Thursday, July 4, 2019

ಪಾಗಲ್

ಸೂರು... ಊರನ್ನು ಬಿಟ್ಟು ನಡೆದವಳನ್ನು
ಗಲ್ಲಿ ಗಲ್ಲಿಗಳಲ್ಲಿ ಏಕೆ ಹುಡುಕುವೆ ಪಾಗಲ್....
ಅರ್ಧಕ್ಕೆ ನಿಂತುಹೋದ ನಿನ್ನ ಪ್ರೇಮ ಕಥೆ.....ನಾಗರೀಕ
ಜನರ ಬಾಯಿಗೀಗದು ಹೋಳಿಗೆ,
ನಿನ್ನವಳೆಂದುಕೊಂಡವಳು ಮಧುಮಂಚವನು
ಏರಿರಬೇಕಲ್ಲವೆ ಇಷ್ಟೊತ್ತಿಗೆ!!!

ಗೊತ್ತಿದ್ದು... ಕಿವುಡರಾಗಿ ನಿಂತವರ ಮಧ್ಯದಲ್ಲಿ
ಅವಳ್ಹೆಸರ ಕೂಗಿ...ಕೂಗಿ...ಎದುರುಸಿರ ಬಿಡಬೇಡ ಪಾಗಲ್...
ಬಾಯಾರಿ, ನಡು ಬೀದಿಯಲ್ಲಿ ಬಿದ್ದರೂ.... ಕಣ್ತೆರೆಯದ
ಜನರಿಹರಲ್ಲಿ, ಬಂದುಬಿಡು ನೀನಿಲ್ಲಿಗೆ ಸುಮ್ಮನೆ...
ತುಂಬು ಚಂದಿರ, ಮುಟ್ಟಿದರೆ ತುಳುಕುವ ಮದ್ಯದ ಬಟ್ಟಲು,
ಹಿಡಿದರೆ ಕರಗಿ ಹೋಗುವಂತಹ ನಾನು...
ಸಾಕಿಲ್ಲವೆ, ಈ ರಾತ್ರಿಗೆ!!

ಮೊದಲ ಗುಟುಕು ನೆತ್ತಿಗೆ ಹತ್ತಬಹುದು, ಎರಡನೇಯದ್ದು
ಎದೆಯನುರಿಸಬಹುದು, ಮೂರು, ನಾಲ್ಕು, ಐದು, ಆರು
ನಂತರ....ಸರಾಗವಾಗಿ ಒಳಗಿಳಿಯುವುದು ಮದ್ಯವು ಪಾಗಲ್...
ಅನುದಿನವವಳ ನೆನಪುಗಳ ಕಾವಿಗೆ ಸಿಕ್ಕು, ಉರಿದು
ಹೋಗುತ್ತಿರುವ ಒಡಲು ಚೂರು ತಣ್ಣಗಾಗಬಹುದು...
ಅರೆಕ್ಷಣ, ನಿಂದಕರು ನಿಂದಿಸಿದ ಮಾತುಗಳನ್ನೆಲ್ಲವ
ಮರೆತು ಮಲಗಬಹುದು..

ವಿಷವನ್ನೇ... ಕುಡಿದು... ಸತ್ತು, ಸ್ವರ್ಗಕ್ಕೊ..? ನರಕಕ್ಕೊ..?
ಹೋಗಬೇಕೆಂಬ ಹಪಹಪಿತನ ನಿನಗೇತಕೋ ಪಾಗಲ್...
ಸ್ವರ್ಗದಲ್ಲಿ ಸುರಪಾನಕ್ಕೆ ಮೊದಲ ಆದ್ಯತೆ, ಕಲಿತುಬಿಡು.
ನರಕದ ಬಗ್ಗೆ ಚಿಂತಿಸಲೆಬೇಡ..!!! ಅವಳಿಲ್ಲದೆ, ಕನವರಿಸಿ...
ಕನವರಿಸಿ... ಕಮರಿ ಹೋಗುತ್ತಿರುವ ಹರೆಯ ನಿನ್ನದು...
ಇದಕ್ಕಿಂತ ಬೇರೆ, ನರಕವೊಂದಿದೇಯಾ?

ಬಟ್ಟಲಿನ ಅಂಚು ಹರಿತವಿಲ್ಲ, ನನ್ನಧರದ ಸವಿಯು
ಸಪ್ಪಿಲ್ಲ... ಚುಂಬಿಸಿ ನೋಡಬಾರದೆಕೆ ಎರಡಕ್ಕೂ ಪಾಗಲ್....
ಜಾಣ ಹುಚ್ಚರ ನಡುವೆ... ನರಳಿ..ನರಳಿ..ನಲಗುವುದಕ್ಕಿಂತ,
ಬಂದಿಲ್ಲಿ, ಕುಡಿದುಬಿಡು... ಬಟ್ಟಲೊಳಗಿನ ಮದ್ಯವನು!!
ಎದೆಗೆರಿದ ನಂಜು ಇಳಿಯಬಹುದು,
ಕಚ್ಚಿ ರಸ ಹೀರಿಬಿಡು ಕೆಂದುಟಿಗಳದ್ದು, ತಲೆಗೆರಿರುವವಳ ಮತ್ತು ಕರಗಬಹುದು....

No comments:

Post a Comment