೊಂಡು, ನೆಲದ ಮೇಲೆ ಕುಳಿತುಕೊಂಡ ವ್ಯಕ್ತಿಯ ಕಡೆಗೆ ನೋಡಿದಳು, ಅರೆ! ಅವನೆ, ಈಗ ತಾನೆ ನನ್ನ ಬಳಿ ತರಕಾರಿಯನ್ನು ತೆಗೆದುಕೊಂಡು ಬಂದವನಲ್ಲವೆ ಎಂದುಕೊಳ್ಳುತ್ತಾ, ಅವನ ಹತ್ತಿರ ಹೋಗಿ 'ಯಾಕ್ಮಗ್ನ ಏನಾತ' ಅನ್ನುತ್ತಾ ಕುಕ್ಕರ್ಗುಂಡಿಲೆ ಅವನೆದುರು ಕುಳಿತು ಕೇಳಿದಳು. ತಲೆಯೆತ್ತಿ ನೋಡಿದ ವ್ಯಕ್ತಿ, 'ನೋಡ್ಬೆ, ಊರ್ಮುಟ್ಟಾಕ ಅಂತಿಟ್ಗೊಂಡಿದ್ದ ರೊಕ್ಕಾನೆಲ್ಲ ಕಸ್ಕೊಂಡ್ಬಿಟ್ರು' ಎಂದನು ಹತಾಶೆಯ ಧನಿಯಲ್ಲಿ, ' ಅಯ್ಯ ತಮ್ಮ ಹೋದ್ರ ಹೋಗ್ಲ ತಗೋ ಅತ್ಲಾಗ ಹಾಳಾಗಿ, ಈಕ ನಾ ಕೊಡ್ತಿನಿ ತಗೊ ಏಳು, ನಾಳೆರ ಇಲ್ಲ ನಾಡಿದ್ದರ ತಂದು ಕೊಡ್ವಂತಿಯಂತ, ಏಳ, ಏಳ ಹೊತ್ತ್ ಮುಳ್ಗಾಕ ಬಂತ ಆಗ್ಲೆ' ಎನ್ನುತ್ತಾ, ಅವನ ಮರುಮಾತಿಗೂ ಕಾಯದೆ, ತನ್ನೂರಿಗೆಂದು ತೆಗೆದಿಟ್ಟುಕೊಂಡಿದ್ದ ಹಣವನ್ನು ಅವನ ಜೇಬಿಗೆ ತುರುಕಿ, ಭುಜಕ್ಕೆ ಕೈ ಹಾಕಿ ಎಬ್ಬಿಸಿ, ಜೊತೆಯಲ್ಲಿಯೆ ಕರೆದುಕೊಂಡು ನಡೆಯುತ್ತಾ, ಮಂಗಳಮುಖಿಯರ ಕಡೆಗೊಮ್ಮೆ ನೋಡಿದಳು, ಅವರಾಗಲೆ ಹಣದ ವಸೂಲಿಗಾಗಿ ಮತ್ತೊಬ್ಬನ ಮೈ ಮೇಲೆ ಬಿದ್ದಿದ್ದರು. 

ದಾರಿಯಲ್ಲಿ ಹೋಗುತ್ತಾ, ಕಲ್ಲವ್ವ ಆ ವ್ಯಕ್ತಿಯನ್ನು ಕೇಳಿದಳು

'ತಮ್ಮಾ, ತಪ್ಪ ತಿಳ್ಕೊಬ್ಯಾಡ, ನಿನ್ ಹೆಸರೇನ್ಪಾ?'

'ಹ್ಞಾಂ..., ಶಂಕ್ರಯ್ಯ ಬೆ'

'ಊರು?'

'ಇಲ್ಲೆ ಬೆ, ನಿಡಗುಂದಿ '

' ಹೌದಾ!!, ಹೆಂಡ್ರು ಮಕ್ಳು?'

'ಹ್ಞೂಂ ಲಗ್ನ ಆಗಿ ಎರ್ಡ ಹೆಣ್ಮಕ್ಳ ಅದಾವ್'

'ಗಂಡು?'

' ಇಲ್ವಾ, ನಾನ ಯಾವುದ್ಕೂ ಆಸೆನ ಪಟ್ಟಾಂವಲ್ಲ, ಹೆಣ್ಣಾದ್ರನ, ಗಂಡಾದ್ರೆನ ಮಕ್ಳ, ಮಕ್ಳ.. ಗಂಡ... ಗಂಡಂತದ ಹಡ್ಕೊಂತ ಕುಂತ್ರ, ಆಕಿ ಆರೋಗ್ಯಾ ಹಾಳಾಗಿ ಹೊಕ್ಕೈತಲ್ರಿ, ಅದಕ್ ಮ್ಯಾಲ...ಮ್ಯಾಲ ಯಾಡು ಹೆಣ್ಣ್ ಆದ್ವು, ಅದ್ಕ ಎಲ್ಲಿದ ತಗಿ ಅತ್ಲಾಗ ಅನ್ಕೊಂಡ, ಆಪ್ರೇಷನ್ ಮಾಡ್ಸಬಿಟ್ಟಿನ ನೋಡ್ವಾ, '

'ಛಲೊ ಆತ ನೋಡ ನನ್ನಪ್ಪ, ನಿಮ್ಮಂತೊರು ಊರಿಗೆ ನಾಕ್ಮಂದಿ ಇದ್ರಂದ ಸಾಕ, ಹೆಣ್ಣ ಹಡಿಯೊ ಹೆಣ್ಮಕ್ಳ ಭಾಳೆ ಬಂಗಾರಾಗಿರ್ತೈತಿ' ಎಂದು ಹುಸಿ ನಗವನ್ನು ಮುಖದಲ್ಲಿ ತುಂಬಿಕೊಳ್ಳುತ್ರಾ,  ಉಗುಳನ್ನು ನುಂಗಿಕೊಂಡು

'ಯಪ್ಪಾ, ಅವ್ರೆಲ್ಲ ಈಗ ನಿನ್ಹತ್ರ ರೊಕ್ಕಾ ಕಿತ್ಕೊಂಡ ಹೋದ್ರಲ್ಲಾ, ಅವ್ರಗೇನ ನಿ ಕೈಗಡ ಏನರ ಕೊಡೊದಿತ್ತೇನ' ಸ್ವಲ್ಪ ಅಳುಕಿನ ಧ್ವನಿಯಲ್ಲಿಯೆ ಕೇಳಿದಳು.

ಪ್ರಶ್ನಾರ್ಥಕವಾಗಿ, ಹುಬ್ಬುಗಳನ್ನು ಗಂಟಿಕ್ಕಿಕೊಂಡು ಕಲ್ಲವ್ವನನ್ನೆ ದಿಟ್ಟಿಸಿನೋಡಿದನು.

ಅವನ ಈ ನೋಟವನ್ನು ಕಂಡಂತ ಕಲ್ಲವ್ವಳು ಮನದಲ್ಲಿಯೆ ಹೆದರಿಕೊಂಡಳು.

'ಇಲ್ಲವ್ವ, ಇವ್ರ ಹತ್ರ ಯಾರ ಕೈಗಡ ತಗೊತಾರ್ಬೆ'

'ಮತ್ತ್ ಹಾಂಗ ಎದಿಮ್ಯಾಲ ಬಿದ್ದ ಹಂತೇಕಿನ ರೊಕ್ಕಾನೆಲ್ಲಾ ಕಿತ್ಗೊಂಡ ಹೋದ್ರು'

'ಅದಾ...‌ಅವ್ರದೊಂದು ಛಾಳಿ ಅದು'

'ಛಾಳಿ..!!! ಹಂಗಂದ್ರ'

'ಅಯ್ಯ, ಇತ್ತಿತ್ಲಾಗ ಇವ್ರ ಆಟ ಭಾಳ ಜೋರಾಗೈತ್ಬೆ ಯವ್ವ, ದುಡಿಯಂಗಿಲ್ಲ ದುಖ್ ಪಡೊಂಗಿಲ್ಲ, ಮುಂಜಾನಿದ್ದ ಸಂಜಿತನ್ಕ ಊರ...ಊರ ಸಂತಿ ಅಡ್ಡಾಡಿ, ರೊಕ್ಕಾ ಇಸ್ಗೊತಾರ, ಕೊಟ್ರ ಛಲೊ, ಕೊಡದಿದ್ರ? ಈಗ ನೋಡಿದೆಲ್ಲವ್ವ, ಹಿಂಗಾ, ತ್ರಾಸ್ ಅಂದ್ರು ಇಲ್ಲ, ಬ್ಯಾನಿ ಅಂದ್ರು ಇಲ್ಲ, ಇರ್ಲಿ, ಇರ್ದ ಹೋಗ್ಲಿ ಎದಿಮ್ಯಾಲ ಬಿದ್ದು ಇದ್ಬದ್ದ ರೊಕ್ಕಾನೆಲ್ಲ ಕಸ್ಗೊಂಡ ಹೋಕ್ಕಾರ, ಇತ್ತಿತ್ಲಾಗ ಇವ್ರನ್ನ ಹೇಳೊರ ಕೇಳೊರ ಯಾರಿಲ್ದಂಗಾಗೈತಿ'

ಅವನ ಮಾತುಗಳನ್ನು ಕೇಳುತ್ತಿದ್ದಂತೆಯೆ, ಕಲ್ಲವ್ವನ ನಡಿಗೆ ಸಣ್ಣದಾಯಿತು, ಬಾಯರಿದಂತಾಗಿ, ಮೈಯಲ್ಲ ಬೆವರಿಕೊಂಡು,  ಕ್ಷಣಕಾಲ‌ ಕಣ್ಣಿಗೆ ಕತ್ತಲು ಕಟ್ಟಿದಂತಾಗಿ, ಆ ಹುಡುಗನ ತೋಳನ್ನು ಹಿಡಿದುಕೊಂಡು ನಿಂತುಬಿಟ್ಟಳು.

'ಯಾಕಬೆ,‌ ಏನಾತ?' ಎಂದನಾತ ತುಸು ಗಾಬರಿಯಿಂದ

'ಏನಿಲ್ಲಪಾ ತಂದೆ, ನಿ ಹೇಳಿದ್ದ ಮಾತ ಕೇಳಿ, ನನ್ನೆದಿ ಝಲ್ ಅಂದಂಗಾತು ಅದ್ಕ,' ಎಂದಳು ಮೆಲ್ಲನೆ ಸಾವರಿಸಿಕೊಳ್ಳುತ್ತಾ

ಕಣ್ಣನ್ನು ತೆರೆದಳು.

'ಈಗ ಹ್ಯಾಂಗೈತಿ ಆರಾಮ, ಐತಿಲ್ಲೊ, ಏನ್ ನೀರು ಪಾರು ಕುಡಿತಿರೊ' ಕೇಳಿದನು ಕಾಳಜಿಯಿಂದ

'ಬ್ಯಾಡ್ತಮ್ಮ, ಬ್ಯಾಡ, ಅಲ್ಲಾ, ಮತ್ತ್ ಅವಕ್ಕ...ದಗದಾ ಬಗ್ಸಿ ಅಂತ ಏನಿಲ್ಲನ'

'ಯಾ ದಗದಾ ತರ್ತಿಬೆ, ಹಿಂಗ ಗಂಡರಗೂಳಿ ಅಡ್ಡಾಡ್ದಂಗ ಅಡ್ಡಾಡ್ತಾವು, ಕೆಲವೊಬ್ರ ಅದಾರ, ತಂ ಪಾಡಿಗೆ ತಾವು ದುಡ್ಕೊಂಡ, ಛಲೊತ್ನಾಗಿ ಬಾಳೆ ಮಾಡಾಕ ಹತ್ತ್ಯಾವು, ಇವ್ ಒಂದಿಷ್ಟು ಪ್ಯಾಸನ್ ಅಂತಂದ ಗಂಡ ಹೋಗಿ ಹೆಣ್ಣಿನ ವೇಷಾ ಹಾಕ್ಕೊಂಡ, ಹಿಂಗ ಬೀದಿ ಬೀದಿ ಅಲಿತಾವ,'

'ಅಂದ್ರ ಇವ್ರ ಹೊಟ್ಟಿ ಉಪಜೀವ್ನ ಇದ ಅಂದಂಗಾತು'

'ಹೌದವ್ವಾ, ಇದ ಕಾಡೋದು, ಬೇಡೊದು, ಇಸ್ಕೊಳ್ಳುದು ಮಜಾ ಮಾಡೋದ, ಹೊಟ್ಟಿಗೊಂದಿಷ್ಟ ಹಿಟ್ಟ, ಜುಟ್ಗೊಂದಿಷ್ಟ ಹೂವ, ಆತಲ್ಲ ಮತ್ತಿನ್ನೇನ ಯಾರ್ದ ದುಡ್ಡ್ ಹಾಂ ಎಲ್ಲವ್ವನ ಜಾತ್ರಿ' ಹೇಳುತ್ತಾ... ಹೇಳುತ್ತಾ ನಿಲ್ದಾಣ ಬಂದೆ ಬಿಟ್ಟಿತು.

ಕೊಡುವ ಹಣವನ್ನು ಇನ್ನೆರಡು ದಿನದಲ್ಲಿ ಕೊಡುವುದಾಗಿ ಹೇಳಿ ಕಲ್ಲವ್ವನನ್ನು ಹಳ್ಳಿಯ ಬಸ್ಸಿಗೆ ಹತ್ತಿಸಿ, ತಾನು ತನ್ನೂರಿನ ಹಾದಿಯನ್ನು ಹಿಡಿದನು.

ಮಂಗಳಮುಖಿ ೫

ಮಂಗಳಮುಖಿ - ೫



ಬಸ್ಸಿನಲ್ಲಿ ಹತ್ತಿ ಕುಳಿತುಕೊಂಡ ಕಲ್ಲವ್ವನಿಗೆ ಲೋಕದ ಪರಿವೆ ಇಲ್ಲದ ಹಾಗಾಗಿ ಹೋಯಿತು, ಬಸ್ ಕಂಡಕ್ಟರ್ ಎರಡೆರಡು ಸಲ ಕೂಗಿ, ಹಣವನ್ನು ಪಡೆದು ಟಿಕೆಟನ್ನು ಕೊಟ್ಟು ಮುನ್ನಡೆದಿದ್ದನು, ಕಲ್ಲವ್ವನ ತಲೆಯಲ್ಲಿ ಅದೆ ಮಾತುಗಳು, ಅವರ ಚೆಲ್ಲಾಟಗಳು, ಹಣವನ್ನು ಕಿತ್ತುಕೊಂಡ ರೀತಿ, ಮಗನು ಅವರ ಸಂಗದಲ್ಲಿ ಇದ್ದದ್ದನ್ನು ಕಂಡು, ಎಡವಿದ ಬೆರಳಿನ ಮೇಲೆ ಕೈ ಜಾರಿ ಬಿದ್ದ ಪಾತ್ರೆಯ ನೀಡುವ ನೋವಿನಷ್ಟೆ ಅಧಿಕ ಸಂಕಟ, ತಳಮಳವುಂಟಾಗಿಬಿಟ್ಟಿತ್ತು ಕಲ್ಲವ್ವನೆದೆಯಲ್ಲಿ.


########


ಸಮಯ ಆಗಲೆ ರಾತ್ರಿ ಹತ್ತೂವರೆ ಎಂದು ಸೂಚಿಸುತ್ತಿತ್ತು, ಕಾಂತಳು ಎಂದಿನಂತೆಯೆ, ಮನೆಯ ಬಾಗಿಲವರೆಗೂ ಇಬ್ಬರು ಯುವಕರ ಜೊತೆಯಲ್ಲಿಯೆ ಬಂದು ನಿಂತಗೊಂಡು ಕ್ಷಣಕಾಲ ಲಲ್ಲೆಯನ್ನು ಹೊಡೆದು, ಒಳಗೆ ಬಂದಳು. ಗೋಡೆಗಾಣಿಸಿಕೊಂಡು ಓಡುವ ಗಡಿಯಾರವನ್ನೆ ನೋಡಿಕೊಂಡು ಕುಳಿತಿದ್ದಂತಹ ಕಲ್ಲವ್ವನತ್ತ ಒಂದು ಉದಾಸೀನತೆಯ ನೋಟವನ್ನು ಬಿರಿ, ಮನೆಯ ಬಾಗಿಲನ್ನು ಮುಚ್ಚಿ, ತನ್ನ ಮಲಗುವ ಕೋಣೆಗೆ ಹೋಗಿ ಮಲಗಿಕೊಂಡುಬಿಟ್ಟಳು.


'ಯವ್ವಾ... ಕಲ್ಲವ್ವ,... ಕಲ್ಲವ್ವ.. ಕಲ್ಲವ್ವಾ... ಯಾರು ಇಲ್ಲನಬೆ ಹಟ್ಯಾಗ, ಎಷ್ಟೊತ್ತ್ ಆತ ನಾ‌ ಮನಿ ಬಾಗಲ್ದಾಗ ನಿಂತ್ಗೊಂಡ ದನಾ ಒದ್ರದಂಗ ಒದ್ರಾಕ್ಹತ್ತೀನಿ, ಒಬ್ರನೂ ಹ್ಞಾಂ ಅನುವಲ್ರು ಹ್ಞೂಂ ಅಂತರ ಅನುವಲ್ರ, ಚಿಗವ್ವಾ, ಬೇ ಕಲ್ಲವ್ವಾ' ಮತ್ತೊಂದೆರಡು ಸಾರಿ ಕೂಗಿದಳು ಹಿಂದಿನ ಮನೆಯ ಶಾಂತವ್ವ.


ಶಾಂತವ್ವಳ ಕೂಗಿಗೆ ಎಚ್ಚರಕೊಂಡ ಕಾಂತಳು, ಎದ್ದು ಹಾಳು ಮುಖದಲ್ಲೆ ಹೊರಗೆ ಬಂದಳು. ಸಮಯ ನೋಡಿಕೊಂಡಾಗ ಏಳು ಇಪ್ಪತ್ತಾಗಿತ್ತು


'ಹ್ಞೂಂ... ಏನ್ ಬೇಕಿತ್ತವ್ವ ಬೆಳ್ಗ ಬೆಳ್ಗೆನ ಬಂದ ನಿದ್ದಿ ಹಾಳ ಮಾಡಿದಿ' ಕಣ್ಣನ್ನು ತಿಕ್ಕಿಕೊಳ್ಳುತ್ತಾ, ಮೈಯನ್ನು ಮುರಿಯುತ್ತಾ,


ಕಣ್ಣನ್ನು ತಿಕ್ಕಿಕೊಳ್ಳುತ್ತಲೆ ಕೇಳಿದಳು.


'ಏನಿಲ್ಲ, ಗಿಂಡಿ ಹಾಲ್ ಬೇಕಾಗಿತ್ತ್ ಆವಾಗ್ಲಿಂದ ಕರಿಯಾಕ್ಹತ್ತಿನಿ ಯಾರು ಹ್ಞೂಂ ಅನುವಲ್ರಿ, ಹ್ಞಾಂ ಅನುವಲ್ರಿ'


ಕಾಂತಾಳು ಇನ್ನೇನೊ ಹೇಳಬೇಕೆನ್ನುವಷ್ಟರಲ್ಲಿ ಎದುರು ಮನೆ ಬಸಲಿಂಗ ಓಡುತ್ತಾ ಬಂದು ಎದುಸಿರನ್ನು ಬಿಡುತ್ತಾ, 'ನಿಮ್ಮವ್ವ.....


'ಹ್ಞೂಂ.. ನಮ್ಮವ್ವ?'


'ನಿಮ್ಮವ್ವ... ತ್ವಾಟದಾಗ ಸತ್ತ ಬಿದ್ದಾಳ..' 


'ಏನಂದಿ..!!!' ಅಂತ ಪ್ರಶ್ನೆ ಕೇಳಿದ ಕಾಂತಾಳು ಬಸಲಿಂಗನ ಮರುತ್ತರಕ್ಕು ಕಾಯದೆ, ತೋಟದ ಕಡೆಗೆ ಓಟಕಿತ್ತಳು,


###


ಒಂದೆ ಉಸಿರಿನಲ್ಲಿ ಓಡಿಬಂದಳು ಕಾಂತಳು ಅವಳ ಹಿಂದೆಯೆ ಹಳ್ಳಿಗೆ ಹಳ್ಳಿಯೆ ಬಂದು ಜಮಾಯಿಸಿಬಿಟ್ಟಿತಲ್ಲಿ ಕಾಂತಳು ತಾಯಿಯ ಹೆಣವನ್ನು ನೋಡಿದಳು. ಕಲ್ಲವ್ವ ಹೊಲದಲ್ಲಿ ಬೊರಲಾಗಿ ಬಿದ್ದಿದ್ದಳು, ಎಡಗೈಯಲ್ಲಿ ದನಕ್ಕೆಂದು ಕೊಯ್ದುಕೊಂಡಿದ್ದ ಕಸ, ಬಲಗೈಯಲ್ಲಿ ಬಲವಾಗಿ ಹಿಡಿದುಕೊಂಡಿದ್ದ ಕುಡಗೋಲು ಎರಡರಲ್ಲಿ ಒಂದನ್ನು ಕೈ ಬಿಟ್ಟಿರಲಿಲ್ಲ. ಆಗ ಅಲ್ಲೊಂದು, ಇಲ್ಲೊಂದು ಮಾತುಗಳು ಕೇಳಿ ಬರಲಾರಂಭಿಸಿದವು


'ಎಂಥ ಹೆಣ್ಮಗ್ಳರಿ, ನಾಕಾಳ ಗಂಡಿನ ಕೆಲ್ಸಾನ ಒಬ್ಬಾಕಿ ನಿಗ್ಸ್ತಿದ್ಳ, ಹಗ್ಲೆನು, ರಾತ್ರೆನು ಎರ್ಡು ಒಂದ ಮಾಡ್ಬಿಡ್ತಿದ್ಲು ಹೊಲ್ದಾಗ ದಗ್ದ ಅದಾವಂತಂದ್ರ,'


'ಹೌದ್ರಿ, ಅದ್ಕ ದ್ಯಾವ್ರ ದೇವ್ರಂತವ್ರನ್ನ ಜಲ್ದಿ ತನ್ ಹತ್ರಕ್ಕ ಕರ್ಸಿಕೊಂಡ ಬಿಡ್ತಾನ ನೋಡ್ರಿ, ಅಲ್ಲ,.. ನನವು ಮೂರ ಮೊಮ್ಮಕ್ಳನ್ನು ಅದೆಷ್ಟು ಹಚ್ಗೊಂಡಿದ್ಳು ಅಂತೀನಿ, ಉಂಡ್ರು ಬಿಟ್ರು ಎಲ್ಲಾ ಈಕಿ ಮನಿಯಾಗ, ಇನ್ನೀಕಿ ಇಲ್ಲ ಅನ್ನೊ ಸುದ್ದಿ ಅವಕ್ಕೇನರ ಗೊತ್ತಾತಂತಂದ್ರ ಏನ್ಮಾಡ್ತಾವೊ ಏನೊ?'


ಎಲ್ಲರೂ ಕಲ್ಲವ್ವನ ಗುಣಗಾನವನ್ನು ಮಾಡುವವರೆ, ಕೊನೆಗೆ ಊರಿನ ಹಿರಿಯರು ಬಂದು ಬಂಡಿಯಲ್ಲಿ ಹೆಣವನ್ನು ಹಾಕಿಕೊಂಡು ಬಂದು ಶಾಸ್ತ್ರಗಳನ್ನು ಮುಗಿಸಿಕೊಂಡು, ಮರಳಿ ತೋಟಕ್ಕೆ ಕಲ್ಲವ್ವನ ಹೆಣವನ್ನು ತಂದು ತೋಟದ ಮದ್ಯದಲ್ಲಿ ಗುಂಡಿಯನ್ನು ತೋಡಿ, ಹುಗಿದು,‌ ಎಲ್ಲರೂ ಕೊನೆಯದಾಗಿ ಕೈ ಮುಗಿದು ಊರಿಗೆ ಮರಳಿದರು.


##


ವಾರ ಕಳೆಯಿತು, ಕಲ್ಲವ್ವನನ್ನು ಕ್ರಮೇಣವಾಗಿ ಮರೆತ ಜನರು ತಮ್ಮ ನಿತ್ಯದ ಬದುಕಿನಲ್ಲಿ ಕಳೆದುಹೋಗಿದ್ದರು. ಭೂ ಗರ್ಭದಲ್ಲಿ ನಿಶ್ಚಿಂತೆಯಾಗಿ ಮಲಗಿದ್ದ ಕಲ್ಲವ್ವನ ಹುಗಿದ ಜಾಗದಲ್ಲೊಂದು ಕಟ್ಟೆಯನ್ನು ಕಟ್ಟಿ ಹೂವಿನ ಹಾರಗಳಿಂದ ಸಿಂಗರಿಸಿದ್ದರು. ಅವಳ ನೆನಪಿಗಾಗಿ ಒಂದು ಗಿಡವನ್ನು ನೆಟ್ಟಿದ್ದರು. ತಾಯಿಯ ಮರಣದ ನಂತರ ಕಾಂತಾಳ ಮನಸ್ಸು ಬಹಳಷ್ಟು ಘಾಸಿಗೊಂಡಿತ್ತು. ಯಾರ ಸಂಪರ್ಕಕ್ಕೂ ಸಿಗದೆ,  ಕಲ್ಲವ್ವನ ಕಟ್ಟೆಯ ಪಕ್ಕದಲ್ಲೆ ಕುಳಿತಿರುತ್ತಿದ್ದಳು. 


ಅವತ್ತು ಒಂದು ದಿನ ಮಧ್ಯಾಹ್ನ ಮೂರರ ಹೊತ್ತು,  ಸಣ್ಣಪ್ಪನ ಮಡದಿ ಶಾಂತವ್ವಳು ತಲೆ ತುಂಬಾ ಸೇರಗನ್ನು ಹೊದ್ದುಕೊಂಡು ಕೈಯಲ್ಲಿ ಬುತ್ತಿಯನ್ನು ಕಟ್ಟಿಕೊಂಡು ಕಾಂತಾಳ ಎದುರು ಬಂದು ನಿಂತುಗೊಂಡಳು. ಅವಳನ್ನು ಕಣ್ಣೆತ್ತಿ ನೋಡಿದ ಕಾಂತಳು 


'ನೀವ್ ಯಾಕ ಬರಾಕ ಹೋಗಿದ್ರಿ ಇಷ್ಟ ಬಿಸ್ಲಾಗ' ಸೋತ ದ್ವನಿಯಲ್ಲಿ ಕೇಳಿದಳು.


'ಎರ್ಡ ದಿನ್ದ ಹೊತ್ತಾತ್ ಹೊಟ್ಟಿಗೆ ಸರಿಯಾಗಿ ಕೂಳು ನೀರಿಲ್ಲ, ಅಂತಾದ್ರಾಗ ಸುಡೊ ಬಿಸ್ಲಾಗ ಇಲ್ಲೆ ಹಿಂಗ ಬಂದ ಕುಂತ್ಗೊಂಡ್ರ ಹ್ಯಾಂಗ?'


'ಎರ್ಡ ದಿನ ಕೂಳ ತಿನ್ದಿದ್ರ ನಾನೇನ ಸಾಯೋದಿಲ್ಲಾಳ್ಬೆ'


'ಮುಚ್ಚ ಬಾಯಿ ಭಾಡೆನ ಮಗ್ನ, ನನ್ಗ ಎದ್ರುತ್ರ ಕೊಡ್ತಿ, ನಿಮ್ಮವ್ವ ಇದ್ದಿದ್ರ ನಿ ಹಿಂಗ ಇರಾಕ ಬಿಡ್ತಿದ್ಲನ ನಿಂಗ' ಗದರಿಸಿದಳು ತುಸು ಗಡಸಿನ ಧನಿಯಲ್ಲಿ.


ತಾಯಿಯ ಹಳೆಯ ನೆನಪುಗಳೆಲ್ಲ ಉಕ್ಕಿಬಂದು, ಎರಡು ಕೈಯಿಂದ ಮುಖವನ್ನು ಮುಚ್ಚಿಕೊಂಡು ಗಳಗಳನೆ ಅಳತೊಡಗಿದಳು.


'ಸಾಕ್ಬಿಡು ಅತ್ತಿದ್ದ, ಹ್ವಾದ ಜೀವ ಏನ್ ಹೊಳ್ಳಿ ಬರ್ತದನು, ದೇವ್ರಂತಾಕಿ, ದೇವ್ರ ಹಂತೇಕನ......' ಮಾತು ಗಂಟಲದಲ್ಲೆ ಸಿಕ್ಕಿ ಹಾಕಿಕೊಂಡಿತು ಶಾಂತವ್ವಳಿಗೆ, ಗಂಟಲು ಕಟ್ಟಿ ಉಮ್ಮಳಿಸಿ ಬಂದ ಎದೆಯ ದುಃಖವನ್ನು ಸೀರೆ ಸೇರಗಂಚಿನಿಂದ ಬಾಯನ್ನು ಮುಚ್ಚಿಕೊಂಡು ಕಣ್ಣೀರಾದಳು.


ಕಾಂತಳು ಶಾಂತವ್ವಳು ದುಃಖಿಸುವ ಪರಿಯನ್ನು ಕಂಡು ಎದ್ದು ಬಂದು ಅವಳ ಕಾಲನ್ನು ಹಿಡಿದುಕೊಂಡು ಮತ್ತಷ್ಟು ಜೋರಾಗಿ ಅಳಲಾರಂಭಿಸಿದಳು. ಶಾಂತವ್ವಳು ಅವಳ ತೋಳನ್ನು  ಹಿಡಿದು ಎಬ್ಬಿಸಿಕೊಂಡು, ಸಮಾಧಾನ ಮಾಡಿ, ಅಲ್ಲೆ ತೋಟದ ಬದುವಿನಲ್ಲಿದ್ದ ಬೇವಿನಗಿಡದ ನೆರಳಿಗೆ ಕರೆ ತಂದು, ಕುಡಿಯಲಿಕ್ಕೆ ನೀರನ್ನು ಕೊಟ್ಟು, ಬುತ್ತಿಯ ಗಂಟನ್ನು ಬಿಚ್ಚಿ, ತಾಟಿನಲ್ಲಿ ಅನ್ನವನ್ನು ನೀಡಿ ಕೊಟ್ಟಳು. ಒಂದೆರಡು ತುತ್ತುಗಳನ್ನು ಉಂಡ ನಂತರ ಊಟ ಸೇರದೆಂದು ತಟ್ಟೆಯನ್ನು ಕೆಳಗಿಟ್ಟು ಕೈ ತೊಳೆದುಕೊಂಡು ಬಿಟ್ಟಳು ಕಾಂತ. ಕ್ಷಣಕಾಲ ಇಬ್ಬರು ಮೌನವಾಗಿದ್ದರು, ಆಗಾಗ ಬೀಸುವ ಸುಂಯ್ಯ ಎಂಬ ಗಾಳಿ, ಗುಂಯ್ಯ ಎಂದು ತಿಪ್ಪೆಗುಂಡಿಯಿಂದ ಹಾರಾಡಿ ಬರುತ್ತಿದ್ದ ನೊಣಗಳು, ನಿಮ್ಮದು ಆಗಿದ್ದರೆ ನನ್ನ ಪಾಲಿನದ್ದು ನೀಡಿಬಿಡಿ ಎಂದು ಅವರಿಬ್ಬರ ಎದುರಿನಲ್ಲಿ ಬಾಲವನ್ನು ಅಲ್ಲಾಡಿಸಿಕೊಂಡು ನಿಂತಿದ್ದ ಪಕ್ಕದ ತೋಟದ ಚಂದಪ್ಪನ ನಾಯಿ, ಚೆಲ್ಲಿದ ಅನ್ನದಗಳನ್ನು ತನ್ನ ಗರ್ಭವ ಸೇರಿಸಿಕೊಳ್ಳುವ ಕಾತುರದಲ್ಲಿ ಕಾ...ಕಾ.. ಎಂದು ಒಂದೆ ಸಮನೆ ಒದರುತ್ತಿದ್ದ ಕಾಗೆಗಳ ಗುಂಪು, ಇವಾವು ಅವರಿಬ್ಬರ ಅರಿವಿಗೆ ಬಂದಿಲ್ಲವೇನೊವೆಂಬಂತೆ, ಶಿಲ್ಪಿಯು ಕೆತ್ತಿಟ್ಟ ಮಾತಿಲ್ಲದ ಮೂರ್ತಿಗಳಂತೆ ಕುಳಿತುಬಿಟ್ಟಿದ್ದರು. ಸಮಯ ಕಳೆಯುತ್ತಿತ್ತು, ನಾಯಿಯು ಹಸಿವನ್ನು ತಾಳಲಾರದೆ, ಶಾಂತವ್ವಳ ಪಕ್ಕದಲ್ಲಿದ್ದ ಬುತ್ತಿಯ ಚೀಲಕ್ಕೆ ಬಾಯಿಯನ್ನು ಹಾಕಿ ಓಟ ಕಿತ್ತಿತು, ಮರದ ಕೊಂಬೆಯ ಮೇಲೆ ಕುಳಿತ ಕಾಗೆಗಳೆಲ್ಲ ನಾಯಿ ಹಿಂದೆ ಹಾರಿ ಹೋದವು. ಆಗ ಎಚ್ಚೆಂತಹ ಕಾಂತಳು, 'ಅಯ್ಯೊ, ಆ ನಾಯಿ ನಮ್ಮ ಬುತ್ತಿಯನ್ನು ಒಯ್ಯುತ್ತಿದೆ,' ಎಂದು ಎದ್ದು ಅದನ್ನು ಹಿಂಬಾಲಿಸಲು ಮುಂದಾದಳು. ಆಗ ಶಾಂತವ್ವಳು ಅವನ ಕೈಯನ್ನು ಹಿಡಿದು ಕುಳ್ಳರಿಸಿದಳು.


'ಕೈ ಬಿಡ್ಬೆ ಯವ್ವಾ, ಆ ನಾಯಿ ಬುತ್ತಿ ಕಸ್ಕೊಂಡ ಹೊಂಟೈತಿ

ಹೊಡ್ದ ಕಿತ್ಗೊಂಡ ಬರ್ತಿನಿ'


'ಬ್ಯಾಡೆಪ್ಪ, ಹೋದ್ರ ಹೋತ್ ಬಿಡು ಅತ್ಲಾಗ'


'ಹಂಗಂದ್ರ ಹ್ಯಾಂಗ್ಬೆ'


'ಒಂದ ಕಳ್ಕೊಂಡ್ರ ಏನಾತ ಮತ್ತೊಂದ ಸಿಕ್ತಲ್ಲ'


ಹುಬ್ಬನ್ನು ಗಂಟಿಕ್ಕಿಕೊಂಡು ಏನು ಎನ್ನುವ ದೃಷ್ಠಿಯಲ್ಲಿ ಶಾಂತವ್ವಳನ್ನು ನೋಡಿದಳು ಕಾಂತಳು.


'ಗೊತ್ತಾಗ್ಲಿಲ್ಲೇನ?'


ಇಲ್ಲವೆಂದು ತಲೆಯಾಡಿಸಿದಳು.


' ನೀನ್ ಮತ್ತ್ ನನ್ ಹೊಳ್ಳಿ ಅವ್ವಾ ಅಂತಂದ ಬಾಯ್ತುಂಬಾ ಕರ್ದೆಲ್ಲ, ಇದಕ್ಕಿಂತ ಮತ್ತೀನೆನ ಬೇಕಿತ್ತ, ತಮ್ಮ'


ಮತ್ತೊಮ್ಮೆ ಎದೆಯೊಳಗಿನ ದುಃಖವೊ, ಮಾಡಿದ ತಪ್ಪಿನ ಅರಿವಾದಂತಾಗಿ ಗಳಗಳನೆ ಅಳತೊಡಗಿದಳು ಕಾಂತಳು.


'ಹೋಗ್ಲಿ ಬಿಡು ಆದದ್ದಾತು, ಮತ್ತ್ ಅದನ್ನ ಯಾಕ ಮನಸ್ನ್ಯಾಗ ಇಟ್ಗೊಂಡ ಮರ್ಗತಿದಿ'


'ತಪ್ಪಾತ್ಬೆ ಯವ್ವಾ, ಆವತ್ತ ನಿಮ್ಗ ನಾನ ಅನ್ಬಾರ್ದ ಅಂದ ಬಿಟ್ನಿ'


'ಹುಚ್ಚಪ್ಪ, ಮಕ್ಳ ತಪ್ಪ ಮಾಡ್ತಾವಂತಂದು ದೊಡ್ಡವ್ರು ಮಾಡೊಕಾಗ್ತದನು, ಬಾ.. ಕುಂದರಿಲ್ಲೆ' ಹಿಡಿದಿದ್ದ ಕೈಯನ್ನು ಎಳೆದು ಪಕ್ಕದಲ್ಲಿ ಕುಳ್ಳರಿಸಿಕೊಂಡಳು.


'ಹೌದ್ವಾ.. ನಾ ದೊಡ್ಡ ತಪ್ಪ ಮಾಡ್ಬಿಟ್ನಿ, ಅಲ್ಬೆ ಆ ಬುತ್ತಿನರ ತಗೊಂಡ ಬರ್ತಿನ ಹೋಗಿ' ಮತ್ತೆ ಎಳಲನುವಾದಳು.

"ಬ್ಯಾಡ ಹೋಗ್ಲಿಬಿಡು, ಹೋದದ್ದೇನು ಹಿಡಿ ಅನ್ನ ಒಂದ ಸಿಲ್ವಾರ ತಾಟ. ಅದೇನ ನಮ್ಮಿಬ್ರ ಹಸಿವನ್ನ ಬ್ಯಾರೆ ಕಿತ್ಗೊಂಡ ಹೋಗಿಲ್ಲ!!, ಸಂಜಿಕ ಮತ್ ಚಟಾಕ ಅಕ್ಕಿ ಹಾಕಿದ್ರಾತು, ನಾಳೆ ಸಂತ್ಯಾಗೊಂದ ಬ್ಯಾರೆ ತಾಟ ತಂದ್ರಾತು"


ಈ ಮಾತಿಗೆ ಕಾಂತಳ ಬಳಿಯಲ್ಲಿ ಉತ್ತರವಿರಲಿಲ್ಲ. ಮತ್ತೆ ಶಾಂತವ್ವಳೆ ಮುಂದುವರಿದು " ಮತ್ ಮುಂದ ಹ್ಯಾಂಗಪಾ ಜೀವ್ನಾ?" ಕೇಳಿದ ಪ್ರಶ್ನೆಗೆ ಕ್ಷಣ ಅವಕ್ಕಾದ ಕಾಂತಳು ಎದೆಯ ಮೇಲೆ ಜಾರಿದ್ದ ಸೀರೆ ಸೇರಗನ್ನು ಸರಿಪಡಿಸಿಕೊಂಡು, ಪಕ್ಕದಲ್ಲಿ ಬಿದ್ದಿದ್ದ ಬೇವಿನಕಡ್ಡಿಯನ್ನು ತೆಗೆದುಕೊಂಡು ನೆಲದ ಮೇಲೆ ಗೀರತೊಡಗಿದಳು.

ಇದನ್ನು ಕಂಡು ಶಾಂತವ್ವಳು ಮತ್ತೆ ತಾನೆ ಮಾತಿಗಿಳಿದಳು.