Showing posts with label ಈ ದುಃಖ.... Show all posts
Showing posts with label ಈ ದುಃಖ.... Show all posts

Friday, February 15, 2019

ಸಾಕಿ

ಈ ದುಃಖ...!!!
ಈ ಮಣ್ಣಿಗೇನು ಹೊಸತಲ್ಲ ಸಾಕಿ...
ನೋವು..ಹತಾಶೆ...ಹಂಗಿನ ನೆರಳು...ವ್ಯಾಘ್ರನ
ಘರ್ಜನೆಗೆ ಹೆದರಿ ನಿಂತಂಥ ಹರಿಣಿಯ ಭಾವ...
ಈಗ ಇದೆಲ್ಲ...ಇವಳೀಗೀಗ ಹೊಸತು..
ಅರಳುವಳು ಹೇಗೋ...!!!?  ನರಭಕ್ಷಕ
ಸಮಾಜದೊಳು ಬೆರೆತು.

ಇವಳ ಹೆತ್ತವಳ ಮಡಿಲೇನು ಚಿಕ್ಕದಲ್ಲ ಸಾಕಿ....
ಹಾಗಂತ...‌ಸದಾ ಉಡಿಯಲ್ಲಿ ನೋವಿನ ಗಂಟನ್ನೆ
ಕಟ್ಟಿಕೊಂಡಿರಬೇಕೆನು?
ಇಲ್ಲಿರುವವರೆಲ್ಲ ಚಿಕ್ಕವರೇನಲ್ಲ ನೋಡು!!!
ನೋಡಿ..ಮರೆತು ಮುನ್ನೆಡೆಯುವವರ
ಹೆಜ್ಜೆಗಳೇನು ಸಣ್ಣವಿಲ್ಲ..
ಕನಿಕರದಿ, ಕಣ್ಣಂಚಲಿ ಜಿನುಗುವ ಕಣ್ಣ ಹನಿಗಳ
ಒರೆಸುವಷ್ಟು...ವ್ಯವಧಾನವು ಇವರಿಗಿಲ್ಲ...

ಎಲ್ಲರ ಹಾಗೆ ನಾನು....ಇವಳಿಗೆ ಒಂದೆರಡು
ಕಿವಿ ಮಾತುಗಳನ್ನು ಹೇಳಿಬಿಡಲೆ ಸಾಕಿ....
ನಮ್ಮಲ್ಲಿದಕ್ಕೇನು ಕೊರತೆಯಿಲ್ಲವಲ್ಲ?!!!
ಎಲ್ಲರ ಹಾಗೆ ನೀನು...ಅತ್ತು ಸುಮ್ಮನಿದ್ದುಬಿಡಬೇಡ ಮಗಳೆ...
ಹರಿಣಿಯಾದ ಮಾತ್ರಕ್ಕೆ...ಹಿಂಜರಿಯಬೇಡ, ಎದುರಾಳಿಯ
ಹುಟ್ಟಡಗಿಸುವ ಸಿಂಹಿಣಿಯಾಗು...
ಮುಟ್ಟಿದರೆ, ತಟ್ಟಿ ಮಸಣಕೆ ಕಳಿಸುವ ಮೃತ್ಯು ದೇವತೆಯಾಗು

ಹೇಳಿಬಿಟ್ಟೆ.. ನಾಚಿಕೆಯಿಲ್ಲದೆ ಯಾಕೆ ಹೇಳು ?
ಅವಳಿನ್ನೂ... ಹೊರ ಜಗದ ಕಹಿಯನರಿಯದ
ಪಾಪದ ಮಗು ಸಾಕಿ....
ನಾಯಕರಾಡಾವ ಕಣ್ಣಾಮುಚ್ಚಾಲೆಯ ಪುಂಡಾಟ
ಇವಳಿಗಿನ್ನು ಗೊತ್ತಿಲ್ಲ....
ಕೈಗೆ ಬಳೆಯ ತೊಟ್ಟು... ನಾಟಕವಾಡುವ
ಬೃಹನ್ನಳೆಯರ ಆಟಕೆ...ಬಲಿಯಾಗುವವರ ಸಂಖ್ಯೆಯೇ...
ಇನ್ನೂ ನಿಂತಿಲ್ಲ...

ಇನ್ನೂ.. ಒಂದು ಮಾತನ್ನು ಹೇಳಿಬಿಡಲೆ ಅವಳಿಗೆ ಸಾಕಿ....
ಕೇಳು ಮಗಳೆ.... ನಿನಗೆ  ಎದೆತಟ್ಟಿ ಹೇಳಿಕೊಳ್ಳಲು...
ನಿಮ್ಮಪ್ಪನ ಶೌರ್ಯದ ಇರಿಹಾಸವಿದೆ...
ನಮ್ಮೆಲ್ಲರ ಹತ್ತಿರ ಇನ್ನೇನಿದೆ...ತಿಂದುಂಡು
ಬೊಜ್ಜು ಸಂಪಾದಿಸಿಕೊಳ್ಳಲು, ಎಲ್ಲರಪ್ಪರು ಮಾಡಿಟ್ಟು
ಹೋದ ಸಿರಿಯೊಂದೆ..‌‌..ಇದೆ.

ಏನೋ...ಹೇಗೊ.... ಎದೆಗೆ, ಯಾರೊ..ಸದ್ದಿಲ್ಲದಂತೆ
ಇರಿದ ಭಾವ ಸಾಕಿ...
ಎದೆಗೆ ಎದೆಕೊಟ್ಟು ಹೋರಾಡದೆ... ಬೆನ್ನಿಗೆ
ಚೂರಿ ಹಾಕುವ, ಗುಳ್ಳೆ ನರಿಗಳನ್ನಾದರು ಎಷ್ಟು
ದಿನವಂತ ಸಹಿಸುವುದು... ಭವ್ಯ ಭಾರತದ ಕುಡಿಗಳಲಿ
ಜಿನಗುವ ಈ ಕಣ್ಣ್ ಹನಿಗಳ ಒರೆಸುವರಾರು...
ನಿಲ್ಲಿಸುವರಾರು....
ಉತ್ತರ....? ನನ್ನಲೂ ಶೂನ್ಯ..!!!!