Sunday, November 29, 2020

ಚುಟುಕು

ಬೇಕಿದ್ದರೆ, ಮರಗಟ್ಟಿಸುವ 
ಮಂಜು ಗಡ್ಡೆಯಂತಹ 
ಮೌನವನ್ನಾದರು ಸಹಿಸಿಕೊಂಡೇನು.
ತಾಳಿಕೊಳ್ಳಲಿ ಹೇಗೆ?
ಜಿಂಕೆ ಕಣ್ಣುಗಳಿಂದಲೆ, ಎದೆ
ಇರಿಯುವ ಈ... ಹರಿತವಾದ
ನೋಟದ ಭಾವವನು.

Wednesday, November 25, 2020

ಶಾಯರಿ

ಹಗಲಿನಲ್ಲಿ ಕೊಟ್ಡ
ಮುತ್ತಿನ ಸರವನ್ನು
ಹರಿದು ಹಾಕಿ ನಡೆದುಬಿಟ್ಟಳಲ್ಲ
ಸಾಕಿ...
ಈರುಳಿನಲ್ಲಿ ಕೊಟ್ಡ
ಮುತ್ತುಗಳ ಲೆಕ್ಕವನ್ನು
ಯಾರಲ್ಲಿ ಕೇಳಿಲಿ.

ಶಾಯರಿ

ಹೀಗೆ...
ಬರೆಯುತ್ತಾ ಹೋಗು
ಓದುತ್ತಾ ಹಿಂದೆ ಹಿಂದೆಯೆ
ಬರುವೆನೆಂದಿದ್ದಳು
ಸಾಕಿ...
ಕ್ಷಣ ಅನುಮಾನಿಸಿಯಾದರು
ಹಿಂತಿರುಗಿ ನೋಡಿರಲಿಲ್ಲ!
ನೋಡಿದ್ದರೆ ಚೆಂದವಿತ್ತೇನೊ?

ಶಾಯರಿ

ರಂಗೀ... ಹಳಸಿದ
ಅನ್ಮವನ್ನೆ ಮತ್ತೆ...ಮತ್ತೆ..
ಕಾಯಿಸಿ, ಬಿಸಿಮಾಡಿ
ಕೊಟ್ಟಳು! ಊಟ ಮಾಡಿದೆ
ಅಜೀರ್ಣವಾಗಲೆ ಇಲ್ಲ!!
ಆದದ್ದು ರಕ್ತ ವಾಂತಿ
ಸಾಕಿ...
ವಿರಹದ ಹಾಲಾಹಲವನ್ನೆ
ಬಡಿಸಿಬಿಟ್ಟಿದ್ದಳಲ್ಲ!!
ಹಾಲಿನಂತ ನಗುವನ್ನು
ಚೆಲ್ಲಿ

ಶಾಯರಿ

ಬದುಕು ರಂಗೀಯ ಪಾಲಾಯಿತು.
ಒಲವು ಬೀದಿಯ ಪಾಲಾಯಿತು.
ಧನಕನಕವೆಲ್ಲ ನಿನ್ನ ತಿಜೋರಿಯ 
ಪಾಲಾಯಿತು
ಸಾಕಿ...
ನನ್ನ ಪಾಲಿಗೀಗ, ಬಂಧುಗಳಿಲ್ಲ
ಗೆಳೆಯರಿಲ್ಲ, ಕೊನೆಕೊನೆಗೂ
ನೀನು ಇಲ್ಲ!! ಮಸಣದಲ್ಲಾದರೂ
ಇದೇಯೋ ಗೋರಿಯ 
ಪಾಲು.

ಶಾಯರಿ

ಮಧು ಬಟ್ಟಲಿಗೆ
ಅಳತೆ ಮಾಡಿ ಹಾಕಿದ
ಹಾಗೆ, ನನ್ನೆದೆಯ
ದುಃಖವನ್ನು ಹೇಗೆ? ತೂಗಿ
ತೋರಿಸಲಿ
ಸಾಕಿ...
ಕಡಿಮೆಯಾದ ಮದ್ಯಕ್ಕೆ
ನೀರನ್ನಾದರು ಬೆರಸಿ
ಕುಡಿಯಬಹುದು!
ಕಡಿಮೆಯೇ...ಯಾಗದ
ದುಃಖಕ್ಕೆ!!

ಶಾಯರಿ

ಹಾಕಿದ ಕಣ್ಣೀರನ್ನು
ಕೂಡಿಟ್ಟಿಲ್ಲ!
ಕುಡಿದ ಮದ್ಯದ
ಬಟ್ಟಲುಗಳನ್ನು ಲೆಕ್ಕವಿಟ್ಟಿಲ್ಲ
ಸಾಕಿ....
ಕಣ್ಣೀರನ್ನು ಹಾಕದಿದ್ದರೆ!
ಮದ್ಯ ಸೇರುವುದಿಲ್ಲ,
ಮದ್ಯವನ್ನು ಬಿಟ್ಟುಬಿಟ್ಟರೆ
ಕಣ್ಣೀರೆ ಬರುವುದಿಲ್ಲ!
ಯಾವುದನ್ನು ಉಳಿಸಿಕೊಳ್ಳಲಿ
ಯಾವುದನ್ನು ಕಳೆದುಕೊಳ್ಳಲಿ.

Tuesday, November 24, 2020

ಶಾಯರಿ

ಮಧು ಬಟ್ಟಲಿನ 
ಅಂಚಿಗಿಂದು ಮುತ್ತಿಡುತ್ತಿರುವುದು
ಮೇಲಿನವನು ಬರೆದ ಹಣೆಬರಹವೊ?
ರಂಗೀಯು ಕೈ ಕೊಟ್ಟ
ಕಾರಣವೊ?
ಯಾವುದೆಂದು ವಿಮರ್ಶಿಸಿಕೊಳ್ಳಲಿ
ಸಾಕಿ...
ಸುರಿದುಬಿಡು ಅಳಿದುಳಿದ
ಮದ್ಯವನ್ನು ಇಂದೇ!
ನಾಳೆ, ನೀನು ಅವರುಗಳ
ಹಾಗೆ ಬದಲಾದರೆ?
ಅಳಿದುಳಿದ ಸಂಜೆಗಳ
ಪಾಡೇನು?

Friday, November 20, 2020

ಚುಟುಕು

'ಕಲ್ಲು'ಗಳ ಆಧಾರವಿಲ್ಲದೆ
ನಿಂತ ಬಾಗಿಲಿನ
ಚೌಕಟ್ಟಿಗೆ, ತಳಿರು
ತೋರಣವೆ ಸಿಂಗಾರ!!
ಎರಡು ಕೈಗಳ ಜೋಡಿಸಿ
ನಿಂತುಬಿಡುತ್ತೇನೆ ಬೇಡುವ
ಭಿಕ್ಷುಕನಂತೆ, ನೀಡಿಬಿಡು
ಹಿಡಿಯಾದರು ಪ್ರೀತಿಯಂಬ
ಬಂಗಾರ!!

Thursday, November 19, 2020

ಚುಟುಕು

ಬೇಡದ ಮಾತಿನ
ಕಲ್ಲೊಗೆದು, ಮನದ
ಮೌನ ಕೊಳದಲ್ಲಿ
ತಳಮಳದ ಅಲೆಗಳನ್ನೇಕೆ
ಎಬ್ಬಿಸಲಿ!!
ನನಗಿಲ್ಲಾರು? ನೀನು...
ಹೊರಟು ಹೋದರೆ,
ತುಂಬು ಜಗದಲ್ಲಿ
ನಾನಾಗುವುದಿಲ್ಲವೇನು?
ತಬ್ಬಲಿ.

Tuesday, November 17, 2020

ಚುಟುಕು

ಸಖಿ....
ಹುಟ್ಟುತ್ತಲೆ
ಸಾವನ್ನು ಬೆನ್ನಿಗೆ
ಕಟ್ಟಿಕೊಂಡು
ಬಂದವರು ನಾವು!!
ಬಂದಾಗ ಬರಲಿ...
ಅಲ್ಲಿಯವರೆಗಾದರೂ
ನಿನ್ನ ತೆಕೆಯಲಿ 
ಪ್ರೀತಿಗೆ ಕೊಡುತ್ತಿರು
ಕಾವು!!

ಚುಟುಕು

ನಾಲಿಗೆಯ
ತುದಿಯಲ್ಲಿ
ಕಾರ್ಕೊಟಕ
ವಿಷ ತುಂಬಿದೆ
ಕಚ್ಚಿಸಿಕೊಂಡವನು
ನಾನೊಬ್ಬನೇನಾ?
ಮದ್ದಿಲ್ಲದೆ
ತ್ರೇತಾಯುಗದಲ್ಲಿ
ಇದಕ್ಕೆ ಸೀತೆಯು
ಬಲಿಯಾಗಿದ್ದಾಳೆ
ಅವಳಿಗಿಂತಲೂ...
ನಾನು ದೊಡ್ಡವನಾ?

ಚುಟುಕು


ಅವಳನ್ನು
ಕಲ್ಪನೆಗಳ
ಭಾವದಲ್ಲಿ
ಬಂಧಿಸಿಟ್ಟೆ....
ಕವಿಯಾಗಿ!!
ಬಿಗಿದಪ್ಪಿ
ಕೊಳ್ಳಲಾಗುತ್ತಿಲ್ಲ!!!
ವಾಸ್ತವದಲ್ಲಿ
ಪ್ರೇಮಿಯಾಗಿ...

ತಿದ್ದುಪಡಿ

ನನ್ನದೂ...
ಇಲ್ಲಿ ಇದೆ ಪಾಡು
ಗೆಳತಿ!
ನಿ ಕುಳಿತುಕೊಂಡ
ಕೆರೆ ದಂಡೆಯೇನೊ
ಗಟ್ಟಿಯಿದ್ದ ಹಾಗಿದೆ...
ನಿನ್ನ ನೆನೆದ ಮನದ
ದಂಡೆಯಿಲ್ಲಿ
ಮೆತ್ತಗಾಗಿದೆ.

ಮೌನವಾಗಿ
ಹೀಗೆ....
ಗಿಡದ ನೆರಳನಲ್ಲಿ
ನಿಂತುಕೊಳ್ಳಬೇಡ
ಗೆಳತಿ...
ಬಿಸಿ ಬರುವ
ತಂಗಾಳಿಯಲ್ಲಿ
ಎದೆಯ ಮಾತುಗಳನ್ನು
ಕಳುಹಿಸಿ ಕೊಟ್ಟಿದ್ದೇನೆ
ಆಲಿಸದೆ...
ಸುಮ್ಮನಿರಬೇಡ.

ನಾ ಹೇಳುವ
ಮಾತುಗಳೆಲ್ಲ
ಕವಿತೆಗಳಾಗಿವೆ!
ನೀ ಹೇಳುವ
ಮಾತುಗಳಿಗೆ
ಅವುಗಳೆಲ್ಲ....
ಈಗ
ಕಿವಿಯಾಗಿವೆ!

ಸೃಷ್ಟಿಯ
ಸೊಬಗದು
ಎಂದಿಗೂ
ಮುಗಿಯದ
ಯಾನ!!
ನೋಡುತ್ತಲೆ...
ಮಾಡುತ್ತಿರಬೇಡ
ಕಾಲಹರಣ..
ಮುರಿದುಬಿಡು
ಇಂದಾದರು
ಬಿಗು ಮೌನ!!

ಉಕ್ಕುವ ಬೇವರಿನ
ಬಗ್ಗೆ ಚಿಂತಿಸಬೇಡ...
ಅದು ಕಾಮದಲ್ಲೂ
ಹರಿಯುವುದು...
ಎಂಟಂಕಣದ
ಅರಮನೆಯೇನಿಲ್ಲ
ಬಂದು ಸೇರೊಮ್ಮೆ
ತೋಳ್ಬಂಧನದಲಿ
ಒಲವ ಸುಧೆಯೆ
ಹರಿಯುವುದು...

ಕಾಮ!!!!!!
ಬೇಡ...ಬೇಡವೆನ್ನುತಲೆ
ವಂಶಗಳೆ ಹುಟ್ಟಿ...
ಅಳಿದು ಹೋಗಿವೆ
ಈ ಮಣ್ಣಿನಲ್ಲಿ...
ಎಸಳು ಹೂಗಳನ್ನು
ಹೊಸಕಿ ಹಾಕುತ್ತಿರುವರು
ಕರುಣೆ ಇಲ್ಲದಲಿ..
ಮರೆತು ಬಿಟ್ಟೆಯಾ?
ಕಾಮಸೂತ್ರದ
ಕಟ್ಟನ್ನು ಕಟ್ಟಿಕೊಟ್ಟ
ಕೋಟೆಯಿದೆಂಬುದನು...
ಮರೆತುಬಿಡು, ಹೊರಗೆ
ಬಂದುಬಿಡು ಮೈ ಮೈಲಿಗೆಗಳಿಂದಾಚೆ
ಮಗುವಾಗಿ ಬಿಡು
ಮಡಿಲೊಳಗೊಮ್ಮೆ... ತೇಲಿಸಿ
ಕರೆದೊಯ್ದು ಬಿಡುವೆ ಈ
ಲೋಕದಾಚೆ...
ಅಲ್ಲಿ ನವರಸಗಳ ಹಂಗಿಲ್ಲ
ಇವರು ಹೀಗೇಕೆ ಎಂದು ಹಂಗೀಸುವರು ಇಲ್ಲ...

ಬಿಟ್ಟು ಹೋದೆಯೆಂದು
ನಾನೇನು
ಸಾಯುವುದಿಲ್ಲ!!!
ಸಾಯುವೆನೆಂದರೆ?
ನಿನ್ನ ನೆನಪುಗಳು
ಬಿಡುವುದಿಲ್ಲ!!

ಸಿಂಹವೂ...
ಇಂದು ಹಳ್ಳಕೆ
ಬಿದ್ದಿದೆ!!!
ಉರಿದುರಿದು
ಮೆರೆಯುತ್ತಿದ್ದವರು
ಸದ್ದಿಲ್ಲದೆ ಮಣ್ಣಲ್ಲಿ
ಹೂತು ಹೋದದ್ದು
ಎಷ್ಟು ಜನರಿಗೆ
ಗೊತ್ತಿದೆ!!

ಎದೆಗೆ ಸುಧೆಯನ್ನು
ಸುರಿಯುತ್ತೇನೆ
ಎಂದವರು...
ಹೊಟ್ಟೆಗೆ ಹಾಲಾಹಲವನ್ನೆ
ಕುಡಿಸಿಬಿಟ್ಟರು..!!
ಬೆನ್ನಿಗೆ ಚೂರಿ
ಹಾಕಿದ್ದರು ಚಿಂತಿಸುತ್ತಿರಲಿಲ್ಲ
ನಂಬಿಕೆಯ ಕತ್ತನ್ನೆ
ಹಿಚುಕಿಬಿಟ್ಟರು..!!

ಎಷ್ಟು ಮತ್ತು
ತುಂಬಿದೆ ಈ
ಒಂಟಿ
ಕಣ್ಣಿನಲ್ಲಿ....!!!
ನೋಡುಗರ
ಎದೆ ಬಡಿತವು
ನಿಂತು ಹೋಗುವುದೇನೊ?
ಈ ಕ್ಷಣದಲ್ಲಿ!!!

ನನಗೂ...
ಮತ್ತೊಬ್ಬರ ಬೆನ್ನ
ತುಳಿದು, ಮೇಲೆ
ಹೋಗಲು ಸಾಕಷ್ಟು
ಅವಕಾಶಗಳಿವೆ!
ಹೀಗೆ ಹೋದಾಗ,
ಕೀಳರಿಮೆಯೆಂಬ
ರಣಹದ್ದುಗಳು...
ನನ್ನನು ಕುಕ್ಕಿ
ತಿಂದು ಬಿಡುತ್ತವೆ!!

ಮೌಲ್ಯವಿದ್ದರೆ...
ಹರಿದ ನೋಟು
ಚಲಾವಣೆಗೊಳ್ಳುವುದು!!
ಬರೀ...ಧನವನ್ನೆ
ತುಂಬಿಟ್ಟುಕೊಳ್ಳುತ್ತಿದ್ದರೆ?
ಮಾನವೀಯ ಮೌಲ್ಯ
ದ್ವಿಗುಣಗೊಳ್ಳದು!!

ನಮ್ಮನು
ಬೆಳೆಸುತ್ತಿದ್ದಾರೆ
ಎಂದುಕೊಳ್ಳುವುದು
ತಪ್ಪು...!!!
ನಮ್ಮಿಂದಲೆ
ಅವರು
ಬೆಳೆಯುತ್ತಿದ್ದಾರೆ
ಇದು ಒಪ್ಪು..!!!

ಕಲಬೆರಕೆ ಮಾಡಲು
ಬಾರದ, ತೆಂಗಿನಕಾಯಿಯ
ನೀರು... ಒಮ್ಮೊಮ್ಮೆ
ಹುಳಿಯಾಗಿರುವುದು
ಸಾಕಿ...

ಶುಭವಾಗಲೆಂದೆ
ದೇವರ ಮುಂದೆ
ಒಡೆಯುತ್ತಾರೆ
ಕಾಯಿ...!!!
ಶುಭ ಘಳಿಗೆ
ಬರುವವರೆಗಾದರೂ
ನೀನು ಸ್ವಲ್ಪ
ಕಾಯೀ...

ನಿದಿರೆ
ಮಾಡಲು
ಮುಚ್ಚಿಕೊಳ್ಲಲೆಬೇಕು
ರೆಪ್ಪೆಗಳನ್ನು
ನಾವಿಬ್ಬರು
ಮಲಗಲೂ...
ಮೊದಲು
ಮುಚ್ಚಲೆ ಬೇಕು
ಕೋಣೆಯ ಬಾಗಿಲನ್ನು

ಹುಟ್ಟುತ್ತಲೆ
ಸಾವನ್ನು ಬೆನ್ನಿಗೆ
ಕಟ್ಟಿಕೊಂಡು
ಬಂದವರು ನಾವು!!
ಬಂದಾಗ ಬರಲಿ...
ಅಲ್ಲಿಯವರೆಗಾದರೂ
ತೆಕ್ಕೆಯಲಿ ಕೊಡುತ್ತಿರು
ನೀ... ಪ್ರೀತಿಗೆ
ಕಾವು!!!

ನಾಲಿಗೆಯ
ತುದಿಯಲ್ಲಿ
ಕಾರ್ಕೊಟಕ
ವಿಷ ತುಂಬಿದೆ
ಕಚ್ಚಿಸಿಕೊಂಡವನು
ನಾನೊಬ್ಬನೇನಾ?
ಮದ್ದಿಲ್ಲದೆ
ತ್ರೇತಾಯುಗದಲ್ಲಿ
ಇದಕ್ಕೆ ಸೀತೆಯು
ಬಲಿಯಾಗಿದ್ದಾಳೆ
ಅವಳಿಗಿಂತಲೂ...
ನಾನು ದೊಡ್ಡವನಾ?

ಅವಳನ್ನು
ಕಲ್ಪನೆಗಳ
ಭಾವದಲ್ಲಿ
ಬಂಧಿಸಿಟ್ಟೆ....
ಕವಿಯಾಗಿ!!
ಬಿಗಿದಪ್ಪಿ
ಕೊಳ್ಳಲಾಗುತ್ತಿಲ್ಲ!!!
ವಾಸ್ತವದಲ್ಲಿ
ಪ್ರೇಮಿಯಾಗಿ...

Friday, November 13, 2020

ಕಥೆ ಹತ್ಯೆ...?

ಹತ್ಯೆ...?

'ಛೇ.. ಈ ಸುಲ್ಯಾ ಒಂದ್ಕೊಡ ನೀರ್ ತುಂಬ್ಕಂಡ ಬಾ ಅಂತಂದ್ರ, ಮಾವನ ಮನಿಗೆ ಹೋಗಿ ಬರುವಂಗ ಮಾಡಾಕ ಹತ್ತ್ಯಾನಲ್ಲಿವ, ಅಲ್ಲೇನ ಗೆಣ್ಸ-ಗಿಣ್ಸ ಏನರ ಕೆಬರಾ ಕುಂತಾನನ ಇವ್ನ ಹೆಡ್ತಿ, ಅಲ್ಲಾ ಇಲ್ಲೆ ಆಳ-ಪಾಳು ಎಲ್ಲಾ ಕುಡಿಯಾಕ ನೀರ... ನೀರ ಅನ್ನಾಕತ್ಹಾವು ಇಷ್ಟೊತ್ತಾದ್ರು ಬರ್ಲಿಲ್ಲಲಿವ' ಪೇಚಾಡುತ್ತಲೆ ದುರ್ಗಪ್ಪ, ಹೆಸರು ಕಾಯಿಗಳನ್ನು ಬಿಡಿಸುತ್ತಿದ್ದ ಎಲ್ಲ ಅಳುಗಳನ್ನು ಬೇವಿನ ಗಿಡದ ಬುಡದ ನೆರಳಿಗೆ ಊಟಕ್ಕೆಂದು ಕಳುಹಿಸಿ, ತಲೆಗೆ ಕಟ್ಟಿದ್ದ ಟವಲ್ ನ್ನು ಬಿಚ್ಚಿ ಜಾಡಿಸಿಕೊಂಡು,ಮುಖವನ್ನು ವರಿಸಿಕೊಳ್ಳುತ್ತಾ, ಮತ್ತೆರಡು ಕೊಡಗಳನ್ನು ಹಿಡಿದುಕೊಂಡು ನೀರು ತರಲೆಂದು ಸುಲೇಮಾನ್ ಹೋದ ಕಡೆಗೆ ಹೆಜ್ಜೆ ಹಾಕಿದನು.
ಐದು ನಿಮಿಷ ಅಷ್ಟೇ... ನೀರು ತರಲು ಹೋದ ಮೂಲೆಯಿಂದ ದುರ್ಗಪ್ಪ ಲಬೊಲಬೋ... ಹೊಯ್ಕೊಂಡು ಊಟ ಮಾಡುತ್ತ ಕುಳಿತಿದ್ದ ಆಳುಗಳ ಹತ್ತಿರ ಎದ್ದು ಬಿದ್ದು ಓಡಿ ಬರುತ್ತಿದ್ದನು. ದುರ್ಗಪ್ಪನು ಬರುವ ರೀತಿಯನ್ನು ಕಂಡು, ಹಳ್ಳದ ಸರುವಿನಲ್ಲಿರುವ ತೋಳಗೀಳ ಏನಾದರು ಬೆನ್ನು ಹತ್ತಿದೇಯೋ ಏನೊ ಎಂಬ ಭಯದಿಂದ ಕೆಲಸಕ್ಕೆ ಬಂದಿದ್ದ ಹೆಣ್ಣಾಳುಗಳು ಉಣ್ಣುವ ತಾಟನ್ನು ಅಲ್ಲಿಯೆ ಬಿಟ್ಟು, ಬುತ್ತಿಯ ಪುಟ್ಟಿಯಲ್ಲಿಟ್ಟಿದ್ದ ಕುಡಗೋಲನ್ನು ಹಿಡಿದುಕೊಂಡು ದುರ್ಗಪ್ಪನ ಎದುರಿಗೆ ಓಡಿ ಹೊರಟರು. 
   ನಡುವಲ್ಲಿ ಸಿಕ್ಕ ದುರ್ಗಪ್ಪನ ಹಿಂದೆ ಯಾವ ನಾಯಿ ನರಿ ನರಪಿಳ್ಳೆಯು ಇದ್ದಿರಲಿಲ್ಲ, 'ಏನಾತ ತಮ್ಮ ಹಿಂಗ್ಯಾಕ ಸತ್ಗೊಂತ-ಬಿದ್ಗೊಂತ ಓಡಿ ಬರಾಕ ಹತ್ತಿದಿ' 
ಅಂದಳು ದುಗುಡದಿಂದ ಮೂಲಿಮನಿ ಬಸಮ್ಮ.
ದುರ್ಗಪ್ಪನಿಗೆ ಓಡಿ ಬಂದ ರಭಸಕ್ಕೆ ಎದುರುಸಿರು ಹತ್ತಿತ್ತು, 'ಅಯ್ಯ ಏನಾತ ಹೇಳ ಮಾಂವ ಹಿಂಗ್ಯಾಕ ಓಡಿ ಬಂದಿ, ಅಂವಾ ಎಲ್ಲದನಾಂವ ಸುಲ್ಯಾ ಕಾಣುವಲ್ನಲ್ಲ?' ಸೊಸಿ ಸೀನವ್ವ ಭಯದಿಂದ ಕೇಳಿದಳು.
ಎದುರುಸಿರನ್ನು ಬಿಡುತ್ತ ದುರ್ಗಪ್ಪ 'ಸುಲ್ಯಾ....
ಸುಲ್ಯಾ... ಸುಲ್ಯಾ ಸತ್ತ ಬಿದ್ದಾನ..!!, ಯಾರ ಅವ್ನ ಗೋಣ ಮುರ್ದ ಹಾಕಿ ಹೊಗ್ಯಾರ' ಮುಂಗಾರಿ ಬೇಸಿಗೆ ಬಿಸಿಲಿನ ಮಳೆಗೆ ಹೊಡೆಯೊ ಸಿಡಿಲಿನ ಹಾಗಿತ್ತು ಅವನಾಡಿದ ಮಾತು. ಎಲ್ಲರು ಕರೆಂಟ ಹೊಡೆದವರ ಹಾಗೆ ದುರ್ಗಪ್ಪನನ್ನು ಬಿಟ್ಟು ದೂರ ಸರಿದು ನಿಂತು ಬಿಟ್ಟರು. 
ಅಷ್ಟರಲ್ಲಿ ಸಾವರಿಸಿಕೊಂಡ ಪರ್ವಿನ ತಾನು ತಂದಿದ್ದ  ಪೋನಿನಿಂದ ಹಳ್ಳಿಗೆ ಸುದ್ದಿಯನ್ನು ಮುಟ್ಟಿಸಿದಳು. ಹಳ್ಳಿಗೆ ಮುಟ್ಟಿದ ಸುದ್ದಿ, ಮೆಂಬರ್ ಕಿವಿಯ ಮೇಲೆ ಬಿತ್ತು, ಅಲ್ಲಿಂದ ಹಾರಿ ಎಮ್ ಎಲ್ ಎ ಕಿವಿಯ ಮೇಲೆ ಕೂತಿತ್ತು, ಇಲ್ಲಿಂದ ಜಿಗಿದು ಪೋಲಿಸ್ ಸ್ಟೇಶನಗೆ ಬಂದು ಬಡಿದಿತ್ತು. ಏನಾಯಿತು, ಯಾಕಾಯಿತು ಹೇಗಾಯಿತು ಎನ್ನುವಷ್ಟರಲ್ಲಿ ಅರ್ಧ ಹಳ್ಳಿಯ ಜನರೆಲ್ಲ ಸುಲೇಮಾನ್ ಸತ್ತುಬಿದ್ದ ಜಾಗದಲ್ಲಿ ಜಾತ್ರೆಯ ರೀತಿಯಲ್ಲಿ ನೆರೆದುಬಿಟ್ಟಿದ್ದರು.
ರಸ್ತೆಯಲ್ಲಿ ಜೀಪನ್ನು ಬಿಟ್ಟು ಇಬ್ಬರು ಪಿ.ಸಿ.ಯೊಂದಿಗೆ ಹತ್ಯೆಯಾದ ಸ್ಥಳಕ್ಕೆ ನಡೆದುಕೊಂಡು ಬಂದನು ಎಸ್. ಐ. ಕಾಶಪ್ಪ.
  ಕಣ್ಣಿಗೆ ಹಾಕಿಕೊಂಡಿದ್ದ ಕಪ್ಪು ಕನ್ನಡಕವನ್ನು ತೆಗೆದು ಸೂಕ್ಷ್ಮವಾಗಿ ಹೆಣದ ಸುತ್ತಲು ಹದ್ದಿನ ಕಣ್ಣನ್ನಾಡಿಸಿದನು, ಹಳ್ಳಿಯ ಜನರು ಇವರು ಬರುವುದಕ್ಕಿಂತ ಮುಂಚೆಯೆ ಹೆಣದ ಸುತ್ತ ಮುತ್ತ ಅಲೆದಾಡಿದ್ದರಿಂದ ಹೆಜ್ಜೆ ಗುರುತುಗಳ ಸುಳಿವು ಕಷ್ಟ ಎಂಬುದು ಸ್ಪಷ್ಟವಾಗಿತ್ತು. ಹೆಣದ ಕಡೆಗೆ ನೋಡಿದನು ಕೊಳಿಯ ಗೋಣನ್ನು ಮುರಿದು ಒಗೆದಾಗ ಹೇಗೆ ತಿರುಗಿ ಬಿದ್ದಿರುತ್ತದೊ ಹಾಗೆ ಸುಲೇಮಾನ್ ನ ದೇಹವು ಬಿದ್ದುಕೊಂಡಿತ್ತು, ಮೈ ಮೇಲೆ ಯಾವುದೆ ಚೂರು ಗಾಯವಾಗಿರಲಿಲ್ಲ!, ಕಟ್ಟು‌ಮಸ್ತಾದ ಆಳು. ಒಬ್ಬರು ಇಬ್ಬರಿಗಂತೂ ಜಗ್ಗುವ ಹಾಗೆ ಕಾಣುತ್ತಿರಲಿಲ್ಲ, ಗುದ್ದಾಡಿ ಅಂಗಿ ಹರಿದ, ಮೈ ಮೇಲೆ ತೆರಚಿದ ಗಾಯದ ಗುರುತುಗಳಾಗಲಿ ಕಾಣ ಸಿಗಲಿಲ್ಲ, ನೀರು ತರಲೆಂದು ತಂದಂತಹ ತಾಮ್ರದ ಕೊಡ ಅಷ್ಟು ದೂರ ಉರಳಿಕೊಂಡು ಹೋಗಿ ಬಿದ್ದು ಅರ್ಧ ನೀರೆಲ್ಲ ಚೆಲ್ಲಿ ಹೋಗಿದ್ದವು. 
 ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು, ಶ್ವಾನದಳಕ್ಕೆ ಕರೆಮಾಡಿ ತಿಳಿಸಿದರು. ಬರುವುದಕ್ಕೆ ನಾಲ್ಕು ತಾಸು ಸಮಯವಾಗುತ್ತದೆ ಎಂದು ಗೊತ್ತಾಯಿತು. ನೆರೆದಿದ್ದ ಜನರನ್ನೆಲ್ಲ ದೂರಕ್ಕೆ ಕಳುಹಿಸಿದರು. ಸುಣ್ಣದ ಪುಡಿಯನ್ನು ತಂದು ಹೆಣದ ಸುತ್ತ ಗೇರೆಯನ್ನು ಹಾಕಿದರು. 
'ಈ ಹೆಣಾನ ಮೊದ್ಲ ನೋಡ್ದೊರು ಯಾರಿಲ್ಲೆ' ಎಂದು ಕನ್ನಡಕವನ್ನು ಹಾಕಿಕೊಳ್ಳುತ್ತಾ ಗುಂಪಿನತ್ತ ತಿರುಗಿದನು ಗತ್ತಿನಲಿ.
'ನಾನರಿ ಧನಿ' ಎನ್ನುತ್ತಾ ಕೈಯಲ್ಲಿ ಟವಲ್ ನ್ನು ಹಿಡಿದುಕೊಂಡು ಬೆನ್ನನ್ನು ಅರ್ಧ ಚಂದ್ರಾಕೃತಿಗೆ ಬಾಗಿಸಿ, ನಡುಗುವ ಕೈಗಳಿಂದ ನಮಿಸುತ್ತ ಮುಂದೆ ಬಂದನು ದುರ್ಗಪ್ಪ.
'ಏನ್ ನಿನ್ನ ಹೆಸ್ರು'
'ದುರ್ಗಪ್ಪ ರಿ ಸರ್'
'ನಿ ಬಂದಾಗ ಈ ಹೆಣ ಹಿಂಗ ಬಿದ್ದಿತ್ತನು?'
'ಹೆಣಾ ಅಲ್ರಿ ಸರ್ ಅಂವಾ ಸುಲ್ಯಾ.. ಸುಲೇಮಾನ್ ಅದಾನ್ರಿ'
'ಹೌದೊ ಬದ್ಮಾಷ್ ಅಂವಾ ಜೀವಂತ ಇದ್ದಾಗ ಸುಲ್ಯಾನೊ ಸುಲೇಮಾನೊ, ಈಗ ಹೆಣ ಅಂವಾ ಹೆಣ. ಉಸ್ರ ನಿಂತ ಮ್ಯಾಲೆ ಹೆಣಾ ಅಂತಾರ ಹೊರ್ತ ಅದ್ಕ ಯಾರು ಹೆಸರಿಟ್ಟು ಕರಿಯೊದಿಲ್ಲಲೆ. ಅರ್ಥ ಆತನು?'
ಹ್ಞೂಂ ಎಂದು ತಲೆಯಾಡಿಸಿದನು ದುರ್ಗಪ್ಪ
'ಮತ್ತೀಗ ಹೇಳು, ಈ ಹೆಣಾ ನೀ ಬಂದಾಗ ಹಿಂಗ ಬಿದ್ದಿತ್ತನು'
ಹೌದೆನ್ನುಂತೆ ತಲೆಯನ್ನು ಹಾಕಿದನು.
'ಯಾಕ ಬಾಯ್ಗೇನು ಲಕ್ವಾ ಹೊಡ್ದತನು?'
'ಇಲ್ರೀ..'
'ಮತ್ತ್ ಬಾಯ್ಬಿಟ್ಟ ಬೊಗಳಲೆ ಮತ್'
' ಹೌದ್ರಿ ಈಗ ಹ್ಯಾಂಗ ಮಲ್ಕೊಂಡಾನಲ್ರಿ, ಹಿಂಗಾ ಬಿದ್ದಿದ್ನ ರಿ'
'ಥೂ ಇವನೌನ, ಅಂವಾ ಮಲ್ಕೊಂಡಿಲ್ಲ‌ ಲೇ.. ಹೆಣ ಆಗ್ಯಾನವ ಈಗ ಹೆಣಾ.. ನಿ ಬಂದಾಗ ಒಟ್ಟ ಹಿಂಗ ಬಿದ್ದಿತ್ತಿಲ್ಲಿದು'
' ಹೌದ್ರಿ' 
'ಮತ್ ನಿ ಬಂದಾಗ ಇಲ್ಲೆ ಅನುಮಾನ ಬರುವಂಗ ಯಾರರ ಓಡಾಡ್ತಿದ್ರನು ಮತ್'
'ಇಲ್ರಿ'
'ಇಲ್ಲಿಗೆ ಯಾಕ್ ಬಂದಿದ್ದಂವ'
'ಕುಡಿಯಾಕ ನೀರ್ ತರಾಕಂತ ಬಂದಿದ್ನರಿ'
'ಯಾಕ ಊರಾಗಿಂದ ತರಾಕ ನಡಾ ಬ್ಯಾನಿಯಾಕ್ಕವನು ನಿಮ್ಗ. ಹ್ಞಾಂ ಎರಡ ಹೆಜ್ಜಿ ಹಾಕಿದ್ರ ನಿಮ್ಮೂರ ಸಿಗ್ತೈತಿ, ಬಂಡ್ಯಾಗರ ಒಂದ ನಾಕ ಕೊಡ ಹೆಚ್ಗಿ ತುಂಬಕೊಂಡ ಬರಾಕ ಏನ ದಾಡಿ ನಿಮ್ಗ'
'ಇಲ್ರೀ.. ಇಲ್ಲೆ ಒಂದ ಹೊಲ ದಾಟಿದ್ರ ಕೆರಿ ಐತಲ್ರಿ ಮತ್ಯಾಕಂತಂದ ಬಿಟ್ಟ ಬಂದ್ವರ್ಯಾ, ಅದ್ರಾಗ ಇವತ್ತ ಕೆಲ್ಸಾನು ಭಾಳ ಇದ್ದಿಲ್ರೀ, ಇನ್ನೇನು ಇನ್ನೊಂದು ನುಮ್ಮು ಮುಟ್ಟಿಸಿಬಿಟ್ಟಿದ್ರ ಆಗಿ ಹೊಕ್ಕಿತ್ರಿ, ನೀರ ತಂದ್ಕೊಟ್ಟು ಮಾವನ ಊರಿಗೆ ಹೋಗಿ ಹೆಂಡ್ತಿನ ಕರ್ಕೊಂಡ ಬರ್ತಿನಂತ ಅನ್ನಾಕ ಹತ್ತಿದ್ನರಿ ಅಷ್ಟರೊಳ್ಗ ಯಾರೊ ಪಾಪಿಗಳು ಹಿಂಗ ಮಾಡಿ ಬಿಟ್ಟಾರ ನೋಡ್ರಿ'
'ಹೌದಾ.?.. ಮತ್ ಹುಡ್ಗ ಹ್ಯಾಂಗ'
'ಅಂದ್ರೀ!!?'
'ಅಂದ್ರ, ಊರಾಗ ಯಾರ ಜೊತಿನರ ಜಗ್ಳ-ಪಗ್ಳ ಮಾಡಿ ಕೊಲೆ ಮಾಡುವಂತ ದ್ವೇಷ ಏನರ ಕಟ್ಗೊಂಡಿದ್ನನು?'
'ಹೇ...ಹೇ.. ಊರ ಉಸಾಬ್ರಿಗೆ ಹೋಗುಂವಲ್ರಿ ಅಂವ, ಏನ ಹ್ವಾದ ವಾರ ಅವ್ರ ಮಾವನ ಜೊತಿ ಚೂರ ಬಾಯಿ ಆಗಿತ್ತಷ್ಟರಿ'
'ಬಾಯಿ ಅಷ್ಟಾನೊ.. ಏನ್ ಕೈ ಕೈ ಮಿಲಾಯ್ಸಿಕೊಂಡಿದ್ರೊ'
'ಹ್ಞೂಂ ಸ್ವಲ್ಪ ಮೈ ಕೈ ಮುಟ್ಟೊ ಪ್ರಮಾಣಕ್ಕೂ ಹೋಗಿತ್ರಿ ಆದ್ರ ಊರಾನ ಮಂದಿ ಬೈದು ಬಿಡಿಸಿ ಕಳಸಿದ್ರರಿ'
'ಯಾಕ ಜಗಳಾತು?'
'ಅದು..' ಊರ ಜನರ ಮುಂದೆ ಹೇಳಲು ತಡವರಿಸಿದನು ದುರ್ಗಪ್ಪ.
ಅವನ ಸಂದಿಗ್ಧತೆಯನ್ನು ಕಂಡು, ದುರ್ಗಪ್ಪನ ಹತ್ತಿರಕ್ಕೆ ಹೋಗಿ ಅವನ ಹೆಗಲ ಮೇಲೆ ಕೈ ಹಾಕಿ ಹೊಲದ ಕೆರೆಯ ದಂಡೆಯ ಹತ್ತಿರ ಕರೆದುಕೊಂಡು ಬಂದು
'ಈಗ ಹೇಳು' ಎಂದು ಸಮಾಧಾನದಿಂದ ಕೇಳಿದನು.
ಎಸ್. ಐ. ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಬಂದು ಸಮಾಧಾನದಿಂದ ಕೇಳಿದಾಗ, ಮೈ ಚಳಿಯನ್ನು ಬಿಟ್ಟವರ ಹಾಗೆ ಎದೆಯನ್ನುಬ್ಬಿಸಿ
'ಅದೇನಿಲ್ರಿ ಸರ್, ಗಂಡಾ ಹೆಂಡ್ತಿ ಜಗಳ. ಹೆಂಡ್ತಿ ದಿಲ್ ದಾರ ಇದ್ದಾಕಿರಿ ತವ್ರ ಮನಿಯಾಗ ವಾರಕ್ಕೆರಡ ಸಿನಿಮಾ ನೋಡೊದು, ತಿಂಗ್ಳದಾಗ ನಾಕ ಸಲ ಹೊಸ ಹೊಸ ಬಟ್ಟಿ ಖರೀದಿ ಮಾಡೊದು. ಲಗ್ನ ಆದ ಮೊದ ಮೊದ್ಲು ಇವ್ನು ಚೆನ್ನಾಗಿ ನೊಡ್ಕೊಂಡನ್ರಿ‌. ಕೇಳಿಕೇಳಿದ್ದ ಬಟ್ಟಿ ವಾಚ್, ಪೋನ್, ಕಂಡಕಂಡಿದ್ದ ತಿನ್ನಾಕ ತಂದ ಕೊಡಾಂವ. ಆದ್ರ ಇತ್ತಿತ್ಲಾಗ ಕೈ ಕಟ್ಟಾದ್ವರ್ಯಾ, ಸರಿಯಾಗಿ ಮಳಿ ಬೆಳಿನೂ ಅಗ್ಲಿಲ್ರಿ. ನೋಡ್ತಿರಲ್ಲ ನೀವಾ, ಹಂತ್ಯಾಕ ರೊಕ್ಕ ಇಲ್ದಂಗ ಆತ್ರ್ಯಾ, ಅದ್ರಾಗ ಎರ್ಡ ಹೆಣ್ಮಕ್ಳು ಬ್ಯಾರೆ. ಹೋದ ವರ್ಷ ಸುಗ್ಗಿಗೆ ಮಂಗ್ಳೂರಿಗೆ ದುಡಿಯಾಕ ಹೋದಲ್ಲೆ ಇವನ ಹೆಂಡ್ತಿಗೆ ಒಂದ ಬ್ಯಾರೆ ಲಿಂಕ್ ಸಿಕ್ಕ ಇವನ್ನ ಸ್ವಲ್ಪ ಕಸಬರ್ಗಿ ಹಂಗ ಮಾಡಿಬಿಟ್ಟಿದ್ಲಾ ರೀ ಆ ಹೆಣ್ಮಗ್ಳು. ಅದು ಗೊತ್ತಾಗಿ ಬ್ಯಾಡ ಬ್ಯಾಡ ಸರಿ ಅನಕೊಂಡು ಹೊಳ್ಳಿ ಹಳ್ಳಿಗೆ ಬಂದ ನನ್ನ ಜೊತಿ ಕೂಡ್ಕೊಂಡ ಈ ಎರಡ ಎಕರೆ ಶೆಟ್ರ ಹೊಲಾನ ೧ ಲಕ್ಷ ರೂಪಾಯಿಗೆ ಬಡ್ಯಾಗ ಹಾಕ್ಕೊಂಡು ಬಿತ್ತಾಕ ಹತ್ತಿದ್ವಿ ರಿ, ಅವನ ಹೆಂಡ್ತಿ ಇಲ್ಲಿಗೆ ಬಂದ ಮ್ಯಾಲ‌ ಮತ್ ಪೋನ್ ನ್ಯಾಗ ಗರಣಿಯಾನ ಜೊತಿ ಕಾಂಟ್ಯಾಕ್ಟನ್ಯಾಗ ಉಳ್ಕೊಂಡಳ್ರ್ಯಾ ಇದ ನೆವಕ್ಕ ಇವ್ರ ಹೆಣ್ಣಕೊಟ್ಟ ಮಾವನ ಜೊತಿ ಚೂರ ಜಗಳ ಆಗಿತ್ರೀ. ಜಗಳ ಮಾಡಿ ಅವತ್ತ ಮಗ್ಳನ್ನ ತಮ್ಮನಿಗೆ ಕರ್ಕೊಂಡ ಹೋಗಿ ಬಿಟ್ಟಿದ್ನಿರಿ, ಹೋಗೊ ಮುಂದ ನನ್ನ ಮಗ್ಳ ಇಷ್ಟ ಗೋಳ ಹೊಯ್ಕೊಂಡಿಯಂತಂದ್ರ ನಿಂಗೊಂದ
ಗತಿ ಕಾಣಿಸ್ತಿನಲೆ ಮಗ್ನ ಅಂತಂದ ಅವಾಜ್ ಹಾಕಿ ಹೋಗಿದ್ನರಿ'
'ಹಿಂಗನ ಹಂಗರ, ಸರಿ ಆತಬಿಡು ಮಿಂಡನ ಜೊತಿ ಸೇರ್ಕೊಂಡು ಗಂಡನ್ನ ಯಾಕ ಕೊಲ್ಸಿರಬಾರ್ದಕಿ?'
'ಹೇ.. ಬಿಡ್ತ ಅನ್ರೀ.. ಅಂತಾವೆಲ್ಲ ಸಾಧ್ಯ ಅದಾವೇನ್ರಿ?'
'ಸಾಕಷ್ಟು ಕೇಸ್ ಅದಾವೊ ದುರ್ಗಪ್ಪ. ಅದಿರ್ಲಿ ಬಿಡ ಮತ್ತ್ ಯಾರ್ಯಾರ ಕೂಡರ ಹಿಂಗ ...'
'ಹ್ಞಾಂ... ನೆಪ್ಪಿಗ ಬಂತ್ರಿ. ಈಗ ನಾವ್ ನಿಂತಿವಲ್ರಿ ಈ ಹೊಲ ನಮ್ಮೂರ ಐನೇರ ಈರಯ್ಯನೊರ್ದ ರಿ. ನಿನ್ನೀನು ಹಿಂಗ ನೀರ ತರಾಕ ಬಂದಾಗ ಐನೋರು ನುಗ್ಗು ಬಾಯಿ ಮಾಡಿ ಹೆಣಾನ ಎತ್ತತೀನ ನೋಡ ನಿಮ್ದು ಅಂತಾ ಅವಾಜ್ ಹಾಕಿದ್ರ ರಿ'
'ಯಾಕ ನೀರ ತುಂಬ್ಕೊಂಡಿದ್ಕ ಅಷ್ಟ ಅವಾಜ್ ಹಾಕಿದ್ನಾ ಆ ಸ್ವಾಮಿ?'
'ಅದು ಹಂಗಲ್ರೀ.. ಅವ್ರು ಐನೇರ ಅಕ್ಕಾರ ನಾವ್ ಕಮ್ಮಿ ಜಾತಿಯರ ಆಕ್ಕಿವಿ. ನಾವು ಕುರಿ ಕೋಳಿ ತಿನ್ನೊ ಮಂದಿ ಹಿಂಗಾಗಿ..'
ಅವನ ಮಾತಿನ ಒಳಾರ್ಥವನ್ನು ಅರಿತುಕೊಂಡಂತಹ ಎಸ್.ಐ.ಕಾಶಪ್ಪನವರು ಆ ಸ್ವಾಮಿಯ ಮೊಬೈಲ್ ನಂಬರನ್ನು ಪಡೆದುಕೊಂಡು ಕರೆಮಾಡಿ ಎಲ್ಲೆ ಇದ್ದರು ಹತ್ಯೆ ನಡೆದ ಸ್ಥಳಕ್ಕೆ ಬರುವಂತೆ ಸೂಚಿಸಿ, ದುರ್ಗಪ್ಪನನ್ನು ಮರಳಿ ಜನರ ಗುಂಪಿನತ್ತ ಕಳುಹಿಸಿ, ಸ್ವಾಮಿಯು ಬರುವ ತನಕ ಕಾಯತೊಡಗಿದರು.
ಇತ್ತ ದುಡಿಯಲಿಕ್ಕೆಂದು ಬಂದಂತಹ ಹೆಣ್ಮಕ್ಕಳೆಲ್ಲ ಬಾಯಿಗೆ ಅರಿವೆಯನ್ನು ಹಿಡಿದುಕೊಂಡು 'ಎಂಥಾ ಛಲೊದ ಇತ್ತಲ್ಲ ನಮ್ಮವ್ವ ಯಾ ಪಾಪಿ ಮುಂಡೆಮಗ  ಹಿಂಗ ಹೆಣ ಮಾಡಿ ಒಗದಾನ, ಅವ್ನ ಕೈ ಕತ್ತರಿಸಿ ಹೋಗ್ಲಿ, ಅವ್ನ ಹೆಂಡ್ತಿ ರಂಡಿಮುಂಡಿ ಆಗ್ಲಿ,' ಎನ್ನುತ್ತಾ ಎರಡು ಕೈಗಳಿಂದ ಲಟಕಿಯನ್ನು ಮುರಿದು ಹಾಕುತ್ತ ಶಪಿಸುತ್ತಿದ್ದಳು
ಮತ್ತೊಬ್ಬಳು' ಹ್ಞೂಂ.. ನೋಡ ಯವ್ವ, ಯಾಡ ಹೆಣ್ಣ ಅದಾವು ಬಂಗಾರದಂತಾವು, ಮನ್ಯಾಗ ವಯಸ್ಸಾದ ಮುದುಕಿ ಬ್ಯಾರೆ, ಆ ಹಾದರಗಿತ್ತಿ ಮಾಡೊ ಆಟಕ್ಕ ಇವಂಗೂ ಸಾಕಸಾಕಾಗಿತ್ತ, ಎಲ್ಲೆ ಇಬ್ರೂ ಕೂಡಿ ಇವನ್ನ ಹೊಡ್ದ ಹಾಕೇರ ಏನವ ಯವ್ವಾ' ಮೆಲುದನಿಯಲ್ಲಿ ಹೇಳಿದಳು.
'ಅಯ್ಯ ಸುಮ್ನಿರ ನಮ್ಮವ್ವ ಮಾಡ್ದೊರ ಪಾಪ ಆಡ್ದೊರ ಬಾಯಾಗಂತ!! ಯಾವ್ ಹುತ್ತನ್ಯಾಗ ಯಾಂ ಹಾವ್ ಇರ್ತದೊ ಏನೊ? ನಿನ್ಯಾಕ ಅಂದ ಬಾಯಿ ಹೊಲ್ಸ ಮಾಡ್ಕೊಂತಿ ಸುಮ್ಕಿರ ಅತ್ಲಾಗ'
ಗದರಿಸಿದಳು
ಇನ್ನೊಬ್ಬಳು' ಇದೇನ ಬಂತ ನಮ್ಮವ್ವ ಹಾಡ ಹಗಲ, ಬರಿ ಕೆಮ್ಮಿದ್ರ ಕೇಳುವಷ್ಟ ದೂರ ಇದ್ವಿ ನಾವು ಹಿಂಗ ಹೆಣ ಮಾಡಿ ಒಗದಾರ ಅಂದ್ರ!!? ನಾಳೆ ನಾವ್ ಈ ಕಡೆ ಜೋಳದ ಸುಗ್ಗಿಗೆ ಹ್ಯಾಂಗ ಬರೊದಬೆ ಚಿಗವ್ವ, ಗಂಡ್ಮಕ್ಳನ ಬಿಡಲಾರ್ದೊರು ಇನ್ನ ನಮ್ಮನ್ನ ಬಿಡ್ತಾರನಬೆ' ಭಯದಿಂದ ಕೇಳಿದಳು.
ಅಜ್ಜಿ ' ಅಯ್ಯ ನಿನ್ನ, ಅವಂಗ ಅವ್ರಿಗೆ ಬ್ಯಾಡ ಆಗೈತಿ ಅದ್ಕ ಹೊಡ್ದ ಹಾಕ್ಯಾರ ನಮ್ಗ ನಿಮ್ಗ ಯಾರ ಏನ್ ಮಾಡ್ತಾರಬೆ! ಅದು ಬಿಡು ಈಗ ಹ್ವಾದಂವಾ ಹೋದ. ಈಗ ನಂ ಪಾಡೇನ ಹೇಳ ನಮ್ಮವ್ವ ಅರ್ದಬಂರ್ಧ ದಗ್ದ (ಕೆಲಸ) ಆತು, ಅರ್ದಂಬರ್ಧ ಊಟಾತು, ಇತ್ಲಾಗ ಊರುನೂ ಇಲ್ಲ ಕೇರಿನೂ ಇಲ್ಲ ಅಂದಂಗಾತಲ್ಲ ನಂ ಬಾಳೆ, ನೆತ್ತಿ ಮ್ಯಾಲ ನೋಡಿದ್ರ ಮಳಿಯಪ್ಪ ಸೆಟಗೊಂಡ ಮುಖ ದಪ್ಪಗ ಮಾಡ್ಕೊಂಡ ಕುಂತಾನ, ಯಾ ಹೊತ್ತನ್ಯಾಗ ಹೊಡಿಬಾರ್ದ ಹೊಡ್ದನಂತಂದ್ರ ಓಸೂರು (ಎಲ್ಲರು) ಲೈನ (ಮುಖ್ಯ ರಸ್ತೆ) ಮುಟ್ಟೊದು ವಜ್ಜೈತಿ!'
ಆತಂಕವನ್ನು ಹೊರಹಾಕಿದಳು.
'ಈಗ ಹ್ಯಾಂಗಬೆ ಚಿಗವ್ವ, ಆ ದುರ್ಗಪ್ಪನ್ನರ ಕರ್ದ ಕೇಳ ಬೆ, ನಾನೊಳೆ ಇವತ್ತ ಆಡಿನ ಮರಿ ಹೊಡಕೊಂಡ ಬಂದೀನಿ, ಮನ್ಯಾಗ ಸಣ್ಣಸಣ್ಣವು ಹುಡ್ರನ ಬಿಟ್ಟ ಬಂದಿನಿ. ಇನ್ನೆರ್ಡ ದಿನ ಬಿಟ್ರ ನಾಗಪ್ಪನ ಪಂಚಮಿ ಐತಿ, ಮನಿ ಸಾರಸಬೇಕು, ಸಂತಿ ತರಬೇಕು, ಉಂಡಿ ಕಟ್ಟಬೇಕ, ಯವ್ವಾ ಶಿವ್ನ ಒಂದ ಎರಡ ಕೆಲಸ ಅಂತಾದ್ರಾಗ ಇದೊಂದು ಹಿಂಗಾಗಿ ಬಿಡ್ತಲ್ಲಬೆ!' ಆತಂಕವನ್ನು ವ್ಯಕ್ತಪಡಿಸಿದಳು.
ಅಜ್ಜಿ ಧೈರ್ಯಮಾಡಿ ದುರ್ಗಪ್ಪನನ್ನು ಕರೆದು ತಮ್ಮ ತಮ್ಮ ಸಂಕಟಗಳನ್ನು ತೋಡಿಕೊಂಡರು. ದುರ್ಗಪ್ಪನು ಮೆಲ್ಲಗೆ ಹೆಜ್ಜೆಯ ಮೇಲೊಂದು ಹೆಜ್ಜೆಯನ್ನು ಹಾಕುತ್ತ ಪೋಲಿಸಪ್ಪನ ಹತ್ತಿರ ಹೋಗಿ ಕೂಲಿ ಆಳುಗಳ ಸಂಕಟವನ್ನು ಹೇಳಿಕೊಂಡನು. ಎರಡು ನಿಮಿಷ ಯೋಚಿಸಿದ ನಂತರ, ಪಿ.ಸಿ.ಯನ್ನು ಕರೆದು ಎಲ್ಲ ಕೂಲಿ ಆಳುಗಳನ್ನು ಜೀಪಿನಲ್ಲಿ ಹಳ್ಳಿಗೆ ಬಿಟ್ಟು ಬರುವಂತೆ ಸೂಚಿಸಿದನು. ಎಸ್. ಐ. ಹೇಳುವುದಷ್ಟೆ ತಡ ಸತ್ನೊ ಬಿದ್ನೊ ಎನ್ನುತ್ತಲೆ ಬುತ್ತಿಗಂಟುಗಳನ್ನು ಸುತ್ತಿಕೊಂಡು ತಲೆಯ ಮೇಲೆ, ನಡುವಿನಲ್ಲಿ ಹಿಡಿದುಕೊಂಡು ಜೀಪಿನತ್ತ ಬಿರಬಿರನೆ ಹೆಜ್ಜೆಯನ್ನು ಹಾಕಿಬಿಟ್ಟರು. ಆಡುಗಳನ್ನು ಹಿಡಿದುಕೊಂಡು ಬಂದವರು, ಹಳ್ಳಿಗೆ ಹೋಗುವ ಅಡ್ಡದಾರಿಯನ್ನು ಬಿಟ್ಟು ಮುಖ್ಯ ರಸ್ತೆಯಿಂದಲೆ ನಡೆದುಕೊಂಡು ಹೊರಟರು.
ಇಷ್ಟರಲ್ಲಿ ಸ್ವಾಮಿಯು ಬಂದದ್ದಾಯ್ತು, ತನ್ನ ಹೊಲದಲ್ಲಿ ಅಷ್ಟೊಂದು ಜನರು ಮತ್ತು ಪೊಲೀಸ್ ಸಿಬ್ಬಂದಿ ನಿಂತಿದ್ದನ್ನು ನೋಡಿ ಈರಯ್ಯನ ಗಂಟಲು ಪಸೆ ಆರಿ ಹೋಯಿತು. ನಡಗುತ್ತ, ತಡವರಿಸುತ್ತ ಸುಲೇಮಾನ್ ನ ಹೆಣವಿದ್ದ ಕಡೆಗೆ ಬಂದನು. ಬಂದು ಸುಲೇಮಾನ್ ನ ಹೆಣವನ್ನು ನೋಡಿ ಗರ ಬಡಿದವರಂತೆ ನಿಂತುಬಿಟ್ಟನು. ಆಗ ಹಿಂಬದಿಯಿಂದ ಹೆಗಲ ಮೇಲೆ ಯಾರೊ ಕೈ ಇಟ್ಟರು ಚಿಟ್ಟನೆ ಚೀರಿ ಹಿಂದೆ ಸರಿದು ನೋಡಿದರೆ, ಎಸ್. ಐ. ಕಾಶಪ್ಪನವರು ನಿಂತಿದ್ದರು. ಊರ ಜನ ಎಲ್ಲಾ ಮೂಕಸ್ತಬ್ಧರಾಗಿ ಇವರಿಬ್ಬರನ್ನೆ ನೋಡ ತೊಡಗಿದರು. ಪರಿಸ್ಥಿತಿಯನ್ನು ಅರಿತುಕೊಂಡಂತ ಎಸ್.ಐ. ಈರಯ್ಯನನ್ನು ಕೆರೆಯ ದಂಡೆಯ ಹತ್ತಿರ ಕರೆದುಕೊಂಡು ಹೋಗಿ ಕುಳ್ಳರಿಸಿ ನೀರನ್ನು ಕೊಟ್ಟನು. ನಡಗುವ ಕೈಗಳಿಂದ ನೀರಿನ ಬಾಟಲನ್ನು ತೆಗೆದುಕೊಂಡು ಗಟಗಟನೆ ಕುಡಿದು ಖಾಲಿ‌ಮಾಡಿ ಬಿಟ್ಟನು. ಮೈಯಿಂದ ಬೆವರು ಹಾಗೆ ಸಣ್ಣಗೆ ಬರತೊಡಗಿತು. ಎರಡು ನಿಮಿಷ ಮೌನವಾಗಿದ್ದುಕೊಂಡ ಎಸ್.ಐ, 'ಏನಂತೀರಿ ಈರಯ್ಯಜ್ಜರ ' ಎಂದು ತೀಕ್ಷ್ಣವಾಗಿ ನೋಡುತ್ತಾ.
ಎಸ್.ಐ ಅವರ ಮುಖವನ್ನೆ ನೋಡುತ್ತಾ
'ಏನಿಲ್ಲರಿ ಸಾಹೇಬ್ರ'
'ಅಲ್ಲಾ ಮತ್ತ ನಿಮ್ ಹೊಲದಾಗ ಆ ವ್ಯಕ್ತಿದು ಕೊಲೆ ಆಗೈತಲ್ಲ ಇದಕ್ಕೇನಂತಿರಿ ಅಂತಂದ್ಯಾ'
ಥಟ್ಟನೆ ತಲೆಎತ್ತಿ ನೋಡಿ ಕಣ್ತಂಬ ನೀರನ್ನು ತುಂಬಿಕೊಂಡು ಕೈ ಮುಗಿದು ದಯನೀಯವಾಗಿ 
'ಸಾಹೇಬ್ರ ನಾವ್ ಸ್ವಾಮೇರ ಅದಿವ್ರಿ. ಬೆಳ್ಕ ಹರದ್ರ ದೇವ್ರು ದಿಂಡ್ರು ಅನ್ಕೊತ ಬಾಳೆ ಮಾಡೊರ ರಿ, ನಾವ್ಯಾಕ ಇಂತ ಹೆಸ್ಗಿ ಕೆಲ್ಸಕ್ಕ ಕೈ ಹಾಕೊನೊ ನಮ್ಮಪ್ಪ'
'ಮತ್ ಹಂಗಿದ್ರ ಮೊನ್ನೆ, ಇದ ಕೆರೆನ ನೀರ ತರಾಕ ಬಂದಂತ ಸುಲೇಮಾನ್ಗ ಕೊಲೆ ಧಮ್ಕಿ ಹಾಕಿದ್ರಂಥ!?'
ಈರಯ್ಯ ಈಗ ನೆಲದಲ್ಲಿ ತಲೆಯನ್ನಿಟ್ಟುಕೊಂಡು
'ಹೌದ್ರಿ'
'ಯಾಕ?'
'ಅಂವಾ ಸಾಬ್ರಾವ ಅದಾನರಿ ರಾತ್ರಿ ಆತಂದ್ರ ಸಾಕು ಕುರಿ ಕೋಳಿ ತಿನ್ನೋದು, ಕುಡಿಯೋದು ಮಾಡ್ತಾನ್ರೀ, ನಾವ್ ಮಡಿವಂತ್ರ ರೀ ಅದ್ಕ ನಂ ಕೆರಿಯಾನ ನೀರ್ ತಗೊಬ್ಯಾಡಂತಂದ ಸೂಕ್ಷ್ಮಿ ಹೇಳಿದ್ನಿರಿ'
'ಅಂದ್ರ ನಿಮ್ಮ ಕೆರಿಯಾನ ನೀರ ನೀವಷ್ಟ ಬಳಸಬೇಕ ಅನ್ಕೊಂಡಿರೇನು?. ಎಲ್ಲದರಿ ಸ್ವಾಮಿಗಳೆ ಜನ ಎಲ್ಲಾ ಜಾತಿ-ಪಾತಿ ಬಿಟ್ಟು ಒಗ್ಗಟ್ಟಾಗಿ ಇರಾಕ ಪ್ರಯತ್ನ ಮಾಡಾಕ ಹತ್ಯಾರ ಅಂತದ್ರಾಗ ನೀವು!! ಛೀ...ಛೀ.. ಅದು ಹೋಗ್ಲಿ ಕುಡಿಯೋ ನೀರಿಗೆ ಏನ್ ಜಾತಿ ಐತನ್ರೀ ಸ್ವಾಮೇರ.
ನೋಡ್ರಿಲ್ಲೆ ನಿಮ್ಮ ಹೊಲ ತೆಗ್ಗನ್ಯಾಗ ಐತಿ ಅಷ್ಟು ಹೊಲದ ನೀರು ಹರ್ದ ಬಂದು ನಿಮ್ಮ ಕೆರಿ ಸೆರತೈತಿ ಹೌದಿಲ್ಲೊ, ಹ್ಞಾಂ... ಮ್ಯಾಲಿ ಹೊಲ ಮಾದ್ರವಂದಂತ, ಅತ್ತಾ ಕಡೆಲ್ದು ಹೊಲೆರವಂದಂತ, ಅದು ಮಾಲಿಂಗ ಶೆಟ್ರದ್ದು ಹಿಂಗ ಬ್ಯಾರೆ ಬ್ಯಾರೆ ಜಾತಿ ಮಂದಿದು ಹೊಲ ಅದಾವು, ಅವ್ರು ಅಲ್ಲೆ ಉಂಡಿರ್ತಾರ, ತುಳಿದಿರ್ತಾರ, ಸೇದಿರ್ತಾರ, ಕುಡದಿರ್ತಾರ, ಮಳಿ ಬಂದಾಗ ಎಲ್ಲಾ ತೋಯ್ದು ನೀರು ಎಲ್ಲಾರ ಹೊಲ್ದಾಗಲಿಂದ ಹರ್ಕೊಂಡ ಬಂದು ನಿಮ್ಮ ಕೆರಿಯಾಗ ಬಿಳತ್ತಲ್ಲ!! ಮತ್ ಆ ನೀರನ್ನ ಬ್ಯಾರೆ ಬ್ಯಾರೆ ಮಾಡ್ಬೇಕಿಲ್ರಿ'
ಈರಯ್ಯ ತಲೆಯನ್ನು ಎತ್ತಲಿಲ್ಲ
'ತಿಳದೊರ ಅದಿರಿ, ಮಂದಿಗೆ ಬುದ್ದಿ ಹೇಳ್ತಿರಿ ಇರ್ಲಿ, ಮತ್ ಈ ಕೊಲೆನ ಹ್ಯಾಂಗ ಮಾಡಿದ್ರಿ ಹೇಳ್ರಿ ಮತ್'
'ಯಪ್ಪಾ, ಶಿವ...ಶಿವ ಎಂತ ಮಾತಂದ್ರಿ ನಾನ್ಯಾಕ ಅಂತಾ ಕೆಲ್ಸ ಮಾಡಾಕ ಹೋಗ್ಲಿರಿ ಸಾಹೇಬ್ರ' ಈರಯ್ಯನ ಧ್ವನಿಯಲ್ಲೀಗ ಉದ್ವೇಗ ಮತ್ತು ಆವೇಶಗಳೆರಡು ಮೆಳೈಸಿದ್ದವು.
'ಮತ್ ಮೊನ್ನೆ ನಡೆದ ಜಗಳದಾಗ ನೀವು ಅವನ್ನ ಕಡದ ಹಾಕ್ತಿನಂತಂದ ಅವಾಜ್ ಹಾಕಿದ್ರಂತ?'
'ಹೌದ್ರಿ ಅಂದಿದ್ನಿ, ಇಲ್ನೊಡ್ರಿ ಇಲ್ಲೆ ಮೊನ್ನೆ ತಾನು ಮತ್ತ ತನ್ನಿಬ್ರ ಗೆಳ್ಯಾರನ್ನ ಕರ್ಕೊಂಡ ಬಂದ, ಕೋಳಿ ತಿಂದ ಅದ್ರ ಎಲಬು ಮತ್.. ಕುಡ್ದ ಬಿಸಾಕಿದ ಬಾಟಲಿ ನೋಡ್ರಲ್ಲೆ ಹ್ಯಾಂಗ ಬಿದ್ದಾವು!!. ಮನುಷ್ಯ ಆದವಂಗ ಒಮ್ಮೆ ಹೇಳ್ತಾರ್ರಿ ಎರಡ ಸತಿ ಹೇಳ್ತಾರಿ ಹೊಳ್ಳಾ-ಮುಳ್ಳಾ (ಪದೆಪದೆ) ಅದ ನಾಯಿಪಾಡಂತಂದ್ರ ಹ್ಯಾಂಗರಿ? ಇವ್ರ ತಿಂದ ವಗ್ದದ್ದನ್ನು ನಾವ್ ಎತ್ತಿ ಒಗಿಬೇಕನ್ರಿ? ಹೇಳ್ರಿ ಸಾಹೇಬ್ರ. ಖರೆ ನೀವು ಹೇಳಿದ್ದು ನನ್ನ ಹೊಲ್ದ ಸುತ್ತಮುತ್ತ ಎಲ್ಲಾ ಜಾತಿ ಮಂದಿವು ಹೊಲ ಅದಾವ್ರಿ ನೀರು ಹರ್ದ ಬರ್ತಾವು ಆದ್ರ ಆ ಬಂದ ನೀರನ್ನ ಹಿಂಹ ದುರುಪಯೋಗ ಮಾಡ್ಕೊಳ್ಳದ್ರ್ಯಾ? ಮೊನ್ನಿ ಬ್ಯಾಸ್ಗ್ಯಾಗ ಗಳೆಕ ಅಂತ ಬಂದ ದನಾ ಬಿಸಲ ಹತ್ತಿ ಒಂದ ದನಾ ನಿಂತ ನಿಂತಲ್ಲೆ ಸತ್ತ ಬಿತ್ರೀ. ಇವತ್ತ ನನ್ನ ಮನಿ ಎತ್ತು ಸತ್ತ್ ಹೋಗೈತಿ ನಾಳೆ ಇನ್ನೊಬ್ರದ ಆದ್ರ. ಹೋಗ್ಲಿ ದನ ಸತ್ತರ ಮತ್ತೊಂದ ದನಾನರ ತರಾಕ ಬರ್ತದ ಆದ್ರ ಉಣ್ಣೊ ಮುಂದ ಕೂಳು ನೆತ್ತಿಗತ್ತಿ ಕುಡಿಯಾಕ ನೀರಿಲ್ದ ಯಾವ್ದರ ಮನಷ್ಯನ ಜೀವಾ ಹೋತಂದ್ರ ಹ್ಯಾಂಗ್ರಿ? ಈ ವಿಚಾರ ಇಟ್ಗೊಂಡ ನಾನು ಕೆರಿ ತಗ್ಸಿದ್ರಿ. ನಾನೇನ ಅವ್ರಿಗೆ ಕುಡಿಯಾಕ‌ ಬ್ಯಾಡ ಅಂದಿಲ್ಲ ಹೊತ್ಗೊಂಡ ಹೋಗಾಗ ಬ್ಯಾಡ ಅಂದಿಲ್ಲ ಈ ರೀತಿ ಹೊಲ್ಸಂಬಟ್ಟಿ ಮಾಡುದ್ಕ ನಾನು ಗದರಿಸಿ ಹೇಳಿದ್ದು. ಎಂದು ಇಷ್ಟು ಮಾತನ್ನು ಒಂದೆ ಉಸಿರಿನಲ್ಲಿ ಉಸರುತ್ತಾ ಕೆರೆಯ ದಂಡೆಯ ಮೇಲೆ ಕುಳಿತುಕೊಂಡು ಸುಧಾರಿಸಿಕೊಳ್ಳತೊಡಗಿದನು. 
ಎಸ್.ಐ.ಕಾಶಪ್ಪನವರು ಈರಯ್ಯನಾಡಿದ ಮಾತುಗಳನ್ನು ಕೇಳಿ ಅದರಿಂದ ಹೊರಬರಲು ತುಸು ಹೊತ್ತೆ ತೆಗೆದುಕೊಂಡರು. ನಂತರ ಕೆರೆಯ ಸುತ್ತಮುತ್ತ ಅಲೆದಾಡಿ ನೋಡಿದಾಗ ಈರಯ್ಯರ ಮಾತು ಸತ್ಯವೆನಿಸಿತ್ತು. ಹೆಜ್ಜೆ ಹೆಜ್ಜೆಗೂ ಎಗ್ ರೈಸ್, ಚಿಕನ್ ಪೀಸ್ ಗಳನ್ನು ತಿಂದು ಹಾಕಿದ ಖಾಲಿ ಪೇಪರಗಳು, ಸಿಗರೇಟಿನ ತುಂಡುಗಳು, ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು ಎಲ್ಲವನ್ನು ಸೇರಿಸಿದರೆ ಒಂದು ಗೋಣಿಚೀಲವೆ ಆಗುತ್ತಿತ್ತೇನೊ.
ಕೆರೆಯನ್ನು ಸುತ್ತಾಡಿ ಹೆಣದ ಹತ್ತಿರ ಬರುವ ಹೊತ್ತಿಗೆ
ಅವರ ತಾಯಿ ಬೀಬಿಜಾನ್ ದಡದಡನೆ ಓಡೊಡಿ ಬಂದು ದಕ್ಕನೆಂದು ಕುಳಿತು ಎದೆಯನ್ನು ಬಡಿದುಕೊಳ್ಳುತ್ತಾ ' ಅರೆ ಅಲ್ಲಾ, ಯೇ ಕ್ಯಾ ಹೋಗಯಾರೆ.. ಏಕ್ ಹೀ ಛಿರಾಗ ತಾ ಘರಕಾ ಓ..ಭಿ ಬುಜಗಯಾ, ಮೇರಾ ಘರ ಅಂದೇರಾ ಹೋಗಯಾ ರೆ ಅಲ್ಲಾ, ತೊಡಾತೊ ರೆಹಮ್ ಕರ್ನಾಥಾ... ಕಿಸ್ನೆ ಮಾರೆ ಮೇರೆ ಬೇಟೆಕೊ? ಉಸ್ಕಿ ಸಂಸಾರ ಬರಬಾದ ಹೋ, ಹಾಗೆ ಹೀಗೆ ಅದು ಇದು ಅಂತಂದು ಶಾಪವನ್ನು ಹಾಕುತ್ತಾ, ಮಣ್ಣನ್ನು ತೂರತೊಡಗಿದಳು.
ಕೈಯಲ್ಲಿ ಕಟ್ಟಿಕೊಂಡಿದ್ದ ರಿಸ್ಟ್ ವಾಚ್ ನ್ನು ನೋಡಿದನು ಎಸ್.ಐ. ಕಾಶಪ್ಪನವರು ಸಮಯ ಆರನ್ನು ಸಮೀಪಿಸುತ್ತಿತ್ತು, ಮುಂಗಾರು ಮೋಡದ ವಾತಾವರಣದ ಕಾರಣ ಅದಾಗಲೆ ಕತ್ತಲು ಕವಿದ ಹಾಗಾಗತೊಡಗಿತ್ತು. ಮತ್ತೆ ಹಳ್ಳಿಯಿಂದ ಒಂದು ಡಿಸೇಲ್ ಜನರೇಟರ್ ನ್ನು ತರಿಸಿ ಹೆಣದ ಸುತ್ತ ಬೆಳಕು ಬಿಳುವಂತೆ ಲೈಟಿನ ವ್ಯವಸ್ಥೆಯನ್ನು ಮಾಡಲಾಯಿತು. ಅರ್ಧಗಂಟೆ ಕಳೆಯುವಷ್ಟರಲ್ಲಿ ಶ್ವಾನದಳವು ಬಂದಿತು. ವಾಹನದಿಂದಿಳಿದ ಎರಡು ನಾಯಿಗಳನ್ನು ಹಿಡಿದುಕೊಂಡು ಹೆಣದ ಸುತ್ತಮುತ್ತ ಮೂಸಿಸುವಂತೆ ಸುತ್ತಾಡಿಸಿ, ಅವುಗಳ ಕೊರಳ ಪಟ್ಟಿಯನ್ನು ಸಡಿಲಿಸಿದರು. ಟಾರ್ಚ್ ಲೈಟ್ ಗಳನ್ನು ಹಾಕಿಕೊಂಡು ನಾಯಿಗಳ ಹಿಂದೆ ಹೊರಟರು. ನಾಯಿಗಳು ಕೆರೆಯ ಸುತ್ತ, ಹಳ್ಳದ ದಂಡೆಯ ಸುತ್ತ ಮುತ್ತ ಮೂಸಿ ಮರಳಿ ಕೆರೆಯ ಬಳಿ ಸುತ್ತಾಡಿಕೊಂಡು ಬಂದು ಹೆಣದ ಮುಂದೆ ನಿಂತುಕೊಂಡವು. ಅದಾಗಲೇ ಸಮಯ ಎಂಟನ್ನು ಸಮೀಪಿಸುತ್ತಿತ್ತು. ಎಸ್.ಐ.ಕಾಶಪ್ಪನವರಿಗೆ ಕೇಸಿನ ತಲೆಬುಡವರ್ಥವಾಗದೆ, ಶ್ವಾನಗಳನ್ನು ಮರಳಿ ಕಳಿಸಲಾಯಿತು. ಬಾಡಿಯನ್ನು ಈಗಾಗಲೆ ಬಂದು ನಿಂತಿದ್ದ ಸರಕಾರಿ ಅಂಬುಲೆನ್ಸಗೆ ಸೇರಿಸಿ, ದೇಹ ತಪಾಸಣೆಗೆ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಟ್ರಿಣ್....ಟ್ರಿಣ್... ಎಂದು ಒಂದೆ ಸಮನೆ ರಿಂಗಿಸುತ್ತಿತ್ತು ಟೇಬಲ್ ಮೇಲಿಟ್ಟ ಪೋನು. ಎಸ್. ಐ. ಕಾಶಪ್ಪನವರ ಲೊಚಗುಟ್ಟತ್ತಲೆ ಬಲವಂತವಾಗಿ ಕಣ್ಣನ್ನು ತೆರೆಯುತ್ತಾ ಸಮಯವನ್ನು ನೋಡಿದರು ಬೆಳಗಿನ ಸಮಯ ಹತ್ತಾಗಿತ್ತು. ರಾತ್ರಿಯೆಲ್ಲ ಬಾಡಿಯನ್ನು ಮಹಜರು ಮಾಡಿಸಿ,ಅದರ ರಿಪೋರ್ಟನ್ನು ತಂದು ಸ್ಟೇಶನ್ನಿನ ಬಿರುವಿನಲ್ಲಿಟ್ಟು ಬಾಡಿಯನ್ನು ಮರಳಿ ಹಳ್ಳಿಗೆ ಸಾಗಿಸಿ ರಾತ್ರೊ ರಾತ್ರಿ ಧಪನ್ ಮಾಡಿಸಿಬಿಟ್ಟಿದ್ದರು. ಹಳ್ಳಿಯೊಳಗಿನ ಸಾಮರಸ್ಯ ಕದಡಲು ವಿರೋಧ ಪಕ್ಷಕ್ಕೆ ಅವಕಾಶ ಸಿಗಬಾರದು ಎನ್ನುವುದಕ್ಕೆ ಲೋಕಲ್ ಎಮ್.ಎಲ್.ಎ. ಬಾಡಿಯನ್ನು ರಾತ್ರಿಯೆ ಅಂತ್ಯಕ್ರಿಯೆ ಮಾಡುವಂತೆ ಸೂಚನೆಯನ್ನು ಕೊಟ್ಟಿದ್ದರ ಪರಿಣಾಮ ಅದರ ಕಾರ್ಯಗಳನ್ನೆಲ್ಲ ಮುಗಿಸಿ, ಅಲ್ಲೆ ಸುಡುಗಾಡಿನಲ್ಲಿಯೆ ಹಳ್ಳಿಯೊಳಗಿನ ಸಮಾಜದ ಎಲ್ಲ ಹಿರಿಯರಿಗೆ ಯಾವುದೇ ರೀತಿಯ ಶಾಂತಿಗೆ ಭಂಗ ಬರದಂತೆ ನಡೆದುಕೊಳ್ಳಬೇಕು, ಹಾಗೆನಾದರು ನಡೆದುಕೊಂಡರೆ ಶಿಸ್ತು ಕ್ರಮವನ್ನು ಜರುಗಿಸುವುದಾಗಿ ವಾರ್ನಿಂಗ್ ನ್ನು ನೀಡಿ ಕ್ವಾಟರ್ಸಗೆ ಬಂದು ಮಲಗುವಲ್ಲಿ ಬೆಳಗು ಮುಂಜಾನೆ ನಾಲ್ಕು ಗಂಟೆಯಾಗಿತ್ತು ಹೀಗಾಗಿ ಬಹಳ ಹೊತ್ತು ಮಲಗಿಬಿಟ್ಟಿದ್ದರು.
ಒಂದೆ ಸಮನೆ ಒದರುತ್ತಿದ್ದ ಪೋನ್ ನ್ನು ನಿದ್ದೆಗಣ್ಣಿನಲ್ಲಿಯೆ ರಿಸಿವ್ ಮಾಡಿ 'ಹಲೋ ಯಾರ್ರೀ' ಅಸಹನೆಯಿಂದಲೆ ಕೇಳಿದರು.
'ನಾನ್ರೀ ಎಮ್.ಎಲ್.ಎ. ಪಿ.ಎ. ಮಾತಾಡ್ತಿರೋದು'
'ಓಹ್ ಹೇಳಿ ಸರ್'
'ಕೇಸ್ ಏನಾತ್ರಿ ರಾತ್ರಿದು'
'ಮಹಜರ್ ರಿಪೋರ್ಟ್ ಬಂದಿದೆ ಸರ್. ನಾನದನ್ನ ಇನ್ನೂ ನೋಡಿಲ್ಲ'
'ಏನು? ಇನ್ನೂ ನೋಡಿಲ್ವಾ? ಇನ್ನೊಂದ ತಾಸಿನಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆಯ ಪ್ರೆಸ್ ಮಿಟಿಂಗ ಇದೆ. ಅದರಲ್ಲಿ ಯಾರಾದರೂ ಪತ್ರಕರ್ತರು ಈ ಕೊಲೆಯ ಕುರಿತು ಪ್ರಶ್ನಿಸಿದರೆ? ಏನು ಹೇಳುವುದು?  ಇನ್ನೂ ಹತ್ತು ನಿಮಿಷದಲ್ಲಿ ನನಗೆ ಒಂದು ಸ್ಪಷ್ಟ ಚಿತ್ರಣವನ್ನು ಕೊಡಬೇಕು' ಎಂದು ಮರುಮಾತನಾಡದೆ ಪೋನನ್ನು ಕಟ್ ಮಾಡಿಬಿಟ್ಟನು.
ತಡಬಡಿಸಿ ಎದ್ದ ಎಸ್.ಐ.ಕಾಶಪ್ಪನವರು ಬೆಳಗಿನ ಕಾರ್ಯಗಳನ್ನು ಮುಗಿಸಿ ಸ್ಟೇಶನ್ನಿಗೆ ಬಂದು, ಬಿರುವನ್ನು ತೆಗೆದು ರಿಪೋರ್ಟ್ ನ್ನು ಓದ ತೊಡಗಿದನು. ದೇಹದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಆಯುಧಗಳಿಂದ ಇರಿತಕ್ಕೊಳಗಾಗಿಲ್ಲ, ಕುತ್ತಿಗೆಯನ್ನು ಬಲವಾಗಿ ಹಿಂಬದಿಗೆ ಎಳೆದ ಕಾರಣ ಮರಣವಾಗಿದೆ. ಎಂದಷ್ಟೆ ಇತ್ತು. ಇದೆ ವಿಷಯವನ್ನು ಎಮ್.ಎಲ್.ಎ ಪಿ.ಎ. ಗೆ ಕರೆಮಾಡಿ ವಿಷಯವನ್ನು ತಿಳಿಸಿ, ಬಿಸಿಬಿಸಿ ಕಾಫೀಯನ್ನು ತರಿಸಿಕೊಂಡು ಕುಡಿದು, ಸಿಗರೇಟ್ ಒಂದನ್ನು ಹಚ್ಚಿ ಧಮ್ ನ್ನು ಎಳೆದುಬಿಟ್ಟು ಮುಂದಿನ ಕೆಲಸದತ್ತ ಗಮನವನ್ನು ಹರಿಸಿದನು.
ಹತ್ತು ತಿಂಗಳು ಕಳೆದು ಹೋಯಿತು. ಎಸ್.ಐ. ಕಾಶಪ್ಪನವರು ಎಲ್ಲ ರೀತಿಯಲ್ಲಿ ಕೇಸಿನ ತನಿಖೆಯನ್ನು ಮಾಡಿ ಮುಗಿಸಿದ್ದರೂ ಫಲಿತಾಂಶ ಮಾತ್ರ ಶೂನ್ಯವಾಗಿತ್ತು. ಈರಯ್ಯ ಮತ್ತು ಆತನ ಪರಿವಾರ ಹಾಗೂ ಅವನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದಿದ್ದರೂ, ಊರಿನಲ್ಲಿ ಕೆಲವು ಜನ ಹೇಳಿದ ಹಾಗೆ ಸಿಡುಕ ಹಾಗಂತ ಕೊಲ್ಲುವಷ್ಟು ಕ್ರೂರಿ ಏನಲ್ಲ!. ತಾನಾಯಿತು ಪೂಜೆ, ಪುನಸ್ಕಾರಗಳಾಯಿತು ಅಂತ ಬದುಕುತ್ತಿರವವನು ಅಷ್ಟೇ ಅಲ್ಲದೆ ಕೊಲೆ ನಡೆದ ದಿನ ಅವನು ತನ್ನ ಮಗಳನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದ. ಆತನ ಮೊಬೈಲ್ ಪೋನಿನ ಕರೆ ದಾಖಲೆಗಳಲ್ಲಿ ಕೊಲೆಯ ಮುಂಚೆ ಮತ್ತು ನಂತರದಲ್ಲಿ ಅಂತಹ ಯಾವುದೇ ಅನುಮಾನಸ್ಪದ ವ್ಯಕ್ತಿಗಳೊಂದಿಗೆ ಆತನ ಸಂಪರ್ಕ ಕಂಡು ಬಂದಿಲ್ಲ. ವಿಚಾರಣೆ ವೇಳೆಯಲ್ಲಿಯೂ ಸ್ಪರ್ಷವಾಗಿದ್ದಾನೆ ನೂರು ಸಾರಿ ಪ್ರಶ್ನಿಸಿದರು ಒಂದೆ ಉತ್ತರ. ನಾನವನನ್ನು ಕೊಂದಿಲ್ಲ. ಸೋ... ಈರಯ್ಯ ಅಲ್ಲ ಅಂದ ಹಾಗಾಯಿತು.
ಎರಡನೆಯ ಅಂಶ ಅವನ ಹೆಂಡತಿ ಮತ್ತು ಗೆಳೆಯ ಅವರಿಬ್ಬರ ಕರೆ ದಾಖಲೆಯನ್ನು ಪರಿಶೀಲಿಸಿದಾಗ 'ಉಸ್ಕೊ ರಾಸ್ತೆ ಸೆ ಹಠಾದೆಂಗೆ' ಎಂಬ ಮಾತನ್ನು ಪದೆ ಪದೆ ಆಡಿದ್ದರೂ ಅದಕ್ಕೆ ಪುರಾವೆಯಾದಂತಹ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ, ಸುಲೇಮಾನ್ ನ ಹೆಂಡತಿಯನ್ನು ಕರೆದುಕೊಂಡು ಬಂದು ವಿಧವಿಧವಾಗಿ ಪ್ರಶ್ನಿಸಿದರು ಆಕೆಯ ಉತ್ತರವು ಒಂದೆ 'ಇಲ್ರೀ.. ನಾವೇನು ಮಾಡಿಲ್ರಿ ಸಚ್ಛ್ ಹೈ ನಾವ್ ಅವ್ರನ್ನ ನಂ ದಾರಿಲಿಂದ ತಗದ ಹಾಕಬೇಕು ಅನ್ಕೊಂಡಿದ್ವಿ ಆದ್ರ ಹಿಂಗಲ್ರೀ, ಅಂವಾ ದುಬೈದಾಗ ಅದಾನು ಅಂವಾ ಬಂದ ತಕ್ಷಣ ಇಸ್ಕೊ (ಇವನಿಗೆ) ತಲಾಖ್ ಕೊಟ್ಟು ಅವ್ನ ಜೊತೆ ಲಗ್ನ ಮಾಡ್ಕೊಂಡ ದುಬೈಗೆ ಹೋಗೊ ಆಸೆ ಇತ್ತ ಅಷ್ಟರೀ ಮತ್ತಿನ್ನೇನಿಲ್ಲ'
ಕೇಸಿನ ಜಾಡಿಗೆ ಮುಳ್ಳು ಹಚ್ಚಿಬಿಟ್ಟ ಹಾಗಾಗಿತ್ತು ಅವನ ಹೆಂಡತಿಯ ಹೇಳಿಕೆಯಿಂದ. ಅವಳ ತವರು ಊರಿನಲ್ಲಿ ಎಲ್ಲ ಕಡೆ ವಿಚಾರಿಸಲಾಗಿ, ಆಕೆ ಭಾಳ ಶೋಕಿ ಮಾಡಾಕಿ ಅದಾಳ್ರಿ, ಆದ್ರ ಮತ್ತೊಬ್ಬ ಗಂಡ್ಸಿನ ಜೊತಿ ಸಂಬಂಧ ಮಾಡ್ಕೊಂಡಾಳ ಅನ್ನೊದ ನಿಮ್ಮಿಂದ ಗೊತ್ತಾತ ನೋಡ್ರಿ' ಅಂತಾ ಎಲ್ಲಾರು ಹೇಳುತ್ತಿದ್ದರು. ಇದ್ದ ಎರಡನೇಯ ಅವಕಾಶವು ಟುಸ್ಸ ಆಯಿತು.
ಮೂರನೇಯದಾಗಿ ತುಂಡು-ಗುಂಡು ಗೆಳೆಯರ ಬಳಗ 'ಏ ಅಂವಾ ವೈಸಾ ಇದ್ದಿಲ್ರೀ..ಭಾಳ ಛಲೊ ದೋಸ್ತಿದ್ದವ ಬ್ಯಾಡ... ಬ್ಯಾಡ ಅನ್ನಾಕಲಿ ವಾರದಾಗ ನಾಕ ಸರ್ತಿ ಆ ಐನೋರ ಕೆರಿ ಹತ್ರ ಪಾರ್ಟಿಗೆ ಕರ್ಕೊಂಡ ಹೋಗ್ತಿದ್ದ, ಜಗ್ಗ ದುಡಿತಿದ್ನರಿ, ಹೆಂಡ್ತಿ ಕರ್ಚಿಗೊಂದಿಷ್ಟು ಕೊಟ್ಟ, ಉಳ್ದದ್ದು ಪಾರ್ಟಿ.. ಪಾರ್ಟಿ..ಪಾರ್ಟಿ.. ದಿಲ್ದಾರರಿ ಅಂವಾ. ತಾಯಿಗೆ ಒಂದ ಸೀರಿ ಕೊಡ್ಸಲಿಕ್ಕ ಆಟಾ ಹೋತು.'
ಯಾವ ಗೆಳೆಯರ ಬಾಯಲ್ಲಿ ಕೇಳಿದರು ಇದೆ ಮಾತು. ಸೋ ಗೆಳೆಯರ ಬಳಗದಿಂದಲೂ ಯಾವುದೇ ದಾರಿ ಕಾಣಲಿಲ್ಲ.
ಹಣಕ್ಕಾಗಿ ಕೊಲೆಯಾಗಿದೆಯಾ? ಸಿರಿವಂತನಲ್ಲ, ಸಾಲಗಾರನಲ್ಲ, ಸಾಲ ಕೊಟ್ಟವನು ಏನಲ್ಲ.
ದ್ವೇಷಕ್ಕಾಗಿ ಕೊಲೆಯಾಗಿದೇಯಾ? ಇದ್ದ ಎರಡು ಅನುಮಾನಗಳು ಉರಿವ ಒಲೆಯ ಒಳಗೆ ನೀರು ಸುರಿದ ಹಾಗಾಗಿದೆ, ಅದು ಇಲ್ಲ.
ಗೆಳೆಯರು, ಬಂಧು ಬಳಗ, ದುರ್ಗಪ್ಪ ಹ್ಞೂಂ.... ಹ್ಞೂಂ... ಫಲಿತಾಂಶ ಮಾತ್ರ ಶೂನ್ಯ...ಶೂನ್ಯ...ಶೂನ್ಯ...
ಎಲ್ಲರ ಕರೆ ದಾಖಲೆಗಳನ್ನು, ಬ್ಯಾಂಕಿನ ಖಾತೆಗಳನ್ನು, ದಿನವಹಿ ಚಟುವಟಿಕೆಗಳನ್ನು, ವಾರಕ್ಕೊಮ್ಮೆ ಸಾಕ್ಷಿಗಳನ್ನು ಕರೆಸಿ, ಮಾನಸಿಕವಾಗಿ ಕುಗ್ಗಿಸಿ, ಬೇರೆ ಬೇರೆ ರೀತಿಯಲ್ಲಿ ಪ್ರಶ್ನಿಸಿ ಸತಾಯಿಸಿದರು ಫಲಿತಾಂಶ ಶೂನ್ಯ. 
ಇನ್ನೆರಡು ತಿಂಗಳು ಕಳೆಯಿತು. ಹಿಂಗಾರು ಸರಿದು ಮತ್ತೆ ಮುಂಗಾರು ಬಂದಿತ್ತು, ಜನ ಎಂದಿನಂತೆಯೆ ತಮ್ಮ ದಿನನಿತ್ಯದ ಕಾಯದಲ್ಲಿ ತೊಡಗಿಕೊಂಡಿದ್ದರು ಬದುಕಿನ ಬಂಡಿ ಸಾಗುತ್ತಲೆ ಇತ್ತು. ಸುಲೇಮಾನ್ ನ ಕೇಸು ಅಲ್ಲಿಗೆ ನಿಂತು ಬಿಟ್ಟಿತ್ತು. ಎಸ್. ಐ. ಕಾಶಪ್ಪನವರ ಮಾತ್ರ ಸೋತು ಸುಣ್ಣವಾಗಿದ್ದರು. ಪದೇ ಪದೇ ಸಾಕ್ಷಿಗಳನ್ನು ಸ್ಟೇಶನ್ನಿಗೆ ಕರೆದು ಮಾನಸಿಕ ಹಿಂಸೆ ನೀಡದಂತೆ ಪಿ.ಎ.ಯಿಂದ ಪೋನು ಬಂದಾಗಿತ್ತು. 
ಸುಲೇಮಾನ ಸತ್ತುಬಿದ್ದ ಜಾಗದಲ್ಲಿ ಈಗ ಹೆಸರಿನ ಪೈರು ಹೂ ತುಂಬಿ ನಿಂತಿತ್ತು.

ವಿ.ಸೂ: ಈ ಅಪರಾಧದ ಸುಳಿವನ್ನು ನೀಡಿದವರಿಗೆ ಸೂಕ್ತ ಬಹುಮಾನವುಂಟು.

Wednesday, November 11, 2020

ಸ್ವಗತ

ಎದೆಯಲ್ಲಿಗ ನೀರವ ಮೌನದ
ಚಳಿ ಸುಳಿಗಾಳಿಯೊಂದು ಬೀಸುತ್ತಿದೆ.
ಭಾವಗಳೆಲ್ಲ ಹೆಪ್ಪುಗಟ್ಟಿ, ಪದಗಳು
ಉಸಿರುಗಟ್ಟಿ, ಅಸ್ತಿತ್ವದ ಉಳಿವಿಗಾಗಿ
ಹೋರಾಡುತ್ತಾ ಬಿಕ್ಕಳಿಸುತ್ತಿವೆ.

ಪದ..ಪದವು ತಾಳಿಬಿಟ್ಟಿದೆ ವೈರಾಗ್ಯ!!
ತಾಳ್ಮೆಯೆಂಬುದು, ಪುರಸಭೆಯ ತೊಟ್ಟಿಯಲ್ಲಿ
ಎಳೆದು ಹಾಕಿದ ಸತ್ತ ನಾಯಿಯ ಕಳೆಬರದಂತೆ
ಕೊಳೆಯುತ್ತಲಿದೆ.
ಈರ್ಷ್ಯವೆಂಬ ಫಂಗಸ್ ಸದ್ದಿಲ್ಲದೆ ದೇಹವನ್ನು
ಆಕ್ರಮಿಸಿಕೊಳ್ಳುತ್ತಿದೆ.

ನನ್ನೊಳಗಿನ ಕವಿಯ ಬಾಯಿಗೆ ಕಾದ
ಸೀಸವನ್ನು ಸುರಿದುಬಿಟ್ಟಿದ್ದರು ಸಾಕಿತ್ತು!!!
ಅಪನಂಬಿಕೆಯಂತಹ ಲಸಿಕೆಯನ್ನು ಹನಿ
ಹನಿಯಾಗಿ ಹಾಕಿಬಿಟ್ಟರು. ಸತ್ತು ಹೋಗುತ್ತಿರುವೆ
ಒಳಗೊಳಗೆ!!! ಹಿಂಸಿಸುತ್ತಿದೆ ಕಪಟಿಗಳ ಕಪಟದಾಟದ ನಿಯತ್ತು!!

ವಿಷವನ್ನೆ ಕೊಟ್ಟರು ಅಮೃತವಾಗುತ್ತಿತ್ತಲ್ಲ ನಂಬಿಕೆಯಲ್ಲಿ!!
ಬೆಲ್ಲವೂ....ಕಹಿಯಾಗುತಿದೆಯಲ್ಲ ಇಂದಿವರ ಜೊತೆಯಲ್ಲಿ!
ಕಾಲವೆ ಹೀಗಿದೇಯೊ? ಇಲ್ಲಾ..... ನನಗೆ ಮತಿ
ಭ್ರಮಣೆಯೊ?
ಹುಚ್ಚು...ಹುಚ್ಚು...ಹುಚ್ಚು... ಕಾಡುವ, ತಿವಿಯುವ
ಅಣಕಿಸಿ-ಕೊಂಕಿಸುವ, ತುಳಿದು ನನ್ನನ್ನೆ ಹರಿದು
ಮುಕ್ಕುತ್ತಿರುವ ರಣಹದ್ದಿನ ಬೇಟೆಯನ್ನಾಡಿಬಿಡಲೆ?

ಇಲ್ಲಾ.... ಬೇಟೆಯಾಗಿಹೋಗಿಬಿಡಲೆ? ಈಜು
ಬರುವುದಿಲ್ಲ ನಿಜ. ಹಾಗಂತ, ಕಾಲಡಿಯಲಿ ಹರಿವ
ಹಳ್ಳವನ್ನು ದಾಟದಿದ್ದರೆ!!? ದಂಡೆಯಲ್ಲಿಯೆ ನಾನು
ಕುಳಿತುಕೊಳ್ಳಬೇಕಾಗಬಹುದು! ಅದು ಅಲ್ಲಿಯೆ ನನ್ನ
ಸಮಾಧಿಯನ್ನು ಕಟ್ಟಿಬಿಡಬಹುದು ಅಲ್ಲವೆ?

ಹಾಗಿದ್ದರೆ ಎದ್ದುಬಿಡಲೆ ಮೈ ಕೊಡವಿಕೊಂಡು?
ಸರಿದು ಬಿಡಲೆ ಲಜ್ಜೆಯಿಲ್ಲದೆ ಪರದೆಯ ಕತ್ತಲಿಗೆ!
ಹೀಗಾದರೆ ಆಹಾರವಾಗುವುದಿಲ್ಲವೇನು ಆಡಿಕೊಳ್ಳುವವರ ನಾಲಿಗೆಗೆ!
ಸರಿ ಹಾಗಿದ್ದರೆ ಎದ್ದು ನಿಲ್ಲುವೆ, ಉತ್ತರಿಸಲು
ಪ್ರಶ್ನಿಸಲು, ಕೊಂಕಿಸಲು, ಕೆಣಕಿಸಲು, ಸೋಲು-ಗೆಲುವಿನ ಸಿಹಿ-ಕಹಿಗಳ ಉಣಬಡಿಸಲು

ನಡೆಯುತ್ತೇನೆ...ನಡೆಯತ್ತೇನೆ..ನಡೆಯುತ್ತಲೆ
ಇರುತ್ತೇನೆ,
ಎಡವಿದ ನೋವನ್ನು ಅರಿತುಕೊಂಡು, ಚುಚ್ಚುವ
 ಮುಳ್ಳುಗಳ ಸಹಿಸಿಕೊಂಡು,ನೆರಳಿರಲಿ-ಬಿಸಿಲಿರಲಿ,
ಛಳಿಯಿರಲಿ-ಮಳೆಯಿರಲಿ, ಒಂಟಿಯಾಗಿಯೆ ಕರೆದುಕೊಂಡು ಹೋಗುವ ಸಾವಿಗೂ... ನಾಚಿಕೆ
ಬರುವಂತಹ ಕೆಲಸವನ್ನು ಮಾಡಲು,
ನಡೆಯುತ್ತೇನೆ... ನಡೆಯತ್ತೇನೆ.... ನಡೆಯುತ್ತೇನೆ...

ಚುಟುಕು

ಕೈ...
ತೊಳೆದುಕೊಂಡುಬಿಡಬೇಕೆಂದಿದ್ದೆ
ಸಾಹಿತ್ಯದ ವಲಯದಿಂದ!
ಕೆಟ್ಟ ಚಟವಾಗಿಬಿಟ್ಟಿದೆಯಿದು!!!
ಪದೇ...ಪದೇ... ಏನಾದರೂ
ಬರೆಯಿಸಿಕೊಳ್ಳದೆ ಸುಮ್ಮನಿರಲಾರದೀ...
ಪದಬಂಧ!
ಸೋತು, ಬರೆಯಲು ಕುಳಿತುಕೊಳ್ಳುತ್ತೇನೆ.
ಸಾಕಲ್ಲವೇನು?
ತಪ್ಪೊ?-ಒಪ್ಪೋ? ತಿದ್ದಿ-ತಿಡಿ, 
ಜೊತೆಜೊತೆಗೆ ಕರೆದೊಯ್ಯತ್ತಿರುವುದು
ಮುಖಪುಟದ ಸ್ನೇಹವೃಂದ!

ಶಾಯರಿ

ರಂಗೀಯನ್ನು ಹುಡುಕುವ
ಹುಚ್ಚು ಹಂಬಲಕ್ಕಾಗಿ,
ನಾನೇಕೆ ಪರಿತಪಿಸಲಿ
ಸಾಕಿ...
ಕುಡಿಯುವ ಪ್ರತಿ
ಗುಟುಕಿನಲೂ.. ಅವಳ
ನೆನಪೆ ತುಂಬಿರುವಾಗ,
ಹುಡುಕುವ ನೆಪದಲ್ಲಿ
ಉಳಿದ ದಿನಗಳನ್ನೇಕೆ
ವ್ಯರ್ಥಪಡಿಸಿಕೊಳ್ಳಲಿ.

Saturday, November 7, 2020

ಶಾಯರಿ

ಕಣ್ಣಿನಲ್ಲಿ ಕಣ್ಣಿಟ್ಟು
ಮಾತನಾಡಲಾಗದೆಂದೆ
ಬೆನ್ನನ್ನು ತೋರಿಸಿ
ನಡೆದುಬಿಟ್ಟಳಲ್ಲ
ಸಾಕಿ...
ಕಾಮಾಲೆ ಕಣ್ಣಿನ
ಜಗಕೆ, ನಾನೀಗೊಬ್ಬ
ಅಮಲುಗಣ್ಣಿನ
ಫಕೀರ...