Thursday, February 23, 2023

ಚುಟುಕು

ಹೀಗೆ ಒಂಟಿಯಾಗಿ
ಕೆಸರಿನಲ್ಲಿ ನಡೆದು
ಹೋಗಬೇಡ
ಹುಡುಗಿ...!!
ಜಾರಿಬಿದ್ದು ನಡು ಉಳುಕಿ
ಹೋದರೆ..!?😋
ಎಣ್ಣೆಹಚ್ಚಿ ತಿಡುವ
ಸೌಭಾಗ್ಯಕ್ಕಿಂತ...😍
ಮನೆಯ, ಮೂರು ಹೊತ್ತಿನ 
ಕಸ-ಮುಸರಿಯನ್ನು ತಿಕ್ಕುವಷ್ಟು
ನನ್ನ ನಡು ಗಟ್ಟಿಯಿಲ್ಲ 
ಇಲ್ಲಿ...!!😜

Wednesday, February 15, 2023

ಚುಟುಕು

ಮೂಗನ್ನೂ 
ಮುಚ್ಚಿಕೊಂಡು 
ಹೊರಟುಬಿಡು 
ಬೆಂದ ಎದೆಯ ವಾಸನೆ
ನಿನಗೆ ಹಿಡಿಸದು!!
ಯಾರಿಗೂ ಹೇಳುವುದಿಲ್ಲ
ಹೀಗೆ ನೀನು ಅರೆಬರೆ
ಸುಟ್ಟು ಹೋದದ್ದು

Tuesday, February 14, 2023

ಪೊಲ್ವಾಮ್


ಅಲ್ಲಿ ನೆತ್ತರು ಹರಿದು ಹೋದ ರಸ್ತೆಯಲ್ಲ
ಸ್ವಚ್ಛವಾಗಿದೆ!
ಏನಾಗಿತ್ತಲ್ಲಿ ಎಂಬುದನ್ನು ಮರೆತು ಗಾಡಿ-
ಮೋಟಾರುಗಳು ಓಡಾಡುತ್ತಿವೆ!
ಇತಿಹಾಸದ ಪುಟದಲ್ಲಿ ಅದೊಂದು ದಿನವು
ಸೇರಿ ಹೋಗಿದೆಯಷ್ಟೆ!!

ನೆನಪಿಸಿಕೊಂಡು ಅಳುವುದಕ್ಕೆ; ದುಃಖಿಸುತ್ತ
ಕೂರುವುದಕ್ಕೆ ಅವರೇನು ಒಡಹುಟ್ಟಿದವರೆ?
ಯಾರೊ ಹೆತ್ತ ಮಕ್ಕಳು... ಹೊಟ್ಟೆಪಾಡಿಗಾಗಿ
ಸೇರಿದವರು!!
ಇದ್ದರೇಷ್ಟು ಹೋದರೇಷ್ಟು... ಅಲ್ಕಣೆ...
ಉಪ್ಪಿಟ್ಟು ರೆಡಿಯಾಯ್ತ..? ಇವತ್ತೊಂದು
ಬಕರಾಗೆ ಸೈಟ್ ಹೊಂದಿಸಿಕೊಡಬೇಕಿದೆ..

ಓಹ್..!! ಅವರೀಗತಾನೆ ವೇದಿಕೆಯಿಂದ
ಇಳಿದು ಹೋದರು!! ಹೇಳಿದ್ದಾದರೂ ಏನು?
ಹೇಳುವುದಾದರೇನು ಪಾಪ... ನೀವು
ಅವರಂತಾಗಬೇಕಷ್ಟೆ! ಮುಂದಕ್ಕಿದೆಯಲ್ಲ
ಸುರಿಸಲಿಕ್ಕೆ ನಾಟಕದ ಎರಡು ಹನಿ..

ಛೇ...ಪಾಪ ಆ ಜಾತಿಯ ಮಕ್ಕಳಂತೆ
ಈ ರಸ್ತೆಗೆ ಅವರ ಹೆಸರು ಇಡಬೇಕಾ?
ಏನು ಕಡೆದು ಗುಡ್ಡೆ ಹಾಕಿದ್ದನೆಂದು ಕಟ್ಟೆಯನ್ನು
ಕಟ್ಟಿಸಬೇಕು!!
ಒಂದು ಗುಲಾಬಿ ಹೂ ಸಾಕಲ್ಲವಾ? ಅಯ್ಯೋ
ಜೇಬಿನಲ್ಲಿ ಚಿಲ್ಲರೆಯೆ ಇಲ್ಲವಲ್ಲ..!!
ಏನಪ್ಪ ನಿನ್ನ ಹತ್ತಿರ ಪೋನ್ ಪೇ ಇದೆಯಾ?

ಅಯ್ಯೋ ಬಿಡ್ರಿ.. ನಮ್ಮವರಿಗಿನ್ನೂ ಮೀಸಲಾತಿಯೆ
ಸಿಕ್ಕಿಲ್ಲ!!
ಅನುಭವಿಸುತ್ತಿರುವವರಿಗೆ ಯಾರ ಗೊಡವೆಯೂ ಬೇಕಿಲ್ಲ!!
ಇವತ್ತೇನು ರಜೆ ಕೊಟ್ಟಿಲ್ಲ ! ಥಿಯೇಟರ್ ನಲ್ಲೂ ಅಂಥ
ಯಾವ ಒಳ್ಳೆ ಸಿನಿಮಾ ಬಂದಿಲ್ಲ!!
ಇರ್ಲಿ ಬಿಡ್ರಿ "ದೇಶದ ಕಥೆ ಇಷ್ಟೆ ಕಣಮ್ಮಿ"
ಅಂದ್ಬಿಡುವಾ...!!

Wednesday, February 8, 2023

ಗಾಲಿಬ್


ನನ್ನರಮನೆಯ ಮೇಲಿಂದು ಗರಡಿಯ
ಮನೆಯಲ್ಲಿ ಮೈ ಹುರಿಗೊಳಿಸಿಕೊಂಡ
ಸುಲ್ತಾನನಂತೆ......ಮೈದುಂಬಿ ಬಂದಿರುವ
ಚಂದಿರನಿಂದು ಗಾಲಿಬ್!!!
ಇಷ್ಟು ಹೊತ್ತು... ಹಸಿದವರಿಗೆ ಬಿಸಿಯಾಗಿ
ಬಡಿಸಿ..ಉಣಿಸಿ..ತಣಿಸಿ ಕಾದು ನಿಂತವಳು ನಾನು!!
ಹಳಸಿದ ಅನ್ನವನುಂಡು ಕೈ ತೊಳೆಯದ, ನಿನ್ನ ಒರಟು ಎಂಜಲು ಬೆರಳುಗಳಿಂದ ಈ ತುಟಿಯಂಚನ್ನು ಸವರದೆ
ಹೋದರೆ.... ನನ್ನೊಳಗಿನ ಬಿಸಿ, ಹೇಗೆ ತಾನೆ ಆರಿ ಹೋದಿತು!!

ಅವನಿಗೇನುಬಿಡು ಊರೊಳೊಗೆ ಅವನನನ್ನು
ಕಾಯುತ್ತಿರುವವರು... ಒಬ್ಬರೆ... ? ಇಬ್ಬರೆ..?
ಹಸಿದ ದೇಹಗಳೇಷ್ಟೊ?, ಬೆಂದ ಮನಸುಗಳೇಷ್ಟೊ?
ಎಲ್ಲರಿಗೂ ಅವನೇ ಬೇಕು...ನನಗೆ..!!? ನನಗೆ ಮಾತ್ರ
ನೀನೆ ಬೇಕು ಗಾಲಿಬ್ ನೀನೆ ಬೇಕು...
ಹೊಟ್ಟೆ ತುಂಬಿದವರಿಗೇನು ಗೊತ್ತು!!? ಹಸಿದವನ
ಸಂಕಟ, ಕೇವಲ ಕಾಮದ ವಾಸನೆಯನ್ನೆ....
ತುಂಬಿಕೊಂಡಂತಹ ಮಲ್ಲಿಗೆಯನ್ನು ಎಷ್ಟೂ...ಅಂತ
ಮೂಸಲಿ..ಮುಡಿಯಲಿ..ವಾಕರಿಕೆ ಬರುತ್ತಿದೆ!!
ಈಗೀಗ ಏತಕೋ...ಕಮಟು ವಾಸನೆ ತುಂಬಿದ ನಿನ್ನೆದೆಯ
ಮೇಲಿನ ಬಟ್ಟೆಯೆ ಹಿತವೆನಿಸುತ್ತಿದೆ..

ನೀನಿನ್ನು ಪ್ರೇಮಿಯಾಗಿರಲಿಲ್ಲ.... ದೊಡ್ಡ ಬಟ್ಟಲಿನಲ್ಲಿ
ಕಾಮಧೇನುವಿನ ಕೆಚ್ಚಲಿನಿಂದ ಕರೆದ, ನೊರೆಯಿಲ್ಲದ
ಹೊಳೆಯುವ ಹಾಲಿನಂತವನಿಗೆ, ನಾ ಮಧುಶಾಲೆಗೆ
ಕಾಲಿಟ್ಟಾಗಿನಿಂದ  ಮೋಹಿತಳಾಗಿರುವೆ ಗಾಲಿಬ್!!
ಹುಟ್ಟು ಕಿವುಡನಿರಬೇಕವನು!! ಯಾರು ಕೇಳದ ನೋವು,
ಯಾರಲ್ಲಿ ಹೇಳಿಕೊಳ್ಳಲಾಗದಂತಹ ಸಂಕಟ, ಅನುಭವಿಸುವ
ಅವಮಾನ-ಯಾತನೆಯನ್ನು.... ದಿನೆ...ದಿನೆ
ಮೋಡದ ಮರೆಯಿಂದ ಇಣುಕಿಣುಕಿ ನೋಡುತ್ತಲೆ
ಪೂರ್ಣವಾಗುತ್ತಾನೆ...
ನಾನು ಹೀಗೆ, ಮಧುಶಾಲೆಯ ಮಹಡಿಯ ಮೇಲೆ ನಿಂತು
ಆಸೆ ಕಂಗಳಲ್ಲಿ ಅವನನ್ನು ನೋಡುತ್ತಾ, ಮಾತಾಡುತ್ತ
ನಿಂತೆನೆಂದರೆ ಸಾಕು...... ತಣ್ಣಗೆ ಕರಗುತ್ತ, ಹೊಟ್ಟೆಯಲ್ಲಿ
ಆರದ ಕಿಚ್ಚನ್ನು ಹಚ್ಚಿ ಕರಗಿ ಹೋಗಿಬಿಡುತ್ತಾನೆ.

ಇವನನ್ನು ನಂಬುವುದಾದರೂ ಹೇಗೆ? ತಬ್ಬಿ
ಮುದ್ದಾಡಲು... ಸನಿಹದಲ್ಲಿಲ್ಲ!! ಹಗಲಿಗೆ..? ಹೆಗಲಾಗುವುದಿಲ್ಲ !!
ಉತ್ತರಕುಮಾರನಷ್ಟೇ ಪೌರುಷ ಇವನದು ಗಾಲಿಬ್!!
ನಾನು ಹೂವಂತೆ ಹಗುರಾಗಬೇಕು ನಿನ್ನ
ಮಡಿಲೊಳಗೆ...!
ಬೆಚ್ಚಗಾಗಬೇಕು ಕಾವುಣ್ಣುವ ಮೊಟ್ಟೆಯಂತೆ!
ಜಗವನೇ....ಮರೆಯಬೇಕು ತೆಕ್ಕೆಯೊಳಗೆ!!
ಜೀವಸೆಲೆಯಾಗಿಬಿಡು ಈ ರಾತ್ರಿಗೆ...
ಇದೆಲ್ಲವ... ಕಂಡವನು ಹೊಟ್ಟೆಯುರಿದುಕೊಂಡು
ಮರೆಯಾಗಬೇಕು ನೋಡವನು ಮೊಡದೊಳಗೆ!!