ಗಂಡನ ಮನಿಯಾಗ ಮಾಡಕೊತ ಕುಂತಿಯೇನ
ಶ್ರಾವಣದ ಉಂಡಿ...!!
ದಿಕ್ಕು ದೆಸೆಯಿಲ್ಲದ ಹಾದ್ಯಾಗ ದಾರಿ ತಪ್ಪಿ ಹೊಂಟೈತಿಲ್ಲೆ
ನನ್ ಬಾಳಿನ ಬಂಡಿ..!!
ಒಂಟಿಯಾಗೈತಿ, ಆಲದ ಮರಕ್ಕ
ನಾನು- ನೀನು ಹಗ್ಗಕಟ್ಟಿ ಜೀಕಿದ ಜೋಕಾಲಿ..!!
ವರ ಕೊಡ್ತಿನಿ ಅಂದಾಕಿ
ಶಾಪವಾಗಿ ನನ್ನ ಮಾಡಿಬಿಟ್ಟೆಲ್ಲ
ಸಂಪೂರ್ಣ ನಿಖಾಲಿ..!!
ಕಲ್ಲ ನಾಗಪ್ಪಗ ಎಡಿ ಮಾಡಿಟ್ಟ
ನೆತ್ತಿಮ್ಯಾಲ ಚರಿಗೆ ಹಾಲ ಸುರಿದ
ಹೋದೆಲ್ಲ....!!
ಅಗಳ ಪ್ರೀತಿ ಭಿಕ್ಷೆ ಬೇಡಿಕೊಂಡೊನ
ಅಂಗೈಯ್ಯಾಗ ಹನಿ ವಿಷಾನು
ಹಾಕಲಿಲ್ಲಲ್ಲ...!!
ಮನಸಿನ ಮಾತ ನೆರವೆರಲೆಂತ
ಗುಡ್ಡದ ಕಲ್ಲಯ್ಯಜ್ಜಗ ಮಾಡಿಸಿದ್ದೆ
ನೂರೊಂದು ಅಭಿಷೇಕ...!!
ಹಣಿಮ್ಯಾಲೆ ನಿನ್ ಹೆಸರ ಬರದಿಲ್ಲಂದ ಮ್ಯಾಲ
ಮತ್ತೊಮ್ಮೆ ಸತ್ತ ಹುಟ್ಟಿ ಬರಲೇನ
ನಿನ್ ಹೆಸರ ಬರಸಾಕ..!!
No comments:
Post a Comment