Monday, June 29, 2026

ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ...
ಅವಳಂದಕೆ ಸೋತ ಪದಗಳ
ಸೂಸಿ... ಸಾವೆ....ಇರದ ಕವಿತೆಗಳ
ಕಟ್ಟಿ.. ಕಲ್ಲೆದೆಗಳಲ್ಲೂ ಹೂವರಳಿಸುವ
ಅವನ ವಾಚನ, ಅವಳ ಕಿವಿಗೂ
ಬಿದ್ದಿತ್ತು, ಮಾರ್ಜಾಲ ಜಗತ್ತಿಗಂಜಿ
ಅವಳು ನಗಲಿಲ್ಲ...
ಇಲ್ಲಿ ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ....
ರಾಮನಿಗೆ ದಕ್ಕದ ಮಾಯಾ ಜಿಂಕೆಯ
ಹಾಗೆ, ಮಿಂಚಿ ಮಾಯವಾದಳ
ಚಿತ್ತಾರವನ್ನು ನೆತ್ತರಿನಲ್ಲೆ ಚಿತ್ರಿಸಿಟ್ಟ
ಕಾಮದ ಲೋಕ ಬೆಂಕಿಯಿಟ್ಟಿತು...!!
ಬಂಡೆಗಲ್ಲುಗಳ ಮೇಲೆ ಕೆತ್ತಿದ
ಹೆಸರಿನ ಮೇಲೆ; ಬೀಡಾ ಉಗುಳಿ
ಅದನ್ನು ಅತ್ಯಾಚಾರಗೊಳಿಸಲಾಯಿತು..
ಇಲ್ಲಿ ಕವಿ ಸೋತಿಲ್ಲ....

ಅವನು ನಿಜಕ್ಕೂ‌... ಕವಿಯೆ....
ಅವನೆಂದು ಕನಸಿನರಮನೆಯ ಕಟ್ಟಲಿಲ್ಲ..
ವಾಸ್ತವದ ಗುಡಿಸಲಿನಲ್ಲಿಯೆ
ಬದುಕನ್ನು ಕಟ್ಟಿಕೊಳ್ಳಲೆತ್ನಿಸಿದ,
ಅಂತಸ್ತಿನ ಸಣ್ಣ ಕಿಡಿಯೊಂದು ಸೋಕಿ
ಅದು ಸುಟ್ಟು ಬೂದಿಯಾಗಿ ಹೋಯಿತು...
ಇಲ್ಲಿ ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ...
ಉಸಿರುಸಿರಿನಲ್ಲೂ ಅವಳೆ
ಬೇರೆತು ಹೋಗಿರುವಾಗ...ಮರೆತು ಬಿಡುವ
ಪ್ರಮೇಯವೆಲ್ಲಿ ಬಂತು...!!
ಇವನ ಉಸಿರು ನಿಲ್ಲದ ತನಕ
ಅವಳ ಹೆಸರಿಗೆ ಸಾವಿಲ್ಲ...
ಅವಳ ಸಾವಿನ ನಂತರ ಇವನ
ಉಸಿರಿಗೆ ಅರ್ಥವಿಲ್ಲ...
ಇಲ್ಲಿ ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ...
ಯಾವ ಪದವ ಕಟ್ಟಿದರೇನು
ಅವಳದೆ ಭಾವ....
ಯಾವ ವಾದ್ಯವ ನುಡಿಸಿದರೇನು
ಅವಳದೆ ರಾಗ.....
ಜಗತ್ತಿಗೇನು..? ತನ್ನಿಚ್ಚೆಯಂತೆ
ನಡೆಯದೆ ಹೋದರೆ ಹುಚ್ಚ, ತೆವಲುಗಾರ
ನೆನ್ನುತ್ತದೆ..
ಅದೆಂದು ಒಳಗಣ್ಣಿನಿಂದ ನೋಡುವುದೆ
ಇಲ್ಲ..!! ಎಲ್ಲ ವ್ಯಾಪಾರಿಕರಣ...
ಎಲ್ಲ ವ್ಯಾಪಾರಿಕರಣ... ಹೀಗಾಗಿ
ಇಲ್ಲಿ ಕವಿ ಸೋತಿಲ್ಲ... ಸೋಲುವುದು ಇಲ್ಲ...

ಚುಟುಕುಗಳು

ಈ ಪದಗಳು ಥೇಟ್
ಅವಳಂತೆಯೆ...!!
ಏನಾದರು ಬರೆಯ
ಬೇಕೆಂದಾಗಲೆಲ್ಲ
ಕೈಯನ್ನು ಕೊಡುತ್ತವೆ...

ಅವಳ ಮೌನ...
ನನ್ನ ಶಬ್ದಗಳನ್ನು
ಕೊಂದು ಹಾಕಿಬಿಟ್ಟಿದೆ...!!
ಕವಿತೆಯನ್ನು ಬರೆಯಬೇಕೆಂದೆ
ಪದವು ಉಸುರುತ್ತಿಲ್ಲ..!!

ಇಲ್ಲಿ ವಿರಹಕ್ಕೆ
ಸುಂಕವನ್ನು ಕಟ್ಟಲು
ಸಾಧ್ಯವಿಲ್ಲವೆಂದು ನೊಂದವರು
ಹೇಳುತ್ತಿದ್ದರೆ..!!
ಅವಳೊ... ಪ್ರೀತಿಯ
ರೇಟ್ ಬೋರ್ಡನ್ನು
ಬೀದಿಯ ತಿರುವಿನಲ್ಲಿ
ನೇತು ಹಾಕಿದ್ದಾಳೆ...!!


ರವಿಕೆಯನ್ನು ಯಾವಾಗಲೂ
ಸೀರೆ ಅಂಚಿನಲ್ಲಿಯೆ 
ಕೊಟ್ಟಿರುತ್ತಾರೆ ಕತ್ತರಿಸಲು...!!
ಅವಳಿಗದೇಷ್ಟು ಸಂಭ್ರಮವೊ...
ತುದಿಗಾಲಲ್ಲೆ ನಿಂತಿರುತ್ತಾಳೆ
ಒಲವನ್ನು ಮುರಿದು ಹಾಕಲು...!!

ಹುಳುಕು ಬಿದ್ದ ಬದನೆಯನ್ನು
ಎಸೆಯಬಹುದು...
ಸಂಬಂಧಗಳನ್ನಲ್ಲ..!!
ಬೇವರಿನ ಔತಣದಲ್ಲೂ
ಕೂದಲು ಹುಡುಕುವ
ಜನರಿಹರಿಲ್ಲಿ..!!

ಚುಟುಕುಗಳು


ಸೃಷ್ಟಿ ಒಂದೆ...
ನೋಡುಗರ ದೃಷ್ಟಿಗಳು
ಬೇರೆ ಬೇರೆಯಾಗಿರುತ್ತವೆ
ಸಾಕಿ...
ಮೋಸವು ಒಂದೆ
ಮಾಡುವ ವಿಧಾನಗಳು
ಬೇರೆ ಬೇರೆ..


ಅವಳು ಅಕ್ಕಿಯನ್ನು
ತುಂಬಿಟ್ಟ ಸೇರನ್ನು ಒದ್ದಳು...
ನಾನು ಖಾಲಿಯಾಗಿ ಬಿದ್ದಿದ್ದ
ಬಟ್ಟಲಿಗೆ ಮಧುವನ್ನು ತುಂಬಿಸಿದೆ..


ನಾನು ಹೊರಟ
ಹಾದಿಯಲ್ಲಿ
ಸೂರ್ಯನೆಂದು
ಅಸ್ತವಾಗುವುದಿಲ್ಲ
ಸಾಕಿ...
ಬಿಸಿಲಲ್ಲಿ
ನಿಲ್ಲಿಸಿದವಳನ್ನು
ಚಂದಿರನೂರಿನಲ್ಲಿ
ಬಿಟ್ಟು ನಡೆದಿರುವೆ..!!

ಕೊಟ್ಟ ಮಾತನ್ನು
ಮುರಿದೆಯೇಕೆ..?
ಕೇಳುವವರಾದರು
ಯಾರು
ಸಾಕಿ...
ಜಗತ್ತು ಅವಳ
ಅಧರದ ಅಮಲಿಗೆ
ಶರಣಾಗಿರುವಾಗ...!!


ಅವಳಿಂದು ಗಟ್ಟಿ
ಬಂಗಾರವನ್ನು
ಕೇಳಿದಳು...!!
ನಾನು ಕೊಟ್ಟೆ..😍
ಅವಳೀಗ
ಲಟ್ಟಣಿಗೆಯನ್ನು
ಹುಡುಕುತ್ತಿದ್ದಾಳೆ..😇


ಒಲವಿನ ಕಾನೂನಿನಲ್ಲಿ
ಅವಳು ಅಪರಾಧಿಯಾಗಿದ್ದರು
ನಿರಪರಾಧಿಯಾಗಿ
ಉಳಿದಳು...
ಸಾಕಿ...
ನಾನು
ನಿರಪರಾಧಿಯಾಗಿದ್ದರೂ...
ನೋಡುಗರ ಕಣ್ಣಿಗೆ
ಅಪರಾಧಿಯಾಗಿ
ಉಳಿದುಬಿಟ್ಟೆ...

ಯಾರು ಯಾರಿಗೆ
ಎಷ್ಟು ಅವಶ್ಯಕತೆ ಇತ್ತೊ...
ಅಷ್ಟೇ ಬಳಸಿಕೊಂಡರು
ಸಾಕಿ...
ಹೋಗುವಾಗ ಮಾತ್ರ
ಬಳಸಿಕೊಂಡಿದ್ದಕ್ಕಿಂತಲೂ
ಹೆಚ್ಚಿನ ದುಃಖವನ್ನೆ
ನೀಡಿ ಹೋದರು...!!


ಕುಡಿಯುವ ನೀರಿಗೂ...
ಬೆಲೆಯನ್ನು ಕಟ್ಟಿರುವಾಗ,
ಬಟ್ಟಲು ಮದಿರೆಗೆಂಥಹ
ಚೌಕಾಸಿ ಬಿಡು
ಸಾಕಿ....
ಕಾಲಚಕ್ರದ ಮಹಿಮೆ
ನೋಡು...
ನೀರು ಬಿಟ್ಟು,
ಮದ್ಯವನ್ನು ಕುಡಿಸುವವಳ
ಮಧ್ಯದಲ್ಲಿ ತಂದು
ಕೂರಿಸಿದೆ..!!


ಇತಿಹಾಸ
ಯಾವತ್ತಿದ್ದರೂ...
ಸತ್ತವರ ಕಥೆಯನ್ನೆ
ಸಿಹಿಯಾಗಿ ಹಂಚುತ್ತದೆ
ಸಾಕಿ....
ಅವಳು ಕೊಟ್ಟ
ನೋವಿನ ಲೆಕ್ಕವನ್ನು
ಮಾತ್ರ...ಎಲ್ಲಿಯೂ
ತೋರಿಸುವುದಿಲ್ಲ..!!


ಮೇಲಿನವನ
ಲೆಕ್ಕವು ತಪ್ಪಿ
ಹೋಯಿತಿಂದು
ಸಾಕಿ...
ಸಭ್ಯಸ್ಥನು ಮಧು
ಶಾಲೆಯ
ಮೆಟ್ಟಿಲನ್ನೇರಿಬಿಟ್ಟ..!!


ಅವಳಿಗೆ ಪ್ರೀತಿಯ
ಪರಿಚಯವನ್ನು
ಮಾಡಿಕೊಡಲು
ಪ್ರಯತ್ನಪಟ್ಟೆ...!!
ಅವಳೋ....
ನನಗೆ ಸಾವಿನ
ಗೆಳೆತನವನ್ನು
ಮಾಡಿಸಿಬಿಟ್ಟಳು...!!

ಬೆಳಿಗ್ಗೆ ಉಪ್ಪನ್ನು
ಬೇಡಿದ್ದೆ‌.. ..
ನೀಡಲಿಲ್ಲ..!!
ಎದೆಯ ಗಾಯವನ್ನು
ತೋರಿಸಿದೆ...
ಖಾರವನ್ನೆ..
ಸುರಿದು ಬಿಟ್ಟರು...

ಪ್ರೀತಿಯ
ಜೋಳಿಗೆಯಲ್ಲಿ
ವಿಷವನ್ನೆ ತುಂಬಿ
ಕಳುಹಿಸಿದಳು...!!
ಕವಿತೆಯ ಪದಗಳಿಗೆ
ನಾ ಹೇಗೆ
ಉಣಬಡಿಸಲಿ...!!

ಸೇಡವು-

ಬಿಟ್ಟ ಹೋದ ಮ್ಯಾಲ
ಮತ್ಯಾಕ ಮಾಡತಿ ಚಿಂತಿ..!!
ಕೈಯ್ಯಾಗ ಕಳ್ಳಿಹಾಲ ಕೊಟ್ಟ
ಪ್ರಸ್ತದ ಕೋಣ್ಯಾಗ ಕೇಸರಿ ಹಾಲ ಹಿಡದ ಕುಂತಿ..!!

ಹಗಲ ಯಾವ್ದೊ...? ರಾತ್ರಿ ಯಾವ್ದೊ..?
ಒಟ್ಟ ಹತ್ತವಲ್ದಾಗೈತಿ ನಿದ್ದಿ...!!
ಅರಳಿಕಟ್ಟಿ ಮ್ಯಾಲ ಕುಂತ ಮಾತಾಡೊರಿಗೆ
ದೊಡ್ಡದಾಗೈತಿ ನೋಡ..ನಮ್ ಸುದ್ದಿ...!!

ಮೂರ ಹೊತ್ತಿಗಲ್ಲದಿದ್ರೂ...
ಒಂದ ಹೊತ್ತ ಉಂಡಾದ್ರು ಬದುಕಬೊದು ಹಂಗಾ..!!
ನಿನ್ ಹಿಡಿ ಪ್ರೀತಿ ತುತ್ತ ಇರಲಾರದನ
ಘಳಿಗೆ ಉಸಿರಾಡೊದಾದ್ರು ಹೆಂಗ...!!

ಹಗ್ಗ ಕಟ್ಟಿ ಎಳಿಬೇಕ ಮಲ್ಲಯ್ಯನ
ತೇರ ಪಾದಗಟ್ಟಿ ಮುಟ್ಟಸಾಕ...!!
ಸೀರಿದ ಚಿಂಗ ಅರವಿ ಕೊಟ್ಟ ಹೋಗಲಿಲ್ಲ
ನೀನss ಉರುಳ ಹಾಕ್ಕೊಳ್ಳಾಕ...!!!

ನಂಬಿಕೆಯನ್ನೊ ಮಳಿ ಸುರಸಲಾರ್ದನ ಎದಿ
ನೆಲದಾಗ ಪ್ರೀತಿ ಬೀಜ ಯಾಕರ ಬಿತ್ತಿದಿ...!!
ನೋವನ್ನೊ ಉರಿಬಿಸಿಲ ಬರಗಾಲನ
ಹೊದಿಸಿ..ಹ್ಯಾಂಗರ ನಕ್ಕೊಂತ ಹೋದಿ..!!

Tuesday, January 6, 2026

ಹೆಸರಿಡದ ಕವಿತೆಗಳು

ಅವನು ನಿಜಕ್ಕೂ... ಕವಿಯೆ...
ಅವಳಂದಕೆ ಸೋತ ಪದಗಳ
ಸೂಸಿ... ಸಾವೆ....ಇರದ ಕವಿತೆಗಳ
ಕಟ್ಟಿ.. ಕಲ್ಲೆದೆಗಳಲ್ಲೂ ಹೂವರಳಿಸುವ
ಅವನ ವಾಚನ, ಅವಳ ಕಿವಿಗೂ
ಬಿದ್ದಿತ್ತು, ಮಾರ್ಜಾಲ ಜಗತ್ತಿಗಂಜಿ
ಅವಳು ನಗಲಿಲ್ಲ...
ಇಲ್ಲಿ ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ....
ರಾಮನಿಗೆ ದಕ್ಕದ ಮಾಯಾ ಜಿಂಕೆಯ
ಹಾಗೆ, ಮಿಂಚಿ ಮಾಯವಾದಳ
ಚಿತ್ತಾರವನ್ನು ನೆತ್ತರಿನಲ್ಲೆ ಚಿತ್ರಿಸಿಟ್ಟ
ಕಾಮದ ಲೋಕ ಬೆಂಕಿಯಿಟ್ಟಿತು...!!
ಬಂಡೆಗಲ್ಲುಗಳ ಮೇಲೆ ಕೆತ್ತಿದ
ಹೆಸರಿನ ಮೇಲೆ; ಬೀಡಾ ಉಗುಳಿ
ಅದನ್ನು ಅತ್ಯಾಚಾರಗೊಳಿಸಲಾಯಿತು..
ಇಲ್ಲಿ ಕವಿ ಸೋತಿಲ್ಲ....

ಅವನು ನಿಜಕ್ಕೂ‌... ಕವಿಯೆ....
ಅವನೆಂದು ಕನಸಿನರಮನೆಯ ಕಟ್ಟಲಿಲ್ಲ..
ವಾಸ್ತವದ ಗುಡಿಸಲಿನಲ್ಲಿಯೆ
ಬದುಕನ್ನು ಕಟ್ಟಿಕೊಳ್ಳಲೆತ್ನಿಸಿದ,
ಅಂತಸ್ತಿನ ಸಣ್ಣ ಕಿಡಿಯೊಂದು ಸೋಕಿ
ಅದು ಸುಟ್ಟು ಬೂದಿಯಾಗಿ ಹೋಯಿತು...
ಇಲ್ಲಿ ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ...
ಉಸಿರುಸಿರಿನಲ್ಲೂ ಅವಳೆ
ಬೇರೆತು ಹೋಗಿರುವಾಗ...ಮರೆತು ಬಿಡುವ
ಪ್ರಮೇಯವೆಲ್ಲಿ ಬಂತು...!!
ಇವನ ಉಸಿರು ನಿಲ್ಲದ ತನಕ
ಅವಳ ಹೆಸರಿಗೆ ಸಾವಿಲ್ಲ...
ಅವಳ ಸಾವಿನ ನಂತರ ಇವನ
ಉಸಿರಿಗೆ ಅರ್ಥವಿಲ್ಲ...
ಇಲ್ಲಿ ಕವಿ ಸೋತಿಲ್ಲ...

ಅವನು ನಿಜಕ್ಕೂ... ಕವಿಯೆ...
ಯಾವ ಪದವ ಕಟ್ಟಿದರೇನು
ಅವಳದೆ ಭಾವ....
ಯಾವ ವಾದ್ಯವ ನುಡಿಸಿದರೇನು
ಅವಳದೆ ರಾಗ.....
ಜಗತ್ತಿಗೇನು..? ತನ್ನಿಚ್ಚೆಯಂತೆ
ನಡೆಯದೆ ಹೋದರೆ ಹುಚ್ಚ, ತೆವಲುಗಾರ
ನೆನ್ನುತ್ತದೆ..
ಅದೆಂದು ಒಳಗಣ್ಣಿನಿಂದ ನೋಡುವುದೆ
ಇಲ್ಲ..!! ಎಲ್ಲ ವ್ಯಾಪಾರಿಕರಣ...
ಎಲ್ಲ ವ್ಯಾಪಾರಿಕರಣ... ಹೀಗಾಗಿ
ಇಲ್ಲಿ ಕವಿ ಸೋತಿಲ್ಲ... ಸೋಲುವುದು ಇಲ್ಲ...

ಚುಟುಕುಗಳು


ಕತ್ತರಿಸಲು ಖಡ್ಗವನ್ನು ಹಿಡಿದು
ನಿಂತವರ ಮುಂದೆಯೆ... ಕತ್ತನ್ನು
ಒಡ್ಡಿದ್ದೆ..!!
ಪ್ರೀತಿಸುವವಳು.. ಅವಳಿಗಾಗಿ
ಸರ್ವಸ್ವವನ್ನೆ ಕೊಟ್ಟಿದ್ದೆ...
ಕಲ್ಲು ಎದೆಯವರು ಕೊರಳಿಗೆ
ಹಾರವನ್ನು ಹಾಕಿದರು...!!
ಮುಷ್ಠಿಯಲ್ಲಿ ಇದ್ದ ಜೀವವನ್ನು
ಅವಳು ಉಫ್ ಎಂದು
ಊದಿಬಿಟ್ಟಳು...
@@@@

ನಮ್ಮಿಬ್ಬರನ್ನು ಬೇರ್ಪಡಿಸಲು
ಕಾಲಕ್ಕೂ ಕಸುವಿಲ್ಲ ಎಂದವಳು....
ಕಾಲಿನ ಕಸಕ್ಕಿಂತ ನನ್ನನ್ನು
ಕಡೆಯಾಗಿಸಿದಳಲ್ಲ...
ಪ್ರಶ್ನಿಸುವುದಾದರೂ ಯಾರನ್ನು
ಈಗ..ಕಾಲವನ್ನೊ..?
@@@@@

ಬಾಳ ದಾರಿಯಲ್ಲಿ
ಸಾವು ಹಾದಿ ತಪ್ಪಿಬಿಟ್ಟಿದೆ..!!
ನೋವು... ಎದೆಯ ಅಂಗಳದಲ್ಲಿ
ದಣಿವಿಲ್ಲದೆ ನೃತ್ಯುಸುತ್ತಿದೆ
ಗೆಳೆಯ...
ಮರಳುಗಾಡಿನಲ್ಲಿ ಸಾಕಲು
ಹವಣಿಸುವ ಬಸವನ
ಹುಳುವಿನಂತಾಗಿದೆ ನನ್ನ ಪಾಡಿಗ...

ಅವನಿಗಿಂತ ನಾನೇನು ಕಮ್ಮಿ
ಒಂದು‌ ಧಮ್ ಎಳೆದುಬಿಟ್ಟೆ
ಉಸಿರುಗಟ್ಟಿದ ಹಾಗಾಯಿತು..
ಎದೆಯ ಗೂಡಲ್ಲಿ ಅವನಿನ್ನು
ಬೆಚ್ಚಗೆ ಇದ್ದಾನೆ

@@@
ಅವಳ ಕೆಂದುಟಿಯಲ್ಲಿ...
ಅಮೃತವೆ ತುಂಬಿತ್ತಂತೆ...!!
ಅವಳು,  ಮಾತಿನಲ್ಲೆ
ವಿಷವನ್ನು
ಉಣಬಡಿಸಿದಳು..!!


@@@

ಬಾಳಿನ
ಹಾದಿಯುದ್ದಕ್ಕೂ....
ಮುಳ್ಳುಗಳನ್ನೆ ಚೆಲ್ಲಿದವರು
ನನ್ನ ಹೆಣದ ಚಟ್ಟಕ್ಕೆ
ಹೂವಿನ ಹಾಸನ್ನು
ಹೊದಿಸುತ್ತಿದ್ದಾರೆ...!!

@@
ಯಾವುದೋ... ಲೋಕದಲ್ಲಿ
ಮುಳುಗಿದ್ದ ನನ್ನನ್ನು..
ಬೀಗವೆ ಇಲ್ಲದ ನಿನ್ನೆದೆಯ
ಸೆರೆಮನೆಯಲ್ಲಿ
ಬಂಧಿಯಾಗಿಸಿಕೊಂಡುಬಿಟ್ಟೆ...!!
ಇಲ್ಲಿಂದ ಹೊರಡುವುದು
ಇನ್ನೂ ನಿನ್ನ ಉಸಿರು
ನಿಂತ ಮೇಲೆಯೆ....

@@
ಯಾವುದೋ... ಲೋಕದಲ್ಲಿ
ಮುಳುಗಿದ್ದ ನನ್ನನ್ನು..
ಬೀಗವೆ ಇಲ್ಲದ ನಿನ್ನೆದೆಯ
ಸೆರೆಮನೆಯಲ್ಲಿ
ಬಂಧಿಯಾಗಿಸಿಕೊಂಡುಬಿಟ್ಟೆ...!!
ಇಲ್ಲಿಂದ ಹೊರಡುವುದು
ಇನ್ನೂ ನಿನ್ನ ಉಸಿರು
ನಿಂತ ಮೇಲೆಯೆ....

@@@
ಸಿಗರೇಟ್ ಎಷ್ಟೇ ದುಬಾರಿ
ಆಗಿದ್ದರೂ..
ಸುಟ್ಟು ಬೂದಿಯಾಗುತ್ತದೆ..!
ಹಾಲು ಅದೇಷ್ಟೆ...
ಮಂದವಾಗಿದ್ದರೂ..
ಸರಿಯಾದ ಅಳತೆಯಲ್ಲಿ
ಸಕ್ಕರೆಯನ್ನು ಹಾಕದಿದ್ದರೆ...
ಚಹಾ, ಸಪ್ಪೆ ಎಂದೆನ್ನಿಸುತ್ತದೆ...!!
ಸಂಬಂಧಗಳನ್ನು ಕೇವಲ
ಅನುಕೂಲಕ್ಕಾಗಿ ಉಳಿಸಿಕೊಂಡಿದ್ದರೆ..
ಒಂದಿಲ್ಲೊಂದು ದಿನ ಉರಿದು ಹೋಗುತ್ತವೆ..!!
ನೀವು ಸೋಲದೆ, ಬಾಳಿನುದ್ದಕ್ಕೂ
ಅವರೆ ಸೋಲುತ್ತಿರಲೆಂದು
ಬೀಗುವವರ ಬದುಕಿನಲ್ಲಿ
ಅರ್ಥವೆಲ್ಲಿದೆ...??

@@@@
ಛೇ...
ನಿನ್ನ ಮಧುರಸವಿಂದು
ಅದೇಷ್ಟು ಕಹಿಯಾಗಿದೆ
ಸಾಕಿ...
ಏಕೆ...? ಅವಳ
ಅದರದ ಸವಿ
ಮತ್ತೆ ನೆನಪಾಯಿತೇನು?

@@@@
ನಿಮ್ಮನ್ನು ಬಿಟ್ಟು....
ಅವರೆಲ್ಲ ಅದೇಷ್ಟು
ಮುಂದೆ ಹೊರಟು ಹೋಗಿದ್ದಾರೆ...
ಕ್ಷಮಿಸಿ, ನನ್ನ ಬಳಿ
ಅಂತಾವ ಮುಖವಾಡಗಳಿಲ್ಲ..!!

,@@@
ನನ್ನ ಪ್ರೀತಿಯ
ಋಣವನ್ನು ತೀರಿಸಲಾಗದೆ
ಹೋಗುತ್ತಿರುವುದಕ್ಕೆ
ಪಶ್ಚಾತ್ತಾಪಿಸಬೇಡ...!!
ಹುಟ್ಟಿದ ಪ್ರತಿಯೊಂದು
ಜೀವಿಯೂ... ಒಂದಿಲ್ಲೊಂದು
ಋಣವನ್ನು ಹೊತ್ತುಕೊಂಡು
ಸಾಯಲೆಬೇಕು...!!

@@@@

ಅವಳು ನನ್ನ ಬಳಿ
ಬಿಟ್ಟು ಹೋಗಿದ್ದ
ಪ್ರೀತಿಯನ್ನು, ಮತ್ತೆ
ಎದುರಾದಾಗ ಕೊಡಲು
ಹೋದೆ...!!
ಅವಳ ಉಡಿ ತುಂಬಿ
ತುಳುಕುವಷ್ಟು ಒಲವನ್ನು
ಮತ್ತಾರೋ ಸುರಿದಿಟ್ಟಿದ್ದರು...💐
👌

Tuesday, July 8, 2025

ಚುಟುಕು

ಕುಡಿದು... ಖಾಲಿಯಾದ
ಮದ್ಯದ ಬಾಟಲಿಯನ್ನು
ಎಸೆಯಬಹುದು....!!
ಎದೆಯಿಂದ ಅವಳ
ನೆನಪುಗಳನ್ನಲ್ಲ... 
ಮತ್ತೀಳಿದ ಮೇಲೆ
ಕುಡಿದದ್ದು ಯಾವ ಬ್ರ್ಯಾಂಡೆಂದು
ನೆನಪಾಗದೆ ಹೋಯಿತು....!!
ಮರೆಯಲೆಂದೆ ಕುಳಿತವನಿಗೆ
ಮರೆಯಲಾಗಲಿಲ್ಲ ಅವಳ
ಹೆಸರನ್ನ....!!

ಅಕ್ಷರ ಬಡವ....

Monday, March 17, 2025

ಸೇಡವು (ಚಿತ್ತಿ ಮಳಿಯಾಗ )

ಚಿತ್ತಿ ಮಳಿಯಾಗ ಮನಸಿನ ಚಿತ್ತಕ್ಕ
ಬೆಂಕಿ ಹಚ್ಚಿ ಕೂರಬೇಡ...
ಮತ್ತಿನ ಗಮ್ಮತ್ ಅರಿಯದ ಹುಡುಗನ
ತಲಿಗೆ, ನಿನ್ ಪ್ರೀತಿ ಅಮಲು ಎರಿಸಬ್ಯಾಡ..

ಜೋಳ ಬಿತ್ತಾಕ ಹದ ಮಾಡಿದ ಹೊಲದಂಗ
ನನ್ನೆದಿ ನೆಲದಾಗ ...ಪ್ರೀತಿ ಬೀಜ ಬಿತ್ತದನ...ವಿರಹದ ಕಸ ಬಿಳಿಸಿ ಹೋಗಬ್ಯಾಡ...
ಅನ್ನ.. ಕೊಡೊ ಭೂಮಿಗೆ ದುಡಿಯೊರ ಇಲ್ದಂಗ
ಆಗೈತಿ, ಅಂತದ್ರಾಗ...ನನ್ ದುಃಖಕ್ಕ ಯಾರ ಹೆಗಲ
ಕೊಡ್ತಾರ..

ಧರ್ಮರಾಯನ ಬಾಯಿಂದಲೂ ಅಧರ್ಮ
ನುಡದಿತ್ತಂತ... ಅಂತ ಬಾಯಿಲೆ ಏನು ಹೇಳಬ್ಯಾಡ...
ಮಾತೆಲ್ಲ ಮುತ್ತಾಗು..ವು ಕಣ್ಣಾಗ..!! ಆ ಕಣ್ಣಂಚಿದ
ನೋಡಿಬಿಡೊಮ್ಮೆ.. ಓದ್ಕೊಂಡು ಎದಿಯಾಗ ಮುಚ್ಚಿಟ್ಕೊಂಡಬಿಡ್ತೀನಿ ಕಪ್ಪೆಚಿಪ್ಪನಂಗ..

ಕೆರಿ ದಂಡಿ ಯಾವಾಗಲೂ ಮೆತ್ತಗ ಇರುವಂಗ
ತುಪ್ಪದಾಗ ಹುರದ ಮಾಡಿದ ಬೇಸನ ಉಂಡಿ
ಹಂಗ ಆಗೈತಿ‌ ಮನಸ್ಸು...!!
ಪ್ರೀತಿ ಹಾಲಿಗೆ ಹೆಪ್ಪ್ ಹಾಕತೀಯೊ ಉಪ್ಪ ಹಾಕತಿಯೋ
ಗೊತ್ತಿಲ್ಲ..
ಒಟ್ಟನ್ಯಾಗ ಒಡದ ಹಾಕಬ್ಯಾಡ ನೋಡ ಈ
ಹುಡುಗನ ಕನಸ್ಸು...!!

ಚುಟುಕುಗಳು

ಬಟ್ಟಲೊಳಗಿನ ಮಧುವನ್ನು
ನೋಡಿದಾಗಲೆಲ್ಲ... ಅವಳ
ಕೆಂದುಟಿಯ ರಂಗು
ನನ್ನೆದೆಯನ್ನು ಸುಡುತ್ತದೆ...!!
ಕಣ್ಣುಮುಚ್ಚಿ.. ಒಂದೇ.. ಗುಟುಕಿಗೆ
ಕುಡಿದುಬಿಟ್ಟೆ..!!
ಒಳಗಿಳಿದ ಮದ್ಯವೀಗ..
ತೊಂಡೆ ತುಟಿಗಳ
ಸವಿಯನ್ನು ನೆನಪಿಸುತ್ತಿದೆ...!!

ಅವಳು ಸುಮ್ಮನಿದ್ದಾಳೆ..!!
ನಾನು ಸುಮ್ಮನಿದ್ದೆನೆ..!!
ಜಗತ್ತೇಕೊ ನಮ್ಮಿಬ್ಬರ
ಕುರಿತು ಸುಮ್ಮನೆ ಕೂರುತ್ತಿಲ್ಲ..!!
ನಿನ್ನೆ..ಮೊನ್ನೆ..ನಾಳೆ..ನಾಡಿದ್ದು..
ಹೀಗೆ ದಿನಗಳನ್ನು ಎಣಿಸುತ್ತ
ಕುಳಿತಿದೆ...
ಸಮಯವೇನು ಇವರ ಗಡಿಯಾರದಲ್ಲಿ
ಯಾವಾಗಲೂ ಒಂದೇ ರೀತಿ
ಇರುತ್ತದೆ ಎನ್ನುವ ಭ್ರಮೆಯಲ್ಲಿ..!!


ಪ್ರೀತಿ ಕೆಟ್ಟದ್ದೆ..‌!!?
ಅವಳು ಕಡೆಗಣಿಸಿ
ಹೋದರೆ..‌!!
ಕುಡಿತ ಒಳ್ಳೆಯದೆ...
ಅದು ಬೇರೆಯವರು
ಕುಡಿಸಿದರೆ...!!

ಉರಿಯುವ ಕಟ್ಟಿಗೆಯ
ಮೇಲೆ ಮದ್ಯವನ್ನು
ಸುರಿದೆ...!!
ಬೆಂಕಿಯು ಮತ್ತಷ್ಟು
ಧಗಧಗಿಸತೊಡಗಿತು..
ಅದೇ ಮಧುವನ್ನು
ಗಂಟಲಿಗಿಳಿಸಿಕೊಂಡೆ
ಎದೆಯೊಳಗಿನ
ಬೆಂಕಿಯೆಲ್ಲ ತಣ್ಣಗಾಯಿತು..!!


ಪ್ರೀತಿಯೊಳಗಿನ
ಎಲ್ಲ ಸುಖ:-ದುಃಖಗಳನ್ನು
ಒದಗಿಸಿಕೊಟ್ಟ
ದೇವರು... ಬದುಕಿನ
ಪುಟದಲ್ಲಿ ಅವಳ
ಹೆಸರನ್ನು ಬರೆಯುವುದನ್ನೆ
ಮರೆತುಬಿಟ್ಟನೇಕೊ...?

ಮಾಡಿದ ಕರ್ಮಗಳನ್ನೆಲ್ಲ
ಇದೆ ಜನ್ಮದಲ್ಲಿ ಅನುಭವಿಸದೆ..
ಇನ್ನಾವ ನದಿಯಲ್ಲಿ
ಹೋಗಿ ತೊಳೆದುಕೊಳ್ಳಲಿ
ಗುರುವೆ....
ಗಂಗೆಯ ಮಗನಾದರೂ...
ಶರಶಯ್ಯಯೆ ಮೇಲೆ
ಮಲಗುವುದು ತಪ್ಪಲಿಲ್ಲ..!!
ನಾನು..? ಹುಲು ಮಾನವ
ತಪ್ಪಿಸಿಕೊಳ್ಳಬಲ್ಲೇನೆ...?

Monday, July 1, 2024

ಗಾಲಿಬ್

ಹುದೋಟದ ತುಂಬೆಲ್ಲ... ಬಗೆಬಗೆಯ
ಹೂಗಳು ಅರಳಿ ನಿಂತಿವೆ, ಒಂದೇ...ಒಂದು
ದುಂಬಿಯೂ ಇತ್ತ ಸುಳಿಯುತ್ತಿಲ್ಲವಲ್ಲ ಗಾಲೀಬ್...
ಅವುಗಳ ಹಾಗೆ ನಿನಗೂ... ನನ್ನದರದ ಸವಿ
ಸಪ್ಪೆಯಾಯಿತೇನು..? ಇಲ್ಲವೆ, ಮತ್ತೇರಿಸುವ
ಮದಿರೆಯೇನಾದರು... ಮಜ್ಜಿಗೆಯಾಯಿತಾ...?

ಹಿಂದಿನ ದಿನಗಳ ಹಾಗೆ ಎದೆಯೀಗ ಬಿಗಿಯುತ್ತಿಲ್ಲ..!!
ಜೋತು ಬಿಳುತ್ತಿದೆ.., ಬಳ್ಳಿಯ ನಡುವಿನ ಸುತ್ತ...
ಹರೆಯ ಕಳಚಿದ ಹೆಬ್ಬಾವೊಂದು ಬಳಿದು ಬಿಗಿಯುತ್ತಿದೆ
ಗಾಲೀಬ್...
ಮಾರುಕಟ್ಟೆಯಲ್ಲಿ ಸುಕ್ಕುಗಟ್ಟಿದ್ದಕ್ಕೆ ಯಾವಾಗಲೂ
ಬೆಲೆ ಕಡಿಮೆಯೆ...
ಇಲ್ಲಿ ಹಸಿದವರಿಗಿಂತ, ಹೊಟ್ಟೆ ತುಂಬಿದವರಿಂದ ಚೌಕಾಸಿಯೆ ಜಾಸ್ತಿ..

ಹುಗಿಯುವ ಸ್ಮಶಾನಗಳು ಎಷ್ಟೊಂದು ಸುಂದರವಾಗಿವೆ
ಗೊತ್ತಾ....!!, ಹೆಣ ಹೋದರೆ ಸಾಕು ಮದುವಣಗಿತ್ತಿಯಂತೆ ಅದು ಸಿಂಗಾರಗೊಳ್ಳುತ್ತದೆ..!!
ಗಾಲೀಬ್...
ನಾನು ಹೊರಟುಬಿಡಲೆ, ಒಂದು ಮದ್ಯದ ಹೂಜಿಯನ್ನು ಹೊತ್ತುಕೊಂಡು...ಅಲ್ಲಿಗೆ..!!
ನನ್ನಲ್ಲಿ ಬರುವ ಗಿರಾಕಿಗಳ ಕೊನೆಯ ನಿಲ್ದಾಣ
ಅದೆ ಅಲ್ಲವೇನು...?

ಲೋಕಕ್ಕೆ ವಾಸಿ ಮಾಡಿಕೊಡುವ ಕಹಿಯ ಇಷ್ಟವಿಲ್ಲ
ಒಳಗೊಳಗೆ ಕೊಳೆತು ನಾರಿಸುವ ಸಿಹಿಯೆ ಬೇಕು..
ಗಾಲೀಬ್ ಸಿಹಿಯೆ ಬೇಕು..!!
ಯಾಕೋ...ನನ್ನ ಸರತಿ ಬಂದಂತೆನಿಸುತ್ತಿದೆ ನನಗೆ
ಈ ಸಂಜೆಗೆ ನಿ ಬರುವೇಯೊ ಇಲ್ಲವೊ...?
ಬಟ್ಟಲಲ್ಲಿ ನಿನ್ನ ಪಾಲಿನ ಮದ್ಯವನ್ನು ಎತ್ತಿಟ್ಟಿದ್ದೇನೆ
ಹಾಗೆ ಹೋದರೆ ನಾನೂ ಮೋಸಗಾತಿಯೆ...
ಆಗುವುದಿಲ್ಲವೇನು..ನಿನ್ನ ಪಾಲಿಗೆ...

Friday, June 28, 2024

ಚುಟುಕುಗಳು


ಮುಡಿಯಲ್ಲಿ ಕೇವಲ
ಹೂವನ್ನು ಮುಡಿಸಿ ಹೋದ
ಮಾತ್ರಕ್ಕೆ... ಆಗಿಬಿಡುವೆಯಾ..?
ನೀ...ನಲ್ಲ..!!
ಕಾದು...ಕಾದು.. ಹಂಚಾಗಿ
ಹೋದ, ಗಲ್ಲದ ಮೇಲೊಂದು
ಸಿಹಿ ಮುದ್ರೆಯನೊತ್ತದೆ
ಸತಾಯಿಸುವಂತವನು
ಹೇಗೆ ಸಂಗಾತಿಯಾಗುವೇಯೊ?
ನೀ...ನಲ್ಲ..!!

ಅವಳಂದು
ಹೂವನ್ನು ಹಿಡಿದು
ಎದುರಿಗೇತಕೆ
ಬಂದು ಹೋದಳೋ...!!?
ನಾನದೇಷ್ಟು
ಸುಖವಾಗಿದ್ದೆ...!!
ಕಲ್ಲು ಹೊಡೆಯುವವರ
ಸಂತೆಯಲ್ಲಿ...!!

ಪ್ರತಿ ಸಂಜೆಗೂ...
ಮದ್ಯದ ಬಾಟಲಿಯನ್ನು
ಹಿಡಿಯುತ್ತೇನೆ...!!
ಅವಳ
ನೆನಪುಗಳೆಂದೂ
ಸೋಲುವುದೆ ಇಲ್ಲ..!!

ನನ್ನ ಪದಗಳಲ್ಲಿ
ಕಾಮವನ್ನು ಹುಡುಕಬೇಡಿ..
ಅದು ನಿಮಗೆ
ಸಿಗುವುದಿಲ್ಲ...!!
ಪ್ರೇಮವನ್ನಂತೂ
ಮೊದಲೇ.. ಹುಡುಕಬೇಡಿ..
ಯಾಕೆಂದರೆ ಅದೇ
ನನಗಿನ್ನೂ....
ಸಿಕ್ಕಿಲ್ಲ..!!

ಈ ಅಮಲುಗಣ್ಣಿನಲ್ಲಿ
ಅವಳ ಚಿತ್ರವನ್ನು
ಹುಡುಕಲು ಪ್ರಯತ್ನಿಬೇಡಿ...!!
ಒಲವಿನ ಕೆಸರಿನಲ್ಲಿ
ಬಿದ್ದವನು ನಾನು...
ಗಟಾರಿನಲ್ಲಿ ಬೀಳದ ಹಾಗೆ
ಒಂದು ಮೂಲೆಯಲ್ಲಿ
ಮಲಗಿಸಿಬಿಡಿ...!!

ಅಂಗಡಿ ಮಾಲೀಕ...
ಮದ್ಯದ ಬಾಟಲಿಗೆ ದುಪ್ಪಟ್ಟು
ದರವನ್ನೇನು ಪಡೆದುಕೊಂಡ
ನಿಂದು... ಆದರೆ
ಮತ್ತೇನು ಹೆಚ್ಚಾಗಲಿಲ್ಲವಲ್ಲ...!!
ಅವಳ ಏರಿಸಿದ ನಶೆಗೆ
ಬೆಲೆಯೆ ಇಲ್ಲ....
ಇಂದಿಗೂ.. ಇಳಿಯುತ್ತಲೆ
ಇಲ್ಲ...!!

ಅವಳ ಮನೆಯ
ಹಾದಿಯಲ್ಲಿ ನನ್ನ ಹೆಜ್ಜೆ
ಗುರುತುಗಳನ್ನು
ಹುಡುಕುತ್ತ ಹೋಗಬೇಡಿ..!!
ಅಲ್ಲಿಗ ದಿನಕ್ಕೊಂದು
ಗುರುತುಗಳು ಸಿಗುತ್ತ
ಹೋಗುತ್ತವೆ..

ಮದ್ಯದ ಜೊತೆಯಲ್ಲಿ
ಇಟ್ಟ..‌ ಉಪ್ಪಿನಕಾಯಿಗೂ
ಬೂಸ್ಟ್ ಹತ್ತಿದೆ...
ಅವಳ ನೆನಪುಗಳಂತೆ..
----
ಕೇವಲ...
ಅವಳ ನೆನಪುಗಳನ್ನು
ಮರೆಯಲು ಇದ್ದ-ಬದ್ದ
ಆಸ್ತಿಯಲ್ಲ ಹರಾಜಾಗಿ
ಹೋಯಿತಲ್ಲ...!!
ಹಾಳಾದ್ದು ಈ ಜೀವ
ಹೋಗಲಿಲ್ಲ...!
ಹತ್ತು ಪೈಸೆ ಬೆಲೆನೂ
ಇಲ್ಲದಾಗಿ ಹೋಗಿದೆ
ಈಗ...

ನೆತ್ತಿಗೆ ನಿಂಬೆ ಹಾಕಿ
ತಿಕ್ಕಿದರೂ... ಪಿತ್ತ
ಇಳಿಯಬಹುದು...
ಅವಳ ಮತ್ತಲ್ಲ...!!
ಮರೆತುಬಿಡು
ಎನ್ನುತ್ತದೆ ಜಗತ್ತು..!!
ಅವಳ ಬಗ್ಗೆ ಜನರಿಗೆ
ಇನ್ನೂ ಸರಿಯಾಗಿ
ಗೊತ್ತಿಲ್ಲ..!!

ಎಲ್ಲರೂ ಬೈಯ್ಯುತ್ತಾರೆ
ಅವನು ಕುಡಿದ
ಅಮಲಿನಲ್ಲಿದ್ದಾನೆ ಬಿಡಿ ಎಂದು..!!
ವಾಸ್ತವದ ಅರಿವು
ಅವರಿಗಿಲ್ಲ..!!
ಕಾಣದ ಭವಿಷ್ಯದ
ಕುರಿತು ನನಗಂತೂ
ಭಯವಿಲ್ಲ..!!

ತಪ್ಪೇನಿದೆ...!!
ಬುದ್ಧನೆ ಅವನ
ಮಡದಿಗೆ ಹೇಳದೆ
ಅರಮನೆಯಿಂದ ಎದ್ದು
ಹೋದದ್ದಲ್ಲವೇನು..?
ಇನ್ನೂ ಇವಳು
ನನ್ನ ಮನಸ್ಸಿನಿಂದ
ಹೇಳದೆ ಹೊರಟು ಹೋದದ್ದು
ನ್ಯಾಯವೆ ಬಿಡಿ..


ಒಂದು ಗುಟುಕಿಗೆ...
ಎದೆಯಲ್ಲ ಉರಿದು
ಹೋಯಿತು....!!
ನಿತ್ಯ ನನ್ನ ನೆನಪಿನಲ್ಲಿ
ಮದ್ಯದಲ್ಲಿಯೇ...
ಮುಳುಗಿರುವ
ಅವನ ಪಾಡು ಏನಾಗಿರಬೇಡ...!!

ಅವಳು ಬಿಟ್ಟು
ಹೋದ ಹಾದಿಗೆ
ಹೂಗಿಡವೊಂದನ್ನು
ನೆಟ್ಟುಬಿಡುತ್ತೇನೆ..
ಮೋಸದ ವಾಸನೆ
ದಾರಿಹೋಕರಿಗೆಲ್ಲ
ಬಡಿಯದಿರಲಿ..

ಪ್ರೀತಿಸಿದಾಗ
ಅವಳೊಂದೆ... ಕಡ್ಡಿಯನ್ನು
ಗೀರಿ ಹೋಗಿದ್ದಳು...!!
ಸತ್ತ ಮೇಲೆ...
ಸಾವಿರ ಜನ, ನೂರು
ಕಟ್ಟಿಗೆಗಳನ್ನಿಟ್ಟು
ಸುಟ್ಟು
ಹೋದರು...!!


ನಿನ್ನ ಹಣೆಯ
ಬರಹವನ್ನು ಬದಲಿಸಿದವರಾರು?
ಕೇಳಿದವರಿಗೆಲ್ಲ....
ಬಿದ್ದು,  ಕೊಳೆತು
ಹೋಗುತ್ತಿರುವ
ಹೂವಿನ ಜಾಗವನ್ನು
ತೋರಿಸಿದೆ..
ಅವಳ ಮನೆಯ
ದಾರಿಯನ್ನು
ತೋರಿಸಿದೆ...


ಜೇಬಿನಲ್ಲಿ
ಕಾಸಿಲ್ಲದಿದ್ದರೂ...
ಹೃದಯದಿಂದ
ಶ್ರೀಮಂತನಾಗಿರಬೇಕಂತೆ...!!
ಅವಳಿಂದಾಗಿ,
ನಾನಲ್ಲೂ..
ಫಕೀರನಾಗಿದ್ದೇನೆ..!!

ಮಾತುಗಳಿಂದ
ಹುಷಾರಾಗುವ ಹಾಗಿದ್ದರೆ
ನಾನೆಂದೊ...ಎದ್ದು
ಅಡ್ಡಾಡುತ್ತಿದ್ದೆ...!!
ಆ ಮಾತುಗಳನ್ನು ನೆಚ್ಚಿ
ತಾನೆ, ನಾನಿಲ್ಲಿ
ಮಲಗಿರುವುದು..!

ಹೊತ್ತು ಮೀರಿದ
ಮೇಲೆ, ಹೂವು ಬಾಡಿ
ಹೋಗುತ್ತದೆ...!!
ದಿನಗಳು ಕಳೆದು
ಹೋದಂತೆ... ಹರೆಯವು
ಬಸಿದು ಹೋಗುತ್ತದೆ..!!
ಗೆಳೆಯ
ಪೂಜಿಸದೆ ಹೋದ
ಹೂವು...
ಚುಂಬಿಸಿಕೊಳ್ಳದೆ ಕಳೆದ
ಯೌವ್ವನ... ಎರಡು
ನಿರರ್ಥಕವಲ್ಲವೇನು..?


ಅದು ಹೇಗೆ ನನ್ನನ್ನು
ಸಂಪೂರ್ಣವಾಗಿ
ಮರೆತು ಹೋಗಿರುವಳೋ...!!
ನಾನೀನ್ನೂ...
ಅವಳು ಬಿಟ್ಟುಹೋದ
ತಿರುವಿನ ಹೆಸರನ್ನೆ
ಮರೆತಿಲ್ಲ...!!

ಗಲ್ಲಿ...ಗಲ್ಲಿಗಳಲ್ಲೊಂದು
ಔಷಧಿಯ ಅಂಗಡಿಗಳಿವೆ..!!
ವಿಷಾದವೆಂದರೆ‌‌‌‌.....
ಯಾವ ದುಖಾಃನಿನಲ್ಲೂ
ನನ್ನ ದುಖಃಕ್ಕೊಂದು
ಮದ್ದಿಲ್ಲ...!!

ಮಧುಶಾಲೆಗೆ
ನಾನು ನಿತ್ಯದ ಗಿರಾಕಿ..!!
ಆದರೂ ಮಾಡಬೇಡ
ವೆನ್ನಾತ್ತಾಳವಳು ಚೌಕಾಸಿ..!!





ಚುಟುಕುಗಳು

ಜಗತ್ತು...
ಕಲೆತಂತಹ
ಇತಿಹಾಸವನ್ನೆ...
ಮರೆತುಬಿಡುತ್ತದೆ..!!!
ಇನ್ನೂ ನಾವು
ಯಾವ ಲೆಕ್ಕ..?
ಮಾತಿರಲಿ...
ಕಣ್ಣೆತ್ತಿಯೂ...
ನೋಡದ ಹಾಗೆ
ಓಡಿಸಿಕೊಂಡು ಹೋಗುತ್ತಿದೆ
ರೊಕ್ಕ.‌.!!

ಅಮವಾಸೆಯ,
ಕಗ್ಗತ್ತಲಲ್ಲೂ....
ಹುಣ್ಣಿಮೆ ಚಂದ್ರನ ಕಾಣಲು
ಹವಣಿಸುತ್ತಿದ್ದೆ...!!
ತುಂಬು ಹುಣ್ಣಿಮೆಯು
ಸ್ಖಲಿಸಿದ ಬೆಳಕಿನಲ್ಲಿ
ಅವನು ಕತ್ತಲನ್ನೆ
ತುಂಬಿ ಹೋಗಿದ್ದ..!!

@@@@@

ಕಾದ ಎಣ್ಣೆಗೆ...
ವಗ್ಗರಣೆ ಹಾಕಿ
ಬಿಟ್ಟು ಬಿಟ್ಟರೆ...
ಸೀದು ಹೋಗುತ್ತದೆ..!!
ಪ್ರೀತಿಸುತ್ತಿದ್ದಾಳಲ್ಲವೆಂದುಕೊಂಡರೆ
ಜೀತದಾಳಿನ ಭಾವ
ಎದೆಯನ್ನು ಸುಡುತ್ತಿರುತ್ತದೆ..‌!!

@@@@

ಗಿಡವನ್ನು ನೆಟ್ಟು
ನೀರೆರೆದವನಾರೋ...?
ಇಲ್ಲಿ ಶಿಲ್ಪಿಯನ್ನು
ವೈಭವಿಕರಿಲಾಗುತ್ತದೆ...!!!
ಮುಡಿಗೆ ಮಲ್ಲಿಗೆ
ಮುಡಿಸಿದವನನ್ನು ಬಿಟ್ಟು
ಮುಡಿಸಿಕೊಂಡವಳ
ಮುಡಿಯನ್ನು ಹಿಡಿದು
ಜಗತ್ತು...ಕಿತ್ತಾಡತೊಡಗುತ್ತದೆ....!!

@@@

ಹಾಸಿಗೆಯಲ್ಲಿ ....
ಕಳೆದುಕೊಂಡಿದ್ದಕ್ಕಿಂತ
ಲೋಕದ ನಿಂದನೆಯನ್ನು
ಪಡೆದುಕೊಂಡದ್ದೆ ಹೆಚ್ಚು...!!
ಹುಳಿಯುಂಡ ನಾಲಿಗೆ,
ಬಿಡುವುದೆ...
ಕಿಚ್ಚಿನೊಳಗೆ ನೂಕುವ
ಹುಚ್ಚು...!!

ಹೇಗೆ ಅರಿಯಬಲ್ಲೇನು
ನಿನ್ನ ಮನಸಿನೊಳಗಿನ
ಮರ್ಮ..!!
ಕೃಷ್ಣ ಪರಮಾತ್ಮನನ್ನೆ
ಬಿಡಲಿಲ್ಲ ಕರ್ಮ..‌!!
ಈ ಬಡಪಾಯಿ ಅಕ್ಷರ
ಬಡವನನ್ನು ಉಳಿಸುವುದೆ
ಹುಸಿ ಪ್ರೇಮ..
@@@@@@

ಕೈಗಳು ಹೂಗಳನ್ನು
ಕಿತ್ತಿದ ಪಾಪದ ನಂಟನ್ನು
ಹೊತ್ತುಕೊಂಡಿವೆ...!!
ನೀನೆ ಮುಡಿದು
ಈ ಅಕ್ಷರ ಬಡವನನ್ನು
ಕೃತಾರ್ಥನನ್ನಾಗಿಸು
ಚೆಲುವೆ...

@@@

ಕಾಡಿಗೆ ಕಣ್ಣುಗಳ ಪಾಶಕ್ಕೆ
ಸಿಕ್ಕು..‌.ಎದೆಯಲ್ಲಿಯೆ
'ದಫನ್' ಆಗಿ ಹೋಯಿತಲ್ಲ
ಹುಟ್ಟಿದ್ದ ಎರಡು ಸಾಲು....!!
ಯಾವ ನ್ಯಾಯಾಲಯದಲ್ಲಿ
ದಾವೆ ಹೂಡಲಿ ಹೇಳು...
ಹಂಚಿಕೊಳ್ಳಲು ವಿರಹದ
ಪಾಲು...!!



ಹುಟ್ಟಿದ್ದೆ... ಎರಡು ಸಾಲುಗಳು
ಕಾಡಿಗೆ ಕಣ್ಣುಗಳ ಪಾಶಕ್ಕೆ
ಸಿಲುಕಿ, ಅವುಗಳು ಎದೆಯಲ್ಲಿಯೇ...
'ದಫನ್' ಆಗಿ
ಹೋದವಲ್ಲ...!!
ಹೇಳದೆ ಹೋದರೆ...!!
ಸಂಜೆ ವೇಳೆಗೆ, ಗೆಳೆಯರೆಲ್ಲ
'ಕಫನ್' ನನ್ನು ತರಲು
ಪೇಟೆಗೆ ಹೊರಡುವರಲ್ಲ..!!

@@@@@

ಸಂಪಾದಿಸದ್ದನ್ನೆಲ್ಲ
ಅವಳ ಪ್ರೇಮ ಪತ್ರಗಳಿಗಾಗಿ
ಖರ್ಚು ಮಾಡಿಬಿಟ್ಟೆ
ಅವುಗಳನ್ನೆಲ್ಲ ಈಗ
ತೂಕಕ್ಕೆ ಹಾಕಿದರೂ...
ಸಂಜೆಯ ಒಂದು ಮದು
ಬಟ್ಟಲು ಬರಯವುದಿಲ್ಲ...

@@@@@

ಅವಳು ಹಾದು ಹೋಗದೆ
ಹೂವುಗಳರಳುವುದಿಲ್ಲ...!!
ಎಂದುಕೊಂಡಿದ್ದೆ..
ಅರಳಿವೆ..,
ನನ್ನನ್ನು ಕೈ ಬಿಡಲಾರಳೆಂಬ
ಭರವಸೆಯಲ್ಲಿದ್ದೆ....
ಮರೆತು ಹೋಗಿದ್ದಾಳೆ
ಅಷ್ಟೇ...

@@@@

ಆ ಗಲ್ಲದ ಮೇಲೊಂದು
ಸಿಹಿಯಾದ ಬೆಲ್ಲವಿದೆಯಂತೆ..!!
ಸವಿದವರಾರೋ...!!?
ಬರೆದು ಕಳುಹಿಸಿದ
ಪತ್ರಕ್ಕೆ ಉತ್ತರವಿಲ್ಲ...
ಮನದೊಳಗೆನಿದೇಯೊ
ಬಲ್ಲವರಾರು..?

@@@

ಬೇಲಿಯ ಮೇಲೆ ಹರಡಿದ
ಬಳ್ಳಿಯ ಹೂಗಳು ಜಾರಿ
ಬೀಳುವುದು ಮುಳ್ಳುಗಳ
ಮೇಲೆಯೆ...!!
ನೋವಾಯಿತೆ..!! ನೆಂದು
ದುಂಬಿಯೂ...ಕೇಳುವುದಿಲ್ಲ..!!


ಕಲ್ಲು ಬಂಡೆಗಳ ಮೇಲೂ...
ಪ್ರೀತಿ ಕುರುಹುಗಳನ್ನು
ಬಿಟ್ಟು ಬರುತ್ತಾರೆ...

Saturday, May 11, 2024

ಚುಟುಕು


ಹಾಸಿಗೆಯಲ್ಲಿ ....
ಕಳೆದುಕೊಂಡಿದ್ದಕ್ಕಿಂತ
ಲೋಕದ ನಿಂದನೆಯನ್ನು
ಪಡೆದುಕೊಂಡದ್ದೆ ಹೆಚ್ಚು...!!
ಹುಳಿಯುಂಡ ನಾಲಿಗೆ,
ಬಿಡುವುದೆ...
ಕಿಚ್ಚಿನೊಳಗೆ ನೂಕುವ
ಹುಚ್ಚು...!!

Wednesday, May 8, 2024

ಚುಟುಕು


ಅಮವಾಸೆಯ, 
ಕಗ್ಗತ್ತಲಲ್ಲೂ....
ಹುಣ್ಣಿಮೆ ಚಂದ್ರನ ಕಾಣಲು
ಹವಣಿಸುತ್ತಿದ್ದೆ...!!
ತುಂಬು ಹುಣ್ಣಿಮೆಯು
ಸ್ಖಲಿಸಿದ ಬೆಳಕಿನಲ್ಲಿ
ಅವನು ಕತ್ತಲನ್ನೆ
ತುಂಬಿ ಹೋಗಿದ್ದ..!!

@@@@@

ಕಾದ ಎಣ್ಣೆಗೆ...
ವಗ್ಗರಣೆ ಹಾಕಿ 
ಬಿಟ್ಟು ಬಿಟ್ಟರೆ...
ಸೀದು ಹೋಗುತ್ತದೆ..!!
ಪ್ರೀತಿಸುತ್ತಿದ್ದಾಳಲ್ಲವೆಂದುಕೊಂಡರೆ
ಜೀತದಾಳಿನ ಭಾವ
ಎದೆಯನ್ನು ಸುಡುತ್ತಿರುತ್ತದೆ..‌!!

@@@@

ಗಿಡವನ್ನು ನೆಟ್ಟು
ನೀರೆರೆದವನಾರೋ...?
ಇಲ್ಲಿ ಶಿಲ್ಪಿಯನ್ನು
ವೈಭವಿಕರಿಲಾಗುತ್ತದೆ...!!!
ಮುಡಿಗೆ ಮಲ್ಲಿಗೆ
ಮುಡಿಸಿದವನನ್ನು ಬಿಟ್ಟು
ಮುಡಿಸಿಕೊಂಡವಳ
ಮುಡಿಯನ್ನು ಹಿಡಿದು
ಜಗತ್ತು...ಕಿತ್ತಾಡತೊಡಗುತ್ತದೆ....!!

ಅಕ್ಷರ ಬಡವ....

Friday, March 22, 2024

ಚುಟುಕುಗಳು

ಮುಡಿಯಲ್ಲಿ ಕೇವಲ
ಹೂವನ್ನು ಮುಡಿಸಿ ಹೋದ
ಮಾತ್ರಕ್ಕೆ... ಆಗಿಬಿಡುವೆಯಾ..?
ನೀ...ನಲ್ಲ..!!
ಕಾದು...ಕಾದು.. ಹಂಚಾಗಿ
ಹೋದ, ಗಲ್ಲದ ಮೇಲೊಂದು
ಸಿಹಿ ಮುದ್ರೆಯನೊತ್ತದೆ
ಸತಾಯಿಸುವಂತವನು
ಹೇಗೆ ಸಂಗಾತಿಯಾಗುವೇಯೊ?
ನೀ...ನಲ್ಲ..!!

ಅವಳಂದು
ಹೂವನ್ನು ಹಿಡಿದು
ಎದುರಿಗೇತಕೆ
ಬಂದು ಹೋದಳೋ...!!?
ನಾನದೇಷ್ಟು
ಸುಖವಾಗಿದ್ದೆ...!!
ಕಲ್ಲು ಹೊಡೆಯುವವರ
ಸಂತೆಯಲ್ಲಿ...!!

ಪ್ರತಿ ಸಂಜೆಗೂ...
ಮದ್ಯದ ಬಾಟಲಿಯನ್ನು
ಹಿಡಿಯುತ್ತೇನೆ...!!
ಅವಳ
ನೆನಪುಗಳೆಂದೂ
ಸೋಲುವುದೆ ಇಲ್ಲ..!!

ನನ್ನ ಪದಗಳಲ್ಲಿ
ಕಾಮವನ್ನು ಹುಡುಕಬೇಡಿ..
ಅದು ನಿಮಗೆ
ಸಿಗುವುದಿಲ್ಲ...!!
ಪ್ರೇಮವನ್ನಂತೂ
ಮೊದಲೇ.. ಹುಡುಕಬೇಡಿ..
ಯಾಕೆಂದರೆ ಅದೇ
ನನಗಿನ್ನೂ....
ಸಿಕ್ಕಿಲ್ಲ..!!

ಈ ಅಮಲುಗಣ್ಣಿನಲ್ಲಿ
ಅವಳ ಚಿತ್ರವನ್ನು
ಹುಡುಕಲು ಪ್ರಯತ್ನಿಬೇಡಿ...!!
ಒಲವಿನ ಕೆಸರಿನಲ್ಲಿ
ಬಿದ್ದವನು ನಾನು...
ಗಟಾರಿನಲ್ಲಿ ಬೀಳದ ಹಾಗೆ
ಒಂದು ಮೂಲೆಯಲ್ಲಿ
ಮಲಗಿಸಿಬಿಡಿ...!!

ಅಂಗಡಿ ಮಾಲೀಕ...
ಮದ್ಯದ ಬಾಟಲಿಗೆ ದುಪ್ಪಟ್ಟು
ದರವನ್ನೇನು ಪಡೆದುಕೊಂಡ
ನಿಂದು... ಆದರೆ
ಮತ್ತೇನು ಹೆಚ್ಚಾಗಲಿಲ್ಲವಲ್ಲ...!!
ಅವಳ ಏರಿಸಿದ ನಶೆಗೆ
ಬೆಲೆಯೆ ಇಲ್ಲ....
ಇಂದಿಗೂ.. ಇಳಿಯುತ್ತಲೆ
ಇಲ್ಲ...!!

ಅವಳ ಮನೆಯ
ಹಾದಿಯಲ್ಲಿ ನನ್ನ ಹೆಜ್ಜೆ
ಗುರುತುಗಳನ್ನು
ಹುಡುಕುತ್ತ ಹೋಗಬೇಡಿ..!!
ಅಲ್ಲಿಗ ದಿನಕ್ಕೊಂದು
ಗುರುತುಗಳು ಸಿಗುತ್ತ
ಹೋಗುತ್ತವೆ..

ಮದ್ಯದ ಜೊತೆಯಲ್ಲಿ
ಇಟ್ಟ..‌ ಉಪ್ಪಿನಕಾಯಿಗೂ
ಬೂಸ್ಟ್ ಹತ್ತಿದೆ...
ಅವಳ ನೆನಪುಗಳಂತೆ..
----
ಕೇವಲ...
ಅವಳ ನೆನಪುಗಳನ್ನು
ಮರೆಯಲು ಇದ್ದ-ಬದ್ದ
ಆಸ್ತಿಯಲ್ಲ ಹರಾಜಾಗಿ
ಹೋಯಿತಲ್ಲ...!!
ಹಾಳಾದ್ದು ಈ ಜೀವ
ಹೋಗಲಿಲ್ಲ...!
ಹತ್ತು ಪೈಸೆ ಬೆಲೆನೂ
ಇಲ್ಲದಾಗಿ ಹೋಗಿದೆ
ಈಗ...

ನೆತ್ತಿಗೆ ನಿಂಬೆ ಹಾಕಿ
ತಿಕ್ಕಿದರೂ... ಪಿತ್ತ
ಇಳಿಯಬಹುದು...
ಅವಳ ಮತ್ತಲ್ಲ...!!
ಮರೆತುಬಿಡು
ಎನ್ನುತ್ತದೆ ಜಗತ್ತು..!!
ಅವಳ ಬಗ್ಗೆ ಜನರಿಗೆ
ಇನ್ನೂ ಸರಿಯಾಗಿ
ಗೊತ್ತಿಲ್ಲ..!!

ಎಲ್ಲರೂ ಬೈಯ್ಯುತ್ತಾರೆ
ಅವನು ಕುಡಿದ
ಅಮಲಿನಲ್ಲಿದ್ದಾನೆ ಬಿಡಿ ಎಂದು..!!
ವಾಸ್ತವದ ಅರಿವು
ಅವರಿಗಿಲ್ಲ..!!
ಕಾಣದ ಭವಿಷ್ಯದ
ಕುರಿತು ನನಗಂತೂ
ಭಯವಿಲ್ಲ..!!

ತಪ್ಪೇನಿದೆ...!!
ಬುದ್ಧನೆ ಅವನ
ಮಡದಿಗೆ ಹೇಳದೆ
ಅರಮನೆಯಿಂದ ಎದ್ದು
ಹೋದದ್ದಲ್ಲವೇನು..?
ಇನ್ನೂ ಇವಳು
ನನ್ನ ಮನಸ್ಸಿನಿಂದ
ಹೇಳದೆ ಹೊರಟು ಹೋದದ್ದು
ನ್ಯಾಯವೆ ಬಿಡಿ..


ಒಂದು ಗುಟುಕಿಗೆ...
ಎದೆಯಲ್ಲ ಉರಿದು
ಹೋಯಿತು....!!
ನಿತ್ಯ ನನ್ನ ನೆನಪಿನಲ್ಲಿ
ಮದ್ಯದಲ್ಲಿಯೇ...
ಮುಳುಗಿರುವ
ಅವನ ಪಾಡು ಏನಾಗಿರಬೇಡ...!!

ಅವಳು ಬಿಟ್ಟು
ಹೋದ ಹಾದಿಗೆ
ಹೂಗಿಡವೊಂದನ್ನು
ನೆಟ್ಟುಬಿಡುತ್ತೇನೆ..
ಮೋಸದ ವಾಸನೆ
ದಾರಿಹೋಕರಿಗೆಲ್ಲ
ಬಡಿಯದಿರಲಿ..

ಪ್ರೀತಿಸಿದಾಗ
ಅವಳೊಂದೆ... ಕಡ್ಡಿಯನ್ನು
ಗೀರಿ ಹೋಗಿದ್ದಳು...!!
ಸತ್ತ ಮೇಲೆ...
ಸಾವಿರ ಜನ, ನೂರು
ಕಟ್ಟಿಗೆಗಳನ್ನಿಟ್ಟು
ಸುಟ್ಟು
ಹೋದರು...!!


ನಿನ್ನ ಹಣೆಯ
ಬರಹವನ್ನು ಬದಲಿಸಿದವರಾರು?
ಕೇಳಿದವರಿಗೆಲ್ಲ....
ಬಿದ್ದು,  ಕೊಳೆತು
ಹೋಗುತ್ತಿರುವ
ಹೂವಿನ ಜಾಗವನ್ನು
ತೋರಿಸಿದೆ..
ಅವಳ ಮನೆಯ
ದಾರಿಯನ್ನು
ತೋರಿಸಿದೆ...


ಜೇಬಿನಲ್ಲಿ
ಕಾಸಿಲ್ಲದಿದ್ದರೂ...
ಹೃದಯದಿಂದ
ಶ್ರೀಮಂತನಾಗಿರಬೇಕಂತೆ...!!
ಅವಳಿಂದಾಗಿ,
ನಾನಲ್ಲೂ..
ಫಕೀರನಾಗಿದ್ದೇನೆ..!!

ಮಾತುಗಳಿಂದ
ಹುಷಾರಾಗುವ ಹಾಗಿದ್ದರೆ
ನಾನೆಂದೊ...ಎದ್ದು
ಅಡ್ಡಾಡುತ್ತಿದ್ದೆ...!!
ಆ ಮಾತುಗಳನ್ನು ನೆಚ್ಚಿ
ತಾನೆ, ನಾನಿಲ್ಲಿ
ಮಲಗಿರುವುದು..!

ಹೊತ್ತು ಮೀರಿದ
ಮೇಲೆ, ಹೂವು ಬಾಡಿ
ಹೋಗುತ್ತದೆ...!!
ದಿನಗಳು ಕಳೆದು
ಹೋದಂತೆ... ಹರೆಯವು
ಬಸಿದು ಹೋಗುತ್ತದೆ..!!
ಗೆಳೆಯ
ಪೂಜಿಸದೆ ಹೋದ
ಹೂವು...
ಚುಂಬಿಸಿಕೊಳ್ಳದೆ ಕಳೆದ
ಯೌವ್ವನ... ಎರಡು
ನಿರರ್ಥಕವಲ್ಲವೇನು..?


ಅದು ಹೇಗೆ ನನ್ನನ್ನು
ಸಂಪೂರ್ಣವಾಗಿ
ಮರೆತು ಹೋಗಿರುವಳೋ...!!
ನಾನೀನ್ನೂ...
ಅವಳು ಬಿಟ್ಟುಹೋದ
ತಿರುವಿನ ಹೆಸರನ್ನೆ
ಮರೆತಿಲ್ಲ...!!

ಗಲ್ಲಿ...ಗಲ್ಲಿಗಳಲ್ಲೊಂದು
ಔಷಧಿಯ ಅಂಗಡಿಗಳಿವೆ..!!
ವಿಷಾದವೆಂದರೆ‌‌‌‌.....
ಯಾವ ದುಖಾಃನಿನಲ್ಲೂ
ನನ್ನ ದುಖಃಕ್ಕೊಂದು
ಮದ್ದಿಲ್ಲ...!!

ಮಧುಶಾಲೆಗೆ
ನಾನು ನಿತ್ಯದ ಗಿರಾಕಿ..!!
ಆದರೂ ಮಾಡಬೇಡ
ವೆನ್ನಾತ್ತಾಳವಳು ಚೌಕಾಸಿ..!!

Monday, January 29, 2024

ಗಾಲಿಬ್...

ಗಾಲಿಬ್....

ಮುಗಿಲ ತುಂಬೆಲ್ಲಾ...‌‌ ಗರ್ಭ ಕಟ್ಟದ
ಮೋಡಗಳೆ ತುಂಬಿಕೊಂಡಿದ್ದರೆ ಏನು ಬಂದಿತು,
ಹುಳಿಯಾಡುವ ಮುನ್ನವೇ ಕಡೆದು
ಬೆಣ್ಣೆಯ ತೆಗೆಯದೆ ಹೋದರೆ ಏನು ಉಳಿಯುವುದು
ಗಾಲಿಬ್..
ಮಾತಿಲ್ಲದೆ...ಸುಮ್ಮನೆ ಗಾಳಿಗೆ ಚದುರಿ ಹೋಗುವ
ಮೋಡಗಳಂತೆ ದೂರ ಸರಿದು ಹೋದರೆ..!!
ಬಾಯಾರಿ, ಬಿರುಕು ಬಿಟ್ಟ ಎದೆಯ ಭಾವದ
ಬಯಲಿಗೆ ತಂಪನ್ನಾದರು ಎರೆಯುವುದಾದರು ಯಾರು?
ಇನ್ನೂ... ಹದಮಾಡದ ನೆಲದ ಮೇಲೆ
ವಿಷದ ಬೀಜವನ್ನು ಚೆಲ್ಲಿ ಹೋಗಿರುವರಲ್ಲ...
ಅದೆಂತಹ ಅದಮ್ಯ ನಂಬಿಕೆ ಅವರದ್ದು..!!


ಕಾಲ...ಕಾಲಭೈರವನ ಮಾತನ್ನೇ..ಕೇಳುವುದಿಲ್ಲ..!!
ಎಷ್ಟು ದೂರ ನಡೆದುಬರಲಿ ನಾನು...ನನ್ನ ಕಾಲೊಳಗಿನ
ಶಕ್ತಿಯು ಕುಂದುತ್ತಿದೆ ಗಾಲಿಬ್...
ಬಯಸಿದ್ದೆ ಮೂರು ಗಂಟು...ಬದುಕನ್ನೆ ಕಗ್ಗಂಟನ್ನಾಗಿ
ಮಾಡಿಬಿಟ್ಟರಲ್ಲ..!!
ಅರಿಷಿಣದ ದಾರವನ್ನು ಕುಣಿಕೆಯನ್ನಾಗಿಸಿ ನನ್ನೇದುರಿಗೆ
ಹಾಕಿರುವರು..!! ಕಣ್ಣುಮುಚ್ಚಿ ಕತ್ತನೊಡ್ಡುಬಿಡಲೆ..?
ಇಲ್ಲವೆ ಹೆದರಿ ಹಿಂದಕ್ಕೆ ಪಲಾಯನಗೈದುಬಿಡಲೆ...?
ಯಾವುದನ್ನು ಆಯ್ದುಕೊಳ್ಳಲಿ...

ಕಡ್ಡಿ ಮುರಿದ ಹಾಗೆ ಸಂಬಂಧವನ್ನು ಕಡೆದುಕೊಂಡು
ಹೋದರೆ ಹೇಗೇಳು....?
ಗಿಡದಿಂದ ಚಿವುಟಿದ ಮೇಲೂ ಹೂವಿನೆದೆಯಿಂದ
ಮಧುವು ಪಸರಿಸದೆ ಇರುವುದೇನು ಹೇಳು...?
ಗಾಲಿಬ್....
ಮುಂಬರುವ ಎಲ್ಲ ಬಂಜೆ ಸಂಜೆಗಳ ತೊಳಲಾಟಕ್ಕೆ
ಸುಂಕವನ್ನು ಕಟ್ಟುವವರು ಯಾರು..?
ಬುಲೆಟ್ ರೈಲಿನಲ್ಲಿ ಹೋದವರ ಹಿಂದೆ ಹೋಗಲು,
ನಾನು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೇನೆ
ಅವರು ಸಿಗುವರೇನು..?


ಯೋಚಿಸುತ್ತಾ ಕುಳಿತುಕೊಂಡುಬಿಟ್ಟರೆ ಯೌವ್ವನ..?
ಯೌವ್ವನ ಸುಡುಗಾಡಿನ ಗೇಟನ್ನು ದಾಟಿರುತ್ತದೆ..!!
ನಡುಗುವ ಕೈಗಳನ್ನು ಹಿಡಿದು, ನಡೆದಾಡಲು ಬಾರದ
ಮೊಣಕಾಲು ನೋವಿನೊಂದಿಗೆ ಕರೆದುಕೊಂಡು ಹೋಗಲು ಬಂದರೆ....!! ಏನು ಮಾಡಲಿ..
ಗಾಲಿಬ್....
ನಾನೇನು ಮಾವಿನಕಾಯಿಯ ಗೊಟ್ಟವೆ..? ಉಪ್ಪು,
ಎಣ್ಣೆ, ಅರಿಷಿಣದ ಮಸಾಲೆಯೊಂದಿಗೆ ಬೆರಸಿ ಡಬ್ಬದಲ್ಲಿ
ಹಾಕಿಟ್ಟು.. ಮಾಗಿದ ಮೇಲೆ ಉಣ್ಣಲು..!!
ಹೆಣ್ಣು-ಹಣ್ಣಾಗಿರುವೆ.. ಕೊಳೆತು ತಿಪ್ಪೆಯ ಸೇರಿ ಹಂದಿಯ ಬಾಯಿಗೆ ಆಹಾರವಾಗುವ ಬದಲು...
ಗಿಣಿ ಕಚ್ಚಿಬಿಟ್ಟ ಹಣ್ಣಂತಾದರೂ ನಾನಾಗಬೇಡವೆ..?

Friday, December 8, 2023

ಚುಟುಕು


ಅವನಂದು, ಹೂವನ್ನು
ಹಿಡಿದುಕೊಂಡು  ಬಂದಾಗಲೇ..
ನೋಡಿರಲಿಲ್ಲ..!!
ಇನ್ನೂ...ಇಂದವನ ಹೆಣದ
ಮೆರವಣಿಗೆಯನ್ನು ಹೇಗೆ...
ನೋಡಲಿ...!!
ಮುಡಿಯವ ಮಲ್ಲಿಗೆಯೆನ್ನೆ..
ನಿರಾಕರಿಸಿದವಳಿಗೆ..
ಪರಿಮಳವನ್ನು ಸವಿಯುವ
ಹಕ್ಕುಂಟೇನು...?

ಅಕ್ಷರ ಬಡವ‌ 🙏

Tuesday, November 21, 2023

ರಂಗೀ


ಇವಳೆಂಥಹ.....
ಹುಚ್ಚು ಹುಡುಗಿ..!!
ಮುಡಿಯುವ ಮಲ್ಲಿಗೆಯನ್ನು
ಮುಂಗೈಗೆ ಸುತ್ತಿಕೊಂಡು
ಆಘ್ರಾಣಿಸುತ್ತಿದ್ದಾಳೆ....
ಊರಾಚೆ ಎಸೆಯಬೇಕಿದ್ದ
ಈ ಮದ್ಯದ ದಾಸನನ್ನು
ತನ್ನ ಹೃದಯ 
ಮಂದಿರದೊಳಗಿಟ್ಟುಕೊಂಡು
ಆರಾಧಿಸುತ್ತಿದ್ದಾಳೆ..!!

ಅಕ್ಷರ ಬಡವ.

Friday, October 20, 2023

ಚುಟುಕು

ಜಾಸ್ತಿ ಕುಡಿಯಬೇಡ..!!!
ಆರೋಗ್ಯ ಹಾಳಾಗಿ 
ಹೋಗುತ್ತದೆಂದು...
ಇನ್ನಾರದ್ದೊ ಕೈಯಲ್ಲಿ
ಹೇಳಿ ಕಳುಹಿಸುತ್ತಿದ್ದಾಳೆ
ಆ ಹುಡುಗಿ..!!
ಮರೆತು ಹೋಗಿರಬಹುದೇನೊ...
ಅವಳಿಗೆ..
ಎದೆತುಂಬ.. ವಿರಹದ
ವಿಷವನ್ನೆ ಸುರಿದು
ಹೋದದ್ದು..!!

Wednesday, October 18, 2023

ಗೆಳೆಯ


ಕಳೆದು ಹೋದದ್ದನ್ನು
ಹಿಡಿದಿಟ್ಟುಕೊಳ್ಳಬಹುದೇನು?
ಕೈಯಲ್ಲಿ ಇರುವುದನ್ನು
ಚೆಲ್ಲಿ ಕೂರುವುದು
ತರವೇನೊ....
ಗೆಳೆಯ...
ಪ್ರತಿಯೊಂದು ನಿಲ್ದಾಣಕ್ಕೂ...
ಒಬ್ಬ ಮಾಲಿಯಾದರೂ..
ಇರುತ್ತಾನೆ, ನಿಜ.
ಇಲ್ಲಿ... ನೆನಪಿನ ಮೂಟೆಯನ್ನು
ನಾವೇ..ಹೊತ್ತು ಸಾಗಬೇಕು.!!
ಇಳಿಸುವವರಕ್ಕಿಂತಲೂ...
ಹೊರಸಿ ಹೋಗುವವರೆ
ಜಾಸ್ತಿ...!!